Friday, November 20, 2015

ಬಸವಣ್ಣನ ವ್ಯಾಪಾರದಲ್ಲಿ ತೊಡಗಿರುವ ಮಠಗಳು- ನಿಡುಮಾಮಿಡಿ ಸ್ವಾಮಿbaagi

ಸಂದರ್ಶನ : ಡಾ. ರವಿಕುಮಾರ್ ಬಾಗಿ. 

ಅನಿಕೇತನಕರ್ನಾಟಕ ರಾಜ್ಯದಾದ್ಯಂತಹ ಮೌಢ್ಯಾಚರಣೆ ನಿಷೇಧ ಕಾಯಿದೆ ಜಾರಿಗಾಗಿ ವ್ಯಾಪಕವಾದ ಹೋರಾಟ ನಡೆಯುತ್ತಿದೆ. ಇದೇ ತಿಂಗಳ ನವೆಂಬರ್ 16, 2015 ರಂದು ಬೆಂಗಳೂರಿನಲ್ಲಿ  ಮೌಢ್ಯಾಚರಣೆ ನಿಷೇಧ ಕಾಯಿದೆ ಜಾರಿಗೆ ಒತ್ತಾಯಿಸಿ ಬೃಹತ್ ಸಮಾವೇಶ ನಡೆಯಿತು.  ಈ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಶ್ರೀ ನಿಡುಮಾಮಿಡಿ ವೀರಭದ್ರಚನ್ನಮಲ್ಲ ಸ್ವಾಮೀಜಿಗಳ ಸಂದರ್ಶನವನ್ನು ಮಾಡಲಾಯಿತು. ಅದರ ಆಯ್ದಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ. 

ಪ್ರಶ್ನೆ : ಸಮಕಾಲೀನ ಸಂದರ್ಭದಲ್ಲಿ ಮೌಡ್ಯಾಚರಣೆಗಳ ಸಮಾಜದಲ್ಲಿ ಹೆಚ್ಚಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದಕ್ಕೆ ಮಾಧ್ಯಮಗಳ ಅಬ್ಬರದ ಪ್ರಚಾರವೂ ಕಾರಣವಿರಬಹುದಲ್ಲವೇ?

nidu 

ಸ್ವಾಮೀಜಿಗಳು : ಭಾರತೀಯ ಸಮಾಜ ಸದಾ ಅನಿಶ್ಚತತೆಯಿಂದ, ಅಭದ್ರತೆಯಿಂದ ನರಳುತ್ತಿರುವ ಸಮಾಜ. ಜಾಗತೀಕರಣ ಖಾಸಗೀಕರಣ ಉದಾರೀಕರಣ ಮತ್ತು ಹೊಸ ಆರ್ಥಿಕ ನೀತಿ ಜನತೆಯಲ್ಲಿ ಹೆಚ್ಚು ಅಭದ್ರತೆಯನ್ನು ಉಂಟು ಮಾಡುತ್ತಿದೆ. ಹೀಗಾಗಿ ಜನ ಹೆಚ್ಚು ಹೆಚ್ಚು ಮೂಢನಂಬಿಕೆಗಳನ್ನು ಆಶ್ರಯಿಸುವ ವಾತಾವರಣ ನಿರ್ಮಾಣವಾಗಿದೆ. ಈ ರೀತಿಯ ಮನಸ್ಥಿತಿಯನ್ನು ಪುರೋಹಿತಶಾಹಿ ವರ್ಗ ಮತ್ತು ಮಾಧ್ಯಮಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ. ಎಲ್ಲ ಕಾಲದಲ್ಲಿಯೂ ಜನರನ್ನು ಭಯದಲ್ಲಿಟ್ಟು ಆಳಬೇಕು ಎಂಬ ಮನಸ್ಥಿತಿ ಎಲ್ಲ ಧರ್ಮಗಳ ಪುರೋಹಿಶಾಹಿಯಲ್ಲಿರುತ್ತದೆ. ಇದೊಂದು ರೀತಿಯ ಸಂಪ್ರದಾಯವಾದಿಗಳ ಒಳ ಒಪ್ಪಂದ. ಈ ರೀತಿಯ ಸಮಾಜ ಸೃಷ್ಟಿಯಾದರೆ ತಮ್ಮ ಹಿಡಿತದಲ್ಲಿರುತ್ತದೆ ಎಂಬ ಉದ್ದೇಶ ಅವರದಾಗಿರುತ್ತದೆ. ಸಾವಿರಾರು ವರುಶಗಳಿಂದ ಇದರ ಫಲಾನುಭವಿಗಳ ಮನಸ್ಥಿತಿಗಳು ಇದನ್ನು ಇನ್ನು ಹೆಚ್ಚೆಚ್ಚು ಬೆಳೆಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಮಾಧ್ಯಮಗಳೂ ಕೂಡ ನಿಂತಿವೆ. ಕಾರಣ ಮಾಧ್ಯಮಗಳಲ್ಲಿರುವ ಪ್ರಮುಖರು ಯಥಾಸ್ಥಿತಿವಾದದ ಪ್ರತಿಪಾದಕರಾಗಿದ್ದಾರೆ. ಅವರಿಗೆ ಜನರು ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದು ಬೇಕಾಗಿಲ್ಲ. ಮಾಧ್ಯಮಗಳು ವ್ಯವಸ್ಥಿತವಾಗಿ ಮೌಢ್ಯತೆಯನ್ನು ಪ್ರಚಾರಮಾಡುವ ಕಾರ್ಯದಲ್ಲಿ ಬಹುಪಾಲು ಮಾಧ್ಯಮಗಳು ನಿರತವಾಗಿವೆ.

ಪ್ರಶ್ನೆ : ಈ ತರದ ಮೌಢ್ಯಗಳನ್ನು ಇತ್ತೀಚೆಗೆ ಅಕ್ಷರಸ್ಥರೇ ಹೆಚ್ಚು ರೀತಿಯಲ್ಲಿ ಮುಂದುವರೆಸುತ್ತಿದ್ದಾರೆ. ಇದಕ್ಕೆ ನಮ್ಮ ಶಿಕ್ಷಣ ಕ್ರಮದಲ್ಲಿಯೇ ಏನಾದರೂ ಸಮಸ್ಯೆಗಳಿವೆಯೇ?
ಸ್ವಾಮೀಜಿಗಳು : ವಿದ್ಯಾವಂತರಾದ ಮಾತ್ರಕ್ಕೆ ಅವರು ವಿಚಾರವಂತರು ಎಂದು ಅಂದುಕೊಳ್ಳಲು ಸಾಧ್ಯವಿಲ್ಲ. ವಿದ್ಯಾವಂತರೇ ಬೇರೆ. ವೈಚಾರಿಕ ಮನಸ್ಥಿತಿಯೇ ಬೇರೆ. ವಿದ್ಯಾವಂತರೆಲ್ಲರಲ್ಲೂ ವೈಚಾರಿಕತೆ ಬೆಳೆದಿರುವುದಿಲ್ಲ. ಹೀಗಾಗಿ ವಿದ್ಯಾವಂತರಲ್ಲಿಯೂ ಕೂಡ ಒಂದು ರೀತಿಯ ಅಭದ್ರತೆ ಕಾಡುತ್ತಿರುತ್ತದೆ. ಹೀಗಾಗಿ ಅವರೂ ಕೂಡ ಭಯದಲ್ಲಿಯೇ ಬದುಕುವ ಸಂದರ್ಭವನ್ನು ಸೃಷ್ಟಿಮಾಡಲಾಗುತ್ತದೆ. ಈ ಅಭದ್ರತೆಯೆನ್ನುವುದು ಭಾರತೀಯ ಮನಸ್ಥಿಯ ಬಹುದೊಡ್ಡ ಕಾಯಿಲೆಯಾಗಿದೆ. ಇದನ್ನು ಪುರೋಹಿತಶಾಹಿ ವರ್ಗ ಲಾಭಮಾಡಿಕೊಳ್ಳಲು ಹೊರಟಿದೆ.

ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಓದುವ ಪಟ್ಯಕ್ರಮದಲ್ಲೂ ಈ ರೀತಿಯ ಮೌಢ್ಯಗಳನ್ನು ತುರುಕುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಅನ್ನಿಸುತ್ತಿಲ್ಲವೇ?
ಸ್ವಾಮೀಜಿಗಳು : ನಮ್ಮ ಪಠ್ಯಕ್ರಮಗಳಂತೂ ಯಾವತ್ತೂ ವೈಚಾರಿಕತೆಯ ಪರವಾಗಿಲ್ಲ. ಸಾಂಪ್ರದಾಯಿಕ ಶಿಕ್ಷಣ ಪದ್ದತಿಯನ್ನೇ ಮುಂದುವರೆಸಲಾಗುತ್ತಿದೆ. ಮಕ್ಕಳಲ್ಲಿ ಮೌಢ್ಯತೆಯನ್ನು ಅಳಿಸಿ ವೈಚಾರಿಕ ಮನೋಭಾವ ಬೆಳೆಸುವ ಶಿಕ್ಷಣ ಕ್ರಮ ರೂಪುಗೊಳ್ಳಬೇಕಾಗಿದೆ. ಆದರೆ ಇದರಲ್ಲಿ ಆಳುವ ವರ್ಗಕ್ಕೆ ಆಸಕ್ತಿಯಿಲ್ಲ. ಆಳುವ ವರ್ಗ ಇದರ ಬಗೆಗೆ ಎಂದೂ ಗಂಭೀರವಾಗಿ ಚಿಂತನೆ ಮಾಡೇ ಇಲ್ಲ. ಹೀಗಾಗಿ ಶಿಕ್ಷಣ ಕ್ರಮದಲ್ಲಿ ವೈಚಾರಿಕ ಮನೋಭಾವ ಬೆಳೆಸುವಂತಹ ಪಟ್ಯಗಳು, ವಿಚಾರಧಾರೆಗಳು ಸೇರಿದರೆ ನಿಜವಾಗಿ ಹೊಸತಲೆಮಾರಿಗೆ ಹೊಸ ವಿಚಾರಗಳನ್ನುಯ ಕೊಡಲು ಸಾಧ್ಯವಾಗುತ್ತದೆ.

ಪ್ರಶ್ನೆ: ಬಸವಣ್ಣನ ಹೆಸರೇಳುವ ಅನೇಕ ಮಠಗಳು ಮತ್ತು ಸ್ವಾಮೀಜಿಗಳು ಮೌಢ್ಯದ ಬಲೆಗಳಲ್ಲಿ ಬಿದ್ದಿವೆ. ಹಾಗೂ ಬಲಪಂಥೀಯ ಸಂಘಟನೆಗಳ ಜೊತೆಗೂಡಿ ಹಿಂಸಾತ್ಮಕ ಕೃತ್ಯಗಳಲ್ಲೂ ಭಾಗಿಯಾಗುತ್ತಿರುವುದುಂಟು. ಈ ಬಗೆಗೆ ತಮ್ಮ ಅಭಿಪ್ರಾಯವೇನು?
ಸ್ವಾಮೀಜಿಗಳು : ಮೌಢ್ಯಗಳ ಉತ್ಪಾದಕರು ಮತ್ತು ವಿತರಕರು ಸಾವಿರಾರು ವರುಶಗಳಿಂದ ಎಲ್ಲ ಧರ್ಮಗಳಲ್ಲೂ ಇದ್ದಾರೆ. ಮತ್ತು ಈ ಕೆಲಸವನ್ನು ಅವರು ಜಾಗರೂಕತೆಯಿಂದ ಮುಂದುವರೆಸುತ್ತಿದ್ದಾರೆ. ಇದನ್ನು ಇತ್ತೀಚೆಗೆ ಎಲ್ಲ ಮಠಗಳು ಅನುಸರಿಸುತ್ತಿವೆ. ಬಸವಣ್ಣ ಎಂದರೆ ಇವರಿಗೆ ಶೂನ್ಯಬಂಡವಾಳ ಇದ್ದ ಹಾಗೆ. ದುಡ್ಡಿರುವ ಸ್ವಾಮಿಗಳು ಬಸವಣ್ಣನ್ನು ಹೋಲ್ ಸೇಲ್ ವ್ಯಾಪಾರ ಮಾಡುತ್ತಿದ್ದಾರೆ. ದುಡ್ಡಿಲ್ಲದವರು ರೀಟೇಲ್ ವ್ಯಾಪಾರ ಮಾಡುತ್ತಿದ್ದಾರೆ. ಬಸವಣ್ಣನ ತತ್ವಕ್ಕೆ ಬದ್ಧವಾಗಿ ನಡೆಯುತ್ತಿರುವಂತಹ ಮಠಗಳು ನನ್ನ ಗಮನಕ್ಕೆ ಒಂದೂ ಬಂದಿಲ್ಲ. ಬಸವಣ್ಣನ ಹೆಸರು ಹೇಳಿಕೊಂಡು ತಮ್ಮ ತಮ್ಮ ಮಠದ ಸಂಪತ್ತನ್ನು ಹೆಚ್ಚಿಸಿಕೊಂಡು ಕೀರ್ತಿಗಳಿಸಿಕೊಂಡು ಸಮಾಜದಲ್ಲಿ ದೊಡ್ಡ ಸ್ತಾನಮಾನಗಳನ್ನು ಪಡೆಯುವುದಕ್ಕೆ ಪ್ರಯತ್ನಿಸುತ್ತಿವೆಯೇ ಹೊರತು ಬಸವಾದಿ ಶರಣರ ತತ್ವಕ್ಕೆ ಬದ್ದವಾಗಿ ಸಮಾಜವನ್ನು ಮುನ್ನಡೆಸುವಂತಹ ಆಸಕ್ತಿಯನ್ನು ತೋರಿಸುಯವಂತಹ ಮಠಗಳ ಸಂಖ್ಯೆ ತೀರ ಕಡಿಮೆ.
ಪ್ರಶ್ನೆ : ಅಂದರೆ ಪುರೋಹಿತ ಶಾಹಿ ಎನ್ನುವುದು ಈಗ ಮಠಗಳಲ್ಲಿಯೂ ವ್ಯಾಪಿಸಿದೆ ಎಂದಾಯಿತಲ್ಲವೇ?
ಸ್ವಾಮೀಜಿಗಳು : ಪುರೋಹಿತಶಾಹಿಯ ಒಂದು ಭಾಗ ಮಠಗಳು. ವೈದಿಕ ಧರ್ಮದಲ್ಲಿ ಪುರೋಹಿತಶಾಹಿ ಇರುವಂತೆ ಲಿಂಗಾಯಿತ ಧರ್ಮದಲ್ಲಿಯೂ ಪುರೋಹಿತಶಾಹಿಯಿದೆ. ಹೀಗಾಗಿ ಇವರಿಗೆ ಬಸವಾದಿ ಶರಣರ ವಿಚಾರಧಾರೆ ಎಂದರೆ ಸಮಾನತೆಯ ವಿಚಾರವಾಗಿ ಕಾಣಿಸುತ್ತಿಲ್ಲ. ಮಠಗಳು ಬಸವಣ್ಣನವರ ಆಶಯಗಳಿಗೆ ವಿರುದ್ಧವಾಗಿವೆ ಎನ್ನುವುದಂತೂ ಸತ್ಯ.

baayi

ಪ್ರಶ್ನೆ : ಧರ್ಮವನ್ನು ಗುತ್ತಿಗೆ ಪಡೆದವರ ರೀತಿ ವರ್ತಿಸುತ್ತಿರುವವರು ಮೌಢ್ಯಾಚರಣೆಗಳನ್ನು ಬೆಂಬಲಿಸಲು ಕಾರಣವೇನು?
ಸ್ವಾಮೀಜಿಗಳು : ಯಾವುದೇ ಧರ್ಮ ದಯೆ ಕರುಣೆ ಪ್ರೀತಿ ಮಮತೆ ಕ್ಷಮೆ ಸಹನೆ ಸಹಿಷ್ಣತೆ ಔದಾರ್ಯ ಅನ್ಯೋನ್ಯತೆ ಇಂತಹ ಮೌಲ್ಯಗಳ ಮೇಲೆ ಧರ್ಮ ಬೆಳೆಯುವುದು. ಇವು ಧರ್ಮದ ಅಂತರಂಗದ ಮೌಲ್ಯಗಳು. ಧರ್ಮ ಯಾವತ್ತೂ ಬಾಹ್ಯಾಚರಣೆಗಳ ಮೇಲೆ ನಿಂತಿರುವುದಿಲ್ಲ. ಅದು ನಿಂತಿರುವುದು ಮಾನವೀಯ ಮೌಲ್ಯಗಳ ಮೇಲೆ. ಆದರೆ ಕಾಲಾನುಕ್ರಮದಲ್ಲಿ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಕೆಲವು ನಂಭಿಕೆಗಳು ರೂಢಿಗೆ ಬರುತ್ತವೆ. ನಂತರ ಇವು ಯಾಂತ್ರಿಕವಾಗುತ್ತವೆ. ಇದರಿಂದ ಆಚರಿಸುವವರಿಗೆ ಮಾತ್ರ ಹಾನಿಯಾಗುತ್ತದೆಯೇ ಹೊರತು ಧರ್ಮಕ್ಕೇನೂ ಆಗುವುದಿಲ್ಲ. ಆದರೆ ಇಂತಹ ಮೌಢ್ಯಗಳು ಹೆಚ್ಚೆಚ್ಚು ಮುನ್ನೆಲೆಗೆ ಬಂದಂತೆ ಧರ್ಮ ದುರ್ಬಲವಾಗುತ್ತದೆ. ಮತ್ತು ಮನುಷ್ಯರ ವಿಕಾಸಕ್ಕೂ ನೆರವಾಗುವುದಿಲ್ಲ. ಹೀಗಾಗಿ ಮೌಢ್ಯಾಚರಣೆಗಳು ಯಾವುದೇ ಧರ್ಮಕ್ಕಾದರೂ ಹುಳುಕು ಇದ್ದ ಹಾಗೆ. ಯಾವ ಧರ್ಮದಲ್ಲಿ ಮೌಢ್ಯಾಚಾರಣೆಗಳು ಹೋಗುತ್ತವೆಯೋ ನಿಜಕ್ಕೂ ಆ ಧರ್ಮದ ಅಂತಃಸತ್ವ ಶ್ರೀಮಂತ ಗೊಳ್ಳುತ್ತದೆ.

ಪ್ರಶ್ನೆ: ಮೂಢನಂಭಿಕೆ ಪ್ರತಿಬಂಧಕ ಕಾಯ್ದೆ ಜಾರಿಗೆ ಬರದಿದ್ದರೆ ಆಗುವ ಸಾಮಾಜಿಕ ಧಾರ್ಮಿಕ ಅಪಾಯಗಳೇನು? ಈ ಕಾಯ್ದೆ ಯಾಕೆ ಅಷ್ಟು ಮುಖ್ಯ?
ಸ್ವಾಮೀಜಿಗಳು : ಈ ಮೌಡ್ಯಾಚರಣೆಗಳಿಂದ ಅನೇಕ ಸಮುದಾಯಗಳು ಭೌತಿಕವಾಗಿ ತುಂಬಾ ಹಾನಿಗೆ ಒಳಗಾಗಿವೆ. ಅಲ್ಲದೆ ಅವರ ಅಂತರಂಗದ ವಿಕಸನಕ್ಕೂ ಕೂಡ ಅಡ್ಡಿಯಾಗಿವೆ. ಒಟ್ಟಾರೆ ಮನುಷ್ಯರ ಬದುಕಿನ ಭೌತಿಕ ಮತ್ತು ಬೌದ್ಧಿಕ ವಿಕಾಸಕ್ಕೂ ಕಂಟಕವಾಗಿವೆ. ಈ ಎಲ್ಲ ದೃಷ್ಟಿಯಿಂದ ಮೌಢ್ಯಾಚರಣೆಗಳು ಹೋಗಲೆಬೇಕು. ಅದು ಬರೀ ಬಾಯಿಮಾತಿನಿಂದ ಸಾಧ್ಯವಿಲ್ಲ. ಅದಕ್ಕೊಂದು ಕಾಯಿದೆ ಬರಬೇಕು. ಕಾನೂನು ಎಂದಾಕ್ಷಣ ಇವೆಲ್ಲ ನಿವಾರಣೆಯಾಗಿಬಿಡುತ್ತವೆ ಎಂದಲ್ಲ. ಇಂತಹ ಮೌಡ್ಯಾಚರಣೆಗಳನ್ನು ನಿಯಂತ್ರಿಸಲಿಕ್ಕೆ, ಶೋಷಣೆ ಮಾಡುವವರನ್ನು ನಿಗ್ರಹಿಸಲಿಕ್ಕೆ ಈ ರೀತಿಯ ಕಾನೂನು ಬರಬೇಕಾಗುತ್ತದೆ. ಈ ಮೂಲಕ ಈ ಅರ್ಥಹೀನ ಆಚರಣೆಗಳಲ್ಲಿ ಬಿದ್ದು ಒದ್ದಾಡುತ್ತಿರುವ ಸಮುದಾಯಗಳನ್ನು ಪಾರುಮಾಡಬೇಕಾಗಿದೆ. ಆದ್ದರಿಂದ ಇಂತಹದೊಂದು ಕಾಯಿದೆಯ ಅಗತ್ಯತೆ ತುಂಬಾ ಇದೆ ಎಂದು ನನಗನ್ನಿಸುತ್ತಿದೆ.

ಪ್ರಶ್ನೆ : ಮೂಢ ನಂಬಿಕೆಗಳ ಪ್ರತಿಬಂಧಕ ಕಾಯಿದೆಯನ್ನು ಜಾರಿಗೆ ತರುವುದರಿಂದ ಜನಸಾಮಾನ್ಯರ ಭಾವನೆಗಳಿಗೆ ಧಕ್ಕೆಯುಂಟಾಗುವುದಿಲ್ಲವೇ?
ಸ್ವಾಮೀಜಿಗಳು : ಮೌಢ್ಯಾಚರಣೆಗಳು ಎಂದಾಗ ವ್ಯಕ್ತಿಗೆ ಮತ್ತು ಸಮಾಜಕ್ಕೆ ಕೇಡನ್ನು ಉಂಟುಮಾಡುವಂತಹ ಆಚರಣೆಗಳು ಎಂದರ್ಥ. ಹಾನಿಕಾರಕವಾದ ಆಚರಣೆಗಳು ಎಂದಷ್ಟೇ ಹೇಳುವುದು. ನರಬಲಿ, ವಾಮಾಚಾರ, ಪಂಕ್ತಿಭೇದ, ಮಡೆಸ್ನಾನ, ಬಾನಾಮತಿ, ದೇವದಾಸಿ ಪದ್ದತಿಗಳಿಂದ ಸಮಾಜಕ್ಕೆ ಕೆಡಕು ಜಾಸ್ತಿ. ಹೀಗಾಗಿ ಇಂತಹ ಆಚರಣೆಗಳು ತೊಲಗಲೇಬೇಕು ಎನ್ನುವುದು ನನ್ನ ನಿಲುವು. ಇಲ್ಲಿ ಜನಗಳ ಭಾವನೆಗಳನ್ನು ದಿಕ್ಕರಿಸುವ ಪ್ರಶ್ನೆಯೇ ಇಲ್ಲ. ಉದಾಹರಣೆಗೆ ಮಗು ಏನೋ ಕಸ ತಿನ್ನಲಿಕ್ಕೆ ಹೋಗುತ್ತದೆ. ಮಗುವಿನ ಮನಸ್ಸಿಗೆ ನೋವಾಗುತ್ತದೆ ಎಂದು ತಂದೆ ತಾಯಿಗಳು ಹೇಳುವುದನ್ನು ಬಿಡುತ್ತಾರೆಯೇ? ಮಣ್ಣು ತಿನ್ನುವುದು ಸರಿಯಲ್ಲ ಎಂದು ಹೇಳುತ್ತಾರೆಯಲ್ಲವೇ? ಹಾಗೆ ತಿಳುವಳಿಕೆಯಿಲ್ಲದೆ ಕೆಲವರು ಇಂತಹ ಆಚರಣೆಗಳನ್ನು ಆಚರಿಸುತ್ತಿದ್ದರೆ, ಅದರಿಂದ ಬೇರೆಯವರಿಗೆ ಹಾನಿಯಾಗುತ್ತಿದ್ದರೆ ತಿಳಿದವರು ಅದನ್ನು ಸರಿಪಡಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಹೀಗಾಗಿ ಮೌಢ್ಯಾಚಾರಣೆಗಳು ಕೇಡನ್ನು ಉಂಟುಮಾಡುತ್ತವೆಯೋ, ಮನುಷ್ಯರನ್ನು ಸಂಕುಚಿತಗೊಳಿಸುತ್ತವೆಯೋ, ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತವೆಯೋ, ಅಪಮಾನಕ್ಕೀಡುಮಾಡುತ್ತವೆಯೋ, ಅಂತಹ ಆಚರಣೆಗಳನ್ನು ದಿಕ್ಕರಿಸಬೇಕಿದೆ.

 puru

ಪ್ರಶ್ನೆ : ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿಗೆ ಬಂದರೆ ಕುಲದೇವರುಗಳನ್ನು ಪೂಜಿಸುವಂತಿಲ್ಲ ಇತ್ಯಾದಿ ಪ್ರಚಾರ ಮಾಡಲಾಗುತ್ತಿದೆ. ಈ ಬಗೆಗೆ ತಮ್ಮ ಅಭಿಪ್ರಾಯವೇನು?
ಸ್ವಾಮೀಜಿಗಳು : ಪ್ರಾರಂಭದಲ್ಲಿ ಎರಡು ಕಾನೂನು ವಿಶ್ವವಿದ್ಯಾಲಯಗಳು ಸೇರಿ ಕರಡನ್ನು ತಯಾರಿಸಿ ಸರಕಾರದ ಮುಂದಿಟ್ಟವು. ಆ ಕರಡನ್ನು ಸರಕಾರ ಸಾರ್ವಜನಿಕ ಚರ್ಚೆಗೆ ಬಿಡಬೇಕಾಗಿತ್ತು. ಆಮೇಲೆ ಅವುಗಳ ಬಗೆಗೆ ಸಲಹೆ ನೀಡಲು ನಾಡಿನ ವಿಚಾರವಂತರ ಜೊತೆ ಚರ್ಚೆ ಮಾಡಬೇಕಿತ್ತು. ಇದನ್ನು ಕುರಿತು ಒಂದಷ್ಟು ಸಂವಾದಗಳು ನಡೆಸಬೇಕಿತ್ತು. ಆದರೆ ಸರಕಾರ ಇದಾವುದನ್ನೂ ಮಾಡದೆ ದಿಢೀರನೆ ಕಾನೂನು ಮಾಡಲು ಹೊರಟಿತು. ಇದು ಸರಿಯಾದ ಕ್ರಮವಲ್ಲ.
ಆದುದರಿಂದ ಇದು ಜನರಲ್ಲಿ ತಪ್ಪುಕಲ್ಪನೆಗಳಿಗೆ ಅವಕಾಶವಾಯಿತು. ಆಮೇಲೆ ಇಂತಹ ಪ್ರತಿಬಂಧಕ ಕಾನೂನುಗಳು ಜಾರಿಗೆ ಬಂದರೆ, ಅದನ್ನೇ ಬಂಡವಾಳ ಮಾಡಿಕೊಂಡು ಸಾವಿರಾರು ವರುಶಗಳಿಂದ ಸ್ಥಾನಮಾನ ಅನುಭವಿಸಿಕೊಂಡು ಬಂಧಿರುವ ಸ್ಥಾಪಿತ ಹಿತಾಸಕ್ತಿಗಳಿಗೆ ಭಯ ಶುರುವಾಯಿತು. ಎಲ್ಲಿ ತಮ್ಮ ಅಸ್ತಿತ್ವಕ್ಕೆ ಕುಂದು ಬರುತ್ತದೋ ಎಂದು. ಅಂತಹವರು ಅಪಪ್ರಚಾರ ಮಾಡಿದರು.

ಆದರೆ ಸರಕಾರ ಇದಕ್ಕೆ ಹೆದರಿತು. ಹೆದರುವ ಅಗತ್ಯ ಇರಲಿಲ್ಲ. ಸರಕಾರ ಕರಡನ್ನು ತರುವುದರಲ್ಲಿ ಸೋತಿತು. ಆದರೆ ಈಗ ತರುತ್ತಿರುವ ಕಾನೂನು ನಂಬಿಕೆ ವಿರೋಧಿ ಅಲ್ಲ. ದೈವದ ವಿರೋಧಿ ಅಲ್ಲ. ಸಮುದಾಯಗಳ ವಿರೋಧಿ ಅಲ್ಲ. ಇದು ದುಷ್ಟ ಆಚರಣೆಗಳ ವಿರೋಧಿ ಮಾತ್ರ. ಸರಕಾರ ಈ ಕರಡನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟು ನಾಡಿನ ವಿವಿಧ ಕ್ಷೇತ್ರದ ಪ್ರಮುಖರೊಂದಿಗೆ ಸಂವಾದ ನಡೆಸಿ ಅವರ ಅನಿಸಿಕೆಗಳನ್ನು ಪಡೆದು ಕಾನೂನಾಗಿ ರೂಪಿಸಬೇಕಾಗಿದೆ.

ಪ್ರಶ್ನೆ: ಮೂಢನಂಬಿಕೆಗಳನ್ನು ಹೆಚ್ಚು ನಂಬುವವರು ಆಚರಿಸುವವರು ರಾಜಕಾರಣಿಗಳೇ. ಇಂತಹವರು ಮೌಢ್ಯವಿರೋಧಿ ಕಾನೂನು ಜಾರಿಗೆ ತರಲು ಸಾಧ್ಯವೇ?
ಸ್ವಾಮೀಜಿಗಳು : ಒಳ್ಳೆಯ ಪ್ರಶ್ನೆ. ಬರು ಬರುತ್ತ ಮನುಷ್ಯರು ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಎಷ್ಟು ಸೂಕ್ಷ್ಮವಾಗುತ್ತಿದ್ದಾರೋ ಅಷ್ಟೇ ದುರ್ಬಲರೂ ಆಗುತ್ತಿದ್ದಾರೆ. ಆದ್ದರಿಂದಲೇ ನನ್ನ ಪ್ರಕಾರ ಇತ್ತೀಚೆಗೆ ಆತ್ಮಹತ್ಯೆಗಳು ಹೆಚ್ಚುತ್ತಿರುವುದು. ಇವೆಲ್ಲವನ್ನು ಗಮನಿಸಿದರೆ ಮನುಷ್ಯರು ಮಾನಸಿಕವಾಗಿ ಆತ್ಮಸ್ಥೈರ್ಯ ಕಳೆದುಕೊಂಡು ಅಧೋಗತಿಗೆ ಇಳಿಯುತ್ತಿರುವುದು ಕಂಡುಬರುತ್ತಿದೆ. ರಾಜಕಾರಣಿಗಳು ಕೂಡ ಇದರಿಂದ ಹೊರತಲ್ಲ. ಹಾಗೆ ನೋಡಿದರೆ ಇನ್ನೂ ಹೆಚ್ಚಿನ ಮಾನಸಿಕ ದುರ್ಬಲತೆಗೆ ಇವರು ಒಳಗಾಗುತ್ತಾರೆ. ಪ್ರಾಮಾಣಿಕವಾಗಿರುವ ರಾಜಕಾರಣಿಗಳೇ ಇಂದು ನಮ್ಮ ನಡುವೆ ಅಪರೂಪವಾಗಿದ್ದಾರೆ. ಎಲ್ಲಿ ನನಗೆ ಎಲೆಕ್ಷನ್ ನಲ್ಲಿ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಸಿಕ್ಕರೆ ಗೆಲ್ಲುತ್ತೆನೋ ಇಲ್ಲವೋ ಗೆದ್ದ ಮೇಲೆ ನಾನು ಮಂತ್ರಿಯಾಗುತ್ತೇನೋ ಇಲ್ಲವೋ ಎನ್ನುವ ಮಾನಸಿಕ ತೊಳಲಾಟದಲ್ಲಿದ್ದಾರೆ. ಆದ್ದರಿಂದಲೇ ಅವರು ಜೋತಿಷ್ಯಗಳ ಮೊರೆಹೋಗುತ್ತಾರೆ. ಹೋಮ ಹವನಗಳ ಮೊರೆಹೋಗುತ್ತಾರೆ. ಅಂದರೆ ಅವರ ಬಗೆಗೇನೆ ಅವರಿಗೆ ನಂಬಿಕೆ ವಿಶ್ವಾಸಗಳಿಲ್ಲ. ಇಂತಹ ನಾಯಕರೇ ಈ ರೀತಿಯ ಮಾನಸಿಕ ದುರ್ಬಲತೆಗೆ ಒಳಗಾದರೆ ಇನ್ನು ಜನಸಾಮಾನ್ಯರ ಗತಿಯೇನು? ಇತ್ತೀಚೆಗಂತೂ ವಿಧಾನಸೌದದ ಒಳಗಡೆ ನಿಂಬೆ ಹಣ್ಣು ಬೂದುಗುಂಬಳಕಾಯಿ ಕೋಳಿ ಎಲ್ಲವನ್ನು ತೆಗೆದುಕೊಂಡು ಹೋದದ್ದುಂಟು. ಇಂತಹ ದುರ್ಬಲ ರಾಜಕಾರಣಿಗಳಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ?

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...