Tuesday, November 24, 2015

ಶಶಿಕಲಾ ವೀರಯ್ಯ ಸ್ವಾಮಿ ವಸ್ತ್ರದ ಎರಡು ಕವಿತೆಗಳು

೧ 
ನನ್ನ ಉಯಿಲುಉಳ್ಳವರು ಬರೆಯುವುದುಂಟು ಉಯಿಲು
ಆ ಮಗನಿಗೆ ಅಷ್ಟು, ಈ ಮಗನಿಗೆ ಇಷ್ಟು
ಇರಲಿ ಬಾಳಿಡೀ ಸೇವೆ ಮಾಡಿದ ಮಡದಿಗೊಂದಿಷ್ಟು..’
ಹೀಗೆ.. ಹೀಗೆ.. ಹೀಗೆ..
ಅರೆರೆ! ನಾನೂ ಬರೆಯಬಹುದೇ ಹಾಗೆ?
ಗಳಿಕೆ ಎಂದರೆ ಝಣಝಣ ಕಾಂಚಾಣ
ಫಳಫಳ ವಾಹನ ಮಿಣಿಮಿಣಿ ಬಂಗಾರ
ಗಗನಚುಂಬೀ ಮಹಲು ಇತ್ಯಾದಿ.. ಇತ್ಯಾದಿ.. ಅಲ್ಲವೇ?
ಛೇ, ಈ ಲೋಕದ ಲೆಕ್ಕಾಚಾರದಲಿ ಏನೊಂದನೂ ಗಳಿಸಲಿಲ್ಲ
ದಡ್ಡಿ.. ಶತದಡ್ಡಿ.. ಕೂಡಿ-ಕಳೆದು-ಭಾಗಿಸುವ ಗಣಿತದ ಲೆಕ್ಕದಲಿ
ಕಳೆದದ್ದೇ ಹೆಚ್ಚು. ವ್ಯವಹಾರದಲ್ಲಿ ಸದಾ ಸೊನ್ನೆ
ಆದರೂ ಸಂಪಾದಿಸಿದ್ದೇನೆ ಅಷ್ಟೊ ಇಷ್ಟೊ ನಾ ಸಂಪನ್ನೆ.


ಏನೆಂದು ಕೇಳುವಿರಾ? ಮನವಿಟ್ಟು ಆಲಿಸಿ
ಅಕ್ಷರಲೋಕದ ಅಕ್ಷಯ ದೀಪಗಳು ನನ್ನ ಸಂಗ್ರಹದ ಹೊತ್ತಿಗೆಗಳು
ಎದೆಸೂರೆಗೊಳ್ಳುವ ಬಣ್ಣಬಣ್ಣದ ಭಿತ್ತಿ ಚಿತ್ರಗಳು
ಸದಾ ಚೈತನ್ಯದ ಚಿಲುಮೆಯನು ಕಾಪಿಟ್ಟ ಸಂಗೀತ ತಟ್ಟೆಗಳು
ನಾನಾ ವಿಧದ ಕಸೂತಿ ಸೀರೆಗಳು. ಅವುಗಳ ತುಂಬಾ
ಗಿರಿ-ನದಿ-ಹೂವು-ಹಣ್ಣು ಗಿಳಿಗಳ ಕಲರವ.
ಇಷ್ಟು ಸಾಕಲ್ಲವೇ ನನ್ನ ಬಳಗಕೆ?
ಬರೆದು ಬಿಡುವೆನು ಉಯಿಲು ಈಗಲೇ
ನೀಡುವೆನು ಪ್ರೀತಿಯನು ಧಾರೆಯೆರೆದವರೆಲ್ಲರಿಗೆ
ತುಂಬು ಗೌರವದಿಂದ ತಲೆಬಾಗಿ ಒಪ್ಪಿಸುವೆ
ರಾಜ್ಯಪ್ರಶಸ್ತಿ - ಮಠಮಾನ್ಯ - ಸನ್ಮಾನ ಸ್ಮರಣಿಕೆಗಳನು.
ನನ್ನೂರು ವಿಜಯಪುರದ ಸಿಂದಗಿಯ ಶ್ರೀಮಣ್ಣಿಗೆ
ತವರಿನ ಋಣದಲಿ ತಣಿದಿದೆ ಎದೆಭಾರ ತಣ್ಣಗೆ.


ಒಂದೇ ಮನವಿಯನು ಮಾತ್ರ ಉಳಿಸಿರುವೆನು
ದಯವಿರಲಿ ಬದುಕಿನ ವಿದಾಯದ ಹೊಸ್ತಿಲಲಿ;
ಎದೆಯ ಮೇಲೊಂದು ಪುಸ್ತಕವಿರಲಿ ನನ್ನ ಅಂತಿಮ ಯಾತ್ರೆಯಲಿ
ಚಂದನೆಯ ಕುಸುರೀ ಸೀರೆಯನುಡಿಸಿ
ಮಧುರ ಹಾಡುಗಳ ನುಡಿಸಿ, ಮೆಲ್ಲಗೆ
ಭಿತ್ತಿಚಿತ್ರಗಳ ಹಿಂದೆ ಸಾಗಲೆನ್ನ ಮೆರವಣಿಗೆ.
ಹೋಗಿಬರುವೆನು ಸ್ನೇಹಿತರೇ ನಗುವಿರಲಿ ತುಟಿಯಂಚಿಗೆ
ಸಾಗಿಸಿರಿ ಅಲ್ಲಿ ಕಾದಿರುವ ಕಿರಿಯ ವೈದ್ಯರಿಗೆ
ಸಲ್ಲಿಸಿರಿ ಘನತೆಯಲಿ ನನ್ನ ದೇಹವನು
‘ದೇಹದಾನ’ದ ಮಾತು ಕೊಟ್ಟಿದ್ದೇನೆ ಮರೆಯದಿರಿ ಯಾರೂ..


ಬಿಡುಗಡೆಯ ಭಾಗ್ಯದಲಿ ಭೂಮಂಡಲದ ಮೇಲೆ
ತಿರುಗುತಿದೆ ನನ್ನಾತ್ಮ ಸತ್ತರೂ ಸ್ನೇಹಮಯಿ ನಾ.
ಅಂಡಲೆಯುವೆನು ಬ್ರಹ್ಮಾಂಡದಲಿ ಸತತ
ಓ! ಅಲ್ಲಿ ಇಲ್ಲಿಂದಾಚೆ ಮೋಡಗಳ ವೇದಿಕೆಯ ಮೇಲೆ
ಅರರೇ! ಸೂಫಿಗಳು--ಫಕೀರರು-ಶರಣರು-ದಾಸವರೇಣ್ಯರು
ತತ್ವಪದಕಾರರು, ಶರೀಫ-ಕಬೀರದಾಸರು
ಇಗೋ ಇಲ್ಲಿ, ಉಮರ ಗಾಲಿಬರೆಲ್ಲ ನೆರೆದಿರಲು
ತುಂಬಿ ತುಳುಕಿರೆ ಪರಿಸರದಲಿ ದಿವ್ಯ ಪರಿಮಳವು
ಅಲೌಕಿಕ ಬೆಳಕಿನ ಭಾವದೀಪ್ತಿಯಲಿ ಮೈಮರೆತು ಕುಳಿತಿಹರು
ಮಾನವನುನ್ನತಿಗಾಗಿ ಹಾಡುತಿರುವರು ಎಲ್ಲರೂ
ನಿಲ್ಲುವೆನು ನಾನೊಂದು ಮೂಲೆಯಲಿ ಕೈಮುಗಿದು
ಧನ್ಯತಾ ಭಾವದಲಿ
ಮರೆಯಲೆಂತು? ಇಹ-ಪರಗಳಲಿ ಸಗ್ಗ-ಸುಖ
ವನು ಪಡೆದೆನು ಇವರಿಂದಲೇ, ಇವರಿಂದಲೇ.
***


೨ 

ಮನುಕುಲದ ಕಥೆ


‘ಅಮ್ಮಾ ಅಮ್ಮಾ ಒಂದು ಕಥೆ ಹೇಳಮ್ಮಾ’
‘ಅಯ್ಯೋ ಇದು ಕಥೆಯಲ್ಲ, ವ್ಯಥೆಯಗಾಥೆ
ಕೇಳು ಕಂದಮ್ಮಾ’

‘ಒಂದಾನೊಂದು ದಟ್ಟ ಕಾಡಿನಲ್ಲಿ
ಒಂದು ಪುಟ್ಟ ಊರು ಇತ್ತು..’

‘ಕಾಡು ಹಾಗಂದರೇನಮ್ಮಾ?’
ಆಮೇಲೆ ತೋರುವೆನಮ್ಮಾ
ಚಿತ್ರದಲಿ ಬಿಡಿಸಿ, ಈಗ
ಸುಮ್ಮನೆ ಕೇಳು ಕಂದಮ್ಮಾ

ಆಗ ಮುಗಿಲು ಮಗುವಿನ
ತೊದಲು ನುಡಿಯ ಓಂಕಾರದಲ್ಲಿತ್ತು
ನೆಲವೋ ಮದುಮಗಳ
ಮೊದಲ ರಾತ್ರಿಯ ರೋಮಾಂಚನದಂತಿತ್ತು
ಬಾಣಂತಿಯ ಜೋಗುಳದಂತೆ
ನದಿಯ ಸವಿಲಾಲಿ ಸದಾ ಕೇಳುತಿತ್ತು
ಸುಳಿವ ಗಾಳಿಯಲೂ ಒಂದು ಪರಿಮಳದ
ಝೇಂಕಾರವಿತ್ತು

ಹೀಗೆ ನೆಲಜಲಮುಗಿಲುಗಳೇ ದೈವವಾಗಿ
ಮನುಕುಲದ ಕತೆಯೇ ಬೇರೆ ಇತ್ತಮ್ಮಾ
ಅದೊಂದು ಮಧುರ ಭಾವಗೀತೆಯಾಗಿತ್ತು
ಆಮೇಲೊಂದಿನ.. ಒಂದಿನಾ.. ಏನಾಯ್ತು ಅಂತೀಯಾ?’

‘ಏನಾಯ್ತಮ್ಮಾ? ಬೇಗ ಹೇಳಮ್ಮಾ..’
‘ಆಮೇಲಾಮೇಲೆ ಈ ಮನುಕುಲದವರು,
ಕಲ್ಲುಗಳನು ಮಣ್ಣು ಇಟ್ಟಿಗೆಗಳನು
ಪೂಜಿಸತೊಡಗಿ, ದ್ವೇಷದ ವಿಷ ಹರಡಿ,
ಪ್ರಭುಗಳು ಸ್ವಪ್ರೇಮದಲಿ ಪೂರಾ ಮುಳುಗಿ
ನೆಲಜಲಗಳು ಮಲಿನಗೊಂಡವು
‘ಅಲ್ಲಮ’ ಎಂಬ ಎಲ್ಲ ಬಲ್ಲವನೊಬ್ಬನಿದ್ದನಮ್ಮ
‘ದೇವರಿಗಾಗಿ ಸತ್ತವರನಾರನೂ ಕಾಣೆ’
ಎಂದು ಇವ ಹಲುಬಿದ್ದನಮ್ಮಾ

ಈ ಇವರು ದೇವರಿಗಾಗೇ ಸತ್ತು
ಸಾಯಿಸಿ ಅಲ್ಲಮನೆಸೆದ ಸವಾಲಿಗೆ
ಜವಾಬಿನ ಕೊಳ್ಳಿ ಇಟ್ಟು ಕುಣಿದರಮ್ಮ

ಈ ಕೊಳ್ಳಿ ಚಿಗುರುಗಳನ್ನು ಸುಡುತ್ತ
ನದಿಯ ನೀರು ಕೆಂಪಾಗಿ ಹರಿಯುತ್ತಾ
ಹೊಗೆ ಬಡಿದು ಕಪ್ಪಾದ ಗುಲಾಬಿ
ಹೂವುಗಳನು ಹಿಡಿದ ಮಕ್ಕಳು
ಭರವಸೆಗಳ ಹೆಣದ ಮೆರವಣಿಗೆಯಲಿ
ಮಂಕುಬಡಿದು ವಿಷಣ್ಣರಾದ ದೊಡ್ಡವರು
ಎಣ್ಣೆತೀರಿ, ಕುಡಿಯಾರಿ ಕಮರು ವಾಸನೆ
ಬೀರುವ ನೀರವ ಹಣತೆಗಳು

ಉಸಿರುಗಟ್ಟುತ್ತಿದೆ ಕಂದಾ ಉಸಿರುಗಟ್ಟುತ್ತಿದೆ
ಕೇಳುತ್ತಿದ್ದೀಯಾ ಮಗಳೇ?
ಕೇಳುತ್ತಿದ್ದೀಯಾ ಮಗಳೇ?

ಇಲ್ಲ ಉತ್ತರವಿಲ್ಲ, ನಿಶ್ಶಬ್ದ ಹೆಪ್ಪುಗಟ್ಟಿತ್ತು
ನಡುಮನೆಯ ತೊಟ್ಟಿಲೊಳು ಬಾಗಿ ನೋಡಿದರೆ
ಕಣ್ಣರಳಿಸಿ ಮಲಗಿದ್ದಾಳೆ ನನ್ನ ಪುಟ್ಟಿ
ಬಾಯಿ ಬಿಟ್ಟರೆ ಎಲ್ಲಿ ಕಮರುಹೊಗೆ
ಕವಿದೀತೋ ಎಂದು ಬಿಮ್ಮನೆ ಬಿಗಿದಿದ್ದಾಳೆ ತುಟಿ.
***

ಶಶಿಕಲಾ ವೀರಯ್ಯ ಸ್ವಾಮಿ ವಸ್ತ್ರದ (೧೯೪೮) ವಿಜಯಪುರ ಜಿಲ್ಲೆಯ ಸಿಂದಗಿಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದವರು. ಇದುವರೆಗೆ ಆರು ಕವನ ಸಂಕಲನ, ಒಂದು ಕಾದಂಬರಿ, ಒಂದು ಶಿಶು ಸಾಹಿತ್ಯ ಮತ್ತು ಜೀವನ ಚರಿತ್ರೆ ಹಾಗೂ ೧೦ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿ. ಸರೋಜಾದೇವಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅನುಪಮಾ ಪ್ರಶಸ್ತಿಯೂ ಸೇರಿದಂತೆ ಹಲವು ಸಮ್ಮಾನಗಳನ್ನು ಪಡೆದಿದ್ದಾರೆ. ೨೦೧೪ರ ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಮರಣೋತ್ತರ ದೇಹದಾನ ಮಾಡಿರುವ ಶಶಿಕಲಾ ಸಾಮಾಜಿಕ ಕೆಲಸ, ಚಳುವಳಿಗಳಲ್ಲೂ ದಶಕಗಟ್ಟಲೆಯಿಂದ ಮುಂಚೂಣಿಯಲ್ಲಿರುವವರು.

ವಿಳಾಸ: ನಂ. ೩೦೩ (ಯು), ಕಲ್ಕಿ ಅಪಾಟ್ ಮೆಂಟ್, ಚೇತನಾ ಕಾಲನಿ, ವಿದ್ಯಾನಗರ, ಹುಬ್ಬಳ್ಳಿ - ೫೮೦೦೨೧
No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...