Friday, November 20, 2015

ದೀಪಾ ಹಿರೇಗುತ್ತಿ ಎರಡು ಕವಿತೆಗಳು
೧ 
ಚಿಯರ್‌ಗರ್ಲ್ಸ್


ರಪ್ಪೆಂದು ಬ್ಯಾಟಿಗೆ ಬಡಿದ ಬಾಲು
ಬೌಂಡರಿಯನ್ನು ದಾಟಿ ಹೋಗುವ
ಹೊತ್ತು...
ಇದೀಗ ಅರೆಕ್ಷಣ ಎಲ್ಲರ ಚಿತ್ತ
ಕಾಣದೇ ಮಾಯವಾದ ಚೆಂಡಿನತ್ತ..

ಉಳಿದರ್ಧ ಕ್ಷಣವೂ ವ್ಯರ್ಥವಾಗದು
ಮತ್ತೆ ಮಹನೀಯರ ಲಕ್ಷ ಲಕ್ಷ
ಜತೆ ಕಣ್ಣುಗಳು ಮರಳುವವು
ನಮ್ಮ ಹೊಕ್ಕುಳ ತಿರುವಿಗೆ
ಹೊಟ್ಟೆಯ ಮುದ್ದು ಮಡಿಕೆಗೆ!

ಅಸಂಖ್ಯ ಹೃದಯಗಳು ವೇಗವಾಗಿ
ಹೊಡೆದುಕೊಳ್ಳುವವು
ಎದೆಯ ಲಯಬದ್ಧ
ತೊನೆದಾಟಕ್ಕೆ!
ರಕ್ತ ವೇಗವಾಗಿ ಪ್ರವಹಿಸುವುದು
ಆಣೆಕಟ್ಟು ಒಡೆದಂತೆ
ನಯ ನೀಳ ಬೆತ್ತಲೆ ಕಾಲುಗಳ
ಜಿಗಿತಕ್ಕೆ!

ಮೈ ಮರವಾಗಬೇಕೆಂದೆನಿಸುವುದು
ನಮ್ಮ ಬಳ್ಳಿ ತೋಳುಗಳ ಕೋಮಲತೆಗೆ!
ಹೊಟ್ಟೆತುಂಬಿದ ಕಣ್ಣೂ
ಬೆತ್ತಲೆ ಬೆನ್ನನು ನೆಕ್ಕುವುದು!
ಕರಾರುವಕ್ಕಾಗಿ ಲೆಕ್ಕ ಹಾಕುವುದು
ಮನಸ್ಸು ಸೊಂಟದಳತೆಯನು!

ಲಿಪ್‌ಸ್ಟಿಕ್ ಜತೆ ಹಚ್ಚಿಕೊಂಡ
ಮೋಹಕ ನಗುವಿಗೀಗ
ಅಸಂಖ್ಯ ಶಿಕಾರಿ!!

ಓಹ್! ನಿಮ್ಮ ಕಲ್ಪನೆಯೆಲ್ಲ
ನಿಜವಾಗುವುದಾಗಿದ್ದರೆ!?
ನಿಮ್ಮಾಣೆ, ನೀವೆಲ್ಲ
ಈ ಕ್ಷಣ ನರಭಕ್ಷಕರು!!
ಮುಳುಗಿ ಹೋದೀತು ಈ
ಮೈದಾನ,
ಸಾಮೂಹಿಕ ಸ್ಖಲನದ
ಸನ್ನಿಗೆ!!

ಸಂಭಾವಿತರ, ಕೇಡಿಗಳ, ಮೂರ್ಖರ,
ಪತ್ನೀವ್ರತರ ಎಲ್ಲರ ಕಣ್ಣುಗಳಿಂದ
ಹೊರಬಿದ್ದ ಸರ್ಪಗಳ
ಕೂಟದ ತಾವು ನಮ್ಮ ಮೈಯ್ಯಂಗಳ!!

ಹುಂ, ಕೋಣೆ ಸೇರಿ ಮೇಕಪ್ ಕಳಚಿ
ಹಾಸಿಗೆಗೊರಗಿದರೆ
ಸುದೀರ್ಘ ಕೇಳಿಯ ಸುಸ್ತು
ಮೈತುಂಬ ಉರಿವ ಗಾಯ
ಮನಸು ಗುಣವಾಗದ ವ್ರಣ!
***೨ 

ಪ್ರಾಣಸಖಈ ಜನನಿಬಿಡ ಶಹರದ
ಗಿಜಿಗುಡುವ ಸದ್ದಿನ
ಗಲ್ಲಿಯೊಂದರಲ್ಲಿ
ಆತ ಬರುತ್ತಿರುವ ಸದ್ದು
ಕೇಳಬಲ್ಲೆ ನಾನು!

ಇನ್ನೇನು ನನ್ನ ಮನೆಯೆದುರು
ಬಂದು ನಿಲ್ಲಲಿದ್ದಾನೆ
ಸೋತಿರುವ ನನ್ನ ಕಣ್ಣೆವೆಗಳ ಮೇಲೆ
ಕೊನೆಯ ಮುತ್ತನ್ನೊತ್ತಲು
ಬಣ್ಣ ಕಳೆದುಕೊಳ್ಳುತ್ತಿರುವ
ತುಟಿಗಳನೂ ಚುಂಬಿಸಿ ಸಂತೈಸಲು!

ಅಂದುಕೊಂಡಿದೆ ಮೂರ್ಖಜಗತ್ತು
ಬಯಸಿ ಬಯಸಿ ಸೇರುವುದಿಲ್ಲ
ಅವನನ್ನು ಯಾರೂ!
ಇದ್ದಾರವನಿಗೆ, ದಪ್ಪ ಹುಬ್ಬಿನ
ಮೋಹಕ ಚೆಲುವನಿಗೆ
ಅಸಂಖ್ಯ ಪ್ರೇಯಸಿಯರು!
ತುಂಟ ಕನಯ್ಯನಿಗಿಂತ
ಒಂದು ಕೈ ಮೇಲಿವನು!!

ನಾನು ಮನೆಯ ಕದ ಮುಚ್ಚಿ
ಮನದ ಕದ ಕಿತ್ತೆಸೆದು
ತೋಳ್ದೆರೆದು ಕಣ್ಮುಚ್ಚಿ
ಕಾದಿರುವುದನ್ನು ಬಲ್ಲ ಅವನು!

ಎಲ್ಲರನ್ನೂ ಗೆಲ್ಲಬಲ್ಲ
ನಿಜವಾದ ’ಗಂಡಸು’(?) ಅವನೇ
ಗೊತ್ತೇ ಆಗದಂತೆ ಆವರಿಸುವ
’ಮಾಯೆ’(?)ಯೂ!!

ಅವನು, ಸೋತಾಗ
ಸಮಾಧಾನಿಸುವ ಗೆಳೆಯ
ಅವನ ಮಡಿಲಲ್ಲಿ ಜಗದ ಮರೆವು
ಹಾಗಾಗಿ ಅವನು ಅಮ್ಮ,
ಮಾತಾಡದೆಯೇ ಎಲ್ಲವ ಬಲ್ಲ,
ಅದಕ್ಕೇ ಅವನು ಅಪ್ಪ.
ಇಹದ ಗುರು ಕಲಿಸುವ
ಪಾಠಗಳ ಸ್ಫೂರ್ತಿ
ಆತ ಮಹಾಗುರು.

ಅವನು ಎಲ್ಲರ ತುಟಿಯಂಚಿನ
ಅನೂಹ್ಯ ಮುಗುಳುನಗೆ
ಮುಗಿಯದ ಜಿಜ್ಞಾಸೆ
ಬಿಡಿಸಲಾಗದ ಕಗ್ಗಂಟು
ಕೊನೆಯಿರದ ವಿಸ್ಮಯ

ಅವನು ಯಾರೂ ಕಾಣದ ಕನಸು
ಮತ್ತು ಎಲ್ಲರ ಬದುಕಿನ ವಾಸ್ತವ!!
ಪಾರಿಜಾತದ ಹೂ ತೊಟ್ಟು ಕಳಚಿದಂತೆ
ಅಂಗಳದಿ ಅವನ ಹೆಜ್ಜೆ ಸದ್ದು!

ಇದೀಗ ಇವನ ಕೊರೆವ
ಅಂಗೈಯೊಳಗೆ
ಒಮ್ಮೆ ಅಂಗೈ ಬೆಸೆದೆನೆಂದರೆ
ಅಬ್ಬ! ಬದುಕಿದೆ!
ನಾನಾಕ್ಷಣ ಇಹದ ಹಂಗು ತೊರೆದ
ಸ್ವತಂತ್ರ ಪಕ್ಷಿ!!
***

ದೀಪಾ ಹಿರೇಗುತ್ತಿ (೧೯೭೮) ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿರೇಗುತ್ತಿಯವರು. ಶಿರಸಿ, ಧಾರವಾಡಗಳಲ್ಲಿ ಓದಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಎಂಎ ಪದವಿ ಪಡೆದಿದ್ದಾರೆ. ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿಯ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕಿ. ’ಪರಿಮಳವಿಲ್ಲದ ಹೂಗಳ ಮಧ್ಯೆ’ ಕವನಸಂಕಲನ ಬಿಡುಗಡೆಯಾಗಿದೆ. ರಾಜ್ಯಮಟ್ಟದ ಕಥಾ, ಕವನ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರತೀ ಭಾನುವಾರ ’ನಾನು, ನೀವು ಮತ್ತು’ ಎಂಬ ಅಂಕಣ ಬರೆಯುತ್ತಿದ್ದಾರೆ.

ವಿಳಾಸ: ದೀಪೋತ್ಸವ, ತಿಲಕ್ ರಸ್ತೆ, ಕೊಪ್ಪ, ಚಿಕ್ಕಮಗಳೂರು - ೫೭೭೧೨೬. 

deepahiregutti@gmail.com

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...