Sunday, November 29, 2015

ಲಲಿತಾ ಸಿದ್ಧಬಸವಯ್ಯ ಎರಡು ಕವಿತೆಗಳು
೧ 

ಒಳ್ಳೆ ಅಪ್ಪನ ಮಗಳು ಮತ್ತು ಒಳ್ಳೆ ಗಂಡನ ಹೆಂಡತಿಯೂ


ನಾನೂ ಕಂಭಯ್ಯನವರು
ಒಂದೆ ಆಫೀಸಿನ ಒಂದೆ ಸೆಖ್ಷನ್ನಿಗೆ ಗೂಟ ಹೊಡಕೊಂಡಿದ್ದೆವು
ಒಂದಲ್ಲ ಎರಡಲ್ಲ ಒಂಭತ್ತು ವರ್ಷ

ಕುಹಕಗಳನ್ನ ಕಂಡಾಗೆಲ್ಲ ಮಾರಮ್ಮ
ನಾಗುತ್ತಿದ್ದ ನನಗೆ ಈ ತಣ್ಣನ್ನೆ ಪಾಯಸದಂಥ ಮನುಷ್ಯ
ಅಷ್ಟೂ ವರ್ಷ ಹೇಳಿದ್ದು ಒಂದೆ ಹಿತವಚನ;
“ಕಾಲ ಕೆಟ್ಟೋಯ್ತು ಮೇಡಮ್ಮೋರೆ
ಕಾದಾಡಿ ಮುಖ ಕೆಡಿಸ್ಗಳ್ಳದು ಎಷ್ಟೊತ್ತು ಲಲ್ತಮ್ಮೋರೆ
ಅಂದೋರೆ ದೊಡ್ಡೋರಾಗ್ಲಿ ಬಿಡ್ರಿ
ಖಾಯಮ್ ಅಟೆಂಡೆನ್ಸ್ ಇಲ್ ಯಾರ್ಗೈತ್ರಿ”

ಹೇಳಿದ್ದೊಂದೆ ಅಲ್ಲ
ತಮ್ಮ ಹಿತವಚನ ತಾವೆ ಪಾಲಿಸಿದರು ಕೂಡಾ;
ಏಳು ಚಿಕ್ಕವರು ಕುತ್ತಿಗೆ ಹತ್ತಿ ಕೂತಾಗಲೂ
ಸಲಾಮು ಹೊಡೆದರು ನೆತ್ತಿ ತಗುಲಿಸಿಕೊಂಡು     

ಹೆಂಡತಿ ಸೆರೆಗೆಳೆದರು ಸುಮ್ಮನಿದ್ದ ಕುಂತೀದೇವಿ ಸಂತಾನದ ತರ
ನಡೆದರು ಕಂಡೇ ಇಲ್ಲವೆನುವಂತೆ ಕೈಗೆ ಬಂದ ಬಡ್ತಿ ಕಂಡೋರ
ಪಾಲಾದರೂ; ರಿಲೀವಾದರು ವರ್ಗವಾದಾಗೆಲ್ಲ ಉಸಿರುಬಿಡದೆ
ಮತ್ತೆಲ್ಲಿಲ್ಲಿನ ಕಸ ತಂದು ಟೇಬಲ್ಲಿಗೆ ಸುರಿದರೂ
ವಿಲೆ ಮಾಡಿದರು ಸಂತ ಸೋಮಾನಂದನ ಹಾಗೆ;

-೨-

ಇಂಥ ಕಂಭಯ್ಯನವರ ಮಗಳು
ಆಫೀಸಿನ ಹತ್ತಿರ ಹೇರ್ಪಿನ್ನಿಗೊ ನೋಟ್‌ಬುಕ್ಕಿಗೊ
ಅಪ್ಪನ್ನ ತಾವು ದುಡ್ಡು ಕೇಳೊಕೆ ಬರುತ್ತಿದ್ದವಳು
ಅವಳ ಮಾತು ಅವಳಿಗೇ ಕೇಳುತ್ತೊ ಇಲ್ಲವೊ
ಅನುವಂಥ ಸಣ್ಣಸ್ವರದವಳು
ಅರೆಸ್ಟಾದಳು

ವ್ಯತ್ಯಾಸವಿಲ್ಲ
ಯಾರು ನಂಬಿದರೂ ಬಿಟ್ಟರೂ
ಬಡ ಕಂಭಯ್ಯನವರ ಹಂಗೆ ಇಟ್ಟುಕೊಳಲಿಲ್ಲ
ಇಪ್ಪತ್ನಾಲ್ಕು ಇಂಟು ಏಳರ ವೀರಚಾನೆಲ್ಲುಗಳು
ಕಣ್ಣು ತೂತು ಬೀಳುವವರೆಗು ಅದೆ ದೃಶ್ಯಾವಳಿ
ಮೂರನೆಯವರ ಬಾಯಿಗೆ ಬೀಳದಿದ್ದ ಅವರ ಮನೆವಾರ್ತೆ
ಈಗೆಲ್ಲರ ನಡುಮನೆಯಲ್ಲಿ

ಅವಳೆ ಕೊಟ್ಟ ಹೇಳಿಕೆ;
ಕೊಲೆಮಾಡಿ ಗಂಡನ್ನ
ಆಮೇಲೆ ತುಂಡುತುಂಡು ಮಾಡಿ ಹೆಣವನ್ನ
ಮನೆಯಲ್ಲಿಟ್ಟುಕೊಂಡೆ ಮಲಗಿದ್ದಳಂತೆ ಮೂರುದಿನ
ಸರೆಂಡರಾದಳಂತೆ ನಾಲ್ಕನೆ ದಿನ

ಒಳ್ಳೆ ಅಪ್ಪನಿಂದಲೆ ಜನುಮ ರೋಸಿತ್ತು
ಬೇಕಾಗಿರಲಿಲ್ಲ ಮುಖಕ್ಕುಗಿದರು ಒರೆಸಿಕೊಂಡು ಬರುವ
ಅಂಥದ್ದೆ ಗಂಡನೂ

ಒಳ್ಳೆಯವನ ಮಗಳಾದ್ದಕ್ಕೆ
ಕಣ್ಣು ಬಾಯಿ ಎರಡು ಮಾತ್ರ ಕಟ್ಟಿಕೊಂಡಿದ್ದೆ
ಒಳ್ಳೆಯವನ ಹೆಂಡಿರಾದ್ದಕ್ಕೆ ಕಟ್ಟಬೇಕಾಯ್ತು
ಉಲ್ಲಾಸದ ಸಕಲ ಸೌಭಾಗ್ಯ; ಎಷ್ಟು ದಿನ ನೆಟ್ಟುಕೊಳ್ಳಲಿ
ತೋರಿಕೆಯ ತುಳಸಿವನ?

ಈ ಕಂಭಯ್ಯನ
ಮಗಳ ತಲೆಯಿಂದೆ ಚೆಂಡಾಡಲಿ
ನಿಂಬೆಹಣ್ಣು ಹಿಡಕೊಂಡು ನಗುನಗುತ ಹೋಗುವೆ
ಗಲ್ಲುಗಂಭಕ್ಕೆ; ಆದರೀ ಒಳ್ಳೆತನದ ತುರುಚೆಬಳ್ಳಿ
ನಿಶ್ಶೇಷವಾಗಬೇಕು ನನ್ನ ತಲೆಗೇ; ಅದು ಕಾರಣ ಇದು ಜೊಳ್ಳು
ಬೀಜದಕಾಯಿ ಈ ಗಂಡನೆಂಬುದ ತುಂಡುತುಂಡು ಮಾಡಿ
ಹೀಗೆ ಹೀಗೆ ಕತ್ತರಿಸಿದೆ ಹೀಗೆ ಹೀಗೆ ತುಂಬಿದೆ

ಉಗ್ಗದೆ ತಗ್ಗದೆ
ಅಳದೆ ಮುಖ ಮುಚ್ಚಿಕೊಳ್ಳದೆ
ಪ್ರಾಯದ ಹುಡುಗಿ ವಿವರಗಳ ಹೇಳುತ್ತಿದ್ದರೆ
ಹಳೆಮನುಷ ಪೋಲೀಸಪ್ಪನಿಗೇ ಬೆವರು

-೩-

ನಮ್ಮ ನಿಘಂಟುಗಳ
ನೂರುವರ್ಷಕ್ಕೊಂದು ಸಲ ಬಿಸಿಲಿಗೆ ಹಾಕಿದರೂ ಸಾಕು
ಶಬ್ದಕ್ಕೆ ಒಂದೆ ಅರ್ಥದ ಜೈಲಿಂದ ಬಿಡುಗಡೆಯಾಗಿ
ಒಳಿತು ಕೆಡುಕಿನ ವ್ಯಾಖ್ಯಾನಕ್ಕಂಟಿದ ನುಸಿರೋಗ ವಾಸಿಯಾಗಿ
ಪ್ರಾತ:ಕಾಲ ಸ್ಮರಿಸುವ ಪವಿತ್ರಕನ್ಯೆ
ಯರ ಪಟ್ಟಿಗೆ ಸೇರ್ಪಡೆಯಾದಾಳು
ಕಂಭಯ್ಯನವರ ಮಗಳೂ

ದೇವರೇ
ಅಷ್ಟಾಗಲಿ, ತಥಾಸ್ತು ಅನ್ನು!
***


೨ 
ಕವಿ ನಾನು ನಾನಾವರ್ಣಿ - ಇಕಾರಾಂತ ಸ್ತ್ರೀಲಿಂಗ ಶುದ್ಧಪ್ರಯೋಗ


ಹುಡುಕಿದ್ದೇನೆ
ನನ್ನ ದೇವಿಯ ನಾನೇ; ಹೆಸರಿಟ್ಟಿದ್ದೇನೆ
ನಾನು ಪೂಜಿಸಿದ್ದಕ್ಕೆ ಅವಳು ದೇವಿ, ನಾನು ಬರೆದದ್ದಕ್ಕೆ ಅವಳು
ಪುರಾಣನಾಮ ಚೂಡಾಮಣಿ;
ಅವಳ ಸೃಷ್ಟಿಸಿದ ನಾನು ಬ್ರಹ್ಮಿಣಿ;
ಈ ಅಕ್ಷರದೇವಿಯ ನಿತ್ಯೋಪಾಸಕಿ; ನಾನು
ವಿಪ್ರಪ್ರಿಯಾ ವಿಪ್ರೋತ್ತಮೆ;

ತೂಗಿ ತೂಗಿ
ಸ್ವರ ವ್ಯಂಜನಗಳ ಸರಂಜಾಮು
ಇತ್ತ ಹಿಸಿದು ಅತ್ತ ಬೆಸೆದು
ಎಂದೂ ಸಮವಾಗದಿದ್ದರು ತ್ರಾಸು
ಕೈ ಚೆಲ್ಲಿಲ್ಲ ಸುಸ್ತೆಂದು, ಕೂಡಿಟ್ಟಿದ್ದೇನೆ ವರ್ಣಭೇದವಿರದ ವರ್ಣಸಂಪತ್ತ
ನಾನುಗ್ರಾಣದ ಜಿಪುಣೆ ಲೇವಾದೇವಿಯಲ್ಲಿ ಅಪ್ಪಟ ಜಾಣೆ
ಹಳೆಬಂಗಾರ ಕಳೆದಿಲ್ಲ, ಶೋಧಿಸಿದ್ದೇನೆ ಹೊಸ ನಮೂನೆ;
ಕಾಸಿಗೆ ಸೋಲದ ಕುಶಲೆ; ನಾನು
ವೈಶ್ಯಕುಲ ರತ್ನಪ್ರಾಯೆ;


ಕಣ್ಣಿಗೆಣ್ಣೆಬಿಟ್ಟು
ಬೆಲೆಕಟ್ಟಲಾಗದ ರೇಸಿಮೆಯಲ್ಲಿ ಬಚ್ಚಿಟ್ಟು
ಏಳುಸುತ್ತಿನ ಕೋಟೆ, ಆಳುದ್ದದ ಅಗಳು, ಚತುರಂಗ ಸೇನೆ
ಈ ಅಕ್ಷರಚಕ್ರಾಧಿಪತ್ಯವ ಕಾವ ಕೊತ್ವಾಲಿಕೆಯಲ್ಲಿ
ನಾನು ಸೋಲೊಪ್ಪಿಕೊಳ್ಳದ ಯೋಧೆ; ರಣತಂತ್ರ ನಿಪುಣೆ
ಜೋಪಾಸನೆಯಲ್ಲಿ ಪಳಗಿದ ಸೇನಾಧಿಪೆ
ಹುಡುಕಿದರೊಬ್ಬಳೆ; ನಾನು
ನಿಜದಲ್ಲಿ ನಿಜಕ್ಷತ್ರಿಯೆ;

ಈ ಇದಕೆ ತೊಡಗುವ 
ಮೊದಲು ಬೇಕಾದ್ದು ಬೇಡದ್ದೆನ್ನದೆ
ಓದಿಗೊದಗಿ ಬಂದದ್ದನ್ನೆಲ್ಲ ರೊಪ್ಪದೆ ಕೂಡಿ
ಒಗ್ಗದ್ದನ್ನೂ ತಿಗುರಿಗಿಟ್ಟು ಆಕಾರ ಮಾಡಿ
ಒರಟೆಂದು ಜನ ಬಿಟ್ಟಿದ್ದನ್ನೂ ಬುರುಡೆಯುಬ್ಬೆಯೊಳು
ಮೆದು ಬೇಯಿಸಿ ಮಡಿಮಾಡಿ
ಹದ ಮೀರಿ ಸೇದಿದ್ದನ್ನೂ ಉಪ್ಪೂರಿಸಿ ರಸನೆಗೆ ತಂದು
ಒಂದೊಂದು ಶಬುದವೂ ಒಬ್ಬೊಬ್ಬ ರಾಜಕುಮಾರಿ
ಯೆಂದೆ ಬಗೆದು ಸೇವಿಸಿದ್ದೇನೆ ಬಗೆಬಗೆ; ದೊಡ್ಡಮಂದೆಗೆ ನುಗ್ಗಿ
ನನ್ನ ಕರು ಹುಡುಕಬಲ್ಲ ನಿಖರ ಚಹರೆಯ ಜಾತಿ
ಹದಿನೆಂಟು ಕಸುಬಿನ ಆಯಗಾತಿ; ನಾನು
ಶೂದ್ರಾತಿಶೂದ್ರೆ ಶೂದ್ರಸಂಪನ್ನೆ;

ಉಟ್ಟ ಸೀರೆಯ
ಮೇಲೇ ಉಚ್ಚಿಬಿಟ್ಟಿವೆ ಅಕ್ಷರಗಳು
ಇಶ್ಶಿಶ್ಶಿಯೆಂದು ನಾನು ಮುಖ ಸೊಟ್ಟಗಿಟ್ಟಿದ್ದರೆ
ಕಸುಬಿನ ಮೇಲಾಣೆ; ಬಾಚಿ ಬಳಿದು ಹೊತ್ತು ಶಿರದಮೇಲೆ
ತಿಪ್ಪೆಗೆಸೆದು ಬರುವಾಗಲೂ ಕಕ್ಕ ಕೆದಕಿದ್ದೇನೆ
ಎರಡು ಕಾಸಿಗೆ ಬರುವಂತದ್ದೇನಾದರೂ
ಎಸೆದುಬಿಟ್ಟೆನೆ ಎಂದನುಮಾನಗೊಂಡು;
ಸಹನೆಯಲಿ ಸಾವಿರವರ್ಷ
ಮುಟ್ಟಿಸಿಗೊಳ್ಳದವರಿಗಿಂತ ಕೊಟ್ಟಕೊನೆ; ನಾನು
ಪಂಚಮರಲ್ಲಿ ಮರುಪಂಚಮೆ;

ಕವಿ ನಾನು ನಾನಾವರ್ಣಿ
ಇಕಾರಾಂತ ಸ್ತ್ರೀಲಿಂಗ ಶುದ್ಧಪ್ರಯೋಗ
ಕರ್ತರಿ ಕರ್ಮಣಿಗಿಲ್ಲ ತಾವು; ಸಣ್ಣಗೆ ಕೊಯ್ಯಲಾರಿರಿ ನೀವು

ವರ್ಣಾಂತರ ಮರುವರ್ಣಾಂತರ
ನನಗೆ ಸುಲಭ ನೀರು ಕುಡಿದಷ್ಟು ಅಥವಾ ಅದಕ್ಕಿಂತಲೂ;
ಇಕಾರಾಂತ ಸ್ತ್ರೀಲಿಂಗ ಶುದ್ಧಪ್ರಯೋಗ - ಕವಿ ನಾನು ನಾನಾವರ್ಣಿ 
ನೋಡಿ ಈಗೇನು ಮಾಡುತ್ತೀರೋ
ಅದೇನೇನು ಕಾಯಿಸಿ ಅದೆಲ್ಲೆಲ್ಲಿಗೆ ಬಿಡುತ್ತೀರೊ
ಬಣ್ಣಗುರುಡರೆ;
***

ಲಲಿತಾ ಸಿದ್ಧಬಸವಯ್ಯ (೧೯೫೫) ತುಮಕೂರು ಜಿಲ್ಲೆ ಕೊರಟಗೆರೆಯವರು. ಜೀವಶಾಸ್ತ್ರ ಪದವೀಧರರಾಗಿ, ಸರ್ಕಾರಿ ನೌಕರರಾಗಿ ೨೮ ವರ್ಷ ಕೆಲಸ ಮಾಡಿರುವ ಲಲಿತಾ ಅವರ ಪತಿ ನಿವೃತ್ತ ಕನ್ನಡ ಪ್ರಾಧ್ಯಾಪಕ, ಲೇಖಕ, ಚಿನ್ಮಯಿ ಪ್ರಕಾಶನ ಮತ್ತು ವಿಜಯಪ್ರಗತಿ ವಾರಪತ್ರಿಕೆಯ ನಿರ್ವಾಹಕ ಕೋಳಾಲ ಸಿದ್ಧಬಸವಯ್ಯನವರು. ಇದುವರೆಗೆ ೫ ಕವನ ಸಂಕಲನಗಳು, ಒಂದು ನಾಟಕ, ಒಂದು ನಗೆ ಪ್ರಹಸನ ಸಂಗ್ರಹ, ಒಂದು ಕಥಾ ಸಂಕಲನ ಪ್ರಕಟವಾಗಿವೆ. ಬಿಎಂಶ್ರೀ ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಕ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಮನ್ನಣೆ ಪಡೆದ ಲಲಿತಾ ಅವರ ಕವಿತೆ-ಸಂಕಲನಗಳು ಕರ್ನಾಟಕ ವಿಶ್ವವಿದ್ಯಾಲಯ, ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯ ಸೇರಿದಂತೆ ಹಲವು ಕಡೆ ಸಾಹಿತ್ಯ ವಿದ್ಯಾರ್ಥಿಗಳ ಪಠ್ಯವಾಗಿವೆ.

ವಿಳಾಸ : no.4(B), SHALOM MANOR, countryside lay out, opp to wipro corporate office, sarjapura road B'LORE- 35.
lalithasid@rediffmail.com2 comments:

  1. ಲಲಿತಾ ಮೇಡಂ ಕವಿತೆಗಳು ಸದಾ ಎದೆಯೊಳಗೆ ನೆಲೆನಿಂತು ಚಿಂತನೆಗೆ ಹಚ್ಚುತ್ತವೆ

    ReplyDelete
  2. ಲಲಿತಾ ಮೇಡಂ ಕವಿತೆಗಳು ಸದಾ ಎದೆಯೊಳಗೆ ನೆಲೆನಿಂತು ಚಿಂತನೆಗೆ ಹಚ್ಚುತ್ತವೆ

    ReplyDelete

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...