Saturday, November 21, 2015

ಭಿನ್ನತೆ ಮತ್ತು ಸಹಬಾಳ್ವೆಯ ಬದುಕು
ಡಾ. ಪೌಲ್ ಜಿ. ಅಕ್ವಿನಸ್, 
ಮಂಗಳಗಂಗೋತ್ರಿದೇಶದ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ, ಬಹುತ್ವದ ಮೌಲ್ಯಗಳು ಮರೆಯಾಗಿ ಒಂದು ನಿರ್ದಿಷ್ಟ ಪಂಥದ ಧೋರಣೆಗಳು ವಿರಾಟ ಸ್ವರೂಪದಲ್ಲಿ ರಾರಾಜಿಸಲಾರಂಭಿಸಿವೆ. ಕೇಂದ್ರ ಸರಕಾರದ ‘ಡಿಜಿಟಲ್ ಇಂಡಿಯಾ’, ಜಾಗತಿಕ ಬಂಡವಾಳದ ಆಕರ್ಷಣೆ ಮತ್ತು ಜಾಗತಿಕ ನಗರಗಳಿಗೆ ಪೈಪೋಟಿ ನೀಡುವ ‘ಸ್ಮಾರ್ಟ್ ಸಿಟಿ’ ಯೋಜನೆ, ‘ಮೇಕ್ ಇನ್ ಇಂಡಿಯಾ’ ಮೂಲಕ ಜಗತ್ತಿನ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಿ ಆ ಮೂಲಕ ಜನರ ಮತ್ತು ದೇಶದ ಆದಾಯವನ್ನು ಹೆಚ್ಚಿಸುವ ಮಹತ್ತರ ಯೋಜನೆಗಳು ಕಳೆದ ಕೆಲವು ಸಮಯದಿಂದ ಮಾಧ್ಯಮದಲ್ಲಿ ಕೇಳಿಬರುತ್ತಿವೆ. ಆದರೆ, ಈ ಎಲ್ಲ ಅಭಿವೃದ್ಧಿಗೆ ಪೂರಕವಾದ ನಾಗರಿಕ ಸುರಕ್ಷತೆ, ಸಹಿಷ್ಣುತೆ ಹಾಗೂ ಭಿನ್ನ ಯೋಚನಾಕ್ರಮವನ್ನು ಕನಿಷ್ಠ ಗೌರವಿಸುವ ಉದಾರ ಮನೋಭಾವನೆ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕಾಣೆಯಾಗಿದೆಯೆಂಬುದು ಅತೀ ಖೇದಕರ ಸಂಗತಿ. ಬಹುತ್ವ, ಭಿನ್ನತೆಯೇ ಜೀವಾಳವಾಗಿದ್ದ ದೇಶದಲ್ಲಿ, ನಾಗರಿಕ ಸುರಕ್ಷತೆಯ ಬಗ್ಗೆ ಅನುಮಾನ ಮೂಡಿದೆ. ದಲಿತ, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಬುದ್ಧಿಜೀವಿಗಳ ಮೇಲೆ ನಿರಂತರ ಹಲ್ಲೆ, ಬೆದರಿಕೆ ಮತ್ತು ಕೊಲೆಗಳು ನಡೆಯುತ್ತಿವೆ. ಅಧುನಿಕ ಪ್ರಜಾಪ್ರಭುತ್ವಕ್ಕೆ ಗಟ್ಟಿ ನಿದರ್ಶನವಾಗಿದ್ದ ಭಾರತದಲ್ಲಿ, ಬಹುತೇಕ ದೇಶವಾಸಿಗಳಿಗೆ ಪರಕೀಯತೆ ಕಾಡುತ್ತಿದೆ. ಸಾಮಾಜಿಕ ಮತ್ತು ಬೌದ್ಧಿಕ ಕ್ಷೇತ್ರದ ಉದಾರತೆ ಮತ್ತು ಪ್ರತಿ ಚಿಂತನೆಯನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿರುವುದು ದೇಶದ ಏಕತೆಯ ವೌಲ್ಯ ಮತ್ತು ಪ್ರಜಾಪ್ರಭುತ್ವದ ಮೂಲ ಅಸ್ತಿತ್ವಕ್ಕೆ ಧಕ್ಕೆಯುಂಟು ಮಾಡಿದಂತೆ. ಬೌದ್ಧಿಕ ವಲಯದಲ್ಲಿ ಒಂದು ಚಿಂತನಾ ಕ್ರಮಕ್ಕೆ ಪ್ರತಿಯಾಗಿ ಇನ್ನೊಂದು ಚಿಂತನಾಕ್ರಮ ಹುಟ್ಟಿಕೊಳ್ಳುವುದು ಸಹಜ. ಅಂದಮಾತ್ರಕ್ಕೆ ಎಲ್ಲರೂ ಎಲ್ಲವನ್ನೂ ಒಪ್ಪಬೇಕು ಅಥವಾ ವಿರೋಧಿಸಬೇಕೆಂಬ ನಿಲುವು ತಪ್ಪು. ಬಹುಶಃ ಇದೇ ಕಾರಣಕ್ಕೆ ಭಾರತದಲ್ಲಿ ಚಾರ್ವಾಕ, ಬುದ್ಧ ಸೇರಿದಂತೆ, ಇತರೆ ಅಧುನಿಕ ಪ್ರಗತಿಪರ ಧೋರಣೆಗಳು ಕಟು ಸಾಂಪ್ರದಾಯಿ ಚಿಂತನೆಗಳ ಮಧ್ಯೆಯೂ ಹುಟ್ಟಿಕೊಂಡದ್ದು ಹಾಗೂ ಸಾಮಾಜಿಕ ಮಾನ್ಯತೆ ಗಳಿಸಿದ್ದು. ಭಾರತದ ಇತಿಹಾಸದಲ್ಲಿ ಇಂತಹ ಹಿಂಸೆ ಮತ್ತು ಅಸಹಿಷ್ಣುತೆ ಹೊಸತಲ್ಲ. ಆದರೆ ಇಂದಿನ ಹಿಂಸೆ ಮತ್ತು ಅಸಹಿಷ್ಣುತೆ ತೀರಾ ಸಾಂಸ್ಥಿಕ ಸ್ವರೂಪದ್ದಾಗಿದ್ದು, ಪ್ರಭುತ್ವದಿಂದ ನೇರ ಶಾಮೀಲಾದ ಸಂಘ-ಸಂಸ್ಥೆಗಳಿಂದ ನಡೆಯುತ್ತಿರುವುದನ್ನು ಕಾಣಬಹುದಾಗಿದೆ.

ದೇಶದ ರಾಜಕೀಯ ಸನ್ನಿವೇಶ ಮತ್ತು ಸಾಮಾಜಿಕತೆಗೆ ನೇರ ಸಂಬಂಧವಿದೆ. ಇದೇ ಕಾರಣಕ್ಕೆ ಇಂದು ಧಾರ್ಮಿಕ, ಸಾಮಾಜಿಕ ಮತ್ತು ಅವುಗಳಿಂದ ಪ್ರೇರಿತವಾದ ಕೌಟುಂಬಿಕ ಹಿಂಸೆಯಲ್ಲೂ ಗಣನೀಯ ಹೆಚ್ಚಳವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿ ಘನತೆ ತನ್ನ ಅರ್ಥ ಕಳೆದುಕೊಂಡಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲೂ, ಸರಕಾರಗಳು ಕ್ರಮಕೈಗೊಳ್ಳಲು ಮತ್ತು ಸಹಬಾಳ್ವೆಯ ಬದುಕನ್ನು ಪುನರಪಿ ಕಟ್ಟಿಕೊಡಲು ಹಿಂದೇಟು ಹಾಕುತ್ತಿವೆ. ಸರಕಾರಗಳ ಈ ನಡೆಯ ಹಿಂದೆ ಕಣ್ಣಿಗೆ ಕಾಣದ ಕೆಟ್ಟ ರಾಜಕೀಯವಿದೆ. ದೇಶದ ಘನತೆಗೆ ಮಾರಕವಾದ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುವ ಇಂತಹ ಚಟುವಟಿಕೆಗಳನ್ನು ಕಟುವಾಗಿ ಟೀಕಿಸದಿರುವುದೂ, ಪರೋಕ್ಷವಾಗಿ ಬೆಂಬಲ ನೀಡಿದಂತೆ. ಸರಕಾರದ ಈ ನಡವಳಿಕೆ ಸಾಮಾನ್ಯ ನಾಗರಿಕರಿಗೆ ಸರಕಾರದ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಸರಕಾರಗಳು ಆಂತರಿಕ ಭದ್ರತೆ ಮತ್ತು ಸಂವಿಧಾನಿಕ ಮೌಲ್ಯಗಳಿಗೆ ಧಕ್ಕೆಯುಂಟಾಗುವ ಸಂದರ್ಭದಲ್ಲಿ ಅತಿ ಸೂಕ್ಷ್ಮವಾಗಿ ವರ್ತಿಸುವ ಅಗತ್ಯವಿದೆ. ಏಕೆಂದರೆ, ಈ ದೇಶದಲ್ಲಿ ಬಲಾಢ್ಯರಿಗೆ ಮಾತ್ರ ಬದುಕುವ ಹಕ್ಕಲ್ಲ, ಬದಲಾಗಿ ಹುಟ್ಟಿದವರೆಲ್ಲರಿಗೂ ಯಾವುದೇ ತಾರತಮ್ಯವಿಲ್ಲದೆ ಸಂವಿಧಾನಿಕವಾಗಿ ಬದುಕುವ ಅವಕಾಶವಿದೆಯೆಂಬುದನ್ನು ಸರಕಾರಗಳು ತಮ್ಮ ನಡೆಯ ಮೂಲಕ ಖಾತ್ರಿಪಡಿಸಬೇಕಿದೆ. ಸ್ವಾತಂತ್ರ್ಯ ಹೋರಾಟದ ಮೌಲ್ಯ, ಸಂವಿಧಾನದ ಆಶಯಗಳು, ಬಹುತ್ವದ ಕಲ್ಪನೆ, ಭಿನ್ನ ಯೋಚನಾ ಕ್ರಮಗಳೆಲ್ಲವನ್ನೂ ಸರಕಾರ ರಕ್ಷಿಸುತ್ತದೆಯೆಂಬ ಸಂದೇಶ ನಾಗರಿಕರಿಗೆ ರವಾನೆಯಾಗಬೇಕಿದೆ.

ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಆದ ಸಿದ್ಧಾಂತ ಮತ್ತು ಯೋಚನಾ ಕ್ರಮಗಳಿದ್ದರೂ, ಭಾರತದಂತಹ ಬಹುತ್ವದ ದೇಶದಲ್ಲಿ ಎಲ್ಲ ಧರ್ಮ ಮತ್ತು ಸಾಮಾಜಿಕ ಭಿನ್ನತೆಯುಳ್ಳ ಜನರ ಮಧ್ಯೆ ಸಹಬಾಳ್ವೆಯ ಬದುಕು ಸಾಧ್ಯವಾಗುವಂತಹ ವಾತಾವರಣದ ನಿರ್ಮಿಸುವಿಕೆ ಮತ್ತು ಪರ್ಯಾಯ ಸರಕಾರದಂತೆ ವರ್ತಿಸುವ ಸಂಘ-ಸಂಸ್ಥೆಗಳಿಂದ ಇಲ್ಲಿನ ನಾಗರಿಕರನ್ನು ರಕ್ಷಿಸುವ ಮಹತ್ತರ ಹೊಣೆಗಾರಿಕೆ ಸರಕಾರಕ್ಕಿದೆ. ಇಂತಹ ಕ್ರಾಂತಿಕಾರಿ ನಿಲುವುಗಳನ್ನು ಸರಕಾರ ಕೈಗೊಳ್ಳದೇ ಹೋದಲ್ಲಿ ರಾಜಕೀಯ ಅರಾಜಕತೆ ಉಂಟಾಗುವ ಸಾಧ್ಯತೆಯಿದೆ. ಇಷ್ಟೆಲ್ಲ ಅನಾಹುತಗಳು ಸಂಭವಿಸುತ್ತಿದ್ದರೂ, ಸರಕಾರಗಳು ವಹಿಸಿರುವ ಮೌನ ಅನೇಕ ಸಂದೇಹಗಳಿಗೆ ಎಡೆ ಮಾಡಿಕೊಡುತ್ತದೆ. ಆದುದರಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮ ಬಿಗುಮಾನವನ್ನು ಬಿಟ್ಟು ಮೌನ ಮುರಿದು ಜನರ ಆಶಯಗಳಿಗೆ ಸ್ಪಂದಿಸುವ ಅನಿವಾರ್ಯತೆಯಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸರಕಾರಗಳು ಯಶಸ್ವಿಗೊಳ್ಳುವುದು ಇಂತಹ ಸಂವಾದಗಳಿಂದ ಮತ್ತು ಪರಸ್ಪರ ಒಳಗೊಳ್ಳುವಿಕೆಯಿಂದ ಮಾತ್ರವೆಂಬುದು ದಿಟ. ಜಾತಿ, ಧರ್ಮ, ಜನಾಂಗೀಯತೆ ಮತ್ತು ಯೋಚನೆಯಲ್ಲಿ ಭಿನ್ನತೆಯಿದ್ದರೂ ಸಮಾನ ಬದುಕನ್ನು ಭಾರತದ ನೆಲದಲ್ಲಿ ಕಂಡುಕೊಳ್ಳಲು ಸಾಧ್ಯವಿದೆಯೆಂಬುದನ್ನು ಜಗತ್ತಿಗೆ ತೋರಿಸಿಕೊಡುವ ಜವಾಬ್ದಾರಿ ಸರಕಾರಗಳಿಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಹಿಂಸಾಚಾರದಂತಹ ಘಟನೆಗಳ ಜೊತೆಗೆ ನಮ್ಮ ಚುನಾಯಿತ ಪ್ರತಿನಿಧಿಗಳ ಮನೋಭಾವಗಳನ್ನು ಪ್ರಶ್ನಿಸಬೇಕಿದೆ. ಅವರ ನಡೆಗಳು ಅಸಹಿಷ್ಣುತೆ ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವಂತಿದೆಯೇ ಹೊರತು ಶಮನಗೊಳಿಸುವ ಯಾವ ಪ್ರಯತ್ನವನ್ನು ಗಂಭೀರವಾಗಿ ಮಾಡುತ್ತಿಲ್ಲ. ಇವರ ಈ ಜಾಣ ನಡೆಯ ಹಿಂದೆ ರಾಜಕಾರಣದ ಲೆಕ್ಕಾಚಾರವಿದೆ. ಆದರೆ, ಸರಕಾರದ ನೇರ ಪ್ರತಿನಿಧಿಗಳಾದ ಅವರು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಅಥವಾ ಕೈಗೆತ್ತಿಕೊಳ್ಳುವ ಪ್ರಯತ್ನಗಳಿಗೆ ಪರೋಕ್ಷ ಬೆಂಬಲ ನೀಡುವುದು ವಿಪರ್ಯಾಸವೇ ಸರಿ. ನನಗನಿಸುವುದು, ಇವೆಲ್ಲ ಭಾರತದ ಮುಂದಿರುವ ಬಹು ಆಯಾಮವುಳ್ಳ ಸವಾಲುಗಳು. ಆದಾಗ್ಯೂ ನಾವು ಧೃತಿಗೆಡುವ ಅಗತ್ಯವಿಲ್ಲ, ಬಹುತ್ವದ ಜೊತೆಗೆ ತನ್ನ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಪರಂಪರೆ ನಮ್ಮ ದೇಶಕ್ಕಿದೆ. ಪ್ರತಿಯೋರ್ವರು ಸಂವಿಧಾನ ನೀಡಿರುವ ನೈತಿಕತೆಯ ನೆಲೆಯಲ್ಲಿ ತಮ್ಮ ನಡವಳಿಕೆಯನ್ನು ರೂಪಿಸಿಕೊಂಡಲ್ಲಿ, ಮತ್ತು ಸರಕಾರಗಳು ಕೂಡ ತಮ್ಮ ಸಿದ್ಧಾಂತ, ಧೋರಣೆ ಹಾಗೂ ರಾಜಕೀಯ ಲೆಕ್ಕಚಾರದ ಹೊರತಾಗಿಯೂ ಸಮಪಾಲಿನ ಸಹಬಾಳ್ವೆಯನ್ನು ರೂಪಿಸಿಕೊಂಡಲ್ಲಿ ಸದೃಢ ಭಾರತವನ್ನು ಕಟ್ಟಿಕೊಳ್ಳಲು ಸಾಧ್ಯವಿದೆ. ಭಿನ್ನಚಿಂತನೆ, ಬಹುರೂಪಿ ಕಲ್ಪನೆ ಮತ್ತು ಭಿನ್ನ ಯೋಚನಾ ಕ್ರಮಗಳನ್ನು ಸ್ವಾಗತಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ವೌಲ್ಯವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದು ಆಗದೇ ಹೋದಲ್ಲಿ, ಭಾರತವೆಂಬ ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಅಸ್ಮಿತೆ ಕೈಜಾರಿಹೋಗುವ ಸಾಧ್ಯತೆಗಳಿವೆ.
ಸೌಜನ್ಯ : ೨೨.೧೧.೨೦೧೫

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...