Tuesday, November 17, 2015

ಡಾ ಸಬಿಹಾ ಭೂಮೀಗೌಡ ಎರಡು ಕವಿತೆಗಳು


೧ 
ನುಗ್ಗೆ ಮರಮನೆಯಂಗಳದ ನುಗ್ಗೆಮರ
ತಂದಾಗ ಒಂದೇ ಮೊಳ
ಊರಿದ್ದ ನೆಲದಲೇ ಬಿಟ್ಟು ಬೇರು
ಬೆಳೆದಿತ್ತು ಮುಗಿಲಿಗೇ ಮೊಗಮಾಡಿ!

ಕಾಣುವಷ್ಟರಲಿ ವಸಂತವೆರೆಡು
ಮೈತುಂಬ ಹೂವು; ಸಾಲುಸಾಲು ಹಕ್ಕಿ!
ಹೀಚು ಕಾಯಾಗಿ ತುಂಬು ಗರ್ಭಿಣಿ
ಗಾಳಿಗೆ ತೊನೆದಾಡಿ ಬೀಗಿದಾಗ

ಲೆಕ್ಕ ಹಾಕುತ್ತಿತ್ತು ಮನ
ಕಾಯಿಗೇನು ರೇಟು?

ಒಡಲು ಬರಿದಾದ ಗಳಿಗೆ
ಕತ್ತಿಗೆ ಶರಣಾಗಿ ಉರುಳಿತ್ತು ಧರೆಗೆ
ಕಡಿದಷ್ಟೂ ಚಿಗುರುತ್ತೆ ನುಗ್ಗೆ
ಲೋಕರೂಢಿಯೇ ಹೀಗೆ!

ಕಡಿದ ಕೈ ಸೋತರೂ ಜಗ್ಗಿಲ್ಲ ನುಗ್ಗೆ
ಕತ್ತಿಯ ಪೆಟ್ಟು ಮಾಸುವ ಮೊದಲೇ
ಕಚ್ಚಿನ ಮಗ್ಗುಲಲೇ ನಗೆಚಿಗುರು
ಬಿದ್ದ ಏಟಿನ ದುಪ್ಪಟ್ಟು ಟಿಸಿಲು!
ಮಾತೇ ಇಲ್ಲದ ಮರ ಉಸುರಿತ್ತು
ಮಾತುಮಾತಿನ ಎಳೆ ಹಿಡಿದು ಹಿಂಜಿ
ಹೊರಡಿಸಿ ಅರ್ಥ ಅನರ್ಥವ
ಕತ್ತಿ ಹಿಡಿವವರ ಕಂಡು
ಕನಿಕರವ!

ವಿಧಿಬರಹ ಕರ್ಮಫಲ ಜಪಿಸುವವರ
ಕೈಬೀಸಿ ಕರೆದು
ತನ್ನ ಕೆಚ್ಚು ಕಚ್ಚುಗಳ ತೋರಿ
ಪುಟಿದೇಳುವ ಪಾಠ!

ಏಟಿನ ಬದಲಿಗೆ ಅರಳುವುದು
ನೋವಿನ ಬದಲಿಗೆ ತಲೆಯೆತ್ತುವುದು
ಕೊಟ್ಟು ತಣಿಯುವುದು
ಎಲ್ಲ ಎಲ್ಲ ನುಗ್ಗೆಯ ನವನೀತ!


೨ 
ಹೆಂಗಸರೆಂದರೇ ...


’ಹೆಂಗಸರೆಂದರೇ ಹೀಗೆ
ಒಟ್ಟು ಸೇರಿದರೆ ಸಾಕು
ವಸ್ತು ಒಡವೆ ಉಡುಗೆ ತೊಡುಗೆ
ಇವುಗಳದೇ ಸಮಾಚಾರ’   

ಅವರಿವರ ತೀರ್ಮಾನ ನಿರಾಕರಿಸಲು
ಮೈ ಕೈ ಕತ್ತೆಲ್ಲ ಬೋಳುಬೋಳು
ಅವರಿವರು ಕೊಟ್ಟ
ಇಲ್ಲಾ ತಾವೇ ಮರುಳಾಗಿ ಕೊಂಡ
ಅದ್ದೂರಿ ಸೀರೆಗಳು
ಬೀರುವಿನಲೇ ಭದ್ರ
ಯಾರದೋ ಜರತಾರಿಯ ಸರಭರ ಸದ್ದು
ಕಣ್ತುಂಬುವ ಬಣ್ಣ
ಮನಸೂರೆಗೊಂಡಾಗ
ಬೀರುವಿನಿಂದೆತ್ತಿ ನೇವರಿಸಿ
ಉಟ್ಟು ಕನ್ನಡಿ ಮುಂದೆ ಗಳಿಗೆ ಕಟ್ಟುವಿಕೆ

’ಹೆಂಗಸರೆಂದರೇ ಹೀಗೆ
ಒಟ್ಟು ಸೇರಿದರೆ ಸಾಕು
ಮಾತು ಮಾತು ಮಾತು ಬಿಟ್ಟರಿನ್ನಿಲ್ಲ’

ಸುಳ್ಳಾಗಿಸಲು ನಿರ್ಮಿಸಿಕೊಂಡಿದ್ದಾರೆ ಬಂದೀಖಾನೆ
ಇಷ್ಟಿಷ್ಟೇ ನಗು ಕೇಳಿದ್ದಕ್ಕಷ್ಟೇ ಉತ್ತರ
ಚುಟುಕಾಗಿ ಚುರುಕಾಗಿ
ಮುಕ್ಕಾಲುಪಾಲು ಮಾತು ಗಂಟಲೊಳಗೇ ಹೂತಿವೆ
ತೊಟ್ಟಿಲು ತುಂಬುವ, ಬಸಿರು ಬಾಣಂತನದ,
ಅರಿಶಿನ ಕುಂಕುಮದ ಆಮಂತ್ರಣಗಳಿಗೆಲ್ಲ
ಕನಿಕರ ಉಪೇಕ್ಷೆ ತಿರಸ್ಕಾರ!

’ಹೆಂಗಸರೆಂದರೇ ಹೀಗೆ
ಒಟ್ಟು ಸೇರಿದರೆ ಸಾಕು
ಊಟ ತಿಂಡಿ ಅಡುಗೆಯದೇ ಸುದ್ದಿ’

ಪಥ್ಯವಾಗದ್ದಕ್ಕೆ ಅವರೀಗ ಅರೆಬಾಣಸಿಗರು
ಏನೋ ಒಂದಿಷ್ಟು ಬೇಯಿಸಿ
ಹಸಿಬಿಸಿ ತಾವುಂಡು ಇವರಿಗೂ ಇಕ್ಕಿ
ಇಡುತ್ತಾರೆ ಪೂರ್ಣವಿರಾಮ.
ದಿನಕ್ಕೊಂದು ಬಗೆ; ಹತ್ತಾರು ಪಾಕ ವೈವಿಧ್ಯ,
ಬಡಿಸುವುದಕೂ ವ್ಯಾಕರಣ
ಕಂಡು ಬೆರಳು ಕಚ್ಚುತ್ತಾರೆ
ಒಳಗೊಳಗೇ ಮರುಗುತ್ತಾರೆ.

’ಹೆಂಗಸರೆಂದರೇ ಹೀಗೆ
ಬೌದ್ಧಿಕತೆಗಿಂತ ಭಾವುಕತೆಗೆ ವಾಲುವವರು’

ತಿರಸ್ಕರಿಸಲೆಂದೇ ಆರಂಭ ಈ ಕಸರತ್ತು
ಹಾವ ಭಾವ ಭಂಗಿ ಪದಸಂಪತ್ತು ಗಾಂಭೀರ್ಯ
ಎಲ್ಲ ಎರವಲು
ಪುರುಷ ಮಾದರಿಗಳ ಅನುಕರಣೆಯ ತರಬೇತಿ
ವೇದಿಕೆ ಮೇಲಿನ ಮುಖವಾದ
ಬರಬರುತ್ತ ಕ್ಷಣಕ್ಷಣಕೂ ಅನ್ವಯ

’ಹೆಂಗಸರೆಂದರೇ ಹೀಗೆ
ಒಟ್ಟು ಸೇರಿದರೆ ಸಾಕು....’

ನೇತಿ ನೇತಿಯ ಓಟ ಮುಗಿದು
ಪಟ್ಟಿ ತೆರೆದರೆ ಕಂಡದ್ದು
ವ್ಯಾಖ್ಯಾನಕಾರ ಲೋಕದ ಕಣ್ಣ ಕುಹಕ;
ತಮ್ಮ ಲೋಕದ ಕನಿಕರ!
ಅವರ‍್ಬಿಟ್ಟು ಇವರ‍್ಬಿಟ್ಟು ಉಳಿದವರ‍್ಯಾರು?
ಒಂಟಿ ದ್ವೀಪಗಳು.
ಬಣ್ಣ, ವಾಸನೆ, ರುಚಿ ಕಳಕೊಂಡ
ಸಪ್ಪೆ ಸಪ್ಪೆ ಬದುಕು!

ಸಬಿಹಾ ಭೂಮೀಗೌಡ   (೧೯೬೦) ಗಜೇಂದ್ರಗಡದವರು. ಸದ್ಯ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಭಾಷಾ ವಿಜ್ಞಾನ, ಸಾಹಿತ್ಯ ವಿಮರ್ಶೆ, ಹೊಸಗನ್ನಡ ಸಾಹಿತ್ಯ, ಮಹಿಳಾ ಅಧ್ಯಯನಗಳು ಇವರ ತಜ್ಞತೆಯ ಕ್ಷೇತ್ರಗಳಾಗಿವೆ. ಡಾ. ಸಬಿಹಾ ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘ, ಮಂಗಳೂರು ಇದರ ಅಧ್ಯಕ್ಷೆಯಾಗಿ; ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ; ಮಂಗಳೂರು ವಿಶ್ವವಿದ್ಯಾನಿಲಯ ಮಹಿಳಾ ಅಧ್ಯಯನ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾಗಿ; ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ; ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಕೆ.ಶಿವರಾಮ ಕಾರಂತ ಪೀಠದ ನಿರ್ದೇಶಕರಾಗಿ; ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇದುವರೆಗೆ ೧೫ ಪುಸ್ತಕಗಳು ಪ್ರಕಟವಾಗಿವೆ. ೧೬ ಗ್ರಂಥಗಳನ್ನು ಸಂಪಾದಿಸಿದ್ದಾರೆ.

ವಿಳಾಸ: ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳ ಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ, ಮಂಗಳೂರು.

sabikannada@yahoo.com 

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...