Monday, November 02, 2015

ಜಾತ್ಯಾತೀತ ರಾಷ್ಟ್ರದಲ್ಲಿ ‘ನಾನು’
ಶೀಲಾ ಭಟ್ಅಕ್ಷರಶಃ ಕಂಗಾಲಾಗಿದ್ದೇನೆ. ಹಿಂದಿನ ನನ್ನ ಫೇಸ್ಬುಕ್ ಸ್ಟೇಟಸ್ ನಲ್ಲಿ ಹೇಳಿದಂತೆ ನನ್ನ ಬಾಲ್ಯದಲ್ಲಿ ಜಾತಿ ಪದ್ದತಿಯ ಗಂಧಗಾಳಿಯೇ ಇರಲಿಲ್ಲ. ಅಲ್ಲಿ ಹೋಗಬೇಡ, ಇವರನ್ನು ಮುಟ್ಟಿಸಿಕೊಳ್ಳಬೇಡ, ಅವರನ್ನು ಮುಟ್ಟಿಬಂದರೆ ಬಟ್ಟೆ ಬದಲಾಯಿಸು ಇಂತವನ್ನೆಲ್ಲ ಕೇಳಿಯೇ ಗೊತ್ತಿರಲಿಲ್ಲ. ಆ ನಂತರದ ಕೆಲವು ವರ್ಷ ಹವ್ಯಕ ಬ್ರಾಹ್ಮಣ ಸಮುದಾಯದ ಆಚಾರ, ವಿಚಾರಗಳು, ಪದ್ದತಿಗಳು, ಪುರಾಣ, ಶಾಸ್ತ್ರಗಳು, ಮಂತ್ರ, ಪೂಜೆಗಳು, ಅವುಗಳ ಹಿಂದಿನ ತತ್ವಗಳ ಅನ್ವೇಷಣೆ, ದೇವರು, ಭಕ್ತಿ, ಪ್ರೀತಿ ಇವುಗಳನ್ನು ಅರ್ಥ ಮಾಡಿಕೊಳ್ಳಲೇ ಕಳೆದವು. ಅಲ್ಲಿ ಹೊಲೆಯರ ಮನೆ, ನಾಯಕರ ಕೇರಿ, ಭಟ್ಟರ ಕೇರಿ, ಹೆಗಡೆ ಕೇರಿ, ಮೇಲಿನ ಕೇರಿ, ಕೆಳಗಿನ ಕೇರಿ, ಘಟ್ಟದ ಕೆಳಗಿನವರು, ಘಟ್ಟದ ಮೇಲಿನವರು, ತೋಟದ ಸೀಮೆಯವರು, ಗದ್ದೆ ಸೀಮೆಯವರು, ಆ ತಾಲೂಕು, ಈ ತಾಲೂಕು ಇಷ್ಟು ವಿಭಾಗಗಳಲ್ಲಿ ಜನರ ಮನಸ್ಸು ಹಂಚಿಹೋಗಿದ್ದು ಕಂಡೆ. ಈ ಪ್ರದೇಶಗಳ ಹಂಚಿಕೆ ಮತ್ತು ಅವುಗಳ ನಡುವಿನ ಮೌನ ಯುದ್ಧ ನನ್ನೊಳಗೆ ಹೊಸ ಯುದ್ಧವನ್ನು ಹುಟ್ಟುಹಾಕಿತ್ತು. ನಂತರ ನಮಸ್ತೆ ಮಾತೃಭೂಮೆಯ ಪರಿಚಯವಾದಾಗ ಓ ನಾವೆಲ್ಲ ಹಿಂದೂಗಳು, ಆ ಸಾಬಿಗಳು ಎಂಬಂತಹ ಮಾತುಗಳು ಕೇಳಿಬಂದವು. 
ಹುಟ್ಟಾ ಕ್ರಿಶ್ಚಿಯನ್ನರನ್ನು ನೋಡದ ನನಗೆ ಅವರ ಬಗ್ಗೆ ಕುತೂಹಲ. ಜೀವನ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿಯ ಚರ್ಚುಗಳಲ್ಲಿ ಪ್ರತಿ ಭಾನುವಾರ ನಡೆಯುವ ಪ್ರಾರ್ಥನಾ ಸಭೆಗಳ ಮೂಲಕ ಅವರ ಜನಜೀವನದ ಬಗ್ಗೆ ಅಲ್ಪ ಸ್ವಲ್ಪ ತಿಳುವಳಿಕೆ ನೀಡಿತು. ಮೈಸೂರಿಗೆ ಪ್ರವಾಸಕ್ಕೆ ಹೋದಾಗ ಶ್ರೀರಂಗಪಟ್ಟಣದ ದರ್ಗಾದ ಒಳಗೆ ನಮ್ಮನ್ನು ಬಿಡಲಿಲ್ಲ. ಮುಸ್ಲಿಂ ಅಲ್ಲದವರು, ಮುಸ್ಲಿಂರಾದರೂ ಹೆಣ್ಣುಮಕ್ಕಳಾದರೂ ಒಳಗೆ ಬಿಡುವುದಿಲ್ಲ ಎಂದು ಅಲ್ಲಿ ಗೊತ್ತಾಯಿತು. ಕಾರಣ ಕೇಳಿದ್ದಕ್ಕೆ ಅದೇ ಹಿಂದೂಗಳ ಮಾತು ‘ನಾಲ್ಕು ದಿನದ ಬಹಿಷ್ಕಾರ’. ಅದಾಗಲೇ ಅಪ್ಪನ ದೋಸ್ತಿ ಸಾಲೇ ಸಾಹೇಬರ ಮಗಳು ೧೬ ವರ್ಷಕ್ಕೆ ಮದುವೆಯಾದದ್ದೂ, ವರ್ಷ ತುಂಬುವುದರ ಒಳಗೆ ಅವಳ ಪುಟ್ಟ ಮಗುವನ್ನು ನೋಡಲು ನಾನು, ಅಮ್ಮ ಹೋಗಿದ್ದೂ ನೆನಪಿತ್ತು. ಈ ಪ್ರವಾಸದ ಹೊತ್ತಿಗೆ ಆಕೆಯ ಗಂಡ ಯಾವುದೋ ಅಪಘಾತದಲ್ಲಿ ತೀರಿಹೋದನೆಂದೂ ಆಕೆಗೆ ಮತ್ತೊಂದು ನಿಖಾ ಮಾಡುವ ತಯಾರಿ ನಡೆಯುತ್ತಿದೆಯೆಂದೂ ಕೇಳಲ್ಪಟ್ಟಿದ್ದೆ. ಜೀವನದಲ್ಲಿ ನಾನು ನೋಡಿದ ಮೊದಲ ಮದುವೆ, ಮೊದಲ ಹುಟ್ಟಿನ ಸಂಭ್ರಮ ಬಹುಶಃ ಆಶಾಬಿಯದ್ದೆ ಎಂದು ನೆನಪು. ನನಗೆ ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮಗಳ ಆಶಯ, ದೌರ್ಬಲ್ಯಗಳ ನಡುವೆ ಅಂತಹ ವ್ಯತ್ಯಾಸ ಕಾಣಲಿಲ್ಲ. ವಯಸ್ಸಾದರೂ ತುಂಡುಲಂಗ ಧರಿಸಿ ಯಾವುದೋ ಮದುವೆ ಮನೆಗೆ ಹೋಗುವ ಸಂಭ್ರಮದಲ್ಲಿ ಪ್ರಾರ್ಥನಾ ಸಭೆಗಳಲ್ಲಿ ಅವರು ಪ್ರಾರ್ಥಿಸುತ್ತಿದ್ದ ರೀತಿ, ನಮ್ಮಲ್ಲಿನ ಪೂಜೆಯ ಕೊನೆಗೆ ಮಂತ್ರಪುಷ್ಪ ಹೇಳುವುದನ್ನು ನೆನಪಿಸಿತ್ತು. ಇವತ್ತಿಗೂ ಮಸೀದಿಯಿಂದ ಕೇಳುವ ಅಲ್ಲಾ ಹೋ ಅಕ್ಬರ್ ನಲ್ಲಿ ನನಗೆ ಓಂಕಾರದ ಧ್ವನಿ ಕೇಳಿಸುತ್ತದೆ. ನನ್ನ ಕಿವಿಯೇ ಸರಿಯಿಲ್ಲವೇನೋ ಅದು ಬೇರೆ ಮಾತು!!

              ಇಂತಿಪ್ಪ ನನಗೆ ಯಾವಾಗ ಸಾಬಿ ಎಂಬ ತಿರಸ್ಕಾರದ ಮಾತುಗಳು, ಹೆಣ್ಣುಮಕ್ಕಳ ನಡತೆ, ವಿಚಾರ, ಧೋರಣೆಯ ಮೇಲೆ ವಿಪರೀತ ನಿಯಂತ್ರಣದ ಅರಿವು ನನಗೆ ಅರ್ಥವಾಗತೊಡಗಿತೋ ಆಗ ಆರ್ ಎಸ್ ಎಸ್ ಎಂಬ ಭೂತ ತಲೆಯಿಂದ ಇಳಿಯಿತು! ಅಯ್ಯೋ ಇದೆಂತ ಧರ್ಮ, ಜಾತಿಯಪ್ಪ ಎಂದು ನಿಜಕ್ಕೂ ಕಂಗಾಲಾದ ನಾನು ನನ್ನದೇ ಅಧ್ಯಯನಕ್ಕೆ ತೊಡಗಿದೆ. ಈ ಸಮಾಜದಲ್ಲಿ ಜಾತಿ ಯಾಕೆ ಬೇಕು? ಯಾಕೆ ಬಂತು? ಇದರ ಹಿನ್ನೆಲೆ ಏನು? ಧರ್ಮ ಎಂದರೇನು? ಅದರ ನಿಜಾರ್ಥ ಏನು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ನಾನು ಉತ್ತರ ಕಂಡುಕೊಂಡೆ. ಅದನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳಲು ಹೋದರೆ ದೊಡ್ಡ ಪುಸ್ತಕವೇ ಆದೀತು. ಆದರೆ ಸಂಕ್ಷಿಪ್ತ ರೂಪ ನೀಡಬಲ್ಲೆ.

             ಈ ಸಮಾಜದಲ್ಲಿ ಜಾತಿ, ಲಿಂಗ ಇವೆಲ್ಲದರ ತಾರತಮ್ಯ ಹುಟ್ಟು ಹಾಕಿದ್ದು ಶ್ರಮದ ವಿಂಗಡಣೆ. ಮನೆಕೆಲಸ ಮಾಡುವವಳು ಹೆಂಗಸು, ದುಡಿದು ತರುವವ ಗಂಡಸು, ಹೊಲದಲ್ಲಿ ಬಿಸಿಲಲ್ಲಿ ಕೆಲಸ ಮಾಡುವುದು, ಕಸ ಹೊಡೆಯುವುದು, ದೇವರ ಪೂಜೆ ಮಾಡುವುದು ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಕೆಲಸದ ವಿಂಗಡಣೆ ಮಾಡುತ್ತ ಹೋಗಿದ್ದು ಈ ದರಿದ್ರ ಜಾತಿ ಪದ್ಧತಿಗೆ ಮೂಲ. ಕೆಲಸಗಳನ್ನು ಸುಲಭಗೊಳಿಸಲು ಸಮುದಾಯವನ್ನು ವಿಂಗಡಿಸಿದ್ದು ಎತ್ತೆತ್ತಲೋ ದಾರಿ ಮಾಡಿಕೊಟ್ಟಿತು. ಸಾವಿನ ನಂತರದ ಬದುಕಿನ ಅನ್ವೇಷಣೆಗೆ ಬಿದ್ದ ಮನಸ್ಸು, ಪ್ರಕೃತಿಯನ್ನು ನಿಯಂತ್ರಿಸುವ ಶಕ್ತಿಯೊಂದಿದೆ, ಅದು ನಮಗಿಂತ ದೊಡ್ಡದಿದೆ ಎಂದು ಅರಿವಾದಾಗ ಬಂದಿದ್ದು ದೇವರ ಕಲ್ಪನೆ. ಈಗ ದೇವರನ್ನು ಮೆಚ್ಚಿಸಲು ಪೂಜೆ, ಬಲಿ, ಆತನೂ ಒಬ್ಬ ವ್ಯಕ್ತಿ ಎಂದು ತಮಗೆ ಏನೇನು ದೌರ್ಬಲ್ಯ, ಶಕ್ತಿಗಳಿವೆಯೋ ಅವುಗಳನ್ನು ಆರೋಪಿಸುತ್ತ ಹೋಗಿದ್ದು ಆ ಕೆಲಸಕ್ಕಾಗಿಯೇ ವ್ಯಕ್ತಿಯೊಬ್ಬನನ್ನು ನಿಯೋಜಿಸುವ ಹಂತ ತಲುಪಿತು. ಇದು ಆ ವ್ಯಕ್ತಿ ತನ್ನೊಳಗೆ ತಾನೇ ಹೊಕ್ಕು ನೋಡುವ ಅವಕಾಶ ಒದಗಿಸಿತು. ಅದರಂತೆ ಆತ ತನ್ನ ಒಳನೋಟದಿಂದ ಸಮುದಾಯದ ಹಿತಕ್ಕೆ ಸಲಹೆಗಳನ್ನು ನೀಡತೊಡಗಿದ. ಜನರು ಅವನನ್ನು ಪವಾಡ ಪುರುಷ, ದೇವಾಂಶ ಸಂಭೂತ ಎಂದು ಗೌರವಿಸತೊಡಗಿದರು. ನಿಧಾನವಾಗಿ ಅಹಂಕಾರ ಬೆಳೆದಂತೆ ದೌರ್ಜನ್ಯದ ಆರಂಭವಾಯಿತು. ಇದನ್ನು ಪ್ರಶ್ನಿಸಿ/ ಎದುರಿಸಲಾಗದೆ ಈ ವಿಭಾಗಿಸಲ್ಪಟ್ಟ ಶ್ರಮಜೀವಿಗಳು ತಮ್ಮದೇ ದೇವರನ್ನು ಸ್ಥಾಪಿಸಿಕೊಂಡರು. ಅದು ಮಾರಮ್ಮ, ಕೆಂಪಮ್ಮನಿಂದ ಮೊದಲ್ಗೊಂಡು, ಮೇರಿ, ಸಂತರು, ಸೂಫಿಗಳು, ಶಿಯಾ, ಸುನ್ನಿಗಳು, ಹೀನಾಯಾನ, ಮಹಾಯಾನ ಹೀಗೆ ಹೊಸ ಹೊಸ ದೇವರುಗಳು, ಅವರಿಗೆ ಆರೋಪಿಸಿದ ಅಗತ್ಯತೆಗಳನ್ನು ಪಾಲಿಸುವ ಹೊಸ ಪಂಥಗಳು, ಆ ಹೊಸ ಪಂಥಗಳಲ್ಲಿನ ದೌರ್ಜನ್ಯ ಪ್ರಶ್ನಿಸಿ ಇನ್ನೊಂದಿಷ್ಟು ಮತ, ಪಂಥಗಳು ಹೀಗೆ ಒಡೆದುಹೋಗುತ್ತ ಬಂತು. ಯಾವ ಧರ್ಮ ಜನರನ್ನು ಒಂದುಗೂಡಿಸಬೇಕಿತ್ತೋ ಯಾವ ದೇವರು, ಅವನ ಕಲ್ಪನೆ, ಆಚರಣೆಗಳು ಆತ್ಮಗಳನ್ನು ಯೋನಿ, ಮೊಲೆ, ಶಿಶ್ನಗಳ ಪ್ರಜ್ನೆಯಿಂದ ಮೇಲೆತ್ತಬೇಕಿತ್ತೋ ಅದೇ ಇವತ್ತು ಜನರನ್ನು ಅವನತಿಗೆ ಒಯ್ಯುತ್ತಿರುವುದು ದುರಂತ!

             ಇಲ್ಲಿ ಧರ್ಮ, ಕೆಲಸದ ವಿಂಗಡಣೆಯಂಥ ಕಲ್ಪನೆಗಳನ್ನೆಲ್ಲ ತಂದವರ ತಪ್ಪು ನನಗೆ ಕಾಣುತ್ತಿಲ್ಲ. ಆದರೆ ಮನುಷ್ಯನ ಗ್ರಹಿಕೆಯ ದೋಷ ಇದಕ್ಕೆಲ್ಲ ಮೂಲ ಕಾರಣ ಎಂದು ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ಹೇಳಬಲ್ಲೆ. ಉದಾಹರಣೆಗೆ ನಮ್ಮ ಸುತ್ತಲಿನವರನ್ನೆ ತೆಗೆದುಕೊಳ್ಳಿ. ಪುರುಷರಾದರೆ ನಾನು ನನ್ನ ಅಪ್ಪನನ್ನು ಅನುಸರಿಸುತ್ತೇನೆ. ನಮ್ಮಪ್ಪ ಹಾಗಿದ್ದ, ಹೀಗಿದ್ದ ಅವನೇ ನನ್ನ ಪಾಲಿನ ಗುರು! ಯಾವುದಕ್ಕೆ? ಕುಡಿಯುವುದಕ್ಕೆ, ಹೆಂಡತಿಗೆ ಹೊಡೆಯುವುದಕ್ಕೆ, ಅವಳನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಹೀಗೆ ಅಪ್ಪನಿಗೆ ಯಾವ ಯಾವ ದೌರ್ಬಲ್ಯಗಳಿದ್ದವೋ ಅವು ಮಗನ ಗ್ರಹಿಕೆಯಲ್ಲಿ ಅನುಸರಿಸಲೇಬೇಕಾದ ಗುಣಗಳು. ಇನ್ನು ಹೆಣ್ಣಾದರೆ ಅವಳಿಗೆ ಅತ್ತೆ, ತಾಯಿ, ಸ್ವಂತ ತಂಗಿ, ಓರಗಿತ್ತಿಯರೇ ಅನುಕರಣೆ ಮಾಡಲು ಯೋಗ್ಯರು. ನನ್ನ ಅತ್ತೆ ನನಗೆ ಅಷ್ಟಿಷ್ಟು ಕಾಟ ಕೊಡಲಿಲ್ಲ, ನಾನು ಅನುಭವಿಸಿದ್ದನ್ನು ಸೊಸೆಯೂ ಅನುಭವಿಸಲಿ ಎಂಬಲ್ಲಿಂದ ಪಕ್ಕದ ಮನೆಯವಳೋ, ಗೆಳತಿಯೋ ಏನು ಮಾಡುತ್ತಾಳೆ ಅದನ್ನು ಇವರೂ ಮಾಡಬೇಕು. ಅವರಿಗೆ ಯಾವುದು ಶ್ರೇಷ್ಠವೆನಿಸುತ್ತದೆ? ಅವಳು ಬ್ಯೂಟಿಪಾರ್ಲರಿಗೆ ಹೋಗುವುದು, ಅವಳು ಗಂಡನ ಹಣವನ್ನು ಖುಷಿಯಾಗಿ ಖರ್ಚು ಮಾಡುವುದು, ಮಕ್ಕಳನ್ನು ಬಳಸಿಕೊಂಡು ಒಲ್ಲದ ಗಂಡನನ್ನು ಹಿಡಿತದಲ್ಲಿಡುವುದು/ ದೂರವಿಡುವುದು ಹೀಗೆ ಬೇಡದ್ದು, ಅದರ ಹಿನ್ನೆಲೆಯನ್ನು ಅರಿಯದೇ ಪಟ್ಟಿಯಾಗುತ್ತ ಹೋಗುತ್ತದೆ. ಸಾಮಾನ್ಯವಾಗಿ ಪುರುಷ / ಸ್ತ್ರೀ ತಮ್ಮ ದೌರ್ಬಲ್ಯಗಳಿಗೆ , ಅಹಂನ ಮಟ್ಟಕ್ಕೆ ಅನುಸಾರವಾಗಿ ಈ ಬೇಡದ ಪಟ್ಟಿಯನ್ನು ಬೆಳೆಸಿಕೊಳ್ಳುತ್ತ ಹೋಗುತ್ತಾರೆ. ಇದರಲ್ಲಿ ಬಾಲ್ಯ ಹಾಗೂ ಹದಿಹರೆಯದ ಬದುಕು ಬಹಳ ಮುಖ್ಯ ಪಾತ್ರವಹಿಸುತ್ತದೆ. ಸರಿಯಾದ ಪ್ರೀತಿ, ಸೂಕ್ತ ಮಾರ್ಗದರ್ಶನ, ಸಾಂತ್ವನ ಎಲ್ಲಕ್ಕಿಂತ ಹೆಚ್ಚು ದೊಡ್ಡವರೆಂದು ಅನಿಸಿಕೊಂಡವರ ದೊಡ್ಡತನದ ನಡವಳಿಕೆ ಸಮಾಜದ ಒಳಿತಿಗೆ ಅತ್ಯವಶ್ಯಕ. ಇವೆಲ್ಲ ಇವತ್ತಿನ ಬದುಕಿನಲ್ಲಿ ಎಷ್ಟರಮಟ್ಟಿಗೆ ಇವೆ ಎಂಬುದನ್ನು ನೋಡಿದರೆ ಯಾರಿಗಾದರೂ ನಾವೆತ್ತ ನಡೆಯುತ್ತಿದ್ದೇವೆ ಎಂಬುದು ಅರ್ಥವಾಗುತ್ತದೆ.

               ಗೋ ಮಾಂಸ ತಿನ್ನಬಾರದು ಎಂದು ಅದರ ವೈಜ್ಞಾನಿಕ ಕಾರಣ ಕೊಟ್ಟು ಅರ್ಥ ಮಾಡಿಸುವುದು ಬೇರೆ, ಅದನ್ನು ತಿನ್ನಲೇಬಾರದು ಎಂದು ಕಾನೂನು ಮಾಡುವುದು ಬೇರೆ. ಹೆಣ್ಣುಮಕ್ಕಳು ಗಂಡಿಗೆ ಸಮಾನ ಎಂದು ಕುಡಿಯಬಾರದು, ಸಿಗರೇಟು ಸೇದಬಾರದು ಎಂದು ನೈತಿಕತೆಯ ಪಾಠ ಹೇಳುವುದು ಬೇರೆ, ಅವಳಿಗೆ ನೋಡಮ್ಮ ನಿನ್ನ ಅಸ್ತಿತ್ವ ನನ್ನ ದೃಷ್ಟಿಯಿಂದ ಎರಡು ಮೊಲೆ, ಯೋನಿ (ಮತ್ತೆ ಮತ್ತೆ ಹೇಳುತ್ತಿದ್ದೇನೆ ಎಂದು ತಪ್ಪಾಗಿ ಭಾವಿಸಬಾರದು, ಇದು ಶೇ.೮೦ರಷ್ಟು ಜನರ ಸಮಸ್ಯೆ) ಗಿಂತಲೂ ದೊಡ್ಡದು. ನೀನು ನನ್ನ ಬದುಕಿಗೆ ಸ್ಪೂರ್ತಿ. ನಿನ್ನ ರಕ್ಷಣೆ, ನಿನ್ನ ಗೌರವ, ನಿನ್ನ ಭಾವನೆ ನನಗೆ ದೊಡ್ಡದು. ನೀನು ಅಧ್ಯಾತ್ಮ ಬದುಕಿಗೆ ತೆರೆದುಕೊಳ್ಳು. ಅದು ನಿನ್ನ ಆತ್ಮೋನ್ನತಿಗೂ, ನನ್ನ ಆತ್ಮೋನ್ನತಿಗೂ ಒಳ್ಳೆಯದು. ಈ ಸಮಾಜಕ್ಕೆ ಒಳ್ಳೆಯದು ಎಂದು ಪುರುಷರು ಹೇಳಲಿ ನೋಡೋಣ. ಬೆಟ್ಟು ಕಟ್ಟುತ್ತೇನೆ ೨೦ ವರ್ಷಗಳ ನಂತರ ಇಡೀ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯ ಮತ್ತು ಪ್ರೀತಿ ತುಂಬುತ್ತದೆ.

              ಆದರೆ ನಾವು ಹೆದರುತ್ತೇವೆ. ಆಕೆಯನ್ನು ಸಂಸಾರಕ್ಕೆ ಕಟ್ಟಿಹಾಕಲು, ಮಕ್ಕಳು, ಮರಿ ಮಾಡಿ ನಮ್ಮ ಸುತ್ತಲೇ ಆಕೆ ಸುತ್ತುತ್ತಿರಬೇಕು ಎಂದು ಬಯಸುತ್ತೇವೆ. ಆಕೆ ಪೂಜೆ, ಪುನಸ್ಕಾರ, ಯೋಗ, ಧ್ಯಾನ ಎಂದು ಮಾತನಾಡತೊಡಗಿದರೆ ಬೆಚ್ಚಿ ಬೀಳುತ್ತೇವೆ. ಅವಳು ಸಂಸಾರ ಬಿಟ್ಟು ಸನ್ಯಾಸಿಯಾಗಿಬಿಟ್ಟರೆ ಎಂದು ಆತಂಕಕ್ಕೀಡಾಗುತ್ತೇವೆ. ಆಕೆಯ ಅಭಿಪ್ರಾಯ, ಭಾವನೆಗಳಿಗೆ ಬೇಲಿಹಾಕತೊಡಗುತ್ತೇವೆ. ಅದೇ ಸಮಯಕ್ಕೆ ಆಕೆಯ ಹಾರ್ಮೋನುಗಳು ವ್ಯತ್ಯಾಸಗೊಂಡು ತಾಯಿಯಂತೆ ಅರ್ಥ ಮಾಡಿಕೊಳ್ಳದೆ, ರಚ್ಚೆ ಹಿಡಿದು ಮಗುವಿನಂತಾದರೆ ಅಡಗಿಕೊಳ್ಳುವ ಮತ್ತೊಂದು ತಾಯ ಮಡಿಲು ಅರಸುತ್ತೇವೆ. ಆಕೆ ಕೂಡ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲಾರದೆ, ಮುಚ್ಚಿಡಲಾಗದೆ ಪಲಾಯನವಾದವನ್ನು ರೂಢಿಸಿಕೊಳ್ಳುತ್ತಾಳೆ. ತನ್ನ ತಪ್ಪನ್ನು ಬೇರೆಯವರ ಮೇಲೆ ಹಾಕಿ ಕಣ್ಣೊರೆಸುವ ತಂತ್ರ ಮಾಡುತ್ತಾಳೆ. ಒಳಗಿನ ಸಿಟ್ಟಿಗೆ ಹೊರಪ್ರಜ್ಞೆಗೆ ಅರಿವಿಲ್ಲದೆ
ಬೇಲಿ ಮುರಿಯಲು ಬೇಜವಾಬ್ದಾರಿತನ, ಅನೈತಿಕ ವ್ಯವಹಾರ, ಪುರುಷರು ಮಾಡುವ ಎಲ್ಲ ಮಾಡಬಾರದ ಕೆಲಸಗಳನ್ನು ಮಾಡಲು ಹವಣಿಸುತ್ತಾಳೆ. ಇಂಥ ತಾಯಿ, ತಂದೆಗೆ ಹುಟ್ಟುವ ಮಕ್ಕಳು ಮತ್ತೆ ಯಥಾಪ್ರಕಾರ ಕಲಿಯಬೇಕಾದ್ದನ್ನು ಬಿಟ್ಟು ಉಳಿದವನ್ನೆ ಕಲಿಯುತ್ತವೆ.

              ಇದು ಮೇಲ್ವರ್ಗದ ಬ್ರಾಹ್ಮಣರಿರಬಹುದು, ಕೆಳವರ್ಗದ ಶೂದ್ರರಿರಬಹುದು. ಎಲ್ಲಿಯವರೆಗೆ ಮಗುವಿಗಾಗಲೀ, ಹೆಣ್ಣಿಗಾಗಲೀ ಅಧ್ಯಾತ್ಮ ಜೀವನದ ಪರಿಕಲ್ಪನೆ ನೀಡದೆ ಕೇವಲ ಆಚಾರ, ವಿಚಾರಗಳನ್ನು ಹೇರುತ್ತ ಹೋಗುತ್ತೇವೋ ಅಲ್ಲಿಯವರೆಗೆ ಸಮಾಜಕ್ಕೆ ಜಾತಿ, ಅದರ ಪ್ರತಿಷ್ಠೆ, ಏಕಪಕ್ಷೀಯ ನೈತಿಕತೆ ಎಲ್ಲ ಬಹುಮುಖ್ಯವಾಗುತ್ತವೆ. ಅದನ್ನು ಪ್ರಶ್ನೆ ಮಾಡುವವರು ಧರ್ಮದ ಮೂಲ ಆಶಯವನ್ನು ಮರೆತು ಅದನ್ನು ತಾವು ಗ್ರಹಿಸಿದ ಪ್ರಜ್ಞೆಯ ಮಟ್ಟದಲ್ಲಿ ವಿಶ್ಲೇಷಿಸುತ್ತಾರೆ. ಧರ್ಮದ, ದೇವರುಗಳ ದೌರ್ಬಲ್ಯಗಳ ಪಟ್ಟಿ ಮಾಡುವ ಜನರು, ಪುಸ್ತಕಗಳು ಲೆಕ್ಕವಿಲ್ಲದಷ್ಟು ಬರುತ್ತವೆ. ಅದರ ಪರ ವಿರೋಧಿ ಬಣಗಳು ಮತ್ತಷ್ಟು ಕಿತ್ತಾಡುತ್ತವೆ.

                 ಎಲ್ಲಿಯವರೆಗೆ ಆಧ್ಯಾತ್ಮಿಕ ಕ್ರಾಂತಿ ಸಾಮಾಜಿಕವಾಗಿ ನಡೆಯುವುದಿಲ್ಲವೋ ಅಲ್ಲಿಯವರೆಗೆ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಮತ್ತಿತರ ಎಲ್ಲ ಧರ್ಮಗಳ ಮೂಲ ಆಶಯ ಸತ್ತು ಪ್ರಶ್ನಿಸುವ ಹೊಸ ಪಂಥ, ಪಂಗಡಗಳು ಹುಟ್ಟಿಕೊಳ್ಳುತ್ತವೆ. ಅವುಗಳ ತಾರತಮ್ಯ, ಒಳಹುಳುಕು, ಪ್ರತಿಷ್ಠೆಗಳಿಂದಾಗಿ ಅವೂ ಇಬ್ಬಾಗವಾಗುತ್ತವೆ. ಈ ಜಾತ್ಯಾತೀತ ರಾಷ್ಟ್ರ, ವಿಶ್ವದ ಪರಿಕಲ್ಪನೆ ವ್ಯಕ್ತಿಯ ಹೃದಯದಲ್ಲಿ ಆರಂಭವಾಗುತ್ತದೆ. ಈ ಹೃದಯ ಪರಿವರ್ತನೆ ಆಚರಣೆಗಳ ಮೂಲಕ  ಅದರ        ಹೊರತಾದ ವಿಧಾನಗಳಿಂದ ಆತ್ಮಾನ್ವೇಷಣೆಯಾದಾಗ ಮಾತ್ರ ಸಾಧ್ಯವಾಗುತ್ತದೆ. ಇದನ್ನು ನಮ್ಮನ್ನಾಳುವವರು, ಮಠಾಧಿಪತಿಗಳು, ಸಮಾಜದ ಮುಖಂಡರು ಅರ್ಥ ಮಾಡಿಕೊಂಡು ಅದಕ್ಕೇನಾದರೂ ವ್ಯವಸ್ಥೆ ತರಲು ಸಾಧ್ಯವಾದರೆ ನನ್ನ ಕಂಗಾಲು ಪರಿಸ್ಥಿತಿ ಸುಧಾರಿಸೀತು. ಇಲ್ಲದಿದ್ದರೆ ಇಬ್ಬಗೆಯ ನೀತಿ, ಸಂಘರ್ಷಗಳ ನಡುವೆ ‘ನಾನು’ ಸತ್ತೇ ಹೋಗುತ್ತೇನೇನೋ!

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...