Wednesday, November 18, 2015

ಜ್ಯೋತಿ ಗುರುಪ್ರಸಾದ್ ಎರಡು ಕವಿತೆಗಳು

೧ 

ನೆರಿಗೆಗಳು


ಈಗಲೂ ನನಗೆ
ನೆರಿಗೆಗಳು ಚಿಮ್ಮುವಂತೆ
ನೀಟಾಗಿ ಸೀರೆ ಉಡಲು
ಬರುವುದಿಲ್ಲ

ಒಂದು ತುದಿಯನ್ನು
ಸೊಂಟಕ್ಕೆ ಸಿಕ್ಕಿಸಿ
ಸುತ್ತು ಬಳಸಿ ಆರು ಗಜದ ಸೀರೆಯನ್ನು
ಎದೆಯ ಮೇಲೆ ಸೆರಗು ಹೊದ್ದು
ಹಿಂದಕ್ಕೆ ಇಳಿಬಿಟ್ಟು
ಒಮ್ಮೆಲೇ ಐದೋ ತಪ್ಪಿದರೆ ಆರೋ
ನೆರಿಗೆಗಳ ಹಿಡಿದು ಹೊಕ್ಕಳ ಮೇಲೆ
ಭದ್ರವಾಗಿ ಸಿಕ್ಕಿಸಿಬಿಟ್ಟೆನೆಂದರೆ
ಎಲ್ಲಾ ಆರಾಮ.
ಚಿಮ್ಮಿದರೆ ಚಿಮ್ಮಲಿ ನೆರಿಗೆ
ಇಲ್ಲದಿದ್ದರೆ ಬಿಡಲಿ
ನನಗೆ ಚಿಂತೆಯಿಲ್ಲ.
ನನ್ನಿಂದ ಸೀರೆಗೊಂದು ಆಕಾರ ಸಿಕ್ಕಿದೆ
ಇದು ನನ್ನ ಉಡುಪು
ಪಿನ್ನು ಹಾಕಿ ಬಲವಂತವಾಗಿ
ನೆರಿಗೆಗಳನ್ನು ಒಟ್ಟುಗೂಡಿಸುವುದಿಲ್ಲ
ಲಂಗದ ಗಂಟು ಭದ್ರವಾಗಿದ್ದರೆ
ಕಾರಣವಿಲ್ಲದೆ ನೆರಿಗೆಗಳು
ಬಿಚ್ಚಿಕೊಳ್ಳುವುದಿಲ್ಲ

ಹೀಗೆ ಉಡುವುದು
ಸರಾಗ ನಡೆಯುವುದು ನನ್ನತನ
ಅಕ್ಕ ಸೀರೆಯುಡದೆಯೂ
ಸರಾಗ ನಡೆದಳು
ಅವಳೊಲುಮೆಯ ಕದಳಿತನಕ್ಕೆ
ಇದು ಅವಳತನ

ನೆರಿಗೆ ಹಿಡಿದಿರುವ ನನ್ನ ನೋಡುತ್ತ
ಬೆಳ್ಳಿ ಮುಂಗುರುಳು ನಗುವ
ನನ್ನ ನಡುವಯಸ್ಸಿನ ಮೊಗವ
ಕನ್ನಡಿಯಲ್ಲಿ ನೋಡುತ್ತೇನೆ
ಹಣೆಯ ಮೇಲಿನ ಗೆರೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ
ನನ್ನ ಸೀರೆಯ ನಿರಿಗೆಗಳಂತೆ
ಇವೂ ಕೂಡ ಚಿಮ್ಮುವುದಿಲ್ಲ
ಚರ್ಮದ ಮೇಲಿಂದ ಇದು ಸುಳ್ಳೆಂಬಂತೆ
ಅಳಿಸಿ ಹೋಗಲು ಬಯಸುವುದಿಲ್ಲ

ಎಲ್ಲವೂ ಇದ್ದ ಹಾಗೇ ಇರಲಿ
ಹಣೆಯ ಮೇಲಿನ ಗೆರೆಗಳು
ಸೀರೆಯಲ್ಲಿ ಆಗಿರುವ ನೆರಿಗೆಗಳು
ಎಲ್ಲವೂ ಪ್ರಪಂಚಕ್ಕೆ ನನ್ನ ಗುಟ್ಟು
ರಟ್ಟು ಮಾಡಲಿ.

ಈಗಲೂ ನನಗೆ ನೀಟಾಗಿ
ಸೀರೆ ಉಡಲು ಬರುವುದಿಲ್ಲ
ಹಾಗೆಯೇ ನನಗೆ ನಿಜವಾಗದ
ನಲ್ಲನನ್ನು ಕೂಡಲು ಬರುವುದಿಲ್ಲ.
***


೨ 

ಭಾಗ್ಯ ರೇಖೆ


ಇನ್ನು ನಮ್ಮ ಭಾಗ್ಯರೇಖೆಯನ್ನು
ನಾವೇ ಬರೆದುಕೊಳ್ಳಬೇಕು
ದೇವರೂ ಮುಟ್ಟಾಗುವನು

ಹಸುಗೂಸಿನ ಮರ್ಮಾಂಗವೂ
ಕಾಮುಕನ ಕಾಮನೆ ಕೆರಳಿಸುವ
ದ್ರವ್ಯವಾಗುವುದೆಂದರೆ
ಇದು ದೇವರ ಮುಟ್ಟು

ಮುಟ್ಟಾದ ದೇವರು ಹೊರಗಿರುವುದರಿಂದ
ಅವನು ಆ ಹಸುಗೂಸನ್ನು
ಕಾಯಲು ತನ್ನ ಕೈಚಾಚಲಾರ
ಮಹಾಭಾರತದ ದ್ರೌಪದಿಗಷ್ಟೇ
ಮಾನ ಕಾಯುವ ಸೀರೆ ಕೊಡಲು
ಸೀಮಿತವಾಗಿಹೋದನೇ ಶ್ರೀಕೃಷ್ಣ?

ನಮ್ಮನಮ್ಮ ಭಾಗ್ಯರೇಖೆಯನ್ನು
ಇನ್ನು ನಾವೇ ಬರೆದುಕೊಳ್ಳಬೇಕು
ಮುಟ್ಟಾದ ದೇವರನ್ನು ನಾವೇ ರಕ್ಷಿಸಬೇಕು
ಅವನ ಕಿಬ್ಬೊಟ್ಟೆ ನೋವಿಗೆ
ಒಂದಷ್ಟು ವಿಶ್ರಾಂತಿ ಕೊಟ್ಟು
ಅವನ ಕೆಲಸವನ್ನು ನಾವೇ ಮಾಡಬೇಕು

ಕಾಮುಕರ ಕೈಕಚ್ಚಲು
ನಮ್ಮ ಹಲ್ಲುಗಳಿಗೆ ತರಬೇತಿ ಕೊಡಬೇಕು
ಮುಖ ಪರಚಲು
ನಮ್ಮ ಉಗುರುಗಳನ್ನು ಪರಿಣಿತವಾಗಿಸಬೇಕು
ಬಾಯಿ ತುಂಬಾ ಉಗುಳು ತುಂಬಿಕೊಂಡು
ಕ್ಯಾಕರಿಸಿ ಉಗಿದು
ಚಿನ್ನದ ಪದಕ ಗೆಲ್ಲಲು ಓಡುವ
ಅಥ್ಲೀಟ್ ಕಾಲುಗಳನ್ನು ನಮ್ಮದಾಗಿಸಿಕೊಳ್ಳಬೇಕು.

ಕೊನೆಯದಾಗಿ
ನಮ್ಮ ಹೃದಯದಲ್ಲಿ ತುಂಬಿರುವ
ಕರುಣ ರಸವನ್ನು ಒಂದಿಷ್ಟೂ ಇಂಗದಂತೆ
ಮುಟ್ಟಾದ ದೇವರ ತಲೆಯ ಮೇಲೆ
ಸುರಿಸುರಿದು ಸ್ನಾನ ಮಾಡಿಸಿ ಶುದ್ಧಿ ಮಾಡಿ
ಅವನ ಹಣೆಯಲ್ಲಿ ಪ್ರೀತಿ ವಾತ್ಸಲ್ಯವ ಬರೆದು
ಮುಟ್ಟು ಕಳೆದ ದೇವರನ್ನು
ನಾವು ಮುಟ್ಟಬೇಕು.
***
ಜ್ಯೋತಿ ಗುರುಪ್ರಸಾದ್ (೧೯೬೫) ಮೈಸೂರು ಜಿಲ್ಲೆ ಟಿ. ನರಸಿಪುರದವರು. ಈಗ ಕಾರ್ಕಳದಲ್ಲಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದಿರುವ ಜ್ಯೋತಿ, ಹಲವು ಕಾಲೇಜುಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಉಪನ್ಯಾಸಕಿಯಾಗಿ ಬೋಧಿಸಿದ್ದಾರೆ. ಮಂಗಳೂರು ಆಕಾಶವಾಣಿಯ ಬಿ ಗ್ರೇಡ್ ನಾಟಕ ಕಲಾವಿದೆ. ಚುಕ್ಕಿ, ಮಾಯಾಪೆಟ್ಟಿಗೆ, ವರನಂದಿ ಪ್ರತಿಮೆ ಸೇರಿದಂತೆ ಹಲವು ಕವನ ಸಂಕಲನಗಳನ್ನೂ; ತಂತಿರಾಗ ಕಥಾ ಸಂಕಲನವನ್ನೂ, ಜೋಲಿ ಲಾಲಿ, ಹೊಸ ಪಕ್ಷಿ ರಾಗ ಮೊದಲಾದ ಅಂಕಣ ಬರಹದ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.

ವಿಳಾಸ: ‘ಕಾವೇರಿ’, ತೆಳ್ಳಾರು ರಸ್ತೆ, ಕಾರ್ಕಳ - ೫೭೪೧೦೪. ಉಡುಪಿ ಜಿಲ್ಲೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...