Sunday, November 01, 2015

ರಾಷ್ಟ್ರದಲ್ಲಿ ’ಅಸಹನೆ’ ಹೆಚ್ಚುತ್ತಿದೆಯೇ?ಜಿ.ಪಿ.ಬಸವರಾಜು


ಇತ್ತೀಚಿನ ದಿನಗಳಲ್ಲಿ ತೀರ ಬಳಕೆಯಾಗುತ್ತಿರುವ ಪದ-’ಅಸಹನೆ.’ ಬರಹಗಾರರು, ಚಿಂತಕರು, ಚಲನಚಿತ್ರ ಕ್ಷೇತ್ರದ ಗಣ್ಯರು, ವಿಜ್ಞಾನಿಗಳು, ಇತಿಹಾಸಕಾರರು ಹೀಗೆ ವಿವಿಧ ಕ್ಷೇತ್ರದ ಗಣ್ಯರು ಈ ಪದವನ್ನು ಬಳಸುತ್ತ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೊರಿಸುತ್ತಿದ್ದಾರೆ. ತಮಗೆ ನೀಡಿದ ಪ್ರಶಸ್ತಿಗಳನ್ನು ಹಿಂದಿರುಗಿಸುವಾಗ ಅಥವಾ ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡುವಾಗ, ಅದಕ್ಕೆ ಅವರು ಕೊಡುತ್ತಿರುವ ಕಾರಣಗಳಲ್ಲಿ ಬಹಳ ಮುಖ್ಯವಾದದ್ದು ’ಅಸಹನೆ.’ ಭಾರತದಲ್ಲಿ ಅಸಹನೆ ಹೆಚ್ಚಾಗಿದೆಯೇ?

ಹಾಗೆ ನೋಡಿದರೆ ಭಾರತ ಹೆಸರಾಗಿರುವುದೇ ಅದರ ಅಪಾರ ಸಹನೆಗೆ. ಶತಮಾನಗಳ ಕಾಲದಿಂದ ಇಲ್ಲಿ ಸಹನೆ ಬೀಡುಬಿಟ್ಟಿದೆ; ಸಹಬಾಳ್ವೆ ಎಂಬುದು ಈಗಲೂ ಇಲ್ಲಿ ಸಾಧ್ಯವಾಗಿದೆ. ಧರ್ಮಾವಲಂಬಿಗಳು ಮತ್ತು ಧರ್ಮವನ್ನು ಧಿಕ್ಕರಿಸಿದವರು ಈ ನಾಡಿನಲ್ಲಿ ಜೊತೆಜೊತೆಯಾಗಿಯೇ ಬಾಳಿದರು. ಬುದ್ಧನಿಗಿಂತ ಮೊದಲೇ ಚಾರ್ವಾಕರು ಇಲ್ಲಿದ್ದರೆಂಬುದನ್ನು ಇತಿಹಾಸ ಹೇಳುತ್ತದೆ. ಬೌದ್ಧರಂತೆ, ಜೈನರಂತೆ, ವೈದಿಕರಂತೆ ಚಾರ್ವಾಕರದೂ ಒಂದು ದಾರಿ; ಒಂದು ಚಿಂತನೆ. ಸಹಬಾಳ್ವೆ ಎಂಬುದು ಈ ನಾಡಿನಲ್ಲಿ ಇದ್ದ ಕಾರಣದಿಂದಲೇ ವಿವಿಧ ಧರ್ಮಗಳು, ವಿವಿಧ ಚಿಂತನೆಗಳು ಇಲ್ಲಿ ಬದುಕಲು ಬೆಳೆಯಲು ಸಾಧ್ಯವಾಯಿತು. ಈಗಲೂ ಅಷ್ಟೆ; ಇಲ್ಲಿ ಹಲವಾರು ಭಾಷೆಗಳು, ಧರ್ಮಗಳು, ಸಾಂಸ್ಕೃತಿಕ ವೈವಿಧ್ಯತೆಗಳು, ವಿಭಿನ್ನ ನಂಬಿಕೆಗಳು ಜೊತೆಜೊತೆಯಲ್ಲಿಯೇ ಬಾಳುತ್ತಿವೆ. ಜಾತಿ, ವರ್ಗ, ಧರ್ಮ, ಬಣ್ಣ ಇತ್ಯಾದಿ ಸಂಗತಿಗಳನ್ನು ಪರಿಗಣಿಸಿದರೆ ಭಾರತ ಬಹುದೊಡ್ಡ ಸಹನೆಯ ರಾಷ್ಟ್ರ. ಇಲ್ಲಿನ ಪ್ರಜಾಪ್ರಭುತ್ವ ಇಡೀ ವಿಶ್ವದಲ್ಲಿಯೇ ದೊಡ್ಡದು. ಅನೇಕ ಏಳುಬೀಳುಗಳನ್ನು ಕಂಡರೂ ಇಲ್ಲಿ ಪ್ರಜಾಪ್ರಭುತ್ವ ಭದ್ರವಾಗಿ ನೆಲೆಯೂರಿದೆ. ಜಾತಿಮತಧರ್ಮ ನಿರಪೇಕ್ಷ, ಸಮಾಜವಾದಿ ಗಣರಾಜ್ಯ ನಮ್ಮದು. ಇಲ್ಲಿ ಎಲ್ಲ ಧರ್ಮಗಳು ಸಹಬಾಳ್ವೆ ನಡೆಸಿದರೂ, ಈ ರಾಷ್ಟ್ರ ಯಾವುದೇ ಒಂದು ಧರ್ಮಕ್ಕೆ ಬದ್ಧವಾಗಿಲ್ಲ. ಇದು ನಮ್ಮ ಪ್ರಜಾಪ್ರಭುತ್ವದ ಹೆಗ್ಗಳಿಕೆ.

ಇತ್ತೀಚಿನ ದಿನಗಳಲ್ಲಿ ಈ ರಾಷ್ಟ್ರದಲ್ಲಿ ಅಸಹನೆ ಹೆಚ್ಚಾಗಿದೆಯೇ? ಅಥವಾ ಸುಮ್ಮನೆ ಹೇಳಲಾಗುತ್ತಿದೆಯೇ? ಈ ಅಸಹನೆಯನ್ನೇ ಪ್ರಧಾನ ಕಾರಣವನ್ನಾಗಿ ಮಾಡಿಕೊಂಡು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವವರು, ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳುವಂತೆ, ’ಬಿಜೆಪಿಯ ವಿರೋಧಿಗಳೇ?’ ಅಥವಾ ಅವರೆಲ್ಲ ’ಬುದ್ಧಿ ಶೂನ್ಯರೇ?’
ಪ್ರಶಸ್ತಿ ಹಿಂದಿರುಗಿಸುತ್ತಿರುವವರ ಮತ್ತು ರಾಜೀನಾಮೆ ಕೊಡುತ್ತಿರುವವರ ಸಂಖ್ಯೆ ಚಿಕ್ಕದಿದೆಯೇ, ದೊಡ್ಡದಿದೆಯೇ? ಅವರು ಆಡುತ್ತಿರುವ ಮಾತುಗಳಲ್ಲಿ ರಾಜಕೀಯ ಹುನ್ನಾರಗಳಿವೆಯೇ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ವಿಜ್ಞಾನಿ ಪಿ.ಎಂ.ಭಾರ್ಗವ ಅವರ ಮಾತುಗಳನ್ನು ಗಮನಿಸಬೇಕು. ಪದ್ಮಭೂಷಣ ಗೌರವಕ್ಕೆ ಪಾತ್ರರಾದ ಭಾರ್ಗವ ಅವರ ಪ್ರಕಾರ, ಜಾತ್ಯತೀತ ತತ್ವದಿಂದ ನಮ್ಮ ಪ್ರಜಾಪ್ರಭುತ್ವ ದೂರವಾಗುತ್ತಿರುವ ಬೆಳವಣಿಗೆಗಳು ಆಗುತ್ತಿವೆ. ’ದೇಶದ ವಾತಾವರಣ ಭಯ ಹುಟ್ಟಿಸುವಂತಿದೆ. ಇದು ವಿಚಾರವಾದದ, ವಿಜ್ಞಾನದ ಬೆಳವಣಿಗೆಗೆ ವಿರೋಧಿಯಾಗಿದೆ.’ ಇಂಥ ಮಾತುಗಳನ್ನು, ಅಭಿಪ್ರಾಯಗಳನ್ನು ಇವರೊಬ್ಬರೇ ಹೇಳುತ್ತಿಲ್ಲ. ಇತಿಹಾಸ ಕ್ಷೇತ್ರದಲ್ಲಿ, ವಿಜ್ಞಾನದಲ್ಲಿ, ಚಿತ್ರರಂಗದಲ್ಲಿ, ಸಾಹಿತ್ಯ-ಸಂಸ್ಕೃತಿ ಕ್ಷೇತ್ರಗಳಲ್ಲಿ ತುಂಬ ಗಂಭೀರವಾಗಿ ಕೆಲಸ ಮಾಡುತ್ತಿರುವವರು, ಖ್ಯಾತರಾದವರು ಹೇಳುತ್ತಿದ್ದಾರೆ. ಹಾಗಾದರೆ ದೇಶದ ವಾತಾವರಣ ಭಯ ಹುಟ್ಟಿಸುತ್ತಿರುವುದು ನಿಜ. ಇದಕ್ಕೆ ಗಣ್ಯರ ಹೇಳಿಕೆಗಳೇ ಬೇಕಾಗಿಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ, ಪ್ರಸಾರವಾಗುತ್ತಿರುವ ಘಟನೆಗಳನ್ನು ನೋಡಿದರೂ ಇದು ತಿಳಿಯುತ್ತದೆ. ನಮ್ಮ ಕರ್ನಾಟಕದ ಎಂ.ಎಂ. ಕಲ್ಬುರ್ಗಿ ಅವರ ಹತ್ಯೆಯೂ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಹತ್ಯೆಗೀಡಾದ ವಿಚಾರವಂತರನ್ನು, ಸಮಾಜದ ಮೌಢ್ಯಾಚರಣೆಗಳ ವಿರುದ್ಧ ಹೋರಾಡುತ್ತಿರುವವರನ್ನು ನೋಡಿದರೂ ಈ ಅಂಶ ಸ್ಪಷ್ಟವಾಗುತ್ತದೆ. ತಮ್ಮದೇ ನಿಲುವನ್ನು ಪ್ರತಿಪಾದಿಸುತ್ತ, ಅದರ ಸಮರ್ಥನೆಗೆ ವಿಚಾರಗಳನ್ನು ವಿಶ್ಲೇಷಿಸುತ್ತಿದ್ದ ಕಲ್ಬುರ್ಗಿಯವರನ್ನು ಯಾಕೆ ಕೊಲ್ಲಲಾಯಿತು, ಯಾರು ಕೊಂದರು? ಇಂಥದೇ ಹತ್ಯೆಗಳು ಮಹಾರಾಷ್ಟ್ರದಲ್ಲಿ ನಡೆದವು. ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಬರಹಗಾರರಿಗೆ ಕೊಲೆಬೆದರಿಕೆಗಳು ಎಲ್ಲಿಂದ ಬಂದವು? ಇಡೀ ದೇಶದಲ್ಲಿ ಇಂಥ ಶಕ್ತಿಗಳು ಹೇಗೆ ಹೆಚ್ಚಿಕೊಂಡವು?

ಆಹಾರ ಪದ್ಧತಿ ನಮ್ಮ ಸಂಸ್ಕೃತಿಯ ಒಂದು ಭಾಗ. ಜನ ತಮಗೆ ಬೇಕಾದ ಆಹಾರವನ್ನು ಆಯ್ಕೆಮಾಡಿಕೊಂಡು ತಿನ್ನುತ್ತಾರೆ; ಅದು ನಮ್ಮ ಪ್ರಜಾಪ್ರಭುತ್ವ ನಮಗೆಲ್ಲ ಕೊಟ್ಟಿರುವ ಸ್ವಾತಂತ್ರ್ಯ. ಸ್ವಾತಂತ್ರ್ಯಕ್ಕಿಂತಲೂ ಮೊದಲು ಈ ನಾಡಿನಲ್ಲಿ ಜನ ತಮಗೆ ಬೇಕಾದ ಆಹಾರವನ್ನು ತಿನ್ನುತ್ತಿದ್ದರು. ಆಹಾರ ಒಂದು ವ್ಯಾಜ್ಯದ ಸಂಗತಿಯಾಗಿರಲಿಲ್ಲ. ಮಾಂಸಾಹಾರ ಮತ್ತು ಸಸ್ಯಾಹಾರ ತಿನ್ನುವವರು ಪಕ್ಕಪಕ್ಕದ ಮನೆಗಳಲ್ಲಿಯೇ ಬದುಕುತ್ತಿದ್ದರು. ಎಲ್ಲರೂ ಕೂಡಿ ಹಬ್ಬಗಳನ್ನು ಸಂಭ್ರಮದಿಂದಲೇ ಆಚರಿಸುತ್ತಿದ್ದರು. ಅವರ ಹಬ್ಬ, ಇವರ ಹಬ್ಬ ಎಂಬ ಭೇದವಿಲ್ಲದೆ ಎಲ್ಲರೂ ಸೇರಿ ಆಚರಿಸುತ್ತಿದ್ದ ಹಬ್ಬಗಳು ಕರ್ನಾಟಕದಲ್ಲಿವೆ; ಭಾರತದ ಅನೇಕ ರಾಜ್ಯಗಳಲ್ಲಿವೆ. ಉತ್ತರ ಪ್ರದೇಶದ ದಾದ್ರಿಯಲ್ಲಿ ಆಹಾರವನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಂಡು ನಡೆಸಿದ ದಾಳಿ ಏನನ್ನು ಸೂಚಿಸುತ್ತದೆ. ಇದರ ಹಿಂದಿನ ಶಕ್ತಿಗಳು ಯಾವುವು? ಇಂಥ ಎಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇದೊಂದು ವ್ಯವಸ್ಥಿತ ಕೃತ್ಯ. ತಮ್ಮ ಕಾರ‍್ಯಸೂಚಿಯನ್ನು ಜಾರಿಗೆ ತರಲು ಕೆಲವು ಸಂಘಟನೆಗಳು, ಶಕ್ತಿಗಳು ರಾಷ್ಟ್ರವ್ಯಾಪಿಯಾಗಿ ನಡೆಸುತ್ತಿರುವ ದುಷ್ಟ ಕೃತ್ಯಗಳು ಇವು ಎಂಬುದು ನಿಚ್ಚಳವಾಗುತ್ತದೆ. ಇಂಥ ಕೃತ್ಯಗಳು ಸಹಬಾಳ್ವೆಯನ್ನು ಹರಿದು ಹಾಕುತ್ತವೆ. ಮನುಷ್ಯ ಮನುಷ್ಯನಾಗಿ ತನ್ನಂತೆಯೇ ಬದುಕುತ್ತಿರುವ ಇತರ ಮಾನವರ ಜೊತೆ ಬದುಕಲು ಬಿಡದಂತ ಹುನ್ನಾರಗಳು ಇಲ್ಲಿವೆ.  ಮನುಷ್ಯರನ್ನು ಒಡೆದು, ಅವರು ಬಡಿದಾಡುವಾಗ ತಮ್ಮ  ಸ್ವಾರ್ಥವನ್ನು ಸಾಧಿಸಿಕೊಳ್ಳುವುದು ಇಂಥ ಕೃತ್ಯಗಳ ಹಿನ್ನೆಲೆಯಲ್ಲಿರುವ ಗುಟ್ಟು. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಗೆ ತನ್ನದೇ ಆದ ಪ್ರಣಾಳಿಕೆ, ಸಿದ್ಧಾಂತ, ಕಾರ್ಯಸೂಚಿ ಇರಬಹುದು. ಬಿಜೆಪಿಯ ಬೆಂಬಲಕ್ಕೆ ಅದರ ಮಿತ್ರಪಕ್ಷಗಳು, ಪರಿವಾರದ ಸಂಘಟನೆಗಳೂ ಇರಬಹುದು. ಆದರೆ  ಯಾವುದೇ ಪಕ್ಷ ಸರ್ಕಾರ ರಚಿಸಿದರೂ ಅದು ಸಂವಿಧಾನ ತತ್ವಗಳಿಗೆ ಬದ್ಧವಾಗಿಯೇ ಕೆಲಸಮಾಡಬೇಕಾಗುತ್ತದೆ. ನಮ್ಮ ಸಂವಿಧಾನ ಉದಾರವಾದ ನೆಲೆಯಲ್ಲಿ ರೂಪಿತವಾಗಿದೆ. ಅಲ್ಲಿ ಎಲ್ಲ ಧರ್ಮಗಳೂ ಸಮಾನ; ಭಾರತೀಯರೆಲ್ಲರಿಗೂ ಸಮಾನ ಹಕ್ಕುಗಳು; ಹೊಣೆಗಾರಿಕೆಗಳು. ಖಾಸಗಿಯಾಗಿ ಯಾರು ಯಾವ ಧರ್ಮವನ್ನು ಬೇಕಾದರೂ ಅನುಸರಿಸಬಹುದು; ಯಾವ ನಂಬಿಕೆಯನ್ನಾದರೂ ಇಟ್ಟುಕೊಂಡು  ನಡೆಯಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ, ನಮ್ಮದು ಜಾತಿ ಮತಧರ್ಮ ನಿರಪೇಕ್ಷ ರಾಷ್ಟ್ರ. ಇದಕ್ಕೆ ನಾವು ಬದ್ಧರಾದಾಗಲೇ ಇಲ್ಲಿ ಸಹನೆ, ಸಹಬಾಳ್ವೆ ಸಾಧ್ಯ. ಹಾಗೆಯೇ ನಮ್ಮ ಸಂವಿಧಾನದಲ್ಲಿ ವೈಜ್ಞಾನಿಕ ವೈಚಾರಿಕ ನಡೆಗೆ ಅವಕಾಶವಿದೆ. ಅಜ್ಞಾನದ ಫಲವಾಗಿ ಹುಟ್ಟಿಕೊಂಡ ಮೌಢ್ಯಗಳನ್ನು ತೊಡೆದು ಹಾಕಲೂ ನಮ್ಮ ಸಂವಿಧಾನ  ತಿಳಿಸಿದೆ. ಇದನ್ನೆಲ್ಲ ಗಾಳಿಗೆ ತೂರಿದಂತೆ, ಭಾರತವನ್ನು ಏಕಧರ್ಮದ ರಾಷ್ಟ್ರವನ್ನಾಗಿ ಮಾಡುತ್ತೇವೆಂದು ಹೇಳುತ್ತ, ಇತರ ಧರ್ಮೀಯರಲ್ಲಿ ಭಯ ಹುಟ್ಟಿಸುವುದು ಸಂವಿಧಾನ ವಿರೋಧೀ ನಡೆಯಾಗುತ್ತದೆ.
ಈ ಎಲ್ಲ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಹತ್ಯೆಯನ್ನು ತಡೆಯುವುದು ರಾಜ್ಯಗಳ ಹೊಣೆಗಾರಿಕೆ ಎಂಬ ಮಾತು ನಿಜ. ಆದರೆ ರಾಷ್ಟ್ರವ್ಯಾಪಿಯಾಗಿ ಹಬ್ಬಿರುವ ಮತ್ತು ಸಂವಿಧಾನದ ಆಶಯಗಳಿಗೆ ವಿರೋಧಿಯಾಗಿ ಬೆಳೆಯುತ್ತಿರುವ ಶಕ್ತಿಗಳನ್ನು ನಿಯಂತ್ರಿಸುವುದು ಮತ್ತು ದಮನ ಮಾಡುವುದು ಕೇಂದ್ರ ಸರ್ಕಾರದ  ಜಬಾಬ್ದಾರಿ. ಕೇಂದ್ರ ಇಂಥ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಈ ರಾಷ್ಟ್ರ ಒಂದಾಗಿ ಉಳಿಯುವುದು ಕಷ್ಟ. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಸರ್ಕಾರ ಯಾವ ಪಕ್ಷದ್ದೇ ಆಗಿರಲಿ, ಅದು ಈ ವಾಸ್ತವವನ್ನು ತಿಳಿಯದೇ ಹೋದರೆ ಅಪಾಯ ತಪ್ಪಿದ್ದಲ್ಲ.

ಇನ್ನೊಂದು ಮುಖ್ಯ ಮಾತನ್ನೂ ಭಾರ್ಗವ ಹೇಳಿದ್ದಾರೆ. ಇತ್ತೀಚೆಗೆ ನಡೆದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ಆರ್‌ಎಸ್‌ಎಸ್ ಮಂದಿಯೇ ಹೆಚ್ಚಾಗಿದ್ದರು.

ಇದು ಸರ್ಕಾರದ ನಡೆಯನ್ನು ಸೂಚಿಸುತ್ತದೆ. ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಆಗುತ್ತಿರುವ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿನ ಉನ್ನತ ಹುದ್ದಗಳನ್ನು ಯಾರು ಅಲಂಕರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಪುಣೆಯ ಚಲನಚಿತ್ರ ಸಂಸ್ಥೆಯ ಉನ್ನತ ಹುದ್ದೆಗೆ ಸರ್ಕಾರ ಮಾಡಿದ ನೇಮಕ ವಿವಾದಕ್ಕೆ ಗುರಿಯಾಗಿದೆ. ಆ ಸಂಸ್ಥೆಯ ವಿದ್ಯಾರ್ಥಿಗಳು ೧೩೯ ದಿನಗಳ ಕಾಲ ನಡೆಸಿದ ಮುಷ್ಕರಕ್ಕೆ ಕಾರಣವಾಗಿದೆ. ಇದು ಏನನ್ನು ಸೂಚಿಸುತ್ತದೆ?
ಭಾರ್ಗವ ಅವರು ಹೇಳಿದಂತೆ ಕೇಂದ್ರದಲ್ಲಿರುವ ಈಗಿನ ಆಡಳಿತ ವಿಚಾರವಾದ ಮತ್ತು ವಿಜ್ಞಾನದ ಬೆಳವಣಿಗೆಗೆ ಯಾಕೆ ಸ್ಪಂದಿಸುತ್ತಿಲ್ಲ. ಸ್ಪಂದಿಸುತ್ತಿದೆ ಎಂದು ಹೇಳುವುದಾದರೆ, ಇವತ್ತು ರಾಷ್ಟ್ರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಯಾಕೆ ಮುಂದುವರಿದಿವೆ. ಯಾವ ಶಕ್ತಿಗಳು ಇಂಥ ಕೃತ್ಯಗಳ ಹಿಂದೆ ಕ್ರಿಯಾಶೀಲವಾಗಿವೆ.

ಆಹಾರದ ಬಗ್ಗೆ ಮತ್ತೆ ಮತ್ತೆ ವಿವಾದಗಳು ಯಾಕೆ ಹುಟ್ಟಿಕೊಳ್ಳುತ್ತಿವೆ. ಮಾಂಸ ತಿನ್ನುವವರ ಮೇಲೆ ನಡೆಯುತ್ತಿರುವ ದಾಳಿಗಳ ಹಿಂದೆ ಯಾರಿದ್ದಾರೆ. ಕೊಲೆಗಳು, ಹಲ್ಲೆಗಳು, ಧಾಂದಲೆಗಳು ಹೆಚ್ಚುತ್ತಿದ್ದರೂ ಕೇಂದ್ರ ಸರ್ಕಾರ ಯಾಕೆ ಮೌನವಾಗಿದೆ? ಮೂಢ ನಂಬಿಕೆಗಳ ವಿರುದ್ಧ ವೈಚಾರಿಕವಾಗಿ ಮಾತನಾಡುವವರ ಬಗ್ಗೆ ಹುಟ್ಟಿಕೊಳ್ಳುತ್ತಿರುವ ಅಸಹನೆಯ ಕಾರಣಗಳು ಎಲ್ಲಿವೆ?
ದಿನಕ್ಕೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಿರುವ ಸಚಿವರನ್ನು, ಸಂಸದರನ್ನು, ಹೊಣೆಗಾರಿಕೆಯ ಸ್ಥಾನದಲ್ಲಿರುವವರನ್ನು ನಿಯಂತ್ರಿಸುವುದಕ್ಕೇ ಕೇಂದ್ರ ಸರ್ಕಾರ ಉಬ್ಬಸ ಪಡುತ್ತಿರುವಂತೆ ಕಾಣಿಸುತ್ತಿದೆ. ಪಾಕಿಸ್ತಾನದೊಂದಿಗೆ ಇವತ್ತಿಗೂ ಮಧುರ ಬಾಂಧವ್ಯ ಕಟ್ಟಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣಗಳೇನು? -ಇವೆಲ್ಲ ನಮ್ಮ ಚಿಂತನೆಯ ದಿಕ್ಕನ್ನು ನೇರ್ಪಡಿಸಬೇಕಾದ ವಿಚಾರಗಳು.

ಜಿ.ಪಿ.ಬಸವರಾಜು  ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜಿ ಪಿ ಬಸವರಾಜು ಮೈಸೂರು ವಾಸಿ. ಕವಿಯಾಗಿ ಕಥೆಗಾರರಾಗಿ ಹೆಸರು ಮಾಡಿರುವ ಬಸವರಾಜು ಸಂವೇದನಾಶೀಲ ವಿಚಾರವಾದಿಗಳು. ಈಗ ಸಂಯುಕ್ತ ಕರ್ನಾಟಕದಲ್ಲಿ ಅವರ ಅಂಕಣ ಬರೆಹ ಪ್ರಕಟವಾಗುತ್ತಿದೆ.

gpbasavaraju@gmail.com


೯೪೮೦೦೫೭೫೮೦

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...