Thursday, November 26, 2015

ಕಸವರವೆಂಬುದು...


ಧಾರ್ಮಿಕ ಅಸಹಿಷ್ಣುತೆಗೆ ಪ್ರತಿಭಟನೆ: ಡಾ.ಆರ್.ಕೆ. ಮಣಿಪಾಲರಿಂದ ಅಕಾಡಮಿ ಪ್ರಶಸ್ತಿ ವಾಪಸ್

-ಡಾ. ಆರ್. ಕೆ. ಮಣಿಪಾಲ

 


17-11-15ರ ದೈನಿಕಗಳಲ್ಲಿ ರಾಷ್ಟ್ರಪತಿಗಳ ಪಕ್ವವೂ ಪ್ರಬುದ್ಧವೂ ಆದ ಅಭಿಪ್ರಾಯ ಪ್ರಕಟವಾಗಿದೆ. ಸೂಕ್ಷ್ಮ ಮನಸ್ಸುಗಳು ಕೆಲ ಘಟನೆಗಳಿಂದ ಘಾಸಿಗೊಳ್ಳಬಹುದು. ಇಂಥ ಘಟನೆಗಳು ಸಂಭವಿಸಿದಾಗ ಸಮತೋಲನದ ಪ್ರತಿಕ್ರಿಯೆ ಇರಬೇಕು. ಸಾಹಿತಿ-ಕಲಾವಿದರು ಮಾಡಿದ ಉತ್ತಮ ಕೆಲಸಗಳಿಗಾಗಿ ನೀಡಲಾದ ಪ್ರಶಸ್ತಿಯನ್ನು ಕಾಪಾಡಿಕೊಳ್ಳಬೇಕೇ ವಿನಹ ಭಾವುಕರಾಗಿ ಅತಿಯಾಗಿ ಪ್ರತಿಕ್ರಿಯಿಸಬಾರದೆಂದು ಹೇಳಿರುತ್ತಾರೆ. ಮಾತ್ರವಲ್ಲ, ಯಾವುದೇ ಸಮಸ್ಯೆ ಉದ್ಭವಿಸಿದರೂ ಭಾರತಕ್ಕೆ ಅಂಥ ತಪ್ಪುಗಳನ್ನು ಸರಿಪಡಿಸಿಕೊಂಡು ಸಾಗುವ ಸ್ವಸಾಮರ್ಥ್ಯವಿದೆ ಎನ್ನುವ ಮೂಲಕ ವೌಲಿಕವಾದ ಮಾತುಗಳನ್ನು ಆಡಿದ್ದಾರೆ.
ಈ ಪ್ರಚಂಡ ಆಶಾವಾದದ ಮೂಲಕವಾದರೂ ಸಾಹಿತಿ-ಕಲಾವಿದರು- ವಿಜ್ಞಾನಿಗಳು ತಮಗೆ ನೀಡಲಾದ ಪ್ರಶಸ್ತಿಗಳನ್ನು ವಾಪಸು ಮಾಡುವುದನ್ನು ನಿಲ್ಲಿಸಬಹುದೆಂದು ನಿರೀಕ್ಷಿಸಬಹುದು.

ನಮ್ಮ ಅಭಿವ್ಯಕ್ತಿ ಸ್ವಾತಂತ್ರ, ವಿಚಾರ ಸ್ವಾತಂತ್ರ ಮತ್ತು ಆಹಾರ ಸ್ವಾತಂತ್ರ ಇವುಗಳಿಗೆ ಧಕ್ಕೆಯೊದಗಿರುವ ಹಿನ್ನೆಲೆಯಲ್ಲಿ ಸಾಹಿತಿ, ಕಲಾವಿದರು ಅಸಹಿಷ್ಣುತೆಯ ಪಿಡುಗು ಸಾಂಕ್ರಾಮಿಕವಾಗುತ್ತಿರುವುದರ ವಿರುದ್ಧ ರೋಸಿ ಹೋಗಿ ಪ್ರತಿಭಟನೆಯ ರೂಪದಲ್ಲಿ ತಮ್ಮ ಪ್ರಶಸ್ತಿಯನ್ನು ಸಂಬಂಧಿಸಿದ ಸಂಸ್ಥೆಗಳಿಗೆ ವಾಪಸು ಮಾಡುತ್ತಿದ್ದಾರೆ. ನನ್ನನ್ನೂ ಒಳಗೊಂಡು ನೂರಾರು ಮಂದಿ ಪ್ರಶಸ್ತಿ ವಾಪಸು ಮಾಡಿದ್ದಾರೆ. ಏಕೆಂದರೆ, ರಾಜ್ಯ-ಕೇಂದ್ರ ಸರಕಾರ ಮತ್ತು ಸ್ವಾಯತ್ತವೆನಿಸಿಕೊಂಡ ಸರಕಾರಿ ಅನುದಾನ ಪಡೆಯುತ್ತಿರುವ ಕೇಂದ್ರ-ರಾಜ್ಯ ಅಕಾಡಮಿಗಳು ನಮ್ಮ ಸ್ವಾತಂತ್ರ ಹರಣವಾಗುತ್ತಿರುವುದನ್ನು ಪ್ರತಿಭಟಿಸಿ ತೀಕ್ಷ್ಣವಾದ ಖಂಡನಾ ಹೇಳಿಕೆ ಪ್ರಕಟಿಸಬೇಕಿತ್ತು. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಅವರ ಹತ್ಯೆ ಮಾತ್ರವಲ್ಲ, ದಾದ್ರಿ ಘಟನೆ ಮತ್ತು ಸಂವಿಧಾನದತ್ತ ಮೂಲಭೂತ ಸ್ವಾತಂತ್ರಕ್ಕೆ ಪೆಟ್ಟು ಬಿದ್ದಿರುವಾಗ ಅದರ ವಿರುದ್ಧ ಸೂಕ್ಷ್ಮ ಸಂವೇದಿಗಳಾದ ಸಾಹಿತಿ ವಿಜ್ಞಾನಿಗಳು ಬೇರೆ ಯಾವ ರೀತಿ ಪ್ರತಿಭಟಿಸಬಹುದು? ಕಲಬುರ್ಗಿಯವರ ಓರಗೆಯವರಾದ ಪ್ರೊ.ಚಂಪಾ ಪ್ರಶಸ್ತಿ ವಾಪಸು ಮಾಡುತ್ತಲೇ ಇನ್ನಷ್ಟು ಕನ್ನಡದ ಸಾಹಿತಿಗಳು ಅವರನ್ನು ಅನುಸರಿಸುವಂತಾಯಿತು. ಪ್ರಸಿದ್ಧ ವಿಜ್ಞಾನಿ, ಇಇಆ ಸ್ಥಾಪಕ ಪಿ. ಎಂ. ಭಾರ್ಗವ ತಮ್ಮ ಪದ್ಮಭೂಷಣ ವಾಪಸು ಮಾಡಿದ್ದಾರಲ್ಲದೆ, ಮನಕಲಕುವ ಪತ್ರವನ್ನು ರಾಷ್ಟ್ರಪತಿಗೆ ಬರೆದಿದ್ದಾರೆ. ಅಲ್ಪಸಂಖ್ಯಾಕರು, ಮಹಿಳೆಯರ ಬಗ್ಗೆ ಸಂಪ್ರದಾಯಾಂಧ, ಅವೈಜ್ಞಾನಿಕ, ಅಮಾನವೀಯ ದೃಷ್ಟಿಕೋನ ಪ್ರಸ್ತುತ ಸರಕಾರದಲ್ಲಿ ಸಾಂಸ್ಕೃತಿಕ ಅಸಹಿಷ್ಣುತೆ ಹೆಚ್ಚಾಗಿದ್ದು, ವೈಜ್ಞಾನಿಕ ಮನೋಭಾವ, ಮಾನವೀಯತೆ, ಜಿಜ್ಞಾಸು ಪ್ರವೃತಿ ಮತ್ತು ಸುಧಾರಣಾ ಕಾರ್ಯ ಅಭಿವೃದ್ಧಿಗೊಳಿಸಬೇಕೆಂಬ ಸಂವಿಧಾನದ ಅನುಚ್ಛೇದ 51ಎ(1)ಗೆ ಧಕ್ಕೆಯಾಗಿದೆ ಎಂಬುದನ್ನು ಈ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿಯ ಹಿಂದಿನ ಕಾರ್ಯದರ್ಶಿ ಕೆ. ಸಚ್ಚಿದಾನಂದನ್, ನಯನತಾರಾ ಸೆಹಗಾಲ್, ಅಶೋಕ್ ವಾಜಪೇಯಿ, ಉದಯ ಪ್ರಕಾಶ್, ಮಾಯಾಕೃಷ್ಣ ರಾವ್, ಮುನವ್ವರ್ ರಾಣಾ, ದೇವನೂರ ಮಹಾದೇವ ಮುಂತಾದವರು ಪ್ರಶಸ್ತಿ ವಾಪಸು ಮಾಡುವ ಮೂಲಕ ತಂತಮ್ಮ ಪ್ರತಿಭಟನೆಯನ್ನು ಪ್ರದರ್ಶಿಸಿದ್ದಾರೆ. ಸ್ವತಂತ್ರ ಖಾತೆಯಾಗಿರುವ ಸಂಸ್ಕೃತಿ ಇಲಾಖೆಯ ಮಂತ್ರಿ ಮಹೇಶ್ ಶರ್ಮಾ ಪ್ರಶಸ್ತಿ ವಾಪಸು ಮಾಡುವವರ ತಾತ್ವಿಕತೆಯನ್ನು ಪ್ರಶ್ನಿಸಿದ್ದಾರೆ. ತುರ್ತು ಪರಿಸ್ಥಿತಿಯ ಘೋಷಣೆಯನ್ನು ಖಂಡಿಸಿ ಶಿವರಾಮ ಕಾರಂತರು ತಮ್ಮ ಪದ್ಮಭೂಷಣವನ್ನು ಹಿಂದಿರುಗಿಸಿದ್ದಕ್ಕೆ ಕಡಿಮೆಯಲ್ಲದ ಪ್ರತಿಭಟನೆ ಇದೆಂಬುದನ್ನು ಮಹೇಶ್ ಶರ್ಮಾ ಆಗಲಿ, ಮಾಜಿ ಸಿಎಂ ಕುಮಾರಸ್ವಾಮಿ ಆಗಲಿ ತಿಳಿಯಲಾರದಷ್ಟು ಮೂರ್ಖರಾದರೆ ಸಾಹಿತಿಗಳೇನು ಮಾಡೋಣ?


ಹಿರಿಯ ಚಲನಚಿತ್ರ ನಿರ್ದೇಶಕ ಶ್ಯಾಂ ಬೆನಗಲ್, ಪ್ರತಿಭಟನೆಗೆ ಬೇರೆ ವಿಧಾನಗಳಿದ್ದರೂ ಪ್ರಶಸ್ತಿ ವಾಪಸಾತಿ ಒಳ್ಳೆಯ ವಿಧಾನವಲ್ಲ. ಪ್ರಶಸ್ತಿಗೆ ಅಗೌರವ ತೋರಿಸಬಾರದು; ಪ್ರಶಸ್ತಿ ವಾಪಸಾತಿ ಆರೋಗ್ಯ ಪೂರ್ಣವಾದ ಕ್ರಮವಲ್ಲ ಎಂಬ ವಿವೇಕದ ಮಾತನ್ನಾಡಿದ್ದಾರೆ.

ರಾಜ್ಯ ಸರಕಾರ, ಪ್ರಚಂಡ ದೇಶಪ್ರೇಮಿ ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಿದ ಬೆನ್ನಲ್ಲಿ ನಡೆದ ರಕ್ತಪಾತ, ದೌರ್ಜನ್ಯ ಕೂಡಾ, ನ್ಯಾಯೋಚಿತವೂ ಆದರ್ಶಯುತವೂ ಆದ ಕಾರ್ಯಕ್ರಮಗಳ ಕುರಿತು ಸಂಘ ಪರಿವಾರ ಪ್ರಾಯೋಜಿಸಿದ ಅಸಹಿಷ್ಣುತೆಯ ವಿಕೃತ-ವಿಕಟಾಟ್ಟಹಾಸವೆಂದೇ ತಿಳಿಯಬೇಕಾಗಿದೆ. ಈ ಪ್ರಾಯೋಜಕರು ದೇಶಪ್ರೇಮದ ಲವಾಂಶ ತಮ್ಮ ಜೀವಧಾತುವಿನಲ್ಲಿ ಹೊಂದದವರು, ಬ್ರಿಟಿಷರನ್ನು ಶತಾಯಗತಾಯ ಭಾರತದಿಂದ ಓಡಿಸಬೇಕೆಂದು ಜನ್ಮವಿಡೀ ಯುದ್ಧದಲ್ಲಿ ಮತ್ತು ಸಾಮಾಜಿಕ ಹಿತದ ಕಾರ್ಯ ಸರಣಿ ರೂಪಿಸಿದ ಮಹಾನ್ ಸ್ವಾತಂತ್ರ ಹೋರಾಟಗಾರ ಟಿಪ್ಪು ಇವರಿಗೆ ಮತಾಂಧನಾಗಿ, ದೇಶದ್ರೋಹಿಯಾಗಿ ಕಾಣಬೇಕಾದರೆ ಇವರಿನ್ನೂ ವಸಾಹತುಶಾಹಿ ದಾಸ್ಯ ಮನೋಭಾವದಿಂದ ಕಿಂಚಿತ್ತೂ ಹೊರಬಂದಿಲ್ಲ ಎನ್ನಬೇಕಾಗುತ್ತದೆ. ನೀನು ಬೇರೆ ಮತದವನಾದುದರಿಂದ ನಾನು ನಿನ್ನನ್ನು ದ್ವೇಷಿಸುತ್ತೇನೆ ಎನ್ನುವ ಈ ಧಾರ್ಮಿಕ ಮೂಲಭೂತವಾದ ಈ ನಾಡನ್ನು ಎಲ್ಲಿಗೆ ಮುಟ್ಟಿಸೀತೆಂಬ ಆತಂಕ ಪ್ರಜ್ಞಾವಂತರದ್ದಾಗಿದೆ. ದೇಶಪ್ರೇಮದ ಬಗ್ಗೆ ಕೊರೆಯುವ ಈ ಆಸಾಮಿಗಳ ಮಕ್ಕಳು ಸೈನ್ಯ, ಪೊಲೀಸ್ ಇಲಾಖೆಗಳಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಬಡತಾಯಿ ಮಕ್ಕಳನ್ನು ಬಾವಿಗೆ ದೂಡಿ ಆಳ ನೋಡುವ ಪೈಕಿಗಳಿವು!

ವಿ.ಕೆ. ಸಿಂಗ್ ಎಂಬ ಕೇಂದ್ರ ಸಚಿವರೊಬ್ಬರು ಪ್ರಶಸ್ತಿ ವಾಪಸು ಮಾಡುವ ಅಸಹಿಷ್ಣುತಾ ವಿರೋಧಿಗಳೆಲ್ಲ ಹಣ ತೆಗೆದುಕೊಂಡು ಹೀಗೆ ಮಾಡುತ್ತಿದ್ದಾರೆಂಬ ಅಪಲಾಪ ಎಬ್ಬಿಸಿದ್ದಾರೆ. ಪ್ರಶಸ್ತಿ ವಾಪಸು ಮಾಡುವ ಬದಲು ಪ್ರಶಸ್ತಿ ಸ್ವೀಕರಿಸಬಾರದಿತ್ತು ಎಂಬ ವಾದವೂ ಎದ್ದಿದೆ. ಸಾಹಿತಿಗಳು ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಮತ್ತು ಪ್ರಶಸ್ತಿ ಫಲಕವನ್ನು ವಾಪಸು ಮಾಡಿ ಪ್ರಶಸ್ತಿಯ ಮೊತ್ತವನ್ನು ವಾಪಸು ಮಾಡಲಿಲ್ಲವೇಕೆ ಎಂಬ ತಕರಾರೂ ಬಂದಿದೆ.

ಈ ನಡುವೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕಾರ್ನಾಡರು ನೀಡಿದ ಹೇಳಿಕೆಗಾಗಿ ಖಂಡನೆ, ಬೆದರಿಕೆ ಪತ್ರಗಳೂ ಬಂದಿವೆ. ಕೆಂಪೇಗೌಡನ ಹೆಸರಿನ ಬದಲು ಮಹಾನ್ ದೇಶಪ್ರೇಮಿ ಟಿಪ್ಪು ಹೆಸರನ್ನು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ನೀಡಬೇಕಾಗಿತ್ತು ಎಂಬುದು ಕಾರ್ನಾಡರ ಹೇಳಿಕೆ. ಅವರ ಹೇಳಿಕೆ ಗೌಡ ಜನಾಂಗಕ್ಕೆ ಅಪಥ್ಯವಾಯಿತು. ಜ್ಞಾನಪೀಠ ಪ್ರಶಸ್ತಿ ವಿಜೇತರೇ ಏಕೆ, ಯಾವೊಬ್ಬ ನಾಗರಿಕನಿಗೂ ಹೀಗೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರವಿದೆ. ಭಿನ್ನಮತವೇ ಪ್ರಜಾಸತ್ತೆಯ ತಿರುಳು. ಆದರೆ, ಟಿಪ್ಪು ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ನಾಟಕ ಪ್ರಕಟಿಸಿದ ಕಾರ್ನಾಡರಿಗೇ ಹೀಗಾದರೆ? ಈ ಮಟ್ಟಿನ ಭಿನ್ನಮತದ ಕುರಿತಾದ ಅಸಹನೆ, ಪ್ರತಿರೋಧ ಪ್ರಜಾಸತ್ತೆಗೆ ಖಂಡಿತ ಮಾರಕವಾಗದಿರುವುದಿಲ್ಲ. ಕ್ರಿ.ಶ. 877ರಲ್ಲಿ ಬರೆಯಲಾದ ಶ್ರೀ ವಿಜಯನ ‘ಕವಿರಾಜ ಮಾರ್ಗ’ದಲ್ಲಿ ಪ್ರಜಾಪ್ರಭುತ್ವದ ತಿರುಳನ್ನು ಸೊಗಸಾಗಿ ವ್ಯಾಖ್ಯಾನಿಸಲಾಗಿದೆ: ‘ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮುಮಂ ಧರ್ಮಮುಮಂ’. ಬೇರೆಯವರ ವಿಚಾರವನ್ನೂ ಧರ್ಮವನ್ನೂ ಸಂಪೂರ್ಣವಾಗಿ ಸಹಿಸುವುದೇ ಚಿನ್ನದಂಥ ಗುಣ, ಜೀವನ ವೌಲ್ಯ ಎಂಬಲ್ಲಿ ‘ನೆರೆ’ ಎಂಬ ವಿಶೇಷಣಕ್ಕೆ ಒತ್ತು ಬಿದ್ದಿರುವುದನ್ನು ಗಮನಿಸದಿರುವಂತಿಲ್ಲ. ಪ್ರಜಾಪ್ರಭುತ್ವದ ವೌಲ್ಯದರ್ಶಗಳು ನಮ್ಮ ಜನಮಾನಸದಲ್ಲಿ ಶತಕಗಳಾಚೆಗೆ ಅಂತರ್ಗತವಾಗಿರುವುದು, ಹಾಸುಹೊಕ್ಕಾಗಿರುವುದು ಮುಕ್ತ ಮನಸ್ಸಿಗೆ ಮಾತ್ರ ಮನವರಿಕೆಯಾದೀತು, ‘ಮುಚ್ಚಿದ ಮನಸ್ಸಿ’ ನವರಿಗೆ ಹೇಗೆ ಅರ್ಥ ಮಾಡಿಸೋಣ?

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...