Monday, November 23, 2015

ಮೌಢ್ಯ ಪ್ರತಿಬಂಧಕ ಕಾಯ್ದೆ ಮತ್ತು ಅರಿವನ ಪ್ರಶ್ನೆ
ಬಾಬುರೆಡ್ಡಿ.ಕೆ.ಬಿ
 
 
 

ಇತ್ತೀಚೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಹಲವು ಮಠಗಳ ಸ್ವಾಮಿಗಳು ಸೇರಿದಂತೆ, ಹಲವಾರು ಪ್ರಗತಿ ಪರ ಸಂಘಟನೆಗಳ ನಾಯಕತ್ವದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಆವಶ್ಯಕತೆಯ ಬಗ್ಗೆ ದೊಡ್ಡ ಮಟ್ಟದ ಸಮಾವೇಶ ನಡೆಯಿತು. ನಾನೂ ಒಬ್ಬ ಪ್ರತಿಭಟನಾಕಾರನಾಗಿ ಭಾಗವಹಿಸಿದ್ದೆ. ಒಂದು ಕಡೆ ವೇದಿಕೆಯಲ್ಲಿ ಭಾಷಣ ನಡೆಯುತ್ತಿತ್ತು. ನಾನು ಅಲ್ಲಿ ಸಣ್ಣ ಪುಟ್ಟ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿರುವರನ್ನು ಭೇಟಿ ಮಾಡಿ ಅವರಲ್ಲಿ ‘ಈ ಸಮಾವೇಶದ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಕೇಳಿದಾಗ ಅವರಿಂದ ಬಂದ ಉತ್ತರ ‘‘ಯಾರು ಏನಾದರೂ ಮಾಡಿ ಕೊಳ್ಳಲಿ ನಮಗೆ ವ್ಯಾಪಾರ ಆಗಬೇಕಿದೆ, ಅದಕ್ಕಾಗಿ ಬಂದಿದ್ದೇವೆ ಇದು ಏನು ಎಂಬುದು ನಮಗೆ ಗೊತ್ತಿಲ್ಲ.’’ ನಾನು ಸುತ್ತಮುತ್ತಲಿನಲ್ಲಿರುವ ಎಲ್ಲ ಅಂಗಡಿಗಳಲ್ಲಿನ ಜನರನ್ನು ಮಾತನಾಡಿಸಿದಾಗ ನನಗೆ ಸಿಕ್ಕ ಉತ್ತರ ಹೆಚ್ಚುಕಮ್ಮಿ ಇದೇ ಆಗಿತ್ತು. ಇಂದು ನಗರಗಳಲ್ಲಿ ವಾಸಿಸುವ ಜನರಿಗೂ ಈ ಕಾಯ್ದೆಯ ಬಗ್ಗೆ ಅರಿವು ಇಲ್ಲ ಎಂದ ಮೇಲೆ ಹಳ್ಳಿಗಳಲ್ಲಿ ಇರುವ ಸಾಮಾನ್ಯ ಜನರ ಸ್ಥಿತಿ ಏನು? ಹಳ್ಳಿಗಳಲ್ಲಿಂದು ಮೂಢ ನಂಬಿಕೆಗಳು ಧರ್ಮಗಳ ಜೀವಾಳಗಳಾಗಿವೆ. ಇದನ್ನು ಉಪಯೋಗಿಸಿಕೊಂಡು ಕೆಲವು ಬಲಿಷ್ಠ ವರ್ಗಗಳು ತಳವರ್ಗಗಳನ್ನು ಶೋಷಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಕೆಲವು ಅಮಾನವೀಯ ಪದ್ಧತಿಗಳು ರೂಢಿಯಲ್ಲಿವೆ. ಅವು ಈ ಸಮಾಜದಲ್ಲಿನ ಬಲಿಷ್ಠ ವರ್ಗಗಳ ಯಜಮಾನಿಕೆಯನ್ನು ಸ್ಥಾಪಿಸಿಕೊಳ್ಳಲು ಸಹಕಾರಿಯಾಗಿವೆ. ಇದರಿಂದ ಮಾನವ ಸಮಾಜ ಒಪ್ಪಿಕೊಳ್ಳಲಾಗದಂತಹ ಶೋಷಣೆ, ಜನ ಸಮುದಾಯದ ಹಿತಕ್ಕೆ ಮಾರಕ ಎನಿಸುವ ಘಟನೆಗಳು ನಡೆಯುತ್ತಿವೆ.


ದೇಶದ ಮೂಲೆ ಮೂಲೆಯಲ್ಲಿಂದು ಬೇರೆ ಬೇರೆ ರೀತಿಯಲ್ಲಿ ಹಲವಾರು ವಲಯದಲ್ಲಿ ಮೌಢ್ಯವನ್ನು ತುಂಬುವ ಪ್ರಯತ್ನ ನಡೆಯುತ್ತಿದೆ. ದೈಹಿಕ ಹಿಂಸೆ, ಅಪಮಾನದಂತಹ ಮಾನವನ ಘನತೆಯನ್ನು ತಂಗಿಸುವಂತಹ ಕೃತ್ಯಗಳು ವ್ಯಾಪಕವಾಗಿವೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಅಮಾನವೀಯ ದೇವದಾಸಿ ಪದ್ಧ್ದತಿ ಇದೆ. ಈ ರೀತಿಯ ಕೃತ್ಯಗಳನ್ನು ಖಂಡಿಸಿ ಪ್ರತಿಭಟನೆಗಳು ನಡೆದರೂ ಜನರು ಅರ್ಥಮಾಡಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಇದೇ ಸರಿ, ನಾವು ಇದನ್ನು ವಿರೋಧಿಸಬಾರದು ಎಂಬ ಕಲ್ಪನೆಯನ್ನು ಹಳ್ಳಿಗರ ತಲೆಯಲ್ಲಿ ತುಂಬಲಾಗಿದೆ. ಇಂದಿಗೂ ಹಳ್ಳಿಗಳಲ್ಲಿ ನಡೆಯುವಂತಹ ಬೆತ್ತಲೆ ಸೇವೆ, ಬಾನಾಮತಿ, ನರಬಲಿ ಇನ್ನಿತರ ವೌಢ್ಯಗಳಿಗೆ ಹೆಚ್ಚಾಗಿ ಬಲಿಯಾಗುವವರು ಮಹಿಳೆಯರು ಮತ್ತು ಮಕ್ಕಳು. ಇಂದು ಮೌಢ್ಯಕ್ಕೆ ಮಾಧ್ಯಮಗಳು ಸಹ ಬೆಂಬಲ ನೀಡುತ್ತಿವೆ. ಅದನ್ನು ಬಿತ್ತರಿಸುವುದರಿಂದ ಟಿಆರ್‌ಪಿ ಹೆಚ್ಚಾಗುತ್ತೆ ಎಂದು ಅದನ್ನು ಯಥಾವತ್ತಾಗಿ ತೋರಿಸಲಾಗುತ್ತಿದೆ. ಮೌಢ್ಯವನ್ನು ಬಂಡವಾಳವಾಗಿಸಿಕೊಂಡಿರುವ ಮಾಧ್ಯಮವನ್ನು ಈ ದೇಶದ ನಾಲ್ಕನೆ ಅಂಗ ಎಂದು ಕರೆಯುವುದಾದರೂ ಹೇಗೆ? ದಿನ ನಿತ್ಯ ಮುಂಜಾನೆ ಟಿವಿಯನ್ನು ಚಾಲನೆ ಮಾಡಿದರೆ ಸಾಕು, ಸಾಲು ಸಾಲು ಜೋತಿಷ್ಯ ಹೇಳುವವರು ಕುಳಿತಿರುತ್ತಾರೆ. ಹಳ್ಳಿಯ ಜನ ಅದನ್ನು ನೋಡಿ ನಂಬುತ್ತಾರೆ. ಅದರಲ್ಲಿಯೂ ಮಹಿಳೆಯರು ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಜನರ ನಡುವೆ ವೈಮನಸ್ಸು ಏರ್ಪಟ್ಟು ಅದೆಷ್ಟೋ ಕುಟುಂಬಗಳು ಒಡೆದು ಹೋಗಿರುವಂತಹ ಉದಾಹರಣೆಗಳನ್ನು ಗಮನಿಸಬಹುದಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನವು ಎಷ್ಟೇ ಮುಂದುವರಿದಿದ್ದರೂ ಮೂಡನಂಬಿಕೆಗಳನ್ನು ನಂಬುವುದನ್ನು ಹಳ್ಳಿಯ ಜನ ಬಿಟ್ಟಿಲ್ಲ.

ಮೌಢ್ಯ ಪ್ರತಿಬಂಧಕ ಕಾನೂನು ಎಂದ ತಕ್ಷಣ ತಪ್ಪುಕಲ್ಪನೆಗಳನ್ನು ಸೃಷ್ಟಿಸಿ ಗ್ರಾಮೀಣ ಜನರನ್ನು ದಿಕ್ಕು ತಪ್ಪಿಸುವ ಕೆಲಸ ವ್ಯಾಪಕವಾಗಿ ನಡೆಸಲಾಗುತ್ತಿದೆ. ಇಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯ ಬಗ್ಗೆ ಯಾವುದೇ ಧರ್ಮದ ವಿರುದ್ಧವಾಗಲಿ ಅಥವಾ ಯಾವುದೇ ಧರ್ಮದ ಆಚರಣೆಗಳ ವಿರುದ್ಧ್ದವಾಗಲಿ ಅಲ್ಲ. ಸಮಾಜದಲ್ಲಿ ನಡೆಯುತ್ತಿರುವಂತಹ ಕೆಲವು ಅಮಾನವೀಯ ಕೃತ್ಯಗಳನ್ನು ನಿಲ್ಲಿಸಲು ಇದನ್ನು ಜಾರಿಗೆ ತನ್ನಿ ಎಂದು ಚಳವಳಿಗಳು ನಡೆಯುತ್ತಿವೆ.

ಆದ್ದರಿಂದ ಈ ಕಾಯ್ದೆಯ ಬಗ್ಗೆ ಸರಕಾರದ ಮೇಲೆ ಒತ್ತಡ ತರುವುದಕ್ಕಿಂತ ನಾವೆಲ್ಲ ಮೊದಲು ಇಡೀ ರಾಜ್ಯಾದ್ಯಂತ ಪ್ರತಿ ಹಳ್ಳಿ ಹಳ್ಳಿಯ ಮನೆ ಮನೆಗಳಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಹಳ್ಳಿ ಜನರಲ್ಲಿ ಸಾಮಾಜಿಕ ಮತ್ತು ವೈಜಾನಿಕ ತಿಳುವಳಿಕೆಯನ್ನು ನೀಡಬೇಕಾಗಿದೆ. ಜನರಲ್ಲಿ ಅರಿವು ಮೂಡಿಸಿದ ನಂತರ ಹಳ್ಳಿಯಿಂದ ರಾಜಧಾನಿಯವರೆಗೂ ಅವರನ್ನು ಹೋರಾಟಕ್ಕೆ ಸಿದ್ಧಗೊಳಿಸಿದಾಗ ಮಾತ್ರ ಮೌಢ್ಯ ಪ್ರತಿಬಂಧಕ ಕಾನೂನನ್ನು ಜಾರಿಗೊಳಿಸಲು ಸರಕಾರವನ್ನು ಆಗ್ರಹಿಸಬಹುದು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...