Thursday, November 19, 2015

ಟಿಪ್ಪು ನಂತರದ ಕರ್ನಾಟಕ
ನೂರ್ ಶ್ರೀಧರ್

ಟಿಪ್ಪುಮರಣದ ನಂತರ ಕರ್ನಾಟಕ ಯಾವ ದಿಕ್ಕನ್ನು ಹಿಡಿಯಿತು ಎಂಬುದನ್ನು ಸಂಕ್ಷಿಪ್ತವಾಗಿಯಾದರೂ ನೋಡಿದರೆ ನಾವು ಕಳೆದುಕೊಂಡಿದ್ದೆಷ್ಟು ಎಂಬುದು ಅರ್ಥವಾಗುತ್ತದೆ. ಕರ್ನಾಟಕವನ್ನು ವಶಪಡಿಸಿಕೊಂಡ ನಂತರ ಬ್ರಿಟಿಷರು ಅದನ್ನು ೫೦ ಭಾಗಗಳಾಗಿ ತುಂಡುತುಂಡಾಗಿಸುತ್ತಾರೆ. ೧೯೫೬ರ ಹೊತ್ತಿಗೂ ಕರ್ನಾಟಕ ೨೦ ತುಂಡುಗಳಾಗಿ ವಿಭಜಿತಗೊಂಡಿತ್ತು. ಮೈಸೂರು ರಾಜ್ಯ, ಮದ್ರಾಸ್ ಪ್ರೆಸಿಡೆನ್ಸಿ, ಬಾಂಬೆ ಪ್ರೆಸಿಡೆನ್ಸಿ, ಹೈದರಾಬಾದ್ ರಾಜ್ಯ, ಕೊಡಗು, ಕೊಲ್ಹಾಪುರ್ ರಾಜ್ಯ, ಸಾಂಗ್ಲಿ ರಾಜ್ಯ, ಮೀರಾಜ್ ರಾಜ್ಯ, ಜೂನಿಯರ್ ಮೀರಜ್, ಕುರುಂದ್ವಾಡ್ ಸೀನಿಯರ್, ಕುರುಂದ್ವಾಡ್ ಜೂನಿಯರ್, ಜಮಖಂಡಿ ರಾಜ್ಯ, ಮುಧೋಳ್ ರಾಜ್ಯ, ಜಟ್ ರಾಜ್ಯ, ಅಕ್ಕಲಕೋಟೆ, ಗುಂದಾಳ್, ರಾಮದುರ್ಗ, ಸಂಡೂರು, ಸವಣೂರು ರಾಜ್ಯಗಳು ಹಾಗೂ ಬೆಳಗಾಂ, ಬೆಂಗಳೂರು ಮತ್ತು ಬಳ್ಳಾರಿ ದಂಡು ಪ್ರದೇಶಗಳು. ಈ ರೀತಿಯ ವಿಭಜನೆಯ ರಾಜಕೀಯ ಉದ್ದೇಶ ಕನ್ನಡ ನಾಡಿನ ಐಕ್ಯವನ್ನು ಮುರಿದು ದುರ್ಬಲಗೊಳಿಸುವುದೇ ಆಗಿತ್ತು. ಹೀಗೆ ಕರ್ನಾಟಕದ ವಸಾಹತು ದಾಸ್ಯ ಪ್ರಾರಂಭವಾಯಿತು.


ಬ್ರಿಟಿಷರೊಂದಿಗೆ ಟಿಪ್ಪುಕಾದಾಡುತ್ತಿದ್ದಾಗ ೨ನೇ ಕೃಷ್ಣರಾಜ ಒಡೆಯರ್‌ರ ಹೆಂಡತಿ ಲಕ್ಷ್ಮೀ ಅಮ್ಮಣ್ಣಿ ಮೊಮ್ಮಗ ೩ನೇ ಕೃಷ್ಣರಾಜ ಒಡೆಯರ್‌ರನ್ನು ದತ್ತು ತೆಗೆದುಕೊಂಡು ಅರಮನೆಯ ವಹಿವಾಟನ್ನು ನೋಡಿಕೊಳ್ಳುತ್ತಿರುತ್ತಾಳೆ. ಬ್ರಿಟಿಷರು ಮೈಸೂರನ್ನು ದಾಳಿ ಮಾಡಿದಾಗಿನಿಂದಲೂ ಈಕೆ ಬ್ರಿಟಿಷರನ್ನು ಸಂಪರ್ಕಿಸಿ ಅವರು ಹೈದರ್ ಅಲಿಯನ್ನು ಸೋಲಿಸಿ ತಮ್ಮ ರಾಜ್ಯವನ್ನು ತಮಗೆ ಹಿಂದಿರುಗಿಸಿಕೊಟ್ಟಲ್ಲಿ ಯುದ್ಧದ ವೆಚ್ಚಗಳನ್ನು ಹಾಗೂ ಅಪಾರ ಜಹಗೀರನ್ನು ಬ್ರಿಟಿಷರಿಗೆ ನೀಡುವುದಾಗಿ ಸಂದೇಶ ಕಳುಹಿಸುತ್ತಿರುತ್ತಾಳೆ. ಫೆಬ್ರವರಿ ೧೭೯೯ರಲ್ಲಿ ಶ್ರೀರಂಗಪಟ್ಟಣದ ಪತನದ ಮೂರು ತಿಂಗಳ ಮೊದಲು ಬ್ರಿಟಿಷರಿಗೆ ಆಕೆ ಬರೆಯುವ ಪತ್ರದಲ್ಲಿ ‘‘ನಮ್ಮನ್ನು ನಮ್ಮ ಕಷ್ಟಗಳಿಂದ ಮುಕ್ತಿಗೊಳಿಸಲು, ದೇವರೇ ನಿಮಗೆ ಉನ್ನತ ಸ್ಥಾನ ನೀಡಿ ನಮ್ಮ ದೇಶಕ್ಕೆ ಕಳುಹಿಸಿಕೊಟ್ಟಿರುವುದಾಗಿ ಇತ್ತೀಚೆಗೆ ನಮಗೆ ತಿಳಿಯಿತು. ನೀವು ಉದಾರರೂ, ಉತ್ತಮ ಉದ್ದೇಶ ಹೊಂದಿದವರೂ ಹಾಗೂ ಧರ್ಮ ನಿಷ್ಠರೂ ಎಂದೂ ಸಹ ಕೇಳಲ್ಪಟ್ಟೆವು. ಆದ್ದರಿಂದ ನಾವು ನಿಮ್ಮ ರಕ್ಷಣೆಯನ್ನು ಬಯಸುತ್ತೇವೆ.’’ ಅಂತೆಯೇ ಯುದ್ಧದ ನಂತರ ಬ್ರಿಟಿಷರು ರಾಣಾ ಒಪ್ಪಂದ ಮಾಡಿಕೊಂಡು ಗದ್ದುಗೆಯಲ್ಲಿ ಬಾಲರಾಜನನ್ನು ಕೂರಿಸುತ್ತಾರೆ. ಬಾಲರಾಜ ಬೆಳೆದ ಅನಂತರವೂ ಬ್ರಿಟಿಷರ ಕೊಡುಗೆಯನ್ನು ಮರೆಯಲಿಲ್ಲ. ಮೈಸೂರು ಸಂಸ್ಥಾನ ತೀವ್ರ ಆರ್ಥಿಕ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದ್ದಾಗಲೂ ಆತ ಹೀಗೆ ಬರೆಯುತ್ತಾನೆ. ‘‘ನಿಮ್ಮಿಂದ ಬೆಳೆಸಲ್ಪಟ್ಟ, ನಿಮ್ಮ ಉದಾರಿ ಸರಕಾರದ ರಕ್ಷಣೆಯಲ್ಲಿ ತೆಗೆದುಕೊಳ್ಳಲ್ಪಟ್ಟ ನಾನು ನನ್ನ ಎಲ್ಲ ಬಯಕೆಗಳ ಪೂರೈಕೆಗೆ ನಿಮ್ಮ ದಯೆಗೆ ಎದುರು ನೋಡುತ್ತೇನೆ...ನನ್ನ ಪೋಷಣೆ ಹಾಗೂ ರಕ್ಷಣೆಯಡಿ ತೆಗೆದುಕೊಂಡ ಸರಕಾರಕ್ಕೆ ನನ್ನ ಜೀವವನ್ನೇ ಮುಡಿಪಿಡುತ್ತೇನೆ.’’ ಬ್ರಿಟಿಷರ ಯಶಸ್ಸಿನಲ್ಲಿ ತನ್ನ ಸಂತೋಷವನ್ನು ಕಾಣುವುದನ್ನು ಈತ ಮೈಗೂಡಿಸಿಕೊಂಡುಬಿಟ್ಟಿದ್ದ.


ಇದಲ್ಲದೆ ಹೈದರ್ ಹಾಗೂ ಟಿಪ್ಪು ತಂದ ಭೂ ಸುಧಾರಣೆಗಳನ್ನು ಮತ್ತೆ ತಿರುಗುಮುರುಗುಗೊಳಿಸುವ ಕೆಲಸವನ್ನು ಬ್ರಿಟಿಷರು ಪ್ರಾರಂಭಿಸುತ್ತಾರೆ. ಮೈಸೂರು ರಾಜ್ಯದಲ್ಲಿ ಪಾಳೇಗಾರ ವ್ಯವಸ್ಥೆ ಸಂಪೂರ್ಣ ನಾಶವಾಗಿರುವ ಕಡೆ ಹಳೆ ಭೂಮಾಲಕರಿಗೆ ಪೆನ್ಷನ್ ನೀಡಿ ಹಳ್ಳಿಗಳ ಪಟೇಲರನ್ನಾಗಿ ನೇಮಿಸುತ್ತಾರೆ. ಪಾಳೆಗಾರರು ಇನ್ನೂ ಬಲವಾಗಿರುವ ಕಡೆ ಅವರನ್ನು ಕಂದಾಯ ಸಲ್ಲಿಸುವ ಹಾಗೂ ಕಂದಾಯ ಸಂಗ್ರಹಿಸುವ ಜಮಿನ್ದಾರರನ್ನಾಗಿ ನೇಮಿಸುತ್ತಾರೆ. ಕರಾವಳಿಯಲ್ಲಿ ಮಾಡಿದ ಲ್ಯಾಂಡ್ ಸೆಟಲ್‌ಮೆಂಟ್ ಕುರಿತು ಮುನ್ರೋ ಈ ರೀತಿ ಬರೆಯುತ್ತಾನೆ ‘‘ಎಲ್ಲ ಲ್ಯಾಂಡ್ ಸೆಟಲ್‌ಮೆಂಟ್ ಅನ್ನು ಭೂಮಾಲಕರೊಂದಿಗೆ (ವರ್ಗದಾರರು) ಮಾಡಿಕೊಂಡಿದ್ದೇನೆ ಅಥವಾ ಭೂಮಾಲಕರು ಇಲ್ಲದ ಕಡೆ ತಕ್ಷಣದ ಹಿಡುವಳಿದಾರರ ಜೊತೆ (ಮೂಲಗೇಣಿದಾರ) ಮಾಡಿಕೊಂಡಿದ್ದೇನೆ. (ವರ್ಗದಾರರು ಎಂಬವರು ಹಳೆ ಭೂಮಾಲಕರಾದರೆ ಮೂಲ ಗೇಣಿದಾರರು ಹೊಸದಾಗಿ ಪ್ರವರ್ಧಮಾನಕ್ಕೆ ಬಂದ ಆದರೆ ತಾವೂ ಸಹ ಉಳುಮೆ ಮಾಡದ ಎರಡನೆ ಸ್ತರದ ಭೂಮಾಲಕರೇ ಆಗಿದ್ದಾರೆ.) ಉತ್ತರ ಕರ್ನಾಟಕದಲ್ಲಿ ಭೂಮಾಲಕರಿಗೆ ಇನಾಂ ಭೂಮಿಗಳನ್ನು ವಿಸ್ತೃತವಾಗಿ ನೀಡುತ್ತಾರೆ. ಧಾರವಾಡ ಜಿಲ್ಲೆಯ ಶೇ. ೧೩ ಭಾಗ ಹಳ್ಳಿಗಳು ಇನಾಂ ಹಳ್ಳಿಗಳಾಗಿದ್ದವು. ಬೆಳಗಾಂ ಜಿಲ್ಲೆಯಲ್ಲಿ ೧೨೨ ದೇಸಾಯಿ ಮನೆತನಗಳು ಇನಾಂ ಭೂಮಿಗಳನ್ನು ಹೊಂದಿದ್ದರು. ಬ್ರಾಹ್ಮಣ ಪಟವರ್ಧನ್ ಮನೆತನಗಳಿಗೆ ಪುಟ್ಟ ಪುಟ್ಟ ರಾಜ್ಯಗಳನ್ನು ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರು. ಹೈದರಾಬಾದ್ ಕರ್ನಾಟಕದಲ್ಲಿ ನಿಜಾಮನಡಿ ಇದ್ದ ಇನಾಂದಾರರು ಹಾಗೂ ಜಹಗೀರ್‌ದಾರರು ಸಂಪೂರ್ಣ ಭೂ ಹಿಡಿತವನ್ನು ಹೊಂದಿದ್ದರು. ಇವರನ್ನು ಬ್ರಿಟಿಷರು ಪೋಷಿಸಿ ಉಳಿಸಿಕೊಂಡರು. ಕೊಡಗಿನಲ್ಲಿ ಮಾಜಿ ಭೂಮಾಲಕ ಮನೆತನಗಳಾದ ಅಪ್ಪರಂದ್ರ, ಚೆಪ್ಪುದಿರ ಮತ್ತು ಬಿದ್ಧಂದ್ರ ಕುಟುಂಬಗಳ ಜೊತೆ ಹಾಗೂ ಹೊಸ ಸೇವಕರಾದ ಬಿಟ್ಟಿಯಂದ್ರ, ಮಾದಂದ್ರ, ಕೊಲೊವಂದ್ರ, ಕುಟ್ಟೆತಿರ ಮತ್ತು ಮಾನಬಂದ ಕುಟುಂಬಗಳ ಜೊತೆ ಮೈತ್ರಿ ಸಾಧಿಸಿ ಬೆಳೆಸಿದರು. ಈ ಮನೆತನಗಳೇ ಮುಂದಿನ ದಿನಗಳಲ್ಲೂ ನೂರಾರು ಎಕರೆ ಕಾಫಿ ತೋಟಗಳನ್ನು ಇಟ್ಟುಕೊಂಡು ಕೊಡಗಿನ ರಾಜಕೀಯ-ಸಾಮಾಜಿಕ ಬದುಕನ್ನು ನಿಯಂತ್ರಿಸುತ್ತ ಬಂದಿವೆ. ಹೀಗೆ ಬ್ರಿಟಿಷರು ರಾಜ್ಯದಾದ್ಯಂತ ಪತನದ ಹಾದಿಯಲ್ಲಿದ್ದ ಭೂಮಾಲಕರನ್ನು ಉಳಿಸಿ, ಬೆಳೆಸಿ, ಬಳಸಿಕೊಂಡರು. ಬ್ರಿಟಿಷರು ಬಂದು ಜಮೀನ್ದಾರಿಕೆಯನ್ನು ದುರ್ಬಲಗೊಳಿಸಿದರು ಎಂಬ ಅಭಿಪ್ರಾಯ ಹಲವರಲ್ಲಿದೆ. ಆದರೆ ವಾಸ್ತವದಲ್ಲಿ ಅವರು ಊಳಿಗಮಾನ್ಯತೆಯನ್ನು ದುರ್ಬಲಗೊಳಿಸಿದ್ದಲ್ಲ ಬದಲಿಗೆ ಬಲಗೊಳಿಸಿದ್ದು ಎಂಬುದು ನಿಚ್ಚಳ ವಾಸ್ತವವಾಗಿದೆ.

ಭೂಮಾಲಕ ವರ್ಗವನ್ನು ಪುನರುತ್ಥಾನಗೊಳಿಸಿದ್ದಲ್ಲದೆ, ಈ ಭೂಮಾಲಕ ವರ್ಗಗಳ ಮೂಲಕ ಊಳಿಗಮಾನ್ಯ ಧಾರ್ಮಿಕ ಸಂಸ್ಥೆಗಳನ್ನು ಸಹ ಮತ್ತೆ ಜೀರ್ಣೋದ್ಧಾರ ಮಾಡುವ ಕೆಲಸ ಪ್ರಾರಂಭವಾಯಿತು. ಟಿಪ್ಪುವಿನ ಪತನದ ಕೆಲವೇ ವರ್ಷಗಳಲ್ಲಿ ಧಾರ್ಮಿಕ ಸಂಸ್ಥೆಗಳು ಅಣಬೆಗಳಂತೆ ಎದ್ದು ಕೂತವು.

ಧಾರ್ಮಿಕ ಸಂಸ್ಥೆಗಳ ಹೆಚ್ಚಳದ ಜೊತೆಜೊತೆಗೆ ಇವುಗಳಿಗೆ ಸರಕಾರದ ಕೊಡುಗೆಯೂ ಹೆಚ್ಚಾಗತೊಡಗಿತು.
ಇನ್ನೊಂದೆಡೆ ಪೀಡಕ ಪ್ರಭುತ್ವ ರೈತರಿಂದ ಕಂದಾಯದ ಹೆಸರಿನಲ್ಲಿ ದೋಚಿದ್ದನ್ನೆಲ್ಲ ಮನಬಂದಂತೆ ದುಂದುವೆಚ್ಚ ಮಾಡತೊಡಗಿತು. ಸುಮಾರು ಅರ್ಧದಷ್ಟು ಕಂದಾಯ ನೇರವಾಗಿ ಬ್ರಿಟಿಷರಿಗೆ ಹೋಗುತ್ತಿತ್ತು. ಅದರಲ್ಲಿ ಅವರು ನಯಾಪೈಸೆಯನ್ನೂ ರಾಜ್ಯಕ್ಕೆ ಖರ್ಚು ಮಾಡುತ್ತಿರಲಿಲ್ಲ. ಕಂದಾಯದ ಶೇ. ೫ ರಾಜನಿಗೆ, ಶೇ. ೧ ದಿವಾನನಿಗೆ. ಕಂದಾಯ ವಸೂಲಿ ಮಾಡಲು ದೊಡ್ಡ ಪ್ರಮಾಣದ ಪೊಲೀಸ್ ಬಲ. ಅದಕ್ಕೆ ಸುಮಾರು ಶೇ. ೨೦ರಷ್ಟು ರಾಜನ ಅನಗತ್ಯ ಖರೀದಿಗಳು, ಅರಮನೆಯ ವೈಭವವನ್ನು, ಕಾಲಿಗೆ ನೂರು ಆಳುಗಳನ್ನು ಸಾಕಲು ವ್ಯರ್ಥ ಖರ್ಚುಗಳು, ದರ್ಬಾರಿನಲ್ಲಿ ತನ್ನ ದೌಲತ್ತು ತೋರಿಸಲು ಅತಿಥಿ ಅಧಿಕಾರಿಗಳಿಗೆ-ವ್ಯಾಪಾರಿಗಳಿಗೆ-ರಾಜರಿಗೆ-ಸಂಗೀತಗಾರರಿಗೆ ದುಬಾರಿ ಕೊಡುಗೆಗಳು, ಹಾಡು-ಕುಡಿತ-ಕುಣಿತ, ಲೆಕ್ಕವಿಲ್ಲದಷ್ಟು ಪೂಜೆ-ಹವನಗಳು, ಅಲ್ಲದೆ ಬೊಕ್ಕಸಕ್ಕೆ ಕುಂದು ತರುವ ಬೇಕಾಬಿಟ್ಟಿ ಇನಾಂಗಳು. ಬೇಜವಾಬ್ದಾರಿ ಐಷಾರಾಮಿ ಪ್ರಭುತ್ವ ಉತ್ಪಾದನೆಯನ್ನು ಹೆಚ್ಚಿಸಲು ಏನೂ ಮಾಡದೆ ಸಾಲ ಮಾಡಿಯಾದರೂ ದೌಲತ್ತನ್ನು ಪ್ರದರ್ಶಿಸುವ ಕೆಲಸವನ್ನು ಮಾಡಿತು. ಇದು ಅಂತಿಮವಾಗಿ ಮೈಸೂರು ರಾಜ್ಯವನ್ನು ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ಗುರಿಮಾಡಿತು.

ಮುಂದುವರಿದ ದಾಸ್ಯ, ಮುಂದುವರಿದ ಸಂಘರ್ಷ:

ಅಂದಿನಿಂದ ಇಂದಿನತನಕ ಈ ದಾಸ್ಯ ಅಂತ್ಯಗೊಳ್ಳುತ್ತಿಲ್ಲ. ಕಾಲಕಾಲಕ್ಕೆ ಪಾತ್ರಗಳು ಬದಲಾಗುತ್ತಿದ್ದರೂ ಸಂಘರ್ಷದ ಮೂಲಕಥೆ ಹಾಗೇ ಇದೆ. ನಮ್ಮ ನಾಡು ಇಂದಿಗೂ ವಿದೇಶಿ ಹಾಗೂ ದೇಶಿ ಕಂಪೆನಿಗಳ ಕೈಯಲ್ಲಿದೆ. ಆಳುವವರು ಅವರ ಕೃಪಾಕಟಾಕ್ಷದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಜಾತಿವಾದಿ ಶಕ್ತಿಗಳು ಹಾಗೂ ಕೋಮುವಾದಿ ಶಕ್ತಿಗಳು ನಾಡನ್ನು ಒಡೆದು, ಜನರನ್ನು ದಿಕ್ಕುತಪ್ಪಿಸಿ, ತಮ್ಮ ಈ ಸೇವೆಗಾಗಿ ದೇಶದ ಲೂಟಿ ಮತ್ತು ಅಧಿಕಾರದಲ್ಲಿ ತಮ್ಮ ಪಾಲನ್ನು ಪಡೆಯುತ್ತಿದ್ದಾರೆ. ಇಂದಿನ ಶೋಷಕರ ಮಾಜಿ ವಂಶಸ್ಥರನ್ನು ಮಣಿಸುವ ಕೆಲಸವನ್ನೇ ಟಿಪ್ಪು ಮಾಡಿದ್ದಾನೆ. ಜನಪರ ಸಂಘಟನೆಗಳು ಇಂದಿಗೂ ಟಿಪ್ಪುವನ್ನು ಎತ್ತಿಹಿಡಿಯುತ್ತಿರುವುದು, ಜನವಿರೋಧಿ ಶಕ್ತಿಗಳು ಇಂದಿಗೂ ಟಿಪ್ಪುವನ್ನು ದ್ವೇಶಿಸುತ್ತಿರುವುದು ಸಹಜವೇ ಆಗಿದೆ. ಈ ಮಧ್ಯೆ ಸರಕಾರ ಟಿಪ್ಪುದಿನಾಚರಣೆಗೆ ಮುಂದಾಗಿದ್ದು ಸ್ವಾಗತಾರ್ಹ ವಿಚಾರವೆ ಆಗಿದೆ. ಆದರೆ ಅದನ್ನು ಆಚರಿಸುವ ಜವಾಬ್ದಾರಿಯನ್ನು ಅಲ್ಪ ಸಂಖ್ಯಾತ ಇಲಾಖೆಗೆ ನೀಡುವ ಮೂಲಕ ನಾಡಿನ ಸ್ವಾಭಿಮಾನಿ ಹಾಗೂ ಜನಪರ ಪರಂಪರೆಯ ಪ್ರತೀಕವಾದ ಟಿಪ್ಪುವನ್ನು ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿ ಮಾಡಿ ಆತನ ವ್ಯಕ್ತಿತ್ವವನ್ನು ಕುಬ್ಜಗೊಳಿಸಿದೆ ಹಾಗೂ ಪರೋಕ್ಷ ರೀತಿಯಲ್ಲಿ ಟಿಪ್ಪುಮುಸ್ಲಿಂ ರಾಜನೆಂಬ ಕೋಮುವಾದಿಗಳ ಪ್ರಚಾರಕ್ಕೆ ಪುಷ್ಟಿ ನೀಡಿದೆ. ಟಿಪ್ಪುಮುಸ್ಲಿಮನಾಗಿದ್ದದ್ದು ಹೌದು, ಆದರೆ ಮುಸ್ಲಿಂ ರಾಜನಾಗಿರಲಿಲ್ಲ. ಎಲ್ಲಾ ಧರ್ಮೀಯರನ್ನು ಆಡಳಿತಾಂಗದಲ್ಲಿ ಹೊಂದಿದ್ದ, ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದ, ಆದರೆ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ನಿಯಂತ್ರಿಸುತ್ತಿದ್ದ ರಾಜನಾಗಿದ್ದ. ಅದಕ್ಕಿಂತ ಹೆಚ್ಚಾಗಿ ಧಾರ್ಮಿಕ ವಿಚಾರ ಟಿಪ್ಪುಆಡಳಿತದ ಮುಖ್ಯ ಪ್ರಶ್ನೆ ಎಂದೂ ಆಗಿರಲಿಲ್ಲ. ಬಲಿಷ್ಟ ರಾಜ್ಯ, ಆಧುನಿಕ ಕೃಷಿ, ವಾಣಿಜ್ಯ ಅಭಿವೃದ್ಧಿ, ಜಮೀನ್ದಾರಿ ಶಕ್ತಿಗಳ ನಿಯಂತ್ರಣ, ವಸಾಹತು ಶಕ್ತಿಗಳ ವಿರೋಧ ಇವು ಟಿಪ್ಪು ಆಳ್ವಿಕೆಯ ಕೇಂದ್ರ ಪ್ರಶ್ನೆಗಳಾಗಿದ್ದವು. ಸಾರಾಂಶದಲ್ಲಿ ಟಿಪ್ಪು ಊಳಿಗಮಾನ್ಯ ಹಾಗೂ ವಸಾಹತು ಶಕ್ತಿಗಳ ವಿರೋಧಿಯಾಗಿದ್ದ. ಹಾಗಾಗಿಯೇ ಅದರ ಮುಂದುವರಿಕೆಯಾಗಿರುವ ಸನಾತನ ಹಾಗೂ ಸಾಮ್ರಾಜ್ಯಶಾಹಿ ಶಕ್ತಿಗಳ ಪ್ರತಿನಿಧಿಗಳಾಗಿರುವ ಸಂಘ ಪರಿವಾರ ಆತನನ್ನು ವಿರೋಧಿಸುತ್ತಿದೆ. ಇದೇ ಕಾರಣಕ್ಕೆ ನಾವು ಟಿಪ್ಪುವನ್ನು ಎತ್ತಿಹಿಡಿಯಬೇಕಿದೆ.

ಆಧಾರ: ಕಾಮ್ರೇಡ್ ‘ಸಾಕಿ’ಯವರ ‘ಮೇಕಿಂಗ್ ಹಿಸ್ಟರಿ’

ಸೌಜನ್ಯ : ವಾರ್ತಾಭಾರತಿ ೨೦.೧೧.೨೦೧೫

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...