Tuesday, November 10, 2015

ಮತ್ತೆರಡು ಪಂಜಾಬಿ ಕವಿತೆಗಳು 
ಮೂಲ: ಸುರ್ಜಿತ್ ಪತಾರ್
ಇಂಗ್ಲಿಷ್‌ ಗೆ: ಅಜ್ಮೇರ್ ರೋದೆ
 
 
 
 
1
ಹಾದಿ 
 
ನ್ಯಾಯ ಕೇಳಬೇಡವೆಂದು ನಾನ್ಯಾವಾಗ ಹೇಳಿದೆ?
ನಿನ್ನ ಹಕ್ಕುಗಳಿಗಾಗಿ ಹೋರಾಡಬೇಡವೆಂದೆನೆ?
ಆದರೆ ನಿಜ ಶತ್ರು ಯಾರೆಂದು ಗುರುತಿಸದೆ
ನಿನ್ನದೇ ಕೈಕಾಲು ಕಡಿದುಕೊಳಬೇಡ ಅಷ್ಟೆ.

ಬೇಡವಾದಲ್ಲೆಲ್ಲ ಸುಮ್ಮಸುಮ್ಮನೆ ಹಾರಾಡುತ್ತ 
ನಿನ್ನ ರೆಕ್ಕೆಗಳ ಗೌರವ ಕಳೆಯಬೇಡ
ದುಃಖದ ವಿರುದ್ಧ ಹೋರಾಡಬೇಕಿದೆ
ಬಡತನದ ವಿರುದ್ಧ ಹೋರಾಡಲಿಕ್ಕಿದೆ
ತಲೆ ಕಾಯ್ವ ನೆಪದಲ್ಲಿ ತಲೆ ತೆಗೆವವರ
ವಿರುದ್ಧವೂ ನಾವು ಹೋರಾಡಬೇಕಿದೆ

ನಿನ್ನ ಕತ್ತಿ ಮೊನೆಯಂಚಿಗೆ ನನ್ನ ಪ್ರಾಣ ಕೊಡಬಲ್ಲೆ
ಅದು ಅಮುಖ್ಯವೆಂದು ಯಾರಾದರು ಹೇಳಬಹುದೆ?

ಅದರ ಕಡೆ ಗಮನ ಹರಿಸು, ಚೆನ್ನಾಗಿ ಮಸೆ
ಅಲಗುಗಳ ಹರಿತಗೊಳಿಸಿ ಇಡು
ಕತ್ತಲಲ್ಲಿ ಬೆಳಕಾಗಿ ಬರೆಯುವಂತೆ
ಬೆಂಕಿಯ ಜ್ವಾಲೆಯಂತೆ ಅದನಿಡು
ಅಂಥ ಕಾಲವೂ ಇದೆ, ಆಗ
ಕತ್ತಿಯಷ್ಟೆ ಬರೆಯಬಲ್ಲುದಾಗಿದೆ..

ಕ್ರಮಿಸಿದ ಹಾದಿಯ ಮತ್ತೇಕೆ ಕ್ರಮಿಸುವೆ?
ಎದುರಿನ ಹಾದಿ ಎಷ್ಟೊಂದು ಕಡಿದಾಗಿದೆ..
***
 
2
ಆ ದಿನ


ಹೇಗಾದರೂ ಆ ‘ದಿನ’
ಮತ್ತೆ ಸಿಕ್ಕಿಬಿಟ್ಟರೆ
ಅದರ ಬಿಳಿಹಂಸೆಯಂತಹ ಗಾಯಗೊಂಡ ಕಾಯಕೆ
ಮುಲಾಮು ಸವರುತ್ತೇನೆ

ಆದರೆ ಒಂದು ‘ದಿನ’ ಎಂದರೆ
ಅಲ್ಲಿಲ್ಲಿ ಅಂಡಲೆದು
ಇದ್ದಕ್ಕಿದ್ದಂತೆ ಒಂದು ಸಂಜೆ
ಚಿಂದಿಯುಟ್ಟು ಮನೆಗೆ ಮರಳುವ;
ರೈಲಿಗೆ ಕಾಯುತ್ತ ಯಾವುದೋ ಸ್ಟೇಷನ್ನಿನಲ್ಲಿ ಸಿಕ್ಕ
ಮನೆ ಬಿಟ್ಟು ಓಡಿಹೋದ ಮಗನಂತಲ್ಲ..

ದಿನಗಳು ಮನೆಬಿಟ್ಟು ಓಡಿಹೋದ ತಿರುಬೋಕಿಗಳಲ್ಲ
ದಿನವೆಂದರೆ
ನಮ್ಮ ಮಾತಿನಿಂದ, ಮೌನದಿಂದ
ಕೊಲ್ಲಲ್ಪಟ್ಟ ದಿನದ ಊಳಿಡುವ ಭೂತ.
ಅವುಗಳ ಗಾಯ
ಈಗ ನಮ್ಮ ಕೈಯಳತೆಗೆ ಮೀರಿದ್ದು

ಈ ದಿನದ ಆಕ್ರಂದನ
ನಿನ್ನೆ ದಿನವ ತಲುಪಲಾರದು
ಶತಶತಮಾನ ಕಳೆದರೂ..
***

ಸುರ್ಜಿತ್ ಪತಾರ್ ಪಂಜಾಬಿಯ ಮುಖ್ಯ ಕವಿ. ಇದುವರೆಗೆ ೭ ಕವನ ಸಂಕಲನಗಳನ್ನೂ, ಒಂದು ಗದ್ಯ ಬರಹ ಸಂಕಲನವನ್ನೂ ಪ್ರಕಟಿಸಿದ್ದಾರೆ. ಹಲವು ಯೂರೋಪಿನ ನಾಟಕಗಳನ್ನು ಪಂಜಾಬಿಗೆ ರೂಪಾಂತರ ಮಾಡಿದ್ದಾರೆ. ಪದ್ಮಶ್ರೀ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಸಮ್ಮಾನ ಗಳಿಸಿದ್ದಾರೆ.

 
ಡಾ. ಎಚ್. ಎಸ್. ಅನುಪಮಾ  ವೈದ್ಯೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಈಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೃತ್ತಿ ನಿರತರು. ಕವಿತೆ, ಕಥೆ, ವೈಚಾರಿಕ, ವೈದ್ಯಕೀಯ, ಪ್ರವಾಸ ಬರಹಗಳನ್ನು ಬರೆಯುವ ಇವರ 29 ಪುಸ್ತಕಗಳು ಪ್ರಕಟಗೊಂಡಿವೆ. ಅದರಲ್ಲಿ ಸಂಪಾದನೆ ಮತ್ತು ಅನುವಾದ ಪುಸ್ತಕಗಳೂ ಸೇರಿವೆ. ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಡಾ. ಎಚ್. ಎಸ್. ಅನುಪಮಾ
ಜಲಜಾ ಹೆರಿಗೆ ಮತ್ತು ಜನರಲ್ ಆಸ್ಪತ್ರೆ
ಕವಲಕ್ಕಿ-581361
ತಾ: ಹೊನ್ನಾವರ ಜಿ: ಉತ್ತರ ಕನ್ನಡ

anukrishna93@gmail.com


9480211320
 
 

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...