Friday, November 20, 2015

ದೀಪ್ತಿ ಭದ್ರಾವತಿ ಎರಡು ಕವಿತೆಗಳು

೧ 
ಸಂತೆ ಬಿಸುಟ ಸಂತ


ಬೂದಗುಂಬಳದ ಮಜ್ಜಿಗೇ ಹುಳಿ,
ಹಸಿರು ಸೌತೆಯ ಮೊಸರು ಸಾಸಿವೆ
ಕಡಲೆ ಕೋಸಂಬರಿ, ಬರಿಯ ಟೊಮ್ಯಾಟೊ ಹಣ್ಣಿನ
ಸಾರು, ಕಂಡ ಕಂಡ ತರಕಾರಿಗಳ
ಹೆಚ್ಚಿ ಮಾಡಿದ ಸಾಂಬಾರು, ಚಟ್ ಎನ್ನುವ ಹುಣಿಸೇ ಗೊಜ್ಜು
ಖಾರ ಕಟ್ಟುವ ನೂರೆಂಟು ನಮೂನೆಯ ಚಟ್ನಿ
ಬಣ್ಣ ಬಣ್ಣದ ಪಲ್ಯ, ಹುಳಿದೊವ್ವೆ
ತಂಪಿನ ತಂಬಳಿ,
ಪದಾರ್ಥ ಯಾವುದಾದರೇನು
ಕಂಪ ಚಿತ್ತಾರಕೆ ಬೇಕು
ಕರಿಬೇವಿನ ಕುಸುರಿ
ಒಣಗಿ ಕರಿಗಟ್ಟಿದ್ದು ಉಪಯೋಗವಿಲ್ಲ
ತೀರ ಎಳೆಯದು ಪ್ರಯೋಜನವಿಲ್ಲ
ಹರೆಯದ ಹುರುಪಿನಲಿ ಅತ್ತಿತ್ತ ಹಾರುವ
ಗುಂಗಿ ಹುಳುವಿನಂತೆ ಚುರುಕಿರುವ
ಒಂದೆರಡು ಎಸಳಾದರೂ ಸಾಕು..
ಹಾಕಿದ ಒಗ್ಗರಣೆಗಳಲಿ ಠಣ್ಣನೆ ಹಾರಿ ಕಮ್ಮಗೆ ಕರಗಿ
ಕಲಸಿದ ಬೆರೆಸಿದ ಸರಂಜಾಮುಗಳ ಜೊತೆಯಲ್ಲಿ
ಬೆರೆತು, ಬೆಸೆದು ತನ್ನೆಲ್ಲ ಬಿಂಕ ಬಿಗುಮಾನಗಳ
ತೊರೆಯುತ್ತ ದಿವ್ಯ ಬಂಧದ
ತಥ್ಯದ ಬಂಧ ಹೊಸೆಯುವಾಗ ರಸದ ಮಹಾಕಾವ್ಯವು
ಅಡುಗೆ ಮನೆಯ ಹೊಸ್ತಿಲು
ದಾಟಿ ಬಯಲು ಆಲಯದ ನರ ನಾಡಿಗಳಲ್ಲಿ
ನಿರುಮ್ಮಳ ಸಂಚರಿಸುತ್ತದೆ
ಕುದಿವ ಪರಿಕರಗಳ ಜೊತೆಯಲ್ಲಿ ಪದೇ ಪದೇ
ಕುದ್ದು, ತಣ್ಣಗೆ ಆರುವುದರ ಜೊತೆಗೆ
ಮತ್ತಷ್ಟು ಆರಿ, ಬೆರೆಯುತ್ತಲೇ ಬೇರೆಯಾಗುತ್ತ
ಬೇರೆಯಾಗುತ್ತಲೇ ಬೆರಕೆಯಾಗುತ್ತ
ಸಂತೆ ಬಿಸುಟ ಸಂತನಂತೆ ಕೂತುಬಿಡುತ್ತದೆ
ಹಬೆಯ ತಟ್ಟೆಗಳ ಬೇಲಿ ದಾಟಿ
ಸಹ ಪಯಣಿಗರೆಲ್ಲ ಜೀಕುತ್ತ ಜಿಗಿಯುತ್ತ
ನಡುನಡುವೆ ತೊನೆಯುತ್ತ
ಉದರವೆಂಬ ಬಸ್ಸಿನಲ್ಲಿ
ರಕ್ತ, ಮಾಂಸ, ಮಜ್ಜೆಗಳೆಂಬ ಸೀಟು
ಹೆಕ್ಕುವಾಗ
ತಾನೊಬ್ಬನೇ ಅನಾಮಿಕ ಗಲ್ಲಿಯಲ್ಲಿ
ಅಲೆಯುತ್ತದೆ
ಕೆಂಪು ದೀಪದ ಬಳ್ಳಿಗಳಿಗೆ ನೆರಳು
ಅರಸುತ್ತದೆ.
***


೨ 
ಬಚ್ಚಿಟ್ಟ ಸದ್ದು


ಉದ್ದ ಊದುಬತ್ತಿಯ ತುದಿಗೆ
ಕಿಡಿ ಹತ್ತಿಸಿ ಪಟಾಕಿ ಹಚ್ಚೋಣ ಬಾ ಎಂದು
ಪುಟ್ಟ ಮಗಳು ಕರೆದಾಗಲೆಲ್ಲ
ಕೈ ಕಾಲುಗಳು ಅದರುತ್ತವೆ
ಬೆರಳು ನಡಗುತ್ತದೆ
ಎದೆಯ ಬಡಿತದ ಸದ್ದು
ಅರಿವಿಗೇ ಬಾರದಂತೆ
ಜೋರಾಗುತ್ತದೆ
ಸಾಲುಗಟ್ಟಿ ನಿಲ್ಲುತ್ತವೆ ಹಣೆ, ಮುಖದ ಮೇಲಿನ
ಬೆವರ ಸಾಲು..
ಎಷ್ಟು ಹೆದರುತ್ತೀಯಮ್ಮ ನಕ್ಕು ಕೇಳುತ್ತಾಳೆ
ಇದೋ ನೋಡು ಹೂ ಕುಂಡ, ಇದು ಆನೆ ಪಟಾಕಿ
ಮತ್ತಿದು ಹನುಮಂತನ ಬಾಲ, ಅಕೋ ಅಲ್ಲಿ
ಹಾವಿನ ಗುಳಿಗೆ
ಒಂದೊಂದನ್ನೇ ಎದುರು ತಂದು ಸುರುವುತ್ತಾಳೆ
‘ತಗೋ ಇದನ್ನಾದರೂ ಹಚ್ಚು ಬರಿಯ ಸುರು ಸುರು ಬತ್ತಿ’
ತುಂಟ ಕಣ್ಣಿನಲೇ ಕಿಚಾಯಿಸುತ್ತಾಳೆ
ಅವಳ ಒತ್ತಾಯದ ಬೆಳಕಿಗೆ
ಕಟ್ಟುಬಿದ್ದು ಪಟಾಕಿ ಮದ್ದುಗಳ ತುಟಿಗಳಿಗೆ
ಕೆಂಪು ಲೇಪಿಸಲು ಹೆಣಗುತ್ತೇನೆ
ಚುರು ಚುರು ಎನ್ನುತ್ತ ಬಚ್ಚಿಟ್ಟುಕೊಂಡ
ಸದ್ದು ಅರಳಿ ಢಂ ಎಂದು ಸಿಡಿವ ಮೊದಲೇ
ಮನದ ಮೂಲೆಯಲ್ಲೆಲ್ಲೋ ಮುದುಡಿಕೊಂಡ
ಹರಕು ಲಂಗದ ಆ ಹುಡುಗಿ
ಎದುರು ನಿಂತು ಕೈ ಚಾಚುತ್ತಾಳೆ
ಮತ್ತದೇ ಕಂಪನ
‘ಬೇಡ ಮಗಳೇ ಪಟಾಕಿ ಹೊಡೆಯುವ ವಯಸ್ಸಲ್ಲ ನಂದು’
ನೆವ ಹೇಳಿ ಹಿಂಸರಿಯುತ್ತೇನೆ
ಉರಿದ ಬತ್ತಿಗಳ ಚೂರು ಕಾಲಿಗೆ
ತಾಕುತ್ತವೆ..
***


ದೀಪ್ತಿ ಭದ್ರಾವತಿ (೧೯೭೮) ಮೂಲತ: ದಕ್ಷಿಣ ಕನ್ನಡದವರಾದರೂ ಬದುಕು ಕಟ್ಟಿಕೊಂಡದ್ದು ಭದ್ರಾವತಿಯಲ್ಲಿ. ನಾಟಕ ಅಭಿನಯ, ಯಕ್ಷಗಾನ ತಾಳಮದ್ದಲೆ ಅಭಿರುಚಿಯ ಕ್ಷೇತ್ರಗಳು. ಕಾಗದದ ಕುದುರೆ (೨೦೧೧), ಗ್ರೀನ್ ರೂಮಿನಲ್ಲಿ (೨೦೧೨) ಕವನ ಸಂಕಲನಗಳು ಪ್ರಕಟವಾಗಿವೆ.

ವಿಳಾಸ: ಸ್ನಿಗ್ಧ ನಿಲಯ, ೨ನೇ ತಿರುವು, ಶಂಕರಮಠ ರಸ್ತೆ, ಸಿದ್ಧಾರೂಢನಗರ, ಭದ್ರಾವತಿ.

deepthibdvt@gmail.com

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...