Sunday, November 08, 2015

ಟಿಪ್ಪು ಸುಲ್ತಾನನನ್ನು ನೆನೆಯೋಣ

ಜನಶಕ್ತಿ ಸಂಪಾದಕೀಯ


tipu

ನವೆಂಬರಿನಲ್ಲಿ ಬರುವ ಟಿಪ್ಪು ಸುಲ್ತಾನ್ ಹುಟ್ಟುಹಬ್ಬವನ್ನು ಅಧಿಕೃತವಾಗಿ ಆಚರಿಸಲು ಕರ್ನಾಟಕ ಸರಕಾರ ನಿರ್ಧರಿಸಿದೆ. ಬಿಜೆಪಿ ಯಾರಾದರೂ ನಿರೀಕ್ಷಿಸಬಹುದಾದಂತೆ ಅದನ್ನು ತೀವ್ರವಾಗಿ ವಿರೋಧಿಸಿದೆ. ಬೇಲೂರಿನಲ್ಲಿ ಈ ಬಗ್ಗೆ ಒಂದು ಗುಂಪು ಘರ್ಷಣೆ ಸಹ ನಡೆದು ಹೋಗಿದೆ. ಬಿಜೆಪಿ ಯಥಾ ಪ್ರಕಾರ ಟಿಪ್ಪುವನ್ನು `ಮುಸ್ಲಿಂ ಮತಾಂಧ’`ಕ್ರೂರಿ ಸುಲ್ತಾನ’ `ದೇಶದ್ರೋಹಿ’ ಇತ್ಯಾದಿಯಾಗಿ ಜರೆದಿದೆ. ಇತ್ತೀಚೆಗೆ ’ಟೈಗರ್ ಆಫ್ ಮೈಸೂರ್’ ಎಂಬ ಹೊಸ ಫಿಲಂನಲ್ಲಿ ಟಿಪ್ಪು ಪಾತ್ರವನ್ನು ವಹಿಸಬೇಕೆಂದು ಬಂದಿರುವ ಆಹ್ವಾನವನ್ನು ಸೂಪರ್ ಸ್ಟಾರ್ ರಜನೀಕಾಂತ್ ತಿರಸ್ಕರಿಸಬೇಕೆಂದು ತಮಿಳುನಾಡಿನ ಬಿಜೆಪಿ ಒತ್ತಾಯಿಸಿತ್ತು. ಹಿಂದೆ ವಿಶ್ವವಿದ್ಯಾಲಯಕ್ಕೆ ಹಾಗೂ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದಕ್ಕೂ ಬಿಜೆಪಿ ಮತ್ತು ಹಿಂದುತ್ವ ಸಂಘಟನೆಗಳು ವಿರೋಧಿಸಿದ್ದವು. ಕಾಂಗ್ರೆಸ್‌ ತನ್ನ ಸರಕಾರದ ವೈಫಲ್ಯಗಳನ್ನು ಬೇರೆಡೆಗೆ ತಿರುಗಿಸಲು `ಮುಸ್ಲಿಮರ ಓಲೈಕೆ’ ರಾಜಕಾರಣದ ಭಾಗವಾಗಿ ಇದನ್ನು ಮಾಡುತ್ತಿದೆ ಎಂದು ಬಿಜೆಪಿ ಆಪಾದಿಸಿದೆ.

ಕಾಂಗ್ರೆಸ್ ಸರಕಾರದ ಉದ್ದೇಶ ಏನೇ ಇರಲಿ ಟಿಪ್ಪು ಸುಲ್ತಾನನನ್ನು ನೆನೆಸಿಕೊಳ್ಳುವುದು ಅತ್ಯಂತ ಸಮಯೋಚಿತ. ಈ ನಿರ್ಧಾರ ಸ್ವ್ವಾಗತಾರ್ಹವಾದದ್ದು. ಈಗ ಏಕೆ ಮಾಡುತ್ತಿದೆ ಎಂಬುದರ ಬದಲಾಗಿ, ಈ ವರೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದನ್ನು ಏಕೆ ಮಾಡಿಲ್ಲ ಎಂದು ಕೇಳಬೇಕಾಗಿದೆ. ಇತಿಹಾಸ ಟಿಪ್ಪು ಸುಲ್ತಾನನ ವ್ಯಕ್ತಿತ್ವ ಮತ್ತು ಐತಿಹಾಸಿಕ ಪಾತ್ರಕ್ಕೆ ನ್ಯಾಯ ಒದಗಿಸಿಲ್ಲ. ಟಿಪ್ಪು ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಯಾವುದೇ ರಾಜಿಯಿಲ್ಲದೆ ಹೋರಾಡಿದ ಅಪ್ರತಿಮ ವಸಾಹತುಶಾಹಿ-ವಿರೋಧಿ ಹೋರಾಟಗಾರ. ಟಿಪ್ಪು ಸುಲ್ತಾನನ್ನು ಸೋಲಿಸಿದ ನಂತರವೇ ದಕ್ಷಿಣ ಭಾರತದಲ್ಲಿ ಬ್ರಿಟಿಶರಿಗೆ ನೆಲೆ ಸಿಕ್ಕಿದ್ದು. 1857ರ ಮೊದಲು ಬ್ರಿಟಿಶರಿಗೆ ಅತ್ಯಂತ ದೊಡ್ಡ ಪ್ರತಿರೋಧ ಒಡ್ಡಿದವನೆಂದರೆ ಟಿಪ್ಪು. ಮರಾಠಾ ಪೇಶ್ವೆ, ಹೈದರಾಬಾದಿನ ನಿಜಾಮ, ಟ್ರಾವಂಕೂರಿನ ರಾಜ ಮುಂತಾದವರೆಲ್ಲಾ ಒಂದಲ್ಲ ಒಂದು ಹಂತದಲ್ಲಿ ಬ್ರಿಟಿಶರೊಂದಿಗೆ ಶಾಮೀಲಾಗಿದ್ದರು. ಟಿಪ್ಪು ಒಬ್ಬನೇ ಬ್ರಿಟಿಶರ ವಿರುದ್ಧ ಸತತವಾಗಿ ಹೋರಾಡುತ್ತಾ ಬಂದವನು. ಇಂತಹ ಟಿಪ್ಪು ಸುಲ್ತಾನನನ್ನು ’ದೇಶದ್ರೋಹಿ’ ಎಂದು ಕರೆಯುವುದು ಹೇಗೆ? ದೇಶ ಎಂಬ ಪರಿಕಲ್ಪನೆ ಇನ್ನೂ ಮೂಡಿಬರುತ್ತಿದ್ದ 18ನೇ ಶತಮಾನದಲ್ಲಿ ’ದೇಶಭಕ್ತಿ’ ಮತ್ತು ’ದೇಶದ್ರೋಹ’ದ ಬಗ್ಗೆ ಮಾತನಾಡುವುದೇ ಅಸಂಗತ. ಭಾರತ ಉಪಖಂಡದ ಹೊರಗಿನಿಂದ ಬಂದು ತಮ್ಮ ಸಾಮ್ರಾಜ್ಯ ಸ್ಥಾಪಿಸುವ ಪ್ರಯತ್ನ ಮಾಡುತ್ತಿದ್ದ ಬ್ರಿಟಿಶರ ವಿರುದ್ಧ ರಾಜಿ ಇಲ್ಲದ ಹೋರಾಟದಲ್ಲಿ ಮಡಿದವನನ್ನು ’ದೇಶಭಕ್ತ’ ಎನ್ನಬಹುದಷ್ಟೆ.

ಮೈಸೂರು(ಮತ್ತು ಆ ಮೇಲೆ ಕರ್ನಾಟಕ) ಒಂದು ಪ್ರಗತಿಪರ ಅಭಿವೃದ್ಧ ರಾಜ್ಯ ಆದ ಪ್ರಕ್ರಿಯೆಯ ಆದ್ಯ ಪ್ರವರ್ತಕ ಟಿಪ್ಪುವೇ. ಆಗ ಇದ್ದ ಪಾಳೆಯಗಾರಿ ಪದ್ಧತಿಯನ್ನು ನಿಲ್ಲಿಸಿ ರೈತುವಾರಿ ಪದ್ಧತಿ ಜಾರಿ ಮಾಡಿದ್ದು ಟಿಪ್ಪು ಆಡಳಿತದ ಕಾಲದಲ್ಲಿ. ಕೃಷಿಗೆ ಉತ್ತೇಜನ ನೀಡಲು ಹಲವು ಆಡಳಿತಾತ್ಮಕ ಸುಧಾರಣೆಗಳು ಮತ್ತು ನೀರಾವರಿ ಯೋಜನೆಗಳನ್ನು ಆರಂಭಿಸಿದವನು ಟಿಪ್ಪುವೇ. ಆತನ ಆಡಳಿತ ಕಾಲದಲ್ಲಿ ಹೊಸ ಭೂಕಂದಾಯ ಪದ್ಧತಿ, ನಾಣ್ಯ, ಕ್ಯಾಲೆಂಡರ್ ಮುಂತಾದ ಸೈಜನಶೀಲ ಆಡಳಿತಾತ್ಮಕ ಕ್ರಮಗಳನ್ನು ಜಾರಿಗೆ ತರಲಾಯಿತು. ಕಾವೇರಿಗೆ ಈಗ ಕೆ.ಆರ್.ಎಸ್. ಇರುವಲ್ಲೇ ಆಣೆಕಟ್ಟು ಕಟ್ಟಲು ಟಿಪ್ಪು ಯೋಜಿಸಿದ್ದ. ರೇಷ್ಮೆ ಕೃಷಿ ಮತ್ತು ಕೈಗಾರಿಕೆ ಆರಂಭಿಸಿದ್ದು ಟಿಪ್ಪು. ಸಸ್ಯವೈವಿಧ್ಯಕ್ಕೆ ಹೆಸರಾದ ಬೆಂಗಳೂರಿನ ಲಾಲ್‌ಬಾಗ್ ಸ್ಥಾಪಿಸಿದ್ದು ಟಿಪ್ಪು ಕಾಲದಲ್ಲಿ. ಟಿಪ್ಪು ಕಾಲದ ಮೈಸೂರು ಒಂದು ಮಿಲಿಟರಿ ಶಕ್ತಿಯಾಗಿದ್ದು ಯುದ್ಧದಲ್ಲಿ ರಾಕೆಟ್ ಅಸ್ತ್ರಗಳ ಬಳಕೆ, ನೌಕಾಸೈನ್ಯ ಹೊಂದಿತ್ತು. ಒಟ್ಟಾರೆಯಾಗಿ ಟಿಪ್ಪು ಆಡಳಿತ ಸ್ಥಳೀಯ ಉತ್ಪಾದನಾ ಶಕ್ತಿಗಳನ್ನು ಉತ್ತೇಜಿಸುವ ದೂರಗಾಮಿ ಕ್ರಮಗಳನ್ನು ಕೈಗೊಂಡಿದ್ದು ಈ ಪ್ರಗತಿಪರ ಅಭಿವೃದ್ಧಿ-ಪರ ನೀತಿಗಳ ಮುಂದುವರಿಕೆಯೇ ಮುಂದೆ ಮೈಸೂರು ದೇಶದಲ್ಲೇ ಪ್ರಗತಿಪರ ಅಭಿವೃದ್ಧ ರಾಜ್ಯ ಎನ್ನಿಸಿಕೊಳ್ಳಲು ಕಾರಣವಾಯಿತು.

ಟಿಪ್ಪು ಅವನ ಕಾಲದ ಇತರ ರಾಜರುಗಳಂತೆ ವಿಲಾಸ-ಮೋಜುಗಳಲ್ಲಿ ಕಾಲ ಕಳೆಯುವನಾಗಿರಲಿಲ್ಲ. ಪರ್ಶಿಯನ್, ಉರ್ದು, ಕನ್ನಡ, ಅರೆಬಿಕ್, ಇಂಗ್ಲಿಷ್, ಫ್ರೆಂಚ್ ಭಾಷೆ ಬಲ್ಲವನಾಗಿದ್ದು, ವಿಶಾಲ ಓದು ಹೊಂದಿದ್ದು ಆಗಿನ ಪ್ರಚಲಿತ ವಿದ್ಯಮಾನಗಳು, ಸಿದ್ಧಾಂತಗಳನ್ನು ಬಲ್ಲವನಾಗಿದ್ದ. ಅಮೆರಿಕನ್ ಮತ್ತು ಫ್ರೆಂಚ್ ಕ್ರಾಂತಿಗಳಿಂದ ಮತ್ತು ಜೆಕೊಬಿಯನ್ ತಾತ್ವಿಕತೆಯಿಂದ ತುಂಬಾ ಪ್ರಭಾವಿತನಾಗಿದ್ದ. ಮೈಸೂರಲ್ಲಿ ಒಂದು ಜೆಕೊಬಿಯನ್ ಸೊಸೈಟಿ ಸ್ಥಾಪಿಸಿ ತನ್ನನ್ನು ತಾನೇ ’ಸಿಟಿಜನ್ ಟಿಪ್ಪು’ ಎಂದು ಕರೆದುಕೊಂಡಿದ್ದ. ಆತ ಫ್ರೆಂಚ್, ಟರ್ಕಿ, ಅಫ್ಘಾನಿಸ್ತಾನ್, ಪರ್ಶಿಯ ಸರಕಾರಗಳ ಜತೆ ರಾಜತಾಂತ್ರಿಕ ಸಂಬಂಧ ಬೆಳೆಸಿದ್ದ. ಆಗ ಫ್ರೆಂಚ್ ಜನರಲ್ ಆಗಿದ್ದ ನೆಪೊಲಿಯನ್ (ಮುಂದೆ ಆತ ಚಕ್ರವರ್ತಿ ಆದ) ಜತೆ ಸಂಪರ್ಕ ಇರಿಸಿಕೊಂಡಿದ್ದು ಮಿಲಿಟರಿ ಸಲಹೆ ಕೇಳುತ್ತಿದ್ದ. ಆಗಿನ ಸೂಪರ್ ಪವರ್‌ ನಂ.1 ಆಗಿದ್ದ ಬ್ರಿಟಿಷರ ವಿರುದ್ಧ ಒಂದು ಅಂತರ್ರಾಷ್ಟ್ರೀಯ ವ್ಯೂಹ ರಚಿಸಲು ಪ್ರಯತ್ನಿಸಿದ. ತಾತ್ವಿಕ ವಿಚಾರಗಳಲ್ಲೂ ಬಹಳ ಆಸಕ್ತನಾಗಿದ್ದು ಕ್ರಿಸ್ತಿ/ಬಂದೇ ನವಾಜ್ ಪರಂಪರೆಯ ಸೂಫಿ ಪಂಥದವನಾಗಿದ್ದ. ತಂದೆ ಹೈದರ್‌ ಅಲಿಯ ಒತ್ತಾಯ ಇಲ್ಲದಿದ್ದರೆ ಆತ ಸೂಫಿ ಸಂತನಾಗಬೇಕೆಂದಿದ್ದನಂತೆ!

ಟಿಪ್ಪು ಸುಲ್ತಾನನ ಮೇಲೆ ಸಂಘ ಪರಿವಾರ ಮತ್ತು ಅದರ ಪ್ರಚಾರ ನಂಬುವ ಜನರ ಅತಿದೊಡ್ಡ ಆಪಾದನೆ ಆತ ’ಮುಸ್ಲಿಂ ಮತಾಂಧ’ ಮತ್ತು ಹಿಂದೂ ಪ್ರಜೆಗಳನ್ನು ’ಬಲಾತ್ಕಾರವಾಗಿ ಮತಾಂತರ’ ಮಾಡಿದ ’ಕ್ರೂರ ಸುಲ್ತಾನ’ ಎಂಬುದು. ಅವನ ರಾಜ್ಯದ ಮುಖ್ಯ ಭಾಗವಾಗಿದ್ದ ಈಗಿನ ದಕ್ಷಿಣ ಕರ್ನಾಟಕ ಮತ್ತು ಉತ್ತರ ತಮಿಳುನಾಡಿನಲ್ಲಿ ಇಂತಹ ಕ್ರೌರ್ಯದ ಅಥವಾ ಬಲಾತ್ಕಾರದ ಮತಾಂತರದ ಯಾವುದೇ ಘಟನೆಗಳ ಉಲ್ಲೇಖ ಇಲ್ಲ. ಆತನ ಆಡಳಿತ ಮತ್ತು ಸೈನ್ಯಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಹಿಂದೂಗಳೇ ದೊಡ್ಡ ಸಂಖ್ಯೆಯಲ್ಲಿದ್ದರು. ನಂಜನಗೂಡಿನ ಶ್ರೀಕಂಠೇಶ್ವರ, ಕಂಚಿ, ರಾಜಧಾನಿ ಶ್ರೀರಂಗಪಟ್ಟಣದ ಶ್ರೀರಂಗ ಸೇರಿದಂತೆ 156 ದೇವಸ್ಥಾನಗಳಿಗೆ ಹಣ, ಭೂಮಿ ಮತ್ತು ಚಿನ್ನಗಳ ವಾರ್ಷಿಕ ಅನುದಾನ ಕೊಟ್ಟಿದ್ದಕ್ಕೆ ದಾಖಲೆ ಇದೆ. ಮರಾಠಾ ಸೈನ್ಯ ಕೆಡವಿದ ಶೃಂಗೇರಿ ದೇವಸ್ಥಾನ ಮತ್ತು ಮಠ ಪುನಃ ಕಟ್ಟಲು ಧನಸಹಾಯ, ಮೇಲುಕೋಟೆಯ ದೇವಸ್ತಾನದಲ್ಲಿ ಎರಡು ಬಣಗಳ ಅರ್ಚಕರ ನಡುವಿನ ವಿವಾದ ಬಗೆಹರಿಸಿದ್ದು, ಮೈಸೂರಲ್ಲಿ ಮೊದಲ ಚರ್ಚು ಕಟ್ಟಿಸಿದ್ದು – ಮುಂತಾದ ದಾಖಲಾದ ವಿವರಗಳನ್ನು ನೋಡಿದರೆ ಆತಎಲ್ಲಾ ಧರ್ಮಗಳ ಆಚರಣೆಗಳನ್ನು ಗೌರವಿಸುತ್ತಿದ್ದ. ಸಮಾನಭಾವದಿಂದ ಕಾಣುತ್ತಿದ್ದ ಎಂಬುದು ಸ್ಪಷವಿದೆ.

ಟಿಪ್ಪು ಸುಲ್ತಾನನನ್ನು ’ಮುಸ್ಲಿಂ ಮತಾಂಧ’ ಮತ್ತು ’ಕ್ರೂರಿ ಸುಲ್ತಾನ’ ಎಂದು ಮೊದಲಿಗೆ ಚಿತ್ರಿಸಿದ್ದು ಬ್ರಿಟಿಶ್ ಇತಿಹಾಸಕಾರರು. ಅದರಲ್ಲೂ ಟಿಪ್ಪು ವಿರುದ್ಧ ಯುದ್ಧದಲ್ಲಿ ಭಾಗವಹಿಸಿದ್ದ ಮತ್ತು ಬ್ರಿಟಿಶ್ ಆಡಳಿತದ ಭಾಗವಾಗಿದ್ದ ವಿಲ್ಕ್ಸ್ ಮತ್ತು ಕಿರ್ಕಪ್ಯಾಟ್ರಿಕ್ ಎಂಬ ಇತಿಹಾಸಕಾgರು. ಅವರ ನಿರೂಪಣೆಗಳನ್ನು ವಾಸ್ತವಿಕ ಎಂದು ಸ್ವೀಕರಿಸುವುದು ಕಷ್ಟ ಎಂದು ಕೆಲವು ಯುರೋಪಿಯನ್ ಇತಿಹಾಸಕಾರರೇ (ಉದಾ. ಬ್ರಿಟ್ಲ್‌ಬ್ಯಾಂಕ್) ಹೇಳಿದ್ದಾರೆ.ಅವರು ಹೇಳಿದ್ದೂ ಮುಖ್ಯವಾಗಿ ಕೇರಳದ ನಾಯರುಗಳು, ಕೊಡಗಿನ ಕೊಡವರು, ದಕ್ಷಿಣ ಕನ್ನಡದ ಕ್ಯಾಥೊಲಿಕರ ಮೇಲಿನ ’ಕೌರ್ಯ’ದ ಮತ್ತು ’ಬಲತ್ಕಾರದ ಮತಾಂತರ’ದ ಬಗ್ಗೆ. ಇವರೆಲ್ಲರೂ ಬ್ರ್ರಿಟಿಶರ ಜತೆ ಶಾಮೀಲಾಗಿ ಟಿಪ್ಪು ರಾಜ್ಯದ ವಿರುದ್ಧ ಹೋರಾಡುತ್ತಿದ್ದವರು. ಮೈಸೂರು ರಾಜ್ಯ ರಕ್ಷಿಸಲು ಅವರನ್ನು ಮಟ್ಟ ಹಾಕಬೇಕಾಗಿದ್ದ ಆಗಿನ ಚಾರಿತ್ರಿಕ ಸನ್ನಿವೇಶದಲ್ಲಿ ಟಿಪ್ಪುವಿನ ’ಕ್ರೌರ್ಯ’ ಮತ್ತು ’ಬಲಾತ್ಕಾರದ ಮತಾಂತರ’ದ ಆಪಾದನೆಯನ್ನು ನೋಡಬೇಕು. ಈ ನಿರೂಪಣೆಗಳಲ್ಲಿ ಬಹಳ ಉತ್ಪ್ರೇಕ್ಷೆ ಇದೆ ಎಂದು ಹೆಚ್ಚಿನ ಇತಿಹಾಸಕಾರರು ಒಪ್ಪುತ್ತಾರೆ. ಈ ಸಂದರ್ಭದಲ್ಲಿ ನಡೆದಿದೆ ಎನ್ನಲಾಗುವ ’ಕ್ರೌರ್ಯ’ ಮತ್ತು ’ಬಲಾತ್ಕಾರದ ಮತಾಂತರ’ ಖಂಡನಾರ್ಹವೇ. ಅದನ್ನು ಸಮರ್ಥಿಸಿಕೊಳ್ಳುವ ಅಥವಾ ಸಮಜಾಯಿಷಿ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಇದರಿಂದ ಮಾತ್ರವೇ, ಅದರಲ್ಲೂ ಮೇಲೆ ಉಲ್ಲೇಖಿಸಿದ ಇತರ ಅಂಶಗಳನ್ನು ಗಮನಿಸಿದರೆ ಟಿಪ್ಪು ’ಮುಸ್ಲಿಂ ಮತಾಂಧ’ ಮತ್ತು ’ಕ್ರೂರಿ ಸುಲ್ತಾನ’ ಎಂಬ ತೀರ್ಮಾನ ಖಂಡಿತ ಹೊರಡುವುದಿಲ್ಲ.

ಹಿಂದುತ್ವ ಇತಿಹಾಸಕಾರರು ಮತ್ತು ಸಂಫ ಪರಿವಾರದವರು ಪ್ರಚಾರ ಮಾಡುತ್ತಿರುವುದು ಮೇಲೆ ಹೇಳಿದ ಬ್ರಿಟಿಶ್ ಇತಿಹಾಸಕಾರರ ನಿರೂಪಣೆಗಳನ್ನು ಇನ್ನಷ್ಟು ಉಪ್ಪು-ಖಾರ ಹಾಕಿ. ಇದು ಟಿಪ್ಪುವಿನ ವರ್ಣರಂಜಿತ ಬಹುಮುಖಿ ವ್ಯಕ್ತಿತ್ವವನ್ನು ಕಪ್ಪು-ಬಿಳುಪಿನ ಒಂದೇ ಆಯಾಮಕ್ಕೆ ಇಳಿಸುವ ಪ್ರಯತ್ನ. ಟಿಪ್ಪುವಿನ ವರ್ಣರಂಜಿತ ಬಹುಮುಖಿ ವ್ಯಕ್ತಿತ್ವ ಅವನನ್ನು ಕರ್ನಾಟಕದಲ್ಲೂ ದೇಶದತುಂಬಾ, ಸಂಘ ಪರಿವಾರದ ಸತತ ಅಪಪ್ರಚಾರದ ನಂತರವೂ ಒಂದು ಜನಪ್ರಿಯ ರಾಷ್ಟ್ರೀಯ ’ಐಕಾನ್’ ಆಗಿಸಿದೆ. ಅವನ ಬಗ್ಗೆ ಬಂದ ಕಥೆ-ಕಾದಂಬರಿಗಳು, ನಾಟಕಗಳು, ಸಿನಿಮಾ, ಟಿವಿ ಸೀರಿಯಲುಗಳಿಗೆ ಲೆಕ್ಕವಿಲ್ಲ. ’ಹಿಂದುತ್ವ ರಾಜಕಾರಣ’ಕ್ಕೆ ತೀರಾ ವಿರುದ್ಧವಾದ, ಅದರ ಹಿಡಿತಕ್ಕೆ ಜಗ್ಗದ ಬಗ್ಗದ ಒಗ್ಗದ ಟಿಪ್ಪುವಿನಂತಹ ರಾಷ್ಟ್ರೀಯ ’ಐಕಾನ್’ಅವರಿಗೆ ಜೀರ್ಣಿಸಿಕೊಳ್ಳುವುದು ಕಷ್ಟ. ಅದಕ್ಕಾಗಿಯೇ ಅವರ ಬದ್ಧ ವಿರೋಧ.

ಸಂಘ ಪರಿವಾರದ ಕುತ್ಸಿತ ಅಪಪ್ರಚಾರವನ್ನು, ಟಿಪ್ಪುವಿನ ವರ್ಣರಂಜಿತ ಬಹುಮುಖಿ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಎತ್ತಿ ಹಿಡಿಯುವ ಮೂಲಕ ಹಿಮ್ಮೆಟ್ಟಿಸಬೇಕಾಗಿದೆ. ಇದಕ್ಕಾಗಿ ಟಿಪ್ಪು ಹುಟ್ಟು ಹಬ್ಬವನ್ನು ವಿಚಾರ ಸಂಕಿರಣ, ಸಾರ್ವಜನಿಕ ಸಭೆ ಮುಂತಾದವುಗಳ ಮೂಲಕ – ರಾಜಿಯಿಲ್ಲದ ವಸಾಹತುಶಾಹಿ-ವಿರೋಧಿ ಹೋರಾಟಗಾರ; ಧಾರ್ಮಿಕ ಸಮಭಾವ, ಉತ್ಪಾದನಾ ಶಕ್ತಿಗಳನ್ನು ಹಾಗೂ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ಪ್ರಭುತ್ವದ ರೂಪಕ; ತಾತ್ವಿಕ ಚಿಂತಕ- ಮುಂತಾದ ಟಿಪ್ಪುವಿನ ವರ್ಣರಂಜಿತ ಬಹುಮುಖಿ ವ್ಯಕ್ತಿತ್ವವನ್ನುಎತ್ತಿ ಹಿಡಿಯಬೇಕಾಗಿದೆ. ಆತನ ವ್ಯಕ್ತಿತ್ವಕ್ಕೆ ನ್ಯಾಯ ಸಲ್ಲಿಸಬೇಕಾಗಿದೆ.
No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...