Monday, November 23, 2015

ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?





ದಿನೇಶ್ ಅಮೀನ್ ಮಟ್ಟು

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಸುಧಾರಣಾ ಕಾಯಿದೆಯಿಂದಾಗಿ ಭೂಮಿ ಪಡೆದುಕೊಂಡವರು, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿಯ ಫಲ ಉಂಡವರು ಮತ್ತು ಸಂತ ನಾರಾಯಣ ಗುರುಗಳ ಸಂದೇಶ ತೋರಿದ ಸುಧಾರಣೆಯ ಹಾದಿಯನ್ನು ಬಹಳ ಬೇಗ ತಿಳಿದುಕೊಂಡವರು ಬಿಲ್ಲವರು. ಈ ಎಲ್ಲ ಬೆಳವಣಿಗಳ ಫಲಾನುಭವಿ ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?

ಕೇರಳದಲ್ಲಿ ನಾರಾಯಣ ಗುರು ಚಳುವಳಿ ನಡೆದ 50 ವರ್ಷಗಳ ನಂತರ ಅಲ್ಲಿನ ಈಳವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ನಾರಾಯಣ ಗುರು ಚಳುವಳಿಯ ಯಶಸ್ಸಿನ ಬಿಂಬವನ್ನು ಆ ಸಮೀಕ್ಷೆಯ ವರದಿಯಲ್ಲಿ ಕಾಣಬಹುದು. ವಕೀಲರು, ವೈದ್ಯರು, ಪತ್ರಕರ್ತರು, ರಾಜಕಾರಣಿಗಳು,ಸರ್ಕಾರಿ ಅಧಿಕಾರಿಗಳು ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್ ಗಳು, ಕಲಾವಿದರು ಸೇರಿದಂತೆ ಹತ್ತು ವೃತ್ತಿಗಳಲ್ಲಿರುವ ಈಳವರನ್ನು ಗುರುತಿಸುವ ಕೆಲಸಅಲ್ಲಿ ನಡೆಯಿತು. ಅಷ್ಟೊತ್ತಿಗೆ ಈ ಎಲ್ಲ ವೃತ್ತಿಗಳಲ್ಲಿ ಈಳವರು ತಮ್ಮ ಆಧಿಪತ್ಯ ಸ್ಥಾಪಿಸಿದ್ದರು.

ಕೇರಳದ ಈಳವರಂತೆಯೇ ನಾರಾಯಣ ಗುರುಗಳ ಮಾರ್ಗದರ್ಶನ ಪಡೆದ, ಅಲ್ಲಿಯಂತೆಯೇ ಭೂ ಸುಧಾರಣೆ ಮತ್ತು ಮೀಸಲಾತಿಯ ಫಲಾನುಭವಿಗಳಾದ ಬಿಲ್ಲವರು ಈಗ ಎಲ್ಲಿದ್ದಾರೆ? ಬಿಲ್ಲವರಲ್ಲಿ ಎಷ್ಟುಮಂದಿ ವಕೀಲರು, ವೈದ್ಯರು, ಎಂಜನಿಯರ್ ಗಳು, ಉದ್ಯಮಿಗಳು, ಪತ್ರಕರ್ತರು, ಸರ್ಕಾರಿ ನೌಕರರು, ಪ್ರಾಧ್ಯಾಪಕರು ಇದ್ದಾರೆ?

ಬಿಲ್ಲವ ಯುವಕರು ಎಲ್ಲಿದ್ದಾರೆಂದು ಹುಡುಕಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಗಳ ದಾಖಲೆಗಳನ್ನು ನೋಡಬೇಕು. ಸೂತ್ರಧಾರಿಗಳು ತಲೆಗೆ ತುಂಬಿದ ಧರ್ಮದ ನಶೆಯೇರಿಸಿಕೊಂಡ ಪಾತ್ರಧಾರಿ ಬಿಲ್ಲವ ಯುವಕರು ಧರ್ಮದ ಹೆಸರಲ್ಲಿ ಒಂದಷ್ಟು ಮಂದಿಯ ಪ್ರಾಣ ತೆಗೆದಿದ್ದಾರೆ, ತಾವೂ ಅದೇ ದ್ವೇಷಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಹಾದಿ ತಪ್ಪಿದ ಈ ಅಮಾಯಕ ಯುವಕರ ಬಡ ತಂದೆತಾಯಿಗಳು ಬದುಕಿಯೂ ಸತ್ತಂತಿದ್ದಾರೆ.

ಈ ಪಾತ್ರಧಾರಿಗಳನ್ನು ಪೋಷಿಸಿಕೊಂಡು ಬಂದ ಸೂತ್ರಧಾರಿಗಳು ತಮ್ಮ ಮಕ್ಕಳನ್ನು ಡಾಕ್ಟರ್, ಎಂಜನಿಯರ್, ಅಡ್ವೋಕೇಟ್, ಉದ್ಯಮಿಗಳನ್ನಾಗಿ ಮಾಡಿ ಆಗಾಗ ಹಿಂದೂ ಧರ್ಮಕ್ಕೆ ಒದಗಿ ಬಂದ ಆಪತ್ತಿನ ಬಗ್ಗೆ ಅಂಗರಕ್ಷಕರನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಭಾಷಣ ಮಾಡುತ್ತಾ ಹೊಸ ಬಲಿಪಶುಗಳನ್ನು ತಯಾರುಮಾಡುತ್ತಿದ್ದಾರೆ.

ಈ ಅಮಾಯಕ ಯುವಕರಿಗೆ ಸರಿತಪ್ಪು ತಿಳಿಸಿ ಅವರನ್ನು ಹಾದಿ ತಪ್ಪದಂತೆ ನೋಡಿಕೊಳ್ಳಬೇಕಾದ ಬಿಲ್ಲವ ಸಮುದಾಯದ ನಾಯಕರು ಧರ್ಮಸ್ಥಳ, ಕೊಲ್ಲೂರಿಗೆ ಪೈಪೋಟಿ ನೀಡುತ್ತಿದ್ದೇವೆ ಎಂದು ಎದೆತಟ್ಟಿಕೊಂಡು ದೇವಸ್ಥಾನದ ಜೀರ್ಣೋದ್ದಾರಕ್ಕೆ ತಮ್ಮನ್ನು ಅರ್ಪಿಸಿಕೊಂಡು ತಾವೇ ನಿಜವಾದ ಹಿಂದೂಗಳೆಂದು ಸಾಬೀತುಮಾಡಲು ಹೊರಟಿದ್ದಾರೆ.

ನಾರಾಯಣ ಗುರು ಸ್ಥಾಪಿಸಿದ್ದ ದೇವಸ್ಥಾನದಲ್ಲಿ ಅವರ ಸಂದೇಶದ ಗೋರಿ ಕಾಣಿಸುತ್ತಿದೆ.

ನಾರಾಯಣ ಗುರು ಸಂದೇಶದಿಂದ ಬೆಳಗಬೇಕಾದ ಬಿಲ್ಲವರ ಮನೆಗಳಲ್ಲಿ ಕತ್ತಲು ತುಂಬಿದೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...