Monday, November 16, 2015

ಸ್ವಂತ ಮನೆ ಉರಿದೊಡೆ, ಪಕ್ಕದ ಮನೆಗೆ ಸಾಂತ್ವನ!


ಸನತಕುಮಾರ ಬೆಳಗಲಿ

ಶತಮಾನಗಳ ಹಿಂದೆ ರೋಮ್ ದೇಶ ಬೆಂಕಿಯಿಂದ ಹೊತ್ತಿ ಉರಿಯುವಾಗ ಅಲ್ಲಿನ ದೊರೆ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ಅತ್ತ ಬೆಂಕಿಯಿಂದ ಪಾರಾದ ಜನರು ಊಟ, ಬಟ್ಟೆ ಮತ್ತು ವಸತಿಗಾಗಿ ಗೋಗೆರೆಯುತ್ತಿದ್ದರೆ, ಇತ್ತ ದೊರೆ ಬೆಂಕಿ ನಂದಿಸುವುದಕ್ಕಿಂತ ಬೇರೆಯದ್ದೇ ಧ್ಯಾನದಲ್ಲಿ ಇದ್ದನಂತೆ. ಜನರಿಗೆ ಸಾಂತ್ವನ ಹೇಳಲು ಮತ್ತು ಸಹಾಯ ಮಾಡಲು ಸಹ ಆತ ನಿರಾಸಕ್ತಿ ತೋರಿದ್ದನಂತೆ. ಸದ್ಯದ ಪರಿಸ್ಥಿತಿಯಲ್ಲಿ ಆಗಿನ ಕಾಲದ ರೋಮ್ ದೇಶಕ್ಕೂ ಮತ್ತು ಈಗಿನ ಕಾಲದ ನಮ್ಮ ದೇಶಕ್ಕೂ ಹೆಚ್ಚು ವ್ಯತ್ಯಾಸ ಇಲ್ಲ. ರೋಮ್ ಅಲ್ಲಿ ಭೌತಿಕವಾಗಿ ಉರಿದರೆ, ಇಲ್ಲಿ ನಮ್ಮ ದೇಶವು ಸಾಮಾಜಿಕ, ಆರ್ಥಿಕ, ಮಾನಸಿಕ ಮತ್ತು ಭೌತಿಕವಾಗಿ ಬೆಂಕಿಯಲ್ಲಿ ನಲುಗುತ್ತಿದೆ. ಇಲ್ಲಿ ನೀರೋ ಯಾರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪಿಟೀಲು ನುಡಿಸದೇ ಉದ್ದೇಶಪೂರ್ವಕವಾಗಿ ಮೌನ ಉಳಿದಿರುವ ನೀರೋ ಯಾರೆಂದು ಗುರುತಿಸಿ ತೋರಿಸಬೇಕಿಲ್ಲ. ದೇಶದ ಸೌಹಾರ್ದ, ಶಾಂತಿ ಮತ್ತು ಸಹಬಾಳ್ವೆ ಪರಂಪರೆಯೊಂದಿಗೆ ಬೆಸೆದುಕೊಂಡ ಜನರು ನೀರೋ ಇಡುತ್ತಿರುವ ಪ್ರತಿಯೊಂದು ಹೆಜ್ಜೆ, ನಡವಳಿಕೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಧಾರ್ಮಿಕ ಅಸಹಿಷ್ಣುತೆ, ಕೋಮು ಘರ್ಷಣೆ, ಜಯಂತಿ ಮತ್ತು ಮಾಂಸಾಹಾರ ಸೇವನೆ ನೆಪದಲ್ಲಿ ದೇಶದೆಲ್ಲೆಡೆ ವ್ಯಾಪಕ ಹಿಂಸಾಚಾರ ನಡೆಯುತ್ತಿರುವಾಗ, ದೇಶದ ಪ್ರಧಾನಿ ನರೇಂದ್ರ ಮೋದಿ ಲಂಡನ್‌ನಲ್ಲಿ ಮಾನವತಾವದಿ ಬಸವೇಶ್ವರರ ಪುತ್ಥಳಿ ಅನಾವರಣಗೊಳಿಸಿ ಭಯೋತ್ಪಾದನೆ ವಿರುದ್ಧ ಮಾತನಾಡುತ್ತಾರೆ. ಕೋಮು ಹಿಂಸಾಚಾರದಿಂದ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಮತ್ತು ಹಿಂದುಳಿದ ವರ್ಗದವರು ಭಯಗ್ರಸ್ಥರಾಗಿದ್ದರೆ, ಫ್ರಾನ್ಸ್‌ನಲ್ಲಿ ಉಗ್ರರು ಕ್ರೌರ್ಯ ಪ್ರದರ್ಶಿಸುವುದು ಮಾನವೀಯತೆ ಮೇಲಿನ ದಾಳಿ ಎಂದು ನರೇಂದ್ರ ಮೋದಿ ಖಂಡಿಸುತ್ತಾರೆ. ತಾವು ಹುಟ್ಟಿದ ದೇಶವೇ ಬೇರೆ ಬೇರೆ ರೀತಿಯ ದಾಳಿಗೆ ಸಿಲುಕಿ ಅಸಹಾಯಕ ಸ್ಥಿತಿಯಲ್ಲಿ ಇರುವಾಗ ಹೊರದೇಶದ ಭಯೋತ್ಪಾದನೆ ಬಗ್ಗೆ ಅವರು ಖೇದ ವ್ಯಕ್ತಪಡಿಸುತ್ತಾರೆ. ದೇಶಕ್ಕಿಂತ ವಿದೇಶದಲ್ಲೇ ಹೆಚ್ಚಿರಲು ಬಯಸುವ ಮೋದಿಗೆ ಜಾಗತಿಕ ಭಯೋತ್ಪಾದನೆ ದೊಡ್ಡದಾಗಿ ಕಾಣುತ್ತಿದೆಯೇ ಹೊರತು ದೇಶದಲ್ಲಿನ ಅಸ್ಥಿರತೆ ಪರಿಸ್ಥಿತಿ ಮಾತ್ರ ಗೋಚರಿಸುತ್ತಿಲ್ಲ.


ಮಾನವೀಯ ತತ್ವಗಳ ಮೇಲಿನ ದಾಳಿಯನ್ನು ಮಾನವೀಯತೆ ಮೇಲೆ ನಂಬಿಕೆ ಇಟ್ಟಿರುವ ಎಲ್ಲಾ ಶಕ್ತಿಗಳು ಒಂದಾಗಿ ಖಂಡಿಸಬೇಕು ಎನ್ನುವ ಮೋದಿಯವರಿಗೆ ದೇಶದಲ್ಲಿ ಮಾನವೀಯತೆ ಎಂಬುದು ಹೇಳಹೆಸರಿಲ್ಲದಂತೆ ಕಣ್ಮರೆಯಾಗುತ್ತಿರುವುದು ಗಮನಕ್ಕೆ ಬರುತ್ತಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ಕೋಮು ಶಕ್ತಿಗಳು ಹಿಂದೆಂದೂ ಇರದಷ್ಟು ಬಲಿಷ್ಠವಾಗಿವೆ ಎಂಬುದು ಅವರಿಗೆ ಗೊತ್ತಾಗುತ್ತಿಲ್ಲವೇ? ಅಥವಾ ಗೊತ್ತಿದ್ದರೂ ಸಹ ಆ ಶಕ್ತಿಗಳು ಇನ್ನಷ್ಟು ಬಲಿಷ್ಠವಾಗಲಿಯೆಂದು ಮೌನ ವಹಿಸಿದ್ದಾರೆಯೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಪ್ರಪಂಚದ ಯಾವುದೇ ಭಾಗದಲ್ಲಿ ಎಂತಹದ್ದೇ ಹಿಂಸಾಚಾರ ನಡೆದರೂ ತಕ್ಷಣವೇ ಟ್ವೀಟ್ ಮಾಡುವ ಅವರು ದೇಶದ ಯಾವುದೇ ರಾಜ್ಯದಲ್ಲಿ ಹಿಂಸಾಚಾರ ಎಲ್ಲೆ ಮೀರಿದರೂ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಕಳಕಳಿ ವ್ಯಕ್ತಪಡಿಸುವುದಿರಲಿ, ಆಯಾ ಪ್ರದೇಶಕ್ಕೆ ಭೇಟಿ ನೀಡುವ ಅಥವಾ ಜನರ ಸಂಕಷ್ಟ ಆಲಿಸುವ ಕಾಳಜಿಯೂ ಅವರಿಂದ ವ್ಯಕ್ತವಾಗುವುದಿಲ್ಲ. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದ್ದರೂ ತಮಗೇನೂ ಸಂಬಂಧವೇ ಇಲ್ಲ ಎಂಬಂತೆ ಅವರು ವಿದೇಶದಲ್ಲಿ ಜಾಗತಿಕ ಶಾಂತಿ ಕಾಯ್ದುಕೊಳ್ಳುವುದು ಹೇಗೆ ಎಂಬ ವಿಚಾರಸಂಕಿರಣದಲ್ಲಿ ಪಾಲ್ಗೊಂಡಿರುತ್ತಾರೆ. ಉಪಾಯಗಳನ್ನು ಕಂಡುಕೊಳ್ಳುವ ಕಾಯಕದಲ್ಲಿ ನಿರತರಾಗಿರುತ್ತಾರೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಧಿಕ ವಿದೇಶ ಸುತ್ತಾಡಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರಧಾನಿ ಮೋದಿಯವರು ದೇಶದ 30 ರಾಜ್ಯಗಳಲ್ಲಿ ಎಷ್ಟು ಹೊತ್ತು ಕಾಲ ಕಳೆದಿದ್ದಾರೆ ಎಂಬುದನ್ನು ಲೆಕ್ಕ ಹಾಕಿದರೆ, ವಿದೇಶದಲ್ಲಿ ಕಳೆದಷ್ಟು ದಿನಗಳು ಸಹ ಸಮವಾಗಲಿಕ್ಕಿಲ್ಲ. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಲ ನಿಮಿಷಗಳ ಕಾಲ ಆಯಾ ರಾಜ್ಯಕ್ಕೆ ಹೆಲಿಕಾಪ್ಟರ್ ಮೂಲಕ ಭೇಟಿ ನೀಡಿ ವೇದಿಕೆಯನ್ನೇರಿ ಭಾಷಣ ಮಾಡಿದ್ದು ಹೊರತುಪಡಿಸಿದರೆ, ಆ ಭಾಗದ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿದ್ದರ ಬಗ್ಗೆ ಸುಳಿವಿಲ್ಲ. ಈ ಹಿಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಲಾಲ್‌ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮುಂತಾದವರು ಉನ್ನತ ಸ್ಥಾನಮಾನದಲ್ಲಿದ್ದರೂ ಸಾರ್ವಜನಿಕರನ್ನು ಭೇಟಿಯಾಗದೇ ಅಥವಾ ಕೈಕುಲಕದೇ ವೇದಿಕೆ ಏರುತ್ತಿರಲಿಲ್ಲ. ತಮಗೆ ಅರ್ಪಣೆಯಾಗುತ್ತಿದ್ದ ಹೂಗುಚ್ಛಗಳನ್ನು ಇಂದಿರಾ ಗಾಂಧಿ ಸ್ವತಃ ಜನರಿಗೆ ನೀಡಿ, ಅವರಲ್ಲಿ ಸಂತಸ ಕಾಣುತ್ತಿದ್ದರು. ಆದರೆ ಮೋದಿಯವರು ಹೆಲಿಕಾಪ್ಟರ್‌ನಿಂದ ಇಳಿದು ವೇದಿಕೆಯನ್ನೇರಿ ಭಾಹಿಯೋ, ಬೆಹನೋ ಎಂದು ಭಾಷಣ ಮಾಡುವುದು ಹೊರತುಪಡಿಸಿದರೆ ಜನರೊಂದಿಗೆ ನೇರ ಮಾತನಾಡುವುದಿಲ್ಲ. ದೇಶದ ಪ್ರಧಾನಿಯಾಗಿದ್ದಕ್ಕೆ, ಬಹುಶಃ ಅವರ ಬಳಿ ಸಮಯವೂ ಇರುವುದಿಲ್ಲ!!
 

ಆದರೆ ಅದೇ ಪ್ರಧಾನಿ ಮೋದಿಯವರಿಗೆ ಅನಿವಾಸಿ ಭಾರತೀಯರು ಕಂಡರೆ ಎಲ್ಲಿಲ್ಲದ ಪ್ರೀತಿ. ದೇಶದಲ್ಲಿ ಜನಸಾಮಾನ್ಯರಿಂದ ಒಂದು ಕಿ.ಮೀ. ದೂರವುಳಿಯುವ ಮೋದಿಯವರು ವಿದೇಶದಲ್ಲಿ ಅನಿವಾಸಿ ಭಾರತೀಯರೆಂದರೆ ಒಂದು ಮೀಟರ್ ಸಹ ದೂರ ಇರುವುದಿಲ್ಲ. ಬಿಗಿಭದ್ರತೆಯನ್ನೂ ಲೆಕ್ಕಿಸದೆ ಅನಿವಾಸಿ ಭಾರತೀಯರ ಮಧ್ಯೆ ನಿಂತು ಅಷ್ಟು ಆಪ್ತತೆಯಿಂದ ಮಾತನಾಡುತ್ತಾರೆ. ಅಲ್ಲದೆ ಮೊಬೈಲ್ ಫೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಕಿಲಕಿಲನೇ ನಗುತ್ತಾರೆ. ವಿದೇಶಿ ಜನಸ್ನೇಹಿಯಾದ ಪ್ರಧಾನಿ ಸ್ವದೇಶಿಯರ ಜೊತೆ ಸೆಲ್ಫಿ ಕ್ಲಿಕ್ಕಿಸುವುದಿಲ್ಲ ಮತ್ತು 10 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸಮಸ್ಯೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿಕೊಂಡರೂ ಸಹ ಬಡ ನಿರ್ಗತಿಕ ಜನಸಾಮಾನ್ಯನಿಗೆ ಪ್ರಧಾನಮಂತ್ರಿ ಕಚೇರಿ ಬಳಿ ಸುಳಿದಾಡಲು ಅವಕಾಶ ಸಿಗುವುದಿಲ್ಲ. ಕಾರಣ, ಪ್ರಧಾನಿ ವಿದೇಶ ಪ್ರವಾಸದಲ್ಲಿ ಇರುತ್ತಾರೆ ಇಲ್ಲವೇ ಬಿಗಿ ಭದ್ರತೆ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ಕಚೇರಿ ಸುತ್ತಮುತ್ತ ಜನರ ಓಡಾಟಕ್ಕೆ ನಿಷೇಧ ಇರುತ್ತದೆ. ಅಷ್ಟೇ ಅಲ್ಲ,ಹಲವು ಸಂದರ್ಭಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೂ ಸಹ ಪ್ರಧಾನಿ ಭೇಟಿಗಾಗಿ ದಿನಗಟ್ಟಲೇ ಕಾಯಬೇಕಾಗುತ್ತದೆ. ಪ್ರಧಾನಿ ಹುದ್ದೆ ಎಂತಹ ಸ್ಥಾನಮಾನದ್ದು ಎಂಬುದು ಬಹುಶಃ ಅವರಿಗೂ ಸಹ ಗೊತ್ತಿರುವುದಿಲ್ಲ!!


ಹಿಂದಿನ ಯುಪಿಎ ಸರಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ತುಟಿ ಪಿಟಿಕ್ ಎನ್ನದ ಮೌನಿ ಬಾಬಾ ಎಂದು ಬಣ್ಣಿಸುತ್ತಿದ್ದ ಮೋದಿಯವರು ಸ್ವದೇಶದಲ್ಲೇ ಉಳಿದು ಯಾವುದಾದರೂ ಗಂಭೀರ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರ ಬಗ್ಗೆ ಉದಾಹರಣೆಗಳು ಸಿಗುವುದು ತುಂಬಾನೇ ಕಡಿಮೆ. ಅಧಿಕಾರ ಗಳಿಸಿ ಒಂದೂವರೆ ವರ್ಷದ ಮೇಲೆಯಾದರೂ ಅವರು ಜನರಿಗೆ ಟ್ವೀಟ್ ಮತ್ತು ಫೇಸ್‌ಬುಕ್‌ನಲ್ಲಿ ಏಕಮುಖದ ಸಂದೇಶ ನೀಡಿದ್ದಾರೆ ಹೊರತು ಜನರಿಂದ ವ್ಯಕ್ತವಾಗುವ ಅಭಿಪ್ರಾಯಗಳಿಗೆ ಈವರೆಗೆ ಸ್ಪಂದನೆ ನೀಡಿಲ್ಲ. ಈವರೆಗೆ ಒಂದೇ ಒಂದು ಪತ್ರಿಕಾಗೋಷ್ಠಿ ಕೂಡ ಮಾಡದ ಮೋದಿಯವರ ಮನದಾಳದ ಭಾವನೆಗಳನ್ನು ಅರಿಯಬೇಕಿದ್ದರೆ ಪತ್ರಕರ್ತರೂ ಸೇರಿದಂತೆ ಎಲ್ಲರೂ ಅವರ ಮನ್ ಕಿ ಬಾತ್ ಆಲಿಸಬೇಕು. ಸ್ವಿಸ್ ಬ್ಯಾಂಕ್‌ನಿಂದ ಈವರೆಗೆ ಕಪ್ಪುಹಣ ಬಂದಿಲ್ಲ, ಬಡತನ ನಿವಾರಣೆಯಾಗುವ ಪವಾಡ ಇನ್ನೂ ನೆರವೇರಿಲ್ಲ. ‘ಮೇಕ್ ಇನ್ ಇಂಡಿಯಾ’ ಘೋಷಣೆಯಾಗಿದ್ದರೂ ಭಾರತೀಯ ಉತ್ಪನ್ನಗಳಿಗೆ ಮಾನ್ಯತೆ ಸಿಗುತ್ತಿಲ್ಲ. ವಿದೇಶಿ ಬಂಡವಾಳಕ್ಕೆ ಕೆಂಪು ಹೊದಿಕೆ ಹಾಸಲಾಗಿದೆ ಹೊರತು ಸ್ವದೇಶಿ ನಿರ್ಮಿತ ಬೃಹತ್ ಕಾರ್ಖಾನೆ ಅಥವಾ ಸಂಸ್ಥೆ ಸ್ಥಾಪನೆ ಲಕ್ಷಣ ಕಾಣಸಿಗುತ್ತಿಲ್ಲ. ಯುವ ಸಬಲೀಕರಣದ ಸಂದೇಶಕ್ಕೆ ಪೂರಕವಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಹೊರಬರುತ್ತಿರುವ ಯುವಜನರಿಗೆ ಉದ್ಯೋಗಾವಕಾಶ ಸಿಗುತ್ತಿಲ್ಲ. ‘ಭೇಟಿ ಬಚಾವೋ’ ಎಂಬ ಘೋಷಣೆಗೆ ವ್ಯಂಗ್ಯ ಮಾಡುವಂತೆ ಬಾಲಕಿಯರು ಮತ್ತು ಯುವತಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ನಿಂತಿಲ್ಲ. ಸರಕಾರಿ ಕಚೇರಿಗಳಲ್ಲಿ ವ್ಯವಸ್ಥಿತವಾಗಿ ಹುದ್ದೆಗಳು ಕಡಿತಗೊಳ್ಳುವುದರ ಜೊತೆ ನೇಮಕಾತಿ ಸಹ ಆಗುತ್ತಿಲ್ಲ. ಕೃಷಿ ಭೂಮಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದರೆ, ರೈತರಿಗೆ ನೆಮ್ಮದಿ ಮತ್ತು ಸುಭದ್ರ ಬದುಕಿನ ಕನಸು ನನಸಾಗುತ್ತಿಲ್ಲ. ಹವಾಮಾನ ವೈಪರೀತ್ಯದಿಂದ ಪರಿಸರ ಸಮತೋಲನ ತಪ್ಪುತ್ತಿದ್ದರೆ, ಮುಂದಿನ ಪೀಳಿಗೆಗೆ ‘ಇರುವುದೊಂದೇ ಭೂಮಿ’ ಸಂರಕ್ಷಿಸುವ ಮಾತು ಸರಕಾರದಿಂದ ವ್ಯಕ್ತವಾಗುತ್ತಿಲ್ಲ. ಬಹುಶಃ ಇವುಗಳಲ್ಲಿ ಯಾವ ಸಮಸ್ಯೆಯೂ ಕೂಡ ಪ್ರಧಾನಿ ಹುದ್ದೆಗೆ ತಕ್ಕುದಾದ್ದಲ್ಲ. ಅದಕ್ಕಾಗಿಯೇ ಮೋದಿಯವರು ಇವೆಲ್ಲವನ್ನೂ ಪಕ್ಕಕ್ಕೆ ಸರಿಸಿ, ಭಾಹಿಯೊ, ಬೆಹನೋ.... ಎನ್ನುತ್ತ ಬೇರೆಯದ್ದೇ ವಿಷಯ ಮಾತನಾಡುತ್ತಾರೆ. ಇನ್ನೂ ಯಾವುದಾದರೂ ದೇಶದಲ್ಲಿ ಭಯೋತ್ಪಾದನೆ ವಿರುದ್ಧ ಶಾಂತಿಮಂತ್ರ ಜಪಿಸುತ್ತಾ ಇರುತ್ತಾರೆ.

1 comment:

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...