Sunday, November 22, 2015

ಅಂಬೇಡ್ಕರ್ ವಾದದ ವಿಜಯಕ್ಕೆ ಮುಳುವಾಗಿರುವ ದಲಿತರ ಕುರುಡು ಪ್ರೀತಿ.
 
ಡಾ. ಶಿವಕುಮಾರ್
ಯಾರೋ ಹುಚ್ಚ ಎಂಬ ಹೆಸರಿನ ವ್ಯಕ್ತಿ ಡಾ. ಅಂಬೇಡ್ಕರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಎಂದು ಇಂದು ದಲಿತರು ಬೀದಿಗೆ ಬಂದಿದ್ದಾರೆ. ಅವನ ಮುಖಕ್ಕೆ ಮಸಿಯನ್ನು ಬಳಿದು “ಇಂತಹ ದುಷ್ಟಕೃತ್ಯಗಳನ್ನು ಮಾಡುವುದರಲ್ಲಿ ದಲಿತರೂ ಹಿಂದೆ ಬೀಳುವುದಿಲ್ಲ” ಎಂಬುದನ್ನು ಸಾಬೀತುಗೊಳಿಸಿದ್ದಾರೆ. ಭಾರತಕ್ಕೆ ಸರ್ವೋನ್ನತ ಕಾನೂನು ಗ್ರಂಥವನ್ನು ಬರೆದುಕೊಟ್ಟವನ ಮಕ್ಕಳು ನಾವು ಎಂದು ಕಂಡಕಂಡಲೆಲ್ಲಾ ಅಭಿಮಾನದಿಂದ ಹೇಳಿಕೊಳ್ಳುವ ದಲಿತರು ಅಂತಹ ಕಾನೂನನ್ನು ಮನುವಾದಿಗಳಂತೆ ನಾವೂ ಕೈಗೆತ್ತಿಕೊಳ್ಳಬಲ್ಲೆವು. ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಅಂತೂ ಹುಚ್ಚನೊಬ್ಬನ ಮಾತಿಗೆ ಪ್ರಜ್ಞಾವಂತರೆಂದು, ಸಹನಶೀಲರೆಂದು ಹೆಸರಾದ ದಲಿತರು ಬೀದಿಗೆ ಇಳಿದಿದ್ದಾರೆ.


ಡಾ. ಅಂಬೇಡ್ಕರರ ವಿಷಯದಲ್ಲಿ ದಲಿತರು ತೋರುತ್ತಿರುವ ಈ ಪರಿಯ ಪ್ರೀತಿ ಯಾರಿಗೆ ಏನನ್ನು ತಂದು ಕೊಟ್ಟಿದೆಯೋ ಗೊತ್ತಿಲ್ಲ. ಆದರೆ ಆ ಪ್ರೀತಿಯೇ ಅಂಬೇಡ್ಕರ್ ಸಿದ್ಧಾಂತದ ಮರುಸ್ಥಾಪನೆಗೆ ಮುಳುವಾಗಿದೆ! ಆ ಪ್ರೀತಿಯೇ ಅಂಬೇಡ್ಕರರನ್ನು ಮುಖ್ಯವಾಹಿನಿಯಿಂದ ಮತ್ತಷ್ಟು ದೂರ ತಳ್ಳಿ ಅವರನ್ನು ಕೇವಲ “ದಲಿತ ನಾಯಕ”ರನ್ನಾಗಿಸಿದೆ! ಆ ಪ್ರೀತಿಯೇ ಅಂಬೇಡ್ಕರರ ಮಹಾಕನಸುಗಳು ಜಾರಿ ಆಗಲು ಅಡ್ಡಿಯಾಗಿದೆ! ಹೇಗೆನ್ನುವಿರಾ....?

ಇಂದು ಹುಚ್ಚು ಹಿಡಿದವರಂತೆ ಬೀದಿಯಲ್ಲಿ ಪ್ರತಿಭಟಿಸುತ್ತಿರುವ, ವಾಟ್ಸ್‍ಆಪ್, ಫೇಸ್‍ಬುಕ್‍ಗಳಲ್ಲಿ ಕೂಗಾಡುತ್ತಿರುವ ದಲಿತರು “ದಲಿತ ವಿರೋಧಿಗಳಿಗೆ ಧಿಕ್ಕಾರ” ಎಂಬ ಕುಖ್ಯಾತ ಘೋಷಣೆಯನ್ನು ಸಾಮಾನ್ಯವಾಗಿ ಕೂಗುತ್ತಾರೆ. ಇಂತಹ ಘೋಷಣೆಯನ್ನು ಗೋಡೆಗಳ ಮೇಲೆ ಬರೆಯುತ್ತಾರೆ. ಈ ಘೋಷಣೆಯನ್ನು ಓದುವ ದಲಿತರಲ್ಲದ ಜನರ ಮನಸ್ಸಿಗೆ ಯಾವ ಭಾವನೆ ಬರುತ್ತದೆ ಕೊಂಚ ಆಲೋಚಿಸಿ.... “ದಲಿತ ವಿರೋಧಿಗಳಿಗೆ ಧಿಕ್ಕಾರ” ಎಂಬುದನ್ನು ಕೇಳುವ-ಓದುವ ಇತರ ಜಾತಿಯವನಿಗೆ ನನ್ನನ್ನೇ ಇವರು ಬಯ್ಯುತ್ತಿದ್ದಾರೆ ಅನಿಸುವುದಿಲ್ಲವೇ...? ಅವನು ನಿಜವಾಗಿ ದಲಿತ ವಿರೋಧಿಯೋ ಅಲ್ಲವೋ.... ಆದರೆ ಇಂತಹ ಘೋಷಣೆಗಳು ನಿಜವಾಗಿಯೂ ಅವನನ್ನು ದಲಿತ ವಿರೋಧಿಯನ್ನಾಗಿಸುತ್ತವೆ. ಮತ್ತು ಅಂಬೇಡ್ಕರರನ್ನು ಮತ್ತಷ್ಟು ಪ್ರತ್ಯೇಕವಾಗಿಸುತ್ತದೆ. ಅಂಬೇಡ್ಕರರೆಂದರೆ ದಲಿತರಿಗೆ ಮಾತ್ರ, ಅವರಿಂದಾಗಿಯೇ ಇವರಿಗೆ ಈ ಪರಿಯ ಸೊಕ್ಕು ಬಂದಿದೆ ಎಂಬ ಹೆಚ್ಚುವರಿ ಅಭಿಪ್ರಾಯಗಳೂ ಸಹಜವಾಗಿ ಅವರಲ್ಲಿ ಮೂಡಿಯೇ ಮೂಡುತ್ತವೆ.

ಇಂತಹ ಅಭಿಪ್ರಾಯ ಯಾರಿಗೆ ಬರುತ್ತದೋ ಬಿಡುತ್ತದೋ ಗೊತ್ತಿಲ್ಲ.... ಆದರೆ ಮನುವಾದಿಗಳಿಂದ ದಲಿತರಷ್ಟೇ ಶೋಷಣೆಗೊಳಾಗಾಗುತ್ತಿರುವ ಹಿಂದುಳಿದ ಜಾತಿಗಳಿಗೆ, ಮುಸಲ್ಮಾನ-ಕ್ರೈಸ್ತರಿಗೆ ಇಂತಹ ಅಭಿಪ್ರಾಯ ಬಂದಿತೆಂದರೆ ಅದು ಸ್ವತಃ ದಲಿತರಿಗೇ ಅಪಾಯಕರವಾಗಿ ಪರಿಣಮಿಸುತ್ತದೆ! ಇಂತಹ ಸಾರಸಗಾಟದ ಘೋಷಣೆಗಳು ಸಾಮಾನ್ಯವಾಗಿ ದಲಿತರಲ್ಲದ ಎಲ್ಲ ಜಾತಿಯ ಜನರನ್ನೂ ನೋಯಿಸುತ್ತವೆ. ಇಂತಹ ಇರುಸು-ಮುರುಸಿನಿಂದಾಗಿ ಅವರು ದಲಿತರಿಂದ ಮತ್ತಷ್ಟು ದೂರವಾಗತೊಡಗುತ್ತಾರೆ. ದಲಿತರು ಈಗಾಗಲೇ ಸಮಾಜದಲ್ಲಿ ಎಲ್ಲರಿಂದ ದೂರವಿದ್ದಾರೆ. ಇವರು ಅಪಾರವಾಗಿ ಪ್ರೀತಿಸುವ ಅಂಬೇಡ್ಕರ್ ಕೂಡ ದಲಿತರ ಜೊತೆಯಲ್ಲೇ ಉಳಿದು ಇತರ ಕೇರಿಗಳಿಗೆ ಹೋಗಲಾಗಿಲ್ಲ. ಇಂತಹ ಹೊತ್ತಿನಲ್ಲಿ ದಲಿತರು ಬೀದಿಗಿಳಿದು ಹುಚ್ಚಾಬಟ್ಟೆ ವರ್ತಿಸುವುದು, ದಲಿತ ವಿರೋಧಿಗಳಿಗೆ ಧಿಕ್ಕಾರ ಎಂದು ಕೂಗುವುದು....ಏನು ಪರಿಣಾಮ ಉಂಟುಮಾಡುತ್ತದೆ ಬಲ್ಲಿರಾ....? ಇದರಿಂದ ದಲಿತರಿಗೇ ನಷ್ಟವಾಗುತ್ತದೆ.

ಅಷ್ಟೇ ಅಲ್ಲ, ಹುಚ್ಚು ಅಭಿಮಾನದಿಂದ ಈ ದಲಿತರು ಪ್ರತಿಭಟನೆಯ ಸಂದರ್ಭಗಳಲ್ಲಿ ಡಾ. ಅಂಬೇಡ್ಕರರನ್ನು “ದಲಿತ ಸೂರ್ಯ”, “ದಲಿತೋದ್ಧಾರಕ”, “ದಲಿತ ಸಿಂಹ”, “ದೀನ-ದಲಿತರ ನಾಯಕ” ಇತ್ಯಾದಿ ಹೆಸರುಗಳಿಂದೆಲ್ಲಾ ಕರೆಯ ತೊಡಗುತ್ತಾರೆ. ಈ ಘೋಷಣೆಗಳು ದಲಿತರಲ್ಲದ ಇತರ ಜಾತಿಯವರ ಮೇಲೆ ಏನು ಪರಿಣಾಮ ಬೀರುತ್ತವೆ ಬಲ್ಲಿರಾ....? ಯಾವ ಅಂಬೇಡ್ಕರರನ್ನು ದಲಿತರು ತಮ್ಮ ಪ್ರಾಣದಷ್ಟು ಪ್ರೀತಿಸುತ್ತಾರೋ....ಅದೇ ಅಂಬೇಡ್ಕರ್ ಎಲ್ಲರಿಂದ ದೂರವಾಗುತ್ತಾರೆ. ದಲಿತ ಕೇರಿಗಳಿಗೆ ಮಾತ್ರ ಸೀಮಿತವಾಗುತ್ತಾರೆ.

ಇಂತಹ ಒಡಕಿನ ಕೆಲಸಗಳಿಂದ ದಲಿತರು ಏಳ್ಗೆ ಹೊಂದಲು ಸಾಧ್ಯವೇ...? “ನನ್ನ ಜನ ಈ ದೇಶದ ಆಳುವ ದೊರೆಗಳಾಗಬೇಕು” ಎಂಬ ಅಂಬೇಡ್ಕರರ ಮಹಾದಾಸೆಯನ್ನು ಇವರು ಈಡೇರಿಸಲು ಸಾಧ್ಯವೇ...? ಆಳುವ ವರ್ಗವಾಗಬೇಕಾದವರು ತನ್ನ ಅಕ್ಕ ಪಕ್ಕದ ಸಮುದಾಯಗಳನ್ನು ಕೂಡಿಸಿ, ಜೋಡಿಸಿಕೊಳ್ಳಬೇಕೇ ಹೊರತು ದೂರಮಾಡಿಕೊಳ್ಳಬಾರದು. ದುರಂತ. ದಲಿತರ ಕುರುಡು ಪ್ರೀತಿ ಅವರನ್ನು ಎಲ್ಲರಿಂದ ಪ್ರತ್ಯೇಕವಾಗಿಸಿದೆ. ಅವರ ಪ್ರೀತಿಯ ಅಂಬೇಡ್ಕರರನ್ನು ಏಕಾಂಗಿಯಾಗಿಸಿದೆ.

1950 ರಲ್ಲಿ ಸಂವಿಧಾನ ಜಾರಿಯಾದ ನಂತರ ದಲಿತರು ಸಣ್ಣ ಪುಟ್ಟ ಹುದ್ದೆಗಳನ್ನು, ಅವಕಾಶಗಳನ್ನು ಪಡೆದುಕೊಳ್ಳುತ್ತಿರುವುದು, ಕೆಲವು ದಲಿತರಾದರೂ ಒಳ್ಳೆಯ ಜೀವನ ನೆಡೆಸುತ್ತಿರುವುದು ಸಹಜವಾಗಿ ದಲಿತರಿಗಿಂತ ಮೇಲಿನವರಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. ಎಂತಲೇ ಮೀಸಲಾತಿಯ ಬಗೆಗೆ ಬಹುತೇಕ ಮುಂದುವರಿದ ಜಾತಿಗಳಿಗೆ ವಿರೋಧಿಯಾದ ಅಭಿಪ್ರಾಯವೇ ಇಂದಿಗೂ ಇದೆ. ಇಂತಹ ಮೀಸಲಾತಿಗೆ ಕಾರಣಕರ್ತರಾದ ಅಂಬೇಡ್ಕರರ ಬಗೆಗೂ ಒಳಗೊಳಗೆ ಕೋಪ ಇರುವುದು ಸುಳ್ಳಲ್ಲ. ಇಂತಹ ಹೊತ್ತಿನಲ್ಲಿ, ಎಲ್ಲರೂ ದಲಿತರ ಬಗ್ಗೆ, ದಲಿತರ ಹಕ್ಕುಗಳ ಬಗ್ಗೆ ಅಸಹನೆ ಹೊಂದಿರುವ ಅಪಾಯಕಾರಿ ಹೊತ್ತಿನಲ್ಲಿ, ದಲಿತರು ಏನು ಮಾಡಬೇಕು?

ಇಂತಹ ಅಪಾಯದ ಹೊತ್ತಿನಲ್ಲಿ ದಲಿತರು ಅಪಾರವಾದ ಸಂಯಮವನ್ನು ಪ್ರದರ್ಶಿಸಬೇಕಾಗುತ್ತದೆ. ದಲಿತರ ಹಕ್ಕು-ಅಧಿಕಾರಗಳ ಬಗೆಗೆ ಅಸಹನೆ ಹೊಂದಿರುವವರಿಗೆ ನಿಧಾನವಾಗಿಯಾದರೂ ಕಣ್ಣು ತೆರೆಸುವ ಕೆಲಸವನ್ನು ಮಾಡಬೇಕಾಗುತ್ತದೆ. ಅಂಬೇಡ್ಕರರನ್ನು ಬೇರೆಯವರಿಗೆ ಪರಿಚಯ ಮಾಡಿಕೊಟ್ಟು ಅವರಿಗೆ ಅಂಬೇಡ್ಕರರಿಂದ ಭಾರತದ ಶೇ. 100ರಷ್ಟು ಜನರಿಗೆ ಹೇಗೆ ಲಾಭವಾಗಿದೆ, ಎಷ್ಟು ಅನುಕೂಲವಾಗಿದೆ ಎಂಬುದನ್ನು ಎಡೆಬಿಡದೆ ಹೇಳಿಕೊಡಬೇಕಾಗಿದೆ. ಇದು ಸಾಮಾನ್ಯ ಕೆಲಸವಲ್ಲ! ಇದಕ್ಕಾಗಿ ದಲಿತರು ಇಂದು ಬಹಳ ಕಷ್ಟಪಡಬೇಕಾಗಿದೆ. ತಮ್ಮ ಸಮಯ, ಬುದ್ಧಿ-ಹಣವನ್ನು ಖರ್ಚು ಮಾಡಬೇಕಾಗಿದೆ. ಹಾಗಲ್ಲದೆ ಇವರು “ಬಹುಜನ”ರಾಗುವುದು ಕಷ್ಟವಾಗುತ್ತದೆ. ಇವರು “ಬಹುಜನ”ರಾಗದೆ ಅಂಬೇಡ್ಕರರ “ದೇಶ ಆಳುವ” ಕನಸು ಎಂದಿಗೂ ನನಸಾಗುವುದಿಲ್ಲ. ಇದು ಪ್ರಜಾಪ್ರಭುತ್ವ. ಇಲ್ಲಿ ಸಂಖ್ಯೆಗೇ ಬೆಲೆ. ನಮ್ಮ ಸಂಖ್ಯೆಯನ್ನು ದೊಡ್ಡದು ಮಾಡಿಕೊಳ್ಳದೆ ಹಾದಿ-ಬೀದಿಯಲ್ಲಿ ಎಷ್ಟು ಪೌರುಷ ತೋರಿಸಿದರೂ ಉಪಯೋಗವಿಲ್ಲ. ಕೇವಲ ಮೂರುವರೆ ಪರ್ಸೆಂಟ್ ಇರುವ ಬ್ರಾಹ್ಮಣರು ಹೇಗೆ ಎಲ್ಲ ಸಮುದಾಯಗಳನ್ನೂ ತಮ್ಮೊಟ್ಟಿಗೆ ಬೆಸೆದುಕೊಂಡಿದ್ದಾರೆ? ಇದು ನಮಗೆ ಪಾಠವಾಗಬೇಡವೇ...? ಕಳೆದ ಮೂವತ್ತು-ನಲವತ್ತು ವರ್ಷಗಳಿಂದ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುವುದೇ...?
ಮಹತ್ತರವಾದುದನ್ನು ಪಡೆದುಕೊಳ್ಳಬೇಕೆನ್ನುವವರು ಸಣ್ಣ ಪುಟ್ಟ ವಿಷಯಗಳಲ್ಲಿ ಸೋಲಬೇಕಾಗುತ್ತದೆ. ಕೋಪ ಬಂದಾಗ ಒಳನುಂಗಿಕೊಳ್ಳಬೇಕಾಗುತ್ತದೆ. ದಲಿತರು ಇಂದು ಹೀಗೆ ಮಾಡದಿದ್ದರೆ ಎಂದಿಗೂ ಅವರು “ಕೇವಲ ದಲಿತರಾಗಿ”ಯೇ ಉಳಿಯಬೇಕಾಗುತ್ತದೆ. ಇವರು ಸದಾ ಬೀದಿಯಲ್ಲೇ ನಿಲ್ಲುವ ಜನರಾಗಬೇಕೆಂದು ಬಯಸಿದರೆ ಹೇಗಾದರೂ ಬಯ್ಯಲಿ, ಯಾರನ್ನಾದರೂ ಎಂತಹ ಮಾತುಗಳಿಂದಾದರೂ ನೋಯಿಸಲಿ. ಅದರೆ ಇವರು ಆಳುವ ಜಾಗಗಳಿಗೆ ಬರಬೇಕೆಂದು ಬಯಸುವುದಾದರೆ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಕೆಲವರು ಪ್ರಶ್ನೆ ಎತ್ತಬಹುದು: ಹಾಗಾದರೆ ಅಂಬೇಡ್ಕರರನ್ನು ನಿಂದಿಸಿದರೆ ನಾವು ಸುಮ್ಮನಿರಬೇಕೇ ಎಂದು! ಸುಮ್ಮನಿರಬೇಕಾದ ಅಗತ್ಯವಿಲ್ಲ. ಯಾವನು ನಿಂದಿಸುತ್ತಾನೋ ಅಂತಹವನೊಬ್ಬನಿಗೆ ಶಿಕ್ಷೆಯಾಗುವಂತೆ ಕಾನೂನು ರೀತ್ಯಾ ಹೋರಾಡಿದರೆ ಬಹುಶಃ ಸಾಕು. ಅಷ್ಟಕ್ಕೂ ನಿಂದಿಸುವವರ ಎಲ್ಲ ಬಾಯಿಗಳನ್ನು ನಾವು ಮುಚ್ಚಲು ಸಾಧ್ಯವಿಲ್ಲ. ಬಹುಶಃ ಗಾಂಧಿಯಷ್ಟು ನಿಂದನೆಗೊಳಗಾಗುತ್ತಿರುವ ವ್ಯಕ್ತಿ ಜಗತ್ತಿನಲ್ಲೇ ಇಲ್ಲ! ಆದರೂ ಅವರ ಅನುಯಾಯಿಗಳೇನೂ ತಲೆಕೆಡಿಸಿಕೊಂಡಿಲ್ಲ. ಅನ್ನುವವರು ಸಾವಿರ ಅನ್ನಲಿ.....ಅವರು ಮಾತ್ರ ಶಿಸ್ತಾಗಿ ಗಾಂಧಿಯನ್ನು ಪಾರ್ಲಿಮೆಂಟ್, ವಿಧಾನಸಭೆಗಳಂತಹ ದೊಡ್ಡ ಅಧಿಕಾರ ಕೇಂದ್ರಗಳಲ್ಲಿಟ್ಟು ಎಲ್ಲರೂ ತಾವಾಗಿಯೇ ಗೌರವಿಸುವಂತೆ ಮಾಡುತ್ತಿದ್ದಾರೆ! ಆದರೆ ದಲಿತರೇನು ಮಾಡುತ್ತಿದ್ದಾರೆ? ಅಂಬೇಡ್ಕರರನ್ನು ಬೀದಿಯಲ್ಲಿ ನಿಲ್ಲಿಸಿಕೊಂಡು ನೀವೆಲ್ಲ ನಮ್ಮ ಅಂಬೇಡ್ಕರರನ್ನು ಗೌರವಿಸಿ ಎಂದು ಗೋಗರೆಯುತ್ತಿದ್ದಾರೆ. ಇದು ದಡ್ಡತನವಲ್ಲದೆ ಇನ್ನೇನು? ಪಾರ್ಲಿಮೆಂಟ್‍ನಂತಹ ಜಾಗಗಳಲ್ಲಿ ಅಂಬೇಡ್ಕರರೂ ಪ್ರತಿಷ್ಠಾಪಿಸಲ್ಪಟ್ಟಾಗ ಅವರಿಗೆ ಸಿಗುವ ಗೌರವ ಸಿಕ್ಕಿಯೇ ಸಿಕ್ಕುತ್ತದೆ.

ಇಷ್ಟಕ್ಕೂ ಇಂದು ಅಂಬೇಡ್ಕರರಿಗೆ ಅವಮಾನವಾಯಿತೆಂದು ಕೂಗಾಡುತ್ತಿರುವವರಲ್ಲಿ ಕೆಲವರು ತಮ್ಮ ಬದುಕಿನಲ್ಲಿ ಅಂಬೇಡ್ಕರರ ವಿಚಾರವನ್ನು ಅಳವಡಿಸಿಕೊಂಡವರಲ.್ಲ ಅವರಷ್ಟು ಶುದ್ಧವಾಗಿ ಸ್ವಾಭಿಮಾನದಿಂದ ಬದುಕುವವರಲ್ಲ. ಜೀವನಪೂರ ಕಾಂಗ್ರೆಸ್-ಬಿಜೆಪಿಗಳೆಂಬ ಮನುವಾದಿ ಪಕ್ಷಗಳಲ್ಲಿ ದುಡಿದು ಸ್ವತಃ ಅಂಬೇಡ್ಕರರಿಗೆ ಮೋಸ ಮಾಡುವ ಬಹುತೇಕ ದಲಿತರಿದ್ದಾರೆ. ಮನುವಾದಿಗಳು ಅಂಬೇಡ್ಕರರಿಗೆ ಗೊತ್ತಿದ್ದೇ ಅವಮಾನಿಸಿದರೆ, ಇವರು ತಮಗರಿವಿಲ್ಲದಂತೆ ಅವಮಾನಿಸುತ್ತಿರುತ್ತಾರೆ. ದುರಂತವೆಂದರೆ ಈ ಜನರೇ ಅಂಬೇಡ್ಕರರ ಮಾನ ಕಾಪಾಡುವವರಂತೆ ಬೀದಿಗೆ ಬಂದು ಕೂಗಾಡುತ್ತಾರೆ. ಇಂತಹ ಬೆರಳೆಣಿಕೆಯ ಜನರಿಂದ ಇಂದು ಇಡೀ ದಲಿತ ಸಮುದಾಯ ಎಲ್ಲರಿಂದ ದೂರಾಗಬೇಕಾದ ಸನ್ನಿವೇಶ ಬಂದಿದೆ. ಪ್ರಾಮಾಣಿಕರೂ, ಕಳಕಳಿವುಳ್ಳ ದಲಿತರೂ ಇವರಿಂದಾಗಿ ತಲೆತಗ್ಗಿಸಬೇಕಾಗಿದೆ.

ದಯಾಮಾಡಿ ದಲಿತರು ಇಂತಹ ಸಣ್ಣ ಪುಟ್ಟ ವಿಷಯಗಳಲ್ಲಿ ಬೀದಿಗೆ ಬರುವುದನ್ನು ನಿಲ್ಲಿಸೋಣ. ನಮ್ಮ ಸಮಯ-ಬುದ್ಧಿ-ಹಣವನ್ನು ವ್ಯರ್ಥವಾಗಲು ಬಿಡದೆ ಆಳುವ ದೊರೆಗಳಾಗುವತ್ತಾ ಖರ್ಚು ಮಾಡೋಣ......

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...