Tuesday, November 17, 2015

’ಯುವ ಬರಹಗಾರರ ಹಾಗೂ ಕಲಾವಿದರ ಒಕ್ಕೂಟ’ಕ್ಕಾಗಿ ಮೊದಲ ಮಾತು


ಯುವ ಪೀಳಿಗೆ, ಅದರಲ್ಲೂ ಸೂಕ್ಷ್ಮ ಮನಸು ಹೊಂದಿರುವ ಬರಹಗಾರ-ಕಲಾವಿದರು ಯಾವುದೇ ಸಮಾಜದ ನಾಳೆಯನ್ನು ನಿರ್ಧರಿಸುವ ಗುಂಪು. ನಿನ್ನೆಯನ್ನು ನಾಳೆಗೆ ಧಾವಿಸುತ್ತ ಒಯ್ಯಬೇಕಾದ ಆ ಜೀವಗಳು ಕಾಲಾತೀತತೆಯನ್ನು ಅನುಭವಿಸುವ ವಿಶಾಲ ಹೃದಯಗಳೂ ಹೌದು. ಆದರೆ ಧರ್ಮ ರಾಜಕಾರಣ ಮತ್ತು ಅರ್ಥ ರಾಜಕಾರಣಗಳು ಸಮಾಜದ ನೇಯ್ಗೆಯನ್ನು ಆಮೂಲಾಗ್ರ ಬದಲಾಯಿಸಹೊರಟಿರುವ ಈ ದಿನಗಳಲ್ಲಿ ತರುಣ ಪೀಳಿಗೆ ತಲ್ಲಣಗೊಂಡಂತೆ ಕಂಡುಬರುತ್ತಿದೆ. ಬದಲಾಗುತ್ತಿರುವ ಮೌಲ್ಯವ್ಯವಸ್ಥೆ, ಭಾಷೆ, ಜೀವನ ಕ್ರಮ, ಆದ್ಯತೆಗಳು ತರುಣ ಪೀಳಿಗೆಗೆ ಹಿರಿಯ ತಲೆಮಾರಿನೊಡನೆ ಸಂವಾದದ ಅವಕಾಶವನ್ನೂ ಸಂಕುಚಿತಗೊಳಿಸಿದೆ. ಹೊಸದಕ್ಕೆ ತುಡಿಯುತ್ತ ತನ್ನನ್ನು ತಾನು ಪರಂಪರೆಗೆ ಶರಣಾಗಿಸಲೂ ಆಗದ, ಅದೇ ವೇಳೆ ತನ್ನದಾದ ಹೊಸದನ್ನು ಕಟ್ಟಿಕೊಳ್ಳಲೂ ಕಷ್ಟವೆನಿಸುವ ಸಂಕ್ರಮಣ ಕಾಲವನ್ನು ಆ ಪೀಳಿಗೆ ಹಾದು ಬರುತ್ತಲಿದೆ. ಪರಂಪರೆಯೊಡನೆ ತಿಕ್ಕಾಟವಿಟ್ಟುಕೊಂಡೇ ಅದನ್ನು ವರ್ತಮಾನವಾಗಿ ಅರಗಿಸಿಕೊಂಡು ಸಮಕಾಲೀನಕ್ಕೆ ತುಡಿಯಬೇಕಾದ ಸಂಘರ್ಷಮಯ ಪರಿಸ್ಥಿತಿಯಲ್ಲಿ ಯುವ ಮನಸುಗಳಿವೆ.

ಜಾಗತಿಕ ಭಾಷೆಯೆದುರಿಗೆ ಸ್ಥಳೀಯ ಭಾಷೆಯ ಪ್ರಾಮುಖ್ಯತೆಯೇನೆಂದು ಅರಿಯಬೇಕಾದುದರ ಜೊತೆಗೆ ಇವತ್ತು ತರುಣ ಪೀಳಿಗೆಯ ಎದುರಿರುವ ಆಯ್ಕೆ, ಮಾದರಿ, ಅವಕಾಶಗಳಾದರೂ ಎಂಥವು? ರಾಜಕಾರಣ, ಸಮಾಜಸೇವೆ, ಚಳುವಳಿ, ಸಾಹಿತ್ಯ, ಕಲೆ - ಎಲ್ಲ ಕಡೆಯೂ ಸಾಮಾಜಿಕತೆಗಿಂತ ಮನುಷ್ಯನ ವೈಯುಕ್ತಿಕ ಎಕ್ಕರಲಾಟವೇ ಪ್ರಧಾನವಾಗಿದೆ. ಕೀರ್ತಿಗಾಗಿ ಎಲ್ಲವನ್ನು ಮಾರಾಟ ಮಾಡಲು ಸಿದ್ದವಿರುವ, ಹೇಗಾದರೂ ತನ್ನ ಅಸ್ತಿತ್ವವನ್ನು, ಪ್ರಾಮುಖ್ಯತೆಯನ್ನು ಬಿಂಬಿಸಿಕೊಳ್ಳಲು ರಾಜಿಗಿಳಿಯುವ ಆಷಾಢಭೂತಿತನವು ‘ಜಾಣತನ’ವೆಂದು ಭಾವಿಸಲಾಗುತ್ತಿದೆ. ಅಸಹನೆಯೇ ವೇಗ, ದುಡುಕುತನವೇ ತೀವ್ರತೆಯೆಂದು ಕರೆಸಿಕೊಳ್ಳುತ್ತಿವೆ. ತಮ್ಮದೆ ಗುಂಪುಗಳ ಜಾಲ ಕಟ್ಟಿಕೊಂಡರಷ್ಟೆ ಬೆಳೆಯಲು ಸಾಧ್ಯ ಎಂಬ ಧಾವಂತ ಎಲ್ಲರಲ್ಲಿ ಎದ್ದು ಕಾಣುತ್ತಿದೆ. ಹೀಗಿರುತ್ತ ಸಂವಹನದಷ್ಟೇ ಸಹನೆಯೂ ಮುಖ್ಯ; ಜ್ಞಾನದಷ್ಟೇ ಮಾನವೀಯತೆಯೂ ಮುಖ್ಯ; ತಂತ್ರಜ್ಞಾನದಷ್ಟೆ ಸಂಬಂಧಗಳ ತಂತುವನ್ನು ಜೀವಂತ ಉಳಿಸಿಕೊಳ್ಳುವುದೂ ಮುಖ್ಯ; ಪ್ರೀತಿ ಕರುಣೆಗಳೇ ಜೀವದ್ರವ್ಯ, ದಿಟ್ಟತನವೇ ದಾರಿ ಎಂಬ ಅರಿವು ಮೂಡುತ್ತ ತರುಣ ಪೀಳಿಗೆಯ ಬದುಕು ಅರಳಬೇಕಾಗಿದೆ. ತನ್ನಿಷ್ಟದ ಬದುಕು ರೂಪಿಸಿಕೊಳ್ಳಬೇಕಾದರೆ ನನ್ನಂತೆ ಚಿಂತಿಸುವ ಹತ್ತು ಸಮಸ್ತರೊಡನೆ ಸಾಗಬೇಕಾದ, ಸಂವಹನ ನಡೆಸಬೇಕಾದ ಅನಿವಾರ್ಯತೆಯಿದೆ. ಆರೋಗ್ಯವಂತ, ಪ್ರಗತಿಪರ ಸಮ ಸಮಾಜ ಕಟ್ಟುವ ಆಶಯದೊಂದಿಗೆ ಯುವ ಸಮೂಹ ಎದ್ದುಬರಬೇಕಿರುವುದು ಈ ಹೊತ್ತಿನ ತುರ್ತೂ ಆಗಿದೆ. ಸಮಾಜದ ಸಂಘರ್ಷಗಳಿಗೆ ಮುಖಾಮುಖಿಯಾಗದೆ ಲಾಲಸೆಯ ‘ನೀರೋ’ತನ ಬೆಳೆಸಿಕೊಂಡಿರುವ ಸಮೂಹದಲ್ಲಿ ಹೊಸ ಅರಿವು ಬಿತ್ತುವ; ಬರೆಹ-ಬದುಕುಗಳು ಒಂದೇ ಎಂದು ಭಾವಿಸುವ ಚೇತನಗಳು ಒಂದುಗೂಡಬೇಕಾಗಿದೆ.

ಆದ್ದರಿಂದ ಗುಂಪುಗಳಲ್ಲಿ, ಜಂಗುಳಿಯಲ್ಲಿ, ವಾದವಿವಾದದ ಭುಗಿಲುದಿಗಿಲುಗಳಲ್ಲಿ, ಏರು ಯೌವ್ವನದ ಹುಮ್ಮಸದ ಪ್ರತಿಕ್ರಿಯೆಗಳಲ್ಲಿ ದಾರಿಯೂ, ಆಯ್ಕೆಯೂ ತಪ್ಪದಂತೆ ಜಾಗರೂಕವಾಗಿರಬೇಕಾದ ತುರ್ತು ಹಿಂದೆಂದಿಗಿಂತ ಇಂದು ಯುವ ಬರಹಗಾರ-ಕಲಾವಿದರಿಗೆ ಹೆಚ್ಚಿದೆ. ಜಾತಿ/ಧರ್ಮ/ಲಿಂಗ/ವರ್ಗ/ಭಾಷೆ/ಪ್ರಾಂತ್ಯ/ಉದ್ಯೋಗ ಇವೇ ಮೊದಲಾದ ಮಾನವ ಚೇತನವನ್ನು ಕಟ್ಟಿಹಾಕಿರುವ ಬೇಲಿಗಳ ದಾಟಿ ನೆಗೆಯುವ ತುರ್ತು ಸೂಕ್ಷ್ಮ ಚೇತನಗಳಿಗಿದೆ.

ಆದರೆ ನೆನಪಿಡುವ, ಹಣತೆಗಳೆಂದೂ ಕತ್ತಲ ಕುರಿತು ದೂರುವುದಿಲ್ಲ..

‘ಮಾಡಲು ಇರುವುದಾದರೂ ಏನು ಎಂದು ಕೇಳುವವರ ಕೈಯಲ್ಲಿ ಒಂದು ಹಚ್ಚಿದ ಹಣತೆಯನ್ನಿಡು, ಹೀಗೆ..’ ಎನ್ನುವ ರೂಮಿಯ ಸಾಲುಗಳು; ’ಹೊರಟು ನಿಂತವರ ಬೊಗಸೆಯಲ್ಲಿ ಹಣತೆ ಹಚ್ಚಿಡು; ಕತ್ತಲು ಅವರ ಹಾದಿ ತಪ್ಪಿಸಲಾರದೆಂಬ ಸಮಾಧಾನವಾದರೂ ನಿನಗಿರುವುದು’ ಎಂಬ ದ್ವಿಪದಿ ನೆನಪಿಸಿಕೊಳ್ಳುತ್ತ ಈಗ ‘ಯುವ ಬರಹಗಾರರ ಹಾಗೂ ಕಲಾವಿದರ ಒಕ್ಕೂಟ’ ಎಂಬ ಜಗಲಿ ರೂಪುಗೊಳ್ಳುತ್ತಿದೆ. ಪರಸ್ಪರ ಮೂದಲಿಕೆ, ದ್ವೇಷಕ್ಕೆ ಇಲ್ಲಿ ಅವಕಾಶವಿಲ್ಲ. ನನ್ನದನ್ನೇ ಎತ್ತಿಹಿಡಿವ ಆತ್ಮಕೇಂದ್ರಿತ ಯೋಚನೆಗಳಿಗೆ, ಗುಂಪುಗಾರಿಕೆಗೆ ಇಲ್ಲಿ ಅವಕಾಶವಿರುವುದಿಲ್ಲ. ದಾರಿಗೆ ಮುಳ್ಳು ತಂದು ಸುರಿಯದೆ, ಜೊತೆಜೊತೆ ನಡೆಯುವವರ ಹಾದಿ ಇದು. ಎಲ್ಲ ಒಂದೆನುವ, ಒಂದುತನದ ಭಾವವಿರುವವರೆಲ್ಲ ಒಂದಾಗಿ, ಒಂದರೊಳಗೊಂದೇ ಆಗಿ ಒಗ್ಗೂಡಬಹುದಾದ ವೇದಿಕೆ ಇದು.

ಹಿಂದಕ್ಕೆ ಜಗ್ಗುವವರ ದಾಳವಾಗದೆ, ವಿಭಜಿಸುವವರ ಕೈಯ ಸೀಳಾಗದೆ, ಭೂತಕ್ಕೆ ಜೋತುಬೀಳಿಸುವ ಕುರುಡು ಸಂಪ್ರದಾಯಗಳಿಗೆ ಬೆನ್ನು ಬಾಗದೆ, ವರ್ತಮಾನದ ಕಣ್ಣೋಟದಲ್ಲಿ ಹೊಸಹೆಜ್ಜೆ ಮೂಡಿಸುವ ಹಾದಿಯನ್ನು ನಾವೇ ನಿರ್ಮಿಸಿಕೊಳ್ಳಬೇಕಾಗಿದೆ. ಪ್ರಗತಿಪರ ಆಶಯದೊಂದಿಗೆ ನಮ್ಮ ಬರಹ ಹೊಸ ನುಡಿಕಟ್ಟು, ಭಿನ್ನಶೈಲಿಯೊಂದಿಗೆ ಈಗಿನ ಮಗ್ಗುಲನ್ನು ದಾಟಿ ಹೊರಳಿಕೊಳ್ಳಬೇಕಿದೆ. ಬರಹಗಾರ ಶಾಶ್ವತ ಬಂಡಾಯಗಾರ ಎನ್ನುವ ಹಿಂದಿನವರ ಮಾತು ಮರೆಯದೇ, ಪ್ರೀತಿ ಮತ್ತು ಪ್ರತಿಭಟನೆಗಳು ಬರಹಗಾರನ ಜೀವಾಳ ಎಂಬ ಸಾಮಾಜಿಕ ಎಚ್ಚರದೊಂದಿಗೆ ನಮ್ಮ ಅಸ್ಮಿತೆಯನ್ನು ನಿಗಿನಿಗಿಸಿಕೊಳ್ಳಬೇಕಿದೆ..

ಇದು ಪ್ರಾಥಮಿಕ ಹೆಜ್ಜೆ. ಸದ್ಯಕ್ಕೆ ಅನಿಸುತ್ತಿರುವುದು ಇಷ್ಟು. ಇದಕ್ಕೆ ನಿಮ್ಮ ಅಭಿಪ್ರಾಯಗಳೂ ಸೇರ್ಪಡೆಯಾಗುವುದು ಬಾಕಿಯಿದೆ. ಸಮಯ ತಗೊಂಡರೂ ಪರವಾಯಿಲ್ಲ, ಸಹಜೀವಿಗಳ ಜೊತೆ ಚರ್ಚಿಸಿ ಈ ಒಕ್ಕೂಟಕ್ಕೆ ಒಂದು ಸ್ಪಷ್ಟರೂಪ ಕೊಡೋಣ. ನಿಮ್ಮ ಅನಿಸಿಕೆ ತಿಳಿಸಿ..
-ಬಸೂ


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...