Monday, November 09, 2015

ರೇಣುಕಾ ರಮಾನಂದ ಎರಡು ಕವಿತೆಗಳು

1.
ಬರೆಯಬೇಕು ಏನಾದರೂ


ಇತ್ತೀಚೆಗೆ ಏನು ಬರೆದೆ....?
ಕೇಳುತ್ತಿದ್ದಾರೆ ಕುತೂಹಲಿಗಳು
ಭೇಟಿಯಾಗಿಯೇ ಕೇಳಬೇಕೆಂದಿಲ್ಲ
ಹೇಗೂ ಫೋನಿದೆಯಲ್ಲ
ಬಿಸಿ ಬಿಸಿ ಅಡುಗೆ ಬಡಿಸುತ್ತ,ತೊಳೆಯುತ್ತ,
ಒರೆಸಿ ಎತ್ತಿಡುತ್ತಲೇ ಉತ್ತರಿಸುತ್ತೇನೆ
ಬರೆದಿಲ್ಲ ಇನ್ನೂ.....
ಬರೆಯಬೇಕು ಏನಾದರೂ ...
ಈ ದೀಪಾವಳಿಗೆ ಚಿತ್ತಾಲರು ಕರೆದಿದ್ದಾರೆ
'ಹನೇಹಳ್ಳಿಗೆ ಹೀಗೆ ಬನ್ನಿ'ಎಂದು
ಕಾಯುತ್ತಿದೆ ಪ್ರತಿಭಾರ 'ಆಹಾ ಪುರುಷಾಕಾರಂ' 'ನಾವು ಹುಡುಗಿಯರೆ ಹೀಗೆ' ಜೊತೆಗೊಂದು 'ಕಾಫಿ ಹೌಸ್'
ಬಚ್ಚಲು ತಿಕ್ಕುವುದನ್ನು ಬೇಗ ಬೇಗ ಮುಗಿಸಿ
ಓದಿನ ಓಣಿಯಲಿ ಊರಿನ ದಾರಿ ಸವೆಸಬೇಕು;ಎಷ್ಟೊಂದು ಓದು ಬಾಕಿ ಇದೆ
ಅವಸರಿಸುತ್ತಿದ್ದೇನೆ ಮೆಟ್ಟುಗತ್ತಿಯ ಮೇಲೆ
ತಾಜಾ ಬೆಳ್ಳುಂಜೆ,ಸಮದಾಳೆ ಮೀನುಗಳ
ತಲೆ ಕತ್ತರಿಸುತ್ತ
ತಿಂಗಳ ಹಿಂದಷ್ಟೆ ಅವ್ವ ಬಹಳ ನೆನಪು
ಮಾಡುತ್ತಾಳೆಂದು ತಂದು ನೆಟ್ಟ
ಪಚ್ಚೆಕದಿರಿನ ಗಿಡಕ್ಕೆ ಎರಡೇ ಎರಡು
ಎಲೆ ಬಿಟ್ಟು ಮಧ್ಯ ಘಂ ಎಂಬೋ ಒಂದು
ಕದಿರು ಒಗಾಯ್ಸಿ ಮೂರು ದಿನವಾಗಿದೆ
ಅಂಗಳ ತುಂಬಾ ತೊಯ್ದು ತೊಪ್ಪೆಯಾಗಿಸಿದ
ಘಮಲು ಒಳಗೂ ಹೊಕ್ಕಿ ಸಕತ್ತು
ಬರಕತ್ತಾಗಿದೆ
ಹಿತ್ತಲ ಕೆಲಸ ಬೇಗ ಬೇಗ ಮುಗಿಸಿ
ಒಳಬಂದು ಆಘ್ರಾಣಿಸಬೇಕು ಒಮ್ಮೆ
ಪಕ್ಕೆಲವು ಬಿರಿಯುವಂತೆ
ಅದೇ ಖುಷಿಯಲ್ಲಿ ಬರೆದುಬಿಡಬೇಕು
ಏನಾದರೂ....
ಈ ರಜೆಯಲ್ಲಿ 'ಮಾಲ್'ಗೆ ಹೋದಾಗಲೊಮ್ಮೆ
ಮನೆಮಂದಿಯ ಕಣ್ಣುತಪ್ಪಿಸಿ
ನನ್ನ ಸೈಜಿನ ಜೀನ್ಸ ಪ್ಯಾಂಟನ್ನೊ್ಂದು
ಕೊಳ್ಳಬೇಕು;ತೊಡಲಾಗದಿದ್ದರೂ
ಸುಮ್ಮನೆ ಇಟ್ಟು,ಮುಟ್ಟಿ,ತಟ್ಟಿ ಸಂಭ್ರಮಿಸಬೇಕು
ಒಳಗೆಲ್ಲೋ ಇಷ್ಟವಾಗುವ ನಾವಿನ್ನೂ ಒಳಗೊಳ್ಳದ ರೂಢಿಯೊಂದಕ್ಕೆ ಪ್ರತಿಕ್ರಿಯಿಸಬೇಕು
ಒದ್ದುಕೊಂಡು ಬರುವ ನಸುಕಿನ ನಿದ್ದೆಯ
ಅಟ್ಟಾಡಿಸಿಕೊಂಡು ಹೋಗಿ ಗದುಮಿ
ಇಟ್ಟಾಡಿಸಿ ನಾನೂ ವಾಕಿಂಗ್ ಹೊರಡಬೇಕು
ತೆಳ್ಳಗಾಗುವ ಖುಷಿಯಲ್ಲಿ ಬರೆಯಬೇಕು
ಒಂದು ಲೋಟ ತಣ್ಣೀರು ಕುಡಿದು
ಧೋಭಿಘಾಟನ ಅಸಂಖ್ಯ ಬಟ್ಟೆ ಒಗೆಸಿಕೊಂಡ ಕಲ್ಲಿನ ಹಾಗೆ ಫಳಫಳ ಹೊಳಪಾಗಬೇಕು
ಅದೇ ಹುಮ್ಮಸ್ಸಿನಲಿ
ಬರೆದುಬಿಡಬೇಕು ಏನಾದರೂ.....
****2.
ಅವ್ವ ಮತ್ತು ಬೆಕ್ಕು

ಅವ್ವ ಮೆಹನತ್ ಮಾಡಿದ
ಗದ್ದೆಯಲ್ಲೀಗ ಗೆದ್ದಲುಗಳ
ಗದ್ದುಗೆಗಳು
ಅವಳು ಸಾಕಿದ ಬೆಕ್ಕು
ಹುಡುಕಿಕೊಂಡಿದೆ
ಹೊಟ್ಟೆಪಾಡಿಗಾಗಿ
ತೀರ ಹತ್ತಿರದ ಮನೆ
ಎಂದಾದರೊಂದು ದಿನ
ಅವ್ವ ಬಂದಾಳೆಂಬ
ವಾಂಛೆ ಅದಕ್ಕೆ
ಅಷ್ಟ ದಿಕ್ಕಿಗೆ ಕುಳಿತರೂ
ಅದರ ಮುಖ
ಮನೆಯ ದಿಕ್ಕಿಗೇ......
ಅಪರೂಪಕ್ಕೆ ಕಳ್ಳಬೆಕ್ಕಿನಂತೆ
ಬಂದುಹೋಗುವ ನನ್ನ
ಗುರಿಯಿಟ್ಟು
ಬೇಟೆಯಾಡಲೆಂಬಂತೆ
ಅವ್ವನ ಬದಲು ಸುಳಿದಾಗಲೆಲ್ಲ ನಾನು
ಸುತ್ತುತ್ತದೆ ಕಾಲು
ಕರುಳಿಗೇ ಗುರಿಯಿಟ್ಟಂತೆ
ಕೊನೆಗೊಮ್ಮೆ ಮೀಸೆ ಅದುರಿಸಿ
ಹಲ್ಲು ಕಡಿದು ಗುರುಗುಟ್ಟುತ್ತದೆ
ತೆಗೆ ಬೀಗ,ಗುಡಿಸು ಒರೆಸು
ಒಂದೂ ಬಿಡದೆ ಕೀಳು ಅಂಗಳದ ಹುಲ್ಲು
ಮೊದಲಿನಂತೆ
ಮರಳುವ ಸುಳಿವಾದರೆ ಸಾಕು
ಪರಚುತ್ತದೆ ನೆಲ
ಬೆನ್ನಟ್ಟುತ್ತದೆ ಬಹುದೂರ
ಅಂತರ ಹೆಚ್ಚಾದಂತೆ ಹೊರಳುತ್ತದೆ
ಆವೇಶದ ಸಿಟ್ಟು ಬಾಕಿ ಇಟ್ಟು
ಸರಿರಾತ್ರಿ ಪ್ರಾಣಭಯದಂತೆ
ಕಾಡುತ್ತಿದೆ ಈಗೀಗ ಬೆಕ್ಕು
ಸತ್ತಂತೆ ಕನಸು
ಛಿಲ್ಲನೆ ಬೆವೆತು ಎದ್ದು ಕುಳಿತವಳಿಗೆ
ಸತ್ತದ್ದು ಅವ್ವನೋ ಬೆಕ್ಕೋ
ಮಸಕು ಮಸಕು
ಅವ್ವ ಮಲಗಿದ್ದಾಳೆ ಇಲ್ಲಿ ನನ್ನಲ್ಲಿ
ಇಹಪರಗಳೊಂದಾದ ಪರಿಯಲ್ಲಿ
ಬೆಕ್ಕನ್ನೂ ಮನೆಯನ್ನೂ
ಮರೆತು
***

ರೇಣುಕಾ ರಮಾನಂದ ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶೆಟಗೇರಿ ಗ್ರಾಮದವರು. ಮೈಸೂರು ವಿ ವಿ ಕನ್ನಡ ಸ್ನಾತಕೋತ್ತರ ಪದವೀಧರೆ. ಪ್ರಾಥಮಿಕ ಶಾಲಾ ಶಿಕ್ಷಕಿ. ಕಾವ್ಯದ ಓದು ಬರಹ ಆಪ್ತ. ಸಂಕ್ರಮಣ ಕಾವ್ಯ ಬಹುಮಾನ, ಕಳೆದೆರಡು ವಷ೯ದಿಂದ ಕ, ಲೇ, ಸಂ ಬೆಂಗಳೂರಿನ ಗುಡಿಬಂಡೆ ಪೂಣಿ೯ಮಾ ರಾಜ್ಯದ ಉದಯೋನ್ಮುಖ ಕವಯತ್ರಿ ಬಹುಮಾನ ಪಡೆದಿದ್ದಾರೆ.

 renu.ramanand555@gmail.com
4 comments:

 1. ಬಹಳ ಚೆನ್ನಾಗಿದೆ. ನಾನೊಬ್ಬ ವಿಮರ್ಶಕನಲ್ಲ; ಆದರೆ, ಮನಸಿಗೆ ತೃಪ್ತಿ, ಸಂತೋಷ ಮುಖ್ಯ. ಇವೆರಡೂ ಈ ಕವಿತೆಗಳನ್ನು ಓದಿ ಸಾಧ್ಯವಾಗಿದೆ. ಧನ್ಯವಾದಗಳು.

  ರಾಮಚಂದ್ರ ಉ ಮಹಾಲೆ

  ReplyDelete
 2. ಪದ್ಯಗಳು ಬಹಳ ಚನ್ನಾಗಿವೆ ರೇಣುಕ ಅವರೇ . ಹಾಗೆಯೆ ಇಲ್ಲೊಂದು ನಾನು ಬರೆದ ಪದ್ಯ.
  ಕಾಲನ ಕೊನೆಯ ಕರೆ ಬಂದಾಗ
  ಬಾರೆನೆಂದೆನಬಹುದೆ ಮನುಜ
  ಕಾಲಗರ್ಭದಲಿ ಕರಗಿ
  ಮತ್ತೆ ಮಗುವಾಗುವುದು ಸಹಜ
  ಡಾ. ಸಿ. ಎಸ್. ಶ್ರೀನಿವಾಸನ್
  ಮೈಸೂರು

  ReplyDelete
 3. ಅಕ್ಕಾ ಕವಿತೆ ಮಸ್ತ ಆಗಿದ ಹಾ....ಸೂಪರ್.

  ReplyDelete

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...