Sunday, November 22, 2015

ನೀಲಾ ಕೆ. ಎರಡು ಕವಿತೆಗಳು
೧ 
ಅವ್ವನೆಂಬ ಅಮೃತದ ನೆನಪು...


ಈಗ ಅವ್ವನೆಂದರೆ
ಎಂದೂ ಮರೆಯದ
ಒಂದು ನೆನಪು
ಆರದ ಕಣ್ಣ ಹನಿ.
ಕರುಳು ಬಿಕ್ಕುವ ದನಿ
ಎಂದೂ ಮುಗಿಯದ
ಎದೆಯೊಳಗಿನ
ನೆನಪ ಮೆರವಣಿಗೆ

ಅವ್ವನೆಂದರೆ ಈಗ
ಮಳೆ ನಿಂತ ಮೇಲೂ
ಹುಲ್ಲ ಗರಿಕೆ ತುದಿಗೆ
ಹೊಳೆಯುವ ಇಬ್ಬನಿ
ಮತ್ತ್ಯಾವತ್ತೂ ಅಳಿಯದ
ಮನದ ಹಾಳೆಯಲಿ
ಕೆತ್ತಿದ ಚಿತ್ತಾರದ ಹಾಲ ಹನಿ.
ಹಿತ್ತಲಿನ ನೆಲದ ತುಂಬ
ಹರವಿದ ಬಿಸಿಬಿಸಿ ಬೂದಿ
ಅವಳ ಬೆಚ್ಚನೆಯ ತೋಳುಗಳ
ನೆನಪಿಸುವ ಹುಡುಕಾಟದ ಹಾದಿ.
ಒಂದರ ಮೇಲೊಂದು ಆಶ್ರಯಿಸಿದ
ಸಾಲುಸಾಲು ಕುಳ್ಳು
ಬಿಡದ ನಂಟಿನಂಥ ಬಂಧಗಳು
ಪ್ರತಿ ಕುಳ್ಳೂ ಅಪ್ಪಿಕೊಂಡ
ಅವ್ವನ ಅಂಗೈಯ ಗೆರೆಗಳು.
ಇನ್ನೂ ಆರಿಲ್ಲ ಹಸಿ ಹೆಂಡಿಯ ಘಮ
ಬೇರಿಲ್ಲದಂತೆ ಹನಿಹನಿ
ಅದರಲಿ ಬೆರೆತ
ಅವಳ ಬೆವರ ಘಮ
ಮತ್ತು ತೊಟ್ಟಿಕ್ಕಿದ ಕಣ್ಣೀರು
ಎಲ್ಲವೂ ಅವ್ವನ ನೆನಪು.

ಎಲ್ಲಿ ಬಿಚ್ಚಿದರೂ ನೆನಪ ಬುತ್ತಿ
ಸಿಂಗಾರಗೊಂಡ ಸಂಸಾರ ರಥದ ಕಾಲು ಚಕ್ರ.
ಸವೆದು ಸವೆದು ಚಕ್ರದ ತಳ
ಫಳ ಫಳ ಹೊಳೆದಂತೆ.
ಚಕ್ರವ್ಯೂಹ ಭೇದಿಸುವ ಬತ್ತದ ಸಾಹಸ.
ಹನಿದಷ್ಟು ನೆಲಕೆ ಬೆವರು
ಮತ್ತೆ ಮತ್ತೆ ಬಾಯಾರುವ ಭುವಿ
ಎಷ್ಟು ನಾಲಿಗೆಗಳು ಇಳೆಯ ಗಂಟಲಿಗೆ?
ದಣಿದಳೇನು ಅವ್ವ?
ಕಸುವುಳ್ಳ ತೋಳು
ಸಮುದ್ರದಂಥ ಹೃದಯ
ಅವಳ ಬತ್ತಳಿಕೆಯ ಬರಿದಾಗಿಸದ ಅಸ್ತ್ರಗಳು.
 
ಬಿಸಿಲ ಎದೆಗೆ ಸುರಿದಂಥ ಬೆಂಕಿ ಅಪ್ಪ
ಮಳೆಯ ಕೊಡ ಹೊತ್ತ ಅವ್ವ
ಆತಾಳ-ಪಾತಾಳದಿಂದಲೇ
ಹೆಡೆಯೆತ್ತಿದರೂ ಹಾವು ಹರಿತಗೊಂಡ ಹಲ್ಲು
ತುಂಬಿ ತುಳುಕಿದರೂ ವಿಷದ ಚೀಲ
ಒಡಲ ಕಿಡಿಯಿಂದಲೇ ಹುಟ್ಟಿಸಿದಳು
ಅಮೃತಧಾರೆ.
***


೨ 
ಸಾವಿಲ್ಲದ ಸಂಗಾತಿ


ಚೇ
ಯಾಕೆ ನೀನು ಮತ್ತೆ ಮತ್ತೆ
ನೆನಪಾಗುವುದು
ಈ ಸರಳುಗಳಾಚೆಗೆ
ಉದಯಿಸುವ ಸೂರ್ಯನಂತೆ?

ಪುಟ್ಟ ಬೆಳಕಿನ ಕಿರಣವೂ
ಇಲ್ಲಿ ಭೂಗರ್ಭದ ಜ್ವಾಲಯಂತೆ
ಬೆಳೆದು - ಬೆಳಗಿ
ನೀನು ನೆನಪಾಗುತ್ತಿ  ಚೇ

ಬಸಿವ ಬೆವರ ಧಾರೆ
ಧಾರೆಗಟ್ಟಿ ಇಳಿದು ಹೊಳೆದು
ಒಮ್ಮೆ ನನ್ನ ಹನಿಯಾಗಿಸಿ
ಮತ್ತೆ ಸಮುದ್ರವಾಗಿಸಿ
ಮತ್ತೆ ಹನಿಯಾಗಿಸಿ
ನೀನು ನೆನಪಾಗುತ್ತಿ ಚೇ

ಸರಳುಗಳಿಂದ ಇಣುಕಿದೆ
ಕಾಳ ಕತ್ತಲೆ ಸೀಳುತ್ತ
ಸುರುಳಿ ಸುರುಳಿ ಹೊಗೆ
ಹರಿದು ಆವರಿಸಿದಂತೆ
ಮನದ ಮಾಮರ..
ಅದು ಸಿಗಾರ್ ಹೊಗೆಯೇ
ಸುತ್ತಿ ಸುಳಿದಾಡಿದಂತೆ
ಜಗದಗಲವೂ
ನೀನು ನೆನಪಾಗುತ್ತಿ ಚೇ

ನೀನು ಹೆಜ್ಜೆಯಿಟ್ಟಲೆಲ್ಲ
ಭೂಮಂಡಲದ ಗಡಿ-ಗೆರೆಗಳು
ಮಾಯವಾಗಿ
ಮುಗಿಲಗಲ ಕೆಂಬಾವುಟ
ಗಾಳಿಯೇ ತಾನಾಗಿ
ಬೆವರ ಭಾವಕೆ ಭಾಷೆಯಾಗಿ
ನೀನು ನೆನಪಾಗುತ್ತಿ ಚೇ

ಜಗದಗಲ ಮುಗಿಲಗಲ
ಪಾತಾಳದಿಂದತ್ತತ್ತ
ಕಣ್ಣೀರ ತೊಡೆವ ಮನಗಳಿಗೆ
ಕಳ್ಳು-ಬಳ್ಳಿಯ
ಬಂಧ-ಸಂಬಂಧದ
ಬೆಸುಗೆ ಹೆಣೆದು
ಅಕಟಕಟಾ
ಸಾಲದ ಶಬ್ದಗಳಾಚೆಗೂ
ನೀನು ನೆನಪಾಗುತ್ತಿ ಚೇ.
***

ನೀಲಾ ಕೆ. (೧೯೬೬) ಬೀದರ ಜಿಲ್ಲೆ ಬಸವಕಲ್ಯಾಣದವರು. ಪೂರ್ಣಾವಧಿ ಸಾಮಾಜಿಕ ಕಾರ್ಯಕರ್ತೆ. ದಶಕಗಳಿಂದ ಮಹಿಳಾ ಸಂಘಟನೆ, ರಂಗ ಚಟುವಟಿಕೆ, ಹೋರಾಟಗಳಲ್ಲಿ ತೊಡಗಿಕೊಂಡಿರುವವರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸ್ಥಾನವೂ ಸೇರಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವವರು. ಜೈಲುವಾಸವನ್ನೂ ಅನುಭವಿಸಿದ್ದಾರೆ. ಒಟ್ಟು ಎಂಟು ಕೃತಿಗಳು ಪ್ರಕಟವಾಗಿವೆ. ೨೦೧೩ರಲ್ಲಿ ಬೀದರಿನಲ್ಲಿ ಎರಡು ದಿನ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದರು. ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಮತ್ತಿತರ ಹಲವು ಸಂಘಸಂಸ್ಥೆಗಳ ಪ್ರಶಸ್ತಿ ಸಂದಿದೆ. ೨೦೧೪-೧೫ ನೇ ಸಾಲಿನಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು.

ವಿಳಾಸ: ಸಂಗಾತಿ, ಪ್ಲಾಟ್ ನಂ. ೨೪೨, ಮೊದಲನೇ ಹಂತ, ಜಿ.ಡಿ.ಎ. ಲೇಔಟ್, ವೀರೇಂದ್ರ ಪಾಟೀಲ್ ಕಾಲೋನಿ,                ಎಮ್.ಬಿ. ನಗರ ಪೊಲೀಸ್ ಠಾಣೆ ಹತ್ತಿರ, ಸೇಡಂ ರಸ್ತೆ, ಗುಲಬರ್ಗಾ-೫೮೫೧೦೫.

9448778796
neela.kgulbarga@gmail.com


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...