Tuesday, November 17, 2015

ಮಾಬು ಡಂಬಳ ಎರಡು ಕವಿತೆಗಳು





ಬದುಕು

ಆರರ ಅಲಾರಾಮ್ ನಾನು
ಬಳಸುವುದಿಲ್ಲ!
ಕಾಲಿಗೆ ಚಕ್ರಕಟ್ಟಿದಾಗಿನಿಂದ
ಬೆಗುದಿಯ ದಿನಗಳ
ಬೋಳುತೆನೆಯೊಳಗೆ
ಸಿಕ್ಕ ಮೂರುಕಾಳಿಗೆ
ಮಿಕ್ಕ ದಿನಗಳ ಕಳೆದುಬಿಡುತ್ತೆನೆ
ಕಾಲು ಚೀಲದೊಳಗೆ
ಹುದುಗಿದ ಪಾದ
ಮತ್ತ್ಯಾವುದೋ ಬಿತ್ತಿ ಚಿತ್ರ!
ಬೆವೆತು ಬೆರೆತು
ಬಸವಳಿಯುತ್ತಿದ್ದಾಗಲೆಲ್ಲ
ಅವ್ವ!
ಅವ್ವಮಾತ್ರ ನೆನಪಾಗುತ್ತಾಳೆ
ಕಾಲುಭಾಗವೂ ಹಂಚಿ
ಹಸಿದೆ ಮಲಗಿದಂತೆ.
ಹೆದ್ದಾರಿಯ ತಿರುವಿಗೆ
ಹೂವ ಮಾರುವ ಅಜ್ಜಿ!
ತಲೆಮಾರಿನ ಇಮಾರತ್ತಿನಂತೆ
ನಗುತ್ತಲೇ,
ಅಲ್ಲೆ ನಿಂತಿರುತ್ತಾಳೆ
ನಾನು ಸಂಭ್ರಮಿಸುತ್ತೆನೆ
ಕೊಟ್ಟ ಉಡುಗೊರೆ
ಅವಳ ಉಡಿಗೆ ಹಕಿ.
ಕಾಲ ಹಿಡಿದಿಟ್ಟ
ಬೊಗಸೆಯೊಳಗೊಂದು
ಕಾಗದ ದೋಣಿ ಬಿಟ್ಟವನು
ಕಣ್ಣು ತೆರೆದು
ನೋಡುವುದೆ ನಡೆದಿದೆ
ಯಾವ ದಡವು ಕಾಣದು!
ಮೊನ್ನೆ ಸಿಕ್ಕ ದಾರಿಗೂ
ಮೇಲ್ಸೇತುವೆ ಇದೆ
ನಾನು ಪಾದಚಾರಿ!
***


ಬಿಡಿ-ಬಿಡಿ ಬದುಕು


  ಬಿಡಿ-೧

ಜೀವನ ಅಡವಿಟ್ಟು
ಕನಸುಕೊಂಡೆ
ವಾಸ್ತವ ಹಲ್ಲುಗಿಂಜುತಿತ್ತು.


  ಬಿಡಿ-೨

ಕೋಲಿಗೆ ಆತುಕೊಂಡೆ
ಬಂದ ದೇಹ
ಕೋವಿಗೆ ನಿರ್ಲಿಪ್ತವಾಯಿತು


  ಬಿಡಿ-೩

ಮನೆಯವರೆಲ್ಲ
ಕಲಹಕ್ಕೆ ನಿಂತರು
ಮೂಲೆಯಲ್ಲಿ ಜೇಡ
ಬಲೆಹೆಣೆಯುತ್ತಿತ್ತು.


   ಬಿಡಿ-೪

ಗುಡಿಸಿದವನು ಗರ್ಜಿಸುತ್ತಿದ್ದ
ತೆರೆದ ಬಾಗಿಲ ಹಿಂದೆ
ಕಸಬರಿಗೆ ಮೌನವಾಗಿತ್ತು.


    ಬಿಡಿ-೫

ಕತ್ತರಿಸಲು ಬಳಸಿದ ಕತ್ತರಿ
ಗುಜರಿಯವನಿಗೆ ಕೊಟ್ಟೆ
ಅವ ಸೂಜಿಯನು ಕೊಟ್ಟ


    ಬಿಡಿ-೬

ಅವರಿವರ ಮಾತಿಗೆ
ಆತಂಕಗೊಂಡ ಮೌನ
ತಾಳೆಗರಿಯಲ್ಲಿ ಅವಿತುಕೊಂಡಿತು

ಮಾಬು ಡಂಬಳ : ಯುವಕವಿ ಮಾಬು ಡಂಬಳ ಅವರ ಹುಟ್ಟೂರು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ. ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರು.

mabusab73@gmail.com

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...