Thursday, November 05, 2015

ಸ್ಮಿತಾ ಅಮೃತರಾಜ್ ಕವಿತೆಗಳು

೧ 
ಗೆರೆ


ಹೇಗೋ ಬಂದು
ನುಸುಳಿಕೊಂಡಿದೆಯಲ್ಲ
ನನ್ನ-ನಿನ್ನ ನಡುವಲ್ಲೊಂದು
ತೆಳು ಗೆರೆ.

ಎಳೆದದ್ದು ನೀನಲ್ಲವೆಂದೆ
ನಾನಂತೂ ಮೊದಲೇ ಅಲ್ಲ
ಕಂಡೂ ಕಾಣದಂತಿರುವ ಎಳೆ
ಸೂಕ್ಷ್ಮ ಗೆರೆ.
ಹಾಗಾದರೆ ಬಂದದ್ದಾದರೂ ಎಲ್ಲಿಂದ?

ಇಂಚಿಂಚೇ ಬೆಳೆಯುತ್ತಿದೆ
ಬಲಿಯುತ್ತಿದೆ.
ಇಬ್ಬರಿಗೂ ಅದರ ಮೇಲೆ ಅಸಡ್ಡೆ
ಎಳೆಯದ ಗೆರೆಯನ್ನು ಅಳಿಸುವುದೇತಕೆ?

ಒಂದೊಮ್ಮೆ ಮಿತಿ ಮೀರಿ ಬೆಳೆದು
ಗೆರೆಯೇ ಗೋಡೆಯಾದರೆ
ನನಗೆ-ನೀನು, ನಿನಗೆ-ನಾನು
ಕಾಣಿಸುವುದಾದರೂ ಎಂತು?

ಗೆರೆಯ ಮೊನಚು
ಈಗ ಎದೆಯವರೆಗೂ ಬಂದು ತಾಕಿ
ಭಯ ಹುಟ್ಟಿಸುತ್ತಿದೆ.

ಗೆರೆಗಳು ಒಂದನ್ನೊಂದು ಕೂಡಿಸುತ್ತದೆ.
ಕೆಲವೊಮ್ಮೆ ಗುಣಿಸಿ ಭಾಗಿಸಿ ಕಳೆದು
ಬರೇ ಶೇಷವನ್ನಷ್ಟೇ ಉಳಿಸಿಬಿಡುತ್ತದೆ
ಕೂಡ..

ಇಲ್ಲಿ ತೀರಾ ನಿಗಾ ಬೇಕು.

ಬಿಡು, ಹೇಗೋ ಹುಟ್ಟಿಕೊಂಡಿದೆ
ಸಧ್ಯ ಕಂಡಿತಲ್ಲ!
ಬಿಗುಮಾನ ಬಿಟ್ಟು ಬಾ ಬೇಗ
ಅಳಿಸಿ ಬಿಡೋಣ.
ಆ ನಡುವಲ್ಲಿ ಕಂಡೂ ಕಾಣದಂತಿರುವ
ಪಾರದರ್ಶಕ ಕನ್ನಡಿ ತೂಗಿ ಬಿಡೋಣ.

ಭಾವಗಳು ಬದಲಾಗಬಲ್ಲವೇ?
***ಅಮ್ಮ ಹೇಳುತ್ತಾಳೆ...   
ನಮ್ಮಂತಲ್ಲ ಬಿಡಿ ನಿಮಗೆ
ನೀವುಗಳೆಲ್ಲಾ ಸಾವಿರ ಪಾಲು
ನಮ್ಮಿಂದ ಮೇಲು.

ಹೌದೇ..? ಉತ್ತರಕ್ಕಾಗಿ ತಡಕಾಡುವಾಗ
ಅರೇ..! ಅವಳಮ್ಮ ಇದೇ ಮಾತಿನಿಂದ
ಅವಳ ಕಿವಿಯ ತೂತು ಕೊರೆದಿರಬಹುದೇ?

ಇರಲಿ. ಕೆದಕುತ್ತಾ ಹೋದರೆ ಇರುವ
ಅರ್ಧ ಸುಖವೂ ಅರ್ಥ ಹುಡುಕುವುದರಲ್ಲೇ
ಸವೆದು ಹೋದೀತು.

ಎಲ್ಲವೂ ಬದಲಾಗಿದೆ ಈಗ
ಮೊದಲಿನಂತಲ್ಲವೀಗ  ಅಂತ
ಸಂಧರ್ಭ ಸಿಕ್ಕಾಗಲೆಲ್ಲಾ ಬಡಾಯಿಕೊಚ್ಚಿಕೊಳ್ಳುವುದು
ಮುಂದಿನ ತಲೆಮಾರಿಗೆ ಅದನ್ನು
ಬರಿದೇ ರವಾನಿಸುವುದು.
ಎಲ್ಲವೂ ಬರೀ ಬೊಗಳೇ ಅಂತ
ಯಾರಿಗೂ ತಿಳಿಯದೇನಲ್ಲ.

ಸುಖಾ ಸುಮ್ಮಗಿನ ಈ ಹಳಹಳಿಕೆ
ವೃಥಾ ನಿಂತು ಹರಿದು ಬಂದ ದಂತಕತೆಗೆ
ಅಪಚಾರವಾಗಬಾರದಲ್ಲ?

ಅದುಮಿಟ್ಟ ಕಣ್ಣೀರ ಕಟ್ಟೆ
ಈರುಳ್ಳಿ ಸಿಪ್ಪೆ ಸುಲಿಯುವಾಗ
ಮೇರೆ ಮೀರಿ ಹರಿಯುವುದು
ಮೆಣಸಿನ ಘಾಟಿಗೆ ಅಕ್ಷಿ ಹೇಳುತ್ತಾ
ಒಳಗಿನ ಖಾರವನ್ನೆಲ್ಲಾ ದಬ್ಬಿ ಹೊರಹಾಕುವುದು
ಏದುಸಿರು ಬಿಡುತ್ತಾ ಒಗ್ಗರಣೆಯ ಬೇವಿಗೆ
ಹಿತ್ತಲ ಬೇಲಿಗೆ ಓಡಿ ಹೋಗಿ
ಕಣ್ಣು ಮೂಗೊರೆಸಿಕೊಳ್ಳುವುದು

..ಹೀಗೇ ಮತ್ತೊಂದು ಪ್ರಸಂಗಕ್ಕೆ
ಅಣಿಯಾಗುವ ನಿತ್ಯ ನಿರಂತರ ಗಾಥೆ
ಕಾಲ ಕಾಲಕ್ಕೂ ಹಿಂದೆಯೇ ಒಲಿದು
ಬರುವ ಗೀತೆ ಹಳತಾದರೂ
ಹಳಸಲಾಗಲಿಲ್ಲ.

ಹೆಣ್ಣೆಂಬ ಗಾದಿ ಸಿಕ್ಕಾಗ ಅದಕ್ಕೆ
ಆತುಕೊಂಡು ನಾದಿಕೊಂಡೇ
ಬರುವ ಬೇಗುದಿ
ಒಳಗೆ ಹಬೆಯಾಡುತ್ತಲೇ ತಣ್ಣಗೆ ಸುಡುವ ಒಳಕುದಿ
ಇದು ಯಾರಿಗೂ ಕಾಣಬಾರದು.
ಕಾಣಗೊಡಲೂ ಬಾರದು.

ಸೀತೆ ದ್ರೌಪದಿ ಮಂಡೋದರಿಯಾಗಿ
ನಮ್ಮ ಕರುಳ ಬಳ್ಳಿಯ ತಂತುಗಳೆಲ್ಲಾ
ಉಂಡ ವ್ಯsಥೆ
ಕತೆಯಾಗಿ ಹೊಮ್ಮುವ ಪರಿಗೆ ಮನಸ್ಸುಗಳು
ಆರ್ಧಗೊಳ್ಳುತ್ತಿವೆ ಇಲ್ಲಿ.

ಈಗ ಅದೇ ಸುಡುವ ನೋವುಗಳು
ಪದ ಸಾಲಿನೊಳಗೆ ಮುದುಡಿಕೊಂಡು
ಬಿಕ್ಕಳಿಸುವಾಗ ಸುಲಭದಲ್ಲಿ ಅರ್ಥಕ್ಕೆ
ದಕ್ಕುವುದಿಲ್ಲ ಕವಿತೆ.

ಕಾಲ ಬದಲಾಗಿದೆ. ಭಾವಗಳು ಬದಲಾಗ
ಬಲ್ಲವೇ..? ಇದು ಪ್ರಶ್ನೆ.
***

ಸ್ಮಿತಾ ಅಮೃತರಾಜ್ (೧೯೭೮) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜ ಗ್ರಾಮದವರು. ಪ್ರಸ್ತುತ ಗೃಹಿಣಿಯಾಗಿ ಕೊಡಗಿನ ಸಂಪಾಜೆ ಬಳಿಯ ಚೆಂಬುವಿನಲ್ಲಿ ವಾಸ. ವೃತ್ತಿಯಲ್ಲಿ ಕೃಷಿಕರು. ಬರವಣಿಗೆ ಹವ್ಯಾಸ. ಕಾಲ ಕಾಯುವುದಿಲ್ಲ (೨೦೦೮ ಕವನ ಸಂಕಲನ), ತುಟಿಯಂಚಲ್ಲಿ ಉಳಿದ ಕವಿತೆಗಳು (೨೦೧೪ - ಕವನ ಸಂಕಲನ) ಅಂಗಳದಂಚಿನ ಕನವರಿಕೆಗಳು (ಗದ್ಯ ಬರಹಗಳ ಸಂಕಲನ - ೨೦೧೫) ಪ್ರಕಟವಾಗಿವೆ.
No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...