Tuesday, November 17, 2015

ಕಲಬುರ್ಗಿ ಹತ್ಯೆ : ಮುಖ್ಯಮಂತ್ರಿಗಳಿಗೆ ಕೆಲವು ಪ್ರಶ್ನೆಗಳು
 
 
ಡಾ. ಎಂ. ಎಂ. ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ಸಮಿತಿ, ಧಾರವಾಡ
ಗೆ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ವಿಧಾನ ಸೌಧ, ಬೆಂಗಳೂರು.
   

    ವಿಷಯ: ಡಾ. ಎಂ.ಎಂ.ಕಲಬುರ್ಗಿಅವರ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ವಿಳಂಬವಾಗಿರುವ  ಕುರಿತು.


ಮಾನ್ಯರೇ,

ಪ್ರಖರ ಚಿಂತನೆಗೆ ಹೆಸರಾದ ಡಾ. ಎಂ.ಎಂ. ಕಲಬುರ್ಗಿ ಅವರು ಸಾಂಸ್ಕೃತಿಕರಂಗದಲ್ಲಿ ಎಷ್ಟೇ ಪ್ರತಿರೋಧ ಹುಟ್ಟಿಕೊಂಡರೂ ಅವರು ನಂಬಿಕೊಂಡ ಸತ್ಯವನ್ನು ಪ್ರತಿಪಾದಿಸುತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧರಾದವರು. ಆರೋಗ್ಯವಂತ ಸಮಾಜಕ್ಕೆ ಮಾರಕವಾದ ಗೊಡ್ಡು ಸಂಪ್ರದಾಯ, ಮೂಢನಂಬಿಕೆ, ಧರ್ಮಾಂಧತೆ, ಕೋಮುವಾದ, ಮನುವಾದ ಮುಂತಾದವು ಅವರು ವಿರೋಧಿಸುವ ವಿಚಾರಗಳಾಗಿದ್ದವು. ಅಂಥ ಪ್ರಖರ ಚಿಂತನೆಯ ನಾಡು ಹೆಮ್ಮೆ ಪಡುವ ಸಂಶೋಧಕರು ಅಪ್ಪಟ ಬಸವ ಅನುಯಾಯಿಗಳೂ ಆಗಿದ್ದ ಕಲಬುರ್ಗಿಯರನ್ನು ಕೊಲ್ಲುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾರ್ಯಕ್ಕೆ ದುಷ್ಟಶಕ್ತಿಗಳು ಕೈ ಹಾಕಿವೆ. ಇದು ಕಲಬುರ್ಗಿಯವರ ಕೊಲೆ ಮಾತ್ರವಾಗಿರದೆ ಅದು ಮಾನವೀಯತೆ, ಪ್ರಜಾಪ್ರಭುತ್ವ, ಬಸವ ವಾದ, ನಾಗರಿಕತೆ, ವೈಚಾರಿಕತೆಯ ಕೊಲೆಯೂ ಆಗಿದೆ. ಅವರನ್ನು ಕೊಂದ ಕ್ರಿಯೆ ಸ್ಪಷ್ಟವಾಗಿ ಕರ್ನಾಟಕದಲ್ಲಿ ಮತೀಯ ಭಯೋತ್ಪಾದನೆ ಹುಟ್ಟಿಕೊಂಡಿರುವದಕ್ಕೆ ಪುರಾವೆಯಾಗಿದೆ. ಇದು ಸಾಂಸ್ಕೃತಿಕ ಭಯೋತ್ಪಾದನೆಯೂ ಆಗಿದೆ. ಅದು ವೈಚಾರಿಕ ಭಿನ್ನಾಭಿಪ್ರಾಯವನ್ನು ಸಹಿಸದ ಮನಸ್ಥಿತಿಗಳು ಅದನ್ನು ಹಿಂಸೆಯಿಂದ ಎದುರಿಸಲು ಮುಂದಾಗಿರುವದರ ನಿಖರ ಸೂಚನೆಯಾಗಿದೆ. ಇದು ಕನ್ನಡ ಸಾಂಸ್ಕೃತಿಕ ಲೋಕದ ಆತಂಕಕಾರಿ ಬೆಳವಣಿಗೆಗೆ. ಕಲಬುರ್ಗಿಯವರ ಹತ್ಯೆ ನಡೆದು ಎರಡೂವರೆ ತಿಂಗಳು ಗತಿಸಿದರೂ ಹತ್ಯಾಕೋರರನ್ನು ಬಂಧಿಸಲು ಸಾಧ್ಯವಾಗಿಲ್ಲ.  ಆಗಾಗ ತಾವು ಮತ್ತು ಪೊಲೀಸ ವರಿಸ್ಟರು ಹತ್ಯೆಕೋರರನ್ನು ಬಂಧಿಸುವ ಆಶ್ವಾಸನೆಯನ್ನು ನೀಡುತ್ತಿರುವಿರಿ. ಇಲ್ಲಿಯವರೆಗೆ ತನಿಖೆಯಲ್ಲಿ ಯಾವುದೇ ಬೆಳವಣಿಗೆ ಆದಂತೆ ಕಾಣಿಸುತ್ತಿಲ್ಲ. ಸರಕಾರ ಹಾಗೂ ಪೋಲೀಸ್ ಇಲಾಖೆಗಳ ಮೇಲಿನ ನಂಬಿಕೆ ಕುಸಿಯುತ್ತಿದೆ. ಡಾ. ಎಂ. ಎಂ. ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ಸಮಿತಿ, ಈ ಹಿಂದೆಯೇ ವಿಶೇಷ ತನಿಖಾ ತಂಡವನ್ನು ರಚಿಸಲು ಒತ್ತಾಯಿಸಿತ್ತು. ಇಲ್ಲಿಯವರೆಗೆ ಅಂಥ ಕ್ರಮವನ್ನು ಕೈಗೊಂಡಿಲ್ಲ. ತಕ್ಷಣ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿ  ಹತ್ಯೆಯ ತನಿಖೆಯನ್ನು ತೀವ್ರಗೊಳಿಸಿ   ಒಂದು ಕಾಲಮಿತಿ ಹಾಕಿಕೊಂಡು ಹತ್ಯಾಕೋರರನ್ನು ಬಂಧಿಸಲು ಒತ್ತಾಯಿಸುತ್ತೇವೆ. ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣತೆಯನ್ನು ಪ್ರತಿರೋಧಿಸಿ ಕರ್ನಾಟಕದ ಲೇಖಕರಲ್ಲದೆ ದೇಶದ ಎಲ್ಲ ಭಾಗಗಳಿಂದ ಲೇಖಕರು ಪ್ರಶಸ್ತಿ ವಾಪಸಾತಿ ಮಾಡುತ್ತಿದ್ದಾರೆ. ಈ ಪ್ರತಿರೋಧವು ಚಳುವಳಿಯೋಪಾದಿಯಲ್ಲಿ ನಡೆಯುತ್ತಿರುವದನ್ನು ನೋಡಿಯೂ ಎಚ್ಚರಗೊಳ್ಳದ ಸರಕಾರದ ನಡೆ ನಮ್ಮನ್ನು ಹತಾಶೆರನ್ನಾಗಿ ಮಾಡಿದೆ. ಈ ವಾಸ್ತವವನ್ನು ಸರಿಯಾಗಿ ಗ್ರಹಿಸಿಕೊಂಡು ಸರಕಾರ ಮೈಕೊಡವಿಕೊಂಡು ತನಿಖೆಯನ್ನು ತೀವ್ರಗೊಳಿಸಬೇಕೆಂದು ಕರ್ನಾಟಕದ ಲೇಖಕ ಚಿಂತಕ ಸಮುದಾಯ ಒತ್ತಾಯಿಸುತ್ತದೆ. ಹತ್ಯಾಕೋರರನ್ನು ಬಂಧಿಸುವದಲ್ಲದೆ ಕೊಲೆಯ ಹಿಂದಿನ ಕಾರಣಗಳನ್ನು ಬಯಲಿಗೆಳೆಯಬೇಕೆಂಬುದು ನಮ್ಮ ಆಗ್ರಹವಾಗಿದೆ.

ಹಕ್ಕೊತ್ತಾಯಗಳು
೧)
ಡಾ. ಎಂ. ಎಂ. ಕಲಬುರ್ಗಿಯವರನ್ನು ಹತ್ಯೆ ಮಾಡಿದ ಹತ್ಯಾಕೋರರನ್ನು ಬಂಧಿಸಲು ವಿಫಲವಾದ ಸರಕಾರದ ಆಡಳಿತದ ನೀತಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ತಕ್ಷಣವೇ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖಾ ಕಾರ್ಯವನ್ನು ಚುರುಕುಗೊಳಿಸಿ ಹಂತಕರನ್ನು ಬಂಧಿಸಲು ಮುಂದಾಗಬೇಕು.


೨)
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಚಟುವಟಿಕೆಗಳನ್ನು ರಾಜ್ಯ ಸರಕಾರವು ಹಿಮ್ಮೆಟ್ಟಿಸಬೇಕು. ಕರಾವಳಿ ಜಿಲ್ಲೆಗಳಲ್ಲಿಯಂತೂ ಕೋಮು ವಿಷ ಹರಡಲಾಗಿದೆ. ಇದಕ್ಕೆ ಅಲ್ಲಿಯ ಭಾವೈಕ್ಯ ಪರಂಪರೆಯೇ ಬಲಿಯಾಗಿ ಜನತೆಯ ಬದುಕು ವಿಘಟಿತವಾಗುತ್ತಿದೆ. ಇದಕ್ಕೆ ಎರಡೂ ಕೋಮಿನ ಮತಾಂಧರು ಎಷ್ಟು ಕಾರಣವೋ ಇದನ್ನು ನಿಗ್ರಹಿಸಲಿಕ್ಕಾಗದ ಸರಕಾರವೂ ಅಷ್ಟೇ ಕಾರಣವಾಗಿದೆ. ಮತೀಯ ಶಕ್ತಿಗಳನ್ನು ಹತ್ತಿಕ್ಕಲು ದಿಟ್ಟಕ್ರಮ ತಗೆದುಕೊಳ್ಳಬೇಕು. ರಾಜ್ಯದಲ್ಲಿ ಮತೀಯ ಸಂಘಟನೆಗಳನ್ನು ನಿಷೇಧಿಸಬೇಕು.

೩)
ಡಾ. ಎಂ ಎಂ ಕಲಬುರ್ಗಿಯವರ ಹೆಸರಿನ ರಾಷ್ಟ್ರೀಯ ಸಂಶೋಧನಾ ಕೇಂದ್ರವನ್ನು ಧಾರವಾಡದಲ್ಲಿ ಆರಂಭಿಸಲು  ಮುಂದಾಗಬೇಕು. ವಿವಿಗಳಲ್ಲಿ ಕಲಬುರ್ಗಿಯವರ ಅಧ್ಯಯನ ಪೀಠವನ್ನು ಆರಂಭಿಸಬೇಕು. ಧಾರವಾಡದಲ್ಲಿ ಹುತ್ಮಾತ್ಮ ಡಾ. ಕಲಬುರ್ಗಿಯವರ ಸ್ಮಾರಕ ಭವನ ನಿರ್ಮಾಣ ಮಾಡಬೇಕು. ಕಲಬುರ್ಗಿಯವರ ಹೆಸರಿನಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಒಬ್ಬರಿಗೆ ಪ್ರತಿ ವರ್ಷ ೧೦ ಲಕ್ಷ ರೂಗಳ ಸಂಶೋಧನಾ ಪ್ರಶಸ್ತಿ ನೀಡುವದನ್ನು ಆರಂಭಿಸಬೇಕು.

೪)
ಮೌಢ್ಯ ವಿರೋಧಿ ವಿಧಾಯಕವನ್ನು ಜಾರಿಗೊಳಿಸಬೇಕು. ಅದು ಕಲಬುರ್ಗಿಯವರಿಗೆ ಕೊಡುವ ನಿಜವಾದ ಗೌರವವಾಗುತ್ತದೆ.

ಮೇಲ್ಕಂಡ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತೇವೆ.

  
೧೬.೧೧.೨೦೧೫                                                                    ಬೆಂಗಳೂರು


ಹೆಸರು                                ಸಂಘಟನೆ                              ಸಹಿ

೧ ಎಸ್ ಜಿ ಸಿದ್ಧರಾಮಯ್ಯ

೨ ಸಿ ಬಸವಲಿಂಗಯ್ಯ

೩ ವಸುಂಧರಾ ಭೂಪತಿ              ಕರ್ನಾಟಕ ಲೇಖಕಿಯರ ಸಂಘ  

೪ ನೀಲಾ ಕೆ                              ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ

೫ ಬಸವರಾಜ ಸೂಳಿಭಾವಿ          ಎಂ ಎಂ ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ

೬ ಡಾ. ಎಂ ಡಿ ಒಕ್ಕುಂದ             ಎಂ ಎಂ ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ

೭ ಡಾ ಮೀನಾಕ್ಷಿ ಬಾಳಿ

೮ ವಿರುಪಾಕ್ಷಪ್ಪ ಪಡಿಗೋದಿ          ಸಂಚಾಲಕರು ಜಿಲ್ಲಾ ಕ್ರಿಯಾ ಸಮಿತಿ ಹಾವೇರಿ

೯ ಡಾ. ಸಿದ್ದನಗೌಡ ಪಾಟೀಲ

೧೦ ಅಲ್ಲಮಪ್ರಭು ಬೆಟ್ಟದೂರು

೧೧ ಸಾತಿ ಸುಂದರೇಶ

೧೨ ಕೆ ಟಿ ರಾಧಾಕೃಷ್ಣ

೧೩ ಡಾ. ಬಸವರಾಜ ಬಲ್ಲೂರ ಬೀದರ

೧೫ ಜಗನ್ನಾಥ ಕೆ  ಬೀದರ

೧೬ ಜಿ ರಾಮಕೃಷ್ಣ

೧೭ ಶಂಕರ ಹಲಗತ್ತಿ
೧೮ ಬಿ ಎ ಕೆಂಚರಡ್ಡಿ

೧೯ ಅರವಿಂದ ಮಾಲಗತ್ತಿ

೨೦ ಕೆ ಮರುಳಸಿದ್ದಪ್ಪ

೨೧ ಡಾ ಬಾಲಗುರುಮೂರ್ತಿ

೨೨ ಈ ಬಸವರಾಜ್

೨೩ ಹುಲಿಕಲ್ ನಟರಾಜ್

೨೪ ಬಿ ಟಿ ಲಲಿತಾ ನಾಯಕ

೨೫ ಡಾ ಸಿ ಎಸ್ ದ್ವಾರಕಾನಾಥ

೨೬ ಬರಗೂರ ರಾಮಚಂದ್ರಪ್ಪ

೨೭ ಭೀಮನಗೌಡ ಪಾಟೀಲ

೨೮ ಲಕ್ಷ್ಮೀನಾರಾಯಣ ನಾಗವಾರ

೨೯ ಮಾವಳ್ಳಿ ಶಂಕರ್
೩೦ ದೇವನೂರು ಮಹಾದೇವ  
 
 
 
 
 
 
No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...