Wednesday, November 04, 2015

ದುಬಾರಿ ಬೇಳೆ ಮತ್ತು ಧಾರ್ಮಿಕ ಕತ್ತರಿಶುಐಬ್ ದಾನಿಯಾಲ್ಕಳೆದ ಸೆಪ್ಟಂಬರ್‌ನಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ (ಬಿಬಿಸಿ) ಪ್ರಧಾನಿಯಾಗಿ ಹಾಗೂ 2014ರ ಚುನಾವಣಾ ಪ್ರಚಾರಕರಾಗಿ ನರೇಂದ್ರ ಮೋದಿ ಮಾಡಿದ ಭಾಷಣಗಳ ವಿಶ್ಲೇಷಣೆಯನ್ನು ವಿಶ್ವ ತರಂಗದಲ್ಲಿ ಪ್ರಸಾರ ಮಾಡಿತು. ಚುನಾವಣಾ ಪೂರ್ವದಲ್ಲಿ ಮೋದಿ ಪ್ರಸ್ತುತಪಡಿಸಿದ ಜ್ವಲಂತ ವಿಷಯಗಳೆಂದರೆ ಗುಜರಾತ್, ಭದ್ರತೆ, ಕಾಂಗ್ರೆಸ್, ಅಭಿವೃದ್ಧಿ, ಉದ್ಯೋಗ ಹಾಗೂ ಬದಲಾವಣೆ. ಆದರೆ ಚುನಾವಣೆಯ ಬಳಿಕ, ಇತರ ವಿಷಯಗಳಾದ ವಿದೇಶಾಂಗ ವ್ಯವಹಾರ, ಶೌಚಾಲಯಗಳು, ಸೇನೆ ಹಾಗೂ ಮೋದಿ ಎಂಬ ಶಬ್ದಗಳೇ ಅಧಿಕವಾಗಿದ್ದವು. (ಪ್ರಧಾನಿ ತಮ್ಮನ್ನೇ ಮೂರನೆ ವ್ಯಕ್ತಿಯ ಅರ್ಥದಲ್ಲಿ ಕರೆದುಕೊಳ್ಳುತ್ತಾರೆ).

ಆದರೆ ಎರಡೂ ಭಾಷಣಗಳಲ್ಲಿ ಪ್ರಮುಖವಾಗಿ ಎದ್ದುಕಂಡ ಕೊರತೆ ಎಂದರೆ ಅಪೌಷ್ಟಿಕತೆ ಬಗೆಗಿನದು.
ಭಾರತದ ಪೌಷ್ಟಿಕಾಂಶ ಸಮಸ್ಯೆ ತೀವ್ರವಾಗಿದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ. 2008ರಲ್ಲಿ ಐದು ವರ್ಷಕ್ಕಿಂತ ಕೆಳಗಿನ ವಯೋಮಾನದ ಶೇ. 43ರಷ್ಟು ಭಾರತೀಯ ಮಕ್ಕಳು ಕಡಿಮೆ ತೂಕ ಹೊಂದಿದ್ದರು. ಅದೇ ವೇಳೆಗೆ ಸೊಮಾಲಿಯಾದಲ್ಲಿ ಶೇ. 32ರಷ್ಟು ಮತ್ತು ರುವಾಂಡಾದಲ್ಲಿ ಶೇ. 11ರಷ್ಟು ಮಕ್ಕಳು ಅಗತ್ಯಕ್ಕಿಂತ ಕಡಿಮೆ ತೂಕ ಹೊಂದಿದ್ದರು. ಏಳು ದಶಕಗಳ ಹಿಂದೆ ಸ್ವತಂತ್ರ ಭಾರತದ ಜೊತೆಯೇ ಉದಯವಾದ ಪಾಕಿಸ್ತಾನದಲ್ಲಿ ಕೂಡಾ ಮಾನವನ ತೀರಾ ಮೂಲಭೂತ ಹಕ್ಕು ಎನಿಸಿದ ಪೌಷ್ಟಿಕತೆ ವಿಚಾರದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲಾಗಿದೆ. ಅಲ್ಲಿ ಶೇ. 32ರಷ್ಟು ಮಕ್ಕಳು ಮಾತ್ರ ಕಡಿಮೆ ತೂಕದವರು.

ಅಪೌಷ್ಟಿಕತೆ ನಿರ್ಲಕ್ಷ್ಯ


ಸಮಸ್ಯೆಯ ತೀವ್ರತೆಯ ಹೊರತಾಗಿಯೂ, ಇದು ಭಾರತದ ಆದ್ಯತೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಅಷ್ಟೇ ಏಕೆ; ಇದು ರಾಜಕೀಯ ವಿಷಯವೂ ಆಗಿಲ್ಲ. 2014ರ ಚುನಾವಣೆಯಲ್ಲಿ ಭಾರತ ಗುಜರಾತ್ ಮಾದರಿಗೆ ಮತ ಹಾಕಿದಾಗಲೂ, ರಸ್ತೆ, ವಿದ್ಯುತ್ ಹಾಗೂ ಕೈಗಾರಿಕೆಗಳ ಬಗ್ಗೆ ಮಾತ್ರ ಹೆಚ್ಚಿನ ಗಮನ ಹರಿಸಲಾಗಿತ್ತು. ಯಾರೂ ಗಮನಿಸದ ಪ್ರಮುಖ ಅಂಶವೆಂದರೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಅಪೌಷ್ಟಿಕತೆಯನ್ನು ತಡೆಯಲು ವಿಫಲರಾಗಿದ್ದುದು. ಗುಜರಾತ್‌ನಲ್ಲಿ ಅಪೌಷ್ಟಿಕ ಮಕ್ಕಳು ಅಥವಾ ಕಡಿಮೆ ತೂಕದ ಮಕ್ಕಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕ. ಕುತೂಹಲಕಾರಿ ಅಂಶವೆಂದರೆ, 2012ರಲ್ಲಿ ‘ವಾಲ್‌ಸ್ಟ್ರೀಟ್ ಜರ್ನಲ್’ಗೆ ನೀಡಿದ ಸಂದರ್ಶನವೊಂದರಲ್ಲಿ ಮೋದಿ, ‘‘ಗುಜರಾತ್‌ನಲ್ಲಿ ಸಸ್ಯಾಹಾರಿಗಳ ಸಂಖ್ಯೆ ಅಧಿಕವಾಗಿದ್ದರಿಂದ ಇಲ್ಲಿ ಅಪೌಷ್ಟಿಕತೆ ಹೆಚ್ಚು’’ ಎಂದು ಸಮರ್ಥಿಸಿಕೊಂಡಿದ್ದರು.

ಆದರೆ 2012ರ ಪರಿಸ್ಥಿತಿ ಸರಳವಾಗಿತ್ತು. ಮಾಂಸವನ್ನು ಸೇವಿಸದೆ ಇರುವ ಕಾರಣದಿಂದ ಉಂಟಾಗುವ ಅಪೌಷ್ಟಿಕತೆಯ ಬಗೆಗೆ ಯಾರೂ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮಾಂಸ, ಅದರಲ್ಲೂ ಮುಖ್ಯವಾಗಿ ‘ಗೋಮಾಂಸ’ ಇಂದು ಹೊತ್ತಿ ಉರಿಯುತ್ತಿರುವ ರಾಜಕೀಯ ವಿಷಯ. ಬಿಜೆಪಿ ಸಚಿವ ಹರ್ಯಾಣಾದ ಎಂ.ಎಲ್.ಖಟ್ಟರ್ ಅವರನ್ನೇ ಉಲ್ಲೇಖಿಸುವುದಾದರೆ, ಭಾರತೀಯ ಪೌರತ್ವವೇ ಗೋಮಾಂಸ ಸೇವಿಸುವುದಿಲ್ಲ ಎನ್ನುವ ಷರತ್ತಿಗೆ ಬದ್ಧವಾಗಿರಬೇಕು. ಇದೀಗ ಭಾರತೀಯ ರಾಜ್ಯಗಳು ಗೋಮಾಂಸ ಲಭ್ಯತೆಯ ಪ್ರಮಾಣಕ್ಕೆ ನಿರ್ಬಂಧ ಹೇರಲು ಕ್ರಮಗಳನ್ನು ಕೈಗೊಂಡಿವೆ. ಕಳೆದ ಒಂದು ದಶಕದಲ್ಲಿ ಬಿಜೆಪಿ ಸರಕಾರಗಳಿರುವ ಮಹಾರಾಷ್ಟ್ರ, ಮಧ್ಯಪ್ರದೇಶ, ಹರ್ಯಾಣ ಮತ್ತು ಗುಜರಾತ್‌ಗಳ (ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂಗೀಕರಿಸಿದ ಕಾಯ್ದೆ) ಗೋಮಾಂಸ ಸೇವಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಇತರ ಹಲವು ರಾಜ್ಯಗಳಲ್ಲಿ ಗೋಮಾಂಸ ಕಾನೂನುಗಳಿದ್ದರೂ, ಬಿಜೆಪಿ ಸರಕಾರಗಳು ಆಂಗೀಕರಿಸಿದ ಕಾನೂನುಗಳು ಹೆಚ್ಚು ಕಠಿಣವಾಗಿವೆ. ಉದಾಹರಣೆಗೆ ಮಹಾರಾಷ್ಟ್ರದಲ್ಲಿ, ಕಸಾಯಿಖಾನೆಯನ್ನು ಹೊಂದಿರದ ವ್ಯಕ್ತಿಯನ್ನು ಅಂದರೆ ಕೇವಲ ಗೋಮಾಂಸ ಹೊಂದಿರುವ ವ್ಯಕ್ತಿಯನ್ನೂ ಜೈಲಿಗೆ ಕಳುಹಿಸಲು ಅವಕಾಶವಿದೆ.

ಅಗ್ಗದ ಪ್ರೊಟೀನ್ ಮೂಲವಾಗಿ ಗೋಮಾಂಸ


ಭಾರತೀಯ ರಾಜಕಾರಣಿಗಳು ಕೇವಲ ಪೌಷ್ಟಿಕತೆಯನ್ನು ಗಂಭೀರವಾಗಿ ಪರಿಗಣಿಸದಿರುವುದಷ್ಟೇ ಅಲ್ಲ; ಪೌಷ್ಟಿಕ ಆಹಾರವಸ್ತುಗಳನ್ನು ನಿಷೇಧಿಸುವ ಬಗ್ಗೆ ಹೆಚ್ಚು ಗಂಭೀರವಾಗಿದ್ದಾರೆ. ವಾಸ್ತವವಾಗಿ ಗೋಮಾಂಸ ಪ್ರಮುಖ ವಿಷಯವಾಗಿರುವುದು ಇದು ಭಾರತೀಯರು ಪ್ರೊಟೀನ್ ಪಡೆಯಬಹುದಾದ ಅತ್ಯಂತ ಅಗ್ಗದ ಮಾರ್ಗವೆಂದರೆ ಗೋಮಾಂಸ. ಅಕ್ಟೋಬರ್ ತಿಂಗಳ ಮೂರನೆ ವಾರದಲ್ಲಿ ಕ್ಯಾಲೋರಿಗಳ ಸಂಖ್ಯೆ ಹಾಗೂ ಮಾರುಕಟ್ಟೆ ಬೆಲೆಯ ಬಗ್ಗೆ ಕೊಲ್ಕತ್ತಾದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಕಿ ಅಂಶ ಬೆಳಕಿಗೆ ಬಂದಿದೆ.

ಮೋದಿಗೆ ಕೂಡಾ ಈ ವಾಸ್ತವ ಅರಿವಿದೆ. ಗುಜರಾತ್‌ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಪೌಷ್ಟಿಕತೆ ಇರಲು ಸಸ್ಯಾಹಾರ ಪದ್ಧತಿಯೇ ಕಾರಣ ಎನ್ನುವುದನ್ನು ಅವರೇ ಹೇಳಿದ್ದರು. ಅದಾಗ್ಯೂ ಮೋದಿ ಹಾಗೂ ಅವರ ಪಕ್ಷ ಅಧಿಕಾರಕ್ಕೆ ಬಂದಾಗ ಅತ್ಯಂತ ಅಗ್ಗದ ಪ್ರೊಟೀನ್ ಮೂಲವನ್ನು ‘ಧಾರ್ಮಿಕ ಅನಿಷ್ಟ’ ಎಂಬ ಹಿನ್ನೆಲೆಯಲ್ಲಿ ನಿಷೇಧಿಸಿದರು.

ಗೋಮಾಂಸ ಸಮುದಾಯದ ಆಹಾರ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸುಮಾರು 80 ದಶಲಕ್ಷ ಭಾರತೀಯರು ಗೋಮಾಂಸ ಸೇವಿಸುತ್ತಾರೆ. ಇದು ಬ್ರಿಟನ್, ಫ್ರಾನ್ಸ್ ಅಥವಾ ಇಟಲಿಯ ಒಟ್ಟು ಜನಸಂಖ್ಯೆಗಿಂತಲೂ ಅಧಿಕ. ಅದಕ್ಕಿಂತಲೂ ಹೆಚ್ಚಾಗಿ ಗೋಮಾಂಸ ಸೇವಿಸುವ ಬಹುತೇಕ ಮಂದಿ ಕಡುಬಡವರು. ಅದರಲ್ಲೂ ಮುಖ್ಯವಾಗಿ ದೇಶದಲ್ಲಿ ದುರ್ಬಲರು. ಬಹುತೇಕ ಮುಸಲ್ಮಾನರು ಹಾಗೂ ದಲಿತರು. ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವಂತೆ, ಭಾರತದ ಬಡ ನಾಗರಿಕರಿಗೆ ಪ್ರೊಟೀನ್ ಪರ್ಯಾಯ ಮೂಲಗಳು ದುಬಾರಿಯಾಗುತ್ತಲೇ ಇವೆ. ತಿನಸಿನ ಮೂಲಕ ಪ್ರೊಟೀನ್ ಸೇವನೆಗೆ ಅವಕಾಶವಿರುವ ಬೇಳೆಕಾಳುಗಳ ಬೆಲೆ, ಗಗನಮುಖಿಯಾಗಿವೆ. ಇದಕ್ಕಿಂತಲೂ ಹೆಚ್ಚಾಗಿ ಅನೇಕ ಭಾರತೀಯ ರಾಜ್ಯಗಳು ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ನಿಷೇಧಿಸಿವೆ. ಮತ್ತೆ ಧಾರ್ಮಿಕ ಕಾರಣಕ್ಕಾಗಿ ಭಾರತೀಯ ಮಕ್ಕಳನ್ನು ಪ್ರಮುಖ ಪ್ರೊಟೀನ್‌ನಿಂದ ವಂಚಿತರನ್ನಾಗಿ ಮಾಡಲಾಗಿದೆ.

ಪಾಕಿಸ್ತಾನದ ಸ್ವತ್ ಪ್ರದೇಶದಲ್ಲಿ 2008ರಲ್ಲಿ ತಾಲಿಬಾನ್, ಹೆಣ್ಣುಮಕ್ಕಳನ್ನು ಶಾಲೆಗೆ ಹೋಗದಂತೆ ತಡೆಯುವ ಪ್ರಯತ್ನ ಮಾಡಿತು. ಆದರೆ ಈ ಕ್ರಮಕ್ಕೆ ನೊಬೆಲ್ ಪುರಸ್ಕೃತೆ ಮಲಾಲಾ ಯೂಸಫಿ ಪ್ರತಿರೋಧ ವ್ಯಕ್ತಪಡಿಸಿ, ಅದಕ್ಕಾಗಿ ಉಗ್ರರ ಕೆಂಗಣ್ಣಿಗೂ ಗುರಿಯಾಗಿದ್ದರು. ತಾಲಿಬಾನ್‌ಗೆ ಹೋಲಿಕೆ ಮಾಡುವುದು ಗಾಡ್ವಿನ್ ಕಾನೂನಿನ ರೂಪಾಂತರದಂತೆ. ಅತಿಶಯೋಕ್ತಿಗಳಿಂದ ಅಪಾಯಸಾಧ್ಯತೆಗಳು ತಿರಸ್ಕೃತವಾಗುತ್ತವೆ.

ಇವೆಲ್ಲದರ ಹೊರತಾಗಿಯೂ, ಶಿಕ್ಷಣಕ್ಕಿಂತ ಮೂಲಭೂತವಾದ ಹಕ್ಕು ಎನ್ನುವುದು ಒಂದಿದ್ದರೆ ಅದು ಆಹಾರ. ಧಾರ್ಮಿಕ ಕಾನೂನು ಕಟ್ಟಳೆಗಳ ಹಿನ್ನೆಲೆಯಲ್ಲಿ ಶಿಕ್ಷಣವನ್ನು ನಿರ್ಬಂಧಿಸುವುದು ತಪ್ಪುಎಂದಾದರೆ, ಅದರಂತೆಯೇ ಭಾರತದ ಕಡುಬಡವರ ಪಾಲಿಗೆ ಅತ್ಯಂತ ಅಗ್ಗದ ಪ್ರೊಟೀನ್ ಮೂಲವನ್ನು ನಿಯಂತ್ರಿಸುವುದು ಕೂಡಾ ಅಷ್ಟೇ ದೊಡ್ಡ ತಪ್ಪು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...