Monday, November 16, 2015

ರೈತರಿಗೆ ನೇಣುಕುಣಿಕೆಗಳಾದ ಅಭಿವೃದ್ಧಿ ಯೋಜನೆಗಳು
ಮಂಜುಳಾ ಎಸ್.

ವಾರ್ತಾಭಾರತಿ


ದೇಶದಲ್ಲಿ ನೀರಿಗೆ, ಅನ್ನಕ್ಕೆ ಬರವಿದೆ. ಆದರೆ ಅನ್ನದಾತನ ಆತ್ಮಹತ್ಯೆಗಳಿಗೆ ಬರವಿಲ್ಲದಂತಾ ಗಿದೆ, ಪ್ರತಿ ರಾಜ್ಯ, ಜಿಲ್ಲೆಗಳಲ್ಲಿ ಪೈಪೋಟಿಗೆ ಬಿದ್ದಂತೆ ಆತ್ಮಹತ್ಯೆಗಳು ನಡೆಯುತ್ತಿವೆ. ಕೃಷಿಯಲ್ಲಿ ಅವೈಜ್ಞಾನಿಕ ಪದ್ದತಿಯನ್ನು ಬಳಸುತ್ತಿರುವುದು, ಸಾಲ ಮಾಡುತ್ತಿರುವುದು, ಮದುವೆ ಸಮಾರಂಭಗಳಿಗೆ ದುಂದು ವೆಚ್ಚ ಮಾಡುತ್ತಿರುವುದೇ ರೈತರ ಸರಣಿ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ ಎಂದು ನಮ್ಮ ಸರಕಾರಗಳು ಅಮಾನವೀಯವಾಗಿ ಉತ್ತರಿಸುತ್ತಾ ಒಂದಿಷ್ಟು ಪರಿಹಾರ ಧನವನ್ನು ನೀಡಿ ಕೈತೊಳೆದು ಕೊಳ್ಳುತ್ತಿವೆ. ಆದರೆ ರೈತರು ಸಾಯದಂತೆ ಶಾಶ್ವತ ಪರಿಹಾರ ನೀಡಲು ಸರಕಾರಕ್ಕೆ ಸಾಧ್ಯವೇ?.

ರೈತರ ಸರಣಿ ಆತ್ಮಹತ್ಯೆಗಳು ನಿನ್ನೆ ಮೊನ್ನೆಯದಲ್ಲ, ಕಳೆದ ಕೆಲವು ವರ್ಷಗಳಿಂದ ಎಸ್‌ಇಝಡ್, ಹಸಿರು ಕ್ರಾಂತಿ, ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿಯಂತಹ ಜನಪರ ಮುಖವಾಡಗಳನ್ನು ಹೊತ್ತ ಯೋಜನೆಗಳು ಸಾಲುಗಟ್ಟಿ ಬರುತ್ತಿರುವುದು ಈ ನಿಲ್ಲದ ಆತ್ಮಹತ್ಯೆಗಳಿಗೆ ಕಾರಣವಾಗಿದೆ.


ವಿಶೇಷ ಆರ್ಥಿಕ ವಲಯವೆಂಬ ರಾಕ್ಷಸ ಯಾವುದೇ ರೀತಿಯ ಅಡಚಣೆಗಳಿಲ್ಲದೆ ನಿರ್ವಿಘ್ನವಾಗಿ, ನಿರಾಯಾಸವಾಗಿ, ಕಾಲಿಗೆ ಬಿದ್ದವರನ್ನು ತುಳಿಯುತ್ತ ಮುಂದುವರಿಯುತ್ತಿದೆ. ಈ ಯೋಜನೆಯಡಿಯಲ್ಲಿ ಬರುವ ಉದ್ದಿಮೆಗಳಿಗೆ ಐದು ವರ್ಷಗಳ ತನಕ ಆದಾಯ ತೆರಿಗೆ, ಮಾರಾಟ ತೆರಿಗೆ, ಸೇವಾ ತೆರಿಗೆ ಇತ್ಯಾದಿ ತೆರಿಗೆಗಳು ಇರುವುದಿಲ್ಲ...! ಹೊರಗಿನಿಂದ ಆಮದು ಮಾಡಿಕೊಳ್ಳಲು, ಶೇಕಡ 100ರಷ್ಟು ವಿದೇಶಿ ಬಂಡವಾಳ ಹೂಡಲು ನಮ್ಮ ಸರಕಾರಗಳು ಅನುಮತಿ ನೀಡಿವೆ. ಈ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿವೆ ಎಂದು ಸತತವಾಗಿ ನಂಬಿಸಲಾಗುತ್ತಿದೆ.

ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಪ್ರತಿಫಲ ಪಡೆಯುತ್ತಾರೆ ಹಾಗೂ ಹಣದುಬ್ಬರದ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ ಎನ್ನುವ ಮೂಲಕ ಕೇಂದ್ರ ಸರಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಸಮರ್ಥಿಸಿಕೊಂಡಿತ್ತು. ಆದರೆ ಈಗ ವಾಲ್‌ಮಾರ್ಟ್, ಟೆಸ್ಕೋ ಮುಂತಾದ ಬಹು ರಾಷ್ಟ್ರೀಯ ಕಂಪನಿಗಳು ದೇಶದ ಆಂತರಿಕ ಮಾರುಕಟ್ಟೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿವೆ. ತಮ್ಮ ಬಳಿ ಇದ್ದ ಚಿಲ್ಲರೆ ರೂಪಾಯಿಗಳಲ್ಲಿ ಸ್ಥಳೀಯ ಕಿರಾಣಿ ಅಂಗಡಿಗಳಿಂದ ದಿನಸಿ ಸಾಮಗ್ರಿಗಳನ್ನು ತಂದು ಜೀವನ ನಡೆಸುತ್ತಿದ್ದ ಕಡುಬಡವರಿಗೆ ದೊಡ್ಡ ದೊಡ್ಡ ಮಾಲ್‌ಗಳು ಕೈಗೆಟಕದಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಬಹುಬ್ರಾಂಡಿನ ಕಂಪನಿಗಳ ಜೊತೆ ಪೈಪೋಟಿಗೆ ನಿಲ್ಲಲಾಗದೆ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳು, ಬೀದಿಬದಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಬೀದಿಗೆ ಬೀಳುತ್ತಿದ್ದಾರೆ ಮತ್ತು ಈ ಪ್ರಕ್ರಿಯೆ ನಿರಂತರ ನಡೆಯುತ್ತಲೇ ಇರುತ್ತದೆ. ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಎಲ್ಲ ರೀತಿಯ ಐಷಾರಾಮಿ ವಸ್ತುಗಳು, ಆಹಾರ ಪದಾರ್ಥಗಳು, ಮನರಂಜನೆ ಒಂದೇ ಕಡೆ ಸಿಗುವಂತೆ ಮಾಡುವ, ಏಕರೂಪಿ ಮಾರುಕಟ್ಟೆಯಾದ ದೊಡ್ಡ ದೊಡ್ಡ ಮಾಲ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ. ಬೆಂಗಳೂರು, ಮಂಗಳೂರು ಸೇರಿದಂತೆ ದೇಶದ ಹೆಚ್ಚಿನ ಕಡೆಗಳಲ್ಲೆಲ್ಲ ಫಲವತ್ತಾದ ಭೂಮಿಯನ್ನು ಬಂಜರು ಭೂಮಿಯನ್ನಾಗಿ, ವಿಶೇಷ ಆರ್ಥಿಕ ವಲಯವನ್ನಾಗಿ ಮಾರ್ಪಡಿಸಲಾಗಿದೆ. ಭಾರತ ಸರಕಾರವು 2000 ಏಪ್ರಿಲ್‌ನಲ್ಲಿ ವಿಶೇಷ ಆರ್ಥಿಕ ವಲಯದ ಕಾರ್ಯನೀತಿಯನ್ನು ಪರಿಚಯಿ ಸಿತ್ತು. 2005ರಲ್ಲಿ ಈ ಕಾಯ್ದೆ ಅನುಮೋದನೆಗೊಂಡಿತ್ತು. 2007ರ ವೇಳೆಗೆ 500ಕ್ಕೂ ಹೆಚ್ಚಿನ ವಿಶೇಷ ಆರ್ಥಿಕ ವಲಯಗಳು ಪ್ರಸ್ತಾಪಿಸಲ್ಪಟ್ಟು ಅವುಗಳ ಪೈಕಿ 220ರಷ್ಟು ವಿಶೇಷ ಆರ್ಥಿಕ ವಲಯಗಳು ಸೃಷ್ಟಿಸಲ್ಪಟ್ಟವು. ಏಷ್ಯದಲ್ಲೇ ಅತಿದೊಡ್ಡ ಹೊರಗುತ್ತಿಗೆ ಕೈಗಾರಿಕೆಯನ್ನು ಹೊಂದುವುದರ ಮೂಲಕ ವಿಶೇಷ ಆರ್ಥಿಕ ವಲಯದ ನೆಲೆಯನ್ನು ಗಟ್ಟಿಗೊಳಿಸುವುದರಲ್ಲಿ ಭಾರತ ಸಹಕಾರಿಯಾಗಿದೆ. ವಿಶೇಷ ಆರ್ಥಿಕ ವಲಯಗಳ ಸೃಷ್ಟಿಗೆ, ಅಭಿವೃದ್ಧಿಗೆ ತುಂಬಿ ತುಳುಕುವಷ್ಟು ಸವಲತ್ತುಗಳನ್ನು ನೀಡುತ್ತಿರುವ ನಮ್ಮ ಪ್ರಭುತ್ವ ಅಪೌಷ್ಟಿಕತೆಯಿಂದ ನರಳುತ್ತಿರುವ, ಒಂದು ತುತ್ತಿನ ಅನ್ನಕ್ಕೂ ಗತಿಯಿಲ್ಲದೆ ಸಾಯುತ್ತಿರುವ, ದೇಶದ ಸುಮಾರು 30 ಕೋಟಿಗೂ ಹೆಚ್ಚಿನ ಬಡಜನರಿಗೆ ನೇರವಾಗಿ ಸಹಾಯ ಮಾಡಲು ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.


ಈ ಯೋಜನೆಗೆ ಭೂಸ್ವಾಧೀನ ಕಾಯ್ದೆಯ ಪ್ರಕಾರ ಸರಕಾರವು ಸ್ವಾಧೀನಕ್ಕೆ ತೆಗೆದುಕೊಳ್ಳುವ ಭೂಮಿಯ ಬೆಲೆಯನ್ನು ನಿರ್ಧರಿಸುವಾಗ, ಭೂಮಿಯ ಇಂದಿನ ಬಳಕೆಯ ಆಧಾರದ ಮೇಲೆಯೆ ಬೆಲೆಯನ್ನು ನಿರ್ಧರಿಸಬೇಕು. ಆದರೆ ಹಾಗಾಗದೆ ರೈತರನ್ನು ಮರುಳಾಗಿಸಿ, ನಾಜೂಕಾಗಿ ಕೃಷಿಭೂಮಿಯನ್ನು ವಶಪಡಿಸಿಕೊಂಡು ಅವರನ್ನು ದಿವಾಳಿ ಎಬ್ಬಿಸುವ ಪ್ರಕ್ರಿಯೆ ನಡೆಯುತ್ತಲೇ ಬಂದಿದೆ. ಉದಾಹರಣೆಗೆ 2012ರಲ್ಲಿ ಒಎನ್‌ಜಿಸಿ ಮತ್ತು ಪೆಟ್ರೋಲಿಯಂ ಕಂಪನಿಗಳಿಗಾಗಿ ಮಂಗಳೂರಿನ ಹಲವು ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರ ಕೈಗಳನ್ನು ಕಟ್ಟಿದ್ದಲ್ಲದೆ, ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಅಲ್ಲಿನ ಮೀನುಗಾರರ ಕುಲಕಸುಬಿಗೆ ದೊಡ್ಡ ಹೊಡೆತ ಕೊಟ್ಟಿದೆ. ಸಮಸ್ಯೆಗಳಿಗೆ ಬೆನ್ನುಹಾಕಿ ಓಡಿಹೋಗುವ ಇತಿಹಾಸ ರೈತವರ್ಗದಲ್ಲಿರಲಿಲ್ಲ. ಎಂತಹ ಸಂಕಷ್ಟದಲ್ಲೂ ಸಾಯುತ್ತಿರಲಿಲ್ಲ. ಆದರೆ ಕಳೆದ 20 ವರ್ಷಗಳಲ್ಲಿ ಸಹಸ್ರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅದನ್ನು ನಾವು ಸಹಜವಾಗಿ ತೆಗೆದು ಕೊಳ್ಳುವಂತಿಲ್ಲ. ರೈತರು ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಬೆಳೆ ಬಂದಾಗ ಕಂತುಗಳ ರೂಪದಲ್ಲಿ ತೀರಿಸುತ್ತಿದ್ದರು. ಆದರೆ 2004ರಲ್ಲಿ ಬ್ಯಾಂಕುಗಳ ಕೃಷಿ ಸಾಲದ ನೀತಿ ಬದಲಾದಾಗಿನಿಂದ ಅಸಲಿನ ಜೊತೆ ಬಡ್ಡಿ ಸಮೇತ ಸಾಲವನ್ನು ತೀರಿಸುವ ಇಕ್ಕಟ್ಟಿಗೆ ಸಿಲುಕಿಕೊಳ್ಳುವಂತೆ ಮಾಡಿ ಮತ್ತಷ್ಟು ಒತ್ತಡವನ್ನು ಹೇರಲಾಯಿತು.

 1963ರಲ್ಲಿ ಬಂದ ಹಸಿರುಕ್ರಾಂತಿ ಯೋಜನೆ ಎಂ.ಎನ್.ಸಿ ಕಂಪೆನಿಗಳ ಉದ್ಧಾರಕ್ಕಾಗಿ ಮತ್ತು ಮಾರುಕಟ್ಟೆಯನ್ನು ವಿಸ್ತರಿಸುವ ಉದ್ಧೇಶಕ್ಕಾಗಿ ಭಾರತದ ಬೆನ್ನೆಲುಬಾಗಿದ್ದ ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿತು. ಅಲ್ಲಿಯವರೆಗೂ ರೈತರೇ ಉತ್ಪಾದಿಸಿಕೊಳ್ಳ್ಳುತ್ತಿದ್ದ ತಿಪ್ಪೆಗೊಬ್ಬರ, ಬಿತ್ತನೆ ಬೀಜಗಳು, ಜೀವಾಮೃತಗಳನ್ನು ತ್ಯಜಿಸಿ ದುಬಾರಿ ಕೀಟನಾಶಕಗಳು, ರಾಸಾಯನಿಕ ಗೊಬ್ಬರ, ಹೈಬ್ರಿಡ್ ತಳಿ ಬೀಜಗಳಿಗಾಗಿ ಎಂಎನ್‌ಸಿ ಕಂಪೆನಿಗಳ ಮೊರೆ ಹೋಗುವಂತೆ ಮಾಡಲಾಯಿತು. ಈ ಮೂಲಕ ಸ್ವಾವಲಂಬಿಯಾಗಿದ್ದ ರೈತರನ್ನು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ದಾಸ್ಯಕ್ಕೆ ಬೀಳಿಸಿ, ಬಲವಂತವಾಗಿ ಸಾಲದ ಹೊರೆಯನ್ನು ಹೊರಿಸಲಾಯಿತು. ಕೋರಮಂಡಲ್, ಮಾನ್ಸಂಟೋನಂತಹ ಕಂಪೆನಿಗಳು ವರ್ಷದಿಂದ ವರ್ಷಕ್ಕೆ ರೈತರ ಸಾಲದ ಪ್ರಮಾಣವನ್ನು ಹೆಚ್ಚಿಸುತ್ತ್ತ, ತಮ್ಮ ಲಾಭದ ಪ್ರಮಾಣವನ್ನೂ ಹೆಚ್ಚಿಸಿಕೊಳ್ಳುತ್ತಿವೆ. ರೈತ ಇಂತಹ ವಿಷವರ್ತುಲಗಳಿಗೆ ಸಿಕ್ಕಿ ಕೊನೆಗೆ ಯಾವ ಮಾರ್ಗವೂ ಕಾಣದೆ ಸಾವಿನ ಮೊರೆ ಹೋಗುತ್ತಾನೆ. ದೇಶದ ಅನ್ನದಾತ ರೈತನ ಆತ್ಮಹತ್ಯೆಗೆ ನೇರ ಕಾರಣವಾಗುತ್ತಿರುವ ನಮ್ಮ ಅಭಿವೃದ್ಧ್ಧಿ ಯೋಜನೆಗಳು ಮರಣಮೃದಂಗ ಬಾರಿಸುತ್ತಿವೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...