Wednesday, November 11, 2015

ಟಿಪ್ಪು ಜಯಂತಿ ನೆಪದಲ್ಲಿ ಮತ್ತೊಮ್ಮೆ ಕೊಡಗಿಗೆ ಬೆಂಕಿ ಹಚ್ಚಲು ಹೊರಟವರು
ವಾರ್ತಾಭಾರತಿ ಸಂಪಾದಕೀಯ

ಕೊಡಗಿಗೆ ಕೋಮುಗಲಭೆ ಹೊಸತೇನೂ ಅಲ್ಲ. 80ರ ದಶಕದಲ್ಲಿ ಸೋಮವಾರ ಪೇಟೆಯ ಪಾಕಿಸ್ತಾನ ಧ್ವಜ ಹಾರಾಟ ಪ್ರಕರಣ, ವೀರಾಜಪೇಟೆಯಲ್ಲಿ ನಡೆದ ಕೋಮುಗಲಭೆಗಳು ಕುಪ್ರಸಿದ್ಧವಾದುವು. ಇದಾದ ಬಳಿಕವೂ ಪದೇ ಪದೇ ಕೊಡಗಿನಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆದಿವೆ. 1998ರಲ್ಲಿ ಅರೆಕಾಡು ಎಂಬಲ್ಲಿ ಮುಸ್ಲಿಮರ ಮೇಲೆ ನಡೆದ ಬರ್ಬರ ದಾಳಿ ರಾಜ್ಯಾದಾದ್ಯಂತ ಸುದ್ದಿಯಾಗಿತ್ತು. ಆದಾದ ಬಳಿಕವೂ ಸಣ್ಣ ಪುಟ್ಟ ಘಟನೆಗಳನ್ನು, ನೆಪಗಳನ್ನು ಮುಂದಿಟ್ಟು ದುಷ್ಕರ್ಮಿಗಳು ಕೊಡಗಿನ ನೆಮ್ಮದಿಯನ್ನು ಕೆಡಿಸುತ್ತಲೇ ಬಂದಿದ್ದಾರೆ. ಇದೀಗ ‘ಟಿಪ್ಪು ಜಯಂತಿ’ಯ ಹೆಸರಿನಲ್ಲಿ ಮತ್ತೆ ಕೊಡಗಿಗೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಇಲ್ಲಿ ‘ಟಿಪ್ಪು ಜಯಂತಿ’ ಅವರಿಗೆ ಒಂದು ನೆಪ ಮಾತ್ರವಾಗಿತ್ತು. ಸದ್ಯದಲ್ಲೇ ಬರುತ್ತಿರುವ ಸ್ಥಳೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಯಾವುದಾದರೊಂದು ನೆಪ ಮುಂದಿಟ್ಟು ಕೋಮು ಕಿಚ್ಚನ್ನು ಹಬ್ಬಿಸಿ ಸಮಾಜ ಒಡೆಯುವುದು ದುಷ್ಕರ್ಮಿಗಳಿಗೆ ಅನಿವಾರ್ಯವಾಗಿದೆ. ‘ಟಿಪ್ಪು ಜಯಂತಿ’ಯ ಮೂಲಕ ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುವುದು ಅವರಿಗೆ ತುಂಬಾ ಸುಲಭವಾಗಿತ್ತು. ಪೊಲೀಸರ ದೌರ್ಬಲ್ಯ ಅವರ ಕೆಲಸವನ್ನು ಇನ್ನಷ್ಟು ಸುಲಭ ಮಾಡಿಕೊಟ್ಟಿತು.


ಟಿಪ್ಪುವಿನ ಕುರಿತಂತೆ ಕೊಡಗಿನ ಮೇಲ್ವರ್ಗದ ಕೊಡವ ಸಮಾಜದಲ್ಲಿ ಅಸಮಾಧಾನವೊಂದಿದೆ. ಅದೆಂದರೆ, ಟಿಪ್ಪು ಬ್ರಿಟಿಷರಿಗೆ ನೆರವಾಗಿದ್ದ ಕೊಡವರನ್ನು ಬಂಧಿಸಿ ಜೈಲಿಗೆ ತಳ್ಳಿದ್ದ, ಹಲವರನ್ನು ಕೊಂದಿದ್ದ, ಸೆರೆಹಿಡಿದಿದ್ದ ಎಂದು. ಇದಕ್ಕೆ ಕಾರಣ ಅವರು ಬ್ರಿಟಿಷರ ಪರವಾಗಿದ್ದರು ಎಂಬುದಾಗಿತ್ತೇ ಹೊರತು ಕೊಡವ ಸಮುದಾಯದ ಮೇಲೆ ಟಿಪ್ಪುವಿಗೆ ಯಾವ ಅಸಮಾಧಾನವೂ ಇದ್ದಿರಲಿಲ್ಲ. ಆದರೆ ಸಂಘಪರಿವಾರದ ನಾಯಕರು ಟಿಪ್ಪುವಿನ ಈ ಕೃತ್ಯವನ್ನು ಮುಂದಿಟ್ಟುಕೊಂಡು ಸ್ಥಳೀಯ ಕೊಡವ ಸಮಾಜವನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತ ಬಂದಿದ್ದಾರೆ. ಇದು ಇಂದು ನಿನ್ನೆಯ ಕಥೆಯಲ್ಲ. ಇದೀಗ ಸರಕಾರ ‘ಟಿಪ್ಪು ಜಯಂತಿ’ಯನ್ನು ಘೋಷಿಸಿದ್ದು ಸಂಘಪರಿವಾರಕ್ಕೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಯಿತು. ಟಿಪ್ಪು ಸುಲ್ತಾನ ಜಯಂತಿ ಕೊಡಗಿನಲ್ಲಿ ಸಣ್ಣದೊಂದು ಉದ್ವಿಗ್ನ ವಾತಾವರಣ ನಿರ್ಮಿಸಬಹುದು ಎನ್ನುವ ಮುಂದಾಲೋಚನೆ ರಾಜ್ಯಕ್ಕೆ ಮೊದಲೇ ಇರಬೇಕಾಗಿತ್ತು. ಯಾಕೆಂದರೆ ಟಿಪ್ಪುವನ್ನು ಮುಂದಿಟ್ಟುಕೊಂಡು ಕೊಡಗಿನ ಜನರನ್ನು ಭಾವನಾತ್ಮಕವಾಗಿ ಸಂಘಪರಿವಾರ ಕೆರಳಿಸುತ್ತ ಬಂದಿರುವುದು ಇಂದು ನಿನ್ನೆಯಲ್ಲ. ಹೀಗಿರುವಾಗ ಇದೇ ಮೊದಲ ಬಾರಿ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುತ್ತದೆ ಎಂದಾಗ, ಸಂಘಪರಿವಾರ ಅದರಲ್ಲಿ ತನ್ನ ಬೇಳೆಯನ್ನು ಬೇಯಿಸದೇ ಇರುತ್ತದೆಯೇ? ನವೆಂಬರ್ 10ರಂದು ಅದೇ ನಡೆಯಿತು. ಮಡಿಕೇರಿಯಲ್ಲಿ ನಡೆಯುವ ಸಮಾರಂಭಕ್ಕೆ ವೀರಾಜಪೇಟೆ, ಸೋಮವಾರಪೇಟೆಯ ಜನರು ವಾಹನಗಳಲ್ಲಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಜನರ ವಿರುದ್ಧ ದಾಳಿ ನಡೆಸಲು ಸಂಘಪರಿವಾರ ಮೊದಲೇ ಸಿದ್ಧತೆ ನಡೆಸಿತ್ತು. ಟೋಲ್‌ಗೇಟ್ ಸಮೀಪ ಸಂಘಪರಿವಾರದ ಸಣ್ಣ ಗುಂಪು ಪ್ರತಿಭಟನಾ ನಿರತವಾಗಿತ್ತು. ಉದ್ವಿಗ್ನಕಾರಿ ಘೋಷಣೆಗಳನ್ನು ಕೂಗುತ್ತಿತ್ತು. ಇವರ ಉದ್ದೇಶ ಪೊಲೀಸರಿಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಟಿಪ್ಪು ಜಯಂತಿ ಸರಕಾರಿ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸುವ ಜನರಿಗೆ ಭದ್ರತೆ ಕೊಡುವುದು ಪೊಲೀಸರ ಕರ್ತವ್ಯ. ನಿರೀಕ್ಷಿಸಿದಂತೆಯೇ ಆಯಿತು. ಟಿಪ್ಪುವಿನ ಪರವಾಗಿ ಘೋಷಣೆ ಕೂಗುತ್ತಾ ವಾಹನಗಳಲ್ಲಿ ಆಗಮಿಸುತ್ತಿದ್ದ ಕೊಡಗಿನ ಇತರ ಭಾಗದ ಜನರನ್ನು ಸಂಘಪರಿವಾರ ತಡೆಯುವ ಪ್ರಯತ್ನ ಮಾಡಿತು. ಟಿಪ್ಪು ವಿರೋಧಿ, ಟಿಪ್ಪು ಪರ, ಸರಕಾರ ವಿರೋಧಿ, ಆರೆಸ್ಸೆಸ್ ವಿರೋಧಿ ಘೋಷಣೆಗಳು ಕೈ ಮಿಲಾಯಿಸಿಕೊಂಡವು. ಇಡೀ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ಪೊಲೀಸರಿಗೆ ಗೊತ್ತಿರಲಿಲ್ಲ. ವಾಹನಗಳಲ್ಲಿ ಆಗಮಿಸಿದವರ ಮೇಲೆ ಒಂದೆಡೆ ಸಂಘಪರಿವಾರದಿಂದ ಕಲ್ಲು ತೂರಾಟ ನಡೆಯಿತು. ಇತ್ತ ಪೊಲೀಸರು ಟಿಪ್ಪು ಜಯಂತಿಯಲ್ಲಿ ಭಾಗವಹಿಸಲು ಬಂದವರ ಮೇಲೂ, ಸಂಘಪರಿವಾರದ ಕಾರ್ಯಕರ್ತರ ಮೇಲೂ ಯದ್ವಾತದ್ವಾ ಲಾಠಿ ಬೀಸತೊಡಗಿದರು. ಅಶ್ರುವಾಯು ಕೂಡ ಸಿಡಿಸಲಾಯಿತು. ಪರಿಣಾಮವಾಗಿ, ಉಭಯ ಗುಂಪುಗಳು ಚೆಲ್ಲಾ ಪಿಲ್ಲಿಯಾದವು. ಇದೇ ಸಂದರ್ಭದಲ್ಲಿ ಸಂಘಪರಿವಾರದ ಮುಖಂಡನೊಬ್ಬ ಲಾಠಿ ಏಟಿನಿಂದ ತಪ್ಪಿಸಿಕೊಂಡು ಓಡುವ ಭರದಲ್ಲಿ ಗೋಡೆ ಹಾರಿ, ಆಳಕ್ಕೆ ಬಿದ್ದು ತಲೆ ಒಡೆದು ಪ್ರಾಣಕಳೆದುಕೊಂಡರು. ಇನ್ನೊಬ್ಬ ಅಮಾಯಕನೂ ಮೇಲಿನಿಂದ ಬಿದ್ದು ಮೃತಪಟ್ಟ. ಇಬ್ಬರ ಸಾವಿನಲ್ಲೂ ಸಂಘಪರಿವಾರ ಮತ್ತು ಪೊಲೀಸರ ಪಾಲುದಾರಿಕೆಯಿದೆ. ಇದೇ ಸಂದರ್ಭದಲ್ಲಿ, ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಸಂಘಪರಿವಾರ ಮುಖಂಡನನ್ನು ಕೊಂದು ಹಾಕಲಾಯಿತು ಎಂದೆಲ್ಲ ವದಂತಿ ಹಬ್ಬಿಸುವ ಪ್ರಯತ್ನ ನಡೆಯಿತು. ಇದೇ ಸಂದರ್ಭದಲ್ಲಿ ಟಿಪ್ಪು ಜಯಂತಿ ಉತ್ಸವ ಮುಗಿಸಿ ಮರಳುತ್ತಿದ್ದವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಹಲವರು ಗಾಯಗೊಂಡಿದ್ದು, ಒಬ್ಬ ಮೈಸೂರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಮೊತ್ತ ಮೊದಲಾಗಿ ಟಿಪ್ಪು ಜಯಂತಿಯ ಸಂದರ್ಭದಲ್ಲಿ ಕರಾಳ ದಿನಾಚರಣೆ ಮತ್ತು ಪ್ರತಿಭಟನೆ ಹಮ್ಮಿಕೊಂಡ ಸಂಘಪರಿವಾರದ ಮುಖಂಡರನ್ನು ಬಂಧಿಸಬೇಕಾಗಿದೆ. ಯಾವುದೇ ಪ್ರತಿಭಟನೆ ಶಾಂತಿಯುತವಾಗಿರಬೇಕು. ಸಮಾಜವನ್ನು ಉದ್ವಿಗ್ನಗೊಳಿಸುವಂತಿರಬಾರದು. ಟಿಪ್ಪುವಿನ ಕುರಿತಂತೆ ಅಸಮಾಧಾನವಿದ್ದರೆ ಅದಕ್ಕಾಗಿಯೇ ಒಂದು ಸಮಾರಂಭ ಮಾಡಿ ವೇದಿಕೆಯಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುವ ಅವಕಾಶ ಜನರಿಗಿದೆ. ಆದರೆ ಒಂದು ಸಮಾರಂಭಕ್ಕೆ ತೆರಳುವವರನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಅದೂ ಸರಕಾರವೇ ಹಮ್ಮಿಕೊಂಡ ಸಮಾರಂಭದಲ್ಲಿ ಭಾಗವಹಿಸದಂತೆ ತಡೆಯುವುದು ಅಕ್ಷಮ್ಯ ಅಪರಾಧ. ಈ ನಿಟ್ಟಿನಲ್ಲಿ ಘಟನೆಗೆ ಮೂಲ ಕಾರಣರಾದ ಜನರನ್ನು ಸರಕಾರ ತಕ್ಷಣ ಬಂಧಿಸಬೇಕಾಗಿದೆ. ಹಾಗೆಯೇ ಸ್ಥಳೀಯ ಒತ್ತಡಕ್ಕೆ ಮಣಿದು ಅಮಾಯಕರನ್ನು ಬಂಧಿಸದಂತೆಯೂ ಸರಕಾರ ನೋಡಿಕೊಳ್ಳಬೇಕಾಗಿದೆ.

ಟಿಪ್ಪು ಯಾವುದೇ ಸಮುದಾಯಕ್ಕೆ ಸೇರಿದ ನಾಯಕನಲ್ಲ. ಅವನು ಇಡೀ ಕನ್ನಡದ ಅಸ್ಮಿತೆ. ಮುಸ್ಲಿಮ್ ಸಮುದಾಯದ ಕೆಲವು ಸಂಘಟನೆಗಳು ಟಿಪ್ಪುವನ್ನು ಮುಸ್ಲಿಮರ ನಾಯಕನಂತೆ ಚಿತ್ರಿಸಲು ಯತ್ನಿಸುತ್ತಿವೆ. ಟಿಪ್ಪು ಎಲ್ಲ ಸಮುದಾಯಗಳನ್ನೂ ಒಂದೇ ತೆಕ್ಕೆಯಲ್ಲಿ ತರಲು ಯತ್ನಿಸಿದ್ದ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಆತ ಮಸೀದಿಗಳಿಗೆ ನೆರವು ನೀಡಿದಂತೆಯೇ ದೇವಸ್ಥಾನ, ಮಠಗಳಿಗೂ ನೆರವು ನೀಡಿದ್ದ. ಶತ್ರುಗಳಿಂದ ಅವನು ಎಲ್ಲ ಜಾತಿ, ಧರ್ಮಗಳ ಜನರಿಗೂ ರಕ್ಷಣೆ ನೀಡಿದ್ದ. ದಲಿತರಿಗೆ, ದುರ್ಬಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ನೀಡಲು ಸರ್ವ ಪ್ರಯತ್ನ ಮಾಡಿದ್ದ. ಒಂದು ರೀತಿಯಲ್ಲಿ ಜಾತ್ಯತೀತವಾದ ಸಮಾಜಮುಖಿ ಆಡಳಿತವನ್ನು ನೀಡಲು ಗರಿಷ್ಠ ಪ್ರಯತ್ನ ಮಾಡಿದ್ದ. ಮತ್ತು ಈ ಕಾರಣಕ್ಕಾಗಿಯೇ ನಾವು ಟಿಪ್ಪುವನ್ನು ನೆನೆಯಬೇಕು. ದಲಿತರು, ಹಿಂದುಳಿದವರ್ಗ, ಅಲ್ಪಸಂಖ್ಯಾತರು ಜೊತೆಗೂಡಿ ಟಿಪ್ಪು ಜಯಂತಿಯನ್ನು ಆಚರಿಸಬೇಕು. ಆ ಮೂಲಕ ಕನ್ನಡದ ಪರಂಪರೆ ಉಳಿಯಬೇಕು, ಬೆಳೆಯಬೇಕೇ ಹೊರತು, ಅವನನ್ನು ಬಳಸಿಕೊಂಡು ಸಮಾಜವನ್ನು ಒಡೆಯುವ ಕೆಲಸ ಯಾವ ಸಮುದಾಯದವರೇ ಮಾಡಲಿ, ಅದು ಅಕ್ಷಮ್ಯ ಅಪರಾಧ. ಅವರನ್ನು ಪೊಲೀಸರು ತಮ್ಮ ಲಾಠಿಯಿಂದ ಬಗ್ಗು ಬಡಿಯಲು ಯಾವ ರೀತಿಯ ಹಿಂಜರಿಕೆಯನ್ನೂ ತೋರಿಸಬಾರದು.ಅ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...