Friday, November 13, 2015

ನನ್ನೂರು ಅರೇಶಂಕರ ಎಂಬ ಪುಟ್ಟ ಹಳ್ಳಿ ಮತ್ತು ನಾನು

ಛಾಯಾ ಭಗವತಿ 

 

ಅಜ್ಜನಿಂದ ಕಾಗದ ಬಂದಿರುತ್ತಿತ್ತು, ‘ಶುಭಾಶೀರ್ವಾದಗಳು. ತಾಯೀ, ಈ ಕಾಗದ ಬರೆಯುವ ಕಾರಣವೇನೆಂದರೆ, ಮಕ್ಕಳಿಗೆ ಸಾಲಿ ಸೂಟಿ ಬಿಟ್ಟಿರುವುದರಿಂದ ಕರೆದುಕೊಂಡು ರಜೆಗೆ ಬರುವುದು. ಹರಿಹರಕ್ಕೆ ತಮ್ಮನನ್ನು (ಅಂದರೆ ನಮ್ಮ ಸೋದರಮಾವ) ಕಳಿಸಿಕೊಡುತ್ತೇನೆ. ಜಾಗ್ರತೆಯಿಂದ ಬನ್ನಿ. ಅಪ್ಪ…ಅಮ್ಮನ ಸಡಗರಕ್ಕೆ ಕೊನೆಯೇ ಇರುತ್ತಿರಲಿಲ್ಲ. ಟ್ರಂಕು ಹೊರಕ್ಕೆ ತೆಗೆದು, ನಮ್ಮ ಇದ್ದಷ್ಟೆ ಅರಿವೆಗಳನ್ನ, ತನ್ನವನ್ನ ಅದಕ್ಕೆ ತುಂಬಿಕೊಂಡು, ಒಂದಷ್ಟು ಸಿಹಿದಿನಿಸುಗಳು, ಒಣ ಅವಲಕ್ಕಿ ಸೂಸಲ, ಸಮಯಾ ಅಂತ ಸಿಕ್ಕರೆ ತನ್ನ ಗೆಳತಿಯಿಂದ ಬೇಸನ್ನುಂಡಿ ಮಾಡಿಸಿಕೊಂಡು ದಾರಿಗೊಂದಿಷ್ಟು ಬುತ್ತಿ ಕಟ್ಟಿಕೊಂಡು ಹೊರಟು ನಿಂತರೆ ನಮಗಾದರೂ ಎಷ್ಟು ಖುಷಿ, ಆಕೆಗಾದರೂ ಅದೆಂಥ ಆನಂದ!

 
ಬಸ್ಸಿನಲ್ಲಿ ಸೀಟು ಹಿಡಿಯಲು ಆಕಾರದಲ್ಲಿ ಪಿಳ್ಳೆಗಳ ಹಾಗಿದ್ದ ನನ್ನನ್ನ ತಮ್ಮನನ್ನ ಕಿಡಕಿಯಿಂದಲೇ ತೂರಿಸಿ, ತುಂಬಿಬಿಟ್ಟರೆ, ನಾವು ಐದು ಜನಕ್ಕೆ ಮೂವರ ಸೀಟು ಬರಾಬ್ಬರಿ ಆಗುತ್ತಿತ್ತು. ಬಸ್ಸಿನಲ್ಲಿ ನಮ್ಮ ಗಲಾಟೆಗೆ ಎಂದೂ ಬೇಸರಿಸಿಕೊಳ್ಳದೇ, ಸಮಾಧಾನದಿಂದ ಇಡೀ ದಿನದ ಪ್ರಯಾಣವನ್ನ ಆಕೆ ನಿಭಾಯಿಸುತ್ತಿದ್ದ ರೀತಿಯನ್ನ ಇವತ್ತು ನೆನೆದರೆ ಮನಸ್ಸು ತುಂಬಿ ಬರುತ್ತದೆ. ನಿಂಬೆಹುಳಿ ಪೆಪ್ಪರುಮಿಂಟು, ಬಸ್ಸು ನಿಲ್ಲಿಸಿದಲ್ಲಿ ಸುಸ್ಸು, ನೀರು, ಅಪರೂಪಕ್ಕೆ ಪಾರ್ಲೆಜಿ ಬಿಸ್ಕಿಟ್ಟು – ಇಷ್ಟು ನಮ್ಮ ಸಂಗಾತಿಗಳು

ಊರು ಮುಟ್ಟಿದ ಕೂಡಲೆ, ರೊಟ್ಟಿ ಗಿಣ್ಣು ನಮಗಾಗಿ ಕಾದಿರುತ್ತಿದ್ದವು. ರಜೆಯೂ ಮಜಬೂತಾಗಿರುತ್ತಿತ್ತು! ಇವತ್ತು ಇದೆಲ್ಲ ಯಾಕೆ ನೆನಪಾಯಿತೆಂದರೆ…

ಕಳೆದ ಒಂದು ವಾರದಿಂದ ದಿನಕ್ಕೆ ನಾಕು ಸಲ ಅಪ್ಪ ಫೋನು ಮಾಡುತ್ತಿದ್ದಾರೆ, ‘ಅವ್ವಾ, ಎಂದು ಬಿಡತೀರಿ? ತಮ್ಮನ್ನ ಕ್ರಾಸಿಗೆ ಕಳಸ್ತೀನಿ. ಆರಾಮಾಗಿ ಬರ್ರಿ”. ದಿನಕ್ಕೆ ಹತ್ತು ಸಲ ಅವರಿಗೆ ಅಪ್ಡೇಟ್ ಮಾಡಿ ಮಾಡಿ ಪ್ರಯಾಣದ ಸೊಗಸು ಮಾಸಿಬಿಟ್ಟರೆ ಅನ್ನುವ ಯೋಚನೆ! ಮಕ್ಕಳನ್ನು ಕಿಡಕಿಯಲ್ಲಿ ತೂರಿಸುವ ಧಾವಂತದ ಮಜಾ ಇಲ್ಲ, ಇದ್ದರೂ ಅವು ಅದನ್ನು ಮಾಡಿಯಾವೆಂಬ ನಂಬಿಕೆ ಇಲ್ಲವೇ ಇಲ್ಲ. ಮಲಗಿಕೊಂಡೇ ಹೋಗುವ ಬಸ್ಸಿಗೆ ಹೋಗೋಣ ಅನ್ನುವ ಅವರ ಹಠಕ್ಕೆ ಬ್ರೇಕು ಹಾಕಿ, ಕುಳಿತೇ ಹೋಗುವ ಬಸ್ಸಿಗೆ ಸೋ ಕಾಲ್ಡ್ ರಿಸರ್ವೇಶನ್ ಆಗಿಹೋಗಿದೆ. ಇನ್ನೇನಿದ್ದರೂ, ಕ್ರಾಸಿಗೆ ತನ್ನ ಬಾಡಿ ಗಾರ್ಡುಗಳಾದ ಕಿನ್ನ್ಯಾ ಮತ್ತು ಕುನ್ನಿಗಳನ್ನ ಕರೆದುಕೊಂಡು ಪಟಪಟ್ಟಿಯ ಮ್ಯಾಲೆ ಕರೆಯಲು ಬರುವ ತಮ್ಮನನ್ನು ಕಾಣುವ ತವಕವಷ್ಟೇ!

‘ಹೊಲದ ತುಂಬ ಇರುವ ಮಾವಿನ ಮರಗಳ ಮೇಲೇ ನಿಮ್ಮನ್ನು ಕುಂದ್ರಿಸಿ, ಅಲ್ಲೇ ಹಣ್ಣು ಕಿತ್ತಿಕೊಂಡು ತಿನ್ನುವುದಕ್ಕಾಗಿ ಹಣ್ಣು ಹರಿಯದೇ ಹಾಗೇ ಬಿಟ್ಟಿದ್ದೇವೆ’ ಅಂತ ಅಮ್ಮ ಬೇರೆ ಹೇಳಿ ಬಿಟ್ಟಿರುವುದರಿಂದ, ಈ ಪಿಳ್ಳೆಗಳಿಗೆ ಅದು ಸ್ವರ್ಗಸದೃಶ ಕಲ್ಪನೆಯಾಗಿ ಕಣ್ಣಲ್ಲಿ ಕುಣಿದಾಡತೊಡಗಿದೆ. ಅಂತೂ ತವರಿಗೆ ಬಾ ತಾಯೀ ಅಂದ ಅಪ್ಪ ಅಮ್ಮರ ಮಾತಿಗೊಪ್ಪಿ ಅಪರೂಪಕ್ಕೆ ಸಂಸಾರ ಸಮೇತ ನನ್ನೂರು ಅರೇಶಂಕರ ಎಂಬ ಪುಟ್ಟ ಹಳ್ಳಿಗೆ ಹೊರಟು ನಿಂತಿದ್ದೇನೆ. ಎಷ್ಟೊಂದು ಖುಷಿ ಅಂತೀರಿ!
 

 
No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...