Monday, November 23, 2015

ಪ್ರತಿಭಾ ನಂದಕುಮಾರ್ ಎರಡು ಕವಿತೆಗಳು
1

ಸೀರೆ ಉಡುವುದು


(ನನಗಿನ್ನೂ ಸೀರೆ ಉಡಲು ಬರುವುದಿಲ್ಲ - ಬಿಪಾಶಾ ಬಸು)
ಸೀರೆ ಉಡುವುದು ಬಹಳ ಕಷ್ಟ ಕಣ್ರೀ
ಯಾರದಾದರೂ ಸಹಾಯ ಬೇಕೇ ಬೇಕು
ಅನ್ನಬೇಡಿ, ಅದೇನು ಮಹಾ ವಿದ್ಯೆಯಲ್ಲ
ಕಲಿಯುವುದು ಕಷ್ಟವಲ್ಲ

ಮೊದಲು ಸೀರೆ ಬಳಸಲು ದೇಹವೊಂದಿರಬೇಕು
ಅದು ಅಳತೆಗೆ ತಕ್ಕುದ್ದಾಗಿರಬೇಕು
ವರ್ಣನೆಯ ಬಟ್ಟ ನಡು, ತೋರ ಮೊಲೆ, ಘನ ಜಂಘ
ಬಾಳೆದಿಂಡಿನ ತೊಡೆ, ನೀಳಕಾಲು ಇನ್ನು ನಿರಿಗೆಯಡಿಯಿಂದ
ಇಣುಕುವ ಚಿಗುರು ಪಾದಗಳಿದ್ದರೆ ಸಾಕು.

ಈಗ ಯಾವ ಮಾದರಿಯೆಂದು ನಿರ್ಧರಿಸಬೇಕು
ನೇರವೋ, ಗೊಬ್ಬೆ ಸೆರಗೋ, ಕೊಡವ ಮಾದರಿಯದೋ
ಬ್ರಾಹ್ಮಣರ ನಾಜೂಕಿನ ಕತ್ರಿ ಕಚ್ಚೆಯೋ
ಶೂದ್ರರ ಸುಮ್ಮನೇ ಸುತ್ತಿಕೊಂಡು ಮರೆಯುವುದೋ.

ಇನ್ನು ಸೀರೆ ಯಾವುದೆನ್ನುವ ತೀರ್ಮಾನ ಅದು ಬೇರೆಯೇ ಶಾಖೆ
ಅಮ್ಮನ ಹಳೆಯ ಮೃದು ರೇಶ್ಮೆ, ಅಪ್ಪ ತಂದ ಕೈಮಗ್ಗದ ಗಡಸು
ಅಣ್ಣ ಕೊಟ್ಟ ಮೊದಲ ಪಾಲಿಯೆಸ್ಟರ್, ತಾನೇ ಕೊಂಡ ಡಿಸೈನರ್
ಮೊದಲ ಪ್ರಣಯದ ಮುತ್ತಿನ ನವಿರು ಶಿಫಾನ್

ತೊಡಗುವುದು ಈಗ ಕಲಿಕಾ ಪ್ರಯೋಗ
ಎಲ್ಲಿಂದ ಶುರು ಎಲ್ಲಿಗೆ ಕೊನೆ ಯಾವುದು ನಡುವೆ ಏನೂ
ತಿಳಿಯದ ಗೋಜಲು ಇಸ್ತ್ರಿ ಮುದುಡಿ ಸೀರೆ ಸುಕ್ಕುಸುಕ್ಕಲು

ಹಾಗೇ ನಿಧಾನ ಗೋಜಲಿನೊಳಗಿಂದಲೇ ಮೂಡುವುದು ವಿಧಾನ
ಹಿಂದಿನವರು ಬರಿ ಸೀರೆಯನ್ನೆ ಬಾಳೆಗಂಟು ಕಟ್ಟುತ್ತಿದ್ದರಂತೆ ಈಗ
ಗುಟ್ಟಿರುವುದು ಒಳಲಂಗದ ಭದ್ರಕಟ್ಟಿನಲ್ಲಿ ಅದರಲ್ಲಿ
ಒಂದು ತುದಿ ಸಿಕ್ಕಿಸಿ ಜಾರದಂತೆ ಹಿಡಿದು ಕೂಡಿಸುವುದರಲ್ಲಿ.

ಉಳಿದ ಮಾರುಮಾರನ್ನು ಎಳೆದೆಳೆದು ಸರಸರನೆ ನೆರಿಗೆ ಮಾಡುವುದು
ಆರಾದರೆ ಆರು, ಎಂಟಾದರೆ ಎಂಟು, ಹತ್ತು ಬಂದರೆ ಚಿಮ್ಮಿ ನಡೆಯಲು ಸೊಗಸು
ಸೆರಗಿಗೆಷ್ಟು ಬಿಡಬೇಕು ಎನ್ನುವುದು ಅವರವರ ಭಾವಭಕುತಿಗೆ
ಅದು ಹಾಸಲೋ, ಹೊದಿಯಲೋ ಅಥವಾ ತಲೆಮೇಲೇರಿ ಬಂದು ಸೊಂಟಕ್ಕೆ ಬಿಗಿಯಲೋ

ಇನ್ನು ರವಿಕೆಯ ಪ್ರಸಂಗ ಅದಿನ್ನೂ ಘೋರ ಹೇಳಬಹುದೇ ಅದರ ನರಕ
ಮೊದಲ ಸಲ ಧರಿಸುವಾಗ ಅದೇನಿರಿಸುಮುರಿಸು ಯಾರು ಕಂಡುಹಿಡಿದರು
ಗೆಳತೀ ಇದೇನಿದು ಕವಚ ಕಂಚುಕ ಕಟ್ಟಿಡುವ ತವಕ ಬಿಟ್ಟರೆ ಕುಹಕ
ಎಷ್ಟು ಬದಲಿಸಬೇಕೇ ಋತುಮಾನದ ತರಹ ತೊಟ್ಟೂ ತೊಡಲಾಗದ ವ್ಯರ್ಥ

ಈಗ ನಡುಬಳಸಿ ನಿರಿಗೆ ಕೂತ ಮೇಲೆ ಸುತ್ತಿ ಬರಲಿ ಸೆರಗು
ಹಗುರಾಗಿ ಎದೆಮೇಲೆ ವಿರಮಿಸಲಿ ಏರಿಳಿತದ ನಾದಕ್ಕೆ ತೊನೆಯುತ್ತ
ಉಸಿರಾಡಲಿ ಮೆಲ್ಲನೆ ಜಾರಿದರೆ ಹಾಗೇ ಮೇಲೆಳೆದು ಕೂರಿಸಲಿ ಬೆರಳುಗಳು
ಕೆಲವರದು ಪಿನ್ನಿನ ಯುದ್ಧ ಮತ್ತೆ ಕೆಲವರದು ಸಿದ್ಧಪಡಿಸಿದ ಹೊಲಿಗೆ

ಗೆದ್ದ ನಗುವಲ್ಲಿ ಬೀಗುತ್ತಾರೆ ಅಷ್ಟು ಕಲಿತ ಮೇಲೆ ಇನ್ನು ಚಿಂತೆಯಿಲ್ಲ
ಈಗ ಎದುರಿಸಬಹುದು ಜಗತ್ತು ನಡಿಗೆಯಲ್ಲಿ ಚಿಮ್ಮುವ ನಿರಿಗೆಯ ಗತ್ತು
ದಮ್ಮಿದ್ದರೆ ಬನ್ನಿ ಎನ್ನುವ ತಾಕತ್ತು ಸೀರೆ ಏನು ಮಹಾ ಅದು ನನ್ನ ಕೈಚಳಕದ
ಶಿಸ್ತು ಈಗ ಉಡುವುದು ಸುಲಿದು ಬಿಸಾಡುವುದು ಕ್ಷಣಮಾತ್ರದ ಕಸರತ್ತು

ಈಗದು ಬರಿ ಸೀರೆಯಲ್ಲ ಎಲ್ಲ ಓರೆಕೋರೆಗಳ ಮುಚ್ಚುವ ಬ್ಯಾಂಡೇಜು
ಹಗರಣಗಳ ತಡೆಯುವ ಪ್ರಕರಣಗಳ ನಡೆಸುವ ದೌಲತ್ತು
ತೀಟೆ ತೀರಿಸುವ ಅಥವಾ ತಳ್ಳಿಹಾಕುವ ಆರು ಗಜದ ಕರಾಮತ್ತು
ಒಳಗಿನ ಗಾಯಗಳ ಹೊರತೋರದ ಅನುಸಂಧಾನದ ಕಲೆಯಿದ್ದರಾಯಿತು

ನೀರೆಗೂ ಸೀರೆಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿ
ತೊಟ್ಟರೆ ತೊಡಬಹುದು ಅವಳು ಪ್ಯಾಂಟು ಶರಟು ಕಮೀಜು ಸಲ್ವಾರು
ಸ್ಕರ್ಟು ಗೌನು ಇನ್ನೂ ಹೆಸರಿರದ ನೂರೆಂಟು ದಿರಿಸು
ಬಿಟ್ಟರೆ ಬಿಡು ಎನ್ನಲಾಗದು ಹೆಣ್ಣು ಬತ್ತಲಾದರೆ ಪ್ರಳಯ

ಸಾಮ್ರಾಜ್ಯಗಳು ಉರುಳಿ ಕದನಗಳು ನಡೆದು ಸಂಸ್ಕೃತಿ ಒಕ್ಕಲೆದ್ದು
ಓಟ ಕಿತ್ತು ಬಾಯಿಗಳು ಬೈದು ಹರಿದು ಮನಸ್ಸುಗಳು ರೋಸಿ ಮೂಕವಾಗಿ
ಆರುಗಜ ಮೂವತ್ತಾರು ತುಂಡುಗಳಾಗಿ ಪಟಪಟನೆ ಬಡಿದು ಗಾಳಿಗೆ ಹೇಗೆ
ತೊನೆಯುತ್ತಾರೆ ಮೈಮನಗಳ ತೇಲಿಬಿಟ್ಟು ತೊಡೆಗಳ ಪ್ರದರ್ಶನಕ್ಕಿಟ್ಟು

ಬತ್ತಲಾದವರೆಲ್ಲ ಸೂಳೆಯರಲ್ಲ ಸೀರೆಯುಟ್ಟವರೆಲ್ಲ ಗರತಿಯರಲ್ಲ
ಮರೆಯಲಾದೀತೇ ವಸ್ತ್ರಾಪಹರಣದ ಕತೆ ಗೋಪಿಕಾ ಸ್ತ್ರೀಯರ ಬಟ್ಟೆ ಕದ್ದ ವ್ಯಥೆ
ಇದು ನನ್ನ ದೇಹ ನನ್ನ ದಾಹ ಮುಚ್ಚುವುದು ಬಿಚ್ಚುವುದು ನನ್ನ ತೀಟೆ
ಸೀರೆಯೊಳಗಿನ ಸುಳಿ ಕೊಂಡೊಯ್ಯುವುದು ಕಾಣದ ಕಡೆಗೆ ಆಗಬೇಕೇ ನಾನು ಬೇಟೆ

ಎಚ್ಚರಿಕೆ ಬಿಪಾಶಾ
ಇದು ಪಾಠ.
***ಸಂಗಾತಈ ಕೋಣೆ ಚಿಕ್ಕದು
ಇಬ್ಬರ ಕೋಪ ಹಿಡಿಸುವುದಿಲ್ಲ
ಗಾಳಿ ಸಾಲದು ಉಸಿರಾಟಕ್ಕೆ
ಗೋಡೆಗಳು ತಾಕುತ್ತವೆ ಕೈ ಬೀಸಿದರೆ

ಹಕ್ಕಿ ನುಂಗಿದ ಹುಳುಗಳೆಲ್ಲ
ಹಾಡಾಗಿ ಹೊರಹೊಮ್ಮುತ್ತವಂತೆ
ಅವರ ಹೊರಗಣ ಸಿಪ್ಪೆ ಒಪ್ಪಗೆಡದೆ
ಒಳಗಣ ಹೂರಣ ಪಕ್ವವಾಗದೇ
ವನವಾಸದಲ್ಲೂ ವಾಯುಮಾಲಿನ್ಯ
ಲವಕುಶರ ಬಾಯಲ್ಲಿ ಸಂಪೂರ್ಣ ರಾಮಾಯಣ


ಅವರ ಮನೆಯಲ್ಲಿ ಹೊತ್ತುಹೊತ್ತಿಗೆ
ಒಲೆ ಉರಿಯುತ್ತದೆ. ತರಕಾರಿ ಕಾಳು ಮಸಾಲೆ
ತರತರದ ವ್ರತ ನೇಮನಿಷ್ಠ
ಅವರ ರಾಘವನಲಿ ತಪ್ಪಿಲ್ಲ
ಸೂರ್ಯಾಸ್ತಕ್ಕೆ ಬೆರಗಾಗುವ ನಮ್ಮ
ಚಿತ್ರದಲ್ಲಿ ಎಲ್ಲವೂ ನೀಲಿಮಯ.

ನಮ್ಮ ಮನೆಯಲ್ಲಿ ಇಬ್ಬರಿದ್ದೆವು
ಎರಡು ಕಾಲಗಳಲ್ಲಿ ಬದುಕುತ್ತಿದ್ದೆವು
ನಮ್ಮ ಕೊರಳುಗಳು ಒಂದು ನೊಗಕ್ಕೆ
ಕೂಡಲೇ ಇಲ್ಲ


ಹೆದ್ದಾರಿಯಲ್ಲಿ ಮೂರು ಕಲ್ಲಿಟ್ಟು
ಪುಳ್ಳೆ ಹಚ್ಚಿ
ಅನ್ನ ಮಾಡಬಹುದು.
ಮರದ ಕೆಳಗೆ ಮಲಗಿದರೂ
ಗರ್ಭ ನಿಲ್ಲುತ್ತದೆ
ಹತ್ತೂ ಮನೆಯವರ ಮತಾಪು ಹೂಕುಂಡ
ನಮ್ಮ ಕಣ್ಣಲ್ಲಿ ಬೆಳಕು
ಬೆಕ್ಕು ಬೇಕೆಂದವರ ಮನೆಯಲ್ಲಿ
ನಾಯಿಯಾಗಿ ಕಂಬಕ್ಕೆ ಕಟ್ಟಿಸಿಕೊಂಡು..

ಎಲ್ಲ ಯಶಸ್ವಿ ಪುರುಷನ ಹಿಂದೆ
ಒಬ್ಬಳು ಮಹಿಳೆ
ಎಲ್ಲ ಯಶಸ್ವಿ ಮಹಿಳೆಯ ಹಿಂದೆ
ಒಬ್ಬ ಅತೃಪ್ತ ಪುರುಷ.
***

ಪ್ರತಿಭಾ ನಂದಕುಮಾರ್ (೧೯೫೫) ಬೆಂಗಳೂರಿನವರು. ಕವಿತೆ, ಕತೆ, ಆತ್ಮಕತೆ, ನಾಟಕ ಬರೆಯುವ; ಅನುವಾದಕರಾಗಿರುವ ಪ್ರತಿಭಾ ಚಿತ್ರ ನಿರ್ದೇಶಕಿ, ನಿರ್ಮಾಪಕಿಯೂ ಹೌದು. ಇದುವರೆಗೆ ೧೧ ಕವನ ಸಂಕಲನಗಳನ್ನೂ, ೨ ಕಥಾ ಸಂಕಲನ, ಆತ್ಮಚರಿತ್ರೆ, ೨ ನಾಟಕ, ಒಂದು ಅನುವಾದವೂ ಸೇರಿದಂತೆ ೨೭ಕ್ಕಿಂತ ಹೆಚ್ಚು ಪುಸ್ತಕ ಪ್ರಕಟಿಸಿದ್ದಾರೆ. ಅನುಪಮಾ ಪ್ರಶಸ್ತಿ, ಜಿಎಸ್ಸೆಸ್ ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ-ಮುದ್ದಣ-ಪುತಿನ-ಬಿಎಚ್ ಶ್ರೀಧರ ಪ್ರಶಸ್ತಿಗಳಲ್ಲದೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಪತ್ರಕರ್ತೆಯಾಗಿಯೂ ಅನುಭವ ಪಡೆದಿರುವ ಪ್ರತಿಭಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಗೋಷ್ಠಿ, ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. 


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...