Monday, November 16, 2015

ಡಾ ಸಬಿತಾ ಬನ್ನಾಡಿ ಎರಡು ಕವಿತೆಗಳುಗುಜರಾತ್ ಒಲೆ


ತಿಳಿಗುಲಾಬಿ ಮೃದು ಕೋಮಲ
ಅತ್ಯಾಧುನಿಕ ಥಳಥಳಿಸುತಿದೆ
ಚೆಲುವಿನಮಲೇರಿದೆ ಇದು ಬಚ್ಚಲೇ?
ಬಚ್ಚಲೆಂದವರು ಅವರು ಯಾರೇ?
ವೆಚ್ಚದ ಹೊನ್ನು ಸುರಿದು ತಂದ
ಚಿತ್ತಾರದ ಟೈಲ್ಸ್ ಬೆನ್ನೇರಿದೆ
ಹೇಳೀಗ ನಾನು ಹೂಡುವ
ಒಲೆಯು ಯಾವುದಾದೀತೆ?
ಒಹೋ ಮನಸೇಕೋ ಕುದಿಯುತಿದೆ
ಇದು ಬಚ್ಚಲು ಹಂಡೆ

ಕರೆಂಟಾಸುರನ ಬಿಲ್ಲು ಕೆರೆಂಟು ತೆಗೆಯವ ಗುಲ್ಲು
ಊಹೂಂ, ಗ್ಯಾಸ್ ಹೀಟರನು ಟಕ್ಕನೆ ತಿರುಗಿಸಿ
ಫಕ್ಕನೆ ಸುರಿವುದು ಸುಡು ನೀರು, ಆಗದೇನು?
ಮನೆಗೆಷ್ಟು ಸಿಲಿಂಡರು? ಸರ್ಕಾರದ ಗುರುಗುರು.

ಈ ಗುಲ್ಲು ಈ ಗುದ್ದು ಎಲ್ಲ ಏಕಮ್ಮ
ಏಕನಿಷ್ಠೆಯಲಿ ಹೊರಟಿತೊಂದು ಶಿಫಾರಸು
ಇಷ್ಟೇ ಇಷ್ಟೇ ಇಷ್ಟು ಅಂಗೈ ಅಗಲದಷ್ಟೇ
ಮಸಿಯಿಲ್ಲ, ಹೊಗೆಯಿಲ್ಲ ಸುಟ್ಟಿರುವುದಕೆ
ಕುರುಹೇ ಇಲ್ಲ ಕುರುಹು ಇಲ್ಲಾ
ನೀವೇ ಸಾಕಿ ಬೆಳೆಸಿದ ತೆಂಗಿನ
ತೋಟವಿದೆಯಲ್ಲಾ ಈಗ ಕೇಳೀ
ಈಗ ಎಲ್ಲಲ್ಲೂ ಇದೇ ಎಲ್ಲೂ ಇದೇ
ಏನಾದರೂ ಸರಿ ಹೇಗಾದರು ಸರಿ
ತುರುಕಿ ಬಿಡಿ ನಿಮಗೆ ಬೇಡದ್ದನ್ನೆಲ್ಲಾ
ಮುಚ್ಚಿಟ್ಟು ಸುಟ್ಟು ಬಿಡಿ
ಚಿಂತಿಸದೇ ತಂದುಬಿಡಿ ತಂದೇಬಿಡಿ
ಗುಜರಾತ್ ಒಲೆ! ಗುಜರಾತ್ ಒಲೆ!!

ರೂಪವಷ್ಟೇ ಅಲ್ಲ ರೂಪಕವೂ ಹೊಸದೇ?
ಒಲೆಯಷ್ಟೇ ಅಲ್ಲ ಉರಿಯೂ ಹೊಸದೇ?
***


ಮರೆವಿನ ಖಾಯಿಲೆಎಂಬತ್ತು ವರುಷದ ಮುದುಕಿ
ಮರೆವಿನ ಖಾಯಿಲೆಗೆ ತುತ್ತಾಗಿದ್ದಾಳೆ
ಈಗ ನೋಡಿದ್ದು ಈಗ ನೆನಪಿಲ್ಲ
ಎಲ್ಲ ಅಪರಿಚಿತ ಅಯೋಮಯ

ನಿದ್ದೆಯಲಿದ್ದವಳು ಧಡಕ್ಕನೇ ಏಳುತ್ತಾಳೆ
ಸಮಯ ಆಗಿ ಬಿಟ್ಟಿದೆ
ಗಂಡ ಊಟಕ್ಕೆ ಬರುತ್ತಾನೆ
ಇನ್ನೂ ಆಗಿಲ್ಲ ಅಡುಗೆ
ಆತನಿಗೆ ಹೊತ್ತಿನ ಕಟ್ಟುನಿಟ್ಟು ಬಹಳ
ಆಕೆಯ ಎದೆ ಢವಗುಡುತ್ತದೆ
ಎದ್ದು ಅಧೀರಳಾಗಿ ಸುತ್ತ ನೋಡುತ್ತಾಳೆ

ಮಾತ್ರೆ ಕೊಡುವ ಮಗಳಂತ
ಕೆಲಸದಾಕೆಯನ್ನು ಕೇಳುತ್ತಾಳೆ:
ಮಕ್ಕಳು ಬಂದಿದ್ದರಾ?
ಬಂದ ಬಂದವರನೆಲ್ಲ ಕೇಳುತ್ತಾಳೆ
ನನ್ನ ಮಗ ನಿಮಗೆ ಗೊತ್ತೇ?
ಆತ ಪ್ರಸಿದ್ಧ
ಸೂಜಿ ಚುಚ್ಚುವ ಡಾಕ್ಟರನು
ಅಚ್ಚರಿಯಿಂದ ಕೇಳುತ್ತಾಳೆ
ನಿಮಗೆ ಅವನ ಹೆಸರು ಗೊತ್ತಿಲ್ಲವೇ?!

ಮನೆಗೆ ಬಂದವರಿಗೆಲ್ಲಾ
ಗಂಧದ ಹಾರದೊಳಗಣ
ಸುಂದರ ಪತಿಯ
ಫೋಟೋ ತೋರುತ್ತಾಳೆ
ಮತ್ತು ಹೇಳುತ್ತಾಳೆ:
’ನಾನು ಮದುವೆಯಾಗಿ ಹೋದಾಗ
ನನ್ನ ಅತ್ತೆ ಆರತಿ ತಟ್ಟೆಯನು
ಮುಖಕ್ಕೆ ಎಸೆದಳು
ನಾನು ರೂಪವತಿ ಅಲ್ಲದ್ದಕ್ಕೆ’
ಅದೇ ಮಾತು ಮತ್ತೆ ಮತ್ತೆ
ಕೇಳುವವರಿಗೆ ತಲೆಚಿಟ್ಟು ಹಿಡಿಯುವಂತೆ

ಮರೆವಿನ ಖಾಯಿಲೆಗೆ ತುತ್ತಾದವಳಿಗೆ
ಮಗಳು ಹೇಳುತ್ತಾಳೆ,
’ಅಮ್ಮಾ ಅದನೆಲ್ಲ ಮರೆತುಬಿಡು’
ಗೋಲಿ ಗಾಜು ಕಣ್ಣುಗಳಿಂದ ಅಮ್ಮ
ಶೂನ್ಯ ನೋಟ ಹರಿಸುತ್ತಾಳೆ
ಹುಚ್ಚು ನಗೆ ಚೆಲ್ಲುತ್ತಾಳೆ
ಸಬಿತಾ ಬನ್ನಾಡಿ (೧೯೬೫) ಉಡುಪಿ ತಾಲೂಕು ಬನ್ನಾಡಿಯವರು. ಪ್ರಸ್ತುತ ಭದ್ರಾವತಿಯ ಸರ್ ಎಂ. ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರು. ಸಾಹಿತ್ಯ ನಿರೂಪಣೆಗಳು, ಆಲಯವು ಬಯಲಾಗಿ, ಭಾಷೆ-ಬಳಕೆ, ಸಾಹಿತ್ಯ ಸಂಕಥನ (ಸಂಪಾದನೆ), ಅಂಬೇಡ್ಕರ್ ಬದುಕು - ಹೋರಾಟ (ಅನುವಾದ) ಕೃತಿಗಳು ಪ್ರಕಟವಾಗಿವೆ.

ವಿಳಾಸ: ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ, ಸರ್ ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜು, ಭದ್ರಾವತಿ, ಶಿವಮೊಗ್ಗ ಜಿಲ್ಲೆ.

sabithabannadi@gmail.com 

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...