Wednesday, November 04, 2015

ಹಗರಿಬೊಮ್ಮನಹಳ್ಳಿ ರೈತರ ಆತ್ಮಹತ್ಯೆಗಳ ಸ್ಫೋಟದ ಹಿಂದಿರುವ ಮೀಟರ್ ಬಡ್ಡಿ ದುಷ್ಟ ಕೂಟ `ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ’ಯ ನಾಗಾಲೋಟ


ಆರ್. ರಾಮಕೃಷ್ಣ

ಸೌಜನ್ಯ : ಜನಶಕ್ತಿ

ರೈತರ ಆತ್ಮಹತ್ಯೆಗಳ ಬಗೆಗೆ ಅಧ್ಯಯನ ತಂಡವೊಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಹಲವಾರು ಮನೆಗಳಿಗೆ ಭೇಟಿ ನೀಡಿದಾಗ ರೈತರ ಆತ್ಮಹತ್ಯೆ ಪ್ರಕರಣಗಳಿಗೂ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಸೂಕ್ಷ್ಮ ಹಣಕಾಸು ಸಂಸ್ಥೆ(ಮೈಕ್ರೋ ಫೈನಾನ್ಸ್ ಕಂಪನಿ)ಗಳ ಕೆಲಸದ ವಿಧಾನ, ಬಡ್ಡಿ ಪ್ರಮಾಣ ಮತ್ತು ಸಾಲ ವಸೂಲಿ ಕ್ರಮಗಳಿಗೂ ಸಂಬಂಧ ಇರುವುದು ವಿಶೇಷವಾಗಿ ಗಮನಕ್ಕೆ ಬಂದಿತು. ಹಗರಿಬೊಮ್ಮನಹಳ್ಳಿಯಲ್ಲಿ ‘ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ’ ಸೇರಿದಂತೆ ಹಲವು ಮೈಕ್ರೋ ಫೈನಾನ್ಸ್ ಕಂಪನಿಗಳಪಾತ್ರದ ಬಗ್ಗೆ ಇಲ್ಲಿ ನಿರ್ಧಿಷ್ಟ ವಿವರಗಳಿವೆ. ಇದು ರೈತ ಚಳುವಳಿಗಳು ಮತ್ತು ಜನ ಚಳುವಳಿಗಳು ವಿಶೇಷವಾಗಿ ಅಧ್ಯಯನ ಮಾಡಿ, ಚಳುವಳಿ ರೂಪಿಸಬೇಕಾದ ಬಹಳ ಗಂಭೀರವಾದ ವಿಷಯವಾಗಿದೆ. ಇಲ್ಲಿ ದಾಖಲಿಸಿರುವ ಮಾಹಿತಿಗಳು ಅಂತಿಮವೇನಲ್ಲ. ಈ ತತ್ಕ್ಷಣಕ್ಕೆ ಲಭ್ಯವಿರುವ ಪ್ರಾಥಮಿಕವಾದ ಮಾಹಿತಿಗಳು.


ಸಹಕಾರಿ ಬ್ಯಾಂಕುಗಳು, ರಾಷ್ಟ್ರೀಕೃತ ಬ್ಯಾಂಕುಗಳಿಂದ ಜನರ ಜೀವನೋಪಾಯದ ಕಸುಬುಗಳಿಗೆ ಸಾಲ ಅಗತ್ಯ ಪ್ರಮಾಣದಲ್ಲಿ ದೊರಕದ ಸ್ಥಿತಿಯಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು ಹುಟ್ಟಿಕೊಂಡು ವ್ಯಾಪಕವಾಗಿ ಲೇವಾದೇವಿ ವ್ಯವಹಾರಗಳನ್ನು ನಡೆಸುತ್ತಿವೆ. ಅದರಲ್ಲಿ `ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ’ಯು ರಾಜ್ಯದ ಉದ್ದಗಲಕ್ಕೂ ಹರಡಿಕೊಂಡು ವೇಗವಾಗಿ ಬೆಳೆಯುತ್ತಿರುವುದು ಸಹ ವಿಶೇಷವಾಗಿ ಎದ್ದು ಕಾಣುತ್ತದೆ.

ತುಮಕೂರು ಜಿಲ್ಲೆ ಶಿರಾದಲ್ಲಿ ಆತ್ಮಹತ್ಯೆಗೆ ಶರಣಾದ ರೈತ ನಾಗರಾಜರ ಸಾವಿನ ಪ್ರಕರಣದಲ್ಲಿ ರೈತನ ಸಾವಿಗೆ ಮುಂಗಾರು ವೈಫಲ್ಯದ ಜೊತೆಗೆ `ಧರ್ಮಸ್ಥಳ ಸಂಸ್ಥೆ’ಯ `ವಾರದ ಕಂತು’ ಪದ್ಧತಿಯ ಒತ್ತಡ ಕಾರಣ ಎಂದು ಕಂಡು ಬಂದಿತ್ತು. ಬೇರೆ ಬೇರೆ ಪ್ರಕರಣಗಳನ್ನು ನೋಡಿದಾಗ ಈ ಭಾವನೆ ಬಲವಾಗುತ್ತದೆ.

ಬರದ ನಡುವೆ ಉಳಿದಿರುವ ಜೋಳದ ತೆನೆಯನ್ನು ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದು
ಬರದ ನಡುವೆ ಉಳಿದಿರುವ ಜೋಳದ ತೆನೆಯನ್ನು ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದು

ಸಂಶಯಾಸ್ಪದ ಕೆಲಸದ ವಿಧಾನಗಳು

ಧರ್ಮಸ್ಥಳ ಸಂಸ್ಥೆಯ ಕಾರ್ಯವಿಧಾನವು ಸಂಶಯಾಸ್ಪದವಾದ ರೀತಿಯಲ್ಲಿದೆ. ಸಂಸ್ಥೆಯು, ಸ್ತ್ರೀಶಕ್ತಿ ಸಂಘಗಳ ಮಾದರಿಯಲ್ಲಿ ಮಹಿಳೆಯರ ನಡುವೆ ಹತ್ತು ಸದಸ್ಯರ ತಂಡ, ಪುರುಷರಾದರೆ ಐದು ಜನರ ತಂಡವನ್ನು ರಚಿಸಲಾಗುತ್ತದೆ. ಈ ತಂಡದ ಸದಸ್ಯರಿಂದ ಉಳಿತಾಯವಾಗಿ ಪ್ರತಿವಾರವೂ ನಿಗದಿತ ಹಣ ಸಂಗ್ರಹಿಸಲಾಗುತ್ತದೆ ಮತ್ತು ಅಗತ್ಯವುಳ್ಳವರಿಗೆ 30,000 ರಿಂದ 40,000 ರೂ.ವರೆಗೂ ಸಾಲವನ್ನು ನೀಡುವುದು ಕಂಡು ಬರುತ್ತದೆ. ಸಂಸ್ಥೆಯ ಹಣಕಾಸು ವ್ಯವಹಾರಗಳ ಕುರಿತು ಸದಸ್ಯರ ಕೈಗೆ ಯಾವ ದಾಖಲೆಯನ್ನೂ ನೀಡುವುದಿಲ್ಲ ಎಂದು ಕಂಡು ಬರುತ್ತದೆ.

`ಪಟ್ಟಣ-ಗ್ರಾಮೀಣ ಭಾಗಗಳ, ಅಶಿಕ್ಷಿತ ಮತ್ತು ಅರೆ ಶಿಕ್ಷಿತರಾದ ಕೂಲಿಕಾರರು ಹಾಗೂ ಬಡಜನರನ್ನು ಮಾತ್ರ ಸಂಸ್ಥೆಯ ಜಾಲದ ವ್ಯಾಪ್ತಿಗೆ ತರುವುದು, ಶಿಕ್ಷಿತರು, ಪ್ರಶ್ನಿಸುವಂತಹ ಗಟ್ಟಿ ಹಿನ್ನೆಲೆಯ ಜನರನ್ನು ಸಂಸ್ಥೆಯ ಜಾಲದಿಂದ ದೂರವೇ ಇಡುವುದು ..’ ಈ ಕಣ್ಣೋಟ ಸಂಸ್ಥೆಗೆ ಇದೆ ಎಂದು ಸಂಸ್ಥೆಯನ್ನು ಬಲ್ಲವರು ಹೇಳುತ್ತಾರೆ.

ವಾರದ ಪ್ರತಿ ಮಂಗಳವಾರ ಸಂಸ್ಥೆಯ ಲೇವಾದೇವಿ ಚಟುವಟಿಕೆಗಳು ನಡೆಯುತ್ತವೆ. ಈ ಸಂಘವನ್ನು `ಮಂಗಳವಾರದ ಸಂಘ’ ಎಂದೇ ಕರೆಯುವುದು ವಾಡಿಕೆಯಾಗಿ ಬೆಳೆದಿದೆ. ವಾರವಾರದ ಮರುಪಾವತಿ ಷರತ್ತಿನ ಮೇಲೆ ಸದಸ್ಯರಿಗೆ ಸಾಲವನ್ನು ನೀಡುತ್ತದೆ. ಸಾಲಕ್ಕೆ ಯಾವ ಸ್ಥಿರ ಅಥವಾ ಚರ ಆಸ್ತಿ, ಇತ್ಯಾದಿಗಳನ್ನು ಆಧಾರವಾಗಿ ಕೇಳುವುದಿಲ್ಲ. ಯಾವುದೇ ಒಬ್ಬ ಸದಸ್ಯರು ವಾರದ ಕಂತನ್ನು ಕಟ್ಟದಿದ್ದಲ್ಲಿ ಇಡೀ ತಂಡ ಈ ಹಣವನ್ನು ತುಂಬಬೇಕಾಗುತ್ತದೆ.

ವ್ಯಾಪಾರ, ಸಣ್ಣ ಪುಟ್ಟ ಉದ್ದಿಮೆ, ಹಸು, ಕುರಿ ಸಾಕಾಣಿಕೆ ಮುಂತಾದ ಗ್ರಾಮೀಣಾಭಿವೃದ್ದಿ ಚಟುವಟಿಕೆಗಳಿಗೆ ಸಾಲ ನೀಡುವುದಾಗಿ ಸಂಸ್ಥೆ ಹೇಳಿಕೊಂಡರೂ ಸಹ ಸಾಲ ನೀಡುವಾಗ ಸಾಲ ಯಾವ ಉದ್ದೇಶಕ್ಕೆ ಎಂಬ ಬಗೆಗೆ ಬಹಳಷ್ಟೇನು ಸಾಕ್ಷಿ, ಆಧಾರಗಳನ್ನು ಕೇಳುವುದಿಲ್ಲ.

ಪಪ್ಪಾಯಿ ಬೆಳೆ ಹಾನಿಯಾಗಿರುವುದು
ಪಪ್ಪಾಯಿ ಬೆಳೆ ಹಾನಿಯಾಗಿರುವುದು

ಬಡ್ಡಿ ಪ್ರಮಾಣ-ಹಲವು ಅನುಮಾನ

ಸಾಲದ ಬಡ್ಡಿ ಪ್ರಮಾಣ ಎಷ್ಟು ಎಂಬ ಬಗೆಗೆ ಬಹುತೇಕ ಸದಸ್ಯರಿಗೆ ಮಾಹಿತಿ ಇರುವುದಿಲ್ಲ. ಕೆಲವು ನಿರ್ಧಿಷ್ಟ ಪ್ರಕರಣಗಳನ್ನು ನೋಡಿದಾಗ ವಾರ್ಷಿಕ ಶೇ. 36 ರಷ್ಟು ದುಬಾರಿ ಬಡ್ಡಿ, ಕೆಲವೆಡೆ ಶೇ.24 ರಷ್ಟು ಬಡ್ಡಿ ವಿಧಿಸುತ್ತಿರುವುದು ಕಂಡು ಬಂದಿದೆ. ಸಂಸ್ಥೆಯಲ್ಲಿಟ್ಟ ಜನರ ಉಳಿತಾಯದ ಹಣಕ್ಕೆ ವಾರ್ಷಿಕ ಶೇ. 3.5 ಬಡ್ಡಿ ಕೊಡುವುದಾಗಿ ಸಂಸ್ಥೆಯ ಪದಾಧಿಕಾರಿಗಳೇ ಹೇಳಿದ್ದಾರೆ.

ಸಾಲ ವಸೂಲಿ-ಒತ್ತಡದ ವಿಧಾನಗಳು

ರೈತ ಕುಟುಂಬಗಳ ಮಹಿಳೆಯರು ಮತ್ತು ಕುಟುಂಬ ಸದಸ್ಯರಾದ ಮಹಿಳೆಯರ ಹೆಸರಿನಲ್ಲಿ ಪುರುಷರು ಸಹ ಈ ಸಂಸ್ಥೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆದುಕೊಳ್ಳುತ್ತಾರೆ. ಸದಸ್ಯರು ಸಾಲ ಕಟ್ಟದಿದ್ದಲ್ಲಿ ಸಂಘದ ಸದಸ್ಯರಾದ ನೆರೆಹೊರೆಯ ಜನರು ಬಂದು ನಿಂದಿಸುವುದು ಇತ್ಯಾದಿ ನಡೆಯುತ್ತಿದೆ. ಹಲವು ಪ್ರಕರಣಗಳಲ್ಲಿ ಸಾಲ ಮರುಪಾವತಿ ಮಾಡಲಾಗದ ಮತ್ತು ಸಂಘದ ಸದಸ್ಯರಿಗೆ ಜವಾಬು ಕೊಡಲಾಗದ ಪರಿಸ್ಥಿತಿಯ ಒತ್ತಡ ಸಾಲಗಾರರನ್ನು ಆತ್ಮಹತ್ಯೆಗಳ ಕಡೆಗೆ ದೂಡುತ್ತಿದೆ.

ಹರಪನಹಳ್ಳಿ `ಸಾಧನಾ ಸಮಾವೇಶ’

ಅಕ್ಟೋಬರ್ 15, 2015 ರಂದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಧರ್ಮಸ್ಥಳ ಸಂಸ್ಥೆಯ ತಾಲ್ಲೂಕು ಮಟ್ಟದ ಸಾಧನಾ ಸಮಾವೇಶ ನಡೆದಿದೆ. ಸಮಾವೇಶದಲ್ಲಿ ಸು. 600 ರಿಂದ 700 ರಷ್ಟು ಮಹಿಳೆಯರು ಮತ್ತು ಕೆಲ ಪುರುಷರು ಭಾಗವಹಿಸಿದ್ದರು. ಈ ತಾಲ್ಲೂಕಿನಲ್ಲಿ ಧರ್ಮಸ್ಥಳ ಸಂಸ್ಥೆಯು ಒಟ್ಟು 677 ಪುರುಷರ ತಂಡಗಳನ್ನು, 1,698 ಸ್ತ್ರೀಯರ ಸಂಘಗಳನ್ನು ಒಟ್ಟಾರೆ 2,378 ಸಂಘಗಳನ್ನು ರಚಿಸಿರುವುದಾಗಿ ಹೇಳಲಾಯಿತು. ಈ ಮೂಲಕ ತಾಲ್ಲೂಕಿನ 20,400 ಕ್ಕೂ ಹೆಚ್ಚು ಕುಟುಂಬಗಳು ಸಂಸ್ಥೆಯ ವ್ಯವಹಾರಗಳ ಜಾಲ ಸೇರಿದಂತಾಗಿದೆಯಂತೆ.

ಸಂಸ್ಥೆಯಲ್ಲಿ ಎಫ್.ಡಿ.-ಆರ್.ಡಿ. ರೂಪದಲ್ಲಿ ಇಡಲಾಗುವ ಜನರ ಹಣಕ್ಕೆ ವಾರ್ಷಿಕ ಶೇ. 8.95 ಬಡ್ಡಿ ನೀಡಲಾಗುವುದು ಎಂದೂ, ಜನರು ಪಡೆದುಕೊಳ್ಳುವ ಸಾಲಕ್ಕೆ ವಾರ್ಷಿಕ ಶೇ. 13.7 ಬಡ್ಡಿ ಎಂದು ಒಮ್ಮೆ ಮತ್ತು ಶೇ. 16 ರ ಕಡಿತದ ಬಡ್ಡಿದರ ಎಂದು ಮತ್ತೊಮ್ಮೆ ಸಮಾವೇಶದಲ್ಲಿ ಹೇಳಲಾಯಿತು. ಆದರೆ ಧರ್ಮಸ್ಥಳ ಸಂಸ್ಥೆಯಿಂದ ಸಾಲ ಪಡೆದವರು ಮತ್ತು ಪ್ರಜ್ಞಾವಂತರು ಈ ಸಂಸ್ಥೆಯ ಕೆಲಸದ ವಿಧಾನ ಮತ್ತು ದುಬಾರಿ ಬಡ್ಡಿ ಇತ್ಯಾದಿಗಳ ಬಗೆಗೆ ವ್ಯಾಪಕವಾದ ಅತೃಪ್ತಿ ಹೊಂದಿರುವುದು ನಮ್ಮ ಗಮನಕ್ಕೆ ಬರುತ್ತದೆ. ಸಂಸ್ಥೆಯು ಬೆಳೆದಂತೆ ಜನರ ನಡುವೆ ಸಂಸ್ಥೆಯ ವಿರುದ್ಧ ಆಕ್ರೋಶವೂ ಬೆಳೆಯುತ್ತಿದೆ.

ಧಾರ್ಮಿಕ ಭಾವನೆಗಳ ದುರುಪಯೋಗ

ಅಧಿಕೃತವಾಗಿ ಹರಪನಹಳ್ಳಿ ಸಮಾವೇಶದ ಜಂಟಿ ಸಂಘಟಕರು- ಸಾರ್ವಜನಿಕ ಬ್ಯಾಂಕ್ ಆದ `ಯೂಕೋ ಬ್ಯಾಂಕ್’ ಮತ್ತು `ಧರ್ಮಸ್ಥಳ ಸಂಸ್ಥೆ’ಗಳು. ಹಾಗಿದ್ದರೂ `ಧರ್ಮಸ್ಥಳ’ದ ಸಂಸ್ಥೆಯ ಕಾರ್ಯಕ್ರಮದಂತೆ ಎಲ್ಲವೂ ನಡೆಯಿತು. ದುಬಾರಿ ಬಡ್ಡಿಯ ಲೇವಾದೇವಿ ವ್ಯವಹಾರಕ್ಕೆ ಸಂಸ್ಥೆಯು ಧರ್ಮಸ್ಥಳದ ಮಂಜುನಾಥನ ಕುರಿತು ಜನರಲ್ಲಿರುವ ಮುಗ್ಧ ಭಯ ಮತ್ತು ಭಕ್ತಿಯ ಭಾವನೆಯನ್ನು ದುರುಪಯೋಗ ಮಾಡಿಕೊಳ್ಳುವ ಎಲ್ಲ ಲಕ್ಷಣಗಳೂ ಅಲ್ಲಿ ಕಂಡವು. ಗಣನೀಯ ಸಂಖ್ಯೆಯಲ್ಲಿ ಬುರ್ಕಾ ತೊಟ್ಟ ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದರು. ಸಮಾವೇಶದಲ್ಲಿ ಧರ್ಮಸ್ಥಳದ ಮಂಜುನಾಥನ ಕುರಿತ ಭಕ್ತಿ ಗೀತೆಗಳು, ವೀರೇಂದ್ರ ಹೆಗ್ಗಡೆಯವರ ಕುರಿತ ಬಹುಪರಾಕ್, ಭಜನೆಯಂತಹ ಚಟುವಟಿಕೆಗಳನ್ನು ಯೋಜಿಸಲಾಗಿತ್ತು. ಆರೆಸ್ಸೆಸ್ ಕೆಲಸದ ವಿಧಾನವನ್ನು ನೆನಪಿಸುವ ಶೈಲಿಯಲ್ಲಿ ವ್ಯವಸ್ಥಿತ ಸಂಘಟನಾತ್ಮಕ ಸಂರಚನೆಯೊಂದಿಗೆ `ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ’ ಕೆಲಸ ಮಾಡುತ್ತಿರುವುದು ಎದ್ದು ಕಾಣುತ್ತದೆ.

ರಾಜ್ಯವ್ಯಾಪಿ ಜಾಲ – ರಾಜಕೀಯ ಉದ್ದೇಶ

ಧರ್ಮಸ್ಥಳ ಸಂಸ್ಥೆಯು ಈಗಾಗಲೇ ಇಡೀ ರಾಜ್ಯವ್ಯಾಪಿಯಾಗಿ ವಿಸ್ತರಿಸಿಕೊಂಡಿರುವ ವ್ಯವಸ್ಥಿತ ಜಾಲವಾಗಿದೆ. ಮತ್ತು ಇನ್ನಷ್ಟು ಮತ್ತಷ್ಟು ವಿಸ್ತರಣೆಯ ಹಾದಿಯಲ್ಲಿದೆ. ಹಗರಿಬೊಮ್ಮನ ಹಳ್ಳಿ ತಾಲ್ಲೂಕಿನೊಳಗೆ 4-5 ಸಾವಿರ ಜನಸಂಖ್ಯೆಯ ಕೋಡಿಹಳ್ಳಿಯಲ್ಲಿ ಸಂಸ್ಥೆಯು ಸು. 30 ಸಂಘಗಳನ್ನು ರಚಿಸಿದೆಯೆಂಬ ಮಾಹಿತಿ ದೊರಕಿದೆ. ತಾಲ್ಲೂಕಿನ ಸು. 35 ಹಳ್ಳಿಗಳಲ್ಲಿ ಸಂಸ್ಥೆಯ ಜಾಲ ಇದೆಯಂತೆ. ಈ ಸಂಸ್ಥೆ ಕೇವಲ ಲೇವಾದೇವಿದಾರ ಸಂಸ್ಥೆಯಾಗಿ ಉಳಿಯದೇ ಜನರಲ್ಲಿ ಮೇಲ್ಜಾತಿ ಮತ್ತು ಮೇಲ್ವರ್ಗದ ಪರವಾದ ಮತ್ತು ಪುರುಷ ಪ್ರಧಾನ ಪಾಳೇಗಾರಿ ಮೌಲ್ಯಗಳನ್ನು ಮತ್ತು ಬಲಪಂಥೀಯ ದೃಷ್ಟಿಕೋನವನ್ನು ಬಿತ್ತುವ ಒಂದು ಸಂಘಟನಾ ಜಾಲವಾಗಿದೆ ಮತ್ತು ತನ್ನ ಸಂಕುಚಿತ ರಾಜಕೀಯ ಉದ್ದೇಶಕ್ಕಾಗಿ ಮಹಿಳೆಯರ-ಜನರ ಈ ಜಾಲವನ್ನು ಬಳಕೆ ಮಾಡುವ ಎಲ್ಲ ಸಾಧ್ಯತೆಗಳು ಇವೆ. ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಮಹಿಳೆಯರ ಕೊಲೆಗಳ ಬಗೆಗೆ ಹಾಗೂ ಸೌಜನ್ಯ ಪ್ರಕರಣದಲ್ಲಿ ಸರಿಯಾದ ವಿಚಾರಣೆಯಾಗಬೇಕು ಎಂದು ಮತ್ತು ಸಂಸ್ಥೆಯ ಭೂ ಕಬಳಿಕೆ ವಿರುದ್ಧ ಇತ್ತೀಚೆಗೆ ಚಳುವಳಿ ನಡೆದಾಗ ಅದರ ವಿರುದ್ಧದ ಪ್ರತಿಭಟನೆ ನಡೆದಾಗ ಧರ್ಮಸ್ಥಳ ಸಂಸ್ಥೆಯು ಈ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಾಲದಲ್ಲಿರುವ ಮಹಿಳೆಯರನ್ನು ರಾಜ್ಯ ನಾನಾ ಭಾಗಗಳಿಂದ ಕರೆಸಿಕೊಂಡು ಧರ್ಮಸ್ಥಳದಲ್ಲಿ `ಪ್ರದರ್ಶನ’ ಮಾಡಿದೆ. ಸೆ. 30 ರ ಇಂತಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸು. 15 -20ಸಾವಿರ ಮಹಿಳೆಯರಲ್ಲಿ ಹೀಗೆ ಹೊರಗಿನಿಂದ ಕರೆಸಲಾದವರೇ ಹೆಚ್ಚಾಗಿ ಪಾಲ್ಗೊಂಡಿದ್ದಾರೆ.

ಕೃಷಿ ಉಪಕರಣಗಳ ಕೇಂದ್ರದ ಜವಾಬ್ದಾರಿ

ಈ ನಡುವೆ ಕರ್ನಾಟಕ ರಾಜ್ಯ ಸರಕಾರವು ರೈತರಿಗೆ ಬಾಡಿಗೆ ಆಧಾರದಲ್ಲಿ ಕೃಷಿ ಉಪಕರಣಗಳನ್ನು ನೀಡುವ ಕೇಂದ್ರಗಳ ಜವಾಬ್ದಾರಿಯನ್ನೂ ಧರ್ಮಸ್ಥಳ ಸಂಸ್ಥೆಗೆ ವಹಿಸಿದೆ. ಗುಲಬರ್ಗಾ, ಯಾದಗೀರ್, ಬೀದರ್ ಈಮೂರು ಜಿಲ್ಲೆಗಳ 17 ಕೇಂದ್ರ ಬಿಟ್ಟು ರಾಜ್ಯದ ಉಳಿದ 25 ಜಿಲ್ಲೆಗಳ 161 ಕೇಂದ್ರಗಳು ಧರ್ಮಸ್ಥಳ ಸಂಸ್ಥೆಯ ಹಿಡಿತಕ್ಕೆ ಹೋಗಿವೆ. ಮೇಲಿನ ಮೂರು ಜಿಲ್ಲೆಗಳ ಜವಾಬ್ದಾರಿ ದೆಹಲಿ ಮೂಲದ `ಇಂಡಿಯನ್ ಸೊಸೈಟಿ ಆಫ್ ಪ್ರೊಫೆಷನಲ್ಸ್’ ಸಂಸ್ಥೆಯ ಕೈಗೆ ದಕ್ಕಿದೆ. `ಯಂತ್ರ ಮನೆ’ ಎನ್ನುವ ಹರಪನಹಳ್ಳಿಯ ಇಂತಹ ಒಂದು ಕೇಂದ್ರದಲ್ಲಿ ಕೃಷಿ ಉಪಕರಣಗಳ ಬಾಡಿಗೆ ನಿಗದಿಯಲ್ಲಿ ಸಹ ಧರ್ಮಸ್ಥಳ ಸಂಸ್ಥೆ ದುಬಾರಿ ಬಾಡಿಗೆ ಪಡೆಯುತ್ತಿದೆ ಎಂದು ಹರಪನಹಳ್ಳಿಯ ರೈತರು ದೂರುತ್ತಾರೆ. ಅಲ್ಲಿನ ರೈತರೊಬ್ಬರ ಪ್ರಕಾರ ಕುಂಟೆ ಹೊಡೆಯುವ ಯಂತ್ರಕ್ಕೆ ಗಂಟೆಗೆ 300 ರೂಪಾಯಿ ಬಾಡಿಗೆ ಪಡೆಯಬಹುದಾದ ಕಡೆ ಸಂಸ್ಥೆ 500 ರೂ. ಬಾಡಿಗೆ ಪಡೆಯುತ್ತಿದೆಯಂತೆ. ಶೇಂಗಾ ಯಂತ್ರ, ಮೆಕ್ಕೆ ಜೋಳ ಯಂತ್ರ, ಜೋಳದ ಯಂತ್ರ, ಹೊಲ ಉಳುವ ಯಂತ್ರ(ಟಿಲ್ಲರ್) ಇತ್ಯಾದಿಗಳನ್ನು ಇಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ.

ಹಗರಿ ಬೊಮ್ಮನ ಹಳ್ಳಿ : ಖಾಸಗಿ ಫೈನಾನ್ಸ್ ಕಂಪನಿಗಳ ವಿಷ ವರ್ತುಲ

ಹಗರಿಬೊಮ್ಮನ ಹಳ್ಳಿ ತಾಲ್ಲೂಕಿನಲ್ಲಿ ಹಲವಾರು ಖಾಸಗಿ ಹಣಕಾಸು ಸಂಸ್ಥೆಗಳು ಕೆಲಸ ಮಾಡುತ್ತಿವೆ.
1. ಚೈತನ್ಯ ಇಂಡಿಯಾ ಫೈನಾನ್ಸ್ ಕ್ರೆಡಿಟ್ ಪ್ರೈ. ಲಿ.,
2. ಸ್ಪಂದನ ಫೈನಾನ್ಸ್,
3. ಎಸ್ಕೆಎಸ್-ಸ್ವಯಂ ಕೃಷಿ ಸಂಘ, ಹೈದರಾಬಾದ್,
4. ಶೇರ್ ಬ್ಯಾಂಕ್,
5. ಮಧುರಾ ಫೈನಾನ್ಸ್,
6. ಮಾನ್ವಿ ಫೈನಾನ್ಸ್ ,
7. ತಿರುಪತಿ ಫೈನಾನ್ಸ್ ಕಂಪನಿ,
8. ಮಂಜುನಾಥ ಸ್ವಯಂ ಸೇವಾ ಸಂಸ್ಥೆ,
9. ಗ್ರಾಮಕೂಟ ಇತ್ಯಾದಿ.
ಸ್ಪಂದನ, ಎಸ್ಕೆಎಸ್, ಶೇರ್ ಬ್ಯಾಂಕ್ಗಳಲ್ಲಿ 10,000 ರೂಪಾಯಿಗಳನ್ನು ಸಾಲ ತಗೆದುಕೊಂಡರೆ ಸಾಲ ತೆಗೆದುಕೊಂಡ ವ್ಯಕ್ತಿಗೆ 300 ರೂಪಾಯಿಗಳನ್ನು ಕಟ್ಟಿ ವಿಮೆ ಮಾಡಿಸಲಾಗುತ್ತದೆ. ಸಾಲದ ಮೊತ್ತಕ್ಕೆ ತಕ್ಕಂತೆ ವಿಮಾ ಕಂತಿನ ಪ್ರಮಾಣ ಬದಲಾಗುತ್ತದೆ. ವ್ಯಕ್ತಿ ಸಾಲಗಾರನಾಗಿರುವ ಅವಧಿಯಲ್ಲಿ ಮೃತನಾದರೆ ಪರಿಹಾರ ಪಡೆದುಕೊಳ್ಳುವ ಸಲುವಾಗಿ ಈ `ಭದ್ರತಾ ಏರ್ಪಾಟು’.

ಒತ್ತಡ ತಂತ್ರಗಳು

ಸಂಸ್ಥೆಗಳು ಸಾಲ ವಸೂಲಿಗೆ ಬಾರಿ ಕೆಟ್ಟ ತಂತ್ರ ಅನುಸರಿಸುತ್ತವೆ. ಸಾಲಗಾರರ ಮೇಲೆ ಮಾನಸಿಕ ಒತ್ತಡ ಹೇರಿ ಅಪಮಾನ ಮಾಡಿ ಸಾಲ ಮರುಪಾವತಿ ಮಾಡುವಂತೆ ಮಾಡುವ ಒತ್ತಡ ತಂತ್ರ ಇವರದು. ಈ ಕುರಿತು ನೋವು ಅನುಭವಿಸಿದವರು, ವಿಷಯ ಬಲ್ಲವರು ಸಾಕಷ್ಟು ಹೇಳುತ್ತಾರೆ.

ಫೀಲ್ಡ್ ಆಫೀಸರ್ಸ್ಗಳ ಮೂಲಕ ಹಿಂಸೆ

ಧರ್ಮಸ್ಥಳ ಸಂಸ್ಥೆಯು ತನ್ನ ದೇವಾದೇವಿ ವ್ಯವಹಾರಗಳ ವಿಸ್ತರಣೆಯನ್ನು `ಸೇವಾ ಪ್ರತಿನಿಧಿ’ಗಳ ಮೂಲಕ ಮಾಡುತ್ತದೆ. ಒಂದು ಸಂಘದ ರಚನೆಗೆ 250 ರೂ. ಕಮೀಷನ್ ಸೇವಾ ಪ್ರತಿನಿಧಿಗೆ ದೊರೆಯುತ್ತದೆ. ತಿಂಗಳಲ್ಲಿ ಕನಿಷ್ಟ 30 ಸಂಘಗಳ ರಚನೆಯ ಕೋಟಾ ಇರುತ್ತದೆ. ಎಸ್ಕೆಎಸ್, ಸ್ಪಂದನ, ಶೇರ್ ಬ್ಯಾಂಕ್ ಮುಂತಾದ ಸಂಸ್ಥೆಗಳು 5 ಜನರ ಗುಂಪು ರಚನೆಗೆ 250 ರೂ.ಗಳ ಕಮೀಷನ್ ನೀಡುತ್ತವೆ. ಗುಂಪಿನ ಸದಸ್ಯರು ಸಾಲ ಪಡೆದರೆ ಈ ಸಾಲಗಾರರನ್ನು ಗುಂಪಿನ ಸದಸ್ಯರನ್ನಾಗಿ ಮಾಡಿದವರಿಗೆ ಕಮೀಷನ್ ದೊರೆಯುತ್ತದೆ. 20 ಜನರ ಒಂದು ಗುಂಪಿನ ಸದಸ್ಯರು ತಲಾ ಹತ್ತು ಸಾವಿರದಂತೆ ಒಟ್ಟು 2 ಲಕ್ಷ ಸಾಲ ಪಡೆದರು ಎಂದು ಕೊಳ್ಳೋಣ. ಆಗ 2 ಸಾವಿರ ರೂ. ಕಮೀಷನ್ ಈ ಗುಂಪು ರಚನೆಗೆ ಕಾರಣವಾದ ಪ್ರತಿನಿಧಿಯ ಜೇಬು ಸೇರುತ್ತದೆ. ಸಾಲಗಾರರು ಸಾಲ ಮರುಪಾವತಿ ಆರಂಭಿಸಿದರೂ ಪ್ರತಿನಿಧಿಗಳಿಗೆ ಕಮೀಷನ್ ಸಿಗುತ್ತದೆ. 10 ಸಾವಿರ ರೂಪಾಯಿ ಸಾಲ ತೆಗೆದುಕೊಂಡವರ ಒಂದು ಕಂತಿನ ಸಾಲ ಮರುಪಾವತಿಗೆ 125 ರೂಪಾಯಿ ಕಮೀಷನ್ ದೊರೆಯುತ್ತದೆ.

ಫೈನಾನ್ಸ್ ಕಂಪನಿಗಳು ಸಾಲ ವಸೂಲಿಗಾಗಿ ಮುಖ್ಯವಾಗಿ ಸಂಸ್ಥೆಯ `ಫೀಲ್ಡ್ ಆಫೀಸರ್’ಗಳನ್ನು ಅವಲಂಬಿಸುತ್ತವೆ. ಯಾವ ಮಾನವೀಯ ಮರುಕವೂ ಇಲ್ಲದ ನಿರ್ದಯ ಸಾಲ ವಸೂಲಿಗೆ ತಕ್ಕಂತೆ ಇವರ ಮನಸ್ಥಿತಿಯನ್ನು ಸಿದ್ಧಗೊಳಿಸಲಾಗುತ್ತದೆ. `ಹೊಟ್ಟೆಗೆ ಏನ್ ತಿಂತೀರಾ ನೀವು?’, ತಾಳಿ ಅಡ ಇಟ್ಟು ಹಣ ತರ್ತೀರೋ, ಅಥವಾ ಯಾವ ತರಾ ತರ್ತೀರೋ ನಮಗೆ ಅದೆಲ್ಲಾ ಗೊತ್ತಿಲ್ಲ, ದುಡ್ಡು ಮಾತ್ರ ಸರಿಯಾದ ಟೈಮಿಗೆ ಕಟ್ಟಲೇ ಬೇಕು’ ಇತ್ಯಾದಿಯಾಗಿ ಅಪಮಾನಕಾರಿ ಮಾತನಾಡಿ ಒತ್ತಡ ಹಾಕಲು ಬೇಕಾದಂತೆ ಅವರನ್ನು ತರಬೇತುಗೊಳಿಸಲಾಗುತ್ತದೆ. ಸಂಘದ ಇತರ ಸದಸ್ಯರನ್ನು ಮನೆಯ ಮುಂದೆ ತಂದು ಕೂರಿಸಲಾಗುತ್ತದೆ.

ಪಿಯುಸಿಗಿಂತ ಮೇಲಿನ ಹಂತದ ಶಿಕ್ಷಣ ಪಡೆದವರನ್ನು ಫೀಲ್ಡ್ ಆಫೀಸರ್ಗಳಾಗಿ ಸಾಮಾನ್ಯವಾಗಿ ನೇಮಕ ಮಾಡಿಕೊಳ್ಳುವುದಿಲ್ಲ. ಕಡಿಮೆ ಶಿಕ್ಷಣ ಪಡೆದವರು ಯಾವ ಒರಟು ವಿಧಾನವನ್ನಾದರೂ ಸರಿ ಬಳಸಿ ಸಾಲ ವಸೂಲಿ ಮಾಡುತ್ತಾರೆ ಎಂಬುದು ಈ ಸಂಸ್ಥೆಗಳ ನಂಬಿಕೆ. ಬಡವರು ಮತ್ತು ರೈತರ ಆತ್ಮಹತ್ಯೆಗಳನ್ನು ಈ ಹಿನ್ನೆಲೆಯಲ್ಲಿಯೂ ಅರ್ಥ ಮಾಡಿಕೊಳ್ಳಬೇಕು.

ಇದೊಂದು ದುಷ್ಟ ವ್ಯವಸ್ಥೆ. ನಿರುದ್ಯೋಗ ತಾಂಡವವಾಡುತ್ತಿರುವ ನಮ್ಮ ಸಮಾಜದಲ್ಲಿ ಎಂತಹ ಸಂವೇದನಾಶೀಲ ವ್ಯಕ್ತಿಯಾದರೂ ಕೂಡ ತಾನು ಇಲ್ಲಿ ಫೀಲ್ಡ್ ಆಫೀಸರ್ ಆಗಿ ನೇಮಕಗೊಂಡರೆ ಸಾಲ ವಸೂಲಿಗಾಗಿ ಒತ್ತಡ ಹಾಕಲೇ ಬೇಕು. ಏಕೆಂದರೆ `ಫೀಲ್ಡ್ ಆಫೀಸರ್ಸ್’ಗಳ ತಲೆ ಮೇಲೆಕೂತು ಒತ್ತಡ ಹಾಕುವ `ಕ್ಯಾಷಿಯರ್’ಗಳು ಮತ್ತು `ಬ್ರಾಂಚ್ ಮೇನೇಜನರ್’ಗಳು ಇರುತ್ತಾರೆ. ಫೀಲ್ಡ್ ಆಫೀಸರ್ಗಳಿಗೆ ತಿಂಗಳಿಗೆ 8 ರಿಂದ 10 ಸಾವಿರ ಸಂಬಳ ಕೊಡಲಾಗುತ್ತದೆ. ಅವರು ತಮ್ಮ ಬಳಿ ಬೈಕ್ ಇಟ್ಟುಕೊಂಡಿರಬೇಕು. ಪ್ರತಿ ಕಿ.ಮೀ.ಗೆ 1.75 ರೂ. ವಾಹನ ವೆಚ್ಚವಾಗಿ ನೀಡಲಾಗುತ್ತದೆ. ಕಾಲ ಹರಣ ಅಥವಾ `ತರಲೆ’ ಮಾಡುತ್ತಿದ್ದಾರೆ ಅನಿಸಿದರೆ ಮುಲಾಜಿಲ್ಲದೆ ಕೆಲಸದಿಂದ ಕಿತ್ತು ಎಸೆಯಲಾಗುತ್ತದೆ. ಇವರು ಜನರನ್ನು ಸೇರಿಸಿ ನಡೆಸುವ ಪ್ರತಿ ಸಭೆಗೂ ದುಡ್ಡು ಕೊಡಲಾಗುತ್ತದೆ. ಬೆಳಗಿನ ಭೇಟಿ, ಮಧ್ಯಾಹ್ನದ ಭೇಟಿ, ಸಂಜೆ ಭೇಟಿ ಎಂದು ಗುರಿ ಇರುತ್ತದೆ. ಬೆಳಿಗ್ಗೆ 6 ರಿಂದ ರಾತ್ರಿ ಹನ್ನೆರಡರವರೆಗೂ ಕೆಲಸ. ರಜೆ ಇಲ್ಲ. 5 ನಿಮಿಷ ತಡವಾದರೂ ಬೈಗುಳಗಳು… ಇಲ್ಲಿ ಹೊಸ ಗುಂಪು ಮಾಡುವುದಕ್ಕೆ `ಹಂಟಿಂಗ್’ ಎಂಬ ಪದ ಬಳಸಲಾಗುತ್ತದೆ. `ಹಂಟಿಂಗ್’ ಅಂದರೆ ಬೇಟೆ. ಈ ಹಣಕಾಸು ವ್ಯವಹಾರಗಳ ಒಳಹೊಕ್ಕು ನೋಡಿದರೆ ನಿಜಕ್ಕೂ ಇದು `ನರಬೇಟೆ’ಯ ವ್ಯವಹಾರವೇ ಸರಿ ಅನಿಸುತ್ತದೆ. ಈ ಒಟ್ಟು ಜಾಲದ ಬಲಿಪಶುಗಳು ಬಡವರು, ರೈತರು ದುಡಿಯುವ ಜನ ಎಂಬುದು ಮಾತ್ರ ಸತ್ಯ.

ಮೀಟರ್ ಬಡ್ಡಿ ವ್ಯವಹಾರಗಳು

Untitled-1

2009-10 ರಲ್ಲಿ ಬಳ್ಳಾರಿ ತಾಲ್ಲೂಕಿನಲ್ಲಿ ಎಸ್ಕೆಎಸ್ ಸಂಸ್ಥೆಗೆ ಎ ಮತ್ತು ಬಿ ಎಂಬ ಎರಡೇ ಶಾಖೆ ಇತ್ತು. ಈಗ ಸಿ.ಡಿ.ಇ.ಎಫ್ ಶಾಖೆಗಳೆಲ್ಲಾ ಆಗಿವೆ. ಕನಕ ಸೌಹಾರ್ದ ಬ್ಯಾಂಕ್ನ ಬಳ್ಳಾರಿಯ ಶಾಖೆಯ ಆಫೀಸ್ನ ಮುಂದೆ ಈಗ ಸು. 20 ಬೈಕ್ಗಳು ನಿಂತಿವೆಯಂತೆ, ಅವೆಲ್ಲಾ ಬಹುತೇಕ ಸಾಲ ಕಟ್ಟದ ಜನರಿಂದ ಕಿತ್ತುಕೊಂಡು ಬಂದದ್ದಂತೆ. ಇಂತಹ ಕೆಲಸಗಳಿಗೆಂದೇ ಕಂಪನಿಗಳು `ಪತ್ಯೇಕವಾದ ಜನ’ರನ್ನು ಇಟ್ಟುಕೊಂಡಿರುತ್ತವೆ. ಮೂಕಾಂಬಿಕ ಫೈನಾನ್ಸ್, ವಿನಾಯಕ ಫೈನಾನ್ಸ್, ನಂದಿ ಫೈನಾನ್ಸ್, ವಿಘ್ನೇಶ್ವರ ಫೈನಾನ್ಸ್, ಕಲ್ಲೇಶ್ವರ ಫೈನಾನ್ಸ್ ಎಷ್ಟೋ ಕಂಪನಿಗಳು ಇಲ್ಲಿ ಕೆಲಸ ಮಾಡುತ್ತಿವೆ.

ನೂರು ದಿನದ ಸ್ಕೀಂ

ಇವೆಲ್ಲಾ ಚರ್ಚೆ ಬಂದಾಗ ಸಾಲ ತೆಗೆದುಕೊಂಡವರಿಗೆ ಸಾಲ ವಾಪಸ್ ಕೊಡಬೇಕಾದ ಜವಾಬ್ದಾರಿ ಇಲ್ಲವೇ ಎಂಬ ಪ್ರಶ್ನೆಯನ್ನು ಯಾರಾದರೂ ಎತ್ತಬಹುದು. ಆದರೆ ಈ ಮೀಟರ್ ಬಡ್ಡಿ ವ್ಯವಹಾರಗಳನ್ನು ನೋಡಿ. ಇದನ್ನು `ನೂರು ದಿನದ ಸ್ಕೀಂ’ ಅನ್ನಲಾಗುತ್ತದೆ.

ಒಬ್ಬ ಮನುಷ್ಯ 10,000 ರೂ. ಸಾಲ ಕೇಳುತ್ತಾನೆ. ಫೈನಾನ್ಸ್ನವರು ಕೊಡುತ್ತಾರೆ. ದಿನಕ್ಕೆ 100 ರೂಪಾಯಿಯಂತೆ 100 ದಿನ ಕಟ್ಟಬೇಕು. ತಿಂಗಳಿಗೆ ಬಡ್ಡಿ ಶೇ. 5 ಎಂದು ಹೇಳಲಾಗುತ್ತದೆ. ಆದರೆ ದುಡ್ಡು ಕೊಡುವಾಗಲೇ ಬಡ್ಡಿಮೊತ್ತವಾದ 1500 ರೂ. ಮುರಿದುಕೊಂಡು 8,500 ರೂ.ವನ್ನು ಮಾತ್ರ ಸಾಲಗಾರರ ಕೈಗೆ ಕೊಡಲಾಗುತ್ತದೆ. ಸಾಲಗಾರ ಕಂತು ಕಟ್ಟುತ್ತಾ ಬಂದಂತೆ ಬಡ್ಡಿಯ ಮೊತ್ತ ಕಡಿಮೆಯಾಗುವುದು ನ್ಯಾಯವಾದ ಕ್ರಮ. ಇಲ್ಲಿ ಹಾಗೇನೂ ಆಗುವುದಿಲ್ಲ. ಇವೆಲ್ಲವನ್ನೂ ಸರಿಯಾಗಿ ನೋಡಿದರೆ ಇಲ್ಲಿ ತಿಂಗಳಿಗೆ ಬಡ್ಡಿದರವು ಕನಿಷ್ಟ 12 ಶೇ. ಕ್ಕಿಂತ ಕಡಿಮೆ ಇರುವುದಿಲ್ಲ. ತಿಂಗಳಿಗೆ ಶೇ. 5 ರೂ. ಬಡ್ಡಿಯೆಂದು ಜನರ ಕಣ್ಣಿಗೆ ಮಣ್ಣೆರಚಲಾಗುತ್ತದೆ. ಕ್ರಮಬದ್ಧವಾಗಿ ತಿಂಗಳಿಗೆ 5 ರೂ. ಬಡ್ಡಿ ಪಡೆದರೂ ಅದೂ ಅನ್ಯಾಯದ ಬಡ್ಡಿಯೇ. ವರ್ಷಕ್ಕೆ 10,11,12 ಶೇ. ಬಡ್ಡಿ ವಿಧಿಸುವ ರಾಷ್ಟ್ರೀಕೃತ ಬ್ಯಾಂಕುಗಳೆಲ್ಲಿ ತಿಂಗಳಿಗೆ 10,11,12 ಶೇ. ಬಡ್ಡಿ ವಿಧಿಸುವ ಖಾಸಗೀ ಪೈನಾನ್ಸ್ ಕಂಪನಿಗಳೆಲ್ಲಿ?

 

ಹಗರಿ ಬೊಮ್ಮನ ಹಳ್ಳಿ : ರೈತ ಆತ್ಮಹತ್ಯೆಗಳು

ಅಕ್ಟೋಬರ್ 7, 2015 ರಂದು ಅಧ್ಯಯನ ತಂಡವು ಹಗರಿಬೊಮ್ಮನ ಹಳ್ಳಿಯ ಜನರ ಸಮಸ್ಯೆಗಳ ಬಗೆಗೆ ತಿಳಿಯಲು ಹಳ್ಳಿಗಳಿಗೆ ಭೇಟಿ ನೀಡುವುದಿತ್ತು. ಬಸ್ ಸ್ಟಾಂಡಿನಲ್ಲಿನಲ್ಲೇ ಕೂಲಿ ಕೆಲಸ ಮಾಡುತ್ತಿದ್ದ ಅಬೂಬಕರ್ ಎಂಬ 37 ವರ್ಷದ ಯುವಕ ಆತ್ಮಹತ್ಯೆಗೆ ಶರಣಾದ ಸುದ್ದಿ ಸಿಕ್ಕಿತು. ಕಾರಣ ಖಾಸಗಿ ಫೈನಾನ್ಸ್ ಕಂಪನಿಗಳ ದುಬಾರಿ ಬಡ್ಡಿಯ ಸಾಲದ ಒತ್ತಡ.

ನಮ್ಮ ತಂಡವು ನಾಗಲಾಪುರ ತಾಂಡ, ಕೋಡಿಹಳ್ಳಿಗಳಲ್ಲಿ ಆತ್ಮಹತ್ಯೆ ಸಂತ್ರಸ್ತ ರೈತ ಕುಟುಂಬಗಳನ್ನು ಕಂಡು ಮಾತನಾಡಿ ಬಂದಿತು.

ಅಕ್ಟೋಬರ್ 10 ರಂದು ಕೃಷ್ಣಾಪುರ ಎಂಬ ಹಳ್ಳಿಯಲ್ಲಿ 67 ವರ್ಷದ ರೈತ ಮಹಿಳೆ `ಸಾಹುಕಾರ್ ಮಲ್ಲವ್ವ’ ಆತ್ಮಹತ್ಯೆ ಶರಣಾಗಿದ್ದರು. ಟ್ರ್ಯಾಕ್ಟರ್ ಸಾಲ ಸೇರಿದಂತೆ ಎಸ್ಬಿಎಂ ಬ್ಯಾಂಕಿನಲ್ಲಿ 10 ಲಕ್ಷ ಸಾಲ ಪಡೆದದ್ದು ಇನ್ನೂ 7 ಲಕ್ಷದ ಬಾಕಿ ಇತ್ತು. ಅಕ್ಟೋಬರ್ 21 ರಂದು ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ಉಲವತ್ತಿ ಗ್ರಾಮದ ಡಿ. ಬಸವರಾಜ ಖಾಸಗಿ ಲೇವಾದೇವಿದಾರರ ಮೀಟರ್ ಬಡ್ಡಿ ಕಾಟ ತಾಳದೆ (2.8 ಲಕ್ಷ ಪಡೆದ ಸಾಲ 7 ಲಕ್ಷಕ್ಕೆ ಏರಿದೆ) ಪೋಲಿಸ್ ಠಾಣೆಯಲ್ಲಿಯೇ ವಿಷಕುಡಿದ ಅನಾಹುತಕಾರಿ ಘಟನೆಯ ವರದಿ ಪತ್ರಿಕೆಗಳಲ್ಲಿ.

ಇದು ಹಗರಿಬೊಮ್ಮನ ಹಳ್ಳಿಯ ಸ್ಫೋಟಕ ಪರಿಸ್ಥಿತಿಯ ಸೂಚಕವಾಗಿದೆ. ತಾಲ್ಲೂಕಿನಲ್ಲಿ ಹತ್ತಾರು ಖಾಸಗಿ ಲೇವಾದೇವಿದಾರರ ಸಂಸ್ಥೆಗಳು ರೈತರ ಮತ್ತು ಜನರ ಜೀವ ಹಿಂಡುತ್ತಿವೆ. ತಾಲ್ಲೂಕಿನಲ್ಲಿ ಮೊದಲೇ ಕೃಷಿ ಬಿಕ್ಕಟ್ಟು ತೀವ್ರವಾಗಿದೆ. ಎಲ್ಲವೂ ಸೇರಿ ಯಾವುದೋ ದೊಡ್ಡ ಅನಾಹುತಗಳ ಸರಣಿಯೇ ಮುಂದೆ ಕಾದಿದೆಯೇನೋ ಎಂದು ಒಳ ಮನಸ್ಸಿಗೆ ಎನಿಸುತ್ತದೆ. ಇಂತಹ ಪರಿಸ್ಥಿತಿ ರಾಜ್ಯದ ಎಷ್ಟೋ ತಾಲ್ಲೂಕಿನಲ್ಲಿ ಇರಬಹುದು. ಇದು ಒಂದು ಉದಾಹರಣೆ ಅಷ್ಟೆ. ಒಂದು ಉದಾಹರಣೆಯಾದ ಈ ತಾಲ್ಲೂಕಿನ ಪರಿಸ್ಥಿತಿಯ ಬಗೆಗೆ ನಾವು ನಿರ್ಧಿಷ್ಟವಾಗಿ ಅಲ್ಲಿ ಏನೇನಾಗುತ್ತಿದೆ ಎಂದು ನಮಗೆ ತಿಳಿದಷ್ಟಾನ್ನಾದರೂ ನೋಡಿ ಹೊರ ಜಗತ್ತಿಗೆ ಕೂಗಿ ಹೇಳುವುದು ಅಧ್ಯಯನ ತಂಡದ ಉದ್ದೇಶ.

 

ಕೂಡ್ಲಗಿ ರೈತ ಪರಶುರಾಮನ ಆತ್ಮಹತ್ಯೆ

IMG_20151015_150137

ಕಳೆದ ಆಗಸ್ಟ್ 19 ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ 24 ವರ್ಷದ ರೈತ ಪರಶುರಾಮ ಆತ್ಮಹತ್ಯೆ ಮಾಡಿಕೊಳ್ಳಲು ಬೆಳೆ ವೈಫಲ್ಯ, ಬರ ಮುಖ್ಯ ಕಾರಣವಾದರೆ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಜಂಟಿ ಕುಟುಂಬದ ಇಬ್ಬರು ಸದಸ್ಯರ ಹೆಸರಿನಲ್ಲಿ ಪಡೆದುಕೊಳ್ಳಲಾದ ತಲಾ 30,000+30,000 ರೂ. ಹಾಗೂ ಮತ್ತೊಂದು ಕಂಪನಿಯಿಂದ ಪಡೆದುಕೊಳ್ಳಲಾದ 40,000 ರೂ. ಸಾಲದ ಸಂಬಂಧ ವಾರದ ಕಂತು ಕಟ್ಟಬೇಕಾಗಿದ್ದ ಒತ್ತಡ. ಪತ್ನಿ ರತ್ನಮ್ಮನಿಗೆ ಮೊದಲ ಮಗುವಿನ ಹೆರಿಗೆ ಸಮಯದಲ್ಲೂ ಆರೋಗ್ಯದ ತೊಂದರೆಯಾಗಿ ಹೊಸಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ 30,000 ರೂ. ವೆಚ್ಚವಾಗಿದೆ. ಎರಡನೆಯದರಲ್ಲೂ ತೊಂದರೆಯೇ ಆಗಿದೆ.

ಎರಡು ಎಳೇ ಮಕ್ಕಳ ತಾಯಿಯಾದ 22 ವರ್ಷದ ಮಹಿಳೆ ರತ್ನಮ್ಮ ಗಂಡನನ್ನು ಕಳೆದುಕೊಂಡು ದಿಕ್ಕುಗೆಟ್ಟ ಸ್ಥಿತಿಯಲ್ಲಿದ್ದರೂ ಖಾಸಗಿ ಹಣಕಾಸು ಸಂಸ್ಥೆಗಳಿಂದ ಯಾವುದೇ ಸಾಂತ್ವನ, ಪರಿಹಾರ ಸಿಕ್ಕಿಲ್ಲ. ಬಡ ಕುಟುಂಬವೂ ಈಗಲೂ ವಾರದ ಕಂತು ಕಟ್ಟಬೇಕಾದ ಒತ್ತಡದಲ್ಲಿ ಸಿಕ್ಕಿ ತತ್ತರಿಸುತ್ತಿದೆ. ಸಾಲ ಪಡೆದ ಸಂಸ್ಥೆಯ ಬಗೆಗೆ ಹೆಚ್ಚಿಗೆ ಮಾತನಾಡಲು ಕುಟುಂಬ ಸಿದ್ದವಿಲ್ಲದಿರುವುದರಿಂದ ಇಲ್ಲಿ ಆ ನಿರ್ಧಿಷ್ಟ ವಿವರಗಳನ್ನು ನೀಡಲಾಗುತ್ತಿಲ್ಲ.

ಆದರೆ ಸರಕಾರದ ಕಡೆಯಿಂದ ಈ ಕುಟುಂಬಕ್ಕೆ ಯಾವ ಪರಿಹಾರವೂ ಸಿಕ್ಕಿಲ್ಲದಿರುವುದು ಮಾತ್ರ ನಿಜಕ್ಕೂ ದುರಂತವೇ. ಜಮೀನಿನ ಪಹಣಿ ಪರಶುರಾಮನ ತಾತನ ತಂದೆಯ ಹೆಸರಿನಲ್ಲಿಯೇ ಇದೆ. ಕೂಲಿನಾಲಿ ಮಾಡುವ ಕುಟುಂಬ. ಮತದಾರರ ಗುರುತಿನ ಚೀಟಿ ಮಾಡಿಸಲಾಗಿರಲಿಲ್ಲ. ಇದೇ ನೆಪ ತೋರಿ ಕುಟುಂಬದ ರೇಷನ್ ಕಾರ್ಡ್ ಅರ್ಜಿ ನಿರಾಕರಿಸಲಾಗಿತ್ತು. ಈಗ ಸರಿಯಾದ ದಾಖಲೆಗಳಿಲ್ಲ ಅಂತ ಈ ಬಡ ಕುಟುಂಬಕ್ಕೆ ರೈತನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಿಗಬೇಕಾದ ಪರಿಹಾರವನ್ನು ಕೂಡ ಕೊಡಲು ನಿರಾಕರಿಸಲಾಗಿದೆ. ಸ್ಥಳೀಯ ಕೌನ್ಸಿಲರ್ ಸಹಾಯದಿಂದ ಈಗ ಗುರುತಿನ ಚೀಟಿ ಸಿಕ್ಕಿದೆ. ರಾಜ್ಯಕ್ಕೆ ರಾಹುಲ ಗಾಂಧಿ ಭೇಟಿ ನೀಡಿದ ನಂತರ ಘೋಷಿಸಲಾದ ಹೊಸ ನೀತಿಯ ಆಧಾರದಲ್ಲಿಯಾದರೂ ಈ ಕುಟುಂಬಕ್ಕೆ ಪರಿಹಾರ ಕೊಡಲು ಸಾಧ್ಯವೇ ಎಂದು ಕೇಳಿದರೆ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ರಂಗನಾಥ್ ಅವರು ಸರಕಾರದ ಸುತ್ತೋಲೆ ಇನ್ನೂ ಕೈಗೆ ಬಂದಿಲ್ಲ, ಬಂದ ಮೇಲೆ ಪರಿಶೀಲಿಸಿ ಸಾಧ್ಯವಾದ ಸಹಾಯ ಮಾಡಲು ಪ್ರಯತ್ನಿಸೋಣ ಎನ್ನುತ್ತಾರೆ. ಏನಾಗುತ್ತದೆ ಕಾದು ನೋಡಬೇಕು. ಹೆಚ್ಚು ದಿನ ಕಾದು ನೋಡುವ ಸ್ಥಿತಿಯಲ್ಲಿ ಕುಟುಂಬ ಇಲ್ಲ. ಮೂರು ವರ್ಷದ ನಿಹಾರಿಕಾ, ಎಳೆಕಂದ ರೋಹಿತ್ನ ಭವಿಷ್ಯವೇನು? ಈಗಲೂ ಅಪೌಷ್ಟಿಕತೆಯಿಂದ ನರಳುತ್ತಿರುವಂತೆ ಕಾಣುತ್ತಿರುವ ರತ್ಮಮ್ಮ ಕಂಕುಳಲ್ಲಿ ಎರಡು ಹಸುಗೂಸುಗಳನ್ನು ಇಟ್ಟುಕೊಂಡು ಮುಂದೇನು ಮಾಡಬಲ್ಲರು ಎಂದು ಯೋಚಿಸಿದರೆ ಒಮ್ಮೆ ಹೃದಯ, ಕರಳು ಹಿಂಡಿದಂತಾಗುತ್ತದೆ. ಇವರ ಸಂಕಟವನ್ನು ಕೇಳುವವರು ಯಾರು ??

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...