Thursday, November 05, 2015

ನಾಗರಾಜ್ ಹರಪನಹಳ್ಳಿ ಎರಡು ಕವಿತೆಗಳುಸುಳಿವ ಶಬ್ದವ ಹಿಡಿದು
ಬಯಲ ಗಾಳಿಯಲಿ ಸುಳಿವ
ಶಬ್ದವ ಹಿಡಿದು ಅಕ್ಷರಗಳ ಹೆಣೆದೆ
ಅದು ಮುದ್ದಾಗಿ ಹೆಣೆದ ಜಡೆಯ
ಎದುರು ಸೋತಿತು

ಅಲ್ಲಲ್ಲಿ ಅರಳಿದ ಹೂಗಳಿಂದ
ಮಕರಂದ ತಂದು
ಬಟ್ಟಲಲ್ಲಿ ತುಂಬಿ ಅಕ್ಕರೆಯ
ಬೊಗಸೆಯಲಿ ನೀಡಿದೆ
ಅದು ನಿನ್ನ ತುಟಿಗಳ ಎದುರು
ನಾಚಿ ಶರಣಾಯಿತು

ಮುದ್ದು ಕಂದಮ್ಮಗಳ
ತುಟಿಯಂಚಿನ ನಗುತಂದು
ನಿನ್ನ ಪಾದಗಳ ಬಳಿ ನಿಂತೆ
ನಿನ್ನ ವೈಯಾರದ ಬಳುಕಿನೆದುರು
ಮಂಡಿಯೂರಿ ಸೋತು ಮೌನಿಯಾಯಿತು

ಎಲೆಗಳ ಸದ್ದುಗಳಿಂದ 
ಮೈ ಬಳುಕಿಸಿ ತಗ್ಗು ದಿನ್ನೆಗಳನ್ನು ಬಳಸಿ
ಹರಿಯ ನದಿ ನೀರ ಶಬ್ದದಿಂದ 
ರಾಗವ ತಂದು
ಕಣ್ಣಬಳಿ ಸುರಿದೆ
ನಿನ್ನ ಇನಿದನಿ ಎದುರು ಸೋಲಪ್ಪಿತು

ಜಾತ್ರೆಯಲಿ ಸಂತಸದಿ
ಕೊಳಲನೂದುತ್ತಿದ್ದ ಗಾಯಕನ 
ಒಲವ ಹಿಡಿದು
ಕಣ್ಣ ಬಿಂದುವಿನಲ್ಲಿ ಬಂಧಿಸಿ ಸುರಿದೆ
ಅದೂ ಸಹ 
ನಿನ್ನೊಲವಿನ ಉಸಿರಿನೆದುರು ಸೋತಿತು
ಗೆಲುವಿನ ಒಲವು ಹೊದ್ದು ಮಲಗಿದವಳೆ
ಕಿರು ನೋಟವ ಚೆಲ್ಲು
ಮಧು-ಮದಿರೆಯನುಂಡ ಭೂಮಿ
ತೂಕದವಳೇ
ಬೆಳುದಿಂಗಳಂತೆ ನಕ್ಕು ಬಿಡು
ಸೋಲುತ್ತಲೇ ಇದ್ದು ಬಿಡುವೆ
ಸ್ಪರ್ಶಕೆ ಕಾದು…
***
 
 ಉರಿವ ದೀಪದ ಧನಿ

 
ಕತ್ತಲೆಯ ಗರ್ಭದಿಂದ 
ಬೆಳಕಿನ ಬೀಜತಂದು
ಇದೇ ಹಾದಿಯಲಿ ಬಿತ್ತಿದೆ
ಬನವಾಸಿಯ ದಾರಿಯಲ್ಲವಿದು
ಮನುಷ್ಯರ ದಾರಿ
ಇಲ್ಲಿಯ ಪಂಪ, ಆಚೆಯ ಬದಿಯ ಶರೀಫಾ
ಅವರ ಬೆರಳ ಪಾದಗಳ
ಕಣ್ಣಬೆಳಕಿಂದ
ಈ ನಾಡ ತುಂಬಾ
ದೀಪ ಹಚ್ಚಿದರು
ಈಗ 
ಯಾರೋ ಈ ನೆಲದಲ್ಲಿ
ಮದ್ದು ಸಿಡಿಸಿದ್ದಾರೆ
ಬೀದಿಬೀದಿಗಳ ಹಾದಿ ಓಣಿಗಳಲಿ ನಂಜು ಚೆಲ್ಲಿದ್ದಾರೆ
ನನ್ನ ಕಣ್ಣ ಬೆಳಕಿಂದ 
ಬಟ್ಟಲು ತುಂಬಾ ಪ್ರೀತಿತಂದು
ಹಠ ಬಿಡದೇ ತೊಳದೇ ತೊಳದೆ
ಯಾಕೆಂದರೆ 
ನನಗೆ ಬೀದಿಗಳ ತುಂಬಾ
ಹೂಗಳ ಬೆಳೆಯುವ ಹಠ
***
ಚಿವುಟಿದ ಹೂಗಳಿಗೆ
ಲೆಕ್ಕವಿಟ್ಟಿದ್ದೀರಾ?
ಎಂದಾದರೂ
ಸಿಡಿದ ನೆತ್ತರಿನ ಹನಿ
ತೊಳೆದಿದ್ದೀರಾ?
ನನ್ನ ಓಣಿಯ ಹುಡುಗರ
ಮೆದುಳಿನ ನಂಜಿಗೆ
ಔಷಧಿ ಹಚ್ಚಿದ್ದೀರಾ?
ಇಲ್ಲ ಇಲ್ಲ
ಹೇಳಿ ನನ್ನ ಜನಗಳೇ
ಇದ್ದರೆ ಹೇಳಿ
ಇದೇ ಪಂಪನ ಆತ್ಮದ ಎದುರು
ನನ್ನ ನಿಮ್ಮ ತಾಯಂದಿರ
ಪ್ರೀತಿ ತುಂಬಿದ ಪಾದಗಳಿಂದ
ತೊಳೆದು ಬಿಡೋಣ
***
ಬಯಲ ಗಾಳಿಯೇ 
ನೀನು ಯಾವ ಯಾವ ಜಾತಿಯ 
ಮನೆಗೆ ತೋರಣ ಕಟ್ಟಿದ್ದೀ?
ಸುರಿವ ಮಳೆಯೇ
ನಿನ್ನ ಧರ್ಮಯಾವುದು?
ತಾಯಂದಿರ ಪ್ರೀತಿಯೇ
ನಿಮಗೆ ನಂಜಿದೆಯೇ?
ಗೆಳೆಯರೇ
ನನಗೆ ಭಾಷೆ ಗೊತ್ತಿಲ್ಲ
ಮನುಷ್ಯರ ಶಬ್ದಗಳು ಅರ್ಥವಾಗುವುದಿಲ್ಲ
ಧರ್ಮವಿಲ್ಲದ ಊರಿಂದ 
ಬಂದಿದ್ದೇನೆ
ಯಾರೋ ಜಂಗಮರು ನೀರು ಕಳಿಸಿದ್ದಾರೆ
ರಕ್ತ ಮೆತ್ತಿದ ಬೀದಿಗಳನು
ತೊಳದೇ ತೊಳೆಯುತ್ತಿದ್ದೇನೆ 
ಕಲೆ ಮಾತ್ರ ಹಾಗೆಯೇ 
ಉಳಿದಿದೆ ……
 ***
 
 
ನಾಗರಾಜ್ ಹರಪನಹಳ್ಳಿ ಕವಿಯೂ ಪತ್ರಕರ್ತರೂ ಆಗಿರುವ ನಾಗರಾಜ್ ಹರಪನಹಳ್ಳಿ ಹುಟ್ಟಿದ್ದು ಹರಪನಹಳ್ಳಿ. ಬೆಳೆದದ್ದು ಮೈದೂರು,  ಚಿಗಟೇರಿ, ಕೊಟ್ಟೂರು, ಧಾರವಾಡಗಳಲ್ಲಿ. (ಅವರ ಅಪ್ಪನ ಊರು   ಭರಮಣ್ಣ ನಾಯಕನ ದುರ್ಗಾ(ಚಿತ್ರದುರ್ಗ), ಅವ್ವನ ಊರು ಚಾಮರಾಜ ನಗರ ಜಿಲ್ಲೆಯ ಮಂಗಲ ಗ್ರಾಮ.)  ಬದುಕು ಕಂಡುಕೊಂಡಿದ್ದು ಕಾರವಾರದಲ್ಲಿ. ಧಾರವಾಡದ ಕರ್ನಾಟಕ ಕಾಲೇಜನಲ್ಲಿ ಪದವಿ , ಕ.ವಿ.ವಿ.ಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಓದು. ಕಳೆದ 18 ವರ್ಷಗಳಿಂದ ನಾಡಿನ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಜನವಾಹಿನಿ, ಕನ್ನಡ ಜನಾಂತರಂಗ, ಈಟಿವಿ ಕನ್ನಡ ಹೀಗೆ ಪಟ್ಟಿ ಬೆಳೆಯುತ್ತದೆ. ಸದ್ಯ ಉದಯವಾಣಿ, ಲೋಕದರ್ಶನ ಪತ್ರಿಕೆಗಳ ಹಾಗೂ ಈನಾಡು ಇಂಡಿಯಾ ವೆಬ್‍ಸೈಟ್‍  ವರದಿಗಾರ. ಬಂಡಾಯ ಮತ್ತು ಪ್ರೀತಿ ಅವರ ಕವಿತೆಗಳ ಸ್ಥಾಯಿ ಭಾವ
 
nagraj242@gmail.com
9448408633

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...