Saturday, November 21, 2015

ಮಾಡ್ ಗಾನ್ ಕವಿ ಡಬ್ಲ್ಯೂ .ಬಿ. ಯೇಟ್ಸ್ ಗೆ ಬರೆದ ಪ್ರೇಮ ಪತ್ರಗಳು

ಅನು : ಎಂ. ಆರ್. ಕಮಲಾ


ಕವಿ ಡಬ್ಲ್ಯೂ .ಬಿ. ಯೇಟ್ಸ್ ಪ್ರೀತಿಸಿದ ಹೆಣ್ಣು ಮಾಡ್ ಗಾನ್. ಮಾಡ್ ಗಾನ್ 1893- 1938ರವರೆಗೆ ಯೇಟ್ಸ್ ಗೆ ಬರೆದ ಪತ್ರಗಳು ಅಗಣಿತ. ಅದರಲ್ಲಿ ಕೆಲವನ್ನಾದರೂ ಕನ್ನಡಕ್ಕೆ ತರುವ ಆಲೋಚನೆಯಿಂದ ಅನುವಾದಿಸುತ್ತಿದ್ದೇನೆ. ಮುಂದಿನ ವರ್ಷ ಪುಸ್ತಕ ತರುವ ಯೋಚನೆ ನನ್ನದು..

ಎಂ. ಆರ್. ಕಮಲಾ


ಪ್ರೇಮ ಪತ್ರ - 1


 ಪ್ರೀತಿಯ ವಿಲ್ಲಿ

ನಿನ್ನ ಪತ್ರಕ್ಕೆ ತಕ್ಷಣವೇ ಉತ್ತರಿಸಲಾಗಲಿಲ್ಲ, ಮನ್ನಿಸು. ಈ ಕೆಲಸದ ಒತ್ತಡ ಹೆಚ್ಚು ಕಮ್ಮಿ ನನ್ನ ಕೊಂದೇ ಹಾಕಿದೆ. ದಿನವೂ ಸುಡುಗಾಡು ಸಭೆಗಳು. ಇತ್ತೀಚೆಗೆ ನಾನು ಡಬ್ಲಿನ್ ನಲ್ಲಿಯೇ ನೆಲೆಸಿದ್ದೇನೆ. ನೀನು ಬಿಟ್ಟು ಹೋದಾಗಿನಿಂದ ನನ್ನ ಚೈತನ್ಯವೇ ಉಡುಗಿ ಹೋದಂತನ್ನಿಸಿದೆ. ಎಲ್ಲ ವಿಷಯದಲ್ಲೂ ಏನೋ ಒಂದು ಬಗೆಯ ನಿರುತ್ಸಾಹ. ಒಂದಿಷ್ಟು ಶಕ್ತಿ ತುಂಬಿಕೊಳ್ಳಲೆಂದು `ಹೌತ್' ಗೆ ಹೋಗಿ ಅಡ್ಡಾಡಿ ಬಂದೆ. ಆಹಾ! ಗುಡ್ಡ, ಬಂಡೆಗಳು, ಸಾಗರದ ಹಕ್ಕಿಗಳು...ಮಳೆ ಸುರಿಯುತ್ತಿದ್ದರೂ ನಾನದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹೌತ್ ನಲ್ಲಿ ಸುತ್ತಾಡಲು `ಟ್ರ್ಯಾಮ್ ವೇ' ಮಾಡುತ್ತಾರಂತೆ. ನೆನೆಸಿಕೊಳ್ಳುವುದಕ್ಕೆ ಭಯವೆನಿಸುತ್ತಿದೆ. ಪ್ರಜಾಪ್ರಭುತ್ವದ ಸಾಮಾಜಿಕ ತತ್ವಗಳಡಿ ಇಂತಹ ವಿಷಯಗಳ ಬಗ್ಗೆ ಖುಷಿಪಟ್ಟುಕೊಳ್ಳಬೇಕು. ಅದೇಕೋ ನನ್ನಿಂದ ಸಾಧ್ಯವಾಗುತ್ತಿಲ್ಲ.

ಬುಧವಾರ, ಚುನಾವಣೆಯ ನಂತರ, ನಾನು ಯಾವ ರಾಜಕೀಯ ಕೈದಿಗಾಗಿ ಕೆಲಸ ಮಾಡುತ್ತಿದ್ದೇನೋ ಆ ಕೆಲಸವನ್ನು ಮುಗಿಸಿ ಇಂಗ್ಲೆಂಡ್ ಗೆ ಹೋಗುತ್ತೇನೆ. ಅಲ್ಲಿಂದ ಪ್ಯಾರಿಸ್ ಗೆ ಮತ್ತೆ ಮರಳಬೇಕು. ನನಗೊಂದಿಷ್ಟು ವಿಶ್ರಾಂತಿ ಸಿಕ್ಕರೆ ಅದಕ್ಕಿಂತ ಬೇರೆ ಖುಷಿ ಏನಿದೆ? ಪಶ್ಚಿಮದಲ್ಲಿ ನೆಮ್ಮದಿಯಾಗಿ ನೆಲೆಸಿರುವ ನಿನ್ನ ಬಗ್ಗೆ ಹೊಟ್ಟೆ ಕಿಚ್ಚಾಗುತ್ತಿದೆ. ಇತ್ತೀಚಿಗೆ ಏನು ಬರೆದೆ? ಇಲ್ಲಿ ಪ್ರತಿಯೊಬ್ಬರೂ ರಂಗಭೂಮಿಯ ಗೆಲುವಿನ ಬಗ್ಗೆ, ಹೊಸ ಸಾಹಿತ್ಯ ಚಳವಳಿಯ ಬಗ್ಗೆ ಮಾತನಾಡುತ್ತಾರೆ. ಐರಿಶ್ ಆದರ್ಶಗಳ ಮೂಲಕ ಜನರನ್ನು ನೀನು ಎಚ್ಚರಿಸುವ ಕೆಲಸ ಮಾಡುತ್ತಿರುವುದು ನನಗಂತೂ ಅದ್ಭುತ ಅನ್ನಿಸಿದೆ.
ನಾನೊಂದು ಸಭೆಗೆ ಹೋಗಬೇಕಾಗಿರುವುದರಿಂದ ಪತ್ರವನ್ನು ಮುಗಿಸುತ್ತಿದ್ದೇನೆ. ಲೇಡಿ ಗ್ರೆಗರಿಯವರಿಗೆ ನನ್ನ ನೆನಪುಗಳು. ಪ್ಯಾರಿಸ್ ಗೆ ಹೋದ ಮೇಲೆ ಕೆಲವು ವಿಷಯಗಳ ಬಗ್ಗೆ ಬರೆಯಬೇಕಿದೆ.

ಎಂದಿನಂತೆ ಆತುರಾತುರದಲ್ಲಿದ್ದೇನೆ...
ಸದಾ ನಿನ್ನ ಸಂಗಾತಿ,
ಮಾಡ್ ಗಾನ್ .
ಪ್ರೇಮ ಪತ್ರ - 2

ಪ್ರೀತಿಯ ವಿಲ್ಲಿ,
ನಿನ್ನೆ ನಿನ್ನ ಬಿಟ್ಟು ಬರುವುದು ಎಷ್ಟು ಕಷ್ಟವಾಯ್ತು. ಇವತ್ತೇನಾದರೂ ನೀನು ಹೊರಟಿದ್ದರೆ ಮತ್ತಷ್ಟು ಮಂಕಾಗಿಬಿಡುತ್ತಿದ್ದೆ. ನಾವಿಬ್ಬರು ಜೊತೆಗಿದ್ದಾಗ ಬದುಕು ಅದೆಷ್ಟು ಸುಂದರ! ಆದರೆ ನಾವಿಬ್ಬರು ಜೊತೆಗಿರುವುದು ಅದೆಷ್ಟು ಕಡಿಮೆ ...!
ನಿನ್ನೆ ರಾತ್ರಿ ನಿನ್ನ ಬಳಿಗೆ ಬಂದಿದ್ದೆ ಎನ್ನುವುದು ನಿನಗೆ ತಿಳಿದಿದೆಯೇ?! ಬಹುಶಃ 12 ರಿಂದ 2 ಗಂಟೆಯ ಒಳಗೆ! ಸಮಯ ಸರಿಯಾಗಿ ನೆನಪಿಲ್ಲ .ಬುಧವಾರದ ಬೆಳಗಿನ ಬಂಗಾರದ ಕಿರಣವನ್ನು ನನಗೆ ನೀನೆ ತೋರಿಸಿದೆ. ಮತ್ತೆ ಮತ್ತೆ ನಿನ್ನ ಬಳಿಗೆ ಹೀಗೆ ಬರುತ್ತೇನೆ. ಆದರೆ ನಿನ್ನ ಕೆಲಸಕ್ಕೆ ತೊಂದರೆ ಕೊಡುವಂತಲ್ಲ! ನಿನ್ನನ್ನು ಸೋಮಾರಿಯಾಗಿಸುವುದು ನನಗೆಂದು ಇಷ್ಟವಿಲ್ಲ. ಹಾಗೇನಾದರು ಮಾಡಿದರೆ ಮತ್ತೆಂದು ನಿನ್ನ ಭೇಟಿಯಾಗುವುದಿಲ್ಲ .. ಅದೆಷ್ಟು ಘೋರ- 

ನನ್ನ ಮುಖದಲ್ಲೇನೋ ನೋವು ಕಾಣುತ್ತಿದೆ ಎಂದು ನಿನ್ನೆ ನೀನು ಕೇಳಿದೆ-ನಿಜ, ನೋವಿನೊಂದಿಗೆ ಖುಷಿಯೂ ಇದೆ.ಅಗಲಿಕೆಯ ವೇದನೆ ಎಂಥದ್ದು ಎಂದು ನಿನಗೆ ತಿಳಿದೇ ಇದೆ. ಕೆಲವೊಮ್ಮೆ ನನಗೆ ತೀರ ಒಂಟಿ ಅನ್ನಿಸುತ್ತದೆ..ಆಗೆಲ್ಲ ಹಂಬಲ ತೀವ್ರವಾಗುತ್ತದೆ-ಈಗಿನದು ಅಂಥದ್ದೇ ಗಳಿಗೆ. ಆದರೆ ನಿನ್ನ ಪ್ರೀತಿಯ ಪುಟ್ಟ ಅಳತೆಯನ್ನು ಮೀರಿರುವ ಸಂತಸದ , ಹೆಮ್ಮೆಯ ವಿಚಾರವೊಂದನ್ನು ಹೇಳಲೇಬೇಕು.ನಾನೀಗ ದೈವಿಕ ಪ್ರೇಮ, ಸಂಯೋಗವನ್ನು ಒಪ್ಪಿಕೊಳ್ಳುವಷ್ಟು ಶಕ್ತಳಾಗಿದ್ದೇನೆ. 


ನನ್ನ ಪ್ರೀತಿಯಿಂದ ಈ ಪ್ರಾಪಂಚಿಕ ಆಸೆಗಳನ್ನು ದೂರ ಮಾಡು ದೇವರೇ ಎಂದು ಬೇಡಿಕೊಂಡಿದ್ದೇನೆ, ಬೇಡಿಕೊಳ್ಳುತ್ತಿದ್ದೇನೆ. ನಿನ್ನ ಬಗೆಗಿನ ದೈಹಿಕ ಹಂಬಲಗಳನ್ನು ನನ್ನಿಂದ ಮಾತ್ರವಲ್ಲ, ನಿನ್ನಿಂದಲೂ ಆ ದೇವರು ಹೋಗಲಾಡಿಸಲಿ ಎಂಬುದು ನನ್ನ ನಿತ್ಯದ ಪ್ರಾರ್ಥನೆ. ಗಂಡಸೊಬ್ಬ ಹೆಣ್ಣನ್ನು ಹೀಗೆ ಪ್ರೀತಿಸುವುದು ಸುಲಭವಲ್ಲ ಎಂದು ನನಗೆ ತಿಳಿದಿದೆ. ನನಗು ಅದು ಸುಲಭವಾಗಿರಲಿಲ್ಲ... ನನ್ನೊಳಗೂ ಒಂದು ದೀರ್ಘ ಹೋರಾಟವೇ ನಡೆದಿದೆ. ಜೀವನವನ್ನೇ ಹಿಡಿದು ಅಲುಗಾಡಿಸುವಷ್ಟು! ನಾನದರ ಬಗ್ಗೆ ಹೆಚ್ಚು ಮಾತಾಡದೆ ನಕ್ಕು ಬಿಡುತ್ತಿದ್ದೇನೆ.


ಈಗ ಹೋರಾಟ ಮುಗಿದಿದೆ. ಸ್ವಲ್ಪ ಮಟ್ಟಿಗೆ ಶಾಂತಿಯನ್ನು ಕಂಡುಕೊಂಡಿದ್ದೇನೆ. ನೀನು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವುದನ್ನು ಅರಗಿಸಿಕೊಳ್ಳುವಷ್ಟು! ನಮ್ಮ ನಡುವಿನ ಈ ದೈವಿಕ ಪ್ರೇಮ ನಮ್ಮ ಬದುಕು ಮುಗಿದ ನಂತರವೂ ಉಳಿಯುತ್ತದೆ. ನಾವಿಬ್ಬರು ಮತ್ತೆಂದು ಒಬ್ಬರನ್ನೊಬ್ಬರು ನೋಡದಿದ್ದರೂ!


ಆದಷ್ಟು ಬೇಗ ಪತ್ರ ಬರಿ.


ನಿನ್ನವಳು,
ಮಾಡ್
***


ಕಮಲ ಎಂ.ಆರ್. (೧೯೫೯) ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ., ಎಲ್‌ಎಲ್.ಬಿ., ಫ್ರೆಂಚ್ ಭಾಷಾ ಪದವೀಧರೆ. ಶಕುಂತಲೋಪಾಖ್ಯಾನ, ಜಾಣೆ ಮತ್ತು ಇತರ ಕವಿತೆಗಳು, ಹೂವು ಚೆಲ್ಲಿದ ಹಾದಿ ಕಾವ್ಯ ಸಂಗ್ರಹಗಳು ಪ್ರಕಟಗೊಂಡಿದೆ. ಬಂಗಾಲದ ಮಹತ್ವದ ಕವಿ ಜೀವನಾನಂದರ ಕವಿತೆಗಳನ್ನು ಕೇಂದ್ರ ಸಾಹಿತ್ಯ ಅಕಾದೆಮಿಗಾಗಿ ಅನುವಾದಿಸಿದ್ದಾರೆ. ಆಫ್ರಿಕನ್-ಅಮೆರಿಕನ್, ಆಫ್ರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮ ಹೊಂದಿದ್ದಾರೆ. ಕತ್ತಲ ಹೂವಿನ ಹಾಡು ಇವರು ಸಂಪಾದಿಸಿ, ಕನ್ನಡಿಸಿರುವ ಕಪ್ಪು ಲೇಖಕಿಯರ ಕಾವ್ಯ ಸಂಗ್ರಹ. ಇದರ ಮುಂದುವರಿಕೆಯಾಗಿ ‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಕೃತಿ ಸರಣಿಯ ನಾಲ್ಕು ಪುಸ್ತಕಗಳು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಎಸ್.ವಿ.ಪಿ. ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ೨೦೧೧-೧೨ರ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಮೊದಲಾದ ಸಮ್ಮಾನಗಳು ಬಂದಿವೆ.

ವಿಳಾಸ: ಎಂ ಆರ್. ಕಮಲ, ನಂ ೪೦೫, ಉಮಾಶಂಕರ, ಫಸ್ಟ್ ಎನ್ ಬ್ಲಾಕ್, ೧೯ನೇ ಜಿ ಮೇನ್, ರಾಜಾಜಿನಗರ, ಬೆಂಗಳೂರು - ೫೬೦೦೧೦


rustic.kamala@gmail.coಆಸೆ ನನ್ನದು..)

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...