Thursday, November 12, 2015

ಸುಕನ್ಯಾ ಮಾರುತಿ ಎರಡು ಕವಿತೆಗಳು




೧ 

ಹೌದು ಕಂದಾ




ಹೌದು ಕಂದಾ
ಆಕಾಶಕ್ಕೆ ಜೋಕಾಲಿ ಕಟ್ಟಿ
ಜೀಕಬೇಕೆನಿಸುತ್ತದೆ
ಹಾರುಗುದುರೆಯೇರಿಕೊಂಡು
ಯಕ್ಷಲೋಕಯಾತ್ರೆ
ಹೊರಡಬೇಕೆನಿಸುತ್ತದೆ
ಕಿನ್ನರ ಕಿಂಪುರುಷರೊಡನೆ
ಜೂಟಾಟ ಆಡಬೇಕೆನಿಸುತ್ತದೆ
ನಕ್ಷತ್ರಗಳ ಗೆಜ್ಜೆಕಟ್ಟಿ
ಹೆಜ್ಜೆ ಹಾಕಬೇಕೆನಿಸುತ್ತದೆ
ನನ್ನೊಳಗಿನ ಹುಡುಗಿ
ಇನ್ನೂ ಸತ್ತಿಲ್ಲ ಕಂದಾ

ಬೇಲಿಯೊಳಗಿನ ಬಾಲ್ಯ
ಬೆಳೆಯಗೊಡಲಿಲ್ಲ
ಜೇಲಿನೊಳಗಿನ ಹರೆಯ
ಅರಳಗೊಡಲಿಲ್ಲ
ಕಣ್ತೆರೆವ ಮುನ್ನವೇ
ಕಳೆದುಹೋದವು
ಮುಂಜಾವುಗಳು
ಅದುಮಿಟ್ಟ ಆಸೆಗಳು
ನಲುಗುತ್ತಿದ್ದಾವೆ ಮುಲುಗುತ್ತಿದ್ದಾವೆ ಕಂದಾ

ನಿನ್ನ ಸಕ್ಕರೆ ಸವಿಯ
ತೊದಲು ನುಡಿ ಕೇಳುತ್ತ ಕೇಳುತ್ತ
ಜಾರಿ ಹೋದವು ಮಧುರ ಕ್ಷಣಗಳು
ಅಡಿಗಡಿಗೆ ಹೆಜ್ಜೆ ತಪ್ಪುವ
ನಿನ್ನ ವಜ್ಜೆ ಹೊತ್ತೊತ್ತು
ದಣಿದುಬಿಟ್ಟಿದ್ದೇನೆ
ಬದುಕಿನ ಕ್ರೌರ್ಯಕ್ಕೆ
ಮಣಿದುಬಿಟ್ಟಿದ್ದೇನೆ
ನಿನಗಾಗಿ ವಿಧಿಯೊಡನೆ ಕಾದುತ್ತಾ
ನಾಳೆಗೆಂದು ನಿನ್ನ ನಾದುತ್ತಾ
ಮಾಗಿಬಿಟ್ಟಿವೆ ಮುಂಗುರುಳು
ಮುಪ್ಪಿನ ಮಾಲೆಯ ಭಾರಕ್ಕೆ
ಬಾಗಿಬಿಟ್ಟಿದೆ ಕೊರಳು

ಖಾಲಿ ಮುಗಿಲಿನಲಿ
ಹಗಲುಗಳ ಅರಸುತ್ತ
ಸಂಜೆಗಾವಳವಾಗಿದ್ದೇನೆ
ಕನಸುಗಳ ಹೊತ್ತು
ಕರಗುತ್ತಿದ್ದೇನೆ
ನೀನಂದುಕೊಂಡಂತೆ
ನನ್ನೊಳಗಿನ ಹುಡುಗಿ
ಇನ್ನೂ ಸತ್ತಿಲ್ಲ ಕಂದಾ
ನಿನಗೆ ಕಂಡಿಲ್ಲ ಅಷ್ಟೆ
***



೨ 
ಮತ್ತೆ ಭ್ರೂಣವಾಗಬೇಕು



ಈ ಲೋಕ ನಮದಲ್ಲ
ನಾವು ಈ ಊರವರಲ್ಲ
ಅಂಟಿದ ನಂಟರಾರೂ ಇಲ್ಲ
ಅಂಟಿಯೂ ಒಂಟಿ ನಾವು
ಯಾರಿಗೋ ಹಬ್ಬಿಕೊಂಡಿದ್ದೇವೆ
ಯಾರನ್ನೋ ತಬ್ಬಿಕೊಂಡಿದ್ದೇವೆ
ತಬ್ಬಿಬ್ಬುಗೊಂಡಿದ್ದೇವೆ

ಪುರುಷಾಕಾಶದಲ್ಲಿ
ಪಟವಾಗಿದ್ದೇವೆ
ಸೂತ್ರ ಹರಿದ ಗಾಳಿ
ಪಟವಾಗಿದ್ದೇವೆ
ಪುಟವಾಗಬೇಕು ನಾವು
ದಿಟವಾಗಬೇಕು ನಿಲುವು
ದಿಟ್ಟವಾಗಬೇಕು

ಪುರುಷಾವನಿಯಲ್ಲಿ
ಗೊಂಬೆಯಾಗಿದ್ದೇವೆ
ಸೂತ್ರದ ಗೊಂಬೆಯಾಗಿದ್ದೇವೆ
ರಂಭೆಯಾಗಿದ್ದೇವೆ
ಹೆತ್ತು ತಾಯಾಗಿದ್ದೇವೆ
ಸಾಕಿ ತೊತ್ತಾಗಿದ್ದೇವೆ
ತುಳಿತಕ್ಕೆ ತುತ್ತಾಗಿದ್ದೇವೆ
ಎತ್ತಬೇಕು ದನಿಯೆತ್ತಬೇಕು
ತಲೆಯೆತ್ತಬೇಕು ಮಾನ
ಸ್ವಾಭಿಮಾನವ ಬಿತ್ತಬೇಕು ಸ್ವಾಭಿ-
ಮಾನ ಬಿತ್ತಬೇಕು.

ಪುರುಷಾಬ್ಧಿಯಲ್ಲಿ
ಮೀನಾಗಿದ್ದೇವೆ
ಅವನ ತುಟಿಗೆ
ಜೇನಾಗಿದ್ದೇವೆ
ರಸವಾಗಿದ್ದೇವೆ ನವ
ರಸವಾಗಿದ್ದೇವೆ
ಕೀಚಕರ ಅಮಲಿಗೆ ಬಲಿಯಾಗಿದ್ದೇವೆ
ಈಗ ಕಲಿಯಾಗಬೇಕು ಹೆಣ್ಣು
ಹುಲಿಯಾಗಬೇಕು
ದುಶ್ಶಾಸನರಿಗೆ ವೀರ
ಶಾಸನೆಯರಾಗಬೇಕು
ದೌರ್ಜನ್ಯಕ್ಕೆ ದಂಡನೆಯರಾಗಬೇಕು
ರುಂಡಮಾಲಿನಿಯರಾಗಬೇಕು

ಈ ಲೋಕ ದಾಟಿ
ಆಚೆ ದಡದಲ್ಲಿ ನಾವು
ಹೊಸಲೋಕ ಕಟ್ಟಬೇಕು
ಅಲ್ಲಿ ಬರಿ ಮನುಜರಿರಬೇಕು
ಹೆಣ್ಣುಗಂಡೆಂಬ
ಉಭಯವಳಿದು
ತಾಯ್ತಂದೆಯಾಗಬೇಕು
ಮಕ್ಕಳು ಬರಿ ಮಕ್ಕಳಾಗಿರಬೇಕು
ಮಗ ಮಗಳಲ್ಲ
ಮಗ್ಗಲು ಮುಳ್ಳುಗಳೂ ಅಲ್ಲ

ಅಲ್ಲಿ ನಾನುಗಳು ಸತ್ತು
ನಾವುಗಳು ಇರಬೇಕು
ನಲಿವಿನ ನಾವೆಗಳು ತೇಲಬೇಕು
ಬಾನಲ್ಲಿ ಬಾನಾಡಿಯಾಗಬೇಕು
ಭೂತಾಯ ಗರ್ಭದಲಿ ಮತ್ತೆ
ಭ್ರೂಣವಾಗಬೇಕು
ಹೆಣ್ಣುಭ್ರೂಣವಾಗಬೇಕು
ಅವತಾರವೆತ್ತಬೇಕು
ಹೊಸ ಅವತಾರವೆತ್ತಬೇಕು

***



ಸುಕನ್ಯಾ ಮಾರುತಿ (೧೯೫೬) ಬಳ್ಳಾರಿ ಜಿಲ್ಲೆ ಕೊಟ್ಟೂರಿನವರು. ಧಾರವಾಡದ ಕ.ವಿ.ವಿ.ಯಿಂದ ಎಂಎ ಪಡೆದಿರುವ ಅವರು ಇದುವರೆಗೆ ಐದು ಕವನ ಸಂಕಲನಗಳು, ‘ನಾನೆಂಬ ಮಾಯೆ’ ಸಮಗ್ರ ಕಾವ್ಯವನ್ನು ಪ್ರಕಟಿಸಿದ್ದಾರೆ. ಮೂರು ಪುಸ್ತಕಗಳನ್ನು ಸಹ ಸಂಪಾದನೆ ಮಾಡಿದ್ದಾರೆ. ಅಂಬೇಡ್ಕರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಸಮ್ಮಾನಗಳನ್ನು ಪಡೆದಿದ್ದಾರೆ. ದಲಿತ ಸಂಘಟನೆ, ಬಂಡಾಯ ಸಂಘಟನೆ, ಗೋಕಾಕ್ ಚಳುವಳಿ, ಮಹಿಳಾ ಪರ ಚಳುವಳಿಗಳಲ್ಲಿ ತೊಡಗಿಕೊಂಡಿದ್ದ ಸುಕನ್ಯಾ, ಕಳೆದ ೩೨ ವರ್ಷಗಳಿಂದ ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ಬೋಧಕರಾಗಿದ್ದಾರೆ. ಅವರ ಕವಿತೆಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ.

ವಿಳಾಸ: ಸಂಸ್ಕೃತಿ, ೧ನೇ ಕ್ರಾಸ್, ಶಾರದಾ ಕಾಲನಿ, ವಿದ್ಯಾಗಿರಿ, ಧಾರವಾಡ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...