Wednesday, November 18, 2015

ರೂಮಿಯ ಸಂಗದಲ್ಲಿ.. : ‘ಉರಿವ ಕುಡಿಯ ನಟ್ಟ ನಡುವೆ’ ಸಂಕಲನದ ಮೊದಲ ಮಾತು


ರೂಮಿಯ ಕವಿತೆಗಳ ಸಂಕಲನ ‘ಉರಿವ ಕುಡಿಯ ನಟ್ಟ ನಡುವೆ’ ನಮ್ಮ ಪ್ರಕಾಶನದಿಂದ ಡಿಸೆಂಬರ್ ತಿಂಗಳಲ್ಲಿ ಪ್ರಕಟವಾಗುತ್ತಿದೆ. ರೂಮಿ ಕವಿತೆಗಳನ್ನು ಅನುವಾದಿಸಿರುವ ಡಾ. ಎಚ್. ಎಸ್. ಅನುಪಮಾ ಬರೆದ ಮೊದಲ ಮಾತುಗಳು :ರೂಮಿಯೇ,

ನಿನ್ನ ಬೆಳಕಿನಂತಹ ಸಾಲುಗಳ ಕನ್ನಡ ನುಡಿಯಲ್ಲಿ ಹಿಡಿಯುವಾಗ ರೋಮಾಂಚನವೋ, ಕಸಿವಿಸಿಯೋ, ಸಂಭ್ರಮವೋ, ಇನ್ನೂ ಎಂಥದೋ ಒಂದನ್ನು ಅನುಭವಿಸಿದ್ದೇನೆ. ನಾನಾಡುವ ನುಡಿಯಲ್ಲಿ ನಿನ್ನ ಹಿಡಿಯ ಹೊರಟು ಸಾಲುಗಳ ಮುರಿದಿದ್ದೇನೆ, ಒಡೆದಿದ್ದೇನೆ, ಹಿಂದೆ ಮುಂದೆ ಮಾಡಿದ್ದೇನೆ. ಒಮ್ಮೊಮ್ಮೆ ಈ ಕಳಪೆ ಸಾಲು ರೂಮಿಯದೇ ಎಂದು ಗೊಣಗಿಕೊಂಡರೂ ನನಗದರ ಒಳಾರ್ಥ ತಿಳಿಯದೇ ಹೋಗಿರಬಹುದೆಂದು ಕಂಗಾಲಾಗಿದ್ದೇನೆ. ನಿನ್ನ ಜೀವಂತಿಕೆ ಅರಿವಾಗುವಷ್ಟು ಗಾಳಿಬೆಳಕು ಕನ್ನಡದ ಈ ಸಾಲುಗಳ ನಡುವೆ ಇದೆ ಎಂದು ಹೇಳಲು ಎದೆ ಅಳುಕುತ್ತಿದೆ. ಹನ್ನೆರೆಡನೇ ಶತಮಾನದ ನಿನ್ನ ಪರ್ಷಿಯನ್ ನುಡಿಯ ಸೊಗಡು ಇಂಗ್ಲಿಷ್ ತಲುಪಿ ಅಲ್ಲಿಂದ ಕನ್ನಡಕ್ಕೆ ಬರುವಾಗ ಏನೇನಾಗಿದೆಯೋ? ಆದರೂ ಮುಂಬರಲಿರುವ ಪೀಳಿಗೆಗಳು ನಿನ್ನ ಕುರಿತಾಗಿ ಕುತೂಹಲ ತಳೆಯಲು, ಮತ್ತೊಂದು ಉತ್ತಮ ಅನುವಾದ ಬರಲು ಇದು ಮೆಟ್ಟಿಲಾದೀತೇನೋ ಎಂದು ಕನ್ನಡಾನುವಾದ ಸಂಗ್ರಹಗಳ್ಳುತ್ತಿದೆ.

ರೂಮಿ, ನನ್ನ ಜೀವ ಹೇಳುತ್ತದೆ:

‘ರೂಮಿ ಎಂದರೆ ಶಬ್ದವಲ್ಲ, ಮೌನ. ರೂಮಿಯೆಂದರೆ ಕವಿತೆಯಲ್ಲ, ಬದುಕು. ಅವನನ್ನು ಶಬ್ದಗಳ ಮೂಲಕ, ಕವಿತೆಯ ಮೂಲಕ ಅರ್ಥ ಮಾಡಿಕೊಳ್ಳಹೊರಟರೆ ಸೋಲು ಖಚಿತ. ಉತ್ಕಟ ಪ್ರೇಮವನ್ನು ಅನುಭವಿಸಿದ ರೂಮಿ ಕಳಚಿಕೊಂಡಿದ್ದು, ಪಡೆದಿದ್ದು, ಬದಲಾಗಿದ್ದು ಎಲ್ಲವೂ ಪ್ರೇಮವೇ. ದೇಶಕಾಲಗಳು ನಿರ್ಮಿಸಿದ ಹೊರಗಿನ ರೂಪ ಆಕೃತಿಗಳಲ್ಲಿ, ಹುಟ್ಟು, ಬದುಕು, ಪ್ರೇಮ, ಸಾಧನೆ, ಸಾವುಗಳೆಂಬ ಸಿದ್ಧ ಚೌಕಟ್ಟುಗಳಲ್ಲಿ ರೂಮಿಯನ್ನು ಅಳೆಯಹೋದರೆ ನಾವು ದಯನೀಯವಾಗಿ ಸೋಲುತ್ತೇವೆ. ರೂಮಿಯನ್ನು ಅರ್ಥ ಮಾಡಿಕೊಳ್ಳುವುದೆಂದರೆ ಪ್ರೇಮವನ್ನು ಬದುಕುವುದು. ಹಗಲು ರಾತ್ರಿ ಋತುಮಾನಗಳ ಹಂಗಿಲ್ಲದೆ ಪ್ರೇಮವೇ ಆಗಿ ಬದುಕುವುದು. ಅಂಥ ಬದುಕು ಸಾಧ್ಯವಾಗದಿದ್ದರೆ ರೂಮಿ ದಕ್ಕುವುದು ಕನ್ನಡಿ ಚೂರಿನಲ್ಲಿ ಕಾಣುವ ಪ್ರತಿಬಿಂಬದಷ್ಟು..’

ಹೌದಲ್ಲವೆ ರೂಮಿ? ಆತುಕೊಳ್ಳಬಲ್ಲ ಹೆಗಲ ಹುಡುಕುವ ಮನಸುಗಳ ಅಸಹಾಯಕತೆಯನ್ನು ಇಲ್ಲವಾಗಿಸಿ, ನಿರಾಕಾರ ಭಾವಸಾಮ್ರಾಜ್ಯಕ್ಕೆ ಕರೆದೊಯ್ಯುವ ನಿನ್ನನ್ನು ಪದಭಾವಭಂಗಿಗಳಲಿ ಹಿಡಿಯಲಾಗದು. ವರ್ಣಿಸಹೊರಟ ಶಬ್ದ ಲಜ್ಜೆಗೊಳ್ಳುತ್ತದೆ. ಆದರೂ ಲೋಕದ ದೃಷ್ಟಿಯಿಂದ ನಿನ್ನನ್ನೂ, ನಿನ್ನ ದೃಷ್ಟಿಯಿಂದ ಲೋಕವನ್ನೂ ವಿವರಿಸಿಕೊಳ್ಳುವುದು ನಮ್ಮ ಅನಿವಾರ್ಯತೆಯಾಗಿದೆ. ಅದರ ಪ್ರಯತ್ನವಾಗಿ ಈ ಅನುವಾದಿತ ಸಾಲುಗಳು ಮೂಡಿವೆ.

ಮನ್ನಿಸು..
***

ಎಲ್ಲರೊಳಗೊಂದು ರೂಮಿತನವಿರುತ್ತದೆ. ಒಂದು ಅಬ್ಜ ಗಳಿಗೆಯಲ್ಲಿ ಇದ್ದಕ್ಕಿದ್ದಂತೆ ಎದೆಯನ್ನು ಪ್ರವೇಶಿಸಿ, ಆತ್ಯಂತಿಕವಾಗಿ ತಿಳುವಳಿಕೆಯನ್ನು ಬದಲಿಸಿ ಹೊಸ ಅರಿವು ನೀಡಬಲ್ಲ; ಆ ಅರಿವಿನ ಬೆಳಕಿನಲ್ಲಿ ಲೋಕ ವ್ಯಾಪಾರಗಳನ್ನು ಬೇರೆಯೇ ರೀತಿ ಅರ್ಥೈಸಲು ಸಾಧ್ಯ ಮಾಡುವ; ಅಪಾರ ತಾಳ್ಮೆ, ಸಹಿಷ್ಣುತೆ, ಅಂತಃಕರಣ, ಅರ್ಪಣೆಗಳನ್ನು ಎದೆಯಲ್ಲಿ ತುಂಬುವ ಅರಿವು ರೂಮಿತನ. ಕೊನೆಮೊದಲಿಲ್ಲದ ಆತ್ಮಶೋಧ ಮತ್ತು ಆತ್ಮಸಮರ್ಪಣೆಯ ಪ್ರೇಮ ರೂಮಿತನ. ಅದು ಸರಹದ್ದುಗಳ ಮೀರುವ ಮಾನವಪ್ರೇಮ. ಅರಿವಿನ ಹೊಸ ದಾರಿ ತೋರಿಸಲು ನೆಪವಾಗಿ ಒದಗುವ ಶಂಸ್‌ನನ್ನು ಗುರುತಿಸಿ, ಒಳಗು ಮಾಡಿಕೊಳ್ಳಲು; ಪ್ರಾಪಂಚಿಕ ಬದುಕಿನ ಗದ್ದಲ-ಯಶಸ್ಸಿನ ನಡುವೆ ಅಂತರಂಗದ ಒಳಗಿಳಿಯಲು; ಯಂತ್ರಗಳ ನಡುವೆಯೂ ತ್ರಾಣ ಕಳೆದುಹೋಗದಿರಲು ಇದೇ ರೂಮಿತನ ಬೇಕು. ಅದ ತೋರಿಸಲು ಶಂಸ ತರಹದ ಸಖ ಬೇಕು.

ಎಲ್ಲರಿಗೂ ಅಂಥ ಒಂದು ಕಾಲ ಬರುತ್ತದೆ: ಕೇಳಿದ ಒಂದು ಹಾಡು, ಓದಿದ ಒಂದು ಕವಿತೆ, ಪ್ರೀತಿ ತುಂಬಿದ ಒಂದು ಬೆಚ್ಚನೆಯ ನುಡಿ ಎದೆಯೊಳಗೆ ಬೆಳೆದ ಹಿಮಾಲಯವ ಕರಗಿಸಿ ಎಲ್ಲ ಹಗುರವಾಗಿಸುವ ಗಳಿಗೆ; ಈ ಇರುಳು ಕಳೆಯುವುದೇ ಇಲ್ಲವೇನೋ ಎಂದು ಆತಂಕದಲ್ಲಿರುವಾಗ ಬೆಳಕಿನ ಕಿರಣ ತಟ್ಟನೆ ಉದಯಿಸುವ ಗಳಿಗೆ; ತಾನು ಉರಿಯುವುದು ಬೆಂಕಿಗಾಗಿಯೋ ಬೆಳಕಿಗಾಗಿಯೋ ಎಂದು ಗೊಂದಲವಾಗುವ ಗಳಿಗೆ; ಬೆಂಕಿಯಿಲ್ಲದೆ ಬೆಳಕಿಲ್ಲ, ಉರಿಯಿಲ್ಲದೆ ಅರಿವಿಲ್ಲ ಎಂಬ ಪರಮಸತ್ಯ ಅರ್ಥವಾಗುವ ಗಳಿಗೆ - ಅಂಥ ಗಳಿಗೆಯಲ್ಲಿ ನನಗೆ ರೂಮಿ ಸಿಕ್ಕ. ಅವ ನೀನೂರುವ ಹೆಜ್ಜೆಯೇ ಹಾದಿ ಎಂದ. ಉರಿವ ದೀಪದ ಕುಡಿಯ ನಟ್ಟನಡುವನ್ನು ತೋರಿಸಿದ.

ಈ ಅರಿವಿಗೆ, ಅನುವಾದಕ್ಕೆ ಕಾರಣನಾದ; ಪ್ರೇಮದ ಶಾಶ್ವತತೆಯನ್ನೂ-ನಶ್ವರತೆಯನ್ನೂ; ನಿರಂತರತೆಯನ್ನೂ-ಶೂನ್ಯವನ್ನೂ ತಿಳಿಸಿದ ಗುರುವೇ, ಈ ಕಿರುಪ್ರಯತ್ನದ ಬೆವರ ಹನಿಗಳ ಮೇಲೆ ನಿನ್ನ ಹೆಸರು ಬರೆಯಲಾಗಿದೆ..

ಸಲಾಂ..

ಅನುವಾದಕ್ಕೆ ಹಲವು ಆಕರ ಬಳಸಿಕೊಂಡಿರುವೆ. ಮುಖ್ಯವಾಗಿ ಎ. ಜೆ. ಬೆರ್ರಿ ಅವರ ಮಿಸ್ಟಿಕಲ್ ಪೊಯೆಮ್ಸ್ ಆಫ್ ರೂಮಿ, ಫ್ರಾಂಕ್ಲಿನ್ ಡಿ ಲೆವಿಸ್ ಅವರ ಸ್ವಾಲೋಯಿಂಗ್ ದಿ ಸನ್, ಹಾಗೂ ಅಂತರ್ಜಾಲದ ಅಸಂಖ್ಯ ಕಾವ್ಯತಾಣಗಳು. ಅಂತರ್ಜಾಲದಲ್ಲಿ ಅಚ್ಚರಿಯಾಗುವಷ್ಟು ಹೇರಳವಾಗಿ ರೂಮಿ ಕವಿತೆಗಳು ತುಂಬಿವೆ. ಎಲ್ಲ ಭಾಷೆಗಳಲ್ಲಿ ರೂಮಿ ಕಾಣಸಿಗುತ್ತಾನೆ. ಆದರೆ ಒಂದೇ ಕವಿತೆಯ ಒಂದಕ್ಕಿಂತ ಹೆಚ್ಚು ಭಾಷಾಂತರ ಓದಿದ ಮೇಲೆ ಗೊಂದಲ ಹೆಚ್ಚಾದದ್ದೂ ಇದೆ. ಅವನ ದೀರ್ಘ ಪದ್ಯದ ಎರಡು, ನಾಲ್ಕು ಸಾಲುಗಳೇ ದ್ವಿಪದಿ, ಚತುಷ್ಪದಿಗಳಾಗಿ ಜನಪ್ರಿಯಗೊಂಡಿರುವುದೂ ಇದೆ. ಏನೇ ಆಗಲಿ, ಯಾವ ತಾಣವೇ ಆಗಲಿ, ರೂಮಿಯ ಇಷ್ಟೊಂದು ಕವಿತೆಗಳು ಇಂಗ್ಲಿಷ್‌ನಲ್ಲಿ ಉಚಿತವಾಗಿ ಒದಗುವಂತೆ ಮಾಡಿರುವ ಅಂತರ್ಜಾಲವೆಂಬ ವಿಶ್ವಾತ್ಮಕ ಲೋಕಕ್ಕೆ ಮೊದಲ ಸಲಾಮು..

ರೂಮಿ ಸುಲಭಕ್ಕೆ, ಆತುರಕ್ಕೆ ಅರ್ಥವಾಗುವವನಲ್ಲ; ಸುಮಾರು ನಾಲ್ಕೈದು ವರ್ಷಗಳಿಂದ ರೂಮಿ ಕವಿತೆಗಳು ಅನುವಾದಗೊಳ್ಳುತ್ತ, ತಿದ್ದುಪಡಿಗೆ ಒಳಗಾಗುತ್ತ ಇವೆ. ಕೆಲವನ್ನು ಸೇರಿಸಿದೆ, ಹಲವನ್ನು ಕೈಬಿಟ್ಟೆ. ಅನುವಾದಗೊಳ್ಳುತ್ತ ಹೋದಂತೆ ಹಲವರ ಅಭಿಪ್ರಾಯ ಪಡೆದೆ. ಅವರಲ್ಲಿ ನಾಕೈದು ವರ್ಷ ಕೆಳಗೆ ಕವಲಕ್ಕಿಗೆ ಬಂದಿದ್ದ ಓಎಲ್‌ಎನ್ ‘ರೂಮಿಯನ್ನು ಓದುತ್ತಿರುವೆ’ ಎಂದದ್ದೇ ತುಂಬ ಮುತುವರ್ಜಿಯಿಂದ ರೂಮಿಯ ಬೆರ್ರಿ ಮತ್ತು ಲೆವಿಸ್ ಇಂಗ್ಲಿಷ್ ಅನುವಾದ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿ ಕೊಟ್ಟರು. ರೂಮಿಯ ಕೆಲ ಇ-ಪುಸ್ತಕಗಳ ಲಿಂಕ್ ಕಳಿಸಿದರು. ಅಷ್ಟೇ ಅಲ್ಲ, ಅನುವಾದ ಕುರಿತು ಸೂಕ್ತ ಸಲಹೆ ನೀಡಿದರು. ‘ವಚನಕಾರರ ಭಾಷೆಯ ಹಾಗೆ ರೂಮಿಯ ಹಿಡಿದಿಡಲು ಬೇರೆಯೇ ಆದ ನುಡಿಗಟ್ಟು ಒಗ್ಗಿಸಿಕೊಳ್ಳಬೇಕು, ಅದು ಬಹು ಕಷ್ಟದ ದಾರಿ’ ಎಂದ ಅವರ ಮಾತು ಎಷ್ಟು ನಿಜವೆಂದು ಅನುವಾದಿಸುತ್ತ ಹೋದಹಾಗೆ ತಿಳಿಯಿತು. ಒಟ್ಟಾರೆ ನನ್ನಲ್ಲಿ ಅಳುಕು, ಧೈರ್ಯ ಎರಡನ್ನೂ ಹೆಚ್ಚಿಸುವ ಮೂಲಕ ಪ್ರೋತ್ಸಾಹಿಸಿರುವ ಓಎಲ್ಲೆನ್ ಅವರ ಪಾಂಡಿತ್ಯಪೂರ್ಣ ಅರಿವಿಗೆ..

ಎಂದಿನಂತೆ ಷರತ್ತು, ಕಾಲಮಿತಿ ನೀಡಿ ಅನುವಾದ ಕವಿತೆಗಳ ಪುಸ್ತಕವಾಗಿಸಿರುವ ಬಸೂಗೆ;

ಅನುಭಾವ-ಉತ್ಕಟತೆ-ತೀವ್ರತೆ ಇಂಥ ಪದ, ಭಾವಗಳನ್ನೆಲ್ಲ ಅಷ್ಟೇನೂ ನಂಬದ ಕೃಷ್ಣನೊಳಗೂ ಕೊಂಚ ರೂಮಿತನ ಸುಳಿಯತೊಡಗಿದೆ. ಸಾಕ್ಷಿ ಇಲ್ಲಿರುವ ಕೆಲ ಚಿತ್ರಗಳು. ಆ ಗೆರೆಗಳ ಸೃಜಿಸಿದ ಪವಿತ್ರ ಭಾವಕ್ಕೆ;

ಪುಟ್ಟಿಪವಿಕನಸುಗೆ; ಅಮ್ಮಅಣ್ಣನಿಗೆ;

ಅನುವಾದಗೊಳ್ಳುವಾಗ ನಡುನಡುವೆ ಓದಿ ಸಲಹೆ-ಪ್ರೋತ್ಸಾಹ ನೀಡಿದ ಜಿಪಿ ಬಸವರಾಜು, ಬಿದರಳ್ಳಿ ನರಸಿಂಹಮೂರ್ತಿ, ರಹಮತ್ ಸರ್, ಫಣಿರಾಜ್, ಲಲಿತಾ ಸಿದ್ಧಬಸವಯ್ಯ, ಕುಂಸಿ ಉಮೇಶ್ ಮತ್ತಿತರ ಆಪ್ತ ಜೀವಗಳಿಗೆ;

ನನ್ನ ಅಸಂಖ್ಯ ಗೆಳೆಯ-ಗೆಳತಿಯರ ಪ್ರೇಮಕ್ಕೆ..

‘ಉರಿವ ಕುಡಿಯ ನಟ್ಟ ನಡುವೆ’ಯ ಉರಿ ಬೆಳಕಾಗಿದೆ.

-    ಅನುಪಮಾ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...