Wednesday, November 11, 2015

ಸೀಮಾ ಸಮತಲ ಎರಡು ಕವಿತೆಗಳು




೧ 

ನನ್ನ ಚಿತ್ರಕಾರ




   ನೆನಪಿದೆಯಾ ಆ ಚಿತ್ರಗಳು?
   ನಿನ್ನ ಆ ಮೃದು ಬೆರಳುಗಳಿಂದ
   ಮೂಡಿಸಿದ್ದೆ, ನನ್ನ ಅಂಗೈಮೇಲೆ.
   ಕಾಣಿಸದಿದ್ದರೂ ಎದ್ದು ಕಾಣುವಂತೆ.
   ಅದರಂಚಿನಲ್ಲೊಂದು
   ಮುತ್ತೊಂದು, ಹಸ್ತಾಕ್ಷರವೆಂಬಂತೆ.

   ಅದೇಕೋ ಆ ಚಿತ್ರಗಳು
   ನಿಂತುಹೋದವು!
   ಸ್ಪರ್ಶವಿಲ್ಲದೆ ಅಂಗೈ ಬರಡಾಗಿದೆ.
   ಚಿತ್ರಗಳಿಲ್ಲದೆ ಖಾಲಿ ಹಾಳೆಯಾಗಿವೆ.
   ರಚ್ಚೆ ಹಿಡಿದು ಕುಳಿತಿವೆ
   ಈ ನನ್ನ ಹಠಮಾರಿ ಅಂಗೈ.
   ಬಡಿದೆಬ್ಬಿಸಿ ಕೇಳುತ್ತಲೇ ಇವೆ ನನ್ನ
   ಎತ್ತ ಹೋದ ನನ್ನ ಚಿತ್ರಕಾರ?
   ಕ್ಷಣಕ್ಷಣಕ್ಕೂ ಮೂದಲಿಸುತ್ತಿವೆ ನನ್ನ
   ತಡೆಯಲಿಲ್ಲ ಹೋಗುವವನನ್ನು!

   ನಾವಿಬ್ಬರೂ ಕಾದುಕುಳಿತಿದ್ದೇವೆ
   ನೀ ಪುನಃ ಬರುವ ಹಾದಿಯನ್ನು ಕಾಯುತ್ತಾ
   ಬಂದು ಬಿಡು ಗೆಳೆಯ!
   ಉಜ್ಜಿದರೂ ಹೋಗದಂತೆ
   ಕಾಣಿಸುವಂತಹ ಗೆರೆಗಳನ್ನು ಮೂಡಿಸಲು
   ಒಮ್ಮೆಯಾದರೂ ತಿರುಗಿ ಬಾ... 
  ***


                              
೨ 

ಭೂತಕಾಲ


  ಬೇಡವೆಂದರೂ ಬಿಡದೆ
  ಬೆನ್ನಟ್ಟಿ ಕಾಡುವ ವಿಚಿತ್ರ ಭೂತವದು.
  ಹಗಲು ರಾತ್ರಿಯನ್ನದೆ,
  ಸರಿ ತಪ್ಪೆನ್ನದೆ,
  ಕ್ಷಣಕ್ಷಣಕ್ಕೂ ಮರೆಯದಂತೆ
  ಧುತ್ ಎಂಬಂತೆ ಪ್ರಕಟಗೊಳ್ಳುವ
  ಮಾಯಾವಿ ಭೂತವದು.

  ನೆರಳಂತೆ ಅಂಟಿಕೊಂಡಂತೆ
  ಉಸಿರಿನಲ್ಲಿ ಬೆಸೆದಂತೆ
  ನನ್ನ ಪ್ರತಿಬಿಂಬವಂತೆ
  ಪ್ರತ್ಯಕ್ಷಗೊಳ್ಳುವ ಭೂತವದು.
  
  ಕಣ್ಣೀರ ಧಾರೆ ಇಳಿಸಿದೆ.
  ಕೈ ಮುಗಿದೆ.
  ದಮ್ಮಯ್ಯ! ಬಿಟ್ಟುಬಿಡೆಂದು ಗೋಗರೆದೆ.
  ಅದು ಗಹಿಗಹಿಸಿ ನಕ್ಕಿತು.
  ’ನಿನ್ನ ಕರ್ಮದ ಫಲ ನಾನು
  ಬಿಡಲಾರೆ ನಿನ್ನ
  ಕೊನೆ ಉಸಿರಿನತನಕ’ ಎನ್ನುತ್ತಾ ಮರೆಯಾಯಿತು
  ನೆನಪುಗಳ ಕಾರ್ಮೋಡಗಳಲ್ಲಿ.

  ನನಗೋ ಹೆದರಿಕೆ, ತುಂಬಾ ಹೆದರಿಕೆ.

  ಆದರೆ ಅದು,
  ಪಣ ತೊಟ್ಟಂತೆ
  ಮುಖ ಸಿಂಡರಿಸಿಕೊಂಡಂತೆ
  ಆಗಾಗ ನನ್ನ ಎಚ್ಚರಿಸಿದಂತೆ,
  ಅಗೋ ಈಗಲೂ
  ಕಾಡುತ್ತಿದೆ ನನಗೆ,
  ನನ್ನ ಭೂತಕಾಲ.
***


ಸೀಮಾ ಸಮತಲ (೧೯೯೨) ಹೊಸಪೇಟೆಯವರು. ಓದು, ಬರಹ, ತಿರುಗಾಟ ಹವ್ಯಾಸ. ಇಂಗ್ಲಿಷ್ ಎಂಎ ಮಾಡಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ’ಚೆಂದಳಿರ್’ ಅಂಕಣ ಬರೆದಿದ್ದಾರೆ. ಅಂತರ್ ಕಾಲೇಜು ಕವನ ಸ್ಪರ್ಧೆಗಳಲ್ಲಿ ಹಲವು ಬಾರಿ ಬಹುಮಾನ ಪಡೆದಿದ್ದಾರೆ. ಪ್ರಸ್ತುತ ಹೊಸಪೇಟೆಯ ಪದವಿ ಪೂರ್ವ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕಿ.

ವಿಳಾಸ: # ೧೪೨೫, ’ಸೂಫಿ’, ಎಂ.ಪಿ ಪ್ರಕಾಶ್ ನಗರ, ಹೊಸಪೇಟೆ- ೫೮೩೨೦೧.
seemasamatala@gmail.com

1 comment:

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...