Thursday, November 12, 2015

ಟಿಪ್ಪು ಸುಲ್ತಾನ್: ಅಖಂಡ ಭಾರತದ ಕನಸುಗಾರ






ಡಾ. ಎನ್. ಜಗದೀಶ್, ಕೊಪ್ಪ





ದಕ್ಷಿಣ ಭಾರತದ ರಾಜಕೀಯ ಏಳು ಬೀಳುಗಳ ಇತಿಹಾಸದಲ್ಲಿ ಮೈಸೂರು ಸಂಸ್ಥಾನ ಅಥವಾ ಶ್ರೀರಂಗಪಟ್ಟಣದ ಹೈದರಲಿ ಹಾಗೂ ಆತನ ಪುತ್ರ ಟಿಪ್ಪುಸುಲ್ತಾನ್ ಈ ಎರಡು ಹೆಸರುಗಳು ಅಜರಾಮರವಾಗಿ ಉಳಿದು ಹೋಗಿವೆ. ಹೈದರಲಿಯು ಯಾವುದೇ ರಾಜ ವಂಶಸ್ಥ ಕುಟುಂಬದಿಂದ ಬಂದವನಲ್ಲ. ಈಗಿನ ಬೆಂಗಳೂರು ಬಳಿಯ ದೇವನ ಹಳ್ಳಿಯ ಬೂದಿಕೋಟೆಯಲ್ಲಿ 1721ರಲ್ಲಿ ಸಾಮಾನ್ಯ ಮುಸ್ಲಿಮ್ ಕುಟುಂಬದಲ್ಲಿ ಜನಿಸಿದವನು. ಮನೆಯಲ್ಲಿನ ಬಡತನವನ್ನು ತಾಳಲಾರದೆ, ಆತನ ತಾಯಿಯು ತನ್ನ ಸೋದರಳಿಯನಾದ ಹೈದರ್ ಸಾಬ್ ಮೂಲಕ ಮೈಸೂರು ಸೇನೆಗೆ ತನ್ನ ಇಬ್ಬರು ಮಕ್ಕಳಾದ ಷಹಬಾಚ್ ಮತ್ತು ಹೈದರಲಿಯನ್ನು ಸೇನೆಗೆ ಸೇರಿಸಿದಳು. ಆರಂಭದ ದಿನಗಳಲ್ಲಿ ಮೈಸೂರು ಸೇನೆಯಲ್ಲಿ ಆನೆಯ ಮಾವುತನಾಗಿ ಯುದ್ಧರಂಗದ ಮುಂಚೂಣಿಯಲ್ಲಿದ್ದು ಕೊಂಡು ಯುದ್ಧ ರಂಗದ ಕಲೆಗಳನ್ನು ಕರಗತ ಮಾಡಿಕೊಂಡ ಹೈದರಲಿ, 1749ರಲ್ಲಿ ಮೈಸೂರು ಸೇನೆಯು ದೇವನಹಳ್ಳಿಗೆ ಮುತ್ತಿಗೆ ಹಾಕಿದಾಗ ತನ್ನ ಪರಾಕ್ರಮವನ್ನು ಅನಾವರಣ ಗೊಳಿಸುವುದರ ಮೂಲಕ ದೇವನಹಳ್ಳಿಯನ್ನು ಮೈಸೂರು ದೊರೆಗೆ ಗೆದ್ದು ಕೊಟ್ಟನು. 1751ರಲ್ಲಿ ಮೈಸೂರು ದೊರೆ ನಂಜರಾಜನು ತಿರುಚಿನಾಪಳ್ಳಿಗೆ ಮುತ್ತಿಗೆ ಹಾಕಿದಾಗ ಅಲ್ಲಿ ಬ್ರಿಟಿಷರ ಸೈನ್ಯದ ವಿರುದ್ಧ ಮೈಸೂರು ಸೇನೆಗೆ ಸೋಲುಂಟಾಯಿತು. ಆದರೆ, ಈ ಯುದ್ಧದಲ್ಲಿ ಹೈದರಲಿಗೆ ಯುರೋಪಿಯನ್ನರ ಯುದ್ಧ ತಂತ್ರ, ಕೌಶಲ್ಯ ಹಾಗೂ ಬಂದೂಕು, ಫಿರಂಗಿಗಳ ಬಳಕೆಯ ಪರಿಚಯವಾಯಿತು. 

ಬಡತನದ ಕಾರಣ ಅನಕ್ಷರಸ್ಥನಾಗಿದ್ದ ಹೈದರಲಿಯು ವಿಷಯಗಳನ್ನು ಗ್ರಹಿಸುವುದರಲ್ಲಿ ಸೂಕ್ಷ್ಮ ಹಾಗೂ ಚತುರಮತಿಯಾಗಿದ್ದನು. ಈ ಸೋಲಿನಿಂದಾಗಿ ಮೈಸೂರು ಸಂಸ್ಥಾನದಲ್ಲಿ ಅರಾಜಕತೆ ಉಂಟಾದ ಕಾರಣ, ವಂಶಪಾರಂಪರ್ಯವಾಗಿ ದಳವಾಯಿ ಹಾಗೂ ಮಂತ್ರಿ ಸ್ಥಾನ ಪಡೆಯುತ್ತಿದ್ದ ಕೆಲವು ವ್ಯಕ್ತಿಗಳ ಕೈಯಲ್ಲಿ ಅಧಿಕಾರದ ಕೇಂದ್ರೀಕೃತವಾಯಿತು, ಇದರಿಂದ ಬೇಸತ್ತ ಹೈದರಲಿಯು 1761ರಲ್ಲಿ ಕ್ಷಿಪ್ರ ಕ್ರಾಂತಿಯ ಮೂಲಕ ಮೈಸೂರು ಅರಮನೆಯ ಆಡಳಿತ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡನು. ಆ ವೇಳೆಗೆ ಸೇನೆಯ ದಂಡನಾಯಕನ ಸ್ಥಾನದಲ್ಲಿದ್ದ ಹೈದರಲಿ ತಾನು ಮೈಸೂರು ಸಂಸ್ಥಾನದ ದೊರೆ ಅಥವಾ ಒಡೆಯ ಎಂದು ಘೋಷಿಸಿಕೊಳ್ಳದೆ, ಯಾವುದೇ ರೀತಿಯ ರಾಜ ಪೋಷಾಕು ಧರಿಸದೆ, ಮೈಸೂರು ದೊರೆಯನ್ನು ಸಿಂಹಾಸನದ ಮೇಲೆ ಕೂರಿಸಿ, ತಾನು ರಾಜ ಕಾರ್ಯಕರ್ತ ಅಂದರೆ, ರಾಜನ ಪ್ರಧಾನ ಮಂತ್ರಿ ಮತ್ತು ಸೇನಾಧಿಪತಿ ಎಂದು ಬಹಿರಂಗವಾಗಿ ಘೋಷಿಸಿಕೊಂಡನು. ಪ್ರತಿ ವರ್ಷ ಪಾರಂಪರಿಕವಾಗಿ ನಡೆದುಕೊಂಡು ಬಂದಿದ್ದ ದಸರಾ ಹಬ್ಬದ ಆಚರಣೆಗೆ ಸಕಲ ಪ್ರೋತ್ಸಾಹವನ್ನು ನೀಡಿ, ತಾನೂ ಸಹ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದನು. (ಮುಂದಿನ ದಿನಗಳಲ್ಲಿ ಅಂದರೆ ಹೈದರಲಿಯ ನಿಧನಾನಂತರ ತನ್ನ ತಂದೆಯ ನಿಲುವಿಗೆ ಭಿನ್ನವಾಗಿ ಚಿಂತಿಸಿದ ಟಿಪ್ಪು ಸುಲ್ತಾನ್ ತಾನು ಮೈಸೂರಿನ ಬಾದಶಹನೆಂದು ಘೋಷಿಸಿಕೊಂಡನು). ಮೈಸೂರಿನ ರಾಜಕೀಯ ಇತಿಹಾಸದಲ್ಲಿ ಹೈದರಲಿಯ ಆಡಳಿತಕ್ಕೆ ಮಹತ್ವದ ಸ್ಥಾನವಿದೆ. ನೆರೆಯ ಮರಾಠರು ಹಾಗೂ ಅಕ್ಕ ಪಕ್ಕದ ಸಂಸ್ಥಾನಗಳ ದಾಳಿ, ಅನೀರಿಕ್ಷಿತವಾಗಿ ಎದುರಾಗುತ್ತಿದ್ದ ಬರ ಮತ್ತು ಅತಿ ವೃಷ್ಟಿಗಳ ನಡುವೆ ಮೈಸೂರು ಸಂಸ್ಥಾನವನ್ನು ಸುಸ್ಥಿಯಲ್ಲಿ ಇಟ್ಟಿದ್ದನು. ಹೈದರಲಿಯು ಮರಣ ಹೊಂದುವ ವೇಳೆಗೆ ಮೈಸೂರು ಸಂಸ್ಥಾನ ವಿಸ್ತಾರಗೊಂಡು ಸುರಕ್ಷಿತವಾಗಿತ್ತು. ಉತ್ತರ ಭಾಗದ ಕೃಷ್ಣಾ ಮತ್ತು ತುಂಗಾಭದ್ರ ವರೆಗೆ ದಕ್ಷಿಣದಲ್ಲಿ ಕೇರಳದ ಮಲಬಾರ್‌ವರೆಗೆ, ಪೂರ್ವದಲ್ಲಿ ತಮಿಳುನಾಡಿನ ವೆಲ್ಲೂರು, ಪಶ್ಚಿಮದಲ್ಲಿ ಕೊಡಗು, ಮಂಗಳೂರು, ಭಟ್ಕಳ, ಹೊನ್ನಾವರದವರೆಗೆ ಸಾಮ್ರಾಜ್ಯ ವಿಸ್ತರಣೆಗೊಂಡಿತ್ತು. ಮೈಸೂರು ದೊರೆಗಳ ಆಳ್ವಿಕೆಯಲ್ಲಿ ವಾರ್ಷಿಕವಾಗಿ ನಲವತ್ತು ಲಕ್ಷ ರೂಪಾಯಿ ಆದಾಯವಿದ್ದುದು ಹೈದರಾಲಿ ಆಳ್ವಿಕೆಯಲ್ಲಿ ಒಂದು ಕೋಟಿ ಹತ್ತು ಲಕ್ಷರೂಪಾಯಿವರೆಗೆ ಏರಿತ್ತು. ಚಿತ್ತೂರಿನ ನರಸಿಂಗರಾಯನ ಪೇಟೆ ಬಳಿ ನಡೆದ ಯುದ್ಧ್ದದಲ್ಲಿ ಹೈದರಲಿಯು 1782ರ ಡಿಸೆಂಬರ್‌ನಲ್ಲಿ ಮೃತನಾದನು. ಈ ಮೊದಲು ಕೋಲಾರದ ಫತೇ ಮುಹಮ್ಮದ್ ಗೋರಿಯ ಬಳಿ ಸಮಾಧಿ ಮಾಡಲಾಗಿದ್ದ ಅವನ ಕಳೇಬರವನ್ನು ಶ್ರೀರಂಗಪಟ್ಟಣಕ್ಕೆ ತಂದು ಟಿಪ್ಪುಸುಲ್ತಾನ್ ನಿರ್ಮಿಸಿದ ಬೃಹತ್ ಗೋರಿಯಲ್ಲಿ ಹೂಳಲಾಯಿತು.

ಟಿಪ್ಪುಸುಲ್ತಾನ್ ಆಡಳಿತ ಅವಧಿಯಲ್ಲಿನ ಬಹುತೇಕ ಗುಣಾತ್ಮಕ ಅಂಶಗಳಲ್ಲಿ ಆತನ ತಂದೆ ಹೈದರಲಿಯ ಪ್ರಭಾವವಿದೆ. ಹೈದರಲಿಯು ಉತ್ತಮ ಯೋಧ, ಆಕ್ರಮಣಶಾಲಿ ಮನೋಭಾವದ ವ್ಯಕ್ತಿತ್ವ, ಉತ್ತಮ ಆಡಳಿತಗಾರ, ಇವೆಲ್ಲವೂ ಟಿಪ್ಪುಸುಲ್ತಾನ್‌ಗೆ ತಂದೆಯಿಂದ ಬಳುವಳಿಯಾಗಿ ಬಂದಿದ್ದವು. ಈ ಕಾರಣಕ್ಕಾಗಿ ‘ಹೈದರ್ ನಾಮ’ ಕೃತಿ ರಚಿಸಿರುವ ನಲ್ಲಪ್ಪಎಂಬ ಅರಮನೆಯ ಇತಿಹಾಸಕಾರ ಹೈದರಲಿಯನ್ನು ‘ದೈವ ಬ್ರಹ್ಮ, ದ್ವೇಷ ರಹಿತ’ ಅಂದರೆ, ‘‘ಬ್ರಾಹ್ಮಣರ ಕುರಿತು ದ್ವೇಷವಿಲ್ಲದ ದೊರೆ’’ ಎಂದು ಬಣ್ಣಿಸಿದ್ದಾನೆ. ಟಿಪ್ಪುಸುಲ್ತಾನ್ ಅನುಕರಿಸಿದ ರಾಜನೀತಿಯಲ್ಲಿ ಹೈದರಲಿಯ ರಾಜನೀತಿಯ ಲಕ್ಷಣಗಳನ್ನು ನಾವು ಕಾಣಬಹುದಾಗಿದೆ. ಹೈದರಲಿಯು ತನ್ನ ಪುತ್ರ ಟಿಪ್ಪುಸುಲ್ತಾನ್‌ಗೆ ಬರೆದ ನೀತಿ ಪಾಠದ ಪತ್ರವೊಂದು ಉತ್ತಮ ರಾಜ್ಯಾಡಳಿತಕ್ಕೆ ನೀಡಿದ ಸಂವಿಧಾನದಂತಿದೆ.

 ‘‘ಮಗನೇ ನಾನು ನನ್ನ ಪೂರ್ವಿಕರಿಂದ ಪಡೆಯದ ಒಂದು ಸಾಮ್ರಾಜ್ಯವನ್ನು ನಿನಗೆ ಬಿಡುತ್ತಿದ್ದೇನೆ. ಹಿಂಸೆಯಿಂದ ಗಳಿಸಿದ ರಾಜದಂಡವು ಯಾವಾಗಲೂ ನಶ್ವರವಾದುದು. ನೀನು ನಿನ್ನ ರಾಜ್ಯದ ಆಂತರಿಕ ವ್ಯವಹಾರದಲ್ಲಿ ಎಳ್ಳಷ್ಟೂ ಹೆದರಬೇಕಾಗಿಲ್ಲ. ಆದರೆ, ನಿನ್ನ ದೃಷ್ಟಿಯನ್ನು ಬಹು ದೂರದವರೆಗೆ ಒಯ್ಯುವುದು ಅತ್ಯವಶ್ಯಕ. ಮೊಗಲ್ ಸಾಮ್ರಾಜ್ಯವು ಔರಂಗಝೇಬನ ಪತನದಿಂದಾಗಿ ಭಾರತವು ಏಷ್ಯಾದ ಸಾಮ್ರಾಜ್ಯಗಳಲ್ಲಿ ತನ್ನ ಸ್ಥಾನಮಾನಗಳನ್ನು ಕಳೆದುಕೊಂಡಿದೆ. ಈ ಸುಂದರನಾಡು ಅಂತಃಕಲಹದಿಂದ ಹರಿದು ಹಂಚಿ ಹೋಗಿದೆ. ಜನರು ನಾನಾ ಮತಗಳಿಗೆ ಹಂಚಿ ಹೋಗಿದ್ದಾರೆ. ಹಾಗಾಗಿ ದೇಶ ಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದುಗಳು ಶಾಸ್ತ್ರಾನುಭವದಿಂದ ಪಡೆದ ಶಾಂತಿಸೂತ್ರದಿಂದ ಮೃದುವಾಗಿ ತಮ್ಮ ನಾಡನ್ನು ರಕ್ಷಿಸಿಕೊಳ್ಳಲು ಅಸಮರ್ಥರಾಗಿದ್ದಾರೆ. ಆದ್ದರಿಂದ ಈ ನಾಡು ಪರಕೀಯರಿಗೆ ತುತ್ತಾಗಿದೆ. ಮಗನೇ ನಿನ್ನ ಪ್ರಯತ್ನಗಳನ್ನೆಲ್ಲಾ ಒಗ್ಗೂಡಿಸಿ ಈಗ ಭಾರತದಲ್ಲಿ ಸರ್ವ ಶಕ್ತರಾಗಿರುವ ಇಂಗ್ಲಿಷರನ್ನು ಯುದ್ಧದ ಮೂಲಕ ದುರ್ಬಲಗೊಳಿಸುವುದು ಅತ್ಯವಶ್ಯಕ. ಯುರೋಪಿಯನ್ನರಿಗೆ ನಿಖರವಾದ ಚಾತುರ್ಯವಿದೆ ಅವರ ಮೇಲೆ ಯಾವಾಗಲೂ ಅವರ ಅಸ್ತ್ರವನ್ನೇ ಉಪಯೋಗಿಸು. ಫ್ರೆಂಚರ ಸಹಾಯದಿಂದ ಮಾತ್ರ ನೀನು ಅವರನ್ನು ಮಣಿಸಬಲ್ಲೆ. ಪರಾಕ್ರಮವು ನಮ್ಮನ್ನು ಸಿಂಹಾಸನಕ್ಕೆ ಏರಿಸಬಲ್ಲದು. ಆದರೆ, ಚಕ್ರಾಧಿಪತ್ಯ ಕಾಯ್ದುಕೊಳ್ಳಲು ಅದು ಸಾಲದು. ಎಲ್ಲಕ್ಕಿಂತ ಮುಖ್ಯವಾಗಿ ಜನರ ಪುಕ್ಕಲುತನದಿಂದ ನಾವು ಸಿಂಹಾಸನವನ್ನು ಗೆಲ್ಲಬಹುದು, ಆದರೆ ಶೀಘ್ರವಾಗಿ ಅದನ್ನು ಜನರ ಪ್ರೀತಿಗೆ, ಗೌರವಕ್ಕೆ ನಾವು ಒಪ್ಪಿಸದೆ ಹೋದಲ್ಲಿ ಆ ರಾಜ್ಯವು ನಮ್ಮ ಕೈ ಬಿಟ್ಟು ಹೋಗಬಹುದು’’

ಟಿಪ್ಪುಸುಲ್ತಾನ್‌ಗೆ ತನ್ನ ತಂದೆ ಹೈದರಲಿ ಹಾಕಿಕೊಟ್ಟ ಆಡಳಿತದ ಮಾರ್ಗದರ್ಶಿ ಸೂತ್ರಗಳು ಮೈಸೂರು ಸಂಸ್ಥಾನವನ್ನು ಸದಾ ಸುಸ್ಥಿಯಲ್ಲಿಡಲು ಕಾರಣವಾದವು. ತನ್ನ ಆಡಳಿತಾವಧಿಯಲ್ಲಿ ಬ್ರಿಟಿಷರು ಮಾತ್ರವಲ್ಲದೆ, ಪುಣೆಯ ಮರಾಠರು, ಹೈದರಾಬಾದಿನ ನಿಜಾಮರು, ಕೇರಳದ ತಿರುವಾಂಕೂರಿನ ರಾಜ ಇವರ ಜೊತೆ ನಿರಂತರ ಕಾದಾಡುತ್ತಲೇ ಮೈಸೂರು ಸಂಸ್ಥಾನವನ್ನು ಭಾರತದ ಇತರೆ ಸಂಸ್ಥಾನಗಳಿಗಿಂತ ಎತ್ತರಕ್ಕೇರಿಸಿ ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ.

  1799ರ ಮೇ ತಿಂಗಳಿನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪುಮಡಿದ ನಂತರ ಆತನ ರಾಜ್ಯಾಡಳಿತ ಮತ್ತು ವ್ಯಕ್ತಿತ್ವ ಕುರಿತಂತೆ ಬ್ರಿಟಿಷ್ ವಸಾಹತು ಶಾಹಿ ಕಾಲದ ಬ್ರಿಟಿಷ್ ಇತಿಹಾಸಕಾರರಿಂದ ಚರಿತ್ರೆಯನ್ನು ಸೃಷ್ಟಿಸಲಾಗಿದ್ದು, ಬಹುತೇಕ ಕೃತಿಗಳಲ್ಲಿ ಟಿಪ್ಪುಸುಲ್ತಾನ್‌ನನ್ನು ಮತಾಂಧನೆಂದೂ, ಹಿಂದೂ ಧರ್ಮದ ದ್ವೇಷಿಯೆಂದು ಚಿತ್ರಿಸಲಾಗಿದೆ. ಇದು ಕೇವಲ ಒಂದು ಮಗ್ಗುಲಿನ ಚರಿತ್ರೆಯಾಗಿದೆ. ನಮ್ಮ ಮುಂದಿರುವ ಐತಿಹಾಸಿಕ ದಾಖಲೆಗಳು, ಅನೇಕ ಹಿಂದೂ ದೇವಾಲಯಗಳು, ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರಗಳು ಟಿಪ್ಪುಮತ್ತು ಹೈದರಲಿಯ ಧರ್ಮ ಸಹಿಷ್ಣುತೆಗೆ ಸಾಕ್ಷಿಗಳಾಗಿವೆ. ಕೊಡಗಿನ ಕೊಡವ ಜನಾಂಗದ ಮೇಲೆ, ಕೇರಳ ಮಲಬಾರಿನ ನಾಯರ್‌ಗಳ ಮೇಲೆ ಮತ್ತು ಮಂಗಳೂರಿನ ಕ್ಯೆಥೊಲಿಕ್ ಪಂಗಡದ ಕ್ರೈಸ್ತರ ಮೇಲೆ ಟಿಪ್ಪುಸುಲ್ತಾನ್ ನಿರ್ದಾಕ್ಷಿಣ್ಯವಾಗಿ ನಡೆದುಕೊಂಡಿರುವುದು ನಿಜವಾದರೂ, ಅದು ಯುದ್ಧ ನೀತಿಯ ಒಂದು ಅಂಗವಾಗಿದೆಯೆ ಹೊರತು, ಧರ್ಮದ ಹಿನ್ನೆಲೆಯಲ್ಲಿ ಅಲ್ಲ. ಕೇರಳದ ಕೊಚ್ಚಿನ್ ಬಂದರನ್ನು ತಿರುವಾಂಕೂರು ದೊರೆ ಬ್ರಿಟಿಷರಿಗೆ ನೀಡಿದ್ದು, ಬ್ರಿಟಿಷ್ ಸೇನೆಯು ಮೈಸೂರಿನ ಮೇಲೆ ಮುತ್ತಿಗೆ ಹಾಕಲು ಪಿರಿಯಾಪಟ್ಟಣ ಬಳಿ ಬೀಡು ಬಿಟ್ಟಿದ್ದ ಸಮಯದಲ್ಲಿ ಕೊಡವರು ಅವರಿಗೆ ದಿನಸಿ, ಇನ್ನಿತರೆ ಆವಶ್ಯಕ ವಸ್ತುಗಳನ್ನು ನೀಡುವುದರ ಮೂಲಕ ನೆರವಾದದ್ದು ಇವೆಲ್ಲವೂ ಟಿಪ್ಪುಸುಲ್ತಾನ್ ಸಿಟ್ಟಿಗೆ ಕಾರಣವಾದ ಸಂಗತಿಗಳಾಗಿವೆ. ಕ್ರೈಸ್ತರ ಮೇಲಿನ ಸಿಟ್ಟಿಗೆ ಅವರು ಪರಂಗಿಯರು ಹಾಗೂ ಇಂಗ್ಲೆಂಡ್ ಮೂಲದವರು ಎಂಬುದು ಮುಖ್ಯವಾಗಿತ್ತು.

ಟಿಪ್ಪುಸುಲ್ತಾನ್ ತನ್ನ ಹದಿನಾರು ವರ್ಷಗಳ ಆಳ್ವಿಕೆಯಲ್ಲಿ ಮಾಡಿರುವ ಸಾಧನೆಯ ಹೆಜ್ಜೆ ಗುರುತುಗಳು ಇನ್ನೂ ಹಸಿರಾಗಿ ಉಳಿದಿವೆ. ಅವುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಹದಿನೆಂಟನೆ ಶತಮಾನದ ಕಾಲಘಟ್ಟದ ಟಿಪ್ಪು ಸುಲ್ತಾನನಿಗೆ ಇಂತಹ ಒಳನೋಟಗಳು ಇದ್ದವೇ? ಎಂದು ಆಶ್ಚರ್ಯವಾಗುತ್ತದೆ.. ಬಹುಮುಖಿ ಸಂಸ್ಕೃತಿಯ ಆರಾಧಕ ಮತ್ತು ಪ್ರತಿನಿಧಿಯಾಗಿದ್ದ ಟಿಪ್ಪು ಸುಲ್ತಾನ್ ಜಾತಿ ಮತ್ತು ಧರ್ಮದಾಚೆಯ ನೆಲೆಯಲ್ಲಿ ನಿಂತು ನಾಡು ಮತ್ತು ನುಡಿಯನ್ನು ಪ್ರೀತಿಸಿದವನು. ಇದಕ್ಕೆ ಮುಖ್ಯ ಕಾರಣವೆಂದರೆ, ಹೈದರಲಿ ಮತ್ತು ಟಿಪ್ಪುಸುಲ್ತಾನ್ ಇವರ ವಂಶಸ್ಥರು ಸೂಫಿ ಸಂತ ಚಿಸ್ತಿ ಬಂಡೆ ನವಾಝ್ ಪರಂಪರೆಯಿಂದ ಬಂದವರಾಗಿದ್ದರು. ಟಿಪ್ಪುವಿನ ಈ ಕೆಳಗಿನ ಕ್ರಾಂತಿಕಾರಿ ಆಲೋಚನೆಗಳು ಮತ್ತು ಕಾರ್ಯಗಳು ನಮಗೆ ಇಂದಿಗೂ ಮಾದರಿಯಾಗಿವೆ.

ತನ್ನ ಸಂಸ್ಥಾನದಲ್ಲಿ ಕೃಷಿಗೆ ಆದ್ಯತೆ ನೀಡಿ ಶ್ರೀರಂಗಪಟ್ಟಣದ ಬಳಿ ಹರಿಯುವ ಕಾವೇರಿ ನದಿಗೆ ಮೊದಲ ಅಣೆಕಟ್ಟು ನಿರ್ಮಾಣ ಮಾಡಿದನು. ಇದೇ ಜಾಗದಲ್ಲಿ 1924ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್. ವಿಶ್ವೇಶ್ವರಯ್ಯನವರ ಮೂಲಕ ಕೃಷ್ಣರಾಜ ಸಾಗರ ಎಂಬ ನೂತನ ಅಣೆಕಟ್ಟು ನಿರ್ಮಾಣ ಮಾಡಿದರು. ಚೀನಾದಿಂದ ರೇಷ್ಮೆ ಆಮದಾಗುತ್ತಿದ್ದುದನ್ನು ಕಂಡ ಟಿಪ್ಪು, ಮೊದಲ ಬಾರಿಗೆ ಕನ್ನಡದ ನೆಲದಲ್ಲಿ ರೇಷ್ಮೆ ಬೆಳೆಯನ್ನು ಪರಿಚಯಿಸಿದನು. ಜೊತೆಗೆ ತನ್ನ ತಂದೆಯ ಹೈದರಲಿಯ ಕನಸಿನಂತೆ ಬೆಂಗಳೂರು ನಗರದಲ್ಲಿ ಪ್ರಪ್ರಥಮ ಜೈವಿಕ ಉದ್ಯಾನವನವನ್ನು ‘ಲಾಲ್ ಬಾಗ್’ ಹೆಸರಿನಲ್ಲಿ ಅಭಿವೃದ್ಧಿಪಡಿಸಿದನು. ಟಿಪ್ಪುಸುಲ್ತಾನ್ ಪರಿಚಯಿಸಿದ ಜಗತ್ತಿನ ವಿವಿಧ ಬಗೆಯ ಮಾವಿನ ಹಣ್ಣುಗಳ ತಳಿಯನ್ನು ಹಾಗೂ ಮಾವಿನ ತೋಟಗಳನ್ನು ನಾವು ಇಂದಿಗೂ ಸಹ ಟಿ.ನರಸಿಪುರ ಮತ್ತು ಮಳ್ಳವಳ್ಳಿ ತಾಲೂಕಿನ ಗ್ರಾಮಗಳಲ್ಲಿ ಕಾಣಬಹುದಾಗಿದೆ. ಸದಾ ಹೊಸ ತಂತ್ರಜ್ಞಾನಕ್ಕೆ ತುಡಿಯುತ್ತಿದ್ದ ಅವನು ಭಾರತದಲ್ಲಿ ಮೊದಲ ಬಾರಿಗೆ ಸೇನೆಯಲ್ಲಿ ಫ್ರೆಂಚರ ಸಹಾಯದಿಂದ ಕ್ಷಿಪಣಿ ಮತ್ತು ರಾಕೆಟ್ ಗಳನ್ನು ಬಳಸುವುದರ ಮೂಲಕ ಬ್ರಿಟಿಷರಿಗೆ ಸಿಂಹ ಸ್ವಪ್ನವಾದನು, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಟಿಪ್ಪುವಿಗೆ ಎಷ್ಟೊಂದು ಆಸಕ್ತಿಯಿತ್ತು ಎಂಬುದಕ್ಕೆ 1786ರ ಡಿಸೆಂಬರ್ 29ರಂದು ಅವನು ಪರ್ಷಿಯನ್ ವಿದ್ವಾಂಸ ಕಾಸ್ನಿ ಎಂಬಾತನಿಗೆ ‘‘ಯುರೋಪಿನಿಂದ ಬರುತ್ತಿರುವ ಪುಸ್ತಕವೊಂದು ಶಾಖ ಮಾಪಕವನ್ನು ಕುರಿತ ವಿಷಯವನ್ನು ಒಳಗೊಂಡಿದೆ. ಅದನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿ ನನಗೆ ಕಳುಹಿಸಿಕೊಂಡು’’ ಎಂದು ಪತ್ರ ಬರೆದಿರುವ ದಾಖಲೆ ಇಂದಿಗೂ ಪತ್ರಾಗಾರದಲ್ಲಿ ಇದೆ.

 ಮದ್ಯಪಾನದ ಕಡು ವಿರೋಧಿಯಾಗಿದ್ದ ಟಿಪ್ಪುಸುಲ್ತಾನ್ ಇದರಿಂದ ಜನರ ಆರೋಗ್ಯ ಮತ್ತು ನೈತಿಕತೆ ಕುಸಿಯುತ್ತದೆ ಎಂದು ಬಲವಾಗಿ ನಂಬಿದ್ದ. ಆ ಕಾರಣಕ್ಕಾಗಿ ವಿದೇಶಿಯರನ್ನು ಹೊರತು ಪಡಿಸಿ, ಸ್ಥಳೀಯ ಜನರಿಗೆ ಮದ್ಯ ಮಾರಾಟವನ್ನು ನಿಷೇಧಿಸಿದ್ದ. ಈ ಕುರಿತು 1798ರ ಡಿಸೆಂಬರ್ 11ರಂದು ರ್ಯಾಲಿ ಎಂಬಾತನಿಗೆ ಟಿಪ್ಪುಸುಲ್ತಾನ್ ಪತ್ರ ಬರೆದಿದ್ದಾನೆ. ‘‘ನನ್ನ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ಪಾನ ನಿಷೇಧವಾಗುವುದು ನನ್ನ ಹೃದಯಕ್ಕೆ ಸಂತೋಷವಾಗುವ ವಿಚಾರ’’ ಎಂದು ಬಣ್ಣಿಸಿಕೊಂಡಿದ್ದಾನೆ. ಟಿಪ್ಪುಸುಲ್ತಾನ್ ಸೆರೆ ಹಿಡಿದ ಕೈದಿಗಳಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎಂದು ಇತಿಹಾಸದ ಪುಟಗಳಲ್ಲಿ ಆರೋಪಿಸಿಕೊಂಡು ಬರಲಾಗಿದೆ. ಆದರೆ, 1786 ರಲ್ಲಿ ಬ್ರಿಟನ್ ಸೇನೆಯ ಮುಖಂಡ ರಾಬ್‌ಸನ್ ಎಂಬಾತ ದಾಖಲಿಸಿರುವ ಬರವಣಿಗೆ ಈ ರೀತಿ ಇದೆ. ‘‘ಟಿಪ್ಪುಸಾಹೇಬನು ಕರ್ನಲ್ ಬ್ರೈತ್ ವೈಟ್ ಮತ್ತು ಇತರೆ ಕೈದಿಗಳನ್ನು ತನ್ನ ಬಳಿ ಕರೆತರುವಂತೆ ಆಜ್ಞಾಪಿಸಿ ಅವರುಗಳ ಗಾಯವನ್ನು ಸ್ವತಃ ಪರೀಕ್ಷಿಸಿದನು. ನಂತರ ಗಾಯಾಳುಗಳಿಗೆ ಔಷಧೋಪಚಾರ ಮಾಡಲು ಫ್ರೆಂಚ್ ವೈದ್ಯರೊಡನೆ ಹಳ್ಳಿಗಳಿಗೆ ಕಳಿಸಿಕೊಟ್ಟನು. ಕೈದಿಗಳು ಧರಿಸಲು ನವಿರಾದ ಬೆಳ್ಳನೆಯ ಉಡುಪುಗಳನ್ನು ನೀಡಿದನು. ಗಾಯಗಳಿಗೆ ಪಟ್ಟಿ ಕಟ್ಟಲು ಒರಟು ಬಟ್ಟೆಗಳು ಮತ್ತು ಮೂವತ್ತು ಪಗೋಡ ನಾಣ್ಯಗಳನ್ನು ನೀಡಿದನು.’’ ಬ್ರಿಟಿಷ್ ಸೇನೆಯ ದಂಡನಾಯಕನನ್ನು ಟಿಪ್ಪುಸುಲ್ತಾನ್ ಬಂಧಿಖಾನೆಯಲ್ಲಿ ಇಟ್ಟಿದ್ದನೇ ಹೊರತು ನೆಲಮಾಳಿಗೆಯಲ್ಲಿ ಅಲ್ಲ. ಇಂತಹ ಅನೇಕ ಅಮೂಲ್ಯ ದಾಖಲೆಗಳು ಟಿಪ್ಪು ಸುಲ್ತಾನನ ಮಾನವೀಯ ಮುಖಗಳ ಮೇಲೆ ಬೆಳಕು ಚೆಲ್ಲುತ್ತವೆ.

ಟಿಪ್ಪು ಸುಲ್ತಾನ್ ಹಿಂದೂ ಧರ್ಮವನ್ನು ಮತ್ತು ಹಿಂದೂಗಳನ್ನು ಎಷ್ಟೊಂದು ಗೌರವ ಮತ್ತು ಭಕ್ತಿಯಿಂದ ಕಾಣುತ್ತಿದ್ದ ಎಂಬುದಕ್ಕೆ 1794ರಲ್ಲಿ ರೊಡರಿಕ್ ಮೆಕನ್ಜಿ ಎಂಬಾತ ಬರೆದ ಬರೆವಣಿಗೆ ನಮ್ಮೆದುರು ಸಾಕ್ಷಿಯಾಗಿದೆ. ವರ್ಷವೊಂದಕ್ಕೆ ತಮಿಳುನಾಡು ಒಳಗೊಂಡಂತೆ ಮೈಸೂರು ಸಂಸ್ಥಾನದಲ್ಲಿ ಒಟ್ಟು 156 ದೇವಾಸ್ಥಾನಗಳಿಗೆ ಆರ್ಥಿಕ ನೆರವು ನಿಡುತ್ತಿದ್ದ ಸಂಗತಿಗಳು ದಾಖಲಾಗಿವೆ. ಕಾಂಚಿಪುರಂನ ದೇವಸ್ಥಾನದ ನಿರ್ಮಾಣಕ್ಕೆ 10 ಸಾವಿರ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ ಸಂಗತಿ, ಮೈಸೂರಿನ ಚಾಮುಂಡೇಶ್ವರಿ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಗಳಿಗೆ ಚಿನ್ನ ಹಾಗೂ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ನೀಡಿರುವ ವಿಷಯ, ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನದ ಎರಡು ಪಂಗಡಗಳ ಅರ್ಚಕರ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ, ದೇಗುಲಕ್ಕೆ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕೊಡುಗೆಯಾಗಿ ನೀಡಿರುವ ಸಂಗತಿಗಳು ದಾಖಲಾಗಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಮರಾಠರ ದಾಳಿಯಿಂದ ಅಂದರೆ, 1990-92 ರ ನಡುವಿನ ಮೂರನೆಯ ಮೈಸೂರು ಯುದ್ಧದ ಸಮಯದಲ್ಲಿ ಸರ್ದಾರ್ ಪರುಶರಾಂ ಭಾವೂ ಮತ್ತು ಆತನ ಸೇನಾನಿ ಪಟವರ್ಧನ ಇವರು ಬಿದನೂರು ಪ್ರಾಂತದ ಮೇಲೆ ದಂಡೆತ್ತಿ ಬಂದಾಗ ಶೃಂಗೇರಿ ಶಾರದಾ ಪೀಠದ ಚಿನ್ನಾಭರಣಗಳು ಮತ್ತು ಅರವತ್ತು ಲಕ್ಷ ರೂಪಾಯಿಗಳನ್ನು ದೋಚಿ, ಶಾರದೆಯ ವಿಗ್ರಹವನ್ನು ಭಗ್ನಗೊಳಿಸಿದ್ದರು. ಹಾನಿಗೊಳಗಾದ ಹಾಗೂ ಜಗದ್ಗುರು ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿಯ ಶಾರದಾ ಪೀಠದ ಶಾರದೆಯ ವಿಗ್ರಹ ಮತ್ತು ದೇಗುಲ ಇವುಗಳ ದುರಸ್ತಿಗೆ ಅಪಾರವಾದ ನೆರವನ್ನು ನೀಡಿ ಶಾರದಾಂಬೆಯ ವಿಗ್ರಹದ ಪುನರ್ ಪ್ರತಿಷ್ಠಾಪನೆಗೆ ಟಿಪ್ಪುನೆರವಾದನು. ಜೊತೆಗೆ ಶ್ರೀರಂಗಪಟ್ಟಣದಿಂದ ಎರಡು ನೂತನ ಪಲ್ಲಕ್ಕಿಗಳನ್ನು ಕಳುಹಿಸಿ, ಅವುಗಳಲ್ಲಿ ಒಂದನ್ನು ತಾಯಿ ಶಾರದಾಂಬೆಗೆ, ಮತ್ತೊಂದನ್ನು ಜಗದ್ಗುರುಗಳು ಬಳಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದನು. ಶೃಂಗೇರಿಯ ಸುತ್ತ ಮುತ್ತ ಇದ್ದ ಬ್ರಾಹ್ಮಣರ ಅಗ್ರಹಾರಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಶೃಂಗೇರಿ ಮಠದಲ್ಲಿ ಪ್ರತಿನಿತ್ಯ ಒಂದು ಸಾವಿರ ಬ್ರಾಹ್ಮಣರಿಗೆ ಅನ್ನ ದಾಸೋಹ ನಡೆಸುವಂತೆ ವಾರ್ಷಿಕ ಅನುದಾನವನ್ನು ಘೋಷಿಸಿದನು. 1793ರಲ್ಲಿ ಶೃಂಗೇರಿಯ ಸ್ವಾಮೀಜಿಗೆ( ಶ್ರೀ ಸಚ್ಚಿದಾನಂದ ಭಾರತಿ) ಬರೆದಿರುವ ಪತ್ರದಲ್ಲಿ ಟಿಪ್ಪುಸುಲ್ತಾನನು ‘‘ನೀವು ಜಗದ್ಗುರುಗಳು. ಲೋಕೋದ್ಧಾರಕ್ಕೂ, ಮಾನವ ಕಲ್ಯಾಣಕ್ಕೂ ನೀವು ಯಾವಾಗಲೂ ತಪಸ್ಸನ್ನು ಆಚರಿಸುತ್ತೀರಿ. ನಮ್ಮ ಏಳಿಗೆ ಮತ್ತು ಅಭಿವೃದ್ಧಿಗಾಗಿ ಪ್ರಾರ್ಥಿಸಿ. ನಿಮ್ಮಂತಹ ಪವಿತ್ರ ಜೀವಿಗಳು ಯಾವ ನಾಡಿನಲ್ಲೇ ವಾಸಿಸುತ್ತಿರಲಿ, ಆ ನಾಡು ಒಳ್ಳೆಯ ಮಳೆ ಬೆಳೆಗಳಿಂದ ವರ್ಧಿಸುತ್ತದೆ’’ ಎಂದು ಪ್ರಾರ್ಥಿಸಿಕೊಂಡಿದ್ದಾನೆ. 1792 ರಿಂದ 1798ರವರೆಗಿನ ಅವಧಿಯಲ್ಲಿ ಟಿಪ್ಪುಸುಲ್ತಾನ್ ಶೃಂಗೇರಿ ಮಠಕ್ಕೆ ಬರೆದಿರುವ ಪತ್ರಗಳು ಈಗಲೂ ಸಹ ಸುರಕ್ಷಿತವಾಗಿವೆ. ಇದಕ್ಕಿಂತ ಮಹತ್ವದ ಸಂಗತಿಯೆಂದರೆ, ಮೈಸೂರು ನಗರದಲ್ಲಿ ಪ್ರಥಮವಾಗಿ ಕ್ರೈಸ್ತ ಧರ್ಮದ ಜನರ ಪ್ರಾರ್ಥನೆಗಾಗಿ ಟಿಪ್ಪುಸುಲ್ತಾನ್ ಚರ್ಚ್ ಒಂದನ್ನು ನಿರ್ಮಾಣ ಮಾಡಿರುವುದನ್ನು ಪ್ರಸ್ತಾಪಿಸಿರುವ ಬಿ.ಎ. ಸಲಟೋರ್ ಎಂಬ ವಿದ್ವಾಂಸ ಟಿಪ್ಪು ಸುಲ್ತಾನ್‌ನನ್ನು ‘ಹಿಂದೂ ಧರ್ಮದ ರಕ್ಷಕ’ ಎಂದು ಕರೆದಿದ್ದಾನೆ.

    ಟಿಪ್ಪುವಿನ ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿ ಬೆಂಗಳೂರು ನಗರದಲ್ಲಿ ಬೇಸಿಗೆ ಅರಮನೆಗೆ ಹೊಂದಿಕೊಂಡಂತೆ ಇರುವ ಕೋಟೆ ಶ್ರೀ ವೆಂಕಟೇಶ್ವರ ದೇವಸ್ಥಾನ, ಅನತಿ ದೂರದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಶ್ರೀ ರಾಮ ಮಂದಿರ ಇವೆಲ್ಲವೂ ಟಿಪ್ಪುವಿನ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿವೆ. ಅಷ್ಟೇ ಏಕೆ? 1799ರಲ್ಲಿ ಟಿಪ್ಪು ಸುಲ್ತಾನ್ ಯುದ್ಧದಲ್ಲಿ ಮಡಿದ ಸಂದರ್ಭದಲ್ಲಿ ಆತನ ಸಂಸ್ಥಾನದ ಮುಖ್ಯ ಮಂತ್ರಿಯಾಗಿದ್ದವರು ದಿವಾನ್ ಪೂರ್ಣಯ್ಯ, ಇವರು ಬ್ರಾಹ್ಮಣರು ಎಂಬುದನ್ನು ನಾವು ಮರೆಯಬಾರದು. ಟಿಪ್ಪುಸುಲ್ತಾನ್ ಕೋಮುವಾದಿಯಾಗಿದ್ದರೆ, ಓರ್ವ ಬ್ರಾಹ್ಮಣ ವ್ಯಕ್ತಿಗೆ ತನ್ನ ಆಸ್ಥಾನದಲ್ಲಿ ಅತ್ಯುನ್ನುತ ಹುದ್ದೆ ನೀಡಲು ಸಾಧ್ಯವಿತ್ತೇ? ಭಾರತ ಹಾಗೂ ಕರ್ನಾಟಕ ನೆಲ ಕಂಡ ಇಂತಹ ಒಬ್ಬ ಧೀರೋತ್ತಮನನ್ನು ಮತ್ತು ಮಹಾನ್ ಮಾನವತಾವಾದಿಯನ್ನು ಸ್ಮರಣೆ ಮಾಡಿ ಗೌರವಿಸುವುದೆಂದರೆ, ಅದು ನಮ್ಮನ್ನು ನಾವು ಗೌರವಿಸಿಕೊಂಡಂತೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...