Saturday, November 28, 2015

ಅಲ್ಲಿ ನಾನು ಕಳೆದು ಹೋಗಿದ್ದೆ...ಶೂದ್ರ ಶ್ರೀನಿವಾಸ್


ನಾವು ಎಷ್ಟೇ ಧೈರ್ಯವಂತರಾಗಿದ್ದರೂ, ಛಲವಾದಿಗಳಾಗಿದ್ದರೂ ಪರಕೀಯ ಸ್ಥಳಗಳಲ್ಲಿ ಮಾನಸಿಕವಾಗಿ, ದೈಹಿಕವಾಗಿ ದುರ್ಬಲರಾಗಿ ಬಿಟ್ಟಿರುತ್ತೇವೆ. ಇಂಥದ್ದು ಸೆಪ್ಟಂಬರ್ 2015ರ ಎರಡನೆ ವಾರದಲ್ಲಿ ಒಂದಷ್ಟು ಸಮಯ ಅನುಭವಿಸಿದ್ದೆ. ಬೆಳಗ್ಗೆಯಿಂದ ಅಪರೂಪದ ಗ್ರಾಂಡ್ ಕೆನಾನ್‌ನ ವೈಭವವನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದೆ. ಅದನ್ನು ಇಲ್ಲಿ ಪ್ರತ್ಯೇಕವಾಗಿಯೇ ವಿವರಿಸಬೇಕಾಗುತ್ತದೆ. ಅಷ್ಟೊಂದು ವೈವಿಧ್ಯಮಯತೆಯನ್ನು ನೂರಾರು ಅಥವಾ ಸಾವಿರಾರು ವರ್ಷಗಳಿಂದ ಪ್ರಕೃತಿಯಲ್ಲಿ ಆದ ಏರುಪೇರುಗಳಿಂದ ಪಡೆದಿರುವಂಥದ್ದು. ಇದಕ್ಕೆ ಪೂರಕವೆಂಬಂತೆ ನೂರಾರು ಮೈಲಿ ಹೋದರೂ ಒಂದೇ ಒಂದು ಮರಗಿಡವಿಲ್ಲದ ಮರುಭೂಮಿಯಂಥ ಪ್ರದೇಶ. ಇಂಥದ್ದಕ್ಕೆಲ್ಲ ರಾಜಧಾನಿಯೆಂಬಂತೆ ಲಾಸ್‌ವೇಗಾಸ್ ಇರುವಂಥದ್ದು. ಏನೇನು ಬೆಳೆಯದ ಕಡೆ ಜನ ಹೇಗೆ ವಾಸಿಸುವರು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚಕಿತಗೊಂಡಿರುವೆ. ಹಾಗೆ ನೋಡಿದರೆ ಈ ಲಾಸ್‌ವೇಗಾಸ್‌ಗೆ ಪ್ರವೇಶಿಸುವ ಮುನ್ನವೇ ಗೆಳೆಯರಿಂದ ಕೇಳಿಸಿಕೊಂಡಿದ್ದೆ: ‘‘ಶೂದ್ರ ಎಚ್ಚರದಿಂದ ಇರು. ಕ್ಯಾಸಿನೋ ಎಂಬ ಜೂಜಿನ ಆಕರ್ಷಕ ಸಲಕರಣೆಗಳ ಮಧ್ಯೆ ಸಿಕ್ಕಿಕೊಂಡು; ಮತ್ತೆ ನಿನ್ನ ದೇಶಕ್ಕೆ ವಾಪಸ್ಸು ಹೋಗದಂತೆ ಮಾಡಿಬಿಡುತ್ತದೆ’’ ಎಂದು. ಅಮೆರಿಕದ ಕ್ಯಾಲಿಪೋರ್ನಿಯಾದ ಈ ಲಾಸ್‌ವೇಗಾಸ್ ಸ್ಯಾನ್‌ಫ್ರಾನ್ಸಿಸ್‌ಕೊ, ಲಾಸ್ ಏಂಜಲೀಸ್ ರೀತಿಯಲ್ಲಿಯೇ ವಿಚಿತ್ರ ನಗರ. ಅಥವಾ ಆ ಎರಡೂ ನಗರಗಳಿಗಿಂತ ಹುಚ್ಚನ್ನು ತುಂಬಿಕೊಂಡಿರುವ ‘ಮ್ಯಾಡ್‌ಮ್ಯಾಡ್ ಸಿಟಿ’. ಒಮ್ಮಾಮ್ಮೆ ಈ ರೀತಿಯ ನಗರವೂ ಇರಲು ಸಾಧ್ಯವೇ ಅನ್ನಿಸಿಬಿಡುತ್ತದೆ.

 1985ರಲ್ಲಿ ಥಾಯ್ಲೆಂಡ್‌ನ ಬ್ಯಾಂಕಾಂಕ್‌ನಲ್ಲಿದ್ದಾಗ; ಓ ದೇವರೇ ಇಂಥ ನಗರಗಳನ್ನು ಸೃಷ್ಟಿ ಮಾಡಿದ್ದೀಯ ಎಂದು ದೇವರನ್ನು ನಂಬದಿದ್ದರೂ; ಬಾಲ್ಯ ಕಾಲದಲ್ಲಿ ಆರಾಧಿಸಿಕೊಳ್ಳುತ್ತಿದ್ದ ಆ ಅಸ್ಪಷ್ಟ ದೇವರ ನೆನಪು ಗುನುಗುನಿಸಿಕೊಳ್ಳುವಂತೆ ಮಾಡಿತ್ತು. ಆಗ ಲಾಸ್‌ವೇಗಾಸ್ ಬಗ್ಗೆ ಏನೇನು ಕೇಳಿರಲಿಲ್ಲ. ಆದರೆ ಈ ನಗರದ ಮುಂದೆ ಆ ಬ್ಯಾಂಕಾಕ್ ನಗರ ಪುಟ್ಟ ಮಗುವಿದ್ದಂತೆ. ಬಾಸ್ಟನ್‌ನಿಂದ ಒಂದು ವಾರದ ಮಟ್ಟಿಗೆ ವೆಸ್ಟ್‌ಕೋರ್ಸ್ಟ್ ಕ್ಯಾಲಿಫೋರ್ನಿಯಾದ ಪ್ರದೇಶವನ್ನು ಸುತ್ತಲು ಹೊರಟಾಗ ‘ಲಾಸ್‌ಏಂಜಲೀಸ್’ನ್ನು ನೋಡಲು ಹೋಗುತ್ತಿದ್ದೇನೆ ಎಂದು. ಯಾಕೆಂದರೆ ಅದು ವಿಶ್ವದ ಮನರಂಜನೆಯ ರಾಜಧಾನಿಯೆಂದು ಎಲ್ಲೆಡೆ ಕರೆಸಿಕೊಂಡಿರುವಂಥದ್ದು. ನಿಜವಾಗಿಯೂ ಅದನ್ನು ನೋಡಿದ ಮೇಲೆ ಕರೆಸಿಕೊಳ್ಳಲು ಅರ್ಹವಾಗಿರುವಂಥದ್ದು. ಅದೇನೆ ಆಗಿರಲಿ, ಈ ನಗರದ ಮುಂದೆ ಲಾಸ್‌ವೇಗಾಸನ್ನು ಕೂರಿಸಿದರೆ; ಅಯ್ಯೋ ದಾರಿ ತಪ್ಪಿರುವಂಥ ನಗರ ಅನ್ನಿಸದಿರದು. ಆದರೆ ಎಲ್ಲ ಆಕ್ಷೇಪಣೆಗಳನ್ನು ಮರೆತು ಇದು ವಿಚಿತ್ರ ಜೂಜುಕಟ್ಟೆ ನಗರ ಎಂದು ಎಲ್ಲರೂ ಆರೋಪಿಸಿ ಬಿಟ್ಟಿದ್ದಾರೆ. ನಿಜವಾಗಿಯೂ ಇದು ಆ ರೀತಿಯ ನಗರವೇ ಆಗಿದೆ.

ಲಾಸ್‌ವೇಗಾಸ್‌ನ ವಿಮಾನ ನಿಲ್ದಾಣವೇ ಮನಮೋಹಕ ಹುಡುಗಿಯಂತೆ ಕಂಗೊಳಿಸುವ ವಿವಿಧ ರೂಪಗಳ ‘ಕ್ಯಾಸಿನೋ’ ಎಂಬ ಬಣ್ಣಬಣ್ಣದ ಪೆಟ್ಟಿಗೆಗಳು. ಪಕ್ಕದಲ್ಲಿ ಯಾರು ನಿಂತಿದ್ದಾರೆ ಎಂಬ ಅರಿವೂ ಇಲ್ಲದೆ ಅದರಲ್ಲಿ ಮಗ್ನರಾಗಿರುವಂಥ ಜೂಜುಕೋರರು. ಊಟ, ನಿದ್ದೆ, ಮನೆ ಮಂದಿಯನ್ನೆಲ್ಲ ಮರೆಸುವ ಜೂಜು. ಇದು ಸರಕಾರಕ್ಕೆ ಎಂತೆಂಥ ಅಕ್ರಮ ಆದಾಯದ ಮೂಲಗಳನ್ನು ಸೃಷ್ಟಿಸಿಕೊಡಬಲ್ಲುದು ಎಂದು ಒಂದು ಕ್ಷಣ ಗಾಬರಿಗೊಂಡೆ. ಗೆಳೆಯರಲ್ಲಿ ಸಾಕಷ್ಟು ಮಂದಿ ಹೇಳಿದ್ದರು: ಲಾಸ್‌ವೇಗಾಸ್ ವರ್ಷದ ಮುನ್ನೂರ ಅರವತ್ತೈದು ದಿನವೂ ನಿದ್ದೆ ಹೋಗದೆ ತನ್ನ ಧಣಿವನ್ನು ಮರೆತಿರುವಂಥ ನಗರ. ಆದ್ದರಿಂದ ಹುಷಾರಾಗಿರು ಎಂದು ಹೇಳಿದ್ದರಲ್ಲಿ ಯಾವುದೇ ರೀತಿಯ ಉಡಾಫೆ ಇರಲಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಬಂದ ದಾರಿಯನ್ನು ಮರೆಸುವಂಥ ವಿವರಿಸಲಾಗದ ಆಕರ್ಷಣೆಗಳು. ವಿಶಾಲವಾದ ಪರದೆಯ ರೀತಿಯ ಗೋಡೆಗಳ ಮೇಲೆ ಎಂತೆಂಥದೋ ವಾದ್ಯಗಳ ಶಬ್ದದಲ್ಲಿ ಕರಗಿ ಹೋದವರಂತೆ ಕುಣಿದು ಕುಪ್ಪಳಿಸುವ ಲಯ ತಪ್ಪಿದ ನೃತ್ಯ. ಆ ಸಂಸ್ಕೃತಿಗೆ ನಾವು ಪರಕೀಯರಾಗಿರುವುದರಿಂದ ಒಂದು ರೀತಿಯ ತಲ್ಲಣಗಳಿಂದ ನಡುಗಿ ಹೋಗಿರುತ್ತೇವೆ. ಜಗತ್ತಿನಲ್ಲಿರುವ ಎಲ್ಲ ಡಿಸ್ಕೋ ಸಂಸ್ಕೃತಿ ಇಲ್ಲಿ ಬಂದು ಬಿದ್ದು ಚೆಲ್ಲಾಪಿಲ್ಲಿಯಾಗಿ ಗದ್ದಲವೆಬ್ಬಿಸುತ್ತಿದೆ ಎಂಬ ಅಭಿಪ್ರಾಯ ಧುತ್ತನೆ ಮನಸ್ಸಿನ ತುಂಬ ಆವರಿಸಿಕೊಂಡು ಕಸಿವಿಸಿಯನ್ನು ಸೃಷ್ಟಿಮಾಡಿಬಿಟ್ಟಿರುತ್ತದೆ. ಇಂಥ ನಗರಕ್ಕೆ ಸೆಪ್ಟಂಬರ್ 17ರಂದು ಪ್ರವೇಶ ಮಾಡಬೇಕಾಯಿತು. ಮೊದಲೇ ತಿಳಿಸಿದಂತೆ ವಿಮಾನದಲ್ಲಿಯೇ ದಾರಿತಪ್ಪಿಸುವಂತಿದ್ದ ಕ್ಯಾಸಿನೋ ಎಂಬ ಜೂಜಿನ ಯಂತ್ರಗಳು. ಅದಕ್ಕೆ ಪೂರಕವಾದಂತಹ ಎಂಥದೋ ಅವ್ಯಕ್ತ ಆಕರ್ಷಣೆಗಳು. ಅತ್ಯಂತ ವಿಶಾಲವಾದ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳು. ಎಲ್ಲವನ್ನು ಸರಳವಾಗಿ ನೋಡುವಂತಹವರಿಗಂತೂ; ವಿಷವರ್ತುಲವಾಗಿ ತಲೆಸುತ್ತು ಬರುವಂತೆ ತಬ್ಬಿಬ್ಬುಗೊಳಿಸಿಬಿಟ್ಟಿರುತ್ತದೆ. ಅರೆನಗ್ನ ಚಿತ್ರಗಳಲ್ಲಿ ಮುಖಕ್ಕೆ ರಾಚುವಂಥ ಜಾಹೀರಾತು ಫಲಕಗಳು. ಒಮ್ಮೆಮ್ಮೆ ಅನ್ನಿಸುವುದು ಇವೆಲ್ಲ ಇಲ್ಲಿ ಅಜೀರ್ಣವಾಗಿ ಅಥವಾ ‘ಔಟ್ ಡೇಟೆಡ್’ ಆಗಿ; ಭಾರತದಂತಹ ರಾಷ್ಟ್ರಗಳಿಗೆ ಅಕ್ರಮವಾಗಿ ಬಂದು ಬೀಳುತ್ತಲೇ ಒಟ್ಟು ನಮ್ಮ ನೂರಾರು ವರ್ಷಗಳ ಅಭಿರುಚಿ ಇಲ್ಲವೇ ಜೀವನ ವಿಧಾನವನ್ನೇ ತಲೆಕೆಳಗೆ ಮಾಡಿ ಬಿಡುತ್ತದೆ ಅನ್ನಿಸತೊಡಗಿತ್ತು. ಆ ವಿಮಾನ ನಿಲ್ದಾಣವನ್ನು ದಾಟಿ ಅಲ್ಲಿಂದ ಹತ್ತು ಹದಿನೈದು ಮೈಲಿ ದೂರದಲ್ಲಿದ್ದ ಲಾಸ್‌ವೇಗಾಸ್ ಮಧ್ಯಭಾಗದ ‘ಪ್ಲಾನೆಟ್ ಹಾಲಿವುಡ್ ಇಂಟರನ್ಯಾಷನಲ್ ಹೋಟೆಲ್’ಗೆ ಬಂದೆವು. ಅಲ್ಲಿ ಎಲ್ಲ ರೀತಿಯ ಚೆಕ್ಕಿಂಗ್ ಮುಗಿಸಿ ಕ್ಯಾಲಿಫೋರ್ನಿಯಾದ ಪ್ರವಾಸಕ್ಕೆಂದು ನೋಂದಾಯಿಸಿಕೊಂಡ ಭಾರತದ ಬೇರೆ ಬೇರೆ ರಾಜ್ಯಗಳ ಒಂದಷ್ಟು ಮಂದಿ ಒಂದೆಡೆ ಸೇರಿದೆವು. ಅವರಲ್ಲಿ ಬೆಂಗಳೂರಿನವರೂ ಇಬ್ಬರು ದಂಪತಿ ಇದ್ದರು. ಕಳೆದ ಹದಿನೈದು ವರ್ಷಗಳಿಂದ ದುಬೈನಲ್ಲಿದ್ದುದರಿಂದ; ಅದಕ್ಕೆ ಹತ್ತಿರವಿರುವ ಸಂಸ್ಕೃತಿಯಲ್ಲಿ ಕರಗಿ ಹೋಗಿದ್ದವರು. ಇನ್ನು ಕೆಲವರು ಗುಜರಾತಿನ ಕಡೆಯಿಂದ ಬಂದವರು. ಪಕ್ಕಾ ಬಿಜೆಪಿ ಸಂಸ್ಕೃತಿಯವರು.

ಪ್ರವಾಸವನ್ನು ವ್ಯವಸ್ಥೆ ಮಾಡಿದ್ದ ವಿವರವಾದ ಮಾಹಿತಿಯನ್ನು ಕೊಟ್ಟರು. ರಾತ್ರಿ 11:30ರ ವರೆಗೆ ಈ ನಗರದ ರಾತ್ರಿಯ ಲೋಕ ಹೇಗೆ ಇರುತ್ತದೆಂಬುದನ್ನು ನೋಡೋಣ ಎಂದು ತಿಳಿಸಿದ್ದರು. ಗಡಿಬಿಡಿಯಿಂದ ನಮಗೆ ವ್ಯವಸ್ಥೆ ಮಾಡಿದ್ದ ಮುವತ್ತೇಳನೆಯ ಅಂತಸ್ತಿನ ಕೊಠಡಿಗೆ ಹೋದೆವು. ಜೊತೆಯಲ್ಲಿ ನನ್ನ ಪತ್ನಿ ಮತ್ತು ಆಕೆಯ ಅತ್ತಿಗೆ ಇದ್ದರು. ಆ ಹೋಟೆಲೇ ಒಂದು ದೊಡ್ಡ ಹಳ್ಳಿ ಇದ್ದಂತೆ ಇತ್ತು. ಬಾಸ್ಟನ್‌ನಿಂದ ಎರಡು ವಿಮಾನಗಳನ್ನು ಬದಲಾಯಿಸಿ ಏಳು ಸಾವಿರ ಮೈಲಿ ಪ್ರಯಾಣ ಮಾಡುವಾಗ ಸಾಕಷ್ಟು ಆಯಾಸವಾಗಿತ್ತು. ಆದರೂ ಪ್ಯಾಕೇಜ್ ಪ್ರವಾಸದಲ್ಲಿ ವಿರಾಮವನ್ನು ಬಯಸಲು ಆಗುವುದಿಲ್ಲ. ಸಿದ್ಧವಾಗಿ ಕೆಳಗೆ ಬಂದೆವು. ಎಲ್ಲರೂ ಪ್ರವಾಸ ವ್ಯವಸ್ಥೆ ಮಾಡಿದ್ದ ಅದರ ಮುಖ್ಯಸ್ಥೆ ಮಿಹಿಕಾ ಪೇಥೆ ಎಂಬ ಕ್ರಿಯಾಶೀಲ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋದೆವು. ಹಾಗೆ ಹೀಗೆ ಸುತ್ತಾಡಿ ಆ ಮಹಡಿ ಈ ಮಾಹಿತಿ ಎಂದು ನಾನಾ ವಿಧದ ಯಂತ್ರಗಳ ನಡುವೆ ಸಾಗುತ್ತ ಇಳಿಯುತ್ತ ಕಣ್ಣಿಗೆ ಬಡಿಯುವ ಬೆಳಕಿನ ಚಿತ್ರಗಳನ್ನು ಎದುರಿಸುತ್ತ; ಅಷ್ಟೇ ತೀವ್ರತೆಯಿಂದ ಕಿವಿಗಳನ್ನು ಅಪ್ಪಳಿಸುವ ಗದ್ದಲವನ್ನು ಸಹಿಸಿಕೊಂಡು ಭಾರತದ ಆಹಾರ ಸಿಗುವ ಹೋಟೆಲ್‌ಗೆ ಹೋದೆವು. ಬೊಫೆ ಸಿಸ್ಟಮ್. ವಿಧವಿಧವಾದ ಐಟಮುಗಳು. ಸಾಕಷ್ಟು ಜನರ ಒತ್ತಡವಿದ್ದರೂ ತಿಂದು ಹೊರಗೆ ಬಂದೆವು. ನಮಗಾಗಿ ಬಸ್ಸೊಂದು ಕಾದಿತ್ತು. ಅದರಲ್ಲಿ ಕ್ರಿಯಾಶೀಲ ಗೈಡೂ ಇದ್ದ. ಸುಮಾರು ಮೂರು ಗಂಟೆ ಲಾಸ್‌ವೇಗಾಸ್‌ನಲ್ಲಿ ಎಂತೆಂಥದೋ ಮೈನಡುಗಿಸುವ ಬೆಳಕಿನ ಚಮತ್ಕಾರಗಳು. ಆ ಗೈಡು ಇದು ವೇಗಾಸ್‌ನ ಆಡಳಿತದ ಕಚೇರಿ, ಇದು ಇಂಥ ಸ್ಮಾರಕ ಹೀಗೆ ಒಂದೊಂದನ್ನೇ ತೋರಿಸುತ್ತ ವಿವರಣೆ ಕೊಡುತ್ತ ಹೋದ. ಪರಿಚಯದ ದೃಷ್ಟಿಯಿಂದ ಸ್ವೀಕರಿಸುತ್ತ ಹೋದೆ. ಆದರೆ ಇಂಥ ನಗರಗಳಿಗೆ ನಾವು ನೈತಿಕವಾಗಿ ಆರೋಪಿಸಿಕೊಳ್ಳುವ ಅಥವಾ ಆರೋಪಿಸುವ ‘ಆತ್ಮ’ ಎಂಬುದು ಇರುತ್ತದೆಯೇ ಎಂಬುದು ಕಾಡುತ್ತ ಹೋಯಿತು.

ಕ್ಷುಲ್ಲಕ ಮನರಂಜನೆಯ ನೆಪದಲ್ಲಿ; ಎಂತೆಂಥದೋ ತೆವಲುಗಳನ್ನು ಪ್ರಚೋದಿಸಲು ಮಾತ್ರ ಸಾಧ್ಯವಿರುತ್ತದೆ. ಅಗಾಧವಾದ ಪ್ರಮಾಣದಲ್ಲಿ ಪ್ರವಾಸಿಗರನ್ನು ಹಾಗೂ ಸ್ಥಳೀಯರನ್ನು ಆಕರ್ಷಿಸುವ ಇಂಥ ಚಟುವಟಿಕೆಗಳು ಕೊನೆಗೂ ಏನನ್ನು ಬಿಟ್ಟು ಹೋಗಬಹುದು ಅನ್ನಿಸುತ್ತದೆ. ಹಾಗೆ ನೋಡಿದರೆ ನಾನು ಅಮೆರಿಕದ ಸುತ್ತಾಟದಲ್ಲಿ ಬಾಸ್ಟನ್, ವಾಷಿಂಗಟನ್, ನಾರ್ತ್ ಕರೋಲಿನಾದ ರ್ಯಾಲಿಯನ್ನು ಇಷ್ಟಪಟ್ಟಷ್ಟು, ಈ ನಗರವನ್ನಂತು ಇಷ್ಟಪಡಲು ಆಗಲೇ ಇಲ್ಲ. ಹಾಗೆ ನೋಡಿದರೆ ಆಂಗ್ಲ ಭಾಷೆಯ ಮಹತ್ವಪೂರ್ಣ ಲೇಖಕ ಜಿ.ಕೆ. ಚೆಸ್ಟರ್‌ಟನ್ ನೂರು ವರ್ಷಗಳ ಹಿಂದೆ ‘ವಾಟ್ ಐ ಸಾ ಇನ್ ಅಮೆರಿಕ’ ಎಂಬ ಅಮೂಲ್ಯ ಕೃತಿಯನ್ನು ಪ್ರಕಟಿಸಿದ್ದಾರೆ. ಅಮೆರಿಕದ ಬೆಳವಣಿಗೆಯ ಏರುಪೇರುಗಳನ್ನು ಕುರಿತು ಆತ್ಮೀಯವಾಗಿ ಬರೆದಿರುವ ಕೃತಿ. ಈ ಕೃತಿಯು ಕಾರವಾರದ ಗ್ರಂಥಾಲಯದಲ್ಲಿ ಸಿಕ್ಕಿದಾಗ ಪುಳಕಿತನಾಗಿದ್ದೆ. ಅವರು ಬಾಸ್ಟನ್ ಅಂಥ ಪ್ರಸಿದ್ಧ ನಗರವನ್ನು ಕುರಿತು ಬರೆಯುವಾಗ; ‘‘ನನಗೆ ಬಾಸ್ಟನ್ ಹೆಸರಿಗಿಂತ, ಆ ನಗರ ತುಂಬ ಪ್ರಿಯವಾಯಿತು’’ ಎಂದಿದ್ದಾರೆ! ಚೆಸ್ಟರ್‌ಟನ್ ಅವರ ಮಾತನ್ನೇ ಮುಂದಿಟ್ಟುಕೊಂಡು ಯೋಚಿಸಿದರೆ ‘ಲಾಸ್‌ವೇಗಾಸ್’ ಹೆಸರು ಎಷ್ಟು ಚೆನ್ನಾಗಿದೆ. ಆದರೆ ಅದು ಬಾಚಿತಬ್ಬಿಕೊಂಡಿರುವ ವ್ಯವಹಾರದ ತುತ್ತತುದಿಯನ್ನು ನಾವು ಹೇಗೆ ಗ್ರಹಿಸಿಕೊಳ್ಳಬೇಕು ಅನ್ನಿಸುತ್ತದೆ. ಒಂದು ದೃಷ್ಟಿಯಿಂದ ಈಗಿನ ಪ್ರಮಾಣದಲ್ಲಿ ಅಂದು ‘ಲಾಸ್‌ವೇಗಾಸ್; ಇರಲು ಸಾಧ್ಯವೇ ಇಲ್ಲ. ಅಮೆರಿಕದಂಥ ಸಾಕಷ್ಟು ಮುಂದುವರಿದ ಹಾಗೂ ಜಗತ್ತಿಗೆ ಯಜಮಾನನಂತೆ ವರ್ತಿಸುವ ಬಹುದೊಡ್ಡ ದೇಶವು; ಎಷ್ಟೇ ನೈಸರ್ಗಿಕ ವೈಪರೀತ್ಯಗಳಿರಲಿ; ಬೇರೆ ರೀತಿಯಲ್ಲಿ ಆರ್ಥಿಕ ಆಯಾಮಗಳನ್ನು ಸೃಷ್ಟಿಸಲು ಸಾಧ್ಯವಿತ್ತು. ಇದು ನನ್ನಂಥವರ ಆಶಯದ ಮಾತಾಗಬಹುದು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...