Saturday, November 21, 2015

ಕಾರ್ನಾಡ್ ಯಾಕೆ ಕ್ಷಮೆಯಾಚಿಸಬೇಕು?



ವಾರ್ತಾಭಾರತಿ ಸಂಪಾದಕೀಯ








ಟಿಪ್ಪುವಿನ ವ್ಯಕ್ತಿತ್ವದ ಕುರಿತಂತೆ ಓರ್ವ ಸೃಜನಶೀಲ ಲೇಖಕರಾಗಿ, ನಾಟಕಕಾರರಾಗಿ ಗಿರೀಶ್ ಕಾರ್ನಾಡ್ ಆಳವಾದ ಆಸಕ್ತಿಯನ್ನು ಇಟ್ಟುಕೊಂಡವರು. ಟಿಪ್ಪು ಬದುಕನ್ನು ವಸ್ತುವಾಗಿಟ್ಟುಕೊಂಡು ‘ಟಿಪ್ಪು ಸುಲ್ತಾನನ ಕನಸುಗಳು’ ಎನ್ನುವ ಅಪರೂಪದ ನಾಟಕವನ್ನು ಬರೆದರು. ಅದು ರಂಗಭೂಮಿಯಲ್ಲಿ ಭಾರೀ ಖ್ಯಾತಿಯನ್ನು ಪಡೆಯಿತು ಕೂಡ. ಸಮಾಜವನ್ನು ಹಿಂದೂ ಮುಸ್ಲಿಮ್ ಎಂದು ಒಡೆಯುವ ರಾಜಕಾರಣಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಟಿಪ್ಪು ಸುಲ್ತಾನನ್ನು ಬಳಸಲು ಮುಂದಾದಾಗ ಅದನ್ನು ಸದಾ ಪ್ರತಿಭಟಿಸುತ್ತಾ ಬಂದವರು ಗಿರೀಶ್ ಕಾರ್ನಾಡ್. ಈ ಕಾರಣಕ್ಕಾಗಿ ಅವರು ಹಲವು ಬಾರಿ ಬಿಜೆಪಿ ಮುಖಂಡರಿಂದ ದೇಶದ್ರೋಹಿ ಎನ್ನುವ ಮುಳ್ಳಿನ ಕಿರೀಟವನ್ನು ಧರಿಸಿಕೊಳ್ಳಬೇಕಾಯಿತು. ಆದರೆ ಸಂಘಪರಿವಾರದ ಒಡಕಿನ ಮಾತುಗಳಿಗೆ ಅಂಜದೆ, ಟಿಪ್ಪುವಿನ ಕುರಿತ ತನ್ನ ನಿಲುವಿಗೆ ಸದಾ ಬದ್ಧವಾಗಿ ಉಳಿದುಕೊಂಡು ಬಂದವರು ಕಾರ್ನಾಡ್ ಅವರು. ಆದುದರಿಂದ, ಇತ್ತೀಚಿನ ಬೆಳವಣಿಗೆಗಳಲ್ಲಿ ಕಾರ್ನಾಡ್‌ರವರ ಮೇಲೆ ಮತ್ತೆ ಸಂಘಪರಿವಾರದ ಜನರು ಮುಗಿ ಬಿದ್ದಿರುವುದರಲ್ಲಿ ಹೊಸದೇನೂ ಇಲ್ಲ. ಈ ಬಾರಿ, ಜನರನ್ನು ಒಡೆಯಲು ಬಿಜೆಪಿ ಟಿಪ್ಪು ಮತ್ತು ಕಾರ್ನಾಡ್ ಜೊತೆಗೆ ಕೆಂಪೇಗೌಡರನ್ನೂ ಎಳೆದುಕೊಂಡು ಬಂದಿರುವುದು ವಿಶೇಷವಾಗಿದೆ.

ಟಿಪ್ಪು ಜಯಂತಿಯ ಸಂದರ್ಭದಲ್ಲಿ, ಟಿಪ್ಪುವಿನ ಜನಮುಖಿ ಆಡಳಿತವನ್ನು, ವಸಾಹತುಶಾಹಿ ವಿರೋಧಿ ಹೋರಾಟವನ್ನೂ ವಿವರಿಸುತ್ತಾ, ಟಿಪ್ಪು ನಾಡಿಗೆ ಎಷ್ಟು ಮುಖ್ಯ ಎನ್ನುವುದನ್ನು ಕಾರ್ನಾಡ್ ಪ್ರತಿಪಾದಿಸಿದ್ದಾರೆ. ಟಿಪ್ಪು ಸುಲ್ತಾನ್ ಅವರು ದೇವನಹಳ್ಳಿಯಲ್ಲಿ ಹುಟ್ಟಿರುವುದರಿಂದ, ವಿಮಾನನಿಲ್ದಾಣಕ್ಕೆ ಕೇಂಪೇಗೌಡರ ಬದಲು ಟಿಪ್ಪು ಸುಲ್ತಾನ್ ಹೆಸರಿಟ್ಟಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು ಎನ್ನುವುದು ಈ ಸಂದರ್ಭದಲ್ಲಿ ವ್ಯಕ್ತವಾದ ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು. ಆದರೆ ಈಗಾಗಲೇ ವಿಮಾನನಿಲ್ದಾಣಕ್ಕೆ ಯಾರ ಹೆಸರಿಡಬೇಕು ಎನ್ನುವುದು ನಿರ್ಧರಿಸಿಯಾಗಿದೆ. ಅದೊಂದು ಮುಗಿದ ಕತೆ. ಅದನ್ನು ಬದಲಿಸುವ ಅಧಿಕೃತವಾದ ಸಂಸ್ಥೆ ಕಾರ್ನಾಡ್ ಅಲ್ಲ. ಅವರು ಸರಕಾರದ ಭಾಗವೂ ಅಲ್ಲ. ಕಾರ್ನಾಡ್ ಹೇಳಿದಾಕ್ಷಣ ಹೆಸರು ಬದಲಾಗುವುದೂ ಇಲ್ಲ. ಅವರು ತಮ್ಮ ಅನಿಸಿಕೆಯನ್ನಷ್ಟೇ ವ್ಯಕ್ತಪಡಿಸಿದ್ದರ್ತು. ಇಂತಹ ಅನಿಸಿಕೆಗಳು ಹಿಂದೆಯೂ ಹಲವಾರು ಜನರು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಮೈಸೂರಿನ ಸಂಸದ, ಮಾಜಿ ಪತ್ರಕರ್ತ ಲೇಖಕ ಪ್ರತಾಪ ಸಿಂಹ ಈ ಹಿಂದೆ ತಮ್ಮ ಅಂಕಣದಲ್ಲಿ, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವುದನ್ನು ಕಟುವಾಗಿ ವಿರೋಧಿಸಿದ್ದರು. ಮತ್ತು ವಿಶ್ವೇಶ್ವರಯ್ಯ ಅವರ ಹೆಸರಿಡಲು ಒತ್ತಾಯಿಸಿದ್ದರು. ವಿಮಾನ ನಿಲ್ದಾಣಕ್ಕೆ ಶಿವರಾಮಕಾರಂತರ ಹೆಸರಿಡಬೇಕು ಎಂಬ ಒತ್ತಾಯವೂ ಈ ಹಿಂದೆ ಬಂದಿತ್ತು. ಹಾಗೆಂದಾಕ್ಷಣ ಅವರೆಲ್ಲರೂ ಕೆಂಪೇಗೌಡನ ವಿರೋಧಿಗಳೆಂದು ಅರ್ಥವಲ್ಲ. ಅಥವಾ ಕೆಂಪೇಗೌಡನ ಕುರಿತಂತೆ ಅವರಿಗೆ ಗೌರವವಿಲ್ಲ ಎಂದೂ ಅರ್ಥವಲ್ಲ.

ಗಿರೀಶ್ ಕಾರ್ನಾಡ್ ಅವರು ಕೆಂಪೇಗೌಡರ ಕುರಿತಂತೆಯೂ, ಟಿಪ್ಪು ಕುರಿತಂತೆಯೂ ಅಪಾರವಾಗಿ ತಿಳಿದುಕೊಂಡವರು ಮತ್ತು ಅವರ ಕುರಿತಂತೆ ಮಾತನಾಡುವುದಕ್ಕೆ ಎಲ್ಲ ರೀತಿಯ ಹಕ್ಕುದಾರರೂ ಹೌದು. ಈ ನೆಲೆಯಲ್ಲಿ, ಕೆಂಪೇಗೌಡ ಮತ್ತು ಟಿಪ್ಪು ಸುಲ್ತಾನರ ಕುರಿತಂತೆ ಮಾತನಾಡುತ್ತಾ, ಟಿಪ್ಪು ಹೆಸರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೆಚ್ಚು ಸೂಕ್ತವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಕೆಂಪೇಗೌಡ ಹೆಸರನ್ನು ತೆಗೆದು ಟಿಪ್ಪು ಹೆಸರನ್ನು ಕೊಡಿ ಎಂದೇನೂ ಅವರು ಆಗ್ರಹಿಸಿರಲಿಲ್ಲ. ಆದರೆ ಸಂಘಪರಿವಾರ ಬೆಂಬಲಿತ ಮಾಧ್ಯಮಗಳು ಮಾತ್ರ ಕಾರ್ನಾಡ್ ಅವರ ಮಾತುಗಳನ್ನು ಸಂಪೂರ್ಣ ತಿರುಚಿತು.
ಕೆಂಪೇಗೌಡರ ಹೆಸರನ್ನು ಕಿತ್ತು, ಟಿಪ್ಪು ಹೆಸರನ್ನು ಕೊಡಬೇಕು ಎಂದು ಕಾರ್ನಾಡ್ ಆಗ್ರಹಿಸಿದರೋ ಎಂಬಂತೆ ಚೀರಾಡಿದವು. ಇದು ಕೇವಲ ಕಾರ್ನಾಡ್ ಮೇಲಿನ ಅಸಹನೆ ಮಾತ್ರವಾಗಿರಲಿಲ್ಲ. ಕಾರ್ನಾಡ್ ಹೇಳಿಕೆಯನ್ನು ಮುಂದಿಟ್ಟುಕೊಂಡು, ಟಿಪ್ಪುವನ್ನು ಕೆಂಪೇಗೌಡರ ಅಭಿಮಾನಿಗಳ ವಿರುದ್ಧ ಎತ್ತಿ ಕಟ್ಟುವುದು ಅವರ ಉದ್ದೇಶವಾಗಿತ್ತು. ಟಿಪ್ಪು ಪರ-ವಿರೋಧ ಚರ್ಚೆಯನ್ನು ಕೆಂಪೇಗೌಡ-ಟಿಪ್ಪು ಚರ್ಚೆಯಾಗಿ ಪರಿವರ್ತಿಸುವ ಸಂಘಪರಿವಾರದ ಹುನ್ನಾರವಾಗಿತ್ತು.

ಕೆಂಪೇಗೌಡರ ಕಾಲಮಾನವೇ ಬೇರೆ. ಟಿಪ್ಪು ಸುಲ್ತಾನರ ಕಾಲಮಾನವೇ ಬೇರೆ. ಕೆಂಪೇಗೌಡರು ಪಾಳೆಯಗಾರರಾಗಿದ್ದು, ಅವರು ಎದುರಿಸಿದ ಸಮಾಜದ ಪರಿಸ್ಥಿತಿಯೂ ಬೇರೆಯಾಗಿತ್ತು. ಇದೇ ಸಂದರ್ಭದಲ್ಲಿ, ಟಿಪ್ಪು ಸುಲ್ತಾನ್ ನಾಡನ್ನು ಒಂದು ಗೂಡಿಸುವ ಸಂದರ್ಭದಲ್ಲಿ ದೇಶ ಬ್ರಿಟಿಷರ ಬೆಂಕಿಗೂಡಾಗಿತ್ತು. ಕೆಂಪೇಗೌಡರ ವ್ಯಕ್ತಿತ್ವವೇ ಬೇರೆ, ಟಿಪ್ಪು ಸುಲ್ತಾನರ ವ್ಯಕ್ತಿತ್ವವೇ ಬೇರೆ. ಅವುಗಳನ್ನು ಪರಸ್ಪರ ಹೋಲಿಸುವುದೇ ಅತ್ಯಂತ ಹಾಸ್ಯಾಸ್ಪದ. ಪಶ್ಚಿಮದ ಆಲೋಚನೆಗಳು,ಆಧುನಿಕ ಕಲ್ಪನೆಗಳು ಕೆಂಪೇಗೌಡರ ಕಾಲದಲ್ಲಿ ಇನ್ನೂ ಸರಿಯಾಗಿ ಕಣ್ಣು ಬಿಟ್ಟಿರಲೇ ಇಲ್ಲ. ಟಿಪ್ಪುವಿನ ಕಾಲದಲ್ಲಿ ವಸಾಹತು ಶಾಹಿ ಹೋರಾಟದ ಕಲ್ಪನೆಗಳು ನಿಧಾನಕ್ಕೆ ತೆರೆದುಕೊಳ್ಳುತ್ತಿದ್ದವು. ತನ್ನ ಹೋರಾಟಕ್ಕೆ ಬೆಂಬಲವಾಗಿ ಟಿಪ್ಪು ಸುಲ್ತಾನ್ ಫ್ರೆಂಚರ ಸ್ನೇಹವನ್ನೂ ಬಯಸಿದ್ದ. ಕೆಂಪೇಗೌಡರ ನೆಲವನ್ನು ಟಿಪ್ಪು ಇನ್ನಷು ಉದ್ದಗಲಕ್ಕೆ ಬೆಳೆಸಿದ್ದರು. ಬ್ರಿಟಿಷರಿಗೆ ಬಹುದೊಡ್ಡ ಸವಾಲಾದರು. ಟಿಪ್ಪು ವ್ಯಕ್ತಿತ್ವವನ್ನು ನೇರವಾಗಿ ಎದುರಿಸಲಾಗದ ಗೋಡ್ಸೆ ಅನುಯಾಯಿಗಳು, ಇದೀಗ ಕೆಂಪೇಗೌಡರ ಹೆಸರಿನ ಮರೆಯಲ್ಲಿ ನಿಂತು ಟಿಪ್ಪುವಿನ ವಿರುದ್ಧ ಬಾಣಗಳನ್ನು ಬಿಡುತ್ತಿದ್ದಾರೆ. ಟಿಪ್ಪುವನ್ನು ಮುಸ್ಲಿಮರ ಪ್ರತಿನಿಧಿಯಾಗಿಯೂ, ಕೆಂಪೇಗೌಡರನ್ನು ಗೌಡ ಪ್ರತಿನಿಧಿಯಾಗಿಯೂ ಪ್ರತಿಷ್ಠಾಪಿಸಲು ಈ ಹಿತಾಸಕ್ತಿಗಳು ಹವಣಿಸುತ್ತಿವೆ. ಮತ್ತು ಇದಕ್ಕಾಗಿಯೇ ಕಾರ್ನಾಡ್ ಮಾತುಗಳನ್ನು ತಮಗೆ ಪೂರಕವಾಗುವಂತೆ ವಿರೂಪಗೊಳಿಸಿವೆ. ದೇವನಹಳ್ಳಿಗೆ ಕೆಂಪೇಗೌಡರ ಹೆಸರನ್ನಿಡಲಿ, ಟಿಪ್ಪುವಿನ ಹೆಸರನ್ನಿಡಲಿ ಆದುದರಿಂದ ಕೆಂಪೇಗೌಡರ ವ್ಯಕ್ತಿತ್ವದಲ್ಲಾಗಲಿ, ಟಿಪ್ಪು ಸುಲ್ತಾನರ ವ್ಯಕ್ತಿತ್ವದಲ್ಲಾಗಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

ಅವರನ್ನು ಗೌರವಿಸುವ ಮೂಲಕ ನಾವು ನಮ್ಮ ಇತಿಹಾಸವನ್ನು, ಪರಂಪರೆಯನ್ನು ಗೌರವಿಸಿಕೊಂಡಂತಾಗುತ್ತದೆಯಷ್ಟೇ. ಈ ಹಿನ್ನೆಲೆಯಲ್ಲಿ ದೇವನಹಳ್ಳಿ ವಿಮಾನನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಪ್ರತಿಷ್ಠಾಪಿಸಿದ್ದು ಹೆಮ್ಮೆಯ ವಿಷಯವೇ ಸರಿ. ಇದೇ ಸಂದರ್ಭದಲ್ಲಿ ಟಿಪ್ಪು ಹೆಸರು ವಿಮಾನ ನಿಲ್ದಾಣಕ್ಕೆ ನೀಡದೆ ಇರುವುದಿಂದ ಟಿಪ್ಪುವಿನ ವ್ಯಕ್ತಿತ್ವಕ್ಕೆ ಯಾವ ಧಕ್ಕೆಯೂ ಆಗಿಲ್ಲ. ಆತ ಈ ನಾಡಿಗಾಗಿ ಮಾಡಿದ ತ್ಯಾಗ, ಬಲಿದಾನ, ದಲಿತರಿಗಾಗಿ, ರೈತರಿಗಾಗಿ ಮಾಡಿದ ಕೆಲಸಗಳು ದಾಖಲೆಯ ರೂಪದಲ್ಲಿ ಇನ್ನೂ ನಮ್ಮ ಮುಂದಿವೆ. ಅದನ್ನು ಅಳಿಸಲು ಸಂಘಪರಿವಾರ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗುತ್ತಲೇ ಬಂದಿವೆ. ಒಬ್ಬ ಸಾಮಾನ್ಯ ಪ್ರಜೆಯಾಗಿ, ನಾಡಿನ ಹಿರಿಯ ಲೇಖಕರಾಗಿ ಕಾರ್ನಾಡ್‌ಗೆ ತಮ್ಮ ಅಭಿಪ್ರಾಯವನ್ನು ಹೇಳುವ ಎಲ್ಲ ಹಕ್ಕುಗಳೂ ಇವೆ. ಅವರೇನೂ ತಮ್ಮ ಅಭಿಪ್ರಾಯವನ್ನು ಸಂಘಪರಿವಾರದಂತೆ ಯಾರ ಮೇಲೂ ಬಲವಂತಾಗಿ ಹೇರಿಲ್ಲ. ಅವರ ಅಭಿಪ್ರಾಯವನ್ನು ನಾವು ಒಪ್ಪಿಕೊಳ್ಳುವ ಅಗತ್ಯವೂ ಇಲ್ಲ. ಆದರೆ ಅವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳನ್ನು ನಾವು ಮಾನ್ಯ ಮಾಡಬೇಕಾಗುತ್ತದೆ. ಈ ಕಾರಣದಿಂದಲೇ ತಮ್ಮ ಹೇಳಿಕೆಗಾಗಿ ಕಾರ್ನಾಡ್ ಕ್ಷಮೆಯಾಚಿಸುವ ಅಗತ್ಯವಿದ್ದಿರಲಿಲ್ಲ. ಈ ದೇಶದಲ್ಲಿ ಅಸಹಿಷ್ಣುತೆ ಯಾವ ಮಟ್ಟದಲ್ಲಿದೆ ಎನ್ನುವುದಕ್ಕೆ ಕಾರ್ನಾಡ್‌ರನ್ನು ಕ್ಷವೆುಯಾಚನೆಯೇ ಸಾಕ್ಷಿಯಾಗಿದೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...