Friday, November 06, 2015

ಹಾಯ್‌! ನಾನು ಪ್ರಶಸ್ತಿ ಮರಳಿಸುತ್ತಿದ್ದೇನೆಅರುಂಧತಿ ರಾಯ್‌

ಪ್ರಜಾವಾಣಿ


ಪ್ರಶಸ್ತಿಗಳು ನಾವು ಮಾಡುವ ಕೆಲಸಗಳ ಬೆಲೆಕಟ್ಟುವಿಕೆ ಎಂದು ನಾನು ನಂಬದೇ ಹೋದರೂ, ಹಿಂದಿರುಗಿಸಿದ ಪ್ರಶಸ್ತಿಗಳ ರಾಶಿಗೆ 1989ರಲ್ಲಿ ಅತ್ಯುತ್ತಮ ಚಿತ್ರಕತೆಗಾಗಿ ನಾನು ಪಡೆದ ರಾಷ್ಟ್ರಪ್ರಶಸ್ತಿಯನ್ನು ಸೇರಿಸಲು ಬಯಸುತ್ತೇನೆ. ‘ಹೆಚ್ಚುತ್ತಿರುವ ಅಸಹಿಷ್ಣುತೆ’ಯನ್ನು ಈಗಿನ ಸರ್ಕಾರ ಪೊರೆಯುತ್ತಿದೆ ಎಂಬುದರಿಂದ ‘ಆಘಾತ’ಗೊಂಡು ಪ್ರಶಸ್ತಿ ಹಿಂದಿರುಗಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಲೂ ನಾನು ಬಯಸುತ್ತೇನೆ.

ಮೊದಲನೆಯದಾಗಿ, ಹತ್ಯೆ, ಗುಂಡು ಹಾರಿಸುವಿಕೆ, ಸುಡುವುದು ಮತ್ತು ಸಹಜೀವಿಗಳ ನರಮೇಧಗಳಿಗೆ ‘ಅಸಹಿಷ್ಣುತೆ’ ಎಂಬ ಪದವನ್ನು ಬಳಸುವುದು ಸರಿಯಲ್ಲ. ಎರಡನೆಯದಾಗಿ, ಮುಂದೇನು ಕಾದಿದೆ ಎಂಬ ಬಗ್ಗೆ ಸಾಕಷ್ಟು ಮೊದಲೇ ನಮಗೆಲ್ಲ  ಸೂಚನೆ ಇತ್ತು.  ಹಾಗಾಗಿ ಜನ ಹುಮ್ಮಸ್ಸಿನಿಂದ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ತಂದ ಈ ಸರ್ಕಾರ ಬಂದ ನಂತರ ಏನಾಗಿದೆಯೋ ಅದರ ಬಗ್ಗೆ ನನಗೆ ಆಘಾತವಾಗಿದೆ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ.

ಮೂರನೆಯದಾಗಿ, ಈ ಭಯಾನಕ ಹತ್ಯೆಗಳು  ಇನ್ನಷ್ಟು ತೀವ್ರ ಅಸ್ವಸ್ಥತೆಯ ಲಕ್ಷಣಗಳು. ಜೀವಿಸಿರುವವರಿಗೂ ಜೀವನ ನರಕವೇ ಆಗಿದೆ. ಇಡೀ ಜನ ಸಮುದಾಯ– ಲಕ್ಷಾಂತರ ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಕ್ರೈಸ್ತರು ಭೀತಿಯಲ್ಲಿಯೇ ಬದುಕುವಂತೆ ಮಾಡಲಾಗಿದೆ. ಎಲ್ಲಿಂದ ಮತ್ತು ಯಾವಾಗ ತಮ್ಮ ಮೇಲೆ ದಾಳಿಯಾಗಬಹುದು ಎಂಬ ಬಗ್ಗೆ ಅವರಿಗೆ ಸುಳಿವೇ ಇರುವುದಿಲ್ಲ.

ಇಂದು, ‘ಹೊಸ ವ್ಯವಸ್ಥೆ’ಯ ಪಾತಕಿಗಳು ಮತ್ತು ಆಡಳಿತ ಪಕ್ಷದ ಗೂಂಡಾಗಳು ‘ಅಕ್ರಮ ಹತ್ಯೆ’ಯ ಬಗ್ಗೆ ಮಾತನಾಡುತ್ತಿರುವ ದೇಶವೊಂದರಲ್ಲಿ ನಾವು ಜೀವಿಸುತ್ತಿದ್ದೇವೆ. ಅವರು ಮಾತನಾಡುತ್ತಿರುವುದು ಹತ್ಯೆಯಾದ ಕಾಲ್ಪನಿಕ ಗೋವಿನ ಬಗ್ಗೆಯೇ ಹೊರತು ಕಗ್ಗೊಲೆಯಾದ ನಿಜವಾದ ಮನುಷ್ಯನ ಬಗ್ಗೆ ಅಲ್ಲ. ಅಪರಾಧ ಸ್ಥಳದಿಂದ ‘ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪುರಾವೆಗಳನ್ನು’ ಒಯ್ಯುವುದು ಎಂದು ಅವರು ಹೇಳಿದರೆ, ಅದರ ಅರ್ಥ ಫ್ರಿಡ್ಜ್‌ನಲ್ಲಿರುವ ಆಹಾರವೇ ಹೊರತು ಹೊಡೆತ ತಿಂದು ಸತ್ತಿರುವ ವ್ಯಕ್ತಿಯ ದೇಹ ಅಲ್ಲ.

‘ಪ್ರಗತಿ’ ಹೊಂದಿದ್ದೇವೆ ಎಂದು ನಾವು ಹೇಳುತ್ತೇವೆ. ಆದರೆ, ‘ಅಸ್ಪೃಶ್ಯರಿಗೆ ಹಿಂದೂ ಧರ್ಮ ಒಂದು ಭೀತಿಯ ಮನೆ’ ಎಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಹೇಳಿದಂತೆ, ಈಗ  ದಲಿತರ ಹತ್ಯೆ ಮತ್ತು ಅವರ ಮಕ್ಕಳ ಸಜೀವ ದಹನ ನಡೆಯುತ್ತಿರುವಾಗ ಏಟು, ಹತ್ಯೆ, ಗುಂಡಿನ ದಾಳಿಗೆ ಒಳಗಾಗದೆ ಅಥವಾ ಜೈಲುಪಾಲಾಗದೆ ಮುಕ್ತವಾಗಿ ಹೇಳುವುದಕ್ಕೆ ಯಾವ ಸಾಹಿತಿಗೆ ಸಾಧ್ಯವಿದೆ? ‘ಲೆಟರ್ಸ್‌ ಟು ಅಂಕಲ್‌ ಸ್ಯಾಮ್‌’ನಲ್ಲಿ ಸಾದಾತ್‌ ಹಸನ್ ಮಾಂಟೊ ಬರೆದಂತೆ ಬರೆಯಲು ಈಗ ಯಾವ ಲೇಖಕನಿಗೆ ಸಾಧ್ಯವಿದೆ? ಹೇಳುತ್ತಿರುವ ವಿಚಾರವನ್ನು ನಾವು ಒಪ್ಪುತ್ತೇವೆಯೋ ಇಲ್ಲವೋ ಎಂಬುದು ದೊಡ್ಡ ವಿಷಯವಲ್ಲ.
ಮುಕ್ತವಾಗಿ ಮಾತನಾಡುವ ಹಕ್ಕು ಇಲ್ಲದೇ ಹೋದರೆ ನಾವು ಬೌದ್ಧಿಕ ಅಪೌಷ್ಟಿಕತೆಯಿಂದ (ಇಂಟಲೆಕ್ಚುವಲ್‌ ಮಾಲ್‌ನ್ಯೂಟ್ರೀಷನ್‌) ಬಳಲುವ ಸಮಾಜವಾಗುತ್ತೇವೆ. ಅಂದರೆ ಮೂರ್ಖರ ದೇಶ. ಅದರತ್ತ ಓಡುವ ಸ್ಪರ್ಧೆ ಈಗ ಇಡೀ ಉಪಖಂಡದಲ್ಲಿ ಆರಂಭವಾಗಿದೆ. ‘ಹೊಸ ಭಾರತ’ ಕೂಡ ಅತ್ಯುತ್ಸಾಹದಲ್ಲಿ ಅದರಲ್ಲಿ ಭಾಗಿಯಾಗಿದೆ.  ಇಲ್ಲಿಯೂ ಸಹ ಸೆನ್ಸಾರ್‌ಷಿಪ್‌ ಕೆಲಸವನ್ನು ಜನಜಂಗುಳಿಗೆ ಹೊರಗುತ್ತಿಗೆ ನೀಡಲಾಗಿದೆ.

ಹಿಂದಿರುಗಿಸಲು ನನ್ನಲ್ಲೂ ಒಂದು ಪ್ರಶಸ್ತಿ ಇದೆ (ಬಹಳ ಹಿಂದೆ ನನ್ನ ಭೂತಕಾಲದಲ್ಲಿ ದೊರೆತದ್ದು) ಎಂಬುದು ತಿಳಿದಾಗ ಅತೀವ ಸಂತಸವಾಯಿತು. ಯಾಕೆಂದರೆ ಇದರಿಂದಾಗಿ ಈ ದೇಶದ ಲೇಖಕರು, ಸಿನಿಮಾ ನಿರ್ದೇಶಕರು, ಚಿಂತಕರು ಸೇರಿಕೊಂಡು ಒಂದು ರೀತಿಯ ಸೈದ್ಧಾಂತಿಕ ದುರಾಚಾರದ ವಿರುದ್ಧ ಮತ್ತು ನಮ್ಮ ಸಾಮೂಹಿಕ ವಿವೇಕದ ಮೇಲೆ ನಡೆದ ದಾಳಿಯ ವಿರುದ್ಧ ಸೆಟೆದು ನಿಂತು ನಡೆಸಿರುವ ರಾಜಕೀಯ ಚಳವಳಿಯೊಂದರ ಭಾಗವಾಗಲು ನನಗೂ ಸಾಧ್ಯವಾಯಿತು.
ಕಲಾವಿದರು ಮತ್ತು ಚಿಂತಕರು ಈಗ ಏನು ಮಾಡುತ್ತಿದ್ದಾರೋ ಅದು ಅಭೂತಪೂರ್ವ. ಇತಿಹಾಸದಲ್ಲಿ ಅದಕ್ಕೆ ಸಮಾನಾಂತರವಾದ ಬೇರೊಂದು ಚಳವಳಿಯೇ ಇಲ್ಲ ಎಂದು ನಾನು ನಂಬಿದ್ದೇನೆ. ಇದು ಇನ್ನೊಂದು ಬಗೆಯ ರಾಜಕಾರಣ. ಇದರ ಭಾಗವಾಗಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ. ಇಂದು ಈ ದೇಶದಲ್ಲಿ ಏನಾಗುತ್ತಿದೆಯೋ ಅದರ ಬಗ್ಗೆ ನನಗೆ ಅಪಾರ ನಾಚಿಕೆಯೂ ಇದೆ.

ಕೊನೆಮಾತು: ದಾಖಲೆಗಾಗಿ ಹೇಳುತ್ತಿದ್ದೇನೆ. 2005ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ನಾನು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನಿರಾಕರಿಸಿದ್ದೆ. ಹಾಗಾಗಿ ದಯವಿಟ್ಟು ಕಾಂಗ್ರೆಸ್‌–ಬಿಜೆಪಿ ನಡುವಣ ಸಂಘರ್ಷ ಎಂಬ ವಾದದಲ್ಲಿ ನನ್ನನ್ನು ಸೇರಿಸಬೇಡಿ.  ಈಗಿನ ಪರಿಸ್ಥಿತಿ ಅದೆಲ್ಲವನ್ನೂ ಮೀರಿ ಬಹು ದೂರ ಸಾಗಿದೆ.
*
ಅರುಂಧತಿ ರಾಯ್‌ ಇದು ‘ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ಪ್ರಕಟವಾದ ಅರುಂಧತಿ ರಾಯ್‌ ಅವರ ಲೇಖನದ ಪೂರ್ಣಪಾಠ. ಅವರು ‘ಗಾಡ್‌ ಆಫ್‌ ಸ್ಮಾಲ್‌ ಥಿಂಗ್ಸ್‌’ ಕೃತಿಯ ಲೇಖಕಿ. ‘ಬ್ರೋಕನ್‌ ರಿಪಬ್ಲಿಕ್‌’ ಅವರ ಇತ್ತೀಚಿನ ಪುಸ್ತಕ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...