Monday, November 09, 2015

ಅಖಂಡ ಭಾರತ ಮತ್ತು ಮೌಲಾನ ಅಬುಲ್ ಕಲಾಂ ಆಝಾದ್
ಅಬ್ದುಲ್ ರಝಾಕ್ ಅನಂತಾಡಿ
ವಾರ್ತಾಭಾರತಿ 


 


ನವೆಂಬರ್ 11, ಭಾರತದ ಮೊದಲ ಶಿಕ್ಷಣ ಸಚಿವರಾದ ಮೌಲಾನ ಅಬುಲ್ ಕಲಾಂ ಆಝಾದ್ ಅವರ ಜನ್ಮ ದಿನ. ದೇಶದಾದ್ಯಂತ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಾಗಿ ಮೌಲಾನ ಅಬುಲ್ ಕಲಾಂ ಅವರ ಜನ್ಮ ದಿನವನ್ನು ಆಚರಿಸುತ್ತಿರು ವುದು ಅರ್ಥ ಪೂರ್ಣವಾದುದು. ಈ ದಿನಾಚರಣೆಯ ಹೊರತಾಗಿಯೂ ಅಬುಲ್ ಕಲಾಂ ಅವರ ವ್ಯಕ್ತಿತ್ವ, ಸಾಧನೆ, ತತ್ವ ಸಿದ್ಧಾಂತಗಳು, ದೇಶದ ಅಖಂಡತೆಗಾಗಿ ಕೊನೆಯ ಕ್ಷಣದವರೆಗೂ ನಡೆಸಿದ ಹೋರಾಟ ಹಿಂದಿನ ಪೀಳಿಗೆಗೆ ಅಪರಿಚಿತವಾಗಿಯೇ ಉಳಿದಿದೆ.


ಮೌಲಾನಾ ಅಬುಲ್ ಕಲಾಂ ಅವರು 1888ನೆ ನವೆಂಬರ್ 11ರಂದು ಸೌದಿ ಅರೇಬಿಯಾದ ಮಕ್ಕಾದಲ್ಲಿ ಜನಿಸಿದರು. ತಂದೆ ಮೌಲಾನ ಖೈರುದ್ದೀನ್ ಮತ್ತು ತಾಯಿ ಅಲಿಯಾ. ಬಾಲ್ಯದಲ್ಲಿ ಅರೇಬಿಕ್ ಹಾಗೂ ಇಸ್ಲಾಮ್ ಧರ್ಮದ ಶಿಕ್ಷಣವನ್ನು ಪಡೆದರು. ಮುಂದೆ ‘ಆಝಾದ್’ ಎಂಬ ಕಾವ್ಯ ನಾಮದಿಂದ ಲೇಖಕರಾಗಿ ಅಬುಲ್ ಕಲಾಂ ಆಝಾದ್ ಎಂದೇ ಚಿರಪರಿಚಿತರಾದರು. ಎಳವೆಯಲ್ಲಿಯೇ ಜಾಣರೂ, ಶಿಸ್ತಿನ ಸಿಪಾಯಿಯೂ ಆಗಿದ್ದ ಅಬುಲ್ ಕಲಾಂ ಬಡವರನ್ನು ಕಂಡರೆ ಮಿಡಿಯುತ್ತಿದ್ದರು. ಬಾಲ್ಯದಲ್ಲಿಯೇ ಗಂಭೀರವಾದ ಆಟಗಳನ್ನು ಆಡುತ್ತಿದ್ದ, ಉದಾರತೆಯನ್ನು ಮೆರೆಯುತ್ತಿದ್ದ ಕಲಾಂ ಅವರು ಭವಿಷ್ಯದ ನಾಯಕನ ಲಕ್ಷಣಗಳನ್ನು ಚಿಕ್ಕಂದಿನಲ್ಲಿಯೇ ರೂಢಿಸಿಕೊಂಡಿದ್ದರು. ಮಕ್ಕಾದಿಂದ ವಲಸೆ ಬಂದ ಆಝಾದರ ಕುಟುಂಬ ಕಲ್ಕತ್ತಾದಲ್ಲಿ ಬಂದು ನೆಲೆಸಿತು. ಕಲ್ಕತ್ತಾದಲ್ಲಿ ಉರ್ದು ಭಾಷೆಯನ್ನು ಕಲಿತು ಪರಿಣತಿ ಯನ್ನು ಪಡೆದರು. ಝುಲೇಖಾ ಬೇಗಂ ಎಂಬವರೊಡನೆ ಸಣ್ಣ ಪ್ರಾಯದಲ್ಲಿಯೇ ವಿವಾಹ ಬಂಧನಕ್ಕೊಳಗಾದ ಆಝಾದ್ ಪತ್ನಿಯೊಡನೆ ಕಾಲ ಕಳೆದದ್ದಕ್ಕಿಂತ ದೇಶಕ್ಕಾಗಿನ ಹೋರಾಟದಲ್ಲೇ ಹೆಚ್ಚು ಸಮಯ ಕಳೆದರು. ಝುಲೇಖಾ ಬೇಗಂ ತನ್ನ ಕೌಟುಂಬಿಕ ಬದುಕನ್ನು ತನ್ನ ಪತಿಯ ದೇಶ ಸೇವೆಯ ಉದ್ದೇಶಕ್ಕಾಗಿ ತ್ಯಾಗ ಮಾಡಿದ ಮಹಿಳೆ. ವೌಲಾನ ಆಝಾದರದ್ದು ಧಾರ್ಮಿಕ ಶಿಷ್ಟಾಚಾರದಿಂದ ಕೂಡಿದ ಪ್ರಗತಿಪರ ನಿಲುವಾಗಿತ್ತು. ದೇವಭಯವನ್ನು ಹೊಂದಿದ್ದು, ಮೌಢ್ಯಾಚರಣೆಗಳಿಗೆ ವಿರುದ್ಧವಾಗಿದ್ದರು. ಜನರು ತಮ್ಮ ಕಾಲಿಗೆ ಬೀಳಲು ಬಂದರೆ ತೀವ್ರ ಕೋಪಗೊಳ್ಳುತ್ತಿದ್ದರು. ಮುಹರ್ರಂ ಹೆಸರಿನಲ್ಲಿ ನಡೆಯುತ್ತಿದ್ದ ಕೆಲವು ಆಚರಣೆಗಳನ್ನು ವಿರೋಧಿಸಿ ಪತ್ರಿಕೆಗಳಿಗೆ ಪ್ರಗತಿಪರವಾದ ಲೇಖನ ಗಳನ್ನು ಬರೆಯುತ್ತಿದ್ದರು. ಇದರಿಂದ ಒಂದು ವರ್ಗದ ವಿರೋಧವನ್ನು ಕಟ್ಟಿಕೊಂಡರೂ ಕೂಡಾ ತನ್ನ ನಿಲುವಿನಿಂದ ಹಿಂದೆ ಸರಿಯದ ಅಚಲವಾದ ವ್ಯಕ್ತಿತ್ವ ಮೌಲಾನ ಅಬುಲ್ ಕಲಾಂ ಆಝಾದರದ್ದಾಗಿತ್ತು. ಅರೇಬಿಕ್, ಪರ್ಷಿಯನ್, ತುರ್ಕಿ, ಉರ್ದು ಭಾಷೆಗಳಲ್ಲಿ ಪರಿಣತಿಯನ್ನು ಪಡೆದಿದ್ದ ಆಝಾದರು ಅನೇಕ ಪತ್ರಿಕೆಗಳನ್ನು ಹೊರತಂದರು. ತನ್ನ ಭಾಷಣ, ಲೇಖನ, ಆಚಾರ-ವಿಚಾರಗಳಲ್ಲಿ ಇಸ್ಲಾಮಿನ ತಾತ್ವಿಕ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದ ಆಝಾದರು ಸ್ವಾತಂತ್ರ್ಯ ಮತ್ತು ಹಿಂದೂ-ಮುಸ್ಲಿಮ್ ಐಕ್ಯತೆಯ ಬಗ್ಗೆ ವಿಶಾಲ ದೃಷ್ಟಿಕೋನವನ್ನು ಹೊಂದಿ ದ್ದರು. ಆಝಾದರ ಜನಪ್ರಿಯ ಪತ್ರಿಕೆ ಅಲ್-ಹಿಲಾಲ್ ಭಾರತದ ಶ್ರೇಷ್ಠ ವ್ಯಕ್ತಿತ್ವಗಳಾಗಿದ್ದ ನೆಹರೂ, ಝಾಕಿರ್ ಹುಸೈನ್‌ರವರ ಮೇಲೆ ಗಾಢ ಪ್ರಭಾವ ಬೀರಿತ್ತು. ಅಸಹಕಾರ ಚಳವಳಿ ಆರಂಭವಾದ ಸಮಯದಲ್ಲಿ ಗಾಂಧೀಜಿಯವರಿಗೆ ನಿಕಟವಾದ ಆಝಾದರು ಭಾರತೀಯ ಕಾಂಗ್ರೆಸ್‌ನ ಬಗ್ಗೆ ಮುಸ್ಲಿಮರಿಗೆ ಇದ್ದ ಅನುಮಾನಗಳನ್ನು ದೂರ ಮಾಡಲು ಶ್ರಮಿಸಿದರು.
 
  
  ಅಸಹಕಾರ ಚಳವಳಿಯಲ್ಲಿ ಗಾಂಧೀಜಿಯವರ ಜೊತೆ ಮುಂಚೂಣಿಯಲ್ಲಿ ನಿಂತು ಜನರನ್ನು ಸಂಘಟಿ ಸಿದ ಆಝಾದರು ಇದೇ ಕಾರಣಕ್ಕೆ ಬ್ರಿಟಿಷರಿಂದ ಬಂಧಿಸಲ್ಪಟ್ಟರು. ಸೆರೆಮನೆಯಲ್ಲಿದ್ದುಕೊಂಡೇ ಪತ್ರಗಳ ಮೂಲಕ ಜನರನ್ನು ಪ್ರೇರೇಪಿಸುತ್ತಿದ್ದ ಮೌಲಾನ ಆಝಾದರು ಬ್ರಿಟಿಷರ ಮುಂದೆ ಎಂದೂ ಅಂಗಲಾಚಲಿಲ್ಲ. ಶಿಕ್ಷೆಯ ತೀರ್ಪನ್ನು ಪ್ರಕಟಿಸುವಾಗಲೂ ಒಂದಿನಿತೂ ಅಳುಕದೆ ಧೈರ್ಯವನ್ನು ಪ್ರದರ್ಶಿಸುತ್ತಿದ್ದ ಆಝಾದರು ಸತ್ಯಕ್ಕಾಗಿ ಹೋರಾಡುವವರಿಗೆ ಅಂತಿಮ ಜಯ ಸಿಕ್ಕಿಯೇ ಸಿಗುತ್ತದೆ ಎಂಬ ಇಸ್ಲಾಮಿನ ತತ್ವವನ್ನು ಅಕ್ಷರಶಃ ಮೈಗೂಡಿಸಿಕೊಂಡಿದ್ದರು. ಹಿಂದೂ-ಮುಸ್ಲಿಮ್ ಐಕ್ಯತೆಯನ್ನು ಸದಾ ಒತ್ತಿ ಹೇಳುತ್ತಿದ್ದ ಆಝಾದರಿಗೆ ಅವರ ಪತ್ನಿ ಸದಾ ಬೆಂಬಲ ನೀಡುತ್ತಿದ್ದರು. ಹೋರಾಟದಲ್ಲಿ ನಾನೂ ಕೂಡಾ ಭಾಗಿಯಾಗುತ್ತೇನೆಂಬ ಝುಲೇಖ ಬೇಗಂರ ಅಚಲ ಬೆಂಬಲ ಆಝಾದರಿಗೆ ದೇಶಕ್ಕಾಗಿನ ಹೋರಾಟದಲ್ಲಿ ಮತ್ತಷ್ಟು ಶಕ್ತಿಯನ್ನು ನೀಡಿತ್ತು. ಶಾಂತಿಯುತವಾಗಿ ನಡೆಯುತ್ತಿದ್ದ ಅಸಹಕಾರ ಚಳವಳಿ 1922ರಲ್ಲಿ ಉತ್ತರ ಪ್ರದೇಶದ ಚೌರಿ ಚೌರ ಎಂಬಲ್ಲಿ ಹಿಂಸೆಗೆ ತಿರುಗಿದಾಗ ಶಾಂತಿಗಾಗಿ ಕರೆ ನೀಡಿ ಹಿಂಸೆಯನ್ನು ವಿರೋಧಿಸಿದರು. ಕಾಂಗ್ರೆಸ್ ಒಡೆದು, ಸ್ವರಾಜ ಪಕ್ಷ ರಚನೆಯಾದಾಗ ತೀವ್ರ ಬೇಸರಗೊಂಡಿದ್ದ ಆಝಾದರು ಕಾಂಗ್ರೆಸಿನ ಏಕತೆಯನ್ನು ಪ್ರಬಲವಾಗಿ ಪ್ರತಿಪಾದಿಸಿ, ಒಡೆದು ಹೋದ ಗುಂಪಿನ ಮನವೊಲಿಸುವಲ್ಲಿ ಯಶಸ್ವಿಯಾದರು ಮತ್ತು 1923ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಅವರಿಗೆ ಕೇವಲ 35 ವರ್ಷ ವಯಸ್ಸು ಎಂಬುವುದು ಗಮನಾರ್ಹ. ಆಗಲೇ ಹಿಂದೂ-ಮುಸ್ಲಿಮರಲ್ಲಿ ಮತೀಯವಾದ ಬೆಳೆಯುತ್ತಿರುವುದನ್ನು ಮನಗಂಡ ಆಝಾದರು ಭಾರತಕ್ಕೆ ಬೇಕಾಗಿರುವುದು ಹಿಂದೂ ಯಾ ಮುಸ್ಲಿಮ್ ಮತೀಯ ಶಕ್ತಿಗಳಲ್ಲ, ಹಿಂದು-ಮುಸ್ಲಿಮರು ಒಗ್ಗಟ್ಟಾಗಿದ್ದರೆ 24 ಗಂಟೆಯೊಳಗೆ ಸ್ವರಾಜ್ಯ ಗಳಿಸಬಹುದು ಎಂದು ಕರೆ ನೀಡಿದರು. ಬದುಕಿನುದ್ದಕ್ಕೂ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಪ್ರತಿಪಾದಿಸುತ್ತಾ, ಈ ಎರಡೂ ಧರ್ಮೀಯರ ಭಾಗವಹಿಸುವಿಕೆಯ ಮೂಲಕ, ಎರಡೂ ಧರ್ಮೀಯರನ್ನು ಪರಸ್ಪರ ಬೆಸೆಯುವ ವೇದಿಕೆಯಾಗಿ ರಾಷ್ಟ್ರೀಯ ಕಾಂಗ್ರೇಸನ್ನು ಪರಿವರ್ತಿಸಲು ಶ್ರಮಿಸಿದರು. ಜಿನ್ನಾ ಮತ್ತು ಅವರ ಸಹವರ್ತಿಗಳು ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದಾಗಲೆಲ್ಲಾ ಮೌಲಾನ ಆಝಾದರು ಸಾಕ್ಷ್ಯಾಧಾರಗಳ ಮೂಲಕ ಅದನ್ನು ಅಲ್ಲಗಳೆಯುತ್ತಿದ್ದರು. ಕಾಂಗ್ರೆಸ್‌ನ ಒಳಗಿದ್ದು, ಮುಸ್ಲಿಮರಿಗೆ ನ್ಯಾಯೋಚಿತವಾಗಿ ಸಲ್ಲಬೇಕಾದ ಹಕ್ಕುಗಳ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಹೊರಗಿದ್ದು ಮುಸ್ಲಿಮರಿಗೆ ಕಾಂಗ್ರೆಸ್‌ನ ತಾತ್ವಿಕ ಸಿದ್ಧಾಂತಗಳನ್ನು ಮನವರಿಕೆ ಮಾಡಿ, ಒಂದೇ ವೇದಿಕೆಯಡಿ ಹಿಂದೂ-ಮುಸ್ಲಿಮರು ಒಂದಾಗುವಂತೆ ಮಾಡಲು ಅಪಾರವಾಗಿ ಶ್ರಮಿಸಿದರು. ಎಲ್ಲಿ ಹಿಂದೂ-ಮುಸ್ಲಿಮರು ಪರಸ್ಪರ ಪ್ರತ್ಯೇಕತೆಯ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೋ ಎಂಬ ಆತಂಕ ಅವರ ಜೀವನದುದ್ದಕ್ಕೂ ಕಾಡಿದ್ದನ್ನು ಅವರ ಪ್ರತೀ ನಡೆಯಲ್ಲಿಯೂ ಕಾಣಬಹುದಿತ್ತು. ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿನ ಏರು ತಗ್ಗುಗಳನ್ನು ಭಾರತೀಯರು ಸಂಶಯದಿಂದ ಕಾಣದಂತೆ ಜನರನ್ನು ಎಚ್ಚರಿಸುತ್ತಿದ್ದರು.


ಸ್ವಾತಂತ್ರ ಹೋರಾಟದಲ್ಲಿದ್ದ ಹಿಂದೂ-ಮುಸ್ಲಿಮರ ನಡುವೆ ಬಿರುಕು ಉಂಟಾಗಬೇಕೆಂದು ಬ್ರಿಟಿಷರು ಬಯಸಿದ್ದರು. ಹೋರಾಟದ ವೇಗ ನಿಯಂತ್ರಣವಾಗಬೇಕಾದರೆ ಮತೀಯವಾದ ಬೆಳೆಯಬೇಕೆಂಬ ಬ್ರಿಟಿಷರ ಅಂತರಂಗವನ್ನು ಬಹಳ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದ ಆಝಾದರು ಮತೀಯವಾದವನ್ನು ನಿವಾರಿಸಲು, ತಮ್ಮ ಲೇಖನ- ಭಾಷಣಗಳನ್ನು ಮುಡುಪಾಗಿಟ್ಟರು. ಅವರು ಜನರನ್ನು ಸಂಘಟಿಸಲು ಹೋದಲ್ಲೆಲ್ಲ್ಲಾ ಒಗ್ಗಟ್ಟು, ಶಿಸ್ತು, ನಾಯಕತ್ವವೆಂಬ 3 ಮಂತ್ರಗಳನ್ನು ಜಪಿಸುತ್ತಿದ್ದರು. ಮುಸ್ಲಿಮರು ಕಾಂಗ್ರೆಸ್ಸಿನ ತತ್ವಗಳಿಂದ ದೂರ ಸರಿಯದಂತೆ, ಕಾಂಗ್ರೆಸ್ ಮುಸ್ಲಿಮರನ್ನು ಕಡೆಗಣಿಸಿದೆ ಎಂಬ ಭಾವನೆ ಬಾರದಂತೆ ನೋಡಿಕೊಳ್ಳುವ ಸವಾಲು ಆಝಾದರದ್ದಾಗಿತ್ತು. ಇಷ್ಟೊಂದು ಪ್ರಬಲವಾಗಿ ಹಿಂದೂ-ಮುಸ್ಲಿಮ್ ಐಕ್ಯತೆಯನ್ನು, ಕಾಂಗ್ರೆಸಿನೊಂದಿಗೆ ನಿಷ್ಠೆಯನ್ನು ಅವರು ವ್ಯಕ್ತಪಡಿಸಲು ಕಾರಣ, ಈ ದೇಶದ ಅಖಂಡತೆಯಾಗಿತ್ತು. ಮುಸ್ಲಿಮ್‌ಲೀಗ್‌ನ ಬೇಡಿಕೆಗಳಿಗೆ ವಿರುದ್ಧವಾಗಿದ್ದ ಆಝಾದರು ಮತ್ತೆ ಕಾಂಗ್ರೆಸ್‌ನೊಂದಿಗೆ ಲೀಗನ್ನು ವಿಲೀನಗೊಳಿಸಲು ಸಾಕಷ್ಟು ಶ್ರಮಿಸಿದರು. ಆದರೆ ಅವರ ಪ್ರಯತ್ನ ಫಲ ಕೊಡಲಿಲ್ಲ. ಜಿನ್ನಾರವರು ಈ ಬೇಡಿಕೆಯನ್ನು ಸಾರಾಸಾಗಟಾಗಿ ತಿರಸ್ಕರಿಸಿದರು. ಸ್ವಾತಂತ್ರ ಹೋರಾಟದ ಹಾದಿಯಲ್ಲಿ ಪತ್ನಿಯನ್ನು ಕಳೆದುಕೊಂಡರೂ, ಅಹ್ಮದ್ ನಗರದ ಸೆರೆ ಮನೆಯಲ್ಲಿ 3 ವರ್ಷ ಒಬ್ಬಂಟಿಯಾಗಿ ಕಳೆದರೂ ಆಝಾದರ ಹೋರಾಟದ ಕಿಚ್ಚು ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ಅಖಂಡ ಭಾರತವನ್ನು ಎ.ಬಿ.ಸಿ ವಲಯಗಳಾಗಿ ವಿಂಗಡಿಸಿ, ರಾಷ್ಟ್ರವನ್ನು ವಿಭಾಗಿಸುವ ಬೇಡಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸುವಲ್ಲಿ ಆಝಾದರ ಪ್ರಯತ್ನ ಅಪಾರವಾಗಿತ್ತು. ಪುನಃ ಕಾಂಗ್ರೆಸ್-ಮುಸ್ಲಿಮ್ ಲೀಗ್ ನಡುವೆ ಬಿರುಕು ಉಂಟಾಗಿ ಮುಸ್ಲಿಂ ಲೀಗ್ ನೇರ ಕಾರ್ಯಾಚರಣೆಯನ್ನು ಘೋಷಿಸಿದ ಪರಿಣಾಮ ಗಲಭೆ ಸ್ಫೋಟಿಸಿತು. ಈ ರಕ್ತಪಾತವನ್ನು ಕಂಡ ಕಾಂಗ್ರೆಸಿನ ಕೆಲವು ನಾಯಕರು ದೇಶವಿಭಜನೆಯಿಂದ ಮತೀಯ ಸಮಸ್ಯೆ ಬಗೆಹರಿಯಬಹುದೆಂದು ಭಾವಿಸಿದರು. ಲಾರ್ಡ್ ಮೌಂಟ್ ಬ್ಯಾಟನ್ ಅವರು ನೆಹರೂ ಮತ್ತಿತರ ನಾಯಕರಿಗೆ ದೇಶ ವಿಭಜನೆಯೊಂದೇ ಪರಿಹಾರವೆಂಬುದನ್ನು ಮನಗಾಣಿಸುವಲ್ಲಿ ಯಶಸ್ವಿಯಾಗಿಗುತ್ತಾರೆ. ಆದರೆ ಈ ವಿಷಯವನ್ನು ಅರಿತ ಆಝಾದರು, ದೇಶ ವಿಭಜನೆಯಿಂದ ಮತೀಯ ಸಮಸ್ಯೆ ಬಗೆಹರಿಯದು, ಇದರಿಂದ ಮುಸ್ಲಿಮರಿಗೆ ಮಾತ್ರವಲ್ಲ ಇಡೀ ಭಾರತಕ್ಕೆ ನಷ್ಟವೆಂದು ತನ್ನ ನೋವನ್ನು ತೋಡಿಕೊಂಡರು. ಪಟೇಲ್, ನೆಹರೂ, ಗಾಂಧೀಜಿಯವರ ಬಳಿ ದೇಶ ವಿಭಜನೆಯಿಂದಾಗುವ ಅನಾಹುತವನ್ನು ಮುಂದಿಟ್ಟರು. ಪ್ರತ್ಯೇಕ ರಾಷ್ಟ್ರದ ವಿಷಯದಲ್ಲಿ ಅಂತಿಮವಾಗಿ ಮುಸ್ಲಿಮ್ ಲೀಗ್‌ನ ನಿಲುವು ಮೇಲುಗೈ ಪಡೆದದ್ದನ್ನು ಕಂಡು ಆಝಾದರು ಕಣ್ಣೀರು ಸುರಿಸಿ ಮನಸ್ಸನ್ನು ಹಗುರ ಮಾಡಿಕೊಂಡರು. 
***

ದೇಶದ ಮೊದಲ ಶಿಕ್ಷಣ ಸಚಿವರಾಗಿ, ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ)ವನ್ನು ಸ್ಥಾಪಿಸಿದ, ಮಹಿಳಾ ಮತ್ತು ವಯಸ್ಕರ ಶಿಕ್ಷಣಕ್ಕೆ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದ, ದೂರದೃಷ್ಟಿಯಿಂದ ತಾಂತ್ರಿಕ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದ, ಪ್ರೌಢ ಶಿಕ್ಷಣ ಆಯೋಗವನ್ನು ಸ್ಥಾಪನೆ ಮಾಡಿ ಅಂದು ಕೇಂದ್ರಪಟ್ಟಿಯಲ್ಲಿದ್ದ ಶಿಕ್ಷಣಕ್ಕೆ ಈ ದೇಶದಲ್ಲಿ ಭದ್ರ ಬುನಾದಿ ಹಾಕಿದ ಅಪ್ರತಿಮ ದೇಶಪ್ರೇಮಿ ಮೌಲಾನ ಅಬುಲ್ ಕಲಾಂ ಆಝಾದರ ಹೆಸರು ಇಂದು ಅದೆಷ್ಟು ಮಂದಿಯ ಬಾಯಲ್ಲಿ ನಲಿದಾಡುತ್ತಿದೆ? ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಜನರು ತುಂಬಾ ನೆನಪು ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಒಂದು ಹೆಜ್ಜೆ ಹಿಂದೆ ಹೋಗಿ ಮೌಲಾನ ಆಝಾದರ ಕೊಡುಗೆಗಳನ್ನು ನೆನಪಿಗೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಬೇಕಲ್ಲವೇ?

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...