Wednesday, November 18, 2015

ಗುಲಾಬಿ ಬಿಳಿಮಲೆ ಎರಡು ಕವಿತೆಗಳು

೧ 
ಕತ್ತಲಲ್ಲಿ ಅರಳುವ ಬೆಳಕಿನ ಹೂವುವಿದ್ಯುತ್ ಕೈಕೊಟ್ಟು
ಕತ್ತಲಾಗುವ ಹೊತ್ತು
ನಮ್ಮಲ್ಲಿ ನಿಜವಾಗಿ
ಬೆಳಕು ಮೂಡುತ್ತದೆ

ಹಗಲಂಥ ದೃಶ್ಯದಲಿ
ಕಣ್ಣು ನೋಡದ್ದೆಲ್ಲ
ಬೆಳಕು ಇಲ್ಲದ ಹೊತ್ತು
ಕಾಣತೊಡಗುತ್ತವೆ

ಹಂಚಿಕೊಳ್ಳುವುದಕೆ, ಹಂಚಿ
ಹಗುರಾಗುವುದಕೆ ಭಾವಗಳು
ನಾ ಮುಂದು ತಾ ಮುಂದು
ಎಂದು ಎಡತಾಕುತ್ತವೆ

ಧಾವಂತದ ಬದುಕಿನಲಿ
ಸಿಗದೆ ಒಂದಿನಿತೂ ಸಮಯ
ಉಳಿದ ಮಾತುಗಳೆಲ್ಲವೂ
ಜೀವ ಪಡೆಯುತ್ತವೆ

ನಸುಬೆಳಕು ಒದಗಿಸುವ
ಇಷ್ಟು ಇಷ್ಟೇ ನೋಟ
ಅರ್ಥ ಪಡೆಯುತ್ತವೆ
ಹೆಚ್ಚು ಆಪ್ತವಾಗುತ್ತವೆ

ಹೀಗೆ ಅಪರೂಪಕ್ಕೆ
ದೊರೆವ ಕತ್ತಲ ಹೊತ್ತೆ
ಹೊಳೆವ ಬೆಳಕಿನ ಹೂವು
ಅರಳಿ ಬಿರಿಯುತ್ತದೆ
***

 
೨ 
ಮಳೆಯ ಹಾಗೆ ಇದ್ದರೆ ಹೇಗೆ


ಗುಡುಗು ಸಿಡಿಲಿನ ಚೆಂಡೆ ಮದ್ದಳೆ ಸದ್ದು
ಝಗಮಗಿಸುವ ಮಿಂಚು ಬಳ್ಳಿಯ ಬೆಳಕು
ಬಲ್ಲಿರೇನಯ್ಯಾ...
ಬಾನರಂಗಸ್ಥಳಕೆ ಯಾರೆಂದು ಕೇಳಿದ್ದೀರಿ
ಬಡಿ ಬಡಿದು ಆರ್ಭಟ
ಶುರುವಾಯಿತು ಮುಂಗಾರು ಬಯಲಾಟ

ಕಾಲಕಾಲಾಂತರದ ಮುಗಿಲ ಮೃದು ಭಾವಗಳು
ಹನಿಗಟ್ಟಿ ಕೆನೆಗಟ್ಟಿ
ಪ್ರಕಟಗೊಂಡಂಥ ಬಾನ ಕಾವ್ಯದ ಹಾಗೆ
ಮಳೆ ಬಂತು ಇಳೆಗೆ

ಬ್ರಾಹ್ಮಣರ ಶೂದ್ರರ ಮನೆಮಾಡ ಜೋಪಡಿಗೂ
ಎಲಿಜಾಳ ರುಕಿಯಾಳ ನೆಲಹೊಲ ಹಿತ್ತಲಿಗೂ
ಧನಿಕನಿಗೂ ದರಿದ್ರನಿಗೂ
ಮಹಲಿಗೂ ಮಸಣಕ್ಕೂ
ರಕ್ತರಂಜಿತ ಗಡಿಯ ಆಚೆಗೂ ಈಚೆಗೂ
ಮಳೆ ಹನಿಯಿತು ಕೊನೆಗೂ
ಭೇದವೆಣಿಸದೆ ಇನಿತೂ...

ಮಳೆಯ ಹನಿಹನಿಯಲ್ಲೂ ಚೈತನ್ಯಧಾರೆ
ಮಿಂದ ಕಣಕಣಕೂ ಮಾಯಕದ ಸ್ಪರ್ಶ
ಜೀವ ತುಡಿತಕೆ ಕಾದ ಬೀಜಗಳಲಿ ಮೊಳಕೆ
ತೊಯ್ದ ಮನಗಳ ತುಂಬ ಕವಿತೆಗಳ ಪಲ್ಲವ
ಪ್ರೀತಿ ಮಳೆ ಸೋಕಿದಲ್ಲೆಲ್ಲ ಜೀವ ಸಂಚಲನ

ತರತಮದ ಭೇದ ಮಿತಿಗಳ ಮೀರಿ
ಕೃತಕ ಗಡಿಕೋಟೆ ಮೇರೆಗಳ ದಾಟಿ
ಸಾಮರಸ್ಯದ ಮಧುರ ತಂತಿಯ ಮೀಟಿ
ನಾವೂ ಇದ್ದುಬಿಟ್ಟರೆ ಹೇಗೆ
ಸಮತೆ ಸಂದೇಶ ಹಾಡುತ್ತ ಹೀಗೆ-
ಸುರಿವ ಬಿರುಮಳೆಯ ಹಾಗೆ.
***

ಗುಲಾಬಿ ಬಿಳಿಮಲೆ (೧೯೫೯) ಸುಳ್ಯ ತಾಲೂಕಿನ ಪಂಜದವರು. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸದ್ಯ ಮಂಗಳೂರಿನ ‘ಡೀಡ್ಸ್’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಸದಸ್ಯೆಯಾಗಿರುವ ಗುಲಾಬಿ ಹಲವು ವರ್ಷಗಳಿಂದ ಸಾಮಾಜಿಕವಾಗಿ ತೊಡಗಿಕೊಂಡವರು. ಡೀಡ್ಸ್ ಹೊರತರುವ ಸಂವೇದಿ ದ್ವೈಮಾಸಿಕದ ಸಂಪಾದಕ ಮಂಡಳಿಯಲ್ಲಿ, ‘ಇನ್ನು ಸಾಕು’ ಪುಸ್ತಕದ ಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ. ಚರಕ ಅಭಿವೃದ್ಧಿ ಪ್ರಶಸ್ತಿ ೨೦೦೯ ಪಡೆದಿರುವ ಗುಲಾಬಿ, ಉದಯವಾಣಿಯಲ್ಲಿ ಬರೆದ ಅಂಕಣಗಳ ಸಂಗ್ರಹ ‘ಒಳಮನ’ ಪ್ರಕಟಿಸಿದ್ದಾರೆ.

ವಿಳಾಸ: ೨-೧೧-೮೬೮/೨೧, ’ನೆಲೆ’, ರಾಮಭಜನಾ ಮಂದಿರ ರಸ್ತೆ, ಬಿಜೈ, ಮಂಗಳೂರು - ೫೭೫೦೦೪.


gulabibilimale@gmail.comNo comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...