Wednesday, November 11, 2015

ವಿಜಯಕಾಂತ ಪಾಟೀಲ ಎರಡು ಕವಿತೆಗಳು
ಹಗ್ಗ ಹರಿದೊಡೆ...

 

ಸಾಯಬೇಕೆಂದುಕೊಂಡು ಮನೆಯ ಜಂತಿಗೆ ಹಗ್ಗ ಬಿಗಿದೆ;
ಕೊರಳಿಗೆ ಕುಣಿಕೆ ಸೇರಿಸ ಹೊರಟೊಡನೆಯೇ ಹಗ್ಗ ನನ್ನ
ಮೈಯಿಡೀ ಬಿಗಿದು ಸುತ್ತಿಕೊಳ್ಳತೊಡಗಿತು;
ಏನೋ ಎಂಥೋ ಸಾಯುವಲ್ಲೂ ನಡುಕ ತುಂಬಿಕೊಂಡಿತು!

ಗಾಬು ಹೊಡೆದು ಕಣ್ಣ ಮುಚ್ಚಿಕೊಂಡೆ.
ಆ ಹಗ್ಗದೆಳೆಗಳು ದಿಕ್ಕುದೆಸೆಯಿರದ ನಿಗೂಢದೆಡೆಯಿಂದ
ಲೀಲಾಜಾಲವಾಗಿ ಎದ್ದೆದ್ದು ಹುಚ್ಚೆದ್ದು ಬರುತ್ತಲಿವೆ;
ಸುತಿಕೊಳುತ್ತಲೇ ಇವೆ, ನನ್ನ ದೇಹವೋ ದಡದಪ್ಪವಾಗುತ್ತಲೇ
ಇದೆ; ಏನಿದು ಗೂಢ..? ನನ್ನೆದೆ ಢಬ ಢಬ,
ಚೀರಿಕೊಂಡೆ: ‘ಪ್ರಭುವೇ..!’

ಒಳಗಿಂದು ಹೊರಗೆ, ಹೊರಗಿಂದು ಒಳಗೆ; ನಡುವಿಂದು..?
ತಲೆತಿರುಗಿದಂತಾಗಿ ಮೈ ಕೈ ಗೈ ಹುಳಿರಕ್ತ ಒಸರುವಂತೆ ಕೆರಕೊಂಡೆ.
ಶೂನ್ಯದೆಡೆಯ ಪಯಣಕ್ಕೂ ತಡೆಗಳೇ?
ಹಣೆಬರಹಕ್ಕೇ ಒದಿಯಬೇಕು- ಕುದ್ದೆ ಎದ್ದೆ; ಕಣ್ಣ ಬಿಟ್ಟೆ!

ಉದೋಕ ನಿಂತ ಅದೆಂಥದೋ ಬಳ್ಳಿಬಳುಕಿನಂಥಾಕೃತಿ!
ಭೂತ ಅಲ್ಲವೆಂದು ನಿಟ್ಟುಸಿರು ಬಿಡುತ್ತಿರುವಾಗಲೇ
ವರ್ತಮಾನದ ಆ..ಅದಕೂ ಸುತಿಕೊಳ್ಳತೊಡಗಿದ ಹಗ್ಗ,
ಇಬ್ಬರನ್ನೂ ಜಗ್ಗುತ್ತ ಕಟ್ಟಿ ಕೂಡಿಸಿ ದಿಬ್ಬಣಕೆ ಸಜ್ಜುಗೊಂಡಿತು;

ಜಂತಿಯೂ ಜೈ ಅಂದಿತು!
***ಸುಟ್ಟುಬಿಡೋಣವೆಂದರೆ...


ಸಾಕುಸಾಕಾಗಿ ಹೋಗಿದೆ
ಈ ನೀಚ ಜಗದ ನಾಜೂಕು ಹಲ್ಲೆ,
ಅರೆಜೀವ ಹತ್ಯೆ,
ಖರೆಯ ಹೆಸರಿನ ಮೇಲೆಯೇ
ಗುಮ್ಮುವ ಮಿಥ್ಯೆಗಳ ಸಂತೆಯ ಸುಡುಗಾಡು
ಆಚಾರ-ವಿಚಾರ-ವ್ಯಾಪಾರ..!

ಆ ಈ ಅದು ಇದು ಎಲ್ಲದೂ
ಎಲ್ಲವೂ ಎಲ್ಲರೂ
ಹೀಗೇಕೆ ಮುಗಿಬಿದ್ದು ಮಾರುತ್ತಿದ್ದಾರೆ
ಕೊಳ್ಳುತ್ತಿದ್ದಾರೆ..?
ತಲೆಕೆಟ್ಟ ವ್ಯಾಪಾರ, ನೀತಿಗೆಟ್ಟ ವಹಿವಾಟು,
ಗಿಲೀಟು ಚಿತ್ತಕಾಟು...
ಈ ಎಲ್ಲ ಎಲ್ಲದನ್ನು ಬೆಂಕಿಹೆಟ್ಟಿ
ಸುಟ್ಟುಹಾಕಿಬಿಡಬೇಕು
ಅಂದರೆ ಆ ಲಪೂಟ ಕಡ್ಡಿಪೆಟ್ಟಿಗೆಯನ್ನೇ
ಎತ್ತಿಕೊಂಡು ಪರಾರಿ ಆಗಿದ್ದಾನೆ..!

ಯಾವಾಗ ನೋಡಿದರೂ ಇಂಥವುಗಳ
ಸಂಧಿಯಲ್ಲೇ ಬಿಕರಿ! 
ಪಿತ್ತ ನೆತ್ತಿಗೇರಿದ ಈ ಕ್ಷಣವೇ,
ಭಿಕಾರಿಯೆಂದು ಠರಾಯಿಸುವ ಮೊದಲೇ
ಅವನ ಮನೆಗೇ ಬೆಂಕಿ ಹೊತ್ತಿಕೊಳ್ಳಬೇಕು...
ಆಗ,
ಒಂದೀಟಾದರೂ ಉಸುರು ಹೊರಹಾಕಿ
ಕಾಲೂರಿ ನಡೆಯಬಹುದು ಇಲ್ಲಾ....!
***

ವಿಜಯಕಾಂತ ಪಾಟೀಲ ಕವಿ ವಿಜಯಕಾಂತ ಪಾಟೀಲರ ಹುಟ್ಟೂರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಪುಟ್ಟ ಗ್ರಾಮ ಕ್ಯಾಸನೂರು. ಓದಿದ್ದು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಮತ್ತು ಕಾನೂನು ಪದವಿ. ವೃತ್ತಿಯಿಂದ ವಕೀಲರು ಜೊತೆಗೆ ಕೃಷಿಕರು.  ಐದು ಕವನ ಸಂಕಲನಗಳು ಪ್ರಕಟವಾಗಿವೆ. ಸಂಪಾದನಾ ಕಥಾ ಸಂಕಲನ, ಸಂದರ್ಶನ ಲೇಖನಗಳ ಸಂಕಲನ ಪ್ರಕಟವಾದ ಇತರ ಪ್ರಕಾರದ ಪುಸ್ತಕಗಳು. ' ಕನ್ನಡ ಯುವಜನ ಕ್ರಿಯಾ ಸಮಿತಿ ಸಂಚಾಲಕರು. ಕನ್ನಡ ಸಾಹಿತ್ಯ ಅಕಾಡಮಿಯ ನಾಮ ನಿರ್ದೇಶಕ ಸದಸ್ಯರು. ಬೇಂದ್ರ-ಅಡಿಗ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಬಾಜನರಾಗಿದ್ದಾರೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...