Friday, November 20, 2015

ಚಲನಚಿತ್ರ: ಭಾವನಾತ್ಮಕ ಸಂಬಂಧಗಳ ವಿಸ್ತಾರ
-ಶೂದ್ರ ಶ್ರೀನಿವಾಸ್

ವಾರ್ತಾಭಾರತಿ 

 

ಸೆಪ್ಟಂಬರ್ 14ರಂದು ಬಾಸ್ಟನ್ ಪ್ರಾಂತದ ವೆಸ್ಟ್‌ವುಡ್‌ನ ಗ್ರಂಥಾಲಯದಲ್ಲಿ ಒಂದಷ್ಟು ಕಾಲವನ್ನು ಕಳೆದೆ. ಹಾಗೆ ನೋಡಿದರೆ ಅಮೆರಿಕದ ನಾರ್ತ್ ಕರೋಲಿನ ವಿಶ್ವವಿದ್ಯಾನಿಲಯದ ಗ್ರಂಥಾಲಯವನ್ನು ಕಂಡು ವಿಸ್ಮಿತನಾಗಿದ್ದೆ. ಮತ್ತೊಂದು ಹಂತದಲ್ಲಿ ಸ್ಯಾನ್‌ಫ್ರಾನ್ಸಿಸ್‌ಕೊದ ಗ್ರಂಥಾಲಯವೂ ಅಷ್ಟೇ ವೈಭವದಿಂದ ಕೂಡಿತ್ತು. ಒಂದು ಸಂತೋಷದ ಸಂಗತಿಯೆಂದರೆ: ಅಮೆರಿಕದಲ್ಲಿ ವಿಶ್ವವಿದ್ಯಾನಿಲಯದ ಗ್ರಂಥಾಲಯದಷ್ಟೇ ಕೆಳಹಂತದ ಗ್ರಂಥಾಲಯಗಳೂ ಸುಸಜ್ಜಿತವಾಗಿರುವಂಥವು. ಈ ನೆಲೆಯಲ್ಲಿ ವೆಸ್ಟ್‌ವುಡ್‌ನಲ್ಲಿಯ ಆ ಸಾಂಸ್ಕೃತಿಕ ಕೇಂದ್ರದಲ್ಲಿ ಒಂದಷ್ಟು ಸಮಯ ಸುತ್ತಾಕಿ ಪುಸ್ತಕಗಳನ್ನು ಹಾಗೂ ವೈವಿಧ್ಯಮಯವಾದ ವಾರಪತ್ರಿಕೆ, ಪಾಕ್ಷಿಕ, ತಿಂಗಳ ಪತ್ರಿಕೆ ಹಾಗೂ ಇತರೆ ನಿಯತಕಾಲಿಕೆ ಪತ್ರಿಕೆಗಳ ಮೇಲೆ ಕಣ್ಣಾಡಿಸಿ ಹೋದೆ. ಹೀಗೆ ನೋಡುವಾಗ ನ್ಯೂಯಾರ್ಕ್ ಟೈಮ್ಸ್‌ನ ಸೆಪ್ಟಂಬರ್ 13ರ ಸಂಚಿಕೆಯು ಸುಮಾರು ನೂರ ಅರವತ್ತೆಂಟು ಪುಟಗಳಷ್ಟಿತ್ತು. ಅಲ್ಲಿ ಬೇರೆ ಬೇರೆ ಅಂಕಣ ಬರಹದ ಲೇಖನಗಳ ಜೊತೆಗೆ ಎಂತೆಂಥದೋ ವಿಷಯದ ಬಗ್ಗೆ ಚರ್ಚೆ ಇತ್ತು. ಪೋಪ್ ಫ್ರಾನ್ಸಿಸ್ ಮತ್ತು ಕ್ಯೂಬಾದ ನಾಯಕ ಕ್ಯಾಸ್ಟ್ರೋ ಹಾಗೂ ಅಮೆರಿಕದ ಸಂಬಂಧದ ಸಾರ್ಥಕತೆ ಕುರಿತು ಲೇಖನಗಳ ಜೊತೆಗೆ; ನನ್ನನ್ನು ಗಾಢವಾಗಿ ಆಕರ್ಷಿಸಿದ ಮೂರು ನಾಲ್ಕು ಲೇಖನಗಳು ಚಲನಚಿತ್ರಗಳು ಮತ್ತು ಅವು ವಿಸ್ತರಿಸಿದ ಪ್ರೇಮ ಹಾಗೂ ಕೌಟುಂಬಿಕ ಭಾವನಾತ್ಮಕ ನೆಲೆಗಳನ್ನು ಕುರಿತು; ತುಂಬ ವೈಯಕ್ತಿಕ ನೆಲೆಯಲ್ಲಿ ಬರೆದ ಲೇಖನಗಳು.

 ಪ್ರೀತಿ ಪ್ರೇಮ ಎಂಬುದು ಇಂದು ನಿನ್ನೆಯದಲ್ಲ. ಹೆಣ್ಣು ಗಂಡಿನ ಆಕರ್ಷಕ ಬೆಳವಣಿಗೆಯ ಜೊತೆಗೆಯೇ ಅದು ಕಾಲಕಾಲಕ್ಕೆ ಬೆಸುಗೆ ಯಾಗುತ್ತಲೇ ವಿವಿಧ ಆಯಾಮಗಳನ್ನು ಪಡೆಯುತ್ತ ಬಂದಿದೆ. ನಮ್ಮ ಮಹಾಕಾವ್ಯಗಳಲ್ಲಿ, ಇತರೆ ಕಾವ್ಯ ಪ್ರಕಾರಗಳಲ್ಲಿ ಹಾಗೂ ಕಥೆ, ಕಾದಂಬರಿ, ನಾಟಕಗಳಲ್ಲಿ ಧಾರಣಗೊಳ್ಳುತ್ತ ಬಂದಿದೆ. ಅದರ ಚಾರಿತ್ರಿಕ ಚರ್ಚೆಗಳಿಗೆ ಹೋಗಲು ಬಯಸುವುದಿಲ್ಲ. ಆದರೆ ಇಪ್ಪತ್ತನೆಯ ಶತಮಾನದಲ್ಲಿ ಚಲನಚಿತ್ರ ಮಾಧ್ಯಮವೊಂದು ಹುಟ್ಟಿಕೊಂಡು ಅತ್ಯಂತ ಪ್ರಭಾವಶಾಲಿಯಾಗಿ ಬೆಳೆಯುವುದರ ಜೊತೆಗೆ; ಪ್ರೀತಿ-ಪ್ರೇಮ ಮತ್ತು ಕೌಟುಂಬಿಕ ಸಂಬಂಧಗಳ ಅರ್ಥಪೂರ್ಣತೆಯನ್ನು ಅಗಾಧ ಪ್ರಮಾಣದಲ್ಲಿ ವ್ಯಾಪ್ತಗೊಳಿಸುತ್ತ ಹೋಗಿದ್ದು ಮಹತ್ವಪೂರ್ಣವಾದದ್ದು. ಪ್ರೀತಿ-ಪ್ರೇಮದ ಚೌಕಟ್ಟಿನಲ್ಲಿ ಆದರ್ಶ, ತ್ಯಾಗ ಹಾಗೂ ಸಂಯಮಶೀಲತೆಯೆಂಬುದು ಯಾಕೆ ಬಹುಮುಖ್ಯವಾದದ್ದು ಎಂದು ಹೇಳುವಾಗ; ನನ್ನ ಬಾಲ್ಯ ಕಾಲದಿಂದಲೂ ಇಲ್ಲಿಯವರೆಗೂ ನೋಡಿದ ನೂರಾರು ಚಿತ್ರಗಳು ಧುತ್ತನೆ ಗರಿಗೆದರಿ ಮನಸ್ಸಿನ ತುಂಬ ಆವರಿಸಿಕೊಂಡವು. ಯಾವುದೋ ಅತ್ಯುತ್ತಮ ಕೌಟುಂಬಿಕ ಚಿತ್ರ ಬಂದರೆ; ಹಳ್ಳಿಗಳಿಂದ ಏನೇನು ಸಾರಿಗೆ ಅನುಕೂಲತೆ ಇಲ್ಲದ ಸಮಯದಲ್ಲಿ; ಹೊಸದಾಗಿ ಹೋಬಳಿ ಮತ್ತು ತಾಲೂಕು ಹಂತಗಳಲ್ಲಿ ಟೂರಿಂಗ್ ಟಾಕೀಸ್‌ಗಳು ಬಂದಾಗ; ಎಲ್ಲ ಕೆಲಸಕಾರ್ಯಗಳನ್ನು ಮುಗಿಸಿ ನಡಕೊಂಡೋ ಎತ್ತಿನಗಾಡಿಗಳಲ್ಲೋ ಹೋಗುತ್ತಿದ್ದ ದಿನಗಳು ಎಷ್ಟು ರೋಚಕವಾದದ್ದು. ಒಂದು ಕೌಟುಂಬಿಕ ಉತ್ತಮಚಿತ್ರವನ್ನು ನೋಡಿದರೆ: ಅದನ್ನು ನೋಡಿ ಎಂದು ಬಾಯಿ ಮಾತಿನಲ್ಲಿಯೇ ಎಷ್ಟು ಪ್ರಚಾರ ಕೊಡುತ್ತಿದ್ದರು. ಸುಖ-ದುಃಖವನ್ನು ಹಂಚಿಕೊಳ್ಳುವುದರ ಬಗ್ಗೆಯೂ ಚಲನಚಿತ್ರಗಳು ಬಹುಮುಖ್ಯ ಪಾತ್ರವನ್ನು ನಿರ್ವಹಿಸಿವೆ. ನ್ಯೂಯಾರ್ಕ್ ಟೈಮ್ಸ್‌ನ ಆ ಪತ್ರಿಕೆಯ ಲೇಖನದಲ್ಲಿ ಹುಡುಗಿಯೊಬ್ಬಳು ಭಾವುಕ ಸಂಬಂಧದ ಉದಾಹರಣೆಯೊಂದನ್ನು ಕೊಟ್ಟಿದ್ದಳು. ಅದರಲ್ಲಿ ಒಂದು ‘‘ನನ್ನನ್ನು ಪ್ರೀತಿಸಿದ ಹುಡುಗ ನನಗೆ ಅವನು ಮೂತ್ರಪಿಂಡವೊಂದನ್ನು ದಾನಮಾಡಿ ಜೀವಕೊಟ್ಟು ಮದುವೆಯಾದ’’ ಎಂದು. ಮತ್ತೊಬ್ಬರು ‘‘ನೋಡಿ ಅವನು ನನ್ನನ್ನು ಮದುವೆಯಾದ ಮೇಲೆ; ಕೇವಲ ನನ್ನನ್ನು ಪ್ರೀತಿಯಿಂದ ನೋಡಿಕೊಂಡದ್ದು ಮಾತ್ರವಲ್ಲ; ಒಟ್ಟು ನನ್ನ ಕುಟುಂಬವನ್ನೆಲ್ಲ ತನ್ನ ಜವಾಬ್ದಾರಿಯ ತೆಕ್ಕೆಗೆ ತೆಗೆದುಕೊಂಡು ನಿರ್ವಹಿಸಿದ’’ ಈ ರೀತಿಯ ಬೇರೆ ಬೇರೆ ರೂಪದಲ್ಲಿ ವಿವರಿಸಿದ ವ್ಯಾಖ್ಯಾನಗಳನ್ನು ಒಳಗೊಂಡಿದ್ದವು. ಮೇಲ್ನೋಟಕ್ಕೆ ಇದನ್ನು ಓದುತ್ತ ಹೋದಂತೆಲ್ಲ ತುಂಬ ಸೆಂಟಿಮೆಂಟಲ್ ಎಂದು ಪಕ್ಕಕ್ಕೆ ತಳ್ಳಿಬಿಡುವ ಸಾಧ್ಯತೆ ಇತ್ತು. ಆದರೆ ಈ ರೀತಿಯ ಚರ್ಚೆ ಮೊದಲೇ ಪ್ರಸ್ತಾಪಿಸಿದಂತೆ; ನಾನು ಇಲ್ಲಿಯವರೆಗೂ ನೋಡಿರುವ ಯಾವುದೇ ಭಾಷೆಯ ಚಿತ್ರವಿರಬಹುದು; ಚಿಂತನೆಯ ಎಂತೆಂಥದೋ ಆಯಾಮಗಳನ್ನು ಪಡೆಯುತ್ತ ಹೋಗಿದ್ದುವು. ಈ ದೃಷ್ಟಿಯಿಂದ ಭಾರತದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕರಾದ ಸತ್ಯಜಿತ್ ರೇ ಅವರನ್ನು ಕುರಿತು ಚಿದಾನಂದ ದಾಸಗುಪ್ತ ಒಂದು ಮಾತನ್ನು ಹೇಳುತ್ತಾರೆ; ಮುಖ್ಯವಾಗಿ ‘ಪಥೇರ್ ಪಾಂಚಾಲಿ’ಯನ್ನು ಕುರಿತು: ‘‘ ಅದು ಭಾರತದ ಕಿತ್ತು ತಿನ್ನುವ ಬಡತನದ ಚಿತ್ರಣವಾಗಿದೆ. ಕೇವಲ ಭೀಕರ ಅಂಕಿಅಂಶಗಳ ಕಾರಣಕ್ಕಾಗಿ ಅಲ್ಲ. ಈ ಹಿನ್ನೆಲೆಯಲ್ಲಿ ನಾವು ಆ ಚಿತ್ರದ ಅಪು ಅಥವಾ ದುರ್ಗಾ, ಸರಬಜಯ ಅಥವಾ ಹರಿಹರ ಅವರು ನಮ್ಮಲ್ಲಿಯ ಒಬ್ಬರಾಗಿರುತ್ತಾರೆ. ನಾವು ಹರಿಹರ ಅವರನ್ನು ಒಬ್ಬ ಕವಿಯಾಗಿ; ಬೌದ್ಧಿಕ ವಲಯದ ಚಿಂತಕನನ್ನಾಗಿ ನೋಡಬಹುದು. ಸರಬಜಯ ಅವರನ್ನು ಅತ್ಯಂತ ಮಾನಸಿಕ ಸ್ಥೈರ್ಯ ಮತ್ತು ಸ್ವಾಭಿಮಾನವಿರುವ ಗಟ್ಟಿ ಹೆಂಗಸೆಂದು; ಅಪು ಅಂಥ ಹುಡುಗನನ್ನು ಸೂಕ್ಷ್ಮ ಸಂವೇದನೆವುಳ್ಳವನೆಂದು, ದುರ್ಗಾ ಅತ್ಯಂತ ಮುಗ್ಧ್ದ, ಸುಂದರ ಹುಡುಗಿ; ಪ್ರಕೃತಿಯಲ್ಲಿಯೇ ತಲ್ಲೀನಳಾದವಳು. ಇವರೆಲ್ಲ ನಮ್ಮ ಬದುಕಿನ ಭಾಗವಾಗಿಯೇ ಬಿಡುವುದರ ಜೊತೆಗೆ; ಒಟ್ಟು ಮಾನವೀಯ ಸಂಬಂಧಗಳಿಗೆ ಅನ್ವಯಿಸಿ ಗಾಢವಾದ ಚಿಂತನೆಯನ್ನು ಬೆಳೆಸಿಬಿಟ್ಟಿರುತ್ತಾರೆ’’ ಎಂದು ಹೇಳುವಾಗ; ನಲವತ್ತು ವರ್ಷಗಳ ಹಿಂದೆ ನೋಡಿದ ಚಿತ್ರವೊಂದು; ಅದರ ಜೀವನ ಪ್ರೀತಿಯ ಕಾರಣಕ್ಕಾಗಿ ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ‘ಅಲ್ಲೋಲಕಲ್ಲೋಲ’ವನ್ನೆಬ್ಬಿಸಿ ಬಿಟ್ಟಿರುತ್ತದೆ. 

ಹಾಗೆ ನೋಡಿದರೆ ಚಿದಾನಂದ ದಾಸಗುಪ್ತ ಅವರು ಸತ್ಯಜಿತ್‌ರಾಯ್ ಅವರ ಒಟ್ಟು ಚಿತ್ರಗಳನ್ನು ಅತ್ಯಂತ ಗಂಭೀರವಾಗಿ ಅಧ್ಯಯನಕ್ಕೆ ತೆಗೆದುಕೊಂಡು ರಚಿಸಿರುವಂಥ ಕೃತಿ. ಇದೇ ಚಿದಾನಂದ ದಾಸಗುಪ್ತ ಅವರು ಸುಮಾರು ನಾಲ್ಕು ದಶಕಗಳ ಹಿಂದೆ ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಮೃಣಾಲ್ ಸೇನ್ ಅವರ ಅಧ್ಯಕ್ಷತೆಯಲ್ಲಿ ಮಾತಾಡುವಾಗ; ರೇ ಅವರು ತಮ್ಮ ಬಗ್ಗೆ ಮಾತಾಡುವ ಮಾತುಗಳನ್ನು ಕೇಳಿಸಿಕೊಳ್ಳಲು ಬಯಸದೆ ಹೊರಗೆ ಬಂದು ಸಿಗರೇಟು ಸೇದುತ್ತ ನಿಂತಿದ್ದರು. ಆಗ ಅವರ ಕೃತಿಗೆ ಹಸ್ತಾಕ್ಷರವನ್ನು ಪಡೆಯುವ ನೆಪದಲ್ಲಿ ಪರಿಚಯ ಮಾಡಿಕೊಂಡಿದ್ದೆ. ಇದಕ್ಕೆ ಬಹುದೊಡ್ಡ ಲೇಖಕ ಲಂಕೇಶ್ ಅವರ ಪ್ರೇರಣೆಯೂ ಇತ್ತು. ಆದರೆ ದುರಂತವೆಂದರೆ: ಲಂಕೇಶ್ ಅವರು ತಮ್ಮ ಸಂಕೋಚದ ಕಾರಣಕ್ಕಾಗಿ; ಸ್ವಲ್ಪ ದೂರದಲ್ಲಿ ನಿಂತು ಸಿಗರೇಟು ಸೇದುತ್ತ ವೌನಿಯಾಗಿ ಬಿಟ್ಟಿದ್ದರು. ಹಾಗೆ ನೋಡಿದರೆ ರೇಯವರನ್ನು ಮಾತಾಡಿಸಲೆಂದೇ ಮೇಸ್ಟ್ರು ಎದ್ದು ಬಂದದ್ದು. ಇದನ್ನು ಮನುಷ್ಯ ಸಂಬಂಧಗಳ ವೈಪರಿತ್ಯಗಳ ತಾಕಲಾಟವೆಂದೇ ಭಾವಿಸುವೆ. ‘ಪಥೇರ್ ಪಾಂಚಾಲಿ’ಯಲ್ಲಿ ಸೃಷ್ಟಿಸಿರುವ; ಒಂದು ದೃಷ್ಟಿಯಿಂದ ಆ ಚಿತ್ರದ ಮಹಾನಾಯಕಿಯಂತೆ ಕಾಣುವ ಅತ್ಯಂತ ವಯೋವೃದ್ಧೆಯ ಪಾತ್ರವಂತೂ ಪ್ರತ್ಯೇಕ ಸಾಕ್ಷಚಿತ್ರದ ರೀತಿಯಲ್ಲಿಯೇ ದುರಂತಮಯ ಇರುವಂಥದ್ದು. ಆ ಪಾತ್ರಕ್ಕೆ ರೇ ಅವರು ಹುಡುಕಿರುವ ‘ಚುನಿಬಾಲದೇವಿ’ ಅವರ ಸ್ವಾಭಾವಿಕ ನಟನೆ; ನಮ್ಮ ವಿವರಣೆಗೂ ಮೀರಿರುವಂಥದ್ದು. ಒಂದು ವೇಳೆ ಈ ಪಾತ್ರಕ್ಕೆ ಸಂಬಂಧಿಸಿದಂತೆ ಲಂಕೇಶ್ ಅವರು ರೇ ಅವರ ಜೊತೆ ಮುಖಾಮುಖಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಇಷ್ಟು ವರ್ಷಗಳ ನಂತರವೂ ಚಡಪಡಿಸುವೆ.

ವಿಭೂತಿ ಭೂಷಣ ವಂದ್ಯೋಪಾಧ್ಯಾಯ ಅವರ ಈ ‘ಮಹಾಯಾತ್ರಿಕ; (ಪಥೇರ್ ಪಾಂಚಾಲಿ) ಕಾದಂಬರಿ ಎಷ್ಟೊಂದು ಹಂತಗಳಲ್ಲಿ ಮನುಷ್ಯ ಸಂಬಂಧಗಳನ್ನು ತೆರೆದಿಡುತ್ತದೆ. ರೇಯವರು ತಮ್ಮ ಒಂದೊಂದು ಚಿತ್ರದಲ್ಲೂ; ನಮ್ಮ ವಿವರಣೆಗೂ ಮೀರಿದ ಚಿಂತನೆಗಳನ್ನು ದಟ್ಟಗೊಳಿಸಿ ಬಿಟ್ಟಿದ್ದಾರೆ. ಈ ದೃಷ್ಟಿಯಿಂದ ‘ಜಲಸಾಗರ’ವಂತೂ ಚಲನಚಿತ್ರ ಭಾಷೆಯಲ್ಲಿ ಒಂದು ಮಹಾಕಾವ್ಯವಿದ್ದಂತೆ. ಈ ನೆಲೆಯಲ್ಲಿ ಬಂಗಾಲಿ ಸಾಹಿತ್ಯದ ಶರಶ್ಚಂದ್ರ ಚಟರ್ಜಿಯವರಿಂದ ಮೊದಲ್ಗೊಂಡು ರವೀಂದ್ರನಾಥ ಟ್ಯಾಗೂರು ಹಾಗೂ ಇವತ್ತಿನ ಲೇಖಕರವರೆಗೆ ಸೃಜನಾತ್ಮಕ ಸಾಹಿತ್ಯಕ ಭಾಷೆಯನ್ನೇ ವಿಸ್ತರಿಸಿದರು.

ಕನ್ನಡ ಮೊದಲ್ಗೊಂಡು ಭಾರತದ ಇತರೆ ಕೆಲವು ಭಾಷೆಗಳಲ್ಲಿ ಸಾಹಿತ್ಯವು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಯಿತು. ಅದರಲ್ಲೂ ಕಾದಂಬರಿಗಳು. ಅವುಗಳಲ್ಲಿ ಬಹುಪಾಲು ಚಲನಚಿತ್ರಗಳಾಗಿಯೂ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಕೆಲವರು ಪ್ರಸ್ತಾಪಿಸಿರುವಂತೆ ‘ಭಾವನಾತ್ಮಕ ಸಂಬಂಧಗಳು’ ಕುಟುಂಬಗಳ ನಡುವೆ ಚರ್ಚೆಯಾಗುವ ರೀತಿಯಲ್ಲಿ ವಾತಾವರಣ ಸೃಷ್ಟಿಯಾಯಿತು. ಕಥಾಪ್ರೇರಿತ ಚಿತ್ರಗಳಂತೂ ‘ಆದರ್ಶ ಮತ್ತು ನೈತಿಕತೆ’ಯ ಚೌಕಟ್ಟಿನಲ್ಲಿ ಗುಣಾತ್ಮಕ ಅಂಶಗಳನ್ನು ತೀವ್ರಗೊಳಿಸಿತು. ಆದ್ದರಿಂದಲೇ ಚಲನಚಿತ್ರ ನಾಯಕರು; ನಮ್ಮ ಸಮಾಜದ ಮಿಕ್ಕ ನಾಯಕರಿಗಿಂತ ಹೆಚ್ಚು ಜನಪ್ರಿಯರಾಗಲು ಸಾಧ್ಯವಾಗಿದ್ದು. ಇಲ್ಲಿ ಚಲನಚಿತ್ರ ನಾಯಕಿಯರೂ ಸೇರುತ್ತಾರೆ. ಇದು ಕೇವಲ ಭಾರತದ ಸಂದರ್ಭದಲ್ಲಿ ಮಾತ್ರವಲ್ಲ. ಜಗತ್ತಿನ ಎಲ್ಲ ಕಡೆಯೂ ವ್ಯಾಪಕತೆಯನ್ನು ಪಡೆದಿದೆ.

 ಇಂದೂ ಕೂಡ ಹಳೆಯ ಚಲನಚಿತ್ರ ನಾಯಕ-ನಾಯಕಿಯರು ನಮ್ಮ ಸಾಹಿತ್ಯ ವಲಯದ ಬಹುಮುಖ್ಯ ಲೇಖಕರಷ್ಟೇ ಆಪ್ತರಾಗಿರುವುದು. ಈ ದೃಷ್ಟಿಯಿಂದ ರಾಜ್‌ಕುಮಾರ್, ದಿಲೀಪ್‌ಕುಮಾರ್, ಅಶೋಕ್‌ಕುಮಾರ್, ಗುರುದತ್, ನಾಗೇಶ್ವರ ರಾವ್, ಸೌಮಿತ್ರಿ ಚಟರ್ಜಿ, ಉತ್ಪಲದತ್, ಬಲರಾಜಸಹಾನಿ, ರಿಚರ್ಡ್ ಬರ್ಟನ್, ಸಿಡ್ನಿಪಾಯಿ ಚರ್, ಬೆನ್‌ಕಿಂಗ್‌ಸ್ಲೇ, ಚಾರ್ಲಿಚಾಪ್ಲಿನ್, ಉಮರ್ ಷರೀಫ್ ಹಾಗೆಯೇ ಕಲ್ಪನಾ, ಬಿ.ಸರೋಜದೇವಿ, ಸಾವಿತ್ರಿ, ಶಾರದಾ, ಮೀನಾಕುಮಾರಿ, ನರ್ಗೀಸ್, ವಹಿದಾ ರೆಹಮಾನ್, ಶರ್ಮಿಳಾ ಟಾಗೂರ್, ಎಲಿಜಬೆತ್ ಟೇಲರ್, ಸೋಫಿಯಾ ಲಾರೆನ್ ಮುಂತಾದವರು ಒಂದು ರೀತಿಯ ‘ನಾಸ್ಟಲ್ಜೀಯ’ ನೆಲೆಯಲ್ಲಿ ಕಾಡುತ್ತಲೇ ಇರುತ್ತಾರೆ. ನಾವು ಅವರ ಚಿತ್ರವನ್ನು ಮತ್ತೊಮ್ಮೆ ನೋಡಬೇಕಾಗಿ ಇಲ್ಲ. ನೆನಪೇ ತಲ್ಲಣಕ್ಕೆ ಒಳಪಡಿಸುತ್ತದೆ. ಇಂಥದ್ದು ಬೇರೆಯವರಿಗೂ ವಿವಿಧ ರೂಪದಲ್ಲಿ ಆಗಿರಲು ಸಾಧ್ಯ. ಭಕ್ತಿಪ್ರಧಾನ ಸಾಧು, ಸಂತರ ಚಿತ್ರಗಳಂತೂ ನೈತಿಕೆಯ ಚೌಕಟ್ಟಿನಲ್ಲಿ ಮತ್ತೆ ಮತ್ತೆ ಅವಲೋಕಿಸಿಕೊಳ್ಳಲು ಪ್ರೇರಣೆಯನ್ನು ನೀಡಬಹುದು.

ಸುಮಾರು ನಾಲ್ಕೈದು ವರ್ಷಗಳ ಹಿಂದೆ ಕಲ್ಕತ್ತೆಯಲ್ಲಿ ನನಗೆ ಅತ್ಯಂತ ಪ್ರಿಯರಾದ ಲೇಖಕಿ ಮಹಾಶ್ವೇತ ದೇವಿಯರನ್ನು ನೋಡಲು ಹೋದೆ. ಅವರ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಆದರೂ ಅವರ ಸೋದರ ಋತ್ವಿಕ ಘಟಕ್ ಅವರ ಹೆಸರನ್ನು ಪ್ರಸ್ತಾಪಿಸಿದ ತಕ್ಷಣ ರೋಮಾಂಚನಗೊಂಡವರಂತೆ ‘ಮೇ ಡಾಕಾ ತಾರಾ’ ಚಿತ್ರ ಕುರಿತು ಮಾತಾಡಿದ್ದರು. ಕೇವಲ ಆಕೆ ಮಾತ್ರವಲ್ಲ ಕುಟುಂಬ ವ್ಯವಸ್ಥೆಯ ಮಧ್ಯೆ ಆದರ್ಶ, ತ್ಯಾಗ, ಬಲಿದಾನ ಮತ್ತು ಅವುಗಳ ಸುತ್ತಲೂ ಆವರಿಸಿಕೊಂಡಿರುವ ವೈಪರೀತ್ಯಗಳನ್ನು ಕಲಾತ್ಮಕವಾಗಿ ಹಿಡಿದಿಟ್ಟಿರುವ ಅಮೋಘ ಚಿತ್ರ. ಈ ಚಿತ್ರದ ಮೂಲಕವೇ ಘಟಕ್ ಅವರು ಗಂಭೀರ ಚಲನಚಿತ್ರ ಪ್ರಿಯರಿಗೆ ಆರಾಧಕರಾಗಿಬಿಟ್ಟರು. ಏನೇ ಆಗಿರಲಿ ಈ ಟಿಪ್ಪಣಿಯ ಬಗ್ಗೆ ಯೋಚಿಸಲು ಪ್ರೇರೇಪಿಸಿದ ಆ ನ್ಯೂಯಾರ್ಕ್ ಟೈಮ್ಸ್‌ನ ಲೇಖನಗಳಿಗೆ ಋಣಿಯಾಗಿರುವೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...