Thursday, November 19, 2015

ಈ ತಪ್ಪನ್ನು ಕೂಡಲೇ ಸರಿಪಡಿಸಬೇಕಾಗಿದೆ


ಸುರೇಶ್ ಭಟ್, ಬಾಕ್ರಬೈಲ್

ಸೌಜನ್ಯ : ವಾರ್ತಾಭಾರತಿ

 

ಇತ್ತೀಚಿನ ದಿನಗಳಲ್ಲಿ ಬೆರಳೆಣಿಕೆಯ ಕೆಲವನ್ನು ಹೊರತುಪಡಿಸಿ ಹೆಚ್ಚುಕಡಿಮೆ ಎಲ್ಲಾ ಮಾಧ್ಯಮಗಳಲ್ಲೂ ‘ಹಿಂದೂ/ಹಿಂದೂಪರ ಸಂಘಟನೆ’ ಎಂಬ ಪದಬಳಕೆ ಸಾಮಾನ್ಯವಾಗಿಬಿಟ್ಟಿದೆ. ಹಿಂದೂ/ಹಿಂದೂ ಪರ ಸಂಘಟನೆ ಎಂದಾಕ್ಷಣ ಬಹುತೇಕ ಓದುಗರ/ನೋಡುಗರ ಮನಸ್ಸಿನಲ್ಲಿ ಇದು ಹಿಂದೂ ಧರ್ಮಕ್ಕೆ ಸಂಬಂಧಪಟ್ಟ ಸಂಘಟನೆ, ಇವರೆಲ್ಲ ಧರ್ಮೋದ್ಧಾರದ ಕಾರ್ಯದಲ್ಲಿ ತೊಡಗಿಸಿಕೊಂಡವರು ಎಂಬ ಭಾವನೆ ಉಂಟಾಗುವ ಸಾಧ್ಯತೆಯೆ ಹೆಚ್ಚು. ಮೇಲುನೋಟಕ್ಕೆ ಇದರಲ್ಲೇನು ಸಮಸ್ಯೆಯಿದೆ ಎಂದು ಅನೇಕರಿಗೆ ಅನಿಸಬಹುದು. ಆದರೆ ಆಳಕ್ಕಿಳಿದು ನೋಡಿದಾಗಷ್ಟೆ ಇಲ್ಲೊಂದು ಗಂಭೀರ ಸಾಮಾಜಿಕ ಸಮಸ್ಯೆ ಇರುವುದರ ಅರಿವು ಆಗುತ್ತದೆ. ಗಮನಿಸಬೇಕಾದ ವಿಷಯವೇನೆಂದರೆ ಈ ರೀತಿಯ ಪದಬಳಕೆ ಆಕಸ್ಮಿಕವಾಗಿ ಆಗಿರುವ ಬೆಳವಣಿಗೆ ಅಲ್ಲ. ಇದರ ಹಿಂದೆ ಬಹಳ ವ್ಯವಸ್ಥಿತವಾದ ಹಾಗೂ ಉದ್ದೇಶಪೂರ್ಣವಾದ ಯೋಜನೆ ಇದೆ. ಹಾಗಾದರೆ ಏನಿದು ಯೋಜನೆ, ಈ ಯೋಜನೆಯ ಹಿಂದೆ ಇರುವವರು ಯಾರು, ಅವರು ಯಾತಕ್ಕೋಸ್ಕರ ಇದನ್ನು ಮಾಡುತ್ತಿದ್ದಾರೆ, ಅವರಿಗೂ ಈ ಸಂಘಟನೆಗಳಿಗೂ ಏನು ಸಂಬಂಧ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುವುದು ಸಹಜವಾಗಿದೆೆ. ಅವುಗಳಿಗೆ ಉತ್ತರ ಕಂಡುಕೊಳ್ಳುವ ದಿಕ್ಕಿನಲ್ಲಿ ಒಂದು ಪುಟ್ಟ ಪ್ರಯತ್ನ ಇಲ್ಲಿದೆ. ಧರ್ಮಾಧರಿತ ಮತ್ತು ಧರ್ಮನಿರಪೇಕ್ಷ ಪ್ರಭುತ್ವ

ಮೊದಲು ಧರ್ಮ ಎಂದರೇನೆಂದು ಸ್ಥೂಲವಾಗಿ ತಿಳಿದುಕೊಳ್ಳೋಣ. ಡಾ. ಅಂಬೇಡ್ಕರ್ ಪ್ರಕಾರ ‘‘ಧರ್ಮ ಅಂದರೆ ಒಂದು ಆದರ್ಶಪ್ರಾಯ ದೈವಿಕ ಆಡಳಿತದ ಪ್ರತಿಪಾದನೆಯಾಗಿದ್ದು ಮಾನವರು ಒಂದು ನೈತಿಕ ಚೌಕಟ್ಟಿಗೆ ಒಳಪಟ್ಟು ಬಾಳುವಂತಹ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವುದೆ ಅದರ ಉದ್ದೇಶವಾಗಿದೆ.’’ ಪ್ರಾಚೀನ ಕಾಲದಲ್ಲಿ ಸಮುದಾಯದ ಮುಖ್ಯಸ್ಥನೆ ದೇವರು ಆಗಿದ್ದ. ಅಂದಿನ ಈ ದೈವಿಕ ಆಡಳಿತದ ಸಮಾಜದಲ್ಲಿ ಧರ್ಮ, ಸಾಮಾಜಿಕ ವ್ಯವಸ್ಥೆ ಮತ್ತು ಸಮುದಾಯದ ಸದಸ್ಯತ್ವಗಳು ಒಂದಕ್ಕೊಂದು ಬೆಸೆದುಕೊಂಡಿದ್ದವು. ಗಮನಾರ್ಹವಾಗಿ ಒಂದೊಂದು ಸಮುದಾಯಕ್ಕೆ ಒಬ್ಬೊಬ್ಬ ಪ್ರತ್ಯೇಕ ದೇವರು ಮತ್ತು ಸಾಮಾಜಿಕ ವ್ಯವಸ್ಥೆ ಇರುತ್ತಿತ್ತು. ಕಾಲಾಂತರದಲ್ಲಿ ದೇವರ ಕುರಿತ ಕಲ್ಪನೆ ಬದಲಾಗಿ ಆತ ಬ್ರಹ್ಮಾಂಡದ ಸೃಷ್ಟಿಕರ್ತನಾದ. ಆದರೆ ಎಲ್ಲ ಧರ್ಮಗಳಿಗೂ ಒಬ್ಬನೆ ದೇವರು ಎಂದಾಗಲಿಲ್ಲ. ಪ್ರತಿಯೊಂದು ಧರ್ಮವೂ ಅದರದೆ ಆದ ಪ್ರತ್ಯೇಕ ದೇವರ ಕಲ್ಪನೆಯನ್ನು ಮುಂದುವರಿಸಿತು. ಮಾನವ ಮತ್ತು ದೇವರ ಮಧ್ಯೆ ಧಾರ್ಮಿಕ ಪುರೋಹಿತ ಎಂಬ ಮಧ್ಯವರ್ತಿಯ ಪ್ರವೇಶವಾಯಿತು. ಕ್ರಮೇಣ ಕೆಲವು ಧರ್ಮಗಳು ದೊಡ್ಡದಾಗಿ ಬೆಳೆೆದು ಸಂಸ್ಥೆಯ ರೂಪ ಪಡೆದುಕೊಂಡವು. ನಂತರದ ಹಂತದಲ್ಲಿ ಈ ಸಾಂಸ್ಥೀಕರಣಗೊಂಡ ಧರ್ಮದ ಪುರೋಹಿತ ಮತ್ತು ಸಮುದಾಯದ ಮುಖ್ಯಸ್ಥ/ಅರಸ ಒಂದಾಗಿ ತಮ್ಮ ಹಿತಸಾಧನೆಗಾಗಿ ಸಾಮಾಜಿಕ ವ್ಯವಸ್ಥೆಯನ್ನು ನಿಯಂತ್ರಿಸತೊಡಗಿದರು. ಸಮಾಜವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೋಸ್ಕರ ತಮಗೆ ಬೇಕಾದಂತೆ ಕಾನೂನುಗಳನ್ನು ರಚಿಸಿಕೊಂಡರು. ಇಂತಹ ಧರ್ಮಾಧರಿತ ಪ್ರಭುತ್ವಗಳು ಸಮಾಜವನ್ನು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಂಡು ಜನಸಾಮಾನ್ಯರನ್ನು ಮಿತಿಮೀರಿದ ಶೋಷಣೆ, ಬವಣೆ, ಕಷ್ಟಕಾರ್ಪಣ್ಯಗಳಿಗೆ ಒಳಪಡಿಸಿದಂತಹ ಹಲವಾರು ನಿದರ್ಶನಗಳನ್ನು ಇತಿಹಾಸದಲ್ಲಿ ಕಾಣಬಹುದು. ಆದರೆ ಆಧುನಿಕ ಯುಗದಲ್ಲಿ ವಿಜ್ಞಾನದ ಅಭಿವೃದ್ಧಿಯಿಂದಾಗಿ ವೈಚಾರಿಕತೆ ಬೆಳೆದಾಗ ಸಮಾಜ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಧರ್ಮದ ಪ್ರಭಾವ ಕ್ಷೀಣಿಸತೊಡಗಿತು. ಅಂತಿಮವಾಗಿ ಅನೇಕ ಪ್ರಗತಿಪರ ಸಮಾಜಗಳು ಧರ್ಮಾಧರಿತ ಆಡಳಿತವನ್ನು ಕೊನೆಗಾಣಿಸಿ ಧರ್ಮ ಮತ್ತು ರಾಜಕಾರಣಗಳನ್ನು ತಂತಮ್ಮ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಧರ್ಮನಿರಪೇಕ್ಷ/ಜಾತ್ಯತೀತ (ಸೆಕ್ಯೂಲರ್) ಆಡಳಿತವನ್ನು ಜಾರಿಗೆ ತಂದವು. ಹೀಗೆ ಆಡಳಿತವನ್ನು ಜಾತ್ಯತೀತವಾಗಿಸಿದ ನಂತರವೆ ಅವುಗಳಿಗೆ ನೈಜ ಜನಾಭಿವೃದ್ಧಿಯತ್ತ ಗಮನ ಹರಿಸಲು ಸಾಧ್ಯವಾಗಿದೆ. ಹೀಗಿದ್ದರೂ ಧರ್ಮಾಧರಿತ ಆಡಳಿತದ ಸಿದ್ಧಾಂತವನ್ನು ಪ್ರತಿಪಾದಿಸುವ ಗುಂಪುಗಳನ್ನು ಇಂದಿಗೂ ಕಾಣಬಹುದು. ಕೆಲವೊಂದು ದೇಶಗಳಲ್ಲಿ ಇವು ಅಧಿಕಾರದ ಚುಕ್ಕಾಣಿಯನ್ನೂ ಹಿಡಿದಿವೆ.


ಭಾರತದ ಪರಿಸ್ಥಿತಿ ಬಹುಸಂಸ್ಕೃತಿಯ ದೇಶವೆಂದು ಗುರುತಿಸಲ್ಪಟ್ಟಿರುವ ಭಾರತದಲ್ಲಿ ಇರುವಷ್ಟು ಧರ್ಮ/ಪಂಥಗಳು ಬಹುಶಃ ಜಗತ್ತಿನ ಬೇರೆ ಯಾವ ದೇಶದಲ್ಲೂ ಇರಲಾರವು. ಸ್ವಾತಂತ್ರ್ಯಾನಂತರದಲ್ಲಿ ನಮ್ಮ ದೇಶ ಧರ್ಮನಿರಪೇಕ್ಷ/ಜಾತ್ಯತೀತ ಆಡಳಿತವನ್ನು ಆಯ್ಕೆ ಮಾಡಿಕೊಳ್ಳಲು ಇದೂ ಒಂದು ಮುಖ್ಯ ಕಾರಣ. 1947ರ ನಂತರದ ಕೆಲವು ವರ್ಷಗಳ ಕಾಲ ನೆಹರೂ ಮತ್ತಿತರ ಪ್ರಗತಿಪರ ನಾಯಕರ ಮಾರ್ಗದರ್ಶನದಲ್ಲಿ ಭಾರತದ ಜಾತ್ಯತೀತತೆಯ ಪ್ರಕ್ರಿಯೆ ಬಹುಪಾಲು ಸರಿದಾರಿಯಲ್ಲಿ ಸಾಗಿತ್ತು. ಪ್ರಾಯಶಃ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಎಂಬ ಸಂಘಟನೆ ಇಲ್ಲದೆ ಹೋಗಿದ್ದರೆ ಭಾರತದಲ್ಲಿ ಜಾತ್ಯತೀತತೆಯ ವೌಲ್ಯಗಳು ಗಟ್ಟಿಯಾಗಿ ಬೇರೂರುತ್ತಿದ್ದುದರಲ್ಲಿ ಸಂಶಯವೆ ಇಲ್ಲವೆನ್ನಬಹುದು. ಕಾರಣವೇನೆಂದರೆ 1925ನೆ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಂತಹ ಆರೆಸ್ಸೆಸ್ ಈ ದೇಶದಲ್ಲಿ ಧರ್ಮಾಧರಿತ ಆಡಳಿತವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಆರಂಭದಿಂದಲೂ ಅದು ತನ್ನ ಗುರಿಸಾಧನೆಗಾಗಿ ಪಟ್ಟುಬಿಡದ ಪ್ರಯತ್ನಗಳನ್ನು ನಡೆಸುತ್ತಲೆ ಬಂದಿದೆ. ಭಾರೀ ಜಾಣ್ಮೆಯನ್ನು ಉಪಯೋಗಿಸಿ ತನ್ನನ್ನು ತಾನು ಸಾಂಸ್ಕೃತಿಕ ಸಂಘಟನೆಯೆಂದು ಕರೆದುಕೊಳ್ಳುವ ಮೂಲಕ ತನ್ನ ರಾಜಕೀಯ ಉದ್ದೇಶಗಳನ್ನು ಜನರಿಂದ ಮರೆಮಾಚುತ್ತಾ ಬಂದಿದೆ. ಇವತ್ತಿಗೂ ಹೆಚ್ಚಿನ ಜನರಿಗೆ ಆರೆಸ್ಸೆಸ್ ನಿಜಕ್ಕೂ ಒಂದು ಸಾಂಸ್ಕೃತಿಕ ಸಂಘಟನೆಯೇ ಅಥವಾ ರಾಜಕೀಯ ಮಹತ್ವಾಕಾಂಕ್ಷೆಯುಳ್ಳ ಸಂಘಟನೆಯೇ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಇದಕ್ಕೆ ಕಾರಣ ಅದು ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವ ಗೊಂದಲಗಳು ಹಾಗೂ ದ್ವಂದ್ವಾರ್ಥದ ಹೇಳಿಕೆಗಳು.

          ಹಿಂದೂತ್ವ ಸಿದ್ಧಾಂತದ ಮೂಲಕ ಹಿಂದೂ ರಾಷ್ಟ್ರ ಸ್ಥಾಪನೆಯ ಗುರಿ ತಾನೊಂದು ಹಿಂದೂಗಳ ಸಾಂಸ್ಕೃತಿಕ ಸಂಘಟನೆಯೆಂದು ಸಾರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ವಾಸ್ತವವಾಗಿ ಒಂದು ರಾಜಕೀಯ ಮಹತ್ವಾಕಾಂಕ್ಷೆಯುಳ್ಳ ಸಂಘಟನೆಯಾಗಿದೆ. ಅದು ವಿ.ಡಿ. ಸಾವರ್ಕರ್ ಪ್ರತಿಪಾದಿಸಿದಂಥ ‘ಹಿಂದೂತ್ವ’ ಎಂಬ ತೀವ್ರ ಬಲಪಂಥೀಯ, ಮೂಲಭೂತವಾದಿ ರಾಜಕೀಯ ಸಿದ್ಧಾಂತಕ್ಕೆ ಅನುಗುಣವಾಗಿ ಕಾರ್ಯಾಚರಿಸುತ್ತದೆ. ‘ಹಿಂದೂತ್ವ’ ಬೇರೆ, ಹಿಂದೂ ಧರ್ಮ ಬೇರೆ. ದೇವರು ಮತ್ತು ನೀತಿಯುತ ಬದುಕಿಗೆ ಸಂಬಂಧಿಸಿದ ಹಿಂದೂ ಧರ್ಮವನ್ನು ರಾಜಕೀಯ ಸಿದ್ಧಾಂತವಾಗಿರುವ ‘ಹಿಂದೂತ್ವ’ದ ಜೊತೆ ಥಳಕು ಹಾಕಲಾಗುವುದಿಲ್ಲ. ‘ಹಿಂದೂತ್ವ’ದ ಗುರಿಗಳಿಗೂ ಹಿಂದೂ ಧರ್ಮದ ಗುರಿಗಳಿಗೂ ಯಾವುದೇ ಸಂಬಂಧ ಇಲ್ಲ. ವಾಸ್ತವ ಏನೆಂದರೆ ‘ಹಿಂದೂತ್ವ’ ಸಿದ್ಧಾಂತ ಬಲು ಚಾಕಚಕ್ಯತೆಯಿಂದ ಹಿಂದೂ ಧರ್ಮವನ್ನು ಬಳಸಿಕೊಂಡು ಹಿಂದೂ ರಾಷ್ಟ್ರೀಯವಾದದ ಹೆಸರಿನಲ್ಲಿ ಭಾರತದ ಮೇಲೆ ಧರ್ಮಾಧರಿತ ರಾಜಕೀಯ ಅಧಿಕಾರ ಸ್ಥಾಪಿಸುವ ಉದ್ದೇಶ ಇಟ್ಟುಕೊಂಡಿದೆ. ಶ್ರೇಷ್ಠರಾದ ಹಿಂದೂ ಧರ್ಮೀಯರೆ ಭಾರತವನ್ನು ಆಳಲು ಎಲ್ಲಾ ಹಕ್ಕುಗಳನ್ನು ಹೊಂದಿರುವವರು; ಅನ್ಯಧರ್ಮೀಯರು, ತಳಸಮುದಾಯಗಳು ಸೇವಕರಾಗಿರಲಷ್ಟೆ ಅರ್ಹರು ಎಂಬ ಅದರ ಪ್ರತಿಪಾದನೆಯ ಹಿಂದೆ ಕೇವಲ ರಾಜಕೀಯ ಉದ್ದೇಶ ಅಡಗಿದೆ. ಭಾರತವನ್ನು ಧರ್ಮಾಧರಿತ ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸುವುದೇ ಆರೆಸ್ಸೆಸ್‌ನ ಅಂತಿಮ ಗುರಿಯಾಗಿದೆ. ರಾಜಕೀಯ ಅಧಿಕಾರ ಸ್ಥಾಪಿಸಿ ಭಾರತವನ್ನು ಆಳಬೇಕಾದರೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಬಹುಮತ ಪಡೆಯಬೇಕು. ಇದಕ್ಕೊಂದು ರಾಜಕೀಯ ಪಕ್ಷ ಬೇಕು. ಆದುದರಿಂದಲೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತೀಯ ಜನಸಂಘ ಮತ್ತು ಅದರ ಇತ್ತೀಚಿನ ಆವೃತ್ತಿಯಾದ ಭಾರತೀಯ ಜನತಾ ಪಕ್ಷಗಳನ್ನು ಪ್ರಾರಂಭಿಸಿದೆ. ಜೊತೆಗೆ ತನ್ನ ಧರ್ಮಾಧರಿತ ಆಡಳಿತದ ಸಿದ್ಧಾಂತವನ್ನು ಜನರ ಬಳಿಗೆ ಒಯ್ಯಲು ನೂರಾರು ಉಪಸಂಘಟನೆಗಳನ್ನು ಹುಟ್ಟುಹಾಕಿದೆ. ಆರೆಸ್ಸೆಸ್ ಮತ್ತು ಅದರ ಉಪಸಂಘಟನೆಗಳ ಈ ಇಡೀ ಕುಟುಂಬವನ್ನು ಸಂಘ ಪರಿವಾರವೆಂದು ಕರೆಯುವುದು ವಾಡಿಕೆ. ಸಂಘ ಪರಿವಾರ ಸ್ವಾತಂತ್ರ್ಯಾಪೂರ್ವದಿಂದಲೆ ತನ್ನ ಸಿದ್ಧಾಂತಕ್ಕೆ ಅನುಗುಣವಾಗಿ ಧರ್ಮ ಧರ್ಮಗಳ ನಡುವಿನ ಸಾಮರಸ್ಯದ ಬದುಕಿಗೆ ಹುಳಿಹಿಂಡುವ ಕೆಲಸವನ್ನು ಪ್ರಾರಂಭಿಸಿದೆ. 

(ಮುಂದುವರೆಯುವದು)

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...