Tuesday, November 10, 2015

ಸಂಗೀತ ರವಿರಾಜ್ ಎರಡು ಕವಿತೆಗಳು

೧ 
ನಾಚಿಕೆ ಮುಳ್ಳು


ಮುಟ್ಟಿದರೆ ಮುನಿಯೆಂಬ ಭ್ರಮೆಯ
ಎಲ್ಲರೊಳಗೆ ತುಂಬಿ
ತನ್ನ ಪಾಡಿಗೆ ತಾನು
ಅರೆಗಳಿಗೆ ಬಿಟ್ಟು ಅರಳಿಕೊಳ್ಳುತ್ತದೆ
ಮುದುಡಿದ ನೆನಪೆ ಇಲ್ಲದಂತೆ ತನ್ನೊಳಗೆ!!
ಮಾತಿನ ಮೊನಚಿಲ್ಲದ
ಮೌನದ ಮುಳ್ಳು
ಮನುಷ್ಯ ದಳ್ಳುರಿಯು ನಾಚುವಂತೆ...

ಯಾರ ಉಸಾಬರಿಯು ಬೇಡವೆಂಬಂತೆ
ನೆಲದಲ್ಲಿಯೆ ಸೊಂಪಾಗಿ ಹಬ್ಬಿ
ಹೀಚು, ಹೂವು ಕಾಯಿಗಳ ಬೆಳಗಿ
ತನಗೆ ತಿಳಿಯದೆಯೆ ಹೋಗುವರ ಆಕರ್ಷಿಸಿ
ಸ್ಪರ್ಶಿಸದೆ ಮುಂದೆ ಹೋಗಲು
ಬಾರದ ಮನಸ್ಸಿಗೆ
ಚಡಪಡಿಕೆಯ ಹಾಸಿಗೆ!
ಅರಿಯದೆ ಮುಟ್ಟಿದರು
ಒಂದು ಕ್ಷಣ ಹಿಂತಿರುಗಿ ನೋಡುವ ಚಿತ್ತ
ಮುಟ್ಟದೆ ಮುಂದೆ ಹೋಗಲು ಬಿಡದ ಸಂತ!

ಮುಳ್ಳಿದ್ದರು ಮುಟ್ಟಿದವರ
ಚುಚ್ಚಿ ನೋಯಿಸುವುದಿಲ್ಲ!
ಮೃದು ಹೃದಯಿ ಪ್ರಕೃತಿಗೆ
ತಿಳಿದೇ ಇಲ್ಲ
ಸಜ್ಜನರ ನಡುವೆಯು
ತುಳಿದು ಘಾಸಿಗೊಳಿಸುವವರು ಇರುತ್ತಾರೆಂದು!

ಮನುಷ್ಯ ನೆರಳು ಬೀಳಬಾರದೆಂಬ
ಹಪಾಹಪಿಯ ನಡುವೆಯು
ಹೆಚ್ಚು ಒಳ್ಳೆಯತನ ಬೇಡವೆಂದು
ಆಗೊಮ್ಮೆ ಈಗೊಮ್ಮೆ ಬಿಗುಮಾನ ತೊರೆದು
ನಾನು ಕೆಲವೊಮ್ಮೆ ಚುಚ್ಚಿಬಿಡುತ್ತೇನೆ
ಸಂಯಮ ಮೀರಿ...
***

೨ 

ಜೇಡನ ಸ್ವಗತ


ಬದುಕು ಸುಮ್ಮನೆ ಅಲ್ಲ
ನೇಯಬೇಕು; ನಂತರ
ನೋಯಬೇಕು!
                        
ಬಲೆ ತೆಗೆಯುವ ನಾರಿಗೇನು ಗೊತ್ತು
ನನ್ನ ಕಲೆಯ ಜಾಣತನ?
ಆಕೆ ತೆಗೆಯುವ ರಭಸದಲ್ಲಿ
ಬಲೆಯಲ್ಲಿ ಸಿಲುಕಿದ
ನನ್ನ ಆಹಾರದ ಜೀವವುಳಿಯುತ್ತದೆ!
ಆದರೆ ನಾನು ದಡಬಡನೆ
ಓಡುತ್ತೇನೆ ಜೀವಭಯದಿಂದ...
ಬದುಕು ಅದಲುಬದಲಾಗುವುದೆಂದರೆ ಹೀಗೆ
ನಮಗೆ ತಿಳಿಯದ ವಿಧಿಯ ಹಾಗೆ!

ನಿಮ್ಮ ಗೋಡೆಯ ತುಂಬಾ
ನನ್ನ ಬಲೆಯ ಹಾಕಿ
ಗಲೀಜು ಮಾಡುವ ಉಮೇದು ಎನಗಿಲ್ಲ
ಎಳೆ ಎಳೆಯ ದಾರದಂತಹ ನಾರನ್ನು
ಚಂದದಲಿ ಚಕ್ರವ್ಯೂಹ ಮಾಡಿ
ಹೊಂಚು ಹಾಕುತ್ತೇನೆ ನಾನು
ಕುಶಲತೆಯ ಖುಷಿಯಲ್ಲಿ
ಇದು ನನ್ನ ಹಸಿವು!

ದೇಹವ ತೇಯ್ದು
ಬಲು ತಾದ್ಯಾತ್ಮ್ಯದಲ್ಲಿ ನೇಯ್ದು
ತಯಾರಿಸಿದ ಮನೆಯ ಆಯುಷ್ಯ ಅಲ್ಪ
ಆದರು ಛಲಬಿಡದ ತ್ರಿವಿಕ್ರಮನಂತೆ
ಮತ್ತೆ ಮತ್ತೆ ಕಟ್ಟ್ತುತ್ತೇನೆ
ನನ್ನ ಮನೆಯೆಂಬ ಕಲೆಯ ಬಲೆ
ಮೇಜು, ಕುರ್ಚಿ, ಮಂಚ ಎಲ್ಲೆಡೆಯ
ಮೂಲೆ ಮೂಲೆಯಲ್ಲು ನನ್ನ ಕರಾಮತ್ತು
ಬೇಕಿದೆ ನನಗೆ ಈ ದಿನದ ತುತ್ತು
ನನ್ನ ಜಾಣ್ಮೆಯ ಕುಸುರಿಯ ನೋಡಿ
ಬೆರಗಾಗಿ
ಬಲೆ ತೆಗೆಯಬಾರದೆಂಬ
ಮರ್ಜಿಗೆ ಬಿದ್ದವರು ಯಾರು ಒಬ್ಬರಿಲ್ಲ
ನೋಡಿ ನನ್ನ ದುರಾದೃಷ್ಟ!

ಬದುಕು ಸುಮ್ಮನೆ ಅಲ್ಲ
ನೇಯಬೇಕು: ತದನಂತರ
ನೋಯಬೇಕು!
***ಸಂಗೀತ ರವಿರಾಜ್ (೧೯೮೪) ಬಿಇಡಿ, ಎಂಎ [ಅರ್ಥಶಾಸ್ತ್ರ] ಪದವೀಧರೆ. ಗೃಹಿಣಿ. ಕೊಡಗು ಮತ್ತು ದಕ್ಷಿಣಕನ್ನಡದ ಗಡಿಭಾಗ ಸಂಪಾಜೆ ಸನಿಹದ ಚೆಂಬು ಗ್ರಾಮದಲ್ಲಿ ವಾಸ. ಉಡುಗೊರೆ ಮತ್ತು ನನ್ನೊಡಲ ಮಿಹಿರ ಎಂಬ ಎರಡು ಕವನ ಸಂಕಲನಗಳು ಲೋಕಾರ್ಪಣೆಯಾಗಿವೆ. ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಭಾಗಿ. ಮಡಿಕೇರಿ ಮತ್ತು ಮಂಗಳೂರು ಆಕಾಶವಾಣಿಗಳಲ್ಲಿ ಕವಿತೆಗಳು ಬಿತ್ತರಗೊಂಡಿವೆ. ಇಂಟರ್‌ನೆಟ್, ಪತ್ರಿಕೆಗಳಲ್ಲಿ ಬರಹಗಳು ಪ್ರಕಟಗೊಳ್ಳುತ್ತಿರುತ್ತವೆ. ರಾಜ್ಯ ಅರೆಭಾಷಾ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿದ್ದಾರೆ.

ವಿಳಾಸ: ಹೊಸೂರು ಮನೆ, ಬಾಲಂಬಿ ಅಂಚೆ, ಚೆಂಬು ಗ್ರಾಮ, ಮಡಿಕೇರಿ ತಾಲ್ಲೂಕು. ೫೭೪೨೩೪. ಕೊಡಗು.sangeetharhosoor@gmail.comNo comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...