Monday, November 23, 2015

ಎಂ. ಆರ್ ಭಗವತಿ ಎರಡು ಕವಿತೆಗಳುಅನುಕೂಲಕ್ಕೊಂದು ಸಿದ್ಧಾಂತ!


ಮನೆಯೇ ಬೇಡವೆದಿಂದಿದ್ದೆ, ಮನೆಯನ್ನು ಕಟ್ಟಿದೆ
ಆಲಯವನ್ನು ನಿರ್ಮಿಸಿ ಗರ್ಭಗುಡಿಯಲ್ಲಿ ಇಷ್ಟ ದೇವರಾಗಿದ್ದಿ;
ಕಟ್ಟಿಕೋ ಬೇಡವೆಂದಲ್ಲ
ಬಯಲೇ ಆಲಯವೆಂದು
ಬದುಕು ಸರಳವಾಗಲೆಂದು ತಪಸ್ಸು ಕೂತು
ವೈಭೋಗವನ್ನು ತ್ಯಾಗ ಮಾಡಬೇಕೆಂದು
ಪಾಡುತ್ತಲೇ ಇದ್ದವನಿಗೆ
ಈಗೇನಾಯಿತು?

ಮನೆಯೇ ಬೇಡವೆಂದವನು ಬಂಗಲೆಯನ್ನು ಕಟ್ಟಿದೆ
ಮನೆಯ ತುಂಬಾ ಪೀಠೋಪಕರಣಗಳು
ಮಧ್ಯೆ ನೀನು ವಿರಾಜಮಾನನಾಗಿರುವೆ

ಉಪದೇಶಿಸಿದ ನಿನ್ನ ಮಾತುಗಳೀಗ
ಮನೆಯ ವೈಭೋಗದಲ್ಲಿ ತತ್ತರಿಸಿ ಕೂತಿವೆ

ಛೇ ಬಿಡು! ಒಂದು ಉದಾಹರಣೆಯನ್ನಷ್ಟೇ
ಹೇಳಬೇಕೆಂದಿರುವೆ.
***೨ 
ಪಾರಿಜಾತೆಯ ಚೈತ್ರ ಲಹರಿ


’ಚೈತ್ರ ಮಾಸದ ಹಕ್ಕಿ ಇಂಚರ ಮನ ಸೂರೆಗೊಳಿಸಿದೆ’
ಪಾರಿಜಾತದ ಘಮಲು ನಾಸಿಕವನ್ನ ಅರಳಿಸಿದೆ.. ಪಾರಿಜಾತವೆ
ಹೇಳು ಏನಿದು ನಿನ್ನ ಮಾಯೆ?

ಎತ್ತ ನೋಡಿದರೂ ನಿನ್ನಯ ಚಿಗುರು, ಕಾಳು ಹುಡುಕುವ
ಹಕ್ಕಿ ನಾನು ನೀರ ಸೆಲೆ ಅರಸಿ ಸಾಗುವ ಮುಕ್ಕೋಟಿ ಹಕ್ಕಿ
ಸಾಲು. ನೀನಲ್ಲೇ ಕುಳಿತೆಯೇಕೆ ಪಾರಿಜಾತವೇ? ಹೇಳು
ಪಾರಿಜಾತವೇ?

ಬಿಸಿಲ ಸೆಲೆ, ಚೈತ್ರದ ಚಿಗುರು ನಿನ್ನಯ ಬೆರಳ ಹಗುರ
ಗೀಚು ಹಸಿರಿನ ಚಿತ್ರ, ಒಂಟಿ ಹಕ್ಕಿ ಚಿತ್ರದ ಗೋಡೆ
ಸೆಳೆಯಲಿಲ್ಲವೇ ನಿನ್ನ?

ನೀರ ನೆಲೆ ಹುಡುಕಿ ಕಂಗಲಾಗಿ ಬರಿದೇ ಕೊಡಗಳು
ಸಾಲುಗಟ್ಟಿವೆ, ಸುಕ್ಕುಗಟ್ಟಿವೆ ರೈತರ ಮುಖ, ಸಪ್ಪಗಾಗಿಹರು
ಉತ್ತರದ ಜನ

ಹೆಜ್ಜೆಯನ್ನಿಟ್ಟರೆ ಹೆಜ್ಜೆಯೇ ಭಾರ, ನೆರಿಗೆಗಳು ಬಿಸಿಲ
ಸೆಲೆಗೆ, ಚೈತ್ರದ ಕಾವಿಗೆ ಇನ್ನಷ್ಟು ಮುದುರಿವೆ. ಅವನಾದರೋ
ಪ್ಯಾಂಟು, ಷರಟು ಏರಿಸಿ ಬಿಸಿಲೇ ತಾಗಿಲ್ಲದಂತೆ ತಣ್ಣಗೆ
ಇರುತ್ತಾನೆ. ನೀನುಟ್ಟ ಸೀರೆಯೇ ಭಾರ ಬಿಸಿಲ ಬೇಗೆಗೆ.

ಬಿಸಿಲ ಉರಿ ತಾಕದಂತೆ ತಣ್ಣಗೆ ಚಿಗುರುವ ಹಸಿರ
ಸಾಲುಗಳು, ನೀರಲ್ಲಿ ದುಡುಮ್ಮನೆ ಧುಮುಕುವ ಬರಿ
ಮೈಯ್ಯ ಪುಟ್ಟ ಮಕ್ಕಳ ಸಾಲು, ಸಾಲು..ಚೈತ್ರದ ಚಿಗುರಿಗೆ
ಪುಳಕಗೊಳ್ಳುವ, ಬಿಸಿಲಿಗೆ ಬಾಡುವ ಹಕ್ಕಿಗಾದರೂ ಹೊರಗೆ
ಬಾರೆ ಪಾರಿಜಾತವೇ

ಮೊನ್ನೆ ನೆಟ್ಟ ಕೆಸುವಿನ ಗೆಡ್ಡೆ ಮೂರೇ ದಿನದಲ್ಲಿ ಚಿಗುರಿದೆ
ಮನೆಯ ಮುಂದಿನ ಮೈನಾ ಹಕ್ಕಿಯ ಜೋಡಿ ಕಾಳು
ಕೆದಕಲು ದಾಪುಗಾಲು ಹಾಕಿ ಓಡುತ್ತಿವೆ ಹಗುರವಾದ
ಹೆಜ್ಜೆಯಲ್ಲಿ, ನೀನಲ್ಲೆ ಕುಳಿತೆಯೇಕೆ ಪಾರಿಜಾತವೇ? ಹೇಳು
ಪಾರಿಜಾತೆಯೇ?
***

ಭಗವತಿ ಎಂ. ಆರ್. (೧೯೭೦) ಚಿಕ್ಕಮಗಳೂರಿನವರು.  ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಭಾಷೆಯಲ್ಲಿ ಎಂ. ಎ ಪದವಿ ಪಡೆದು ಒಂದು ವರ್ಷ ಇಂಗ್ಲಿಷ್ ಅಧ್ಯಾಪಕಿಯಾಗಿ ಕೆಲಸ ಮಾಡಿದ್ದಾರೆ. ಹವ್ಯಾಸಿ ಬರಹಗಾರ್ತಿ. ಹಲವಾರು ಕನ್ನಡ  ಪತ್ರಿಕೆಗಳಲ್ಲಿ ಲೇಖನ, ಕತೆ, ಕವನ, ಚಿತ್ರ-ಲೇಖನ, ಪುಸ್ತಕ ವಿಮರ್ಶೆ ಬರೆಯುತ್ತಾರೆ. ಕನ್ನಡ ಪ್ರಭ ಪತ್ರಿಕೆಯಲ್ಲಿ ಅಂಕಣ ಬರಹ ಪ್ರಕಟವಾಗಿದೆ. ಓದು, ಬರೆಹ, ಛಾಯಾಗ್ರಹಣ, ಚಿತ್ರಕಲೆ ಮತ್ತು ಖಗೋಳ ವಿಜ್ಞಾನ ಆಸಕ್ತಿಯ ಕ್ಷೇತ್ರಗಳು. ‘ಏಕಾಂತದ ಮಳೆ’ (೧೯೯೯) ಮತ್ತು ‘ಚಂಚಲ ನಕ್ಷತ್ರಗಳು’ (೨೦೦೫) ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ವಿಳಾಸ:  8c-15, “ಗುರು ರಕ್ಷಾ”, ೫ನೇ ಮೇನ್, ೮ನೇ ಕ್ರಾಸ್, ಶ್ರೀನಿಧಿ ಬಡಾವಣೆ, ಕೋಣನಕುಂಟೆ, ಜೆಪಿ ನಗರ, ೮ನೇ ಹಂತ, ಬೆಂಗಳೂರು- ೫೬೦೦೬೨.
bhagavathimr@gmail.com

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...