Sunday, November 22, 2015

ನೇತ್ರಾವತಿ ಕೆ. ವಿ. ಎರಡು ಕವಿತೆಗಳು
೧ 
ಹೆಣ್ಣು


ಜಗದ ಹಳದಿಯ ಕಣ್ಣಲ್ಲಿ
ನಾನು ‘ಕೇವಲ’ ಹೆಣ್ಣು
ಬಂಜರು ಭೂಮಿಯ ಹೃದಯಗಳೊಂದಿಗೆ
ಪಯಣಿಸಿದೆ
ಅಂದು
ಅವುಗಳಿಗೆ ಹೃದಯಗಳೇ ಇರಲಿಲ್ಲ
ಬದುಕಿನ ಕಷ್ಟಕೆ
ಒಲುಮೆಯ ಸೋಗಿಗೆ
ಬೀದಿಯ ಕರುಣೆ ಸಿಗಲಿಲ್ಲ
ತಿವಿದಿರಿ, ಚುಚ್ಚಿದಿರಿ,
ಒದೆದಿರಿ, ತುಳಿದಿರಿ.

ಮಿಂದು ಮಿಂದರೂ
ಹಿಂಸೆಯ ತಾವರೆಯಲ್ಲಿ,
ಕಾದರೂ ಕೊಳಕಿನ ಕುಲುಮೆಯಲ್ಲಿ,
ನೆನೆದರೂ ಹೊನ್ನಿನ ಹೊಳೆಯಲ್ಲಿ
ಕೆಸರಾಗಲಿಲ್ಲ
ನಾನು.

ನನ್ನ ಬಾಳಿನ ಬಯಲಲ್ಲಿ
ನೀವು ಚೆಲ್ಲಿದ
ಹಿಂಸೆ, ಕಷ್ಟ, ನಷ್ಟ,
ದೌರ್ಜನ್ಯ, ದಬ್ಬಾಳಿಕೆ,
ಕಣ್ಣೀರುಗಳೇ
ನನ್ನ ವ್ಯವಸಾಯಕ್ಕೆ
ಹೃದಯಗಳ ಬೆಳೆಗೆ
ಗೊಬ್ಬರವಾಗಿದೆ.

ಬೆಳೆಯುತ್ತಿದ್ದೇನೆ...
ಬೆಳೆಸುತ್ತಿದ್ದೇನೆ...
ತರಾವರಿ ಬೆಳೆಗಳನ್ನಾ
ಬೆಳೆಸುತ್ತಾ ಬೆಳೆಸುತ್ತಾ
ಕುಂಟೆಯಿದ್ದ ನಾನು ಕೆರೆಯಾದೆ..
ನದಿಯಾದೆ..
ನಡದೆ ನಡದೆ
ತಿರುಗಿ ನೋಡಲೇ ಇಲ್ಲ
ಜೀವಯಾನದಿ
ಕೊನೆಮೊದಲಿಲ್ಲದ ಸಮುದ್ರವಾಗಿದ್ದೇನೆ
ಈಗ.

ಹಬ್ಬಿಸಿದ್ದೇನೆ
ಜಗದಗಲಕ್ಕೂ ನನ್ನ ಟೊಂಗೆಗಳನ್ನು
ಭೂಮಿಯಾಳಕ್ಕೂ ನನ್ನ ಬೇರುಗಳನ್ನು.
ಮತ್ತೆ
ನೀವು
ನನ್ನ ಎಲ್ಲಿ ಹೊಸಕಿ ಹಾಕುವಿರಿ ಹೇಳಿ?
ಮತ್ತೆ ಚಿಗರುತ್ತೇನೆ
ಮತ್ತೆ ಬೆಳೆಯುತ್ತೇನೆ
ಮತ್ತೆ ಹರಡುತ್ತೇನೆ.
***೨ 
ಗಣಿ ನಿಂತ ಮೇಲೆಗಣಿ ನಿಂತ ಮೇಲೆ
ಕಾಲನ
ಧೂಳೊರೆಸುತ್ತಾ
ನನ್ನ ಎದೆಯ
ಅಟ್ಟಿಯಲ್ಲಿ ಬಿದ್ದಿವೆ
ಮಕ್ಕರಿ, ಗುದ್ದಲಿ, ಚನಿಕೆ
ದುಃಖ ದುಮ್ಮಾನಗಳ
ಒಡಲಲಿ ಅಡಗಿಸಿ
ಭೂತಗಳ ಗುರುತು ಸಿಗದೆ
ಅಲೆಯುತ್ತಿದ್ದೇನೆ
ಬರಿ ಬರಿದೇ ದಾರಿಯಲಿ
ಚಿತ್ತವನರಸಿ
ಕೆಂಪು ಬಣ್ಣದಲಿ
ನನ್ನ ನಿನ್ನ ಅವರ ಕತ್ತರಿಸಿದ
ಕೈ ಗುರುತುಗಳು ಹಾಗೆ ಇವೆ
ಬಿರುಗಾಳಿಗೂ ಕದಲದೆ
ಗಣಿ ಬೆಟ್ಟಗಳಲ್ಲಿ
ರೋಗಗಳ ಜೊತೆ ಕೂಡಿ
ಸಿಕ್ಕಿತ್ತು
ನನಗೆ ಒಂದಿಷ್ಟು ಅನ್ನ
ನಿಟ್ಟುಸಿರು ಬಿಡದೆ
ನೆತ್ತಿಯ ಮೇಲಿನ ಸೆರಗು
ನೆರಳಾಗಲು ಹವಣಿಸುತ್ತಿತ್ತು
ಕುಣಿಕುಣಿದು
ಅಹೋರಾತ್ರಿಯಲಿ
ಹೊಡೆದು ಬಂತು
ಹಾರಿ ಬಂತು
ನೆಲದ ನೌಕೆ
ಸಾರಿತು
ತನ್ನ ಹಸಿರ ಭ್ರಷ್ಟ ನೆರಳನ್ನು
ಕಂಪನ ನಿಂತು ಹೋದ
ಗಣಿಬೆಟ್ಟ
ಇಂಗಿಸಿತು
ಬಿರುಕಿಸಿತು
ಆರಿಸಿತು
ನನ್ನೆದೆಯ ನೆನಪನ್ನು.
ಮತ್ತೆ,
ತೋರಿಸಿತು..
ಬಾಂಬೆ, ಪುಣೆ..
ಹೆದ್ದಾರಿಗಳನ್ನು.
ಹೀಲ್ಡ್ ಚಪ್ಪಲಿ
ಸೈಡ್ ಸೆರಗು
ತುಟಿಯ ರಂಗು
ಜಡೆಯುದ್ದದ ಮಲ್ಲಿಗೆ
ಕಣ್ಣಂಚಿನ ಕಾಡಿಗೆ
ಮತ್ತೆ ತೆರೆದಿಟ್ಟಿದೆ
ನನ್ನ
    ಮೌನವನ್ನು...
ನನ್ನ
   ಕನಸನ್ನು...
ನನ್ನ
   ಹಸಿವನ್ನು...
***

ನೇತ್ರಾವತಿ ಕೆ. ವಿ. (೧೯೮೨) ಕೋಲಾರ ಜಿಲ್ಲೆಯ ಕಾಮದೇನುಹಳ್ಳಿಯವರು. ಜಾನಪದ ಸಾಹಿತ್ಯದಲ್ಲಿ ಎಂ.ಎ, ‘ದಲಿತ ಮಹಿಳಾ ಸಂಕಥನ’ ವಿಷಯದಲ್ಲಿ ಕನ್ನಡ ವಿ.ವಿ.ಯಿಂದ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಕೋಲಾರದ ಬೆಂಗಳೂರು ವಿ.ವಿಯ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ ಆಗಿ ಕೆಲಸ ಮಾಡುತ್ತಿದ್ದಾರೆ. ರೇಖಾ ಚಿತ್ರಕಾರ್ತಿಯೂ ಹೌದು.

ವಿಳಾಸ: ಕುಂಬಾರಹಳ್ಳಿ, ಟಮಕ ಅಂಚೆ, ಕೋಲಾರ ತಾ ಮತ್ತು ಜಿ, ೫೬೩೧೦೧
nethravathikv@gmail.com

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...