Saturday, November 14, 2015

ರೇಣುಕಾ ಹೆಳವರ ಕವಿತೆ


ಸಾಕು ಈ ಜನ್ಮಕ್ಕೆ




ಒಂದು ಸಣ್ಣ ಸ್ಪರ್ಶಕ್ಕೂ.
ವರ್ಷಗಟ್ಟಲೇ ಕಾದೆ
ಒಮ್ಮೆಯೂ ಮುಟ್ಟಲಿಲ್ಲ   
ನಿನ್ನದೇ ಪಿಂಡದ ತುಣುಕು ನಾ

ಎಲ್ಲದಕ್ಕೂ ಬೇಸರಿಸಿ
ಸದಾ ಬೈಗುಳಗಳ ಸಾಲು ಹರಿಸಿ
ಅದೇಕೋ ನನ್ನ ಕಂಡರೆ ನಿನಗೆ ವಾಕರಿಕೆ

ಅದೆಷ್ಟೋ ಕನಸುಗಳ
ಕಣ್ಣಂಚಿನ ಸೌಧದಲ್ಲಿ ಕಟ್ಟಿದೆ
ಸಾವಿರ ಸಾವಿರ ನದಿ ಹರಿದರೂ
ಜಗ್ಗಲಾರದೂ,ಮುಟ್ಟಲಾರದೂ

ನೀ ನನ್ನ ಮುಟ್ಟದ್ದಕ್ಕೆ
ಪ್ರೀತಿ ನೀಡದ್ದಕ್ಕೆ
ಒಡಲ ಉಡಿಯಲ್ಲಿ ಮಲಗದ್ದಕ್ಕೆ ಬೇಜಾರಿದೆ
ಹಾಗಂತ
ನಿನ್ನ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ
ಯಾಕೆಂದರೆ !
ನೀ ನನ್ನವ್ವ
ಅದೆಷ್ಟೋ ಪಾಠ ಕಲಿಸಿದೆ
ಪ್ರೀತಿ ನೀಡದೆ
ಪ್ರೀತಿ ಹಂಚಲು ಕಲಿಸಿದೆ
ಕನಸು ಕಿತ್ತು
ಕನಸು ಕಾಣಲು ಕಲಿಸಿದೆ
ದುಃಖ ಹೊದ್ದು ನಗುತ ಬಾಳಲು ಕಲಿಸಿದೆ
ಸಾಕಲ್ಲವೇ ಈ ಜನ್ಮಕ್ಕಿಷ್ಟು.



ರೇಣುಕಾ ಹೆಳವರ ೧೦-೧೦-೧೯೮೨ ರಂದು ಜನಿಸಿರುವ ಕವಿಯತ್ರಿ ರೇಣುಕಾ ಹುಟ್ಟೂರು ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ. ಓದು ಎಂ.ಎ.(ರಾಜ್ಯಶಾಸ್ತ್ರ) ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಪೊಲೀಸ್ ಇಲಾಖೆಯಲ್ಲಿ ೨೦೦೫ರಿಂದ ಡಬ್ಲ್ಯು ಪಿ.ಸಿಯಾಗಿ ಕಾರ್ಯ ನಿರ್ವಹಣೆ. ಸದ್ಯ ಮಹಿಳಾ ಪೋಲಿಸ ಠಾಣೆ ಗುಲಬರ್ಗಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. - ಕವಿತೆ, ಕಥೆ, ಲೇಖನ ಬರೆಯುವುದು, ಓದುವುದು ಅವರ ಹವ್ಯಾಸ. ಬೆಳಕ ಮರೆಯ ಬೆಂಕಿ ಅವರ ಪ್ರಕಟಿತ ಕವನ ಸಂಕಲನ.
ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿ ನಿಧಿ ಪ್ರಶಸ್ತಿ. ಯುವಜನಸೇವೆ ಹಾಗೂ ಸಚಿವಾಲಯ, ನೆಹೆರು ಯುವ ಕೇಂದ್ರ ಮತ್ತು ಸದ್ಭಾವನಾ ಫೌಂಡೇಷನ್‌ಸಹಯೋಗದ ಸದ್ಭಾವನಾ ಪ್ರಶಸ್ತಿ ಸಂದಿವೆ.     

ವಿಳಾಸ:
ರೇಣುಕಾ ಹೆಳವರ್
       ಮನೆ ನಂ  ೬೬ಬಿ ಡಿ.ಎ.ಆರ್ ಲೈನ
       ಪೋಲಿಸ ಹೆಡ್ ಕ್ವಾಟರ್ಸ್ಸ ಗುಲಬರ್ಗಾ- ೫೮೫೧೦೫ 

       ಜಂಗಮ ದೂರವಾಣಿ ೯೮೮೬೧೫೧೭೩೬

renuka761@yahoo.com









                 

               





No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...