Monday, November 09, 2015

ಗಣೇಶ ಹೊಸ್ಮನೆ ಮೂರು ಕವಿತೆಗಳು


http://chukkubukku.com/bookstore/authors/9v7nxNWJ.jpg

ಒಂದು ತಟ್ಟೆಯ ಅನ್ನ


ಒಂದು ತಟ್ಟೆಯಲಿ ಅನ್ನವಿದೆ
ಎಲ್ಲರೂ ಉಣ್ಣುತಿದ್ದೇವೆ
ತುತ್ತುಗಳ ಲೆಕ್ಕದಲಿ
ತುತ್ತಿನೊಳಗಿನ ಅಗುಳ ಎಣಿಸಲಾಗದು
ಲೆಕ್ಕಾಚಾರದ ಅವಮಾನ
ಎಸಗಬಾರದೆನ್ನಲಾಗಿದೆ ಅಗುಳಿಗೆ

ನನ್ನ ಪ್ರತಿ ತುತ್ತಿನಲಿ
ಭೂಮಿಯ ಸತ್ವವೇ ಅವಿತಿದೆಯೆಂದು
ನಂಬಿಕೊಂಡಿದ್ದೇನೆ
ಭೂಮಿಯಂತಹ ತುತ್ತ
ಎತ್ತಿಕೊಳುವವರ ನಡುವೆ

ಭತ್ತದ ತೆನೆಗಳ ಪರಿಮಳದಲ್ಲೇ
ನನ್ನ ಹಸಿವು ಸತ್ತಿದೆ
ಬೆಳೆದ ಪ್ರತಿ ಕಾಳುಗಳ ಮೇಲೆ
ನನ್ನ ಕನಸಿರುವುದು
ನನಗಷ್ಟೇ ಕಾಣಿಸುತ್ತದೆ
ಅಳಿಸುವುದಿಲ್ಲ ಬೆಂದ ಅನ್ನದ ಮೇಲೂ ಸಹಾ

ತುತ್ತುಗಳ ಎತ್ತಿಕೊಳುವ
ಅವಸರ ಉಪಾಯಗಳು
ನನ್ನ ಬೆರಳುಗಳಿಗಿಲ್ಲ
ಬೇರುಗಳಂತೆ ಇಳಿದು ಹೋಗುವದಷ್ಟೇ
ಗೊತ್ತು ಮಣ್ಣೊಳಗೆ
ತೃಪ್ತಿಯೆಂಬುದು ಬೀಸುತ್ತದೆ ಆಗಾಗ
ತಂಗಾಳಿಯಂತೆ

ಎತ್ತಿದ ಪ್ರತಿ ತುತ್ತಿನೊಳಗಿದೆ
ತಟ್ಟೆಯೊಳಗಿನ ನ್ಯಾಯ
ಹಸಿದ ಒಡಲುಗಳ ಆತ್ಮದಲ್ಲಿದೆ
ತುತ್ತಿನೊಳಗಿನ ನ್ಯಾಯ,
ಆತ್ಮವಿಲ್ಲದವರು ತಟ್ಟೆಯನು ಹಲವು ಪಾಲಾಗಿಸಿಕೊಂಡಿದ್ದಾರೆ
ಉಣ್ಣುತಿದ್ದಾರೆ ಹತ್ತಾರು ಕೈಯ್ಯೊಳಗೆ!
***


ನನ್ನಜ್ಜನ ದೇವರು


ನನ್ನಜ್ಜನ ಅಂಕಣದ ದೊಡ್ಡಮನೆ
ಆರು ದಶಕಗಳ ಹಿಂದೆ
ಒಂದು ನಡುಮಧ್ಯಾಹ್ನ ಉರಿ ಉರಿ
ಬಿಸಿಲಲಿ ಉರಿದು ಹೋಯಿತಂತೆ
ಬೆಂಕಿಗಾಹುತಿಯಾಗಿ

ಪಣತದೊಳಗಿದ್ದ ಭತ್ತ  ಕಣಜದೊಳಗಿದ್ದ ಅಡಿಕೆ
ಬೇಯಿಸಿಟ್ಟ ಅನ್ನ ಒಣಗಿಸಿಟ್ಟ ಬಟ್ಟೆ
ಪೇರಿಸಿಟ್ಟ ಪಾತ್ರೆ....ಎಲ್ಲ ಸುಟ್ಟು
ತಿಂಗಳೆರಡರತನಕ ಹೊಗೆಯಾಡಿ
ಕರಗಿ ಕರಕಲಾಗಿ, ಉಳಿಯಲಿಲ್ಲವಂತೆ
ಅಷ್ಟೇ ಪೂಜೆ ಮುಗಿಸಿ
ನೈವೇದ್ಯಗಳನುಂಡ ಬೀಟೆಮರದ
ಪೀಠದೊಳಗಿನ ಚಿನ್ನ ಬೆಳ್ಳಿ ಹಿತ್ತಾಳೆಯ
ದೇವರೂ ಸಹಾ

ತೊಟ್ಟ ಬಟ್ಟೆಯಲಿ ತಿರುಕನಾದ ಅಜ್ಜ
ತೀಡಿದನಂತೆ ತೋಟ-ಗದ್ದೆಯಲಿ ಕುಳಿತು
ಊರೂರು ತಿರುಗಿ ಬೇಡಿದನಂತೆ
ಸಂಸಾರಕಾಗಿ ಅನ್ನವನ್ನು
ಮುಂಜಾನೆಯಿಂದ ಮಧ್ಯಾಹ್ನದವರೆಗೆ
ಮುಸ್ಸಂಜೆಯಿಂದ ಮಧ್ಯರಾತ್ರಿಯವರೆಗೆ
ಜಾಗಟೆ ಬಾರಿಸಿ ಶಂಖ ಊದಿ
ಸದಾ ಮನೆದೇವರ ಓಲೈಸಿ
ಪೂಜಿಸುತಿದ್ದವನು,ನೋಡಿದನಂತೆ
ಊರ ತುಂಬೆಲ್ಲ ದೇವರನು!
***


ನಾಲ್ಕು ಚೂರುಗಳು


-1-
ಹಣ ತಿನ್ನಲು
ಬರುವುದಿಲ್ಲ
ಆದರೂ ಅದೇ ಬೇಕೆನ್ನುತ್ತಾರೆ
ಹಸಿವು ರಕ್ತ
ಬೆವರು ಕಂಬನಿಗಳನು
ಅಪಮೌಲ್ಯಗೊಳಿಸುತ್ತಾರೆ
ಖಂಡಿತ, ಈ ಮನುಷ್ಯರಿಗೆಲ್ಲ
ಹುಚ್ಚು ಹಿಡಿದಿದೆ
ಹೀಗಾಗಿಯೇ ನಾನು
ಶೂನ್ಯದೊಡನೆ ಮಾತನಾಡುತ್ತೇನೆ!

-2-
ಜನ ವಾಹನಗಳು ಓಡಿ
ಬಿಸಿಯೇರಿ ರಸ್ತೆಗಳೆಲ್ಲ ಸುಟ್ಟುಹೋಗುತಿವೆ
ನೀರು ಹರಿಸೋಣವೆಂದರೆ
ಸಮುದ್ರಗಳೇ ಖಾಲಿಯಾಗುತ್ತವೆ
ರಸ್ತೆಗಳೆಲ್ಲ ಸುಟ್ಟುಹೋಗಲಿ
ನನ್ನಂಥವನಿಗೆ ದಾಹವಾದಾಗ
ಬೇಕಾಗಿತ್ತದೆ
ಸಮುದ್ರಗಳಾದರೂ ಉಳಿದುಕೊಳ್ಳಲಿ!

-3-
ಹೋದವರೊಬ್ಬರೂ
ಹಿಂತಿರುಗಿ ಬರಲಿಲ್ಲ
ದೈತ್ಯ ಡಾಂಬರು ರಸ್ತೆ
ಹೆಬ್ಬಾವಿನಂತೆ
ಜನರನ್ನು ನುಂಗುತ್ತಿದೆ
ನಾನು ಕಿರುಚುತ್ತಲೇ ಇದ್ದೇನೆ
ಹೊರಟವರು ನುಗ್ಗುತ್ತಲೇ ಇದ್ದಾರೆ
ಹೋದವರು ಹೋಗಲಿ
ನನ್ನ ಮನೆಯ ಮುಂದಿನ ಹಾವಿನ
ಬಾಯಿ ಮುಚ್ಚಿದ್ದೇನೆ!

-4-
ಹಗಲಿರುಳೂ
ನೆಲದ ದುಗುಡಗಳ
ಕಾಣುವ ಆಕಾಶದೊಳಗೆ
ದುಃಖ ಮಡುಗಟ್ಟಿದೆ
ಕದಡಿದ ಅಂತಃಕರಣದಲಿ
ದಿನವೆಲ್ಲ
ಅಳುತ್ತಲೇ  ಇದೆ
ಆಕಾಶಕೆ ನಾನೊಂದು
ಕಿವಿಮಾತು ಹೇಳಬೇಕು
ನಮ್ಮ ದುಃಖಕೆ ಇಲ್ಲಿ
ನಾವೇ ಅಳಬೇಕು!
***


ಗಣೇಶ ಹೊಸ್ಮನೆ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾನ್ಮನೆಯವರಾದ ಗಣೇಶ ಹೊಸ್ಮನೆ ಕೃಷಿಕರು. ಬದುಕಿನನುಭವದಲ್ಲಿ ಅದ್ದಿ ತೆಗೆದ ಹಾಗೆ ಬರೆವ ಗಣೇಶ ಕವಿತೆಯನ್ನೇ ಉಸಿರಾಡಿಕೊಂಡಿರುವವರು. ಹರಿದು ಕೂಡುವ ಕಡಲು ಅವರ ದ್ವಿತೀಯ ಪ್ರಕಟಿತ ಕೃತಿ. ಅವರ ಮೊದಲ ಕವನ ಸಂಕಲನ ಯಾರೂ ನೆಡದ ಮರ. ಈ ಸಂಕಲನಕ್ಕೆ ಕಣವಿ ಕಾವ್ಯ ಪ್ರಶಸ್ತಿ, ಪುತ್ತೂರು ಕನ್ನಡ ಸಂಘದ ಪ್ರಶಸ್ತಿಗಳು ಸಂದಿವೆ.

 ghjshnk@gmail.com

9481111120ಉಣ್ಣುತಿದ್ದಾರೆ ಹತ್ತಾರು ಕೈಯ್ಯೊಳಗೆ!

2 comments:

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...